ಆಶ್ಚರ್ಯಕರವಾದ ಆತ್ಮತತ್ವದ ಆವಿರ್ಭಾವವೂ ಆಶ್ಚರ್ಯಕರವೇ

Enlightenment
Published on
ಹೊಂಬೆಳಕು
ಜಗತ್ತು ಕಂಡು ಕೇಳರಿಯದ ಅತ್ಯುನ್ನತ ಬೌದ್ಧಿಕ ಮತ್ತು ಆಧ್ಯಾತ್ಮಿಕ ಆವಿಷ್ಕಾರಗಳು ಉದ್ಭವಿಸಿದ್ದು ಈ ನಮ್ಮ ಹೆಮ್ಮೆಯ ನಾಡಿನಲ್ಲಿ. ಇದರ ಪರಾಕಾಷ್ಠೆಯನ್ನು ನಾವು ನೋಡುವುದು ‘ಆತ್ಮ’ನನ್ನು ಹೇಗೆ ಕಂಡುಹಿಡಿದರು ಎನ್ನುವಲ್ಲಿ. ಯಾವುದಾದರೂ ಒಂದರ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕಾದರೆ ಅದನ್ನು ಇಂದ್ರಿಯಗಳು ಸಂಶಯಕ್ಕೆಡೆಯಿಲ್ಲದಂತೆ ಗ್ರಹಿಸುವುದೇ ಆಧಾರ. ಆದರೆ ಇಂದ್ರಿಯ ಗ್ರಹಣಕ್ಕೆ ಸಿಗದ ಎಷ್ಟೋ ವಿಚಾರಗಳನ್ನು ‘ತರ್ಕ’ ತಿಳಿಸಿಕೊಡುತ್ತದೆ. ಉದಾಹರಣೆಗೆ ಕಾಣದ ಬೆಂಕಿಯು ಕಾಣುತ್ತಿರುವ ಹೊಗೆಯಿಂದ ನಿರ್ಷRಸಲ್ಪಡುತ್ತದೆ. ಆದರೆ ಅನಂತವನ್ನು ಕುರಿತ ಅನುಭವ, ಅತೀಂದ್ರಿಯ ಸ್ಥಿತಿ ಅಥವಾ ಪ್ರಜ್ಞೆಯ ತುರೀಯಾವಸ್ಥೆಯಲ್ಲಿಯೇ ಸಾಧ್ಯ! ಆದರೆ ತುರೀಯದಲ್ಲೇ ಸಾಧ್ಯವಿರುವ ಅನುಭವವನ್ನು ‘ತರ್ಕ’ ಸೂಚಿಸಬಲ್ಲದು. (ಐಠಿ ್ಚ್ಞ ಛಜ್ಟಿಛ್ಚಿಠಿ) ‘ತರ್ಕ ಎಲ್ಲಿಯವರೆಗೆ ನಮ್ಮನ್ನು ಕೊಂಡೊಯ್ಯಬಲ್ಲದೋ ಅಲ್ಲಿಯವರೆಗೆ ಅದನ್ನು ಅನುಸರಿಸಲೇಬೇಕು’ ಎನ್ನುತ್ತದೆ ವೇದಾಂತ. ‘ಅರ್ತಾಕವಾದ ವಿಷಯಗಳನ್ನು ನಿರ್ಭಿಡೆಯಿಂದ ಭಾರತೀಯರು ನಿರಾಕರಿಸಿದರು’ ಎಂದು ಈ ದೇಶದ ರ್ತಾಕ ಪ್ರಖರತೆಯನ್ನು ಕಂಡು ಬೆರಗಾದ ಪೊ›. ಮ್ಯಾಕ್ಸ್​ಮುಲ್ಲರ್ ಉದ್ಗರಿಸುತ್ತಾನೆ. ಆಗತಾನೇ ಡಾರ್ವಿನ್ನನ ವಿಕಾಸವಾದದಿಂದಾಗಿ ‘ಧರ್ಮ’ ಅಪ್ರಸ್ತುತ, ಅದೊಂದು ಮೂಢನಂಬಿಕೆ ಎಂಬ ಭಾವನೆ ಅದಾಗಲೇ ಸಾಕಷ್ಟು ಹರಡಲು ಪ್ರಾರಂಭಿಸಿದ್ದ ದಿನಗಳಲ್ಲಿ ಸ್ವಾಮಿ ವಿವೇಕಾನಂದರು ಆತ್ಮತತ್ವವನ್ನು ಕಂಡುಹಿಡಿದ ಭಾರತೀಯ ಋಷಿಗಳು ಯಾವ ಮಟ್ಟದ ರ್ತಾಕ ಹರಿತ ಮತ್ತು ವಿಶ್ಲೇಷಣಾಸಾಮರ್ಥ್ಯಗಳನ್ನು ಹೊಂದಿದ್ದರು ಎಂಬುದನ್ನು ಲಂಡನ್ನಿನಲ್ಲಿ ನೀಡಿದ ತಮ್ಮ 2ನೇ ಉಪನ್ಯಾಸದಲ್ಲೇ ಮನಗಾಣಿಸಿದರು. ಮೊದಲ ಉಪನ್ಯಾಸವಿದ್ದುದ್ದೇ ‘ಧರ್ಮ ಮತ್ತು ಅದರ ಅವಶ್ಯಕತೆ’ ಎಂಬುದರ ಬಗ್ಗೆ. ಹಂತಹಂತವಾಗಿ ಅವರು ಮಂಡಿಸುವ ಈ ವಾದ ಸಾರ್ವಕಾಲಿಕ ಸ್ತುತ್ಯಾರ್ಹ. ಅದರ ಒಂದು ಪ್ರತಿಫಲನ ಈ ಕೆಳಗಿನ ವಿವರಣೆ.

‘‘ವಸ್ತುಕಣಗಳ ಸಂಘಾತವಾದ ದೇಹವು, ನಾವು ಯಾವುದನ್ನು ಆತ್ಮ, ಎಂದು ಕರೆಯುತ್ತೇವೆಯೋ ಆ ಶಕ್ತಿಯ ಅಭಿವ್ಯಕ್ತಿಗೆ ಕಾರಣವೇ ಅಥವಾ ಆತ್ಮವೇ ಈ ದೇಹದಂತೆ ವ್ಯಕ್ತವಾಗುವುದಕ್ಕೆ ಕಾರಣವೇ, ಎಂಬ ವಿಷಯವಾಗಿ ಗಹನವಾದ ಚರ್ಚೆ ನಡೆಯುತ್ತಿದೆ. ಜಗತ್ತಿನ ಧರ್ಮಗಳೇನೋ, ಭಾವನೆ ಎಂಬ ಶಕ್ತಿಯು ದೇಹಕ್ಕೆ ಕಾರಣ, ದೇಹ ಆಲೋಚನೆಗೆ(ಆತ್ಮ) ಕಾರಣವಲ್ಲ ಎಂದು ಹೇಳುವುವು. ಆಧುನಿಕರಲ್ಲಿ ಮತ್ತೊಂದು ಪಕ್ಷದವರು ಇರುವರು. ಅವರು ನಾವು ಯಾವುದನ್ನು ಆಲೋಚನೆ ಎನ್ನುವೆವೊ ಅದು ದೇಹವೆಂಬ ಯಂತ್ರದ ಭಾಗಗಳು ಒಟ್ಟು ಕಲೆತಾಗ ಆಗುವ ಒಂದು ಪರಿಣಾಮ ಎನ್ನುವರು. ಆತ್ಮ, ಆಲೋಚನೆಯ ಮೊತ್ತ ಅಥವಾ ಅದನ್ನು ಯಾವ ಹೆಸರಿಂದಲಾದರೂ ಕರೆಯಿರಿ, ಅದು ಈ ಯಂತ್ರದ ಪರಿಣಾಮ; ಅದು ದೇಹ ಮತ್ತು ಮಿದುಳಿನಲ್ಲಿರುವ ರಸಾಯನ ದ್ರವ್ಯಗಳ ಸಮ್ಮಿಶ್ರಣದಿಂದ ಆದುದು ಎಂಬ ಎರಡನೆಯ ಪಕ್ಷವನ್ನು ಒಪ್ಪಿಕೊಂಡರೆ, ಪ್ರಶ್ನೆಗೆ ಉತ್ತರವೇ ಸಿಕ್ಕುವುದಿಲ್ಲ. ದೇಹವನ್ನು ಯಾವುದು ಮಾಡುವುದು? ಯಾವ ಶಕ್ತಿಯು ಅಣುಗಳನ್ನು ದೇಹದ ರೂಪಕ್ಕೆ ಜೋಡಿಸುವುದು? ಹೊರಗಿರುವ ವಸ್ತುವಿನಿಂದ ಸಾರವನ್ನು ಸ್ವೀಕರಿಸಿ ನನ್ನ ದೇಹವನ್ನು ಒಂದು ರೀತಿ, ಮತ್ತೊಂದು ದೇಹವನ್ನು ಇನ್ನೊಂದು ರೀತಿ ರಚಿಸುವಂತಹ ಶಕ್ತಿ ಯಾವುದು? ಅನಂತ ವೈವಿಧ್ಯಕ್ಕೆ ಕಾರಣ ಯಾವುದು? ಆತ್ಮವೆಂಬ ಶಕ್ತಿಯು ದೇಹಕಣಗಳ ಸಂಯೋಗದ ಪರಿಣಾಮವೆನ್ನುವುದು ಕ್ರಮವಿಪರ್ಯಯ ಮಾಡಿದಂತೆ. ಈ ಸಂಘಾತವು ಹೇಗೆ ಆಯಿತು? ಇದಕ್ಕೆ ಶಕ್ತಿ ಎಲ್ಲಿತ್ತು? ಮತ್ತಾವುದೋ ಒಂದು ಶಕ್ತಿ ಈ ಸಂಘಾತಕ್ಕೆ ಕಾರಣ, ಆತ್ಮವು ಅಂತಹ ಸಂಘಾತದಿಂದ ಜನಿಸಿತು ಎನ್ನುವುದು ಮತ್ತು ಕೆಲವು ವಸ್ತುಗಳನ್ನು ಕೂಡಿಸಿದ ಆತ್ಮವೇ ಮತ್ತೊಂದು ವಸ್ತುವಿನ ಮಿಶ್ರಣ ಎನ್ನುವುದು ಸಮಂಜಸವಾದ ಉತ್ತರವಲ್ಲ. ಯಾವ ಸಿದ್ಧಾಂತವು ಎಲ್ಲ ಅಥವಾ ಹೆಚ್ಚಿನ ವಾಸ್ತವಾಂಶಗಳನ್ನು ವಿವರಿಸಬಲ್ಲದೋ ಮತ್ತು ಜಾರಿಯಲ್ಲಿರುವ ಇತರ ಸಿದ್ಧಾಂತಗಳನ್ನು ವಿರೋಧಿಸುವುದಿಲ್ಲವೋ ಅದನ್ನು ಸ್ವೀಕರಿಸಬೇಕು. ಯಾವ ಶಕ್ತಿಯು, ದ್ರವ್ಯವನ್ನು ತೆಗೆದುಕೊಂಡು ದೇಹವನ್ನು ರಚಿಸುವುದೊ, ಅದೇ ಶಕ್ತಿ ಆ ದೇಹದ ಮೂಲಕ ವ್ಯಕ್ತವಾಗುವುದು ಎನ್ನುವುದು ತರ್ಕಬದ್ಧವಾಗಿದೆ. ದೇಹದಿಂದ ವ್ಯಕ್ತವಾದ ಆಲೋಚನಾಶಕ್ತಿಯು, ವಸ್ತುಗಳ ಸಂಘಾತದ ಪರಿಣಾಮವಲ್ಲದೆ, ಬೇರೆ ಇರಲಾರದು ಎನ್ನುವುದಕ್ಕೆ ಅರ್ಥವಿಲ್ಲ. ಶಕ್ತಿಯು ಭೌತವಸ್ತುವಿನಿಂದಲೂ ಜನಿಸುವುದಿಲ್ಲ. ನಾವು ಯಾವುದನ್ನು ಭೌತದ್ರವ್ಯ ಎನ್ನುವೆವೊ ಅದು ಇಲ್ಲವೇ ಇಲ್ಲ ಎಂದು ತೋರಿಸುವುದು ಸುಲಭ. ಇದು ಶಕ್ತಿಯ ಒಂದು ಅವಸ್ಥೆ. ವಸ್ತುವಿನ ಘನತೆ, ದೃಢತೆ ಮುಂತಾದ ಗುಣಗಳು ಚಲನೆಯ ಪ್ರತಿಫಲವೆಂಬುದನ್ನು ತೋರಬಹುದು. ಸುತ್ತುತ್ತಿರುವ ದ್ರವಕ್ಕೆ ವೇಗ ಹೆಚ್ಚಿದರೆ ಅದು ಘನವಸ್ತುವಿನ ಗುಣ ಪಡೆಯುವುದು. ಸುತ್ತುತ್ತಿರುವ ಗಾಳಿ ಘನದಂತೆ ಆಗಿ ಗಟ್ಟಿಯಾದ ಪದಾರ್ಥವನ್ನು ಭೇದಿಸಿಕೊಂಡು ಹೋಗುವುದು; ಅದನ್ನು ಸೀಳುವುದು. ಜೇಡರ ತಂತುವು ಅನಂತ ವೇಗದಿಂದ ಚಲಿಸುವಂತೆ ಮಾಡುವುದು ಸಾಧ್ಯವಾದರೆ ಅದು ಕಬ್ಬಿಣದ ಸರಪಳಿಯಂತೆ ಕಠಿಣವಾಗಬಲ್ಲದು. ಅದು ಓಕ್ ಮರವನ್ನು ಬೇಕಾದರೂ ಕತ್ತರಿಸಬಲ್ಲುದು. ಈ ದೃಷ್ಟಿಯಿಂದ ನೋಡಿದರೆ ನಾವು ಯಾವುದನ್ನು ಭೌತದ್ರವ್ಯವೆನ್ನುವೆವೊ ಅದು ಇಲ್ಲವೆಂದು ಸಾಧಿಸುವುದು ಸುಲಭ. ಆದರೆ ಅದಕ್ಕೆ ವಿರುದ್ಧವಾಗಿ ಶಕ್ತಿಯೇ ಇಲ್ಲವೆಂದು ಸಾಧಿಸಲಾಗುವುದಿಲ್ಲ.

ದೇಹದ ಮೂಲಕ ವ್ಯಕ್ತವಾಗುತ್ತಿರುವ ಶಕ್ತಿ ಯಾವುದು? ಆ ಶಕ್ತಿ ಯಾವುದಾದರೂ ಆಗಿರಲಿ. ಅದು ವಸ್ತು ಕಣಗಳನ್ನು ತೆಗೆದುಕೊಂಡು ಮಾನವನ ದೇಹವೆಂಬ ಆಕಾರವನ್ನು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಿಮ್ಮ, ನಮ್ಮ ದೇಹಗಳನ್ನು ಸೃಷ್ಟಿಸಲಿಕ್ಕೆ ಹೊರಗಿನಿಂದ ಯಾರೂ ಬರುವುದಿಲ್ಲ. ಯಾರೂ ನನಗಾಗಿ ಊಟ ಮಾಡಿದುದನ್ನು ನಾನು ಇದುವರೆಗೆ ಕಂಡಿಲ್ಲ. ನಾನೇ ಆಹಾರವನ್ನು ಜೀರ್ಣಿಸಿಕೊಂಡು ಅದರಿಂದ ರಕ್ತ ಮೂಳೆ ಮುಂತಾದುವನ್ನು ತಯಾರು ಮಾಡಿಕೊಳ್ಳಬೇಕಾಗಿದೆ. ಆ ರಹಸ್ಯ ಶಕ್ತಿ ಯಾವುದು?

ಸದ್ಯದ ವಿಷಯವನ್ನು ಈಗ ಗಮನಿಸೋಣ. ನಮ್ಮ ಮೂಲಕ ಕೆಲಸ ಮಾಡುತ್ತಿರುವ ಶಕ್ತಿ ಯಾವುದು? ಹಿಂದಿನ ಕಾಲದಲ್ಲಿ, ಎಲ್ಲ ಪುರಾತನ ಶಾಸ್ತ್ರಗಳಲ್ಲಿಯೂ, ಈ ದೇಹವನ್ನು ಹೋಲುವ ಶೋಭಾಯಮಾನವಾದ ವಸ್ತುವೊಂದಿದೆ, ಈ ಶರೀರ ಹೋದರೂ ಅದು ಇರುವುದೆಂಬ ಭಾವನೆ ಇತ್ತು ಎಂಬುದು ನಮಗೆ ತಿಳಿದಿದೆ. ಕಾಲಾನಂತರ ಇದಕ್ಕಿಂತ ಉತ್ತಮ ಭಾವನೆ ಬಂದಿತು- ಈ ಕಾಂತಿಯುಕ್ತ ಶರೀರವೇ ಶಕ್ತಿಯಲ್ಲ ಎನ್ನುವುದೇ ಆ ಭಾವನೆ. ಆಕಾರವಿರುವ ವಸ್ತುಗಳೆಲ್ಲ ಕಣಗಳ ಸಂಯೋಗದಿಂದಲೇ ಆಗಬೇಕು. ಅವು ಚಲಿಸಬೇಕಾದರೆ ಮತ್ತೊಂದು ಶಕ್ತಿ ಬೇಕು. ಈ ದೇಹಚಲನೆಗೆ ದೇಹವಲ್ಲದ ಮತ್ತೊಂದು ಶಕ್ತಿ ಬೇಕಾದರೆ, ಅದೇ ನಿಯಮಾನುಸಾರ ಆ ಕಾಂತಿಯುಕ್ತ ಶರೀರದ ಚಲನೆಗೂ ಅದಲ್ಲದ ಮತ್ತೊಂದು ಬೇಕು. ಅದನ್ನೇ ಜೀವಾತ್ಮ ಎಂದು ಸಂಸ್ಕೃತದಲ್ಲಿ ಕರೆದರು. ಆತ್ಮವು ಸೂಕ್ಷ್ಮದೇಹದ ಮೂಲಕ ಸ್ಥೂಲದೇಹದಲ್ಲಿ ಕೆಲಸಮಾಡುವುದು. ಈ ಸೂಕ್ಷ್ಮ ಶರೀರದಲ್ಲೆ ಮನಸ್ಸು ಇರುವುದೆಂದು ಭಾವಿಸಿದ್ದರು. ಆತ್ಮವು ಅದನ್ನೂ ಮೀರಿದೆ. ಅದು ಮನಸ್ಸೂ ಅಲ್ಲ, ಮನಸ್ಸಿನ ಕ್ರಿಯೆಗೆ ಕಾರಣ, ಮನಸ್ಸಿನ ಮೂಲಕ ದೇಹದಲ್ಲಿ ಕೆಲಸ ಮಾಡುವುದು. ನಿಮಗೊಂದು ಆತ್ಮವಿದೆ. ನನಗೊಂದು ಆತ್ಮವಿದೆ. ಪ್ರತಿಯೊಬ್ಬರಿಗೂ ಬೇರೆ ಬೇರೆ ಆತ್ಮಗಳಿವೆ ಮತ್ತು ಸೂಕ್ಷ್ಮಶರೀರಗಳಿವೆ. ಸೂಕ್ಷ್ಮ ಶರೀರಗಳ ಮೂಲಕ ಸ್ಥೂಲ, ಬಾಹ್ಯ ದೇಹಗಳಲ್ಲಿ ಕೆಲಸ ಮಾಡುತ್ತೇವೆ. ಆತ್ಮ ಮತ್ತು ಅದರ ಸ್ವಭಾವದ ವಿಷಯವಾಗಿ ಅನಂತರ ಪ್ರಶ್ನೆ ಹಾಕಿದರು. ದೇಹ, ಮನಸ್ಸು ಅಲ್ಲದ ಆತ್ಮವೆಂದರೇನು? ಈ ವಿಷಯದ ಮೇಲೆ ಮಹಾ ಚರ್ಚೆಗಳು ಪ್ರಾರಂಭವಾದವು. ಅನೇಕ ಊಹೆಗಳು ಜನಿಸಿದವು. ಹಲವು ಬಗೆಯ ತಾತ್ವಿಕ ಭಾವನೆಗಳು ಪ್ರಚಾರಕ್ಕೆ ಬಂದವು. ಆತ್ಮದ ವಿಷಯವಾಗಿ ನಿರ್ಧರಿಸಲ್ಪಟ್ಟ ಕೆಲವು ಭಾವನೆಗಳನ್ನು ನಿಮ್ಮ ಮುಂದಿಡುವೆನು.

ಆತ್ಮ ಏನಾದರೂ ಆಗಿರಲಿ ಅದಕ್ಕೆ ಆಕಾರವಿಲ್ಲ, ಆಕಾರವಿಲ್ಲದುದು ಸರ್ವವ್ಯಾಪಿಯಾಗಿರಬೇಕು ಎಂಬ ಭಾವನೆಯನ್ನು ಭಿನ್ನರೀತಿಯ ತಾತ್ವಿಕರೆಲ್ಲ ಒಪ್ಪುವರು. ಕಾಲವು ಮನಸ್ಸಿನಿಂದ ಪ್ರಾರಂಭವಾಗುವುದು, ದೇಶವೂ ಮನಸ್ಸಿನಲ್ಲೆ ಇರುವುದು. ಕಾಲವಿಲ್ಲದೆ ಕಾರಣ ನಿಲ್ಲಲಾರದು. ಅನುಕ್ರಮ ಭಾವನೆ ಇಲ್ಲದೆ ಕಾರಣ ಭಾವನೆ ಇರಲಾರದು. ಕಾಲ, ದೇಶ, ನಿಮಿತ್ತಗಳು ಮನಸ್ಸಿನಲ್ಲಿವೆ. ಆತ್ಮವು ಮನಸ್ಸಿನ ಆಚೆ ಇದೆ. ಅದು ನಿರಾಕಾರವಾದುದು. ಆದುದರಿಂದ ಅದು ಕಾಲ, ದೇಶಗಳ ಮತ್ತು ಕಾರ್ಯಕಾರಣಗಳ ಆಚೆ ಇರಬೇಕಾಯಿತು. ಕಾಲ, ದೇಶಗಳ ಮತ್ತು ಕಾರ್ಯಕಾರಣಗಳ ಆಚೆ ಅದು ಇದ್ದರೆ, ಅದು ಅನಂತವಾಗಿರಬೇಕು. ಅನಂತರವೇ ನಮ್ಮ ದರ್ಶನದಲ್ಲಿ ಮಹೋತ್ತುಂಗವಾದ ಕಲ್ಪನೆ ಬರುವುದು. ಎರಡು ಅನಂತಗಳು ಇರಲಾರವು. ಆತ್ಮವು ಅನಂತವಾದರೆ ಅದು ಒಂದೇ ಆಗಿರಬೇಕು. ನನಗೊಂದು ಆತ್ಮ, ನಿಮಗೊಂದು ಆತ್ಮ ಎಂಬ ಹಲವು ಆತ್ಮಗಳ ಭಾವನೆ ಸತ್ಯವಲ್ಲ. ನಿಜವಾದ ಮನುಷ್ಯ, ಏಕನಾಗಿ ಅನಂತವಾಗಿ ಸರ್ವವ್ಯಾಪಿಯಾದ ಆತ್ಮನಾಗಿರಬೇಕು. ಈಗ ಕಾಣುತ್ತಿರುವ ಮನುಷ್ಯ ನಿಜವಾದ ಮನುಷ್ಯನ ಪರಿಮಿತವಾದ ಸ್ವರೂಪ. ಈ ದೃಷ್ಟಿಯಲ್ಲಿ ಪುರಾಣಗಳು ಹೇಳುವುದು ಸತ್ಯ- ಈಗ ತೋರುತ್ತಿರುವ ಮನುಷ್ಯನು, ಎಷ್ಟೇ ಮಹಿಮಾವಂತನಾದರೂ, ನಿಜವಾದ ಮನುಷ್ಯನ ಅಸ್ಪಷ್ಟ ಪ್ರತಿಬಿಂಬ ಮಾತ್ರ. ಆತ್ಮಸ್ವರೂಪನಾದ ನಿಜವಾದ ಮನುಷ್ಯನು ಕಾರ್ಯಕಾರಣಗಳಾಚೆ ಇರುವುದರಿಂದ, ಕಾಲ, ದೇಶಗಳಿಂದ ಬಂಧಿತನಾಗದೆ ಇರುವುದರಿಂದ ಅವನು ಮುಕ್ತನಾಗಿರಬೇಕು. ಅವನೆಂದೂ ಬದ್ಧನಾಗಿರಲಿಲ್ಲ, ಅವನು ಬದ್ಧನಾಗಲಾರ. ಈ ತೋರಿಕೆಯ ಮನುಷ್ಯನಾದರೊ ಕಾಲ, ದೇಶ ನಿಮಿತ್ತಗಳಿಂದ ಪರಿಮಿತನಾಗಿರುವುದರಿಂದ ಬದ್ಧನಾಗಿರುವನು ಅಥವಾ, ನಮ್ಮ ಕೆಲವು ದಾರ್ಶನಿಕರ ಭಾಷೆಯಲ್ಲಿ ಹೇಳುವುದಾದರೆ, ಅವನು ಬದ್ಧನಾದಂತೆ ತೋರುತ್ತಿರುವನು, ನಿಜವಾಗಿ ಬದ್ಧನಾಗಿಲ್ಲ. ನಮ್ಮ ಆತ್ಮನ ನೈಜಸ್ಥಿತಿಯೇ ಇದು- ಸರ್ವವ್ಯಾಪಿಯಾದುದು. ಅನಂತವಾದುದು, ಆಧ್ಯಾತ್ಮಿಕ ಸ್ವಭಾವವುಳ್ಳದ್ದು. ಪ್ರತಿಯೊಂದು ಜೀವವೂ ಅನಂತ. ಆದಕಾರಣ ಜನನಮರಣಗಳ ಪ್ರಸಂಗವೇ ಬರುವುದಿಲ್ಲ.

ಕೆಲವು ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಪರೀಕ್ಷಿಸುತ್ತಿದ್ದರು. ಪರೀಕ್ಷಕನು ಕೆಲವು ಕಷ್ಟವಾದ ಪ್ರಶ್ನೆಗಳನ್ನು ಹಾಕಿದನು. ಆ ಪ್ರಶ್ನೆಗಳಲ್ಲಿ ಇದೊಂದು ‘ಭೂಮಿ ಏತಕ್ಕೆ ಬೀಳುವುದಿಲ್ಲ?’ ಗುರುತ್ವಾಕರ್ಷಣೆಗೆ ಸಂಬಂಧಿಸಿದ ಉತ್ತರವನ್ನು ಅವರಿಂದ ಹೇಳಿಸಬೇಕೆಂದು ಇದ್ದನು ಆತ. ಹಲವು ವಿದ್ಯಾರ್ಥಿಗಳಿಗೆ ಇದಕ್ಕೆ ಉತ್ತರ ಕೊಡಲಾಗಲಿಲ್ಲ. ಕೆಲವರು ಗುರುತ್ವಾಕರ್ಷಣೆ ಅಥವಾ ಇನ್ನಾವುದೊ ಶಕ್ತಿಯಿಂದ ಎಂದು ಉತ್ತರಕೊಟ್ಟರು. ಒಬ್ಬ ಬುದ್ಧಿವಂತಳಾದ ಸಣ್ಣ ಹುಡುಗಿ ಆ ಪ್ರಶ್ನೆಗೆ ಉತ್ತರವಾಗಿ ಮತ್ತೊಂದು ಪ್ರಶ್ನೆಯನ್ನು ಕೇಳಿದಳು: ‘ಅದು ಎಲ್ಲಿ ಬೀಳಬೇಕು?’ ಪ್ರಶ್ನೆಗೆ ಅರ್ಥವಿಲ್ಲ. ಭೂಮಿ ಎಲ್ಲಿ ಬೀಳಬೇಕು? ಭೂಮಿಗೆ ಏಳುಬೀಳುಗಳಿಲ್ಲ. ಅನಂತ ಆಕಾಶದಲ್ಲಿ ತಗ್ಗುದಿಣ್ಣೆಗಳಿಲ್ಲ. ಅದು ಸಾಪೇಕ್ಷ ಜಗತ್ತಿನಲ್ಲಿ ಮಾತ್ರ ಸಾಧ್ಯ. ಅನಂತವಾದುದು ಹೋಗುವುದೆಲ್ಲಿಗೆ, ಬರುವುದೆಲ್ಲಿಗೆ? ಅದು ಎಲ್ಲಿಂದ ಬರಬೇಕು, ಎಲ್ಲಿಗೆ ಹೋಗಬೇಕು?’

ಇದರಿಂದ ಸ್ಪಷ್ಟವಾಗುವುದೇನೆಂದರೆ ನಾವು ನಿಜವಾಗಿಯೂ ಆತ್ಮಸ್ವರೂಪರು. ಮನಸ್ಸು, ಬುದ್ಧಿ, ಶರೀರ ಇದೆಲ್ಲ ನಮಗಿರುವ ಹೊರ ಕವಚಗಳು ಅಥವಾ ನಮ್ಮ ಆಶೋತ್ತರಗಳನ್ನು ಪೂರೈಸಿಕೊಳ್ಳಲು ನಾವೇ ನಿರ್ವಿುಸಿಕೊಂಡ ಮಾಧ್ಯಮಗಳು. ಅವೆಲ್ಲ ಬಂದು ಹೋಗತಕ್ಕಂಥವು. ನಾನು ‘ಆತ್ಮ’ ಎಂದು ದೃಢವಾಗಿ ಜ್ಞಾನ ನೆಲೆಯೂರಿದರೆ, ಸಂಶಯಕ್ಕೆಡೆಯಿಲ್ಲದಂತೆ ಪುಷ್ಠಿಗೊಂಡರೆ ಈ ದೇಹ, ಮನಸ್ಸುಗಳು ಅಪ್ರಸ್ತುತವಾಗುತ್ತವೆ. ಬಹಳ ಮಟ್ಟಿಗೆ ಗಾಢನಿದ್ದೆಯಲ್ಲೇ ಅಪ್ರಸ್ತುತವಾಗುತ್ತವೆ ಅಥವಾ ನಿಷ್ಕ್ರಿಯವಾಗುತ್ತವೆ. ಆದ್ದರಿಂದ ಮನುಷ್ಯ ‘ಬದ್ಧ’ ಎನ್ನುವುದೇ ಪೂರ್ಣ ಸತ್ಯಕ್ಕೆ ದೂರ. ಮುಕ್ತನಾಗಿಯೇ ಸದಾ ಇರುವ ಆತ್ಮನು ಅಜ್ಞಾನದಿಂದ ಬದ್ಧನೆಂದು ಭಾವಿಸುತ್ತಾನೆ; ಕುರಿ ಮಂದೆಯ ನಡುವೆ ಬೆಳೆದ ಸಿಂಹದಮರಿ ತನ್ನನ್ನು ಕುರಿ ಎಂದು ಭಾವಿಸಿದಂತೆ! ಇದನ್ನೇ ಛಾಂದೋಗ್ಯ ಉಪನಿಷತ್ತಿನಲ್ಲಿನ ಗುರು ಶಿಷ್ಯನಿಗೆ, ‘ತತ್ವಂ ಅಸಿ ಶ್ವೇತಕೇತೋ’ ಅರ್ಥಾತ್ ‘ಈಗಾಗ್ಲೇ ನೀನು ಮುಕ್ತ’ ಎನ್ನುತ್ತಾನೆ. ಈಗಿರುವ ಸವಾಲೆಂದರೆ ಇದನ್ನು ನಮ್ಮ ವರ್ತನೆಯಲ್ಲಿ ತರುವುದರ ಮೂಲಕ ಪ್ರತಿ ಮನುಷ್ಯನೂ Mಟಡಜ್ಞಿಜ ಛಜಿಡಜ್ಞಿಜಿಠಿಢ ಅರ್ಥಾತ್ ಚಲಿಸುತ್ತಿರುವ ದಿವ್ಯ ಚೇತನವಾಗಬೇಕು.

ಕ್ಷುಲ್ಲಕ, ಕ್ಷುದ್ರ, ಅಜ್ಞಾನಿ, ಅವಿವೇಕಿ ಮನುಷ್ಯನಂತೆ ವರ್ತಿಸಬಾರದು. ಅದು ಯಾರಿಗೂ ಸಲ್ಲ. ಏಕೆಂದರೆ ಅದು ನಮ್ಮ ಸ್ವಭಾವವೂ ಅಲ್ಲ. ನಾವು ಅಂಥವರೂ ಅಲ್ಲ. ನಾವು ನಾವಲ್ಲದಂತೆ ಬದುಕುವುದು ಆತ್ಮವಂಚನೆ. ಭಾರತೀಯ ಚಿಂತನೆ ಹೀಗೆ ವ್ಯಕ್ತಿ ವ್ಯಕ್ತಿಯಲ್ಲೂ ತಾನಿರುವಂತೆಯೇ ಬದುಕುವ ಸಂದೇಶವನ್ನು ನೀಡಿ ಪ್ರತಿಯೊಬ್ಬನನ್ನೂ ಸುಧಾರಿಸುವ ಪ್ರಯತ್ನವನ್ನು ಅನಾದಿಕಾಲದಿಂದ ಅತ್ಯಂತ ಪರಿಣಾಮಕಾರಿಯಾಗಿ ಮಾಡಿಕೊಂಡು ಬಂದಿದೆ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net