ಪೋಲ್ಯಾಂಡ್​ಗೆ ಕಾದಿದೆ ಪ್ರಿಗೋಝಿನ್ ಪ್ರೇತ ಕಾಟ!; ವ್ಯಗ್ರ ವ್ಯಾಗ್ನರ್ ವ್ಯಾಘ್ರದ ನೆಪದಲ್ಲಿ ಕೂಲಿ

Black Water
Published on
ವಿಶೇಷ ಸೇನಾ ಕಾರ್ಯಾಚರಣೆ ಎಂಬ ಹೆಸರಿನಲ್ಲಿ ಯೂಕ್ರೇನ್ ಮೇಲೆ ರಶಿಯಾ ಆಕ್ರಮಣವೆಸಗಿ 17 ತಿಂಗಳು ಕಳೆದಿವೆ. ಯೂಕ್ರೇನ್​ನ ಪೂರ್ವದ ರಶಿಯನ್ ಬಹುಸಂಖ್ಯಾತ ದಾನ್​ಬಾಸ್ ಪ್ರದೇಶ ಮತ್ತು ತನ್ನ ಹಿಡಿತದ ಕ್ರಿಮಿಯಾ ಪರ್ಯಾದ್ವೀಪಕ್ಕೆ ಭೂಸಂಪರ್ಕಕ್ಕೆ ಅಗತ್ಯವಾದ ಅಝೆೊವ್ ಸಮುದ್ರತೀರದ ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಾಥಮಿಕ ಗುರಿಯನ್ನು ರಶಿಯಾ ಸಾಧಿಸಿದೆ. ಆದರೆ, ತನ್ನ ಯಶಸ್ಸನ್ನು ಪೂರ್ಣವಾಗಿ ಅನುಭವಿಸಲು ರಶಿಯಾವನ್ನು ಯೂಕ್ರೇನ್ ಬಿಡುತ್ತಿಲ್ಲ. ತಾನು ಕಳೆದುಕೊಂಡ ಪ್ರದೇಶಗಳಲ್ಲಿ ರಶಿಯನ್ ಸೇನೆಯನ್ನು ನೆಮ್ಮದಿಯಾಗಿರಲು ಅದು ಬಿಡುತ್ತಿಲ್ಲ. ಯೂರೋಪ್​ನಲ್ಲಿ ಎರಡನೆ ಮಹಾಯುದ್ಧದವರೆಗೂ ನಡೆಯುತ್ತಿದ್ದಂತೆ ಪೂರ್ಣ ಪ್ರಮಾಣದ ದಾಳಿ ಮಾಡಲು ಬದಲಾದ ಕಾಲಮಾನದ ಹೊಸ ವಾಸ್ತವಗಳು ರಶಿಯಾಗೆ ಅವಕಾಶ ನೀಡುತ್ತಿಲ್ಲ. ಈ ಕಾಲದ ಜಾಗತಿಕ ಮನಸ್ಥಿತಿ, ಜಾಗತಿಕವಾಗಿ ಮಾನ್ಯವಾದ ಅಂತಾರಾಷ್ಟ್ರೀಯ ನಿಯಮಗಳು ಹಾಗೂ ಹೊಸ ತಲೆಮಾರಿನ ಯೂಕ್ರೇನಿಯನ್ನರಲ್ಲಿ ಮೂಡಿರುವ ಸ್ವತಂತ್ರ ಮನೋಭಾವ ಹಾಗೂ ರಾಷ್ಟ್ರೀಯ ಪ್ರಜ್ಞೆಗಳಿಂದಾಗಿ ರಶಿಯಾ ತನ್ನ ಕಾರ್ಯಾಚರಣೆಗಳನ್ನು ಒಂದು ಮಿತಿಯೊಳಗೇ ಇರಿಸುವ ಒತ್ತಡಕ್ಕೆ ಒಳಗಾಗಿದೆ. ಇದರ ಉಪಯೋಗವನ್ನು ಪಡೆದುಕೊಂಡ ಯೂಕ್ರೇನ್ ಆಡಳಿತ ಮತ್ತು ಸೇನೆ, ರಶಿಯಾದ ದೈತ್ಯ ಶಕ್ತಿಯ ಹಮ್ಮಿಗೆ ನಿರಂತರವಾಗಿ ಸೂಜಿ ಚುಚ್ಚುತ್ತಲೇ ಇದೆ. ಒಟ್ಟಾರೆ ಯೂಕ್ರೇನ್ ಅನ್ನು ಸಂಧಾನದ ಮೇಜಿಗೆ ಎಳೆಯಲು ರಶಿಯಾಗೆ ಸಾಧ್ಯವಾಗುತ್ತಿಲ್ಲ, ತಾನು ಗಳಿಸಿಕೊಂಡ ಪ್ರದೇಶಗಳನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲು ರಶಿಯಾಗೆ ಯೂಕ್ರೇನ್ ಬಿಡುತ್ತಿಲ್ಲ.

ಯೂಕ್ರೇನ್​ನ ಇದುವರೆಗಿನ ಈ ಪ್ರತಿರೋಧಕ ಶಕ್ತಿ ಹಿಂದಿರುವುದು ನೂರಕ್ಕೆ ತೊಂಬತ್ತು ಭಾಗ ಪಶ್ಷಿಮ ದೇಶಗಳ ಬೆಂಬಲ. ಅಮೆರಿಕಾ ಮತ್ತು ಪಶ್ಚಿಮ ಯೂರೋಪ್​ನ ಕೆಲವು ದೇಶಗಳ ಅಗಾಧ ಧನಸಹಾಯ, ಶಸ್ತ್ರಾಸ್ತ್ರ ಪೂರೈಕೆ ಹಾಗೂ ರಾಜತಾಂತ್ರಿಕ ಬೆಂಬಲ ರಶಿಯಾದ ಎದುರು ಎದೆಸೆಟೆಸಿ ನಿಲ್ಲಲು ಯೂಕೇನ್​ಗೆ ಅವಕಾಶ ಮಾಡಿಕೊಟ್ಟಿದ್ದರೂ ಆಕ್ರಮಣಕಾರಿ ಸೇನೆಯ ವಿರುದ್ಧ ನಿರ್ಣಾಯಕ ಹಾಗೂ ಪೂರ್ಣ ಯಶಸ್ಸು ಯೂಕ್ರೆನ್​ಗೆ ಕನಸಿನ ಮಾತೇ. ತನ್ನ ಪ್ರತಿದಾಳಿಯನ್ನು ರಶಿಯಾದ ನೆಲಕ್ಕೇ ಕೊಂಡೊಯ್ದು ರಶಿಯನ್ ಜನತೆಯನ್ನು ಕಂಗೆಡಿಸಿ ಆ ಮೂಲಕ ಅವರು ಯುದ್ಧ ನಿಲ್ಲಿಸುವಂತೆ ತಮ್ಮ ಸರ್ಕಾರದ ಮೇಲೆ ಒತ್ತಡ ಹೇರಲು ಅವಕಾಶ ಮಾಡಿಕೊಡಲು ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಕೊಡಿ ಎಂದು ಯೂಕ್ರೇನ್ ಅಧ್ಯಕ್ಷ ವೊಲೋದಿಮೀರ್ ಝೆಲೆನ್​ಸ್ಕಿ ಎಲ್ಲೆಡೆ ಅತ್ತುಕರೆದು ಬೇಡಿಕೊಂಡರೂ ಅಮೆರಿಕಾ ಮತ್ತದರ ಪ್ರಮುಖ ಪಶ್ಚಿಮ ಯೂರೋಪಿಯನ್ ಸಹಯೋಗಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಯುದ್ಧವನ್ನು ರಶಿಯನ್ ನೆಲಕ್ಕೆ ಕೊಂಡೊಯ್ಯುವುದು ಬಹಳ ಅಪಾಯಕಾರಿ, ಅದು ರಶಿಯನ್ ಕರಡಿಯ ಪಿತ್ತ ಕೆರಳಿಸಿಬಿಡುತ್ತದೆ, ಅದರಿಂದಾಗಿ ಇನ್ನೆಂಥ ಅನಾಹುತಗಳಾಗುತ್ತವೋ ಎನ್ನುವುದು ಆ ದೇಶಗಳ ಚಿಂತೆ. ಹೀಗಾಗಿಯೇ ಅವು ಆಕ್ರಮಣಕ್ಕೆ ಬಳಕೆಯಾಗದ ಕೇವಲ ರಕ್ಷಣೆಗೆ ಮಾತ್ರ ಬಳಸಬಹುದಾದ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್​ಗೆ ಒದಗಿಸುತ್ತಿವೆ. ದೂರಗಾಮಿ ಯುದ್ಧವಿಮಾನಗಳನ್ನು ಕೊಡಿ ಎಂದು ಝೆಲೆನ್​ಸ್ಕಿ ತಿಂಗಳುಗಟ್ಟಲೆ ಮಾಡಿಕೊಂಡ ಮನವಿಯನ್ನು ಅವು, ಮುಖ್ಯವಾಗಿ ಅಮೆರಿಕಾ, ಖಂಡತುಂಡವಾಗಿ ತಿರಸ್ಕರಿಸಿವೆ. ಈ ಬಗ್ಗೆ ರಶಿಯಾಗೆ ಸಹಜವಾಗಿಯೇ ಸಂತೋಷ ಮತ್ತು ನಿರಾಳತೆ ಇದೆ. ಆದರೆ, ಈ ವಿಷಯದಲ್ಲಿ ರಶಿಯಾದ ಕಣ್ಣನ್ನು ಕೆಂಪಗಾಗಿಸಿರುವುದು ಕಮ್ಯೂನಿಸ್ಟ್ ಕಾಲದಲ್ಲಿ ಮಾಸ್ಕೋದ ಉಪಗ್ರಹವಾಗಿದ್ದ ಪೋಲ್ಯಾಂಡ್ ಮತ್ತು ಹಿಂದಿನ ಸೋವಿಯೆತ್ ಯೂನಿಯನ್​ನದೇ ಭಾಗವಾಗಿದ್ದು ಈಗ ಸ್ವತಂತ್ರ ದೇಶವಾಗಿರುವ ಲಿಥುವೇನಿಯಾ.

ತನಗೆ ನಿರುಪಯುಕ್ತವೆನಿಸಿದ ಕೆಲವು ಯುದ್ಧವಿಮಾನಗಳನ್ನು ಯೂಕ್ರೇನ್​ಗೆ ನೀಡಲು ಪೋಲ್ಯಾಡ್ ಮುಂದೆ ಬಂದರೆ ಸೋವಿಯೆತ್ ಯೂನಿಯನ್​ನ ಮತ್ತೊಂದು ಮಾಜಿ ಉಪಗ್ರಹ ಝೆಕೋಸ್ಲೊವೇಕಿಯಾದ ಭಾಗವಾಗಿದ್ದು ಇಂದು ಸ್ವತಂತ್ರ ದೇಶವಾಗಿರುವ ಸ್ಲೊವೇಕಿಯಾ ಕೂಡ ಇದೇ ಕೃತ್ಯವನ್ನೆಸಗತೊಡಗಿದೆ. ಈ ಎರಡೂ ದೇಶಗಳು ಇಂದು ಅಮೆರಿಕಾ ನೇತೃತ್ವದ ಸೇನಾಕೂಟ ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಜೇಷನ್ ಅಂದರೆ ನ್ಯಾಟೋದ ಸದಸ್ಯರಾಗಿವೆ. ಅಮೆರಿಕಾ ನಿರ್ವಿುತ ಯುದ್ಧೋಪಕರಣಗಳನ್ನು ಮೂರನೆಯ ದೇಶಕ್ಕೆ ವರ್ಗಾಯಿಸುವುದನ್ನು ನ್ಯಾಟೋ ನಿಯಮ ಪ್ರತಿಬಂಧಿಸುವುದರಿಂದ ಇವು ತಾವು ಹಿಂದೆ ಸೋವಿಯೆತ್ ಯೂನಿಯನ್​ನ ಸಹಯೋಗಿಗಳಾಗಿ ಪಡೆದುಕೊಂಡಿದ್ದ ಸೋವಿಯೆತ್ ನಿರ್ವಿುತ ಯುದ್ಧವಿಮಾನಗಳನ್ನು ಯೂಕ್ರೇನ್​ಗೆ ನೀಡುವ, ಆ ಮೂಲಕ ನ್ಯಾಟೋ ನಿಯಮವನ್ನು ಉಲ್ಲಂಘಿಸದಿರುವ ಅಡ್ಡದಾರಿ ಕಂಡುಕೊಂಡಿವೆ. 3-4 ದಶಕಗಳಷ್ಟು ಹಳೆಯದಾದ ಈ ಯುದ್ಧವಿಮಾನಗಳು ಜಗತ್ತಿನ ಅತ್ಯಂತ ಶಕ್ತಿಯುತ ವಿಮಾನನಿರೋಧಕ ಕ್ಷಿಪಣಿ ವ್ಯವಸ್ಥೆಯಾದ ಎಸ್-400 ಅನ್ನು ಹೊಂದಿರುವ ರಶಿಯಾದ ಕೂದಲನ್ನೂ ಕೊಂಕಿಸಲಾರವು. ಇಷ್ಟಾಗಿಯೂ, ಪೋಲ್ಯಾಂಡ್ ಮತ್ತು ಸ್ಲೊವೇಕಿಯಾಗಳ ಈ ಕೃತ್ಯವನ್ನು ರಶಿಯಾದ ಅಧ್ಯಕ್ಷ ವ್ಲಾದಿಮೀರ್ ಪೂತಿನ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗ ತಾವು ಸುಮ್ಮನೆ ಕುಳಿತರೆ ಆ ದೇಶಗಳ ‘ಕಿಡಿಗೇಡಿತನ’ ಇನ್ನೂ ಹೆಚ್ಚಬಹುದು, ರಶಿಯಾಗೆ ಹಾನಿಯೆಸಗಬಲ್ಲ ಶಸ್ತ್ರಾಸ್ತ್ರಗಳನ್ನೂ ಯೂಕ್ರೇನ್​ಗೆ ಮುಂದೊಂದು ದಿನ ಅವು ಪೂರೈಸಲು ಹೊರಡಬಹುದು ಎನ್ನುವುದು ಅವರ ಶಂಕೆ. ಈ ಎರಡು ದೇಶಗಳ ಜತೆ ಲಿಥುವೇನಿಯಾ ಸಹಾ ಯೂಕ್ರೇನ್​ನ ಬೆಂಬಲಕ್ಕೆ ದೊಡ್ಡದಾಗಿ ನಿಂತಿದೆ. ಅದೂ ಸಹಾ ಇಂದು ನ್ಯಾಟೋ ಸದಸ್ಯರಾಷ್ಟ್ರ.

ಈ ಮೂರೂ ದೇಶಗಳಿಗೆ ‘ಪಾಠ’ ಕಲಿಸಲು ಯಾವುದೇ ನೇರ ಕ್ರಮವನ್ನು ಕೈಗೊಳ್ಳುವುದು ಪೂತಿನರಿಗೆ ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಯಾಕೆಂದರೆ ನ್ಯಾಟೋ ಒಪ್ಪಂದದ ಐದನೆಯ ವಿಧಿಯ ಪ್ರಕಾರ ಯಾವುದೊಂದು ಸದಸ್ಯ ರಾಷ್ಟ್ರದ ಮೇಲಿನ ದಾಳಿಯನ್ನು ನ್ಯಾಟೋ ಇಡಿಯಾಗಿ ತನ್ನ ಮೇಲಿನ ದಾಳಿಯೆಂದು ಪರಿಗಣಿಸುತ್ತದೆ. ಆ ಪ್ರಕಾರ ಅದು ಪ್ರತಿ ಕಾರ್ಯಾಚರಣೆಗೂ ಮುಂದಾಗಲೂ ಅವಕಾಶವಿದೆ. ಅಂದರೆ ಪೋಲ್ಯಾಂಡ್, ಸ್ಲೊವೇಕಿಯಾ ಹಾಗೂ ಲಿಥುವೇನಿಯಾಗಳ ಮೇಲೆ ರಶಿಯಾ ದಾಳಿಯೆಸಗಿದರೆ ಅದು ನ್ಯಾಟೋವನ್ನು ಯುದ್ಧಕ್ಕೆ ಆಹ್ವಾನಿಸಿದಂತೇ! ಅದೆಷ್ಟು ಅಪಾಯಕಾರಿ ಎನ್ನುವುದು ಪೂತಿನರಿಗೆ ಗೊತ್ತು.

ಹೇಳಿಕೇಳಿ ವ್ಯಾಗ್ನರ್ ಗ್ರೂಪ್ ಕೂಲಿ ಸೇನೆ ರಶಿಯಾದ್ದೇ ಒಂದು ಅನಧಿಕೃತ ಸೇನೆ. ಹಣೆಪಟ್ಟಿ ಮಾತ್ರ ಬೇರೆ ಅಷ್ಟೇ. ಅದಕ್ಕೆ ಹಣ ಹಾಗೂ ಶಸ್ತ್ರಾಸ್ತಗಳ ಪೂರೈಕೆ ಸ್ವತಃ ಪೂತಿನರ ಇಚ್ಚೆ ಹಾಗೂ ಆದೇಶದಂತೇ. ಅದರ ಮಾಲೀಕ ಯೆವ್ಗೆನಿ ಪ್ರಿಗೋಝಿನ್ ಅಧ್ಯಕ್ಷ ಪೂತಿನ್ ಹೇಳಿದ್ದು ಮಾಡುವ ಬಲಗೈ ಬಂಟ. ಬಿಲ್ ಕ್ಲಿಂಟನರಿಂದ ಇದುವರೆಗಿನ ಅಮೆರಿಕಾದ ‘ಸಭ್ಯ’ ಅಧ್ಯಕ್ಷರೆಲ್ಲರೂ ಇರಾಕ್, ಅಫ್ಘಾನಿಸ್ತಾನ, ಲಿಬಿಯಾ ಸೇರಿದಂತೆ ವಿಶ್ವಾದ್ಯಂತ ಹಲವಾರು ದೇಶಗಳನ್ನು ತಮ್ಮ ‘ಕೆಟ್ಟ ಕೆಲಸ’ಗಳನ್ನು ಬ್ಲಾ್ಯಕ್ ವಾಟರ್ಸ್ ಕೂಲಿ ಸೇನೆಯಿಂದ ಮಾಡಿಸಿ, ತಮ್ಮ ಕೈಗಳು ಶುದ್ಧವಾಗಿಯೇ ಇವೆಯೆಂದು ತೋರಿಸಿಕೊಂಡಂತೇ ಚಾಣಾಕ್ಷ ಪೂತಿನ್ ತಮ್ಮ ‘ಕೆಟ್ಟ ಕೆಲಸ’ಗಳನ್ನು ವ್ಯಾಗ್ನರ್ ಗ್ರೂಪ್​ನಿಂದ ಮಾಡಿಸಿ, ‘ನಾನೇನೂ ಮಾಡಿಲ್ಲಪ್ಪ, ನಾನು ತುಂಬಾ ಒಳ್ಳೆಯ ಹುಡುಗ’ ಎಂದು ಜಗತ್ತಿಗೆ ಹೇಳುವ ದಾರಿಯನ್ನು ಕಂಡುಕೊಂಡದ್ದರಲ್ಲಿ ಆಶ್ಚರ್ಯವೇ ಇಲ್ಲ. ವ್ಯಾಗ್ನರ್ ಗ್ರೂಪ್ ಬಳಸಿಯೇ ಅವರು ಸಿರಿಯಾದಲ್ಲಿ ರಶಿಯಾದ ಘನಿಷ್ಟ ಸಹಯೋಗಿ ಬಷರಾಲಾಸದ್​ರನ್ನು ಅಧ್ಯಕ್ಷ ಸ್ಥಾನದಲ್ಲೇ ಕೂರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ, ಕಳೆದೆರಡು ವರ್ಷಗಳಲ್ಲೇ ಕನಿಷ್ಠ ಅರ್ಧ ಡಜನ್ ಆಫ್ರಿಕನ್ ದೇಶಗಳಲ್ಲಿ ಪಶ್ಚಿಮದ, ಮುಖ್ಯವಾಗಿ ಮಾಜಿ ವಸಾಹತುಶಾಹಿ ದೈತ್ಯ ಫ್ರಾನ್ಸ್​ನ, ಪರವಾದ ಸರ್ಕಾರಗಳನ್ನು ಉರುಳಿಸಿ ತಮ್ಮ ಪರವಾದ ಸರ್ಕಾರಗಳನ್ನು ಸ್ಥಾಪಿಸಿದ್ದಾರೆ. ವ್ಯಾಗ್ನರ್ ಗ್ರೂಪ್ ಎಲ್ಲ ಬಗೆಯಲ್ಲೂ ‘ರಶಿಯಾದ ಬ್ಲಾ್ಯಕ್ ವಾಟರ್ಸ್’ ಆಗಿರುವ ಕಾರಣ ಪೂತಿನ್​ರನ್ನು ನೇರವಾಗಿ ಬೈಯಲು ಶ್ವೇತಭವನದ ಪ್ರಭುಗಳಿಗೆ ಸಾಧ್ಯವಾಗುತ್ತಿಲ್ಲ. ಅದೀಗ ಪೋಲ್ಯಾಂಡ್, ಸ್ಲೊವೇಕಿಯಾ ಮತ್ತು ಲಿಥುವೇನಿಯಾಗಳಿಗೆ ‘ಪಾಠ’ ಕಲಿಸುವ ದಾರಿಯನ್ನು ಪೂತಿನರಿಗೆ ತೋರಿಸಿದೆ! ವ್ಯಾಗ್ನರ್ ಗ್ರೂಪ್ ಅನ್ನು ಆ ದೇಶಗಳ ಮೇಲೆ ಛೂ ಬಿಟ್ಟು ತಾನು ದೂರದಲ್ಲಿ ತಣ್ಣಗೆ ಕೂತು ಮಜಾ ತೆಗೆದುಕೊಳ್ಳುವ ಲೆಕ್ಕಾಚಾರವನ್ನು ಪೂತಿನ್ ಹಾಕಿದ್ದಾರೆ. ಜೂನ್ 24ರ ನಸುಕಿನಿಂದ ಇಲ್ಲಿವರೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಈ ಹಿನ್ನೆಲೆಯಲ್ಲಿ ನೋಡಬೇಕು.

ಜೂನ್ ತಿಂಗಳ ಕೊನೆಯ ಶನಿವಾರ ಪ್ರಿಗೋಝಿನ್ ಆಡಿದ ಕ್ಷಿಪ್ರಕಾಂತಿಯ ನಾಟಕದ ತಯಾರಿ ಕನಿಷ್ಠ ಎರಡು ತಿಂಗಳ ಹಿಂದೆಯೇ ಆರಂಭವಾಯಿತು. ಅದರ ಉದ್ದೇಶ ನ್ಯಾಟೋದ ಕಣ್ಣಿಗೆ ಮಣ್ಣೆರಚಿ ವ್ಯಾಗ್ನರ್ ಕೂಲಿ ಸೈನಿಕರನ್ನು ಪೋಲ್ಯಾಂಡ್ ಗಡಿಗೆ ಒಯ್ಯುವುದಾಗಿತ್ತು. ತನ್ನ ಸೈನಿಕರು ಯೂಕ್ರೇನ್​ನಲ್ಲಿ ಹುಳುಗಳಂತೆ ಸಾಯುತ್ತಿದ್ದಾರೆ, ರಶಿಯನ್ ಸೇನೆ ನಮ್ಮನ್ನು ಬಲಿಗೊಡುತ್ತಿದೆ ಎಂಬ ‘ಆಪಾದನೆ’ಯನ್ನು ಪ್ರಿಗೋಝಿನ್ ಏಪ್ರಿಲ್ ತಿಂಗಳಲ್ಲೇ ಮಾಡತೊಡಗಿದರು. ಯೂಕ್ರೇನ್​ನಿಂದ ತಮ್ಮ ಸೈನಿಕರನ್ನೂ ಹೊರಗೊಯ್ಯುವುದಾಗಿ ಮೇ ಮೊದಲ ವಾರದಲ್ಲಿ ಆಕ್ರೋಶದಿಂದ ಘೊಷಿಸಿದರು. ಕೆಲವು ವರದಿಗಳ ಪ್ರಕಾರ ಪ್ರಿಗೋಝಿನ್ ಅವರ ಮಾತುಗಳನ್ನು ನಿಜವೆಂದು ನಂಬಿದ ಅಮೆರಿಕಾ ಪೂತಿನರ ಕೈಗಳನ್ನು ಕಟ್ಟಿಹಾಕಲು, ರಶಿಯನ್ ಸೇನೆಯನ್ನು ಯೂಕ್ರೇನ್​ನಿಂದ ಓಡಿಸಲು ಇದೊಂದು ‘ಬಯಸದೇ ಬಂದ ಭಾಗ್ಯ’ ಎನ್ನಬಹುದಾದ ಅವಕಾಶ ಎಂದು ತಿಳಿಯಿತು. ಆ ಪ್ರಕಾರ ಪ್ರಿಗೋಝಿನ್​ರನ್ನು ತನ್ನತ್ತ ಸೆಳೆದುಕೊಳ್ಳಲು ಅಮೆರಿಕಾ ತನ್ನ ಗುಪ್ತಚರ ಸಂಸ್ಥೆ ಸಿಐಎ ಮೂಲಕ ಒಡ್ಡಿದ್ದು ಭಾರಿ ಮೊತ್ತದ ಆಮಿಷ. ಪೂತಿನರ ಪೂರ್ಣ ಅರಿವು ಮತ್ತು ಸಮ್ಮತಿಯಿಂದಲೇ ಪ್ರಿಗೋಝಿನ್ ಸಿಐಎ ಜತೆ ‘ರಹಸ್ಯ’ ಮಾತುಕತೆಗಿಳಿದರು. ಆಗ ನಿರ್ಧಾರವಾದ ಮೊತ್ತ 6.2 ಬಿಲಿಯನ್ ಡಾಲರ್​ಗಳು! ಅಷ್ಟನ್ನು ತೆಗೆದುಕೊಂಡು ಪ್ರಿಗೋಝಿನ್ ತನ್ನ ಸೈನಿಕರನ್ನು ಯೂಕ್ರೇನ್​ನಿಂದ ಹೊರಗೆ ಒಯ್ಯಬೇಕಷ್ಟೇ ಅಲ್ಲ ಮಾಸ್ಕೋಗೆ ಹೋಗಿ ಪೂತಿನರನ್ನೂ ಕೆಳಗುರುಳಿಸಬೇಕು ಎನ್ನುವುದು ಅಮೆರಿಕಾದ ಕಟ್ಟಳೆಯಾಗಿತ್ತು. ಪ್ರಿಗೋಜಿನ್ ಎಲ್ಲದಕ್ಕೂ ಸಮ್ಮತಿಯಲ್ಲಿ ತಲೆಯಾಡಿಸಿದರು. ಇದು ಅವರು ಪೂತಿನರ ಜತೆಗೂಡಿ ಹೂಡಿದ ನಾಟಕದ ಭಾಗ. ಇದನ್ನರಿಯದ ಬಡಪಾಯಿ ಬೈಡನ್ ಮಾಸ್ಕೋದಲ್ಲಿ ಸರ್ಕಾರ ಬದಲಾವಣೆ ನಮ್ಮ ಗುರಿ ಎಂದು ತಾನು ವರ್ಷದ ಹಿಂದೆ ಬಾಯಿ ತಪ್ಪಿ ಹೇಳಿದ್ದನ್ನು ನಿಜವೇ ಆಗಿಬಿಡುವ ಅವಕಾಶ ತಾನಾಗಿಯೇ ಒದಗಿಬಂದಿದೆಯೆಂದು ಕುಣಿದಾಡಿರಬೇಕು.

ಸರಿ, ಸಿಐಎಯಿಂದ ಹಣ ಪ್ರಿಗೋಝಿನ್ ಕೈಸೇರಿತು. ಪ್ರಿಗೋಝಿನ್ ಕ್ರಾಂತಿಯೆಸಗಿರುವುದಾಗಿ, ಪೂತಿನರನ್ನು ಉರುಳಿಸಿಬಿಡಲು ಹೊರಟಿರುವುದಾಗಿ ಘೊಷಿಸಿದರು. ಎಲ್ಲ ಲೆಕ್ಕಾಚಾರದಂತೆ ರೋಸ್ತೋವ್ ಸೇನಾ ಮುಖ್ಯಾಲಯವನ್ನು ‘ವಹಿಸಿಕೊಳ್ಳಲು’, ಅಲ್ಲಿಂದ 1,100 ಕಿಲೋಮೀಟರ್ ದೂರದ ಮಾಸ್ಕೋಗೆ ವ್ಯಾಗ್ನರ್ ಕೂಲಿಸೇನೆ ಅಡೆತಡೆಯಿಲ್ಲದೆ ಸಾಗುವಂತೆ, ಅಂದರೆ ಪೂತಿನ್ ಕೊನೆಗಳಿಗೆ ಸನ್ನಿಹಿತವಾಯಿತು ಎಂದು ಅಮೆರಿಕಾ ನಂಬುವಂತೆ ಮಾಡಲು ಸ್ವತಃ ಪೂತಿನ್ ಅವಕಾಶ ಮಾಡಿಕೊಟ್ಟರು. ಪ್ರಿಗೋಝಿನರಿಂದ ನಿಜವಾಗಿಯೂ ಅಪಾಯವಿದೆಯೆಂದೂ, ಪೂತಿನ್ ಹೆದರಿದ್ದಾರೆಂದೂ ತೋರಿಸಲು ಮಾಸ್ಕೋ ನಗರದತ್ತ ಸಾಗುತ್ತಿದ್ದ ರಸ್ತೆಗಳಲ್ಲಿ ಕಂದಕಗಳನ್ನು ತೋಡಲಾಯಿತು, ರಶಿಯನ್ ಟ್ಯಾಂಕ್​ಗಳನ್ನೂ ತಂದು ನಿಲ್ಲಿಸಲಾಯಿತು, ಆಕಾಶದಲ್ಲಿ ಯುದ್ಧ ವಿಮಾನಗಳೂ ಹಾರಾಡಿದವು. ಅಲ್ಲಿಗೆ ನಾಟಕದ ಮೊದಲ ಅಂಕ ಯಶಸ್ವಿಯಾಗಿ ಮುಕ್ತಾಯವಾಯಿತು.

ಎರಡನೆಯ ಅಂಕದಲ್ಲಿ ಪುತಿನರ ಘನಿಷ್ಟ ಸಹಯೋಗಿ ಬೆಲರೂಸ್​ನ ಅಧ್ಯಕ್ಷ ಅಲೆಕ್ಸಾಂಡರ್ ಲ್ಯೂಕಶೆಂಕೋ ರಂಗದ ಮೇಲೆ ಬಂದರು. ಪ್ರಿಗೋಝಿನ್​ರೊಂದಿಗೆ ತಾವು ಸಂಧಾನ ನಡೆಸುವುದಾಗಿ ಘೊಷಿಸಿದರು. ರಾತ್ರಿಯ ಹೊತ್ತಿಗೆ ‘ಸಂಧಾನ’ ಯಶಸ್ವಿಯಾಯಿತು, ಪ್ರಿಗೋಝಿನ್ ತಮ್ಮ ‘ಕ್ಷಿಪ್ರಪ್ರಾಂತಿ’ಯನ್ನು ನಿಲುಗಡೆಗೆ ತಂದರು, ಅವರಿಗೆ ಪೂತಿನರಿಂದ ಯಾವ ಶಿಕ್ಷೆಯೂ ಒದಗದಂತೆ ನೋಡಿಕೊಳ್ಳಲು ವ್ಯಾಗ್ನರ್ ಕೂಲಿಸೇನೆಗೆ ಬೆಲರೂಸ್​ನಲ್ಲಿ ‘ಸುರಕ್ಷಿತ ಆಶ್ರಯ’ ನೀಡುವ ವ್ಯವಸ್ಥೆಯಾಯಿತು. ಅದರಂತೆ ಪುತಿನರಿಗೆ ’ಹೆದರಿದ’ ಪ್ರಿಗೋಝಿನ್ ತಮ್ಮ ಸೈನಿಕರನ್ನು ಕರೆದುಕೊಂಡು ಬೆಲರೂಸ್​ಗೆ ಹೋಗಿ ‘ರಕ್ಷಣೆ’ ಪಡೆದರು. ಹೀಗೆ ನಾಟಕದ ಎರಡನೆಯ ಅಂಕವೂ ಯಶಸ್ವಿಯಾಗಿ ಪೂರ್ಣಗೊಂಡು ವ್ಯಾಗ್ನರ್ ಕೂಲಿ ಸೇನೆ ಎಷ್ಟು ಸುಲಭವಾಗಿ ಪೋಲ್ಯಾಂಡ್ ಗಡಿ ತಲುಪಿತು ನೋಡಿ! ಪಾಪ, ಅಮೆರಿಕಾಗೆ ಕಾಸೂ ಕೇಡು ತಲೆಯೂ ಬೋಳು!

ನಂತರ ಜರುಗಿದ ನಾಟಕದ ಮೂರನೆಯ ಅಂಕದಲ್ಲಿ, ‘ಭಾರಿ ಕೆಲಸ’ದಿಂದ ದಣಿದಿದ್ದ ಪ್ರಿಗೋಝಿನ್ ಒಂದಷ್ಟು ರೆಸ್ಟ್ ತೆಗೆದುಕೊಳ್ಳಲು ತಮ್ಮ ಹುಟ್ಟೂರು ಸೈಂಟ್ ಪೀಟರ್ಸ್​ಬರ್ಗಗೆ ಹೋದರು (ಅದಿರುವುದು ರಶಿಯಾದಲ್ಲೇ. ಬೆಲರೂಸ್​ನಲ್ಲಲ್ಲ!) ಆಮೇಲೆ ಜುಲೈ 11ರಂದು ನೇರ ಮಾಸ್ಕೋಗೆ ಹೋಗಿ ಪೂತಿನರನ್ನು ಭೇಟಿಯಾದರು. ನಾಟಕದ ಯಶಸ್ಸಿನ ಸಂಭ್ರಮದಲ್ಲಿ ಅದೆಷ್ಟು ವೋಡ್ಕಾ ಪೆಗ್​ಗಳು ಖಾಲಿಯಾದವೋ. ಅಲ್ಲಿಗೆ ಮೂರನೆಯ ಅಂಕವೂ ಸಮಾಪ್ತಗೊಂಡಿತು.

ನಾಟಕದ ನಾಲ್ಕನೆಯ ಅಂಕ ಈಗ ನಡೆಯುತ್ತಿದೆ. ಹಿಂದಿನ ವಾರಾಂತ್ಯದಲ್ಲಿ (ಜುಲೈ 22-29) ವ್ಯಾಗ್ನರ್ ಕೂಲಿಸೇನೆ ಬೆಲರೂಸ್ - ಪೋಲ್ಯಾಂಡ್ ಗಡಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಅದು ಯುದ್ಧ ಕಸರತ್ತು ನಡೆಸುತ್ತಿದೆಯೆಂದು ಸುದ್ದಿ. ಈ ಬಗ್ಗೆ ಬೆಲರೂಸ್ ಅಧ್ಯಕ್ಷ ಲ್ಯೂಕಶೆಂಕೋರನ್ನು ಕೇಳಿದರೆ ಆ ಮಹಾ ನಾಟಕಕಾರ ತುಂಟ ನಗೆ ಬೀರುತ್ತಾ ಹೇಳಿದ್ದು ಹೀಗೆ: ವಾರ್ಸಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು ವ್ಯಾಗ್ನರ್ ಸೈನಿಕರು ಹೇಳುತ್ತಿದ್ದಾರೆ.

ಪಶ್ಚಿಮ ಜಗತ್ತಿಗೆ ವಾಸ್ತವದ ಅರಿವು ಈಗ ತಟ್ಟಿದೆ. ವ್ಯಾಗ್ನರ್ ಸೈನಿಕರು ವಿಹಾರಕ್ಕಾಗಿ ತನ್ನ ರಾಜಧಾನಿಗೆ ಬರುವುದು ಪೋಲ್ಯಾಂಡ್​ಗೆ ಬೇಡವಾಗಿದೆ. ಅದು ಬೆಲರೂಸ್​ನ ಜತೆಗಿನ ತನ್ನ ಗಡಿಯನ್ನು ಈ ವಾರಾಂತ್ಯ (ಜುಲೈ 29-30) ಮುಚ್ಚಿಬಿಟ್ಟಿದೆ. ವ್ಯಾಗ್ನರ್​ಗಳು ತನ್ನ ಮತ್ತು ಪೋಲ್ಯಾಂಡ್ ನಡುವಿನ ಸುವಾಲ್ಕಿ ಕಾರಿಡಾರ್​ಗೆ ನುಗ್ಗಬಹುದೆಂದು ಹೆದರಿ ಲಿಥುವೇನಿಯಾ ಸಹಾ ತನ್ನ ಗಡಿಯಲ್ಲಿ ಬಂದೋಬಸ್ತ್ ಆರಂಭಿಸಿದೆ! ಕೂಲಿಸೇನೆಯ ಈ ಕದನ ಕುತೂಹಲಕ್ಕೆ ರಶಿಯಾವನ್ನು ಹೇಗೆ ಜವಾಬ್ದಾರಿಯಾಗಿಸುವುದು ಎಂದು ನ್ಯಾಟೋ ಕೈಕೈ ಹಿಸುಕಿಕೊಳ್ಳುತ್ತಿದೆ.

ಮುಂದೇನು?

ಎಲ್ಲಕ್ಕೂ ಕಾರಣವಾದ ಯೂಕ್ರೇನ್ ಯುದ್ಧ ಹದಿನೇಳು ತಿಂಗಳು ಪೂರೈಸಿದೆ. ಹಾಗಿರುವಾಗ ಅದರ ಒಂದು ಪ್ರಮುಖ ಆಯಾಮದ ಬಗೆಗಿನ ಈ ಸರಣಿ ಕನಿಷ್ಠ ಐದನೆಯ ಭಾಗಕ್ಕಾದರೂ ಮುಂದುವರಿಯುವುದೇನೂ ತಪ್ಪಲ್ಲ ಅಲ್ಲವೇ?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net