ಸಜ್ಜನ ಶಕ್ತಿಯನ್ನು ಒಂದೆಡೆ ಕಾಣುವ ಸೊಬಗೇ ಅನನ್ಯ!

ವಿಜಯವಾಣಿ (3)
Published on

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ಭಾರತ ಇಷ್ಟೊಂದು ಸದೃಢ, ಬಲಶಾಲಿ ಹಾಗೂ ಸಾಂಸ್ಕೃತಿಕ ಸಿರಿವಂತಿಕೆಯ ರಾಷ್ಟ್ರವಾಗಿರಲು ಕಾರಣ ಏನು ಎಂಬ ಪ್ರಶ್ನೆ ಅಂತಾರಾಷ್ಟ್ರೀಯ ವಲಯದಲ್ಲಿ ಆಗಾಗ ಅನುರಣಿಸುತ್ತಲೇ ಇರುತ್ತದೆ. ಇದಕ್ಕೆ ಸ್ಪಷ್ಟ ಉತ್ತರ ಒಂದೇ: ಭಾರತ ತನ್ನ ಅಂತಃಸತ್ವದ ಶಕ್ತಿಯನ್ನು ಹೆಚ್ಚಿಸಿಕೊಂಡು ಬಂದಿರುವುದು. ಹೌದು, ಭಾರತದ ಅಂತಃಶಕ್ತಿ ಅಸಾಧಾರಣವಾದದ್ದು. ಸೇವೆ, ತ್ಯಾಗ, ಸಹಿಷ್ಣುತೆ, ಸಮನ್ವಯ, ಸಹಕಾರ, ಬಾಂಧವ್ಯದಂಥ ವಿಶಿಷ್ಟ ಮೌಲ್ಯಗಳ ಬೇರು ಗಟ್ಟಿಯಾಗಿ ಇರುವುದರಿಂದಲೇ, ಸಂಸ್ಕೃತಿಯ ವಟವೃಕ್ಷ ಶ್ರೇಷ್ಠ ಜೀವನಪಥವನ್ನು ದರ್ಶಿಸುತ್ತಿದೆ. ಆಯಾ ರಾಷ್ಟ್ರಕ್ಕೊಂದು ಹೃದಯವಿರುತ್ತದೆಯಂತೆ. ಹಾಗೆಯೇ ಭಾರತದ ಹೃದಯ ಅಧ್ಯಾತ್ಮ. ಅಧ್ಯಾತ್ಮ ಎಂಬುದು ಎಲ್ಲ ಶ್ರೇಷ್ಠ ಮೌಲ್ಯ ಮತ್ತು ಆದರ್ಶಗಳ ಸಂಗಮ. ಇದು ನಮಗೆ ಜೀವನಧರ್ಮವನ್ನೂ ಕಲಿಸಿಕೊಟ್ಟಿದೆ.

ಭಾರತದ ಈ ಜೀವನಧರ್ಮವೇ ವಿದೇಶಿಯರನ್ನು ಇನ್ನಿಲ್ಲದಂತೆ ಸೆಳೆದು, ಅವರನ್ನು ಈ ಪುಣ್ಯಭೂಮಿಗೆ ಕರೆತರುತ್ತಿದೆ. ‘ಮೋಕ್ಷಪ್ರಾಪ್ತಿಗಾಗಿ ಪ್ರಯಾಗ್​ರಾಜ್​ಗೆ ಬಂದು ಕುಂಭಮೇಳದಲ್ಲಿ ಸ್ನಾನ ಮಾಡಿದ್ದೇನೆ’ ಎಂದು ವಿದೇಶಿ ಪ್ರಜೆ ಹೃದಯತುಂಬಿ ಹೇಳುವ ಮಾತಿನ ಭಾವವು ಕೂಡ ಭಾರತದ ಜೀವನಧರ್ಮವನ್ನೇ ದರ್ಶಿಸುತ್ತದೆ. ಹಾಗಾಗಿಯೇ, ಭಾರತದ ಬಗ್ಗೆ ಭರವಸೆ ಹೆಚ್ಚುತ್ತಿದೆ. ಜಗತ್ತಿಗೆ ಪರಿವರ್ತನೆಯ ಬೆಳಕು ಸಿಗುವುದು ಭಾರತದಿಂದಲೇ ಎಂಬುದು ಖಾತ್ರಿಯಾಗಿದೆ. ಇನ್ನೊಂದು ಮುಖವನ್ನು ನಾವು ಅಲ್ಲಗಳೆಯುವಂತಿಲ್ಲ. ಹೌದು, ನಮ್ಮಲ್ಲೇ ಒಂದಿಷ್ಟು ವಿರೋಧಾಭಾಸಗಳಿವೆ. ಜಗತ್ತಿನ ಅದೆಷ್ಟೋ ರಾಷ್ಟ್ರಗಳು ಭಾರತದ ಸಂಸ್ಕೃತಿ, ಪರಂಪರೆಯತ್ತ ಆಕರ್ಷಿತರಾಗುತ್ತಿದ್ದರೆ ನಮ್ಮವರು ಪಾಶ್ಚಾತ್ಯ ಸಂಸ್ಕೃತಿಯಂತೆ ಬದುಕಲು ಯತ್ನಿಸುತ್ತಿದ್ದಾರೆ.

ಇದರಿಂದ ಪೆಟ್ಟು ಬೀಳುತ್ತಿರುವುದು ‘ನಮ್ಮತನ’ಕ್ಕೆ. ಭಾಷೆ, ವೇಷಭೂಷಣ, ಆಹಾರ, ವಿಹಾರ, ನಿವಾಸ, ಆಚರಣೆಗಳೆಲ್ಲದರ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ಕರಿಛಾಯೆ ಆವರಿಸಿಕೊಂಡಿರುವುದರಿಂದ ಅಪಸವ್ಯಗಳ ಪ್ರಮಾಣ ಹೆಚ್ಚುತ್ತಿದೆ. ಸಮೃದ್ಧಿ, ನೆಮ್ಮದಿಯ ತಾಣಗಳಾಗಿದ್ದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಹೆಚ್ಚು ಇಳುವರಿ ಪಡೆಯುವ ಭರದಲ್ಲಿ ವಸುಂಧರೆಗೆ ವಿಷವುಣಿಸುವ ಹೀನಕಾರ್ಯ ನಡೆಯುತ್ತಿದೆ. ಗೃಹ ಉದ್ಯಮಗಳು ಕಣ್ಮರೆಯಾಗುತ್ತಿವೆ. ಬಹುತೇಕ ವಿದ್ಯಾಸಂಸ್ಥೆಗಳು ಜ್ಞಾನ ಧಾರೆ ಎರೆಯುವುದನ್ನು ಬಿಟ್ಟು, ಉದ್ಯಮ ಕೇಂದ್ರಗಳಂತೆ ಕಾರ್ಯನಿರ್ವಹಿಸುತ್ತಿವೆ. ತಥಾಕಥಿತ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ನಾಶವಾಗುತ್ತಿದೆ. ಹೆಚ್ಚೆಚ್ಚು ಶಿಕ್ಷಣ ಪಡೆದಷ್ಟು ಸಂಸ್ಕಾರಗಳ ಕೊರತೆ ಕಾಡುತ್ತಿದೆ. ಹೀಗಾಗಿ ಸಮುದಾಯ/ಸಮಾಜದ ಶಕ್ತಿ ಕ್ಷೀಣಿಸುತ್ತಿದೆ.

ಈ ಎಲ್ಲ ಕೊರತೆಗಳನ್ನು ನಿವಾರಿಸಲು ದೇಶದಲ್ಲಿ ಮೌನಕ್ರಾಂತಿ ನಡೆಯುತ್ತಿದೆ. ಶಕ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಮಾಜಮುಖಿ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ತಂದಿರುವ ಬದಲಾವಣೆ ಅಸಾಧಾರಣ. ಉದ್ಯಾನದಲ್ಲಿ ಬಗೆಬಗೆಯ ಪುಷ್ಪಗಳನ್ನೆಲ್ಲ ಒಟ್ಟಾಗಿ ನೋಡಿದಾಗ ಮನಸ್ಸು ಹೇಗೆ ಆನಂದದಿಂದ ಅರಳುತ್ತದೆಯೋ, ಸಜ್ಜನ, ಸಾತ್ವಿಕ ಶಕ್ತಿಗಳು ಒಂದೆಡೆ ಸೇರಿದಾಗ ಇಡೀ ಸಮಾಜ ರೋಮಾಂಚನಗೊಳ್ಳುತ್ತದೆ, ಸಕಾರಾತ್ಮಕ ಶಕ್ತಿಯಿಂದ ಪುಟಿದೇಳುತ್ತದೆ. ಹಾಗಾಗಿಯೇ, ಸಜ್ಜನ ಶಕ್ತಿಗಳೆಲ್ಲ ಆಗಾಗ ಒಂದೆಡೆ ಸೇರಬೇಕು. ಈ ಆಶಯವನ್ನು ಅತ್ಯಂತ ಸಾರ್ಥಕವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಈಡೇರಿಸುತ್ತಿದೆ ಭಾರತ ವಿಕಾಸ ಸಂಗಮ. ಹೆಸರಿನಲ್ಲೇ ಎಷ್ಟು ಅರ್ಥವಿದೆ ನೋಡಿ! ಭಾರತ ವಿಕಾಸದ ಸಂಗಮವನ್ನು ಒಂದೆಡೆ ನೋಡಲು, ಅನುಭವಿಸಲು, ಅರ್ಥೈಸಲು ಅವಕಾಶ ಸಿಕ್ಕರೆ ನೈರಾಶ್ಯವಾದ ಮತ್ತು ನಕಾರಾತ್ಮಕತೆ ಎಂಬ ಪೆಡಂಭೂತಗಳನ್ನು ಹೊಡೆದೊಡಿಸಬಹುದು. ಆತ್ಮಬಲ ಜಾಗೃತಗೊಳಿಸಬಹುದು. ಒಮ್ಮೆ ಸಮಾಜದ ಆತ್ಮಬಲ ಜಾಗೃತಗೊಂಡರೆ, ಅಲ್ಲಿ ವಿಕಾಸ ಮತ್ತು ಉತ್ಕರ್ಷದ ಪಥವನ್ನು ಸಾಕ್ಷಾತ್ಕರಿಸಬಹುದು.

ಸಾವಯವ ಕೃಷಿ, ಗ್ರಾಮೀಣಾಭಿವೃದ್ಧಿ, ಸ್ವಾವಲಂಬನೆ, ಗೋವುಗಳ ಸಂರಕ್ಷಣೆ, ಮಹಿಳಾ ಮತ್ತು ಯುವ ಸಬಲೀಕರಣ, ಶಿಕ್ಷಣ ಸೇರಿ ಹಲವು ಕ್ಷೇತ್ರಗಳಲ್ಲಿ ಸಜ್ಜನ ಶಕ್ತಿಗಳು ತಂದ ಬದಲಾವಣೆಗೆ ಭಾರತ ವಿಕಾಸ ಸಂಗಮ ಸೇತುವೆಯಾಗಿದೆ. ಅಲ್ಲದೆ, ಪ್ರಕೃತಿಯಾಧಾರಿತ ವಿಕಾಸದ ಕನಸು ದೇಶದ ಹಲವು ರಾಜ್ಯಗಳಲ್ಲಿ ನನಸಾಗುತ್ತಿದೆ. ಖ್ಯಾತ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಅವರಿಂದ 2003ರಲ್ಲಿ ಸ್ಥಾಪಿತವಾದ ಭಾರತ ವಿಕಾಸ ಸಂಗಮವು ಮತ್ತೋರ್ವ ಖ್ಯಾತ ಚಿಂತಕ, ಮಾಜಿ ಲೋಕಸಭಾ ಸದಸ್ಯ ಬಸವರಾಜ್ ಪಾಟೀಲ್ ಸೇಡಂ ಅವರ ಮಾರ್ಗದರ್ಶನದಲ್ಲಿ ಭಾರತೀಯತೆಯನ್ನು ಮತ್ತೆ ಜಾಗೃತಗೊಳಿಸುತ್ತಿದೆ. ಆದರ್ಶ ಗ್ರಾಮಗಳ ನಿರ್ವಣ, ಜಲಮೂಲಗಳ ಜೀಣೋದ್ಧಾರ, ಸಾವಯವ ಕೃಷಿ, ಗುಣಮಟ್ಟದ ಶಿಕ್ಷಣ ಹೀಗೆ ಪ್ರತಿಯೊಂದು ಕ್ಷೇತ್ರವನ್ನು ಅವಲೋಕಿಸಿದಾಗ ಅಚ್ಚರಿ ಮೂಡಿಸುವ ಕೆಲಸಗಳು ಗೋಚರಿಸುತ್ತವೆ.

ಆದರೆ, ನಮ್ಮಲ್ಲಿ ನಕಾರಾತ್ಮಕ ಸುದ್ದಿಗಳು, ನಕಾರಾತ್ಮಕ ಬೆಳವಣಿಗೆಗಳು ವೇಗವಾಗಿ ಹರಡುವಷ್ಟು ಒಳ್ಳೆಯ ಕಾರ್ಯಗಳು ಪ್ರಸಾರಗೊಳ್ಳುವುದಿಲ್ಲ. ಏಕೆಂದರೆ, ಸಜ್ಜನ ಶಕ್ತಿಗಳು ತಮ್ಮ ಪಾಡಿಗೆ ತಾವು ವನಸುಮಗಳಂತೆ ಕೆಲಸ ನಿರ್ವಹಿಸುತ್ತ, ಅದರಲ್ಲಿ ಸಂತೃಪ್ತಿ ಕಂಡಿರುತ್ತಾರೆ ಎಂಬುದೇನೋ ನಿಜ. ಆದರೆ, ಇಂಥ ಕಾರ್ಯಗಳನ್ನು ಗಟ್ಟಿದನಿಯಲ್ಲಿ ಇಡೀ ಸಮಾಜಕ್ಕೆ ಮತ್ತೆ ಮತ್ತೆ ಕೇಳಿಸುವ, ತೋರಿಸುವ ಕೆಲಸವನ್ನು ಮಾಡಬೇಕಿದೆ. ಆಗಲೇ, ಸಮಾಜದ ಶಕ್ತಿ ಎಷ್ಟು ಅದ್ಭುತ, ಪ್ರತಿಯೊಂದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬೇಕಿಲ್ಲ ಎಂಬುದರ ಸ್ಪಷ್ಟ ಅರಿವು ಮೂಡುತ್ತದೆ. ಭಾರತ ವಿಕಾಸ ಸಂಗಮ ಸಂಘಟನೆಯು ಕಳೆದ 22 ವರ್ಷಗಳಿಂದ ವಿಕಾಸದ ಸಮರ್ಥ ಮಾದರಿಗಳನ್ನು ಅನುಷ್ಠಾನಗೊಳಿಸಿದೆ. ಈಗ ಇದೊಂದು ಪ್ರೇರಣೆಯ, ಸಮಾಜಕ್ಕೆ ಸ್ಪಷ್ಟ ದಿಕ್ಕು ತೋರುವ, ಅಭಿವೃದ್ಧಿಯ ವ್ಯಾಖ್ಯೆಯನ್ನು ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಿಸುತ್ತಿರುವ ದೇಶದ ದೊಡ್ಡ ಸಾಮಾಜಿಕ ವೇದಿಕೆಯಾಗಿ ಮಾರ್ಪಟ್ಟಿದೆ. ಭಾರತೀಯ ಮೌಲ್ಯಗಳು-ಸ್ವದೇಶಿ ಚಿಂತನೆಯ ವಿಸ್ತಾರದಲ್ಲಿ ತೊಡಗಿರುವ ಸಾವಿರ ಸಂಘಟನೆಗಳು ಭಾರತ ವಿಕಾಸ ಸಂಗಮದೊಂದಿಗೆ ಜೋಡಿಸಿಕೊಂಡಿವೆ. ಸಮಾಜದ ಪ್ರತಿ ವ್ಯಕ್ತಿಯ ಶಕ್ತಿ, ಬುದ್ಧಿ, ಕ್ಷಮತೆ, ಕೌಶಲ ಸಮಾಜನಿರ್ವಣ ಕಾರ್ಯದಲ್ಲಿ ವಿನಿಯೋಗವಾಗಬೇಕು ಎಂಬ ಆಶಯ ಈಗ ನಿಧಾನವಾಗಿ ಈಡೇರುತ್ತಿದೆ.

ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ-ಸಂಸ್ಥೆಗಳಿಗೆ ವೈಚಾರಿಕ ಮಾರ್ಗ ದರ್ಶನದ ಜತೆಗೆ ತಲುಪಬೇಕಾದ ಗುರಿ, ಅದಕ್ಕಾಗಿ ಸಾಗಬೇಕಾದ ದಾರಿಯನ್ನೂ ದರ್ಶಿಸುತ್ತ ಅಭಿವೃದ್ಧಿಯ ಶ್ರೇಷ್ಠ ಮಾದರಿಯನ್ನು ದೇಶದ ಮುಂದಿಟ್ಟಿದೆ. ಈ ಹಾದಿಯಲ್ಲಿ ಸಾಗುತ್ತಿರುವ ಹೆಜ್ಜೆಗಳು ಕ್ರಮೇಣ ಹೆಚ್ಚುತ್ತಿವೆ ಎಂಬುದು ಗಮನಾರ್ಹ. ತಮ್ಮ ತಮ್ಮ ನೆಲೆಯಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವವರಿಗೆ ಇದರಿಂದ ಭೀಮಬಲ ಬಂದಿದ್ದು, ಅವರ ಆತ್ಮವಿಶ್ವಾಸವೂ ಇಮ್ಮಡಿಗೊಂಡಿದೆ. ಪರಿಣಾಮ, ಸಮುದಾಯದಿಂದ ಸಮುದಾಯಕ್ಕಾಗಿ ಕೆಲಸ ಮಾಡುವ ಪಥ ವಿಸ್ತಾರವಾಗಿದೆ.

ಶಾಲೆ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು. ನೆಲ, ಜಲ, ಪಶು, ಪಕ್ಷಿ, ಸಮಸ್ತ ಜೀವಿಗಳು ಮಾನವನ ಪರಿವಾರವಾಗಿರಬೇಕು. ಪ್ರಕೃತಿ ಕೇಂದ್ರಿತ ವಿಕಾಸ ನಮ್ಮ ವ್ಯವಸ್ಥೆಯ ಭಾಗವಾಗಬೇಕು. ನನ್ನ ಗ್ರಾಮ, ನನ್ನ ದೇಶ-ನನ್ನ ಜಿಲ್ಲೆ ನನ್ನ ಜಗತ್ತು. ವಿಚಾರ ಮತ್ತು ಆಚಾರದಲ್ಲಿ ಅಂತರ ಇರಬಾರದು. ಮಾತೃಭಾಷೆಯ ಶಿಕ್ಷಣ ಮಗುವಿನ ಜನ್ಮಸಿದ್ಧ ಹಕ್ಕು. ಹಳ್ಳಿಯ ಬದುಕು ಗೌರವದ ಬದುಕಾಗಬೇಕು. ಕೃಷಿಯು ಈ ದೇಶದ ಮೊದಲನೆಯ ಗೌರವದ ಕಾಯಕವಾಗಬೇಕು. ಶಿಕ್ಷಣ ಜ್ಞಾನಕ್ಕಾಗಿಯೇ ಹೊರತು ಉದ್ಯೋಗಕ್ಕಾಗಿ ಎಂಬ ಚಿಂತನೆ ದೂರ ಆಗಬೇಕು. ಸರಳ ಜೀವನ, ಕಾಯಕದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮದ ಬದುಕು ನಮ್ಮದಾಗಬೇಕು. ದೃಷ್ಟಿ ಬದಲಾಗದೆ, ಸೃಷ್ಟಿ ಬದಲಾಗದು. ಈ ಎಲ್ಲ ಚಿಂತನೆಗಳ ಅನುಷ್ಠಾನಕ್ಕೆ ಭಾರತ ವಿಕಾಸ ಸಂಗಮದಿಂದ ಅವಿರತ ಕೆಲಸ ನಡೆಯುತ್ತಿದೆ.

ಕೆ.ಎನ್.ಗೋವಿಂದಾಚಾರ್ಯರು ಮತ್ತು ಬಸವರಾಜ್ ಪಾಟೀಲ್ ಸೇಡಂ ಇವರಿಬ್ಬರೂ ರಾಜಕೀಯದ ಉನ್ನತ ಸ್ಥಾನದಲ್ಲಿ ಇದ್ದವರೇ. ಆದರೆ, ತಾವು ಸಮಾಜಕ್ಕಾಗಿ, ಈ ರಾಷ್ಟ್ರಕ್ಕಾಗಿ ಇನ್ನೂ ಹೆಚ್ಚಿನ ಕೊಡುಗೆ ನೀಡಬೇಕಿದೆ ಎಂದೆನಿಸಿದೊಡನೆ ರಾಜಕೀಯದಿಂದ ದೂರ ಸರಿದು ಭಾರತ ವಿಕಾಸ ಸಂಗಮದ ಮೂಲಕ ಕಾರ್ಯೋನ್ಮುಖರಾದರು. ಭಾರತದ ಅಭಿವೃದ್ಧಿಗೆ ರಚನಾತ್ಮಕ, ಬೌದ್ಧಿಕ ಮತ್ತು ಆಂದೋಲನಾತ್ಮಕ ಪ್ರಯತ್ನಗಳು ಹೆಚ್ಚಬೇಕು. ಅಭಿವೃದ್ಧಿಗೆ ವಿದೇಶದ್ದಲ್ಲ ನಮ್ಮದೇ ಆದ ಮಾದರಿ ಅನುಸರಿಸಬೇಕು ಎಂದುಕೊಂಡ ಗೋವಿಂದಾಚಾರ್ಯರು, ಈ ನಿಟ್ಟಿನಲ್ಲಿ ಸುಧಾರಣೆಯ ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ‘ನನ್ನ ಗ್ರಾಮ-ನನ್ನ ದೇಶ’ ‘ನನ್ನ ಜಿಲ್ಲೆ-ನನ್ನ ಜಗತ್ತು,’ ‘ಜನ, ಅರಣ್ಯ, ಮಣ್ಣು, ಪ್ರಾಣಿ, ಜೀವಜಂತುಗಳ ರಕ್ಷಣೆಯೊಂದಿಗೆ ಪ್ರಕೃತಿಯಾಧಾರಿತ ವಿಕಾಸ’, ‘ಸಮೃದ್ಧ ಹಳ್ಳಿ-ಸಮೃದ್ಧ ದೇಶ’ಗಳಂಥ ಅವರ ಪರಿಕಲ್ಪನೆಗಳು ವಿಶಾಲ ತಳಹದಿಯಲ್ಲಿ ಜೀವಂತಿಕೆ ಪಡೆದುಕೊಂಡು ಬೇರುಮಟ್ಟದ ಪರಿವರ್ತನೆಗೆ ಸಾಕ್ಷಿಯಾಗಿವೆ.

‘ನನ್ನ ಜಿಲ್ಲೆ-ನನ್ನ ಜಗತ್ತು’ ಎಂಬ ವಿನೂತನ ಚಿಂತನೆಯ ಮೂಲಕ ಜಿಲ್ಲೆಗಳನ್ನು ಸ್ವಾವಲಂಬಿಯಾಗಿಸುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಅಂದರೆ, ಪ್ರತಿ ಜಿಲ್ಲೆಯೂ ತನ್ನ ಅಗತ್ಯದ ಶೇಕಡ 80-85ರಷ್ಟು ಬೇಡಿಕೆಗಳನ್ನು ತಾನೇ ಪೂರೈಸಿಕೊಳ್ಳಬೇಕು. ಇದಕ್ಕಾಗಿ ಪ್ರಾಂತ್ಯ-ರಾಜ್ಯಗಳ ಮೇಲಿನ ಅವಲಂಬನೆಯನ್ನು ತಪ್ಪಿಸಬೇಕು ಎಂಬ ಚಿಂತನೆ ಸಾಕಾರಗೊಳ್ಳುತ್ತಿದೆ. ಉದ್ಯೋಗ ಸೃಷ್ಟಿ, ಕೃಷಿ ಉತ್ಪಾದನೆಯ ಹೆಚ್ಚಳ, ಗೃಹೋದ್ಯಮ, ಸಣ್ಣ-ಪುಟ್ಟ ಉದ್ಯಮಕ್ಕೆ ಪ್ರೋತ್ಸಾಹದಂಥ ಕ್ರಮಗಳಿಂದ ಸ್ಥಳೀಯ ಸಂಸ್ಕೃತಿ ಹಾಗೂ ಸಮೃದ್ಧಿ ಎರಡರ ಸಂವರ್ಧನೆಯೂ ಸಾಧ್ಯವಾಗುತ್ತಿದೆ. ‘ನನ್ನ ಗ್ರಾಮ-ನನ್ನ ದೇಶ’ ಪರಿಕಲ್ಪನೆಯಲ್ಲಿ ಇಡೀ ಹಳ್ಳಿಯನ್ನು ಅಲ್ಲಿನ ಜನರ ಸಹಭಾಗಿತ್ವದಿಂದಲೇ ಆಮೂಲಾಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಅಭಿವೃದ್ಧಿ ಎಂದರೆ ಏನು?-ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬವನ್ನು ಮೇಲೆತ್ತುವುದು, ಕೃಷಿ ಉತ್ಪಾದನೆ ದ್ವಿಗುಣಗೊಳಿಸುವುದು, ಗೋವು-ಎತ್ತುಗಳ ಸಂಖ್ಯೆ ದ್ವಿಗುಣಗೊಳಿಸುವುದು, ಗ್ರಾಮವನ್ನು ಎಲ್ಲ ರೀತಿಯ ದುಶ್ಚಟ-ವ್ಯಸನಗಳಿಂದ ಮುಕ್ತಗೊಳಿಸುವುದು, ನೈತಿಕತೆ ಹೆಚ್ಚಿಸುವುದು, ಪೌಷ್ಟಿಕಾಂಶ ಕೊರತೆ, ರಕ್ತದ ಕೊರತೆಯಿಂದ ಯಾವುದೇ ಸಾವು ಸಂಭವಿಸದಂತೆ ಕಾಳಜಿ ವಹಿಸುವುದು, ಆಯಾ ಗ್ರಾಮದ ಸಾಂಸ್ಕೃತಿಕ-ಐತಿಹಾಸಿಕ ಪರಂಪರೆ ಕಾಪಾಡುವುದು ಸೇರಿದಂತೆ ಪ್ರಕೃತಿ ಆಧಾರಿತವಾದ ಅಕ್ಷಯ ವಿಕಾಸವನ್ನು ಸಾಧಿಸಲಾಗುತ್ತಿದೆ.

ಹಳ್ಳಿಗಳ ಖುಷಿ ಕೃಷಿಯಲ್ಲೇ ಇದೆ. ಕೃಷಿಯಾಧಾರಿತ ಕಸುಬುಗಳು ಗ್ರಾಮಗಳಲ್ಲಿನ ನಿರುದ್ಯೋಗ ನಿವಾರಣೆಗೆ ಮದ್ದು ಎಂದು ಸಾರುತ್ತ ಗ್ರಾಮಭಾರತವನ್ನು ಸ್ವಾವಲಂಬಿಯಾಗಿಸುವಲ್ಲಿ ಮಹತ್ವದ ಹೆಜ್ಜೆಗಳನ್ನು ಇರಿಸಲಾಗಿದೆ. ಹಾಗೆಯೇ ದೇಶದ ಆರು ಲಕ್ಷ ಹಳ್ಳಿಗಳಲ್ಲಿ ಇಂಥ ಬೇರುಮಟ್ಟದ ಬದಲಾವಣೆ ತರುತ್ತಿರುವ ವ್ಯಕ್ತಿ-ಸಂಘಟನೆಗಳು ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು, ಅವರ ಅಭಿವೃದ್ಧಿ ಮಾದರಿಗಳನ್ನು ದೇಶದ ಮುಂದೆ ಪರಿಚಯಿಸಬೇಕು, ಆ ಮೂಲಕ ಪ್ರೇರಣೆಯ ಅಲೆಯನ್ನು ಹರಡಬೇಕು ಎಂಬ ಉದ್ದೇಶಕ್ಕಾಗಿ ಮೂರು ವರ್ಷಗಳಿಗೊಮ್ಮೆ ಭಾರತ ವಿಕಾಸ ಸಂಗಮದ ಬೃಹತ್ ಸಮಾವೇಶವನ್ನೂ ‘ಭಾರತೀಯ ಸಂಸ್ಕೃತಿ ಉತ್ಸವ’ ಎಂಬ ಸುಂದರ ಶೀರ್ಷಿಕೆಯಲ್ಲಿ ಆಯೋಜಿಸಲಾಗುತ್ತಿದೆ.

ಇಂಥ ದೊಡ್ಡ ಕಾರ್ಯಕ್ರಮ, ಆಯೋಜನೆಗಳ ಪ್ರಯೋಜನವೇನು ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ, ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಒಳ್ಳೆಯ ಕಾರ್ಯಗಳನ್ನು, ಅಭಿವೃದ್ಧಿಯಲ್ಲಿ ಸಾಗಬೇಕಾಗಿರುವ ಮಾರ್ಗವನ್ನು, ಭಾರತೀಯ ಜೀವನಧರ್ಮದ ಮಹೋನ್ನತೆಯನ್ನು ಅರಿಯಲು ಇಂಥ ಕಾರ್ಯಕ್ರಮಗಳು ಅತ್ಯಂತ ಸಶಕ್ತ ಮಾಧ್ಯಮಗಳು. ಮಾತ್ರವಲ್ಲ, ಇಲ್ಲಿ ಸಿಗುವ ಪ್ರೇರಣೆ ಅಸಂಖ್ಯ ಜನರ ಬದುಕನ್ನು ಸಕಾರಾತ್ಮಕವಾಗಿ ಬದಲಿಸಬಲ್ಲದು. ಗ್ರಾಮಭಾರತದಿಂದ ಹಿಡಿದು ವಿದ್ಯಾಕ್ಷೇತ್ರದವರೆಗಿನ ನಮ್ಮ ಸಾಧನೆಗಳನ್ನು ಅರಿಯಬಹುದು. ಉತ್ತರಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಮತ್ತೊಮ್ಮೆ ದರ್ಶಿಸಿದೆ. ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಬಳಿ ಇರುವ ಪ್ರಕೃತಿ ನಗರವು (ಬೀರನಹಳ್ಳಿ ಕ್ರಾಸ್) ವಿಕಾಸದ ಕುಂಭಮೇಳಕ್ಕೆ ಇದೇ ಜನವರಿ 29ರಿಂದ ಫೆಬ್ರವರಿ 6ರವರೆಗೆ ಏಳನೆಯ ಭಾರತೀಯ ಸಂಸ್ಕೃತಿ ಉತ್ಸವದ ನಿಮಿತ್ತವಾಗಿ ಸಜ್ಜಾಗಿದೆ. 240 ಎಕರೆ ಪ್ರದೇಶದಲ್ಲಿ ನಡೆಯಲಿರುವ ಈ ಭವ್ಯ ಕಾರ್ಯಕ್ರಮದಲ್ಲಿ 25 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪದ್ಮ ಪ್ರಶಸ್ತಿ ಪುರಸ್ಕೃತರಾದ 51 ಜನರು (ಫೆ.1) ಒಂದೇ ವೇದಿಕೆಯಿಂದ ಪ್ರೇರಣೆಯ ಸಂದೇಶ ನೀಡಲಿದ್ದಾರೆ. 1 ಲಕ್ಷ ಯೋಗಪಟುಗಳು ಮತ್ತು 200 ಯೋಗ ಶಿಕ್ಷಕರು ಏಕಕಾಲಕ್ಕೆ ಯೋಗಪ್ರದರ್ಶನ (ಫೆ.2) ನೀಡಲಿದ್ದಾರೆ. 9 ದಿನ, 9 ಮುಖ್ಯ ಸಮಾವೇಶಗಳು, 90 ಚಿಂತಕರು, 900 ಮಳಿಗೆಗಳು, 9 ಸಾವಿರ ಸ್ವಯಂಸೇವಕರು, 25 ಲಕ್ಷ ಜನರನ್ನು ಒಳಗೊಳ್ಳುವ ಭಾರತೀಯ ಸಂಸ್ಕೃತಿ ಉತ್ಸವ ಉತ್ಕರ್ಷದ ಹೊಸ ಬೆಳಕನ್ನು ನೀಡಲಿ ಎಂಬುದು ಆಶಯ.

ಪ್ರೇರಣೆಯ ದೊಡ್ಡ ಜಾತ್ರೆ ಭಾರತೀಯ ಸಂಸ್ಕೃತಿ ಉತ್ಸವ

ವ್ಯಕ್ತಿನಿರ್ವಣದಿಂದ ರಾಷ್ಟ್ರನಿರ್ವಣದವರೆಗೆ ಮಾತೃಶಕ್ತಿಯ ಮಹತ್ವವನ್ನು ಮನಗಾಣಿಸಲು ಮಾತೃ ಸಮಾವೇಶ (ಜ.29), ಜ್ಞಾನಾರ್ಜನೆಯೇ ಶಿಕ್ಷಣದ ಮೂಲಮಂತ್ರವಾಬೇಕು ಎಂಬ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಮಾವೇಶ (ಜ.30), ಯುವಕರನ್ನು ವೈಚಾರಿಕ ಎತ್ತರಕ್ಕೆ ಕೊಂಡೊಯ್ಯಲು ಯುವ ಸಮಾವೇಶ (ಜ.31), ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಒದಗಿಸಲು ಗ್ರಾಮ-ಕೃಷಿ ಸಮಾವೇಶ (ಫೆ.1), ಆರೋಗ್ಯಪೂರ್ಣ ಬದಕಿಗಾಗಿ ಆಹಾರ-ಆರೋಗ್ಯ ಸಮಾವೇಶ (ಫೆ.2), ಸ್ವಾವಲಂಬನೆಯ ಮಹತ್ವ ಸಾರಲು ಸ್ವಯಂ ಉದ್ಯೋಗ ಸಮಾವೇಶ (ಫೆ.3), ಪರಿಸರ ಸಂರಕ್ಷಣೆಯ ಸಂಕಲ್ಪ ಬಲಗೊಳಿಸಲು ಪ್ರಕೃತಿ ಮತ್ತು ನಾವು ಸಮಾವೇಶ (ಫೆ.4), ಸೇವೆಯ ಶಕ್ತಿಯನ್ನು ದರ್ಶಿಸಲು ಸೇವಾಶಕ್ತಿ ಸಮಾವೇಶ (ಫೆ.5), ಜೀವನಮೌಲ್ಯಗಳ ಸಾಕಾರಕ್ಕೆ ದೇಶ-ಧರ್ಮ-ಸಂಸ್ಕೃತಿ ಸಮಾವೇಶ (ಫೆ.6) ನಡೆಯಲಿದೆ.

ಅಲ್ಲದೆ, 11 ಎಕರೆಯಲ್ಲಿ ಕೃಷಿ ಲೋಕ, 6 ಎಕರೆಯಲ್ಲಿ ವಿಜ್ಞಾನ ಲೋಕ, 2 ಎಕರೆಯಲ್ಲಿ ದೃಶ್ಯಕಲಾ ಲೋಕ, 2 ಎಕರೆಯಲ್ಲಿ ಸೇವಾಲೋಕ, 2 ಎಕರೆಯಲ್ಲಿ ಕಾಯಕ ಲೋಕ, 2 ಎಕರೆಯಲ್ಲಿ ಬಾಲಲೋಕ, 2 ಎಕರೆಯಲ್ಲಿ ಪುಸ್ತಕ ಲೋಕ ಆವಿರ್ಭವಿಸಲಿದ್ದು, ಮಾಹಿತಿ ಮತ್ತು ಪ್ರೇರಣೆಯನ್ನು ಒದಗಿಸಲಿವೆ. ಈ ಕಾರ್ಯಕ್ರಮಕ್ಕಾಗಿ ಕಳೆದ ಎರಡು ವರ್ಷಗಳಿಂದ ಸಿದ್ಧತೆಗಳು ನಡೆದಿದ್ದು, ಈಗ ಅಂತಿಮ ಹಂತಕ್ಕೆ ತಲುಪಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net