ಅದೃಷ್ಟದಾಟ ನಾಲ್ಕು ವಜ್ರಗಳ ನಾಲ್ಕಂಕದ ಕಥಾನಕ

ವಿಜಯವಾಣಿ (6)
Published on

(ಲೇಖಕರು 'ವಿಜಯವಾಣಿ' ಸೀನಿಯರ್​ ಡೆಪ್ಯೂಟಿ ಎಡಿಟರ್​)

ಕರ್ನಾಟಕ ಕ್ರಿಕೆಟ್​ನ ನಾಲ್ಕು ವಜ್ರಗಳು

  • ಪದಾರ್ಪಣೆ ಮಾಡಿದ ಕೇವಲ ಮೂರನೇ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುವುದೆಂದರೆ, ಅದು ಅಂತಿಂಥವರಿಗೆ ಸಾಧ್ಯವಾಗುವ ಸಾಧನೆಯಲ್ಲ. ಭಾರತ ತಂಡದಲ್ಲಿ ಖಾಯಂ ಸ್ಥಾನ ಅಪೇಕ್ಷಿಸುವುದಕ್ಕೆ ಅದಕ್ಕಿಂತ ಹೆಚ್ಚಿಗೆ ಇನ್ನೇನಾದರೂ ಮಾಡಲು ಸಾಧ್ಯವೇ?
  • ಟೆಸ್ಟ್ ಕ್ರಿಕೆಟ್​ಗೆ ಕಾಲಿಟ್ಟ ಮೊದಲ ಎಂಟು ಪಂದ್ಯಗಳಲ್ಲೇ ಎರಡು ದ್ವಿಶತಕ ಬಾರಿಸುವುದೆಂದರೆ ಅದೇನು ಸಣ್ಣಪುಟ್ಟ ಸಾಧನೆಯೇ? ಭಾರತ ತಂಡದಲ್ಲಿ ಸುದೀರ್ಘ ಅವಕಾಶ ಪಡೆಯುವುದಕ್ಕೆ ಇಷ್ಟು ಸಾಕಲ್ಲವೇ?
  • ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್) ಶತಕ ಬಾರಿಸಿದ ಮೊಟ್ಟಮೊದಲ ಭಾರತೀಯ ಆಟಗಾರನೀತ. ಏಕದಿನ ಕ್ರಿಕೆಟ್​ನಲ್ಲೂ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಅಜೇಯ ಶತಕ ಬಾರಿಸಿ 330 ರನ್​ಗಳ ಬೃಹತ್ ಗುರಿ ಯಶಸ್ವಿಯಾಗಿ ಬೆನ್ನಟ್ಟಿದ ಪ್ರಚಂಡ ಆಟಗಾರ. ಭಾರತ ತಂಡದಲ್ಲಿ ನಿಯಮಿತ ಅವಕಾಶ ನಿರೀಕ್ಷಿಸಲು ಈ ಸಾಧನೆಗಳು ಅರ್ಹವಲ್ಲವೇ?
  • ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್ ಮುಂತಾದವರು ಮೇಲ್ಪಂಕ್ತಿಗೇರಿಸಿದ ಕರ್ನಾಟಕದ ಕಲಾತ್ಮಕ ಬ್ಯಾಟಿಂಗ್ ಪರಂಪರೆಯ ಉತ್ತರಾಧಿಕಾರಿ ಈತ. ತಾಳ್ಮೆಗೂ ಸೈ, ರಭಸಕ್ಕೂ ಸೈ. ಎಂಥ ಸಂದರ್ಭಕ್ಕೂ ಹೊಂದುವಂಥ ವೈವಿಧ್ಯಮಯ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಹೊಂದಿರುವ ಬ್ಯಾಟರ್. ಭಾರತ ತಂಡದಲ್ಲಿ ಸದ್ಯ ಖಾಯಂ ಎಂದು ಭಾವಿಸಬಹುದಾದ (?) ಪ್ರಮುಖ ಸದಸ್ಯ.

***

ಅದೃಷ್ಟ ಎನ್ನುವುದು ಎಲ್ಲರ ಪಾಲಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರು ಬ್ರಹ್ಮಾಂಡವನ್ನು ಬುಡಮೇಲು ಮಾಡಿದರೂ ಪ್ರಯತ್ನ ಸಾಕಾಗುವುದಿಲ್ಲ. ಕೆಲವರಿಗೆ ಕಡ್ಡಿ ಎತ್ತಿಟ್ಟಷ್ಟೇ ಸುಲಭವಾಗಿ ಬಯಸಿದ್ದು ಮನೆ ಬಾಗಿಲಿಗೆ ಬಂದಿರುತ್ತದೆ. ಅದೇನು ಸುಕೃತವೋ? ಜನ್ಮಾಂತರದ ಪುಣ್ಯವೋ? ಯೋಗವೋ? ಒಟ್ಟಿನಲ್ಲಿ ಅದನ್ನೇ ಅದೃಷ್ಟ ಅನ್ನುವುದು. ಕೈಗಳ ಐದು ಬೆರಳುಗಳೇ ಒಂದೇ ಸಮಾನವಾಗಿ ಇರುವುದಿಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದರೂ ಅಣ್ಣತಮ್ಮಂದಿರ ಸ್ವಭಾವ ಒಂದೇ ರೀತಿ ಇರುವುದಿಲ್ಲ. ಹಾಗಿರುವಾಗ ಒಂದು ತಂಡದ ಪರ ಒಟ್ಟಿಗೆ ಆಡಿದ ನಾಲ್ಕು ಆಟಗಾರರ ಅದೃಷ್ಟ ಒಂದೇ ರೀತಿ ಇರಲು ಸಾಧ್ಯವೇ? ಅವರವರ ಯೋಗ, ಅವರವರ ಪ್ರಾಪ್ತಿ ಅವರವರಿಗೆ.

***

ಕರುಣ್ ನಾಯರ್, ಮಯಾಂಕ್ ಅಗರ್​ವಾಲ್, ಮನೀಷ್ ಪಾಂಡೆ, ಕೆಎಲ್ ರಾಹುಲ್ ಕಳೆದ ಎರಡು ದಶಕಗಳಿಂದ ಕರ್ನಾಟಕ ಕ್ರಿಕೆಟ್ ಹಿರಿಮೆಯನ್ನು ವಿಸ್ತರಿಸಿರುವ ನಾಲ್ಕು ವಜ್ರಗಳು. ಕರ್ನಾಟಕ ತಂಡ 2013-14 ಮತ್ತು 2014-15ರಲ್ಲಿ ಸತತ ಎರಡು ವರ್ಷ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಟ್ರೋಫಿ ಗೆದ್ದಾಗ, 2019-20ರಲ್ಲಿ ವಿಜಯ್ ಹಜಾರೆ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಾಗ ನಾಲ್ಕೂ ಜನ ತಂಡದಲ್ಲಿದ್ದವರು. ನಾಲ್ಕೂ ಜನ ಕರ್ನಾಟಕದ ನಾಯಕತ್ವ ನಿಭಾಯಿಸಿದವರು. ನಾಲ್ಕೂ ಜನ ಭಾರತ ತಂಡದ ಪರ ಆಡಿದವರು. ನಾಲ್ವರೂ ಐಪಿಎಲ್​ನಲ್ಲಿ ಬೇರೆಬೇರೆ ತಂಡಗಳ ಪರ ಏಳುಬೀಳಿನ ನೋವು-ನಗೆ ಕಂಡವರು, ಉಂಡವರು. ಜೂನಿಯರ್ ಕ್ರಿಕೆಟ್​ನಿಂದ ಒಬ್ಬರಿಗೊಬ್ಬರು ಪರಿಚಿತರು. ಹೋಗೋ-ಬಾರೋ ಸ್ನೇಹಿತರು. ಹೆಚ್ಚುಕಡಿಮೆ ಒಟ್ಟೊಟ್ಟಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟವರು. ವಯಸ್ಸಿನಲ್ಲಿ ಒಂದೆರಡು ವರ್ಷ ಅಂತರ ಹೊಂದಿದವರು.

35ರ ಮನೀಷ್ ನಾಲ್ವರ ಪೈಕಿ ಹಿರಿಯರಾದರೆ, 32ರ ರಾಹುಲ್ ಕಿರಿಯರು. ಆದರೆ, ಈ ನಾಲ್ವರ ಅದೃಷ್ಟ ಅಜಗಜಾಂತರ. ಅದೃಷ್ಟ ಮತ್ತು ಅವಕಾಶ ನಿರಂತರವಾಗಿ ಜತೆಯಲ್ಲಿದ್ದಿದ್ದರೆ ಈ ನಾಲ್ವರೂ ಇಷ್ಟರಲ್ಲಿ ದಿಗ್ಗಜರ ಎತ್ತರಕ್ಕೇರಿರಬೇಕಿತ್ತು. ಆದರೆ, ನಾನೇರಿದೆತ್ತರಕೆ ನೀನೇರಬಲ್ಲೆಯಾ ಎಂದು ಸವಾಲು ಹಾಕುವ ವಿಧಿಯಾಟಕ್ಕೆ ಸಿಲುಕಿ ನಾಲ್ಕು ವಜ್ರಗಳ ವೃತ್ತಿಜೀವನವೂ ನಾಲ್ಕು ಕಥಾನಕ. ಅದರಲ್ಲಿ ಕಥೆಯಿದೆ, ವ್ಯಥೆಯಿದೆ, ದೂರದಿಂದ ನೋಡುವವರಿಗೆ ಜೀವನಪಾಠವಿದೆ.

ಕರುಣಾ‘ಜನಕ’: 2013-14ರ ಋತುವಿನಲ್ಲಿ ಕರ್ನಾಟಕದ ಪರ ಪದಾರ್ಪಣೆ ಮಾಡಿದ ಕರುಣ್ ಕಲಾಧರನ್ ನಾಯರ್ ಸಿಕ್ಕ ಅವಕಾಶವನ್ನೇ ಎರಡೂ ಕೈಗಳಿಂದ ಬಾಚಿಕೊಂಡವರು. ಕ್ವಾರ್ಟರ್​ಫೈನಲ್, ಸೆಮಿಫೈನಲ್ ಸೇರಿದಂತೆ ಸತತ ಮೂರು ಪಂದ್ಯಗಳಲ್ಲಿ ಶತಕ ಸಿಡಿಸಿದ ಕರುಣ್, ಫೈನಲ್​ನಲ್ಲೂ ಗೆಲುವಿನ ಸಿಕ್ಸರ್ ಬಾರಿಸಿ 15 ವರ್ಷ ಅಂತರದ ಬಳಿಕ ಕರ್ನಾಟಕ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಅದರ ಮಾರನೇ ವರ್ಷ ಕರ್ನಾಟಕ ಸತತ 2ನೇ ವರ್ಷ ಟ್ರೋಫಿ ಗೆದ್ದಾಗಲೂ ಕರುಣ್ ಯೋಗದಾನ ದೊಡ್ಡದಿತ್ತು. ಫೈನಲ್​ನಲ್ಲಿ ತಮಿಳುನಾಡು ವಿರುದ್ಧ ಅವರು ಸಿಡಿಸಿದ ತ್ರಿಶತಕವಂತೂ ಐತಿಹಾಸಿಕವಾಗಿತ್ತು. ಇದಾದ ಬೆನ್ನಲ್ಲೇ 2016ರಲ್ಲಿ ಭಾರತ ತಂಡಕ್ಕೂ ಕರೆ ಪಡೆದ ಅವರು ಕೇವಲ 3ನೇ ಟೆಸ್ಟ್​ನಲ್ಲೇ ಇಂಗ್ಲೆಂಡ್ ವಿರುದ್ಧ ಚೆನ್ನೈ ಪಂದ್ಯದಲ್ಲಿ ಐತಿಹಾಸಿಕ ತ್ರಿಶತಕ (ಅಜೇಯ 303 ರನ್) ಬಾರಿಸಿದ್ದರು. ತನ್ಮೂಲಕ ಕರುಣ್, ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ತ್ರಿಶತಕ ಬಾರಿಸಿದ ಕೇವಲ 2ನೇ ಭಾರತೀಯರೆನಿಸಿದ್ದರು.

ಚೊಚ್ಚಲ ಶತಕವನ್ನೇ ತ್ರಿಶತಕವಾಗಿ ಪರಿವರ್ತಿಸಿದ ಮೊದಲ ಭಾರತೀಯರೆನಿಸಿದ್ದರು. ಆ ಪಂದ್ಯದಲ್ಲಿ ಗೆಲುವಿನ ರೂವಾರಿಯಾಗಿ ಪಂದ್ಯ ಶ್ರೇಷ್ಠರೂ ಆಗಿದ್ದರು. ಅಷ್ಟಾಗಿಯೂ ಭಾರತ ಮುಂದಿನ ಟೆಸ್ಟ್ ಪಂದ್ಯ ಆಡಿದಾಗ ಕರುಣ್ ತಂಡದಲ್ಲಿರಲಿಲ್ಲ. ಅಜಿಂಕ್ಯ ರಹಾನೆ ಸಲುವಾಗಿ ಅವರನ್ನು ಕೈಬಿಡಲಾಗಿತ್ತು. ತ್ರಿಶತಕ ಬಾರಿಸಿದ ಆಟಗಾರನೊಬ್ಬನಿಗೆ ತಂಡದ ಯಾವುದೇ ಕ್ರಮಾಂಕದಲ್ಲಿ ಸ್ಥಾನ ಕಲ್ಪಿಸಲು ವಿಫಲವಾದ ದುರಂತ ಕಥೆ ವಿಶ್ವದ ಯಾವುದೇ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಸಿಗುವುದಿಲ್ಲ. ಆದರೆ, ಕರುಣ್​ರ ಶ್ರೇಷ್ಠ ಆಟದ ದಿನಗಳು ದುರದೃಷ್ಟದಿಂದ ಕಣ್ಣೀರಿನಲ್ಲಿ ಕರಗಿ ಹೋದವು. ಕೆಲವು ಆಟಗಾರರಿಗೆ ಮುಂಬೈನವನು, ಬಿಸಿಸಿಐ ಪ್ರಭಾವಿಗಳಿಗೆ ಹತ್ತಿರದವನು, ಐಪಿಎಲ್ ಸೆಲೆಬ್ರಿಟಿಗಳಿಗೆ ಬೇಕಾದವನು ಎಂಬಿತ್ಯಾದಿ ಕಾರಣಗಳಿಗೆ ಅರ್ಹತೆ ಇಲ್ಲದಿದ್ದರೂ, ಪದೇಪದೇ ವಿಫಲವಾಗುತ್ತಿದ್ದರೂ, ಭಾರತ ತಂಡದಲ್ಲಿ ಸತತವಾಗಿ 10-20 ಪಂದ್ಯಗಳಲ್ಲಿ ಅವಕಾಶ ಸಿಗುತ್ತಿರುತ್ತದೆ. ಆದರೆ, ಕರುಣ್ ಎಂಬ ಪ್ರತಿಭಾವಂತನಿಗೆ ಬೆರಳೆಣಿಕೆಯಷ್ಟು ಅವಕಾಶ ಕೊಡಿಸಲು ಯಾರೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎನ್ನುವುದೇ ದುರಂತ. ಬೆಳೆಯುವ ಪೈರನ್ನು ಚಿವುಟುವುದೆಂದರೆ ಇದೇ ರೀತಿ.

ಆದರೆ, ನಿಜವಾದ ಹೋರಾಟಗಾರ ಎಂಥ ಸನ್ನಿವೇಶದಲ್ಲೂ ಹತಾಶೆಯಿಂದ ಕೈಚೆಲ್ಲುವುದಿಲ್ಲ. ಕರುಣ್ ಜೀವನದಲ್ಲಿ ಅನೇಕ ಬಾರಿ ದುರಂತದ ಅಂಚಿಗೆ ಸಿಲುಕಿ ಗೆದ್ದುಬಂದವರು. ಒಮ್ಮೆ ಕೇರಳದಲ್ಲಿ ದೇವಳದ ಉತ್ಸವದಲ್ಲಿ ಪಾಲ್ಗೊಂಡಿದ್ದಾಗ ಇವರು ಕುಳಿತಿದ್ದ ದೋಣಿ ಮಗುಚಿತ್ತು. ದೋಣಿಯಲ್ಲಿದ್ದ ಕೆಲವರು ಮುಳುಗಿ ನೀರುಪಾಲಾಗಿದ್ದರು. ಕರುಣ್​ಗೆ ಈಜು ಗೊತ್ತಿರದಿದ್ದರೂ, ಆ ದಿನ ಬಚಾವಾಗಿದ್ದರು. ಕ್ರಿಕೆಟ್​ನಲ್ಲೂ ಅಷ್ಟೇ. ಭಾರತ ತಂಡದಲ್ಲಿ ಅವಕಾಶ ಸಿಗದಿದ್ದರೂ, ಕರ್ನಾಟಕ ತಂಡದಲ್ಲಿ ಅವಕಾಶ ಕಳೆದುಕೊಂಡರೂ ಧೃತಿಗೆಡದ ಅವರು ವಿದರ್ಭಕ್ಕೆ ವಲಸೆ ಹೋದರು. ವಿದರ್ಭ ತಂಡದ ನಾಯಕರಾಗಿ ಈ ಸಾಲಿನ ರಣಜಿ ಟ್ರೋಫಿ ಕಿರೀಟ ಗೆದ್ದುಕೊಟ್ಟ ಕರುಣ್, ಬ್ಯಾಟರ್ ಆಗಿ ಉತ್ತುಂಗ ಫಾಮ್ ರ್ ಪ್ರದರ್ಶಿಸಿದರು.

ಫೈನಲ್​ನಲ್ಲಿ ಕೇರಳ ವಿರುದ್ಧ ಅಜೇಯ 132 ರನ್ ಸೇರಿದಂತೆ ಈ ರಣಜಿ ಋತುವಿನಲ್ಲಿ 4 ಶತಕ ಬಾರಿಸಿರುವ ಕರುಣ್, 57 ಸರಾಸರಿಯಲ್ಲಿ 860 ರನ್ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಶತಕ, 389.50 ಸರಾಸರಿ ಮತ್ತು 779 ರನ್ ಗಳಿಸಿದ್ದು ಅತಿಮಾನುಷ ಎನ್ನಬಹುದಾದ ಸಾಧನೆ. ಅದರಲ್ಲೂ ಅವರು ಸತತ ಪಂದ್ಯಗಳಲ್ಲಿ ಒಮ್ಮೆಯೂ ಔಟಾಗದೆ 542 ರನ್ ಗಳಿಸಿದ್ದು ವಿಶ್ವದಾಖಲೆ. ಭಾರತ ತಂಡದಲ್ಲಿ ಸ್ಥಾನಕ್ಕಾಗಿ ಓರ್ವ ಆಟಗಾರ ಇದಕ್ಕಿಂತ ಹೆಚ್ಚೇನು ಪ್ರಯತ್ನ ಪಡಲು ಸಾಧ್ಯ? ಕರುಣ್ ತಮ್ಮ ಪ್ರಯತ್ನ ಮಾಡಿಯಾಗಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವಕಾಶ ಕೈತಪ್ಪದಂತೆ ಅದೃಷ್ಟ ಅವರ ಕೈಹಿಡಿಯಬೇಕಿದೆ.

ಮಾಯಕದ ಕೈಗೊಂಬೆ ಮಯಾಂಕ್: ಹಾಲಿ ಋತುವಿನಲ್ಲಿ ಕರ್ನಾಟಕ ತಂಡದ ನಾಯಕರಾಗಿ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಪ್ರಶಸ್ತಿ ಜಯಿಸಿಕೊಟ್ಟ ಮಯಾಂಕ್ ಅಗರ್​ವಾಲ್​ಗೆ ಅದೃಷ್ಟ ಕೈಹಿಡಿದಿದ್ದರೆ, ಈ ಹೊತ್ತಿಗೆ ಭಾರತ ತಂಡದ ಖಾಯಂ ಸದಸ್ಯರಾಗಿರಬಹುದಿತ್ತು. 2018ರಲ್ಲೇ ಭಾರತದ ಪರ ಪದಾರ್ಪಣೆ ಮಾಡಿದ ಮಯಾಂಕ್, ಆಸ್ಟ್ರೇಲಿಯಾ ವಿರುದ್ಧ ಮೆಲ್ಬೊರ್ನ್​ನಲ್ಲಿ ಆಡಿದ ಪ್ರಪ್ರಥಮ ಟೆಸ್ಟ್​ನಲ್ಲೇ 76 ರನ್ ಗಳಿಸಿದ್ದರು. ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಚೊಚ್ಚಲ ಶತಕ ಗಳಿಸಿದ ಅವರು ಆ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದರು. ಅದರ ಮುಂದಿನ ಟೆಸ್ಟ್​ನಲ್ಲೂ ಅವರ ಬ್ಯಾಟ್​ನಿಂದ ಶತಕ ಸಿಡಿದಿತ್ತು. ಇದಾದ ಬಳಿಕ ತಮ್ಮ 8ನೇ ಟೆಸ್ಟ್​ನಲ್ಲಿ ಬಾಂಗ್ಲಾ ವಿರುದ್ಧ ತಮ್ಮ 2ನೇ ದ್ವಿಶತಕ ಸಿಡಿಸಿದ ಮಯಾಂಕ್, ಕೇವಲ 12 ಇನಿಂಗ್ಸ್​ಗಳಲ್ಲಿ 2 ಬಾರಿ ದ್ವಿಶತಕದ ಗಡಿದಾಟಿದ ಸಾಧನೆ ಮಾಡಿ, ಡಾನ್ ಬ್ರಾಡ್ಮನ್ ಹೆಸರಲ್ಲಿದ್ದ ಅತಿವೇಗದ ದಾಖಲೆ ಮುರಿದರು.

ಭಾರತದ ಪರ ಟೆಸ್ಟ್, ಏಕದಿನ, ಟಿ20 ಮೂರೂ ಮಾದರಿಗಳಲ್ಲಿ ಅಲ್ಲೊಂದು ಇಲ್ಲೊಂದು ಅವಕಾಶ ಪಡೆದರೂ, ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್​ಗೆ ದೊರೆತಷ್ಟು ಅವಕಾಶ ಮಯಾಂಕ್​ಗೆ ಯಾವತ್ತೂ ದೊರೆಯಲಿಲ್ಲ. ಅವಕಾಶಗಳು ಕ್ಷೀಣವಾದಂತೆ ಮಯಾಂಕ್​ರ ಟೆಸ್ಟ್ ಸಾಧನೆಗಳೂ ಜನರ ನೆನಪಲ್ಲಿ ಉಳಿಯಲಿಲ್ಲ. ಸದ್ಯ ಅವರು ಕರ್ನಾಟಕ ತಂಡದ ನಾಯಕರಾಗಿದ್ದರೂ, ಈ ವರ್ಷ ಐಪಿಎಲ್​ನಲ್ಲಿ ಯಾವ ತಂಡದಲ್ಲೂ ಅವರು ಸ್ಥಾನ ಪಡೆದಿಲ್ಲ. ಭಾರತೀಯ ಕ್ರಿಕೆಟ್​ನಲ್ಲಿ ಅವಕಾಶ ನೀಡುವ ವಿಚಾರ ಬಂದಾಗ ಉತ್ತರ ಭಾರತದ ಶುಭಮಾನ್ ಗಿಲ್, ಜೈಸ್ವಾಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಸುರೇಶ್ ರೈನಾಗೆ ದೊರೆತಷ್ಟು ಅವಕಾಶ ದಕ್ಷಿಣ ಭಾರತದ ಅಂಬಾಟಿ ರಾಯುಡು, ಸಂಜು ಸ್ಯಾಮ್ಸನ್, ಮನೀಶ್ ಪಾಂಡೆಗೆ ಯಾವತ್ತೂ ಸಿಗಲಿಲ್ಲ. ಮಯಾಂಕ್ ಕೂಡ ಅಂಥ ನತದೃಷ್ಟರಲ್ಲೊಬ್ಬರು.

ಪಾಂಡೆ ಎಂಬ ವ್ಯರ್ಥವಾದ ತಾರೆ: ಓರ್ವ ವ್ಯಕ್ತಿ ಗುರಿ ತಲುಪದಂತೆ ತಡೆಯಬೇಕೆಂದರೆ, ಬೇರೇನೂ ಮಾಡುವುದು ಬೇಡ, ಆತ್ಮವಿಶ್ವಾಸ ಕುಗ್ಗಿಸಿದರೆ ಸಾಕು. ಮನೀಷ್ ಪಾಂಡೆ ಕರ್ನಾಟಕ ಕ್ರಿಕೆಟ್ ಕಂಡ ಓರ್ವ ಅದ್ಭುತ ಪ್ರತಿಭೆ. ಸ್ಪೋಟಕ ಬ್ಯಾಟ್ಸ್​ಮನ್, ಪ್ರಚಂಡ ಫೀಲ್ಡರ್. ಫಿಟ್​ನೆಸ್​ನಲ್ಲಿ, ಪ್ರತಿಭೆಯಲ್ಲಿ ವಿರಾಟ್ ಕೊಹ್ಲಿಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದವರು. ಆದರೆ, ಆರಂಭಿಕ ವರ್ಷಗಳಲ್ಲಿ ಕೊಹ್ಲಿಗೆ ಎಂಎಸ್ ಧೋನಿಯ ಬೆಂಬಲ ವರದಾನವಾದರೆ, ಪಾಂಡೆಗೆ ಯಾರೂ ಗಾಡ್​ಫಾದರ್​ಗಳಿರಲಿಲ್ಲ. ಐಪಿಎಲ್​ನಲ್ಲಿ ಅವರು 2009ರಲ್ಲೇ ಶತಕ ಸಿಡಿಸಿದ ಪ್ರಪ್ರಥಮ ಭಾರತೀಯನೆನಿಸಿದರೂ, 2015ರವರೆಗೆ ಅವರಿಗೆ ಭಾರತ ತಂಡದ ಬಾಗಿಲೇ ತೆರೆಯಲಿಲ್ಲ. ಕರ್ನಾಟಕದ ಪರ ರಣಜಿ ಟ್ರೋಫಿಯಲ್ಲಿ 118 ಪಂದ್ಯಗಳಿಂದ 50ಕ್ಕೂ ಹೆಚ್ಚಿನ ಸರಾಸರಿಯಲ್ಲಿ 25 ಶತಕ ಒಳಗೊಂಡ 7973 ರನ್ ಗಳಿಸಿರುವ ತಾಂತ್ರಿಕ ನಿಪುಣ, ದೊಡ್ಡ ಇನಿಂಗ್ಸ್ ಕಟ್ಟುವ ಗಟ್ಟಿಗ ಬ್ಯಾಟ್ಸ್​ಮನ್​ಗೆ ಭಾರತದ ಪರ ಒಂದೇ ಒಂದು ಟೆಸ್ಟ್ ಆಡುವ ಅವಕಾಶವೂ ದೊರೆಯಲಿಲ್ಲ.

2013-14, 2014-15ರಲ್ಲಿ ಕರ್ನಾಟಕ ಸತತ ಎರಡು ವರ್ಷ ರಣಜಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಟ್ರೋಫಿ ಗೆದ್ದು ಡಬಲ್ ಟ್ರಿಬಲ್ ಸಾಧನೆ ಮಾಡುವಲ್ಲಿ ಮನೀಷ್ ಪಾಂಡೆ ಪಾತ್ರ ಪ್ರಮುಖವಾಗಿತ್ತು. 2014ರಲ್ಲಿ ಕೋಲ್ಕತ ನೈಟ್​ರೈಡರ್ಸ್ ಐಪಿಎಲ್ ಟ್ರೋಫಿ ಗೆದ್ದಾಗ ಪಾಂಡೆ ಫೈನಲ್​ನಲ್ಲಿ 50 ಎಸೆತಗಳಲ್ಲಿ 94 ರನ್ ಬಾರಿಸಿ ಗೆಲುವಿನ ರೂವಾರಿಯಾಗಿದ್ದರು. ಪಂದ್ಯಶ್ರೇಷ್ಠ ಗೌರವವೂ ಅವರಿಗೆ ಒಲಿದಿತ್ತು. 2024ರ ಕೆಕೆಆರ್ ಐಪಿಎಲ್ ಗೆಲುವಿನಲ್ಲೂ ಪಾಂಡೆ ಕೊಡುಗೆ ಮಹತ್ವದ್ದಿದೆ. ಆದರೆ, ಭಾರತ ತಂಡದಲ್ಲಿ ಅವಕಾಶದ ವಿಷಯ ಬಂದಾಗ ಈ ಯಾವ ಸಾಧನೆಯೂ ಅವರ ನೆರವಿಗೆ ನಿಲ್ಲಲಿಲ್ಲ. ಭಾರತ ತಂಡದಲ್ಲಿ ಅನೇಕ ಆಟಗಾರರಿಗೆ ಯಶಸ್ವಿಯಾಗಲೆಂದೇ ಹತ್ತಾರು ಅವಕಾಶ ನೀಡಿದರೆ, ಪಾಂಡೆ ಒಂದೆರಡು ಅವಕಾಶಗಳಲ್ಲಿ ವಿಫಲರಾಗುತ್ತಿದ್ದಂತೆಯೇ ಕಿತ್ತೆಸೆಯಲಾಯಿತು. ಇನ್ನೇನು 36ನೇ ವರ್ಷಕ್ಕೆ ಸಮೀಪದಲ್ಲಿರುವ ಪಾಂಡೆ ಸದ್ಯ ಕರ್ನಾಟಕ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದು, ಈ ವರ್ಷದ ಐಪಿಎಲ್ ಆಟಗಾರನಾಗಿ ಅವರ ವೃತ್ತಿಭವಿಷ್ಯ ನಿರ್ಧರಿಸಲಿದೆ. ಒಟ್ಟಿನಲ್ಲಿ ಅಪಾರ ಪ್ರತಿಭೆ ಇದ್ದರೂ ದೊಡ್ಡ ಮಟ್ಟದ್ದೇನೂ ಸಾಧಿಸಲಾಗದ ನತದೃಷ್ಟ ಆಟಗಾರನಾಗಿ ಪಾಂಡೆ ಉಳಿದುಹೋಗಲಿದ್ದಾರೆ.

ರಾಹುಲ್ ಎಂಬ ಸೂಪರ್ ಪ್ಯಾಕೇಜ್: ಮೊದಲ ಮೂರು ವಜ್ರಗಳಿಗೆ ಹೋಲಿಸಿದರೆ, ಕೆ.ಎಲ್. ರಾಹುಲ್ ಸ್ವಲ್ಪ ಮಟ್ಟಿಗೆ ಭಾಗ್ಯಶಾಲಿ. ಏಕೆಂದರೆ, ಭಾರತ ತಂಡದಲ್ಲಿ ಅವರಿಗೆ ಕರುಣ್, ಪಾಂಡೆ, ಮಯಾಂಕ್​ಗಿಂತ ಹೆಚ್ಚಿನ ಅವಕಾಶ ಸಿಗುತ್ತಿದೆ. ರಾಹುಲ್ ದ್ರಾವಿಡ್​ರ ಅರ್ಧ ಹೆಸರು, ಅವರ ತಾಂತ್ರಿಕ ಆಟದ ನೈಪುಣ್ಯವನ್ನು ಪ್ರತಿಫಲಿಸುವ ಕೆ.ಎಲ್, ಇತ್ತೀಚೆಗೆ ಭಾರತದ ಚಾಂಪಿಯನ್ಸ್ ಟ್ರೋಫಿ ದಿಗ್ವಿಜಯದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. 2013-14ನೇ ಋತುವಿನಲ್ಲಿ 1033 ರನ್, 3 ಶತಕ, 3 ತೊಂಭತ್ತು ಪ್ಲಸ್ ರನ್ ಸಾಧನೆ ಮಾಡಿದ್ದ ರಾಹುಲ್ ಕರ್ನಾಟಕದ ರಣಜಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್​ನಲ್ಲಿ ಎರಡು ತಂಡಗಳ ನಾಯಕರಾಗಿ, ಭಾರತ ತಂಡದಲ್ಲಿ ಉಪನಾಯಕರೂ ಆಗಿದ್ದ ರಾಹುಲ್, ಗಾಯದ ಸಮಸ್ಯೆಯಿಂದ ಹಲವು ಪ್ರಮುಖ ಸರಣಿ ತಪ್ಪಿಸಿಕೊಂಡರು. ಸಂಭಾವ್ಯ ನಾಯಕತ್ವದ ರೇಸ್​ನಿಂದಲೂ ಹೊರಗುಳಿದರು. ಆದರೆ, ಈಗಲೂ ಮೂರೂ ಮಾದರಿ ಕ್ರಿಕೆಟ್​ನಲ್ಲಿ ಭಾರತದ ಪರ ಅವರ ಸ್ಥಾನ ಹೆಚ್ಚು ಕಡಿಮೆ ಖಾಯಂ ಆಗಿದೆ. ಆರಂಭಿಕನಾಗಿ, ಮಧ್ಯಮ ಕ್ರಮಾಂಕದಲ್ಲಿ, ಫಿನಿಶರ್ ಆಗಿ, ಹೊಡೆಬಡಿ, ತಾಳ್ಮೆ ಯಾವ ಆಟಕ್ಕೂ ಸೈ ಎನ್ನುವ ರಾಹುಲ್, ವಿಕೆಟ್ಕೀಪರ್ ಆಗಿಯೂ ಮೌಲ್ಯ ವರ್ಧಿಸಿಕೊಂಡಿದ್ದಾರೆ.

ಇನ್ನೇನು ಶನಿವಾರ ಐಪಿಎಲ್ ಕ್ರಿಕೆಟ್ ಧಮಾಕಾ ಶುರುವಾಗುತ್ತಿದೆ. ಕರುಣ್ ನಾಯರ್ ಮತ್ತು ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದರೆ, ಮನೀಷ್ ಪಾಂಡೆ ಕೆಕೆಆರ್ ಪರ ಆಡಲಿದ್ದಾರೆ. ಮಯಾಂಕ್ ಅಗರ್​ವಾಲ್ ಯಾವ ತಂಡದಲ್ಲೂ ಇಲ್ಲ. ಪ್ರಚಂಡ ಪ್ರತಿಭೆ, ಸಾಮರ್ಥ್ಯ, ಅರ್ಹತೆ, ಆಟಗಾರಿಕೆ ಮೂಲಕ ದೊರೆತ ಅವಕಾಶಗಳಲ್ಲಿ ಕ್ರಿಕೆಟ್​ಗೆ, ಆಡಿದ ತಂಡಗಳಿಗೆ ನ್ಯಾಯ ಸಲ್ಲಿಸಿರುವ ಈ ನಾಲ್ವರಿಗೆ ಮರೆತುಹೋಗುವ ಮುನ್ನ ಮರೆಯಲಾಗದ ಸಾಧನೆ ದಾಖಲಿಸಲು ಅದೃಷ್ಟವೂ ಸ್ವಲ್ಪ ಕೈಹಿಡಿಯಲಿ ಎಂಬುದು ಸದಾಶಯ. ಏಕೆಂದರೆ, ಮನುಷ್ಯ ಪ್ರಯತ್ನ ಎಷ್ಟೇ ಇದ್ದರೂ, ವಿಧಿಲಿಖಿತವೇ ಅಂತಿಮ. ಗ್ರಹಗತಿಗಳು ಕೈಕೊಟ್ಟಿದ್ದರಿಂದ ಅಂಥ ಅದ್ಭುತ ಆಟವಾಡಿಯೂ 2023ರ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಭಾರತ ಸೋತು ಹೋಯಿತು. ಯೋಗ ಕೈಹಿಡಿದಿದ್ದರಿಂದ ಕಳೆದ ವರ್ಷ 2024ರ ಟಿ20 ವಿಶ್ವಕಪ್, ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಟ್ಟಿದ್ದೆಲ್ಲ ಚಿನ್ನವಾಯಿತು. ಸ್ವಲ್ಪ ಅದೃಷ್ಟ ಕೈಹಿಡಿದರೆ ವಜ್ರಗಳ ಹೊಳಪು ಜಗತ್ತನ್ನು ಬೆಳಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net