

ಟೋಕಿಯೊ ಒಲಿಂಪಿಕ್ಸ್ನಲ್ಲಿನ ಭಾರತದ ಸಾಧನೆ ದೇಶದ ಯುವಪೀಳಿಗೆ ಕ್ರೀಡೆಗಳತ್ತ ಗಮನ ಕೇಂದ್ರೀಕರಿಸಲು ಸಹಾಯಕವಾಗಬಹುದು ಎನ್ನುವ ಆಶಾಭಾವನೆ ಮೂಡಿದೆ. ಚಿನ್ನದ ಪದಕ ಗೆಲ್ಲುವ ಮೂಲಕ ರಜಪುತಾನ ರೈಫಲ್ಸ್ನ ಸುಬೇದಾರ್ ನೀರಜ್ ಚೋಪ್ರಾ ದೇಶದ ಕ್ರೀಡಾಳುಗಳಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಅವರ ಸಾಧನೆ ಇನ್ನಷ್ಟು ಪ್ರತಿಭೆಗಳು ಮಂಚೂಣಿಗೆ ಬರುವಂತೆ ಮಾಡುವುದರಲ್ಲಿ ಸಂಶಯವಿಲ್ಲ. 136 ಕೋಟಿ ಜನಸಂಖ್ಯೆಯ ದೇಶದಲ್ಲಿ ಪ್ರತಿಭೆಗೆ ಖಂಡಿತವಾಗಿಯೂ ಬರವಿಲ್ಲ. ಉತ್ಸಾಹೀ ಯುವ ಕ್ರೀಡಾಳುಗಳಿಗೆ ಸೂಕ್ತ ತರಬೇತಿ ಮತ್ತು ಮೂಲಸೌಕರ್ಯ ದೊರೆತರೆ ಕ್ರೀಡೆಗಳಲ್ಲಿ ದೇಶದ ಸಾಧನೆ ಇನ್ನಷ್ಟು ಉತ್ತಮವಾಗಲಿದೆ.
ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ಆಟಗಾರರು ಕುಟುಂಬವನ್ನು ಪೋಷಿಸಬೇಕಾದ ಅನಿವಾರ್ಯತೆಯಲ್ಲಿ ತಮ್ಮ ಕ್ರೀಡಾಸಕ್ತಿಯನ್ನು ತ್ಯಜಿಸಿ ಉದ್ಯೋಗಬೇಟೆಗೆ ಮುಂದಾಗಬೇಕಾಗುತ್ತದೆ. ಆದರೆ, ಸೇನೆಯಲ್ಲಿ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ ಮತ್ತು ನಾನ್ ಕಮಿಷನ್ಡ್ ಹುದ್ದೆಗಳಲ್ಲಿ ಶೇಕಡ 2 ಹುದ್ದೆಗಳು ಸ್ಪೋರ್ಟ್ಸ್ ಕೋಟಾಗೆ ಮೀಸಲಿಡಲಾಗುತ್ತದೆ. ಯುವ ಕ್ರೀಡಾಳುಗಳಿಗೆ ಪ್ರತಿಭೆಯನ್ನು ಸಾಬೀತು ಮಾಡುವ ಉತ್ತಮ ಅವಕಾಶಗಳು ಸೇನೆಯಲ್ಲಿವೆ. ಕೋಚಿಂಗ್ ಸೆಂಟರ್ಗಳ ಮೂಲಕ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ಸಹ ಅಲ್ಲಿದೆ. ಆಟಗಾರರಿಗೆ ಬೇಕಾದ ಕ್ರೀಡೋಪಕರಣಗಳನ್ನು ಒದಗಿಸಲಾಗುತ್ತದೆ. ಬಟಾಲಿಯನ್ ಸ್ತರದಿಂದ ಮೊದಲ್ಗೊಂಡು ವಿವಿಧ ಫಾಮೇಶನ್ಗಳ ಸ್ತರದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿರುತ್ತವೆ. ಪ್ರತಿಭೆಯ ಆಧಾರದಲ್ಲಿ ಹೆಚ್ಚಿನ ತರಬೇತಿಗೆ ಸೇನೆ ಅವಕಾಶ ಮಾಡಿಕೊಡುತ್ತದೆ. ಸೇನೆಯಲ್ಲಿ ದೊರೆಯುವ ಸೌಲಭ್ಯ, ಮೂಲಸೌಕರ್ಯ ಕ್ರೀಡಾಳುಗಳಿಗೆ ಉತ್ತಮ ವಾತಾವರಣವನ್ನು ಕೊಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.
ನಾಯಕತ್ವ, ಮುನ್ನುಗ್ಗುವ ಎದೆಗಾರಿಕೆ, ದೈಹಿಕ ಸಾಮರ್ಥ್ಯ ಮೊದಲಾದ ಉತ್ತಮ ಕ್ರೀಡಾಳುಗಳಲ್ಲಿರಬೇಕಾದ ಗುಣಗಳು ಸೈನಿಕರಲ್ಲಿ ಅಗತ್ಯವಾಗಿ ಇರಬೇಕಾದ ಗುಣಗಳೇ ಆಗಿವೆ. ಒಟ್ಟಾರೆ, ಸೇನೆಯ ವೃತ್ತಿಪರ ಚಟುವಟಿಕೆ ಮತ್ತು ಕ್ರೀಡಾಸ್ಪೂರ್ತಿ ಒಂದಕ್ಕೊಂದು ಪೂರಕ. ಮುಂದಿನ ಒಲಿಂಪಿಕ್ಸ್ ಹೊತ್ತಿಗೆ ಸೇನೆಯ ಮೂಲಕ ಕ್ರೀಡೆಗಳಲ್ಲಿನ ನಮ್ಮ ಸಾಧನೆ ಇನ್ನಷ್ಟು ಉತ್ತಮವಾಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿ. ಪ್ರತಿಭಾವಂತ ಆಟಗಾರರನ್ನು ಗುರುತಿಸುವ, ಅವರಿಗೆ ಅಗತ್ಯ ಸೌಕರ್ಯ ನೀಡುವ ವ್ಯವಸ್ಥೆ ಇನ್ನಷ್ಟು ಸುಧಾರಿಸಲಿ. ಕ್ರೀಡಾಸಾಧನೆ ಜತೆಯಲ್ಲಿ ದೇಶಸೇವೆ ಮಾಡುವ ಅವಕಾಶವನ್ನು ಯುವಕರು ಆಯ್ಕೆ ಮಾಡಿಕೊಳ್ಳುವಂತಾಗಲಿ.
| ಚಂದ್ರಶೇಖರ ನಾವಡ ನಿವೃತ್ತ ಸೈನಿಕ, ಬೈಂದೂರು