ಮಗುವೇ ಗುಣಗಳಿಗೆ ಗುರು: ಮನೋಲ್ಲಾಸ

Manollasa
Published on
| ಭಾರತಿ ಎ. ಕೊಪ್ಪ

ಸದಾ ಪ್ರಶ್ನಿಸುವ ಸ್ವಭಾವ ಹೊಂದಿದ್ದ ಶಿಷ್ಯನೊಬ್ಬ ಗುರುವಿನ ಬಳಿ ಕೇಳಿದ- ‘ಅನುಕರಣೆ ಮಾಡಬೇಕಾದಲ್ಲಿ ಯಾರನ್ನು ಅನುಕರಿಸುವುದು ಒಳ್ಳೆಯದು? ಭಗವಂತನನ್ನೋ? ಜ್ಞಾನಿಯನ್ನೋ?’ ಆಗ ಗುರುಗಳು ಸಹಜವಾಗಿ, ‘ನಾವು ಹಾಲುಗಲ್ಲದ ಹಸುಳೆಯನ್ನು ಅನುಕರಿಸುವುದು ಒಳ್ಳೆಯದು’ ಎಂದು ಉತ್ತರಿಸಿದರು. ಶಿಷ್ಯ ತಬ್ಬಿಬ್ಬಾದ. ‘ಶಿಶುವನ್ನು ಅನುಕರಿಸುವುದೇ? ಅದು ಏನೆಂದು ಅನುಕರಿಸುವುದು? ಶಿಶುವಿನ ಬಳಿ ಅನುಸರಿಸಲು ಏನಿದೆ?’ ಎಂದು ಅಸಡ್ಡೆ ಮತ್ತು ತಾತ್ಸಾರ ಭಾವದಿಂದ ಮರುಪ್ರಶ್ನಿಸಿದ.

ಗುರುಗಳಿಗೆ ಪ್ರಶ್ನೆಯ ಅಂತರಾರ್ಥ ಮನವರಿಕೆಯಾಗಿ, ‘ನಿನ್ನ ಗ್ರಹಿಕೆ ತಪ್ಪಾಗಿದೆ. ಮಗುವಿನಿಂದ ಸಾಕಷ್ಟು ಕಲಿಯಲು ಇದೆ’ ಎಂದರು. ಶಿಷ್ಯನ ಕುತೂಹಲ ಹೆಚ್ಚಾಯಿತು. ಮಗುವಿನಿಂದ ಕಲಿಯಬಹುದಾದ ನಾಲ್ಕು ಪ್ರಮುಖ ಅಂಶಗಳನ್ನು ಗುರುಗಳು ವಿವರಿಸಿದರು. ಮೊದಲನೆಯದೆಂದರೆ, ಯಾವುದೇ ಕಾರಣವಿಲ್ಲದೆ ಸಂತೋಷವಾಗಿರುವುದು. ಸಹಜ ಆನಂದದೊಂದಿಗೆ ಮನಸ್ಸನ್ನು ಉಲ್ಲಸಿತವಾಗಿಡುವುದು. ಎರಡನೆಯದೆಂದರೆ, ಆಯಾಸದ ಗೊಡವೆಯೇ ಇಲ್ಲದೆ ಸದಾ ಚಟುವಟಿಕೆಯಿಂದ ಇರುವುದು. ಒಂದು ಕೆಲಸದಿಂದ ಇನ್ನೊಂದಕ್ಕೆ ತೊಡಗಿಕೊಳ್ಳುವುದರಲ್ಲೇ ವಿಶ್ರಾಂತಿ ಕಂಡುಕೊಳ್ಳುವುದು. ಮೂರನೆಯದು- ತನಗೆ ಬೇಕಾದದ್ದನ್ನು ಪಡೆಯಲು ಪಟ್ಟು ಹಿಡಿಯುವುದು, ಅದು ಸಿಗುವವರೆಗೂ ಬಿಡದಿರುವ ನಿರಂತರ ಛಲ. ನಾಲ್ಕನೆಯದು- ತನಗೆ ಬೇಕಾದ್ದನ್ನು ಪಡೆದ ಕೂಡಲೇ ಅಳು ನಿಲ್ಲಿಸಿ, ಆನಂದದಲ್ಲಿ ಕಾಲ ಕಳೆಯುವುದು ಎಂದು ಗುರುಗಳು ಮನಮುಟ್ಟುವಂತೆ ತಿಳಿಸಿದರು. ಶಿಷ್ಯನಿಗೆ ಜೀವನಪಾಠದ ಅರಿವಾಯಿತು.

ನಾವು ಕೂಡ ಯಶಸ್ವಿ ವ್ಯಕ್ತಿಯಾಗಲು ಯಾರನ್ನು ಅನುಕರಿಸಬೇಕೆಂಬ ಗೊಂದಲದಲ್ಲಿರುತ್ತೇವೆ. ಮಗುವಿನ ಈ ನಾಲ್ಕು ಗುಣಗಳು ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿಯ ಕೀಲಿಕೈಯಾಗಬಲ್ಲವು. ಖುಷಿಪಡಲು ಕಾರಣ ಹುಡುಕುತ್ತ ಕುಳಿತರೆ ಸದಾ ದುಃಖವೇ ಆವರಿಸುತ್ತದೆ. ಸಣ್ಣ ಸಣ್ಣ ಯಶಸ್ಸಿಗೂ ಖುಷಿಪಡುವ ಮನಸ್ಥಿತಿ ನಮ್ಮದಾಗಬೇಕು. ಅಂತೆಯೇ ಜೀವನದ ಗುರಿ ತಲುಪುವಲ್ಲಿ ಸದಾ ಚಟುವಟಿಕೆಯಿಂದ ಇರಬೇಕು, ಆಲಸ್ಯರಹಿತ ನಿರಂತರ ದುಡಿಮೆ ಇರಬೇಕು, ಸತತ ಪ್ರಯತ್ನವಿರಬೇಕು. ಅದರೊಂದಿಗೆ ಮಗುವಿನಂತೆ ಪಟ್ಟು ಹಿಡಿದು ಸಾಧಿಸುವ ಛಲವಿರಬೇಕು. ಬೇಕಾದ್ದನ್ನು ಪಡೆದ ಮೇಲೆ ಮಗು ಅಳು ನಿಲ್ಲಿಸಿ, ಆನಂದ ಪಡೆವಂತೆ, ಗುರಿ ಸಾಧನೆಯ ನಂತರ ದುರಾಸೆಪಡಬಾರದು. ನಮಗೆ ಲಭಿಸಿರುವುದರಲ್ಲಿ ನೆಮ್ಮದಿ ಮತ್ತು ಸಂತಸ ಪಡಬೇಕು.

ಎಳೆಯತರು ದಿನದಿನವು ಹೊಸ ತಳಿರ ತಳೆವಂತೆ

ತಿಳಿನೀರು ಚಿಲುಮೆಯಲಿ ನಿಲದುಕ್ಕುವಂತೆ

ಎಳೆಮಕ್ಕಳೊಳು ತಿಳಿವು ಮೊಳೆತು ಬೆಳೆವುದು ನೋಡು

ಇಳೆಯೊಳಗದೊಂದು ಸೊಗ - ಮಂಕುತಿಮ್ಮ ||

ಎಂಬ ಕಗ್ಗದ ಸಾಲುಗಳಂತೆ, ಎಳೆಯ ಮರವು ಪ್ರತಿನಿತ್ಯವೂ ಹೊಸ ಚಿಗುರನ್ನು ಹೊಂದುವಂತೆ, ಚಿಲುಮೆಯಲ್ಲಿ ತಿಳಿಯಾದ ನೀರು ಸದಾ ಚಿಮ್ಮುವಂತೆ, ಎಳೆಯ ಮಕ್ಕಳಲ್ಲಿ ಹೊಸ ಅರಿವು ಮೂಡಿ, ಬೆಳೆಯುತ್ತಿರುವುದನ್ನು ನೋಡುವುದು ಭುವಿಯಲ್ಲೊಂದು ಸುಖಕರವಾದ ಅನುಭವ. ಅಂತೆಯೇ ಮಗುವಿನಲ್ಲಿನ ಗುಣಗಳನ್ನು ಅನುಸರಿಸಿ, ಮಗುವಿನಂತಹ ಪರಿಶುದ್ಧ ಮನಸ್ಸು ನಮ್ಮದಾದರೆ, ನೆಮ್ಮದಿ ನಮ್ಮದಾಗುತ್ತದೆ. ಬದುಕಿನ ಸಾರ್ಥಕತೆಯಲ್ಲಿ ಮನಸ್ಸನ್ನು ಸದಾ ಸಂತೋಷವಾಗಿಡುವುದು ಕೂಡ ಬಹಳ ಮುಖ್ಯ. ಸಂತಸ ಮತ್ತು ನೆಮ್ಮದಿಯ ಮನಸ್ಥಿತಿಯಿಂದ ಯಶಸ್ಸಿನ ಪಥ ಸುಲಭವಾಗುತ್ತದೆ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net