ವಿಶ್ವಾಸದ ಬೆಳಕಿನಲ್ಲಿ ನೈರಾಶ್ಯದ ಕತ್ತಲು ಕಳೆಯೋಣ: ನಂಬಿಕೆಯೇ ಜೀವನ, ಆತ್ಮವಿಶ್ವಾಸವೇ ಇಂಧನ!

light 20
Published on

ಹೌದು, ದೀಪ ಹಚ್ಚುವುದರಿಂದ ಕರೊನಾ ತೊಲಗಿಸಬಹುದೇ, ಬಡವರಿಗೆ ಇದರಿಂದೇನು ಪ್ರಯೋಜನ ಎಂಬ ಹತ್ತಾರು ಟೀಕೆ-ಟಿಪ್ಪಣಿ, ವ್ಯಂಗ್ಯದ ಮೊನಚು ಮಾತುಗಳು ಕೆಲವೆಡೆಯಿಂದ ಹೊಮ್ಮುತ್ತಿರುವಾಗಲೇ, ಮತ್ತೊಂದೆಡೆ ಕೋಟ್ಯಂತರ ಜನರು ಭಾವನಾತ್ಮಕವಾಗಿ ಒಂದಾಗಿದ್ದಾರೆ, ಎಷ್ಟೋ ಸಂಕಷ್ಟಗಳನ್ನು ಪರಾಭವಗೊಳಿಸಿರುವ ಭಾರತವೆಂಬ ಚೈತನ್ಯಭೂಮಿಯಿಂದ ಈ ಮಹಾಮಾರಿಯನ್ನು ಸೋಲಿಸೋಣ, ಆ ಬಳಿಕ ಕೆಲಕಾಲ ಎದುರಾಗಲಿರುವ ಆಥಿರ್ಕ ಸಂಕಷ್ಟ ಸೇರಿ ಹಲವು ಸಮಸ್ಯೆಗಳ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಸಂಕಲ್ಪಿಸಿದ್ದಾರೆ.

ಕೆಲ ಸಂದರ್ಭಗಳಲ್ಲಿ ಬರೀ ತರ್ಕಗಳಿಗೆ ಜೋತುಬಿದ್ದರೆ ಸಾಕಾಗುವುದಿಲ್ಲ. ಆಪತ್ತು ಎಷ್ಟೇ ದೊಡ್ಡದಿದ್ದರೂ, ಅದನ್ನು ಗೆಲ್ಲುತ್ತೇವೆ ಎಂಬ ಆತ್ಮಬಲ ಜಾಗೃತಗೊಳಿಸಬೇಕಾಗುತ್ತದೆ. ಇಂಥ ವಿಶ್ವಾಸವನ್ನು ಮೂಡಿಸುವುದು ಹಿಂದೆ ರಾಜರುಗಳ, ಈಗ ರಾಷ್ಟ್ರಮುಖ್ಯಸ್ಥರ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿ ಇದೇ ವಿಶ್ವಾಸ ಹುಟ್ಟಿಸಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿಯೇ ಅಪೂರ್ವ ಪ್ರಯತ್ನ ಇಂದು ನಡೆಯಲಿರುವ ದೀಪಾರಾಧನೆ. ಏಪ್ರಿಲ್​ ಮೂರರಂದು ಬೆಳಗ್ಗೆ 9 ಗಂಟೆಗೆ ವಿಡಿಯೋ ಸಂದೇಶದ ಮೂಲಕ ಕರೆ ನೀಡಿದ ಮೋದಿ-‘ಏಪ್ರಿಲ್​ 5ರಂದು ರಾತ್ರಿ 9 ಗಂಟೆಗೆ ಮನೆಯ ವಿದ್ಯುತ್​ ಬಲ್ಬ್​ಗಳನ್ನು ಬಂದ್​ ಮಾಡಿ 9 ನಿಮಿಷಗಳ ಕಾಲ ದೀಪ ಅಥವಾ ಮೇಣದಬತ್ತಿ ಬೆಳಗಿಸಿ’ ಎಂದಿದ್ದಾರೆ. ಇದಕ್ಕೆ ಸಿಗುತ್ತಿರುವ ಸ್ಪಂದನೆಯೇ ಪ್ರಬಲ ಆಶಾವಾದವೊಂದನ್ನು ಹುಟ್ಟುಹಾಕಿದೆ.

ಕರೊನಾ ಸೋಂಕಿನ ಸಂಕಷ್ಟ ಇಡೀ ವಿಶ್ವವನ್ನೇ ವ್ಯಾಪಿಸಿದೆ. ಆದರೂ, ಭಾರತ ಇದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತಿದೆ. ವಿಶ್ವಸಂಸ್ಥೆಯೇ ಭಾರತ ಕೈಗೊಂಡ ಕ್ರಮಗಳನ್ನು ಶ್ಲಾಘಿಸಿದೆ. ದಿಗ್ಬಂಧನದ ಈ ಹೊತ್ತಲ್ಲಿ ಜನರು ಸೋಂಕಿಗಿಂತ, ಒಂಟಿತನ, ಮುಂದೇನು ಎಂಬ ಆತಂಕದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಈ ಹೊತ್ತಲ್ಲಿ ಯಾರೂ ಏಕಾಂಗಿಯಲ್ಲ, ಸಮಸ್ಯೆ ವಿರುದ್ಧ ಹೋರಾಡಲು ದೇಶದ 130 ಕೋಟಿ ಜನರು ಒಗ್ಗಟ್ಟಾಗಿದ್ದಾರೆ, ಈ ಏಕತೆಯೇ ನಮ್ಮನ್ನು ಕಾಪಾಡಲಿದೆ ಎಂಬ ಬಹುದೊಡ್ಡ ಸಂದೇಶವನ್ನು ದೀಪಗಳನ್ನು ಬೆಳಗಿಸುವ ಇಡೀ ದೇಶ ಪ್ರಬಲವಾಗಿ ಸಾರಲಿದೆ. ಮನುಷ್ಯನಲ್ಲಿ ಒಮ್ಮೆ ಆತ್ಮವಿಶ್ವಾಸ ಜಾಗೃತಗೊಂಡರೆ ಅವನು ಎಂಥ ದೊಡ್ಡ ಸಮಸ್ಯೆಯನ್ನೂ ಸೋಲಿಸಬಲ್ಲ. ಈ ಹೊತ್ತಲ್ಲಿ ಸ್ಥೈರ್ಯ ಕಳೆದುಕೊಳ್ಳದೆ, ಮಾನಸಿಕವಾಗಿ ಕುಗ್ಗದೆ ಮುಂದಡಿ ಇಡಬೇಕಿದೆ. ವೈದ್ಯರುಗಳು, ಇತರೆ ಸಂಬಂಧಿತ ಇಲಾಖೆಗಳು ಶಕ್ತಿಮೀರಿ ಶ್ರಮಿಸುತ್ತಿವೆ. ಇವುಗಳ ಜತೆಗೆ ದೇಶದ ಜನರಿಗೆ ಭಾವನಾತ್ಮಕ ಬೆಂಬಲ ನೀಡಬೇಕಿದೆ. ಆ ನಿಟ್ಟಿನಲ್ಲಿ ಮನಸ್ಸಿನಲ್ಲಿನ ಅಂಧಕಾರ, ಆತಂಕ ಕಳೆಯಲು ಜ್ಯೋತಿ ಬೆಳಗಿದರೆ ಸಾಕು!

ವಾಸ್ತವದಲ್ಲಿ ಇಡೀ ಪ್ರಕೃತಿಯೇ ಬೆಳಕು! ಸೂರ್ಯ ನೀಡುವುದು ಪ್ರಕಾಶವನ್ನೇ, ಚಂದ್ರ ಒದಗಿಸುವುದು ಶೀತಲ ಬೆಳಕನ್ನೇ. ನಕ್ಷತ್ರಗಳು ನಿಮಿರ್ಸುವುದೂ ಬೆಳಕಿನ ಹಾದಿಯನ್ನೇ. ಬೆಳಕು ಬರೀ ಬೆರಗಲ್ಲ, ಅದು ವಿಶ್ವಾಸ, ಕೆಟ್ಟದ್ದನ್ನು ಕೊನೆಗೊಳಿಸುವ ಅದ್ಭುತ ಶಕ್ತಿ, ಅದು ಭರವಸೆ ಮೂಡಿಸುತ್ತದೆ, ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಭಾರತೀಯ ಸಂಸ್ಕೃತಿಗೂ ಬೆಳಕಿಗೂ ಅವಿನಾಭಾವ ನಂಟು. ನಮ್ಮೆಲ್ಲ ಉತ್ಸವ, ಹಬ್ಬಹರಿದಿನಗಳು ಕತ್ತಲೆಯನ್ನು ಕಳೆಯುವ, ಬೆಳಕನ್ನು ಪಸರಿಸುವ ಆಶಯವನ್ನೇ ಹೊಂದಿವೆ. ದೀಪಾವಳಿ ಹೊತ್ತಲ್ಲಿ ಬೆಳಗುವ ಹಣತೆ ಬರೀ ನಮ್ಮ ಮನೆಗಳನ್ನು ಬೆಳಗಬೇಕು ಎಂದಲ್ಲ, ಮನದಲ್ಲಿನ ಅಂಧಕಾರ, ಕಲ್ಮಶ, ವಿಷಾದಗಳನ್ನೆಲ್ಲ ದೂರ ಮಾಡಿ ಅಂತಃಕರಣದ ಲೋಕ ವಿಶಾಲವಾಗಬೇಕು ಎಂದು. ಅದಕ್ಕೆಂದೆ, ಕಾತಿರ್ಕ ಮಾಸದಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ನಡೆಸುವ ಮೂಲಕ ಬೆಳಕಿನೆಡೆಗೆ ಸಾಗೋಣ ಎಂಬ ಸಂದೇಶ ನೀಡಲಾಗುತ್ತದೆ. ಚೈತ್ರಮಾಸದಲ್ಲೂ ದೇವಿ ಆರಾಧನೆ ಉಂಟು. ದೇವಿಯನ್ನು ದೀಪಗಳ ಮೂಲಕ ಆರಾಧಿಸುವ ವಿಶಿಷ್ಟ ಪದ್ಧತಿ ಮುಂಚಿನಿಂದಲೂ ಇದೆ. ಆಧ್ಯಾತ್ಮಿಕ ಸಾಧನಾಕ್ರಮದಲ್ಲೂ ಬೆಳಕಿಗೆ ಪರಮೋಚ್ಚ ಸ್ಥಾನ. ಅಷ್ಟಚಕ್ರಗಳ ಸಾಧನೆ ರ್ಪೂಣಗೊಂಡ ಸಾಧಕನಿಗೆ ಅಂತಿಮವಾಗಿ ಗೋಚರಿಸುವುದು ತಿಳಿಯಾದ ಬೆಳಕು ಮತ್ತು ಅದುವೇ ಅಂತಿಮ ಸತ್ಯ!

ಜೀವನದ ದಿನಚರಿ, ಧಾವಂತಗಳನ್ನೂ ಒಮ್ಮೆ ಗಮನಿಸಿ. ಏನೋ ಕಷ್ಟದ ಸನ್ನಿವೇಶ ಎದುರಾಗಿ ಬಿಟ್ಟರೆ ಮನೆಯ ಹಿರಿಯರು ಮೊದಲು ನೀಡುವ ಸಲಹೆಯೆಂದರೆ, ದೇವರ ಎದುರು ದೀಪ ಹಚ್ಚಿ, ಕಷ್ಟ ನಿವಾರಣೆಗಾಗಿ ಪ್ರಾಥಿರ್ಸು ಎಂದು. ಸಂಭ್ರಮ, ಸಂತಸಗಳನ್ನು ಸಹ ದೀಪೋತ್ಸವಗಳ ಮೂಲಕವೇ ವ್ಯಕ್ತಪಡಿಸುತ್ತೇವೆ. ಏಕೆಂದರೆ, ಅದು ಶುಭಕಾರಕ, ಚಿಂತೆ ನಿವಾರಕ. ತಂದೆಯೊಬ್ಬ ತನ್ನ ಮೂವರು ಮಕ್ಕಳನ್ನು ಪರೀಕ್ಷಿಸಲು ಕೇವಲ 5 ರೂಪಾಯಿಯಲ್ಲಿ ಕೋಣೆಯೆಲ್ಲ ತುಂಬುವಂಥ ವಸ್ತುವನ್ನು ತನ್ನಿ ಎಂದ. ಒಬ್ಬ ಪುತ್ರ ಹತ್ತಿಯನ್ನು ತಂದು ಹರಡಿದರೂ ಕೋಣೆ ತುಂಬಲಿಲ್ಲ. ಎರಡನೆಯವನು ಮೇವು ತಂದು ಹಾಕಿದರೂ ಪ್ರಯೋಜನವಾಗಲಿಲ್ಲ. ಮೂರನೇ ಮಗ ಮಾತ್ರ ಒಂದು ಮೇಣದ ಬತ್ತಿ ಮತ್ತು ಬೆಂಕಿಪೊಟ್ಟಣ ತೆಗೆದುಕೊಂಡು ಬಂದು ಕತ್ತಲನ್ನು ಓಡಿಸಿದ, ಕೋಣೆಯ ತುಂಬ ಬೆಳಕು ಪಸರಿಸಿದ! ಇಂಥದ್ದೇ ಬೆಳಕನ್ನು, ಅದೂ ವಿಶ್ವಾಸದ ಬೆಳಕನ್ನು ದೇಶದ ಪ್ರತಿಯೊಬ್ಬರ ಹೃದಯದಲ್ಲೂ ಪ್ರತಿಷ್ಠಾಪಿಸಬೇಕಿದೆ. ಗೃಹಬಂಧನದಲ್ಲಿ ಇದ್ದು ನಾಳೆ ಏನು ಎಂದು ಭವಿಷ್ಯದ ಬಗ್ಗೆ ಯೋಚಿಸುತ್ತಿರುವ ಜನರಿಗೆ ಈ ಪ್ರಕಾಶದಡಿಯಲ್ಲಿ ಮುಂದಿನ ಹಾದಿ ಗೋಚರಿಸಬೇಕಿದೆ. ನಮಗೆ ಪ್ರಾಣವನ್ನು, ಜೀವಿಸಲು ಪ್ರಕೃತಿಯನ್ನು ಒದಗಿಸಿದ್ದಕ್ಕೆ ದಿನವೂ ದೇವರ ಮುಂದೆ ದೀಪ ಹಚ್ಚಿ ಕೃತಜ್ಞತೆ ವ್ಯಕ್ತಪಡಿಸುವುದಿಲ್ಲವೇ? ಆ ಮೂಲಕ ಚಿಂತೆ ಬಿಟ್ಟು ಮುಂದೆ ಸಾಗುವುದಿಲ್ಲವೇ? ಬೆಳಕಿಗೆ ಆಧ್ಯಾತ್ಮಿಕ ಆಯಾಮವೂ ಇದೆ, ಸಾಮಾಜಿಕ ಮಹತ್ವವೂ ಇದೆ. ಜ್ಯೋತಿಷಶಾಸ್ತ್ರದ ನಂಬಿಕೆಯೂ ಇದೆ. ಅದಕ್ಕಿಂತ ಹೆಚ್ಚಾಗಿ ಚಿಂತೆ ಕಳೆಯುವ, ಭಾವಗಳನ್ನು ಒಂದು ಮಾಡುವ ಚೈತನ್ಯವಿದೆ.

ಭಾರತ ಕರೊನಾ ನಿಯಂತ್ರಣದಲ್ಲಿ ಸಾಕಷ್ಟು ಯಶಸ್ಸು ಕಂಡಿತಾದರೂ ದೆಹಲಿಯ ನಿಜಾಮುದ್ದೀನ್​ ಪ್ರಕರಣದಿಂದ ಪರಿಸ್ಥಿತಿಯೆಲ್ಲ ಎಷ್ಟೊಂದು ತಿರುವುಮುರುವಾಯಿತು? ಅದಕ್ಕೆ ಒಗ್ಗಟ್ಟು, ಏಕಭಾವ ಅಗತ್ಯ. ಅಂಥದ್ದೊಂದು ಏಕತೆಯ ಸೂತ್ರವನ್ನು ಇಂದು ಬೆಳಗುವ ದೀಪಗಳು ಗಟ್ಟಿಗೊಳಿಸಲಿ ಎಂಬುದು ಪ್ರಧಾನಿಗಳ ಆಶಯ, ಅದಕ್ಕೆ ನಮ್ಮೆಲ್ಲರ ಬೆಂಬಲವಿರಲಿ. ಬೆಳಕು ಎಲ್ಲ ನೈರಾಶ್ಯ ತೊಲಗಿಸಲಿ. ಬರೀ ಭಾವೋದ್ವೇಗ ಬೇಡ, ಎಲ್ಲರ ಹಿತ ಬಯಸುತ್ತ ಮುಂದೆ ಸಾಗೋಣ. ಸರ್ಕಾರದ ನಿಯಮಗಳನ್ನು ಪಾಲಿಸೋಣ. ಜನತಾ ಕರ್ಫ್ಯೂರ್ದಂದು ಕೆಲ ಜನರು ಗುಂಪಾಗಿ ಗಂಟೆ, ಜಾಗಟೆ ಬಾರಿಸಿದ್ದರು. ಇಂಥ ಪ್ರಮಾದ ಮತ್ತೆ ಮರುಕಳಿಸಬಾರದು. ಕರೊನಾ ಅಪಾಯವನ್ನು ಮರೆಯಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ದೀಪಗಳನ್ನು ಬೆಳಗಿಸೋಣ.

ರವೀಂದ್ರ ಎಸ್​.ದೇಶಮುಖ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net