

‘ಕನ್ನಡನ ಇಂಗ್ಲಿಷ್ ನುಂಗಿತ್ತಾ ನೋಡವ್ವ ತಂಗಿ...’ ಎಂದು ಖ್ಯಾತ ವಾಗ್ಮಿ ಹಾಸ್ಯಪಟು ಪೊ›. ಕೃಷ್ಣೇಗೌಡರು ಸಂದರ್ಶನವೊಂದರಲ್ಲಿ ಹಾಡಿದ ಅಣಕವಾಡನ್ನು ನೀವು ಕೇಳಿರಬಹುದು. ಅದರ ಚಿತ್ರತುಣುಕು ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಹಂಚಿಕೆಯಾಗಿತ್ತು. ಹೆಚ್ಚಿನವರು ಅದನ್ನು ಹಾಸ್ಯವೆಂದೇ ಆನಂದಿಸಿದರು. ಅದರಲ್ಲಿರುವ ವಿಷಾದದ ಛಾಯೆ-ಚಿಂತನೆಯನ್ನು ಗ್ರಹಿಸಿದವರು ಕಡಿಮೆ. ನಿಜವಾಗಿಯೂ ನಮ್ಮ ಸಂವಹನದಲ್ಲಿ- ಅನೌಪಚಾರಿಕ ಸಂಭಾಷಣೆಯಿರಲಿ, ಶಿಷ್ಟವಾದ ಬರೆವಣಿಗೆಯೇ ಇರಲಿ, ಅದೆಷ್ಟು ಇಂಗ್ಲಿಷ್ ಪದಗಳು ದಾಂಗುಡಿಯಿಡುತ್ತಿವೆ! ಕನ್ನಡ ವಾಹಿನಿಗಳಲ್ಲಿ ಅಡುಗೆ ಕಾರ್ಯಕ್ರಮ ವೀಕ್ಷಣೆಯೊಂದೇ ಸಾಕು ಇದರ ಗಾಂಭೀರ್ಯ ಅರಿವಾಗುವುದಕ್ಕೆ. ‘ಇನ್ಗ್ರೇಡಿಯೆಂಟ್ಸ್ ಲಿಸ್ಟು, ಮಸ್ಟರ್ಡ್, ಕ್ಯುಮಿನ್ ಸೀಡ್ಸ್, ಗ್ರೀನ್ ಚಿಲ್ಲೀಸ್, ಮೀಡಿಯಂ ಫ್ಲೇಮ್ ಸ್ಟವ್ ಮೇಲೆ ಒಂದು ಫ್ರೖೆಯಿಂಗ್ ಪ್ಯಾನ್ನಲ್ಲಿ ಎರಡ್ ಸ್ಪೂನು ಕುಕಿಂಗ್ ಆಯಿಲ್ ಹಾಕ್ಕೊಳ್ಳಿ... ಗೋಲ್ಡನ್ ಬ್ರೌನ್ ಕಲರ್ ಬರೋವರ್ಗೆ ರೋಸ್ಟ್ ಮಾಡಿ ಆಮೇಲೆ ಮಿಕ್ಸ್ ಮಾಡಿ... ಕೋರಿಯಾಂಡರ್ ಲೀವ್ಸ್ ಹಾಕಿ ಗಾರ್ನಿಷ್ ಮಾಡಿ...’ ಅಂತೆಲ್ಲ ಇಂಗ್ಲಿಷ್ ಪದಗಳೇ ರಾರಾಜಿಸುತ್ತವೆಯೇ ಹೊರತು ಸಾಸಿವೆ, ಜೀರಿಗೆ, ಹಸಿಮೆಣಸು, ಉಪ್ಪು, ಹುಣಿಸೆ, ಗಜ್ಜರಿ, ಗೂದೆಹಣ್ಣು ಮುಂತಾಗಿ ಚಂದದ ಕನ್ನಡ ಪದಗಳು ಕೇಳಿಬರುವುದೇ ಇಲ್ಲ. ರುಬ್ಬುವುದು, ಗೋಟಾಯಿಸುವುದು, ಮಂದ ಉರಿಯಲ್ಲಿ ಹುರಿಯುವುದು, ಕೊನೆಗೆ ಒಗ್ಗರಣೆ ಹಾಕುವುದು... ಯಾವುದೂ ಕನ್ನಡದಲ್ಲಿ ಅಲ್ಲ, ಎಲ್ಲ ಇಂಗ್ಲಿಷ್ನಲ್ಲೇ!
ಅಡುಗೆ ಕಾರ್ಯಕ್ರಮವನ್ನು ಪ್ರಾತಿನಿಧಿಕವಾಗಿ ಉಲ್ಲೇಖಿಸಿದ್ದಷ್ಟೇ. ಎಲ್ಲ ರಂಗಗಳಲ್ಲೂ ಇದೇ ಪರಿಸ್ಥಿತಿ. ತಂತ್ರಜ್ಞಾನ ದಾಪುಗಾಲಿಟ್ಟು ನಮ್ಮ ಜೀವನಶೈಲಿ ಬದಲಾದ ಮೇಲಂತೂ ಮತ್ತಷ್ಟು ಹೊಸಹೊಸ ಇಂಗ್ಲಿಷ್ ಪದಗಳು. ಇದು ಒಳ್ಳೆಯ ಬೆಳವಣಿಗೆಯೇ? ಖಂಡಿತ ಅಲ್ಲ. ಈ ನಿಟ್ಟಿನಲ್ಲಿ ‘ವಿಜಯವಾಣಿ’ ಪತ್ರಿಕೆಯು ಮಾಡಿದ ಒಂದು ಕಿರುಪ್ರಯತ್ನ- ಓದುಗರಿಂದಲೇ ಪರ್ಯಾಯ ಪದಗಳನ್ನು ಆಹ್ವಾನಿಸಿ, ಬಂದ ಪ್ರವೇಶಿಕೆಗಳಲ್ಲಿ ಯಾವ ಪದ ಸೂಕ್ತವಾಗಿದೆ, ಮೂಲ ಪದಕ್ಕೆ ಸಮೀಪದ ಅರ್ಥವನ್ನು ಹೊಮ್ಮಿಸುವಂತಿದೆ ಎಂದು ನಿರ್ಣಯಿಸಿ ಈ 28 ದಿನಗಳಲ್ಲಿ 28 ಇಂಗ್ಲಿಷ್ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಗುರುತಿಸಿ ಪ್ರಕಟಿಸಿದ್ದು ನಿಜವಾಗಿ ಸ್ತುತ್ಯರ್ಹ ಕೆಲಸ. ‘ಈ ಕಾರ್ಯಕ್ಕೆ ನುರಿತ ಭಾಷಾತಜ್ಞರೊಬ್ಬರ ಪೂರ್ವಸಹಾಯ ಅಗತ್ಯ. ಅದು ತಮ್ಮಿಂದ ಸಾಧ್ಯ ಎನ್ನುವುದು ನಮ್ಮ ನಂಬಿಕೆ’ ಎಂದು ಪತ್ರಿಕೆಯ ಸಹಾಯಕ ಸಂಪಾದಕ ರಾಜಶೇಖರ ಜೋಗಿನ್ಮನೆ ಅವರು ಆವತ್ತು ನನಗೆ ವಾಟ್ಸಾ್ಯಪ್ ಸಂದೇಶ ಕಳಿಸಿದ್ದಾಗ ಮಾತ್ರ ನನಗೊಮ್ಮೆ ದಿಗಿಲಾಯ್ತು. ‘ರಾಜ್ಯವ್ಯಾಪಿ ಅತ್ಯಧಿಕ ಪ್ರಸಾರವುಳ್ಳ ಕನ್ನಡದ ಪ್ರಮುಖ ಪತ್ರಿಕೆ ಕೈಗೊಂಡಿರುವ ಈ ಯೋಜನೆಯನ್ನು ನಾನು ನಿರ್ವಹಿಸಬಲ್ಲೆನೇ’ ಎಂದು ಚಿಂತೆಯಾಯ್ತು. ಏಕೆಂದರೆ, ಹೊಟ್ಟೆಪಾಡಿಗಾಗಿ ಅಮೆರಿಕದಲ್ಲಿ ತಂತ್ರಜ್ಞಾನ ವೃತ್ತಿಯಲ್ಲಿರುವ ನನಗೆ ಭಾಷಾತಜ್ಞನೆಂದು ಕರೆಸಿಕೊಳ್ಳುವ ಯಾವ ಅರ್ಹತೆಯೂ ಇಲ್ಲ. ಹೋಗಲಿ, ಕನ್ನಡ ನನ್ನ ಮಾತೃಭಾಷೆಯೂ ಅಲ್ಲ! ಆದರೂ ಒಬ್ಬ ಭಾಷಾಜಿಜ್ಞಾಸುವಾಗಿ, ಬೇರೆಬೇರೆ ಭಾಷೆಗಳ ಸೂಕ್ಷ್ಮವಿಚಾರಗಳಲ್ಲಿ ವಿಶೇಷ ಆಸಕ್ತಿಯುಳ್ಳವನಾಗಿ ಇದು ನನಗೆ ಇಷ್ಟವಾಗಬಹುದಾದ ಚಟುವಟಿಕೆ ಎಂದುಕೊಂಡು ಮಾನಸಿಕ ಸಿದ್ಧತೆ ನಡೆಸಿ ಒಪ್ಪಿಗೆ ಸೂಚಿಸಿದೆ.
ಸುಮಾರು 50 ಇಂಗ್ಲಿಷ್ ಪದಗಳ ಪಟ್ಟಿಯನ್ನೂ ಪತ್ರಿಕೆಯವರೇ ಒದಗಿಸಿದ್ದರು. ಓದುಗರ ಪದಗಳನ್ನು ಸ್ವೀಕರಿಸುವ ವಾಟ್ಸಾ್ಯಪ್ ಸಂಖ್ಯೆಯೂ ಪತ್ರಿಕೆಯದೇ. ಪ್ರತಿದಿನದ ಪ್ರವೇಶಿಕೆಗಳನ್ನು ಕ್ರೋಡೀಕರಿಸಿ ನನಗೆ ವಾಟ್ಸಾ್ಯಪ್ನಲ್ಲಿ ಕಳುಹಿಸುವ ಏರ್ಪಾಡು. ವಿಜಯವಾಣಿ ಸುದ್ದಿಮನೆಯ ಉದ್ಯೋಗಿ ರವೀಂದ್ರ ದೇಶಮುಖ್ ನನಗೆ ಸಂಪರ್ಕಬಿಂದು. ಅವರು ಸಂಜೆ 4ರ ಬಳಿಕ (ಭಾರತೀಯ ಸಮಯ) ಪಟ್ಟಿ ಕಳುಹಿಸುವರು. ನನಗಿಲ್ಲಿ ಆಗ ಬೆಳಗಿನ ಸಮಯ. ಮುಂಜಾನೆದ್ದು ಕನ್ನಡದ್ದೊಂದು ಒಳ್ಳೆಯ ಕೆಲಸ ಮಾಡುವ ಸುಯೋಗ. ಅಭಿಯಾನದ ಶುಭಾರಂಭಕ್ಕೆ ಓಜ್ಚಿkಠಠಿಚ್ಟಠಿ ಒಳ್ಳೆಯ ಪದವೆಂದು ಅದನ್ನೇ ಆಯ್ದುಕೊಂಡೆವು. ‘ಇದೇನೂ ಸ್ಪರ್ಧೆಯಲ್ಲ, ಬಹುಮಾನವಿಲ್ಲ, ಹೆಚ್ಚೆಂದರೆ ಹತ್ತಿಪ್ಪತ್ತು ಪ್ರವೇಶಿಕೆಗಳು ಬರಬಹುದು’ ಎಂದಷ್ಟೇ ನಮ್ಮ ನಿರೀಕ್ಷೆಯಿದ್ದದ್ದು. ಅದು ಹುಸಿಯಾಯ್ತು. ಮೊದಲ ದಿನವೇ ನೂರಾರು ಪ್ರವೇಶಿಕೆಗಳು ಬಂದವು. ಓದುಗರ ಭಾಗವಹಿಸುವಿಕೆಯ ಉತ್ಸಾಹ ದಿನೇ ದಿನೇ ಹೆಚ್ಚಿತು. ಶಾಲೆಮಕ್ಕಳು, ಗೃಹಿಣಿಯರು, ವಕೀಲರು, ವೈದ್ಯರು... ಎಲ್ಲ ವರ್ಗಗಳ ಜನರೂ ಪಾಲ್ಗೊಳ್ಳತೊಡಗಿದರು. ಪತ್ರಿಕೆಯಲ್ಲಿ ಹೆಸರು ಪ್ರಕಟವಾಗುವುದು ಯಾರಿಗೆ ತಾನೆ ಖುಷಿಯಿಲ್ಲ! ಪದ ಕಟ್ಟುವಿಕೆಯಲ್ಲಿ ಹೊಸ ಹೊಳಹುಗಳು ಕಾಣಿಸಿಕೊಂಡಷ್ಟೂ ಹುರುಪು ಹೆಚ್ಚಿತು. ಇಂಗ್ಲಿಷ್ ಪದದ ಮೂಲ ಅರ್ಥ, ಬಳಕೆ, ವ್ಯುತ್ಪತ್ತಿ ಮುಂತಾದುವನ್ನು ವಿಶ್ಲೇಷಿಸಬೇಕಾದ್ದರಿಂದ ನನಗೂ ಹೊಸ ಕಲಿಕೆ. ಆಕ್ಸ್ಫರ್ಡ್, ಕೋಲಿನ್ಸ್, ಮೇರಿಯಂ ವೆಬ್ಸ್ಟರ್ ಮುಂತಾದ ಇಂಗ್ಲಿಷ್ ಶಬ್ದಕೋಶಗಳನ್ನು ತೆರೆದು ಸಾಧ್ಯವಾದಷ್ಟೂ ನಿಖರ ಮಾಹಿತಿ ಒದಗಿಸಬೇಕೆಂಬ ಆಶಯ. ಒಟ್ಟಿನಲ್ಲಿ ಕನ್ನಡ ಪದ ಕಟ್ಟುವ ಈ ಚಟುವಟಿಕೆಯನ್ನು ಎಲ್ಲರೂ ಆನಂದಿಸಿದ್ದಾರೆನ್ನುವುದು ಸತ್ಯ.
ಓದುಗರ ಪ್ರತಿಕ್ರಿಯೆಗಳಲ್ಲೂ ಅದು ವ್ಯಕ್ತವಾಗುತ್ತಿತ್ತು. ‘ಮೊನ್ನೆ ನಮ್ಮ ನೃಪತುಂಗ ಕನ್ನಡಕೂಟದ ರಾಜ್ಯೋತ್ಸವ ಸಮಾರಂಭದಲ್ಲಿ ನಿರೂಪಕಿಯಾಗಿದ್ದೆ. ಈ ಸರಣಿಯಲ್ಲಿ ರ್ಚಚಿತವಾದ ಪದಗಳನ್ನು ಸಭಿಕರಿಗೆ ಪ್ರಶ್ನೆಯಂತೆ ಕೇಳಿ ವಿವಿಧ ಉತ್ತರಗಳನ್ನು ಪಡೆದೆ. ಎಲ್ಲರೂ ಆನಂದಿಸಿದರು. ಕನ್ನಡ ಪದರಚನೆಗೆ ತೊಡಗಿಕೊಂಡರು...’ ಎಂದು ಅಟ್ಲಾಂಟಾ ನಿವಾಸಿ ಅಮೆರಿಕನ್ನಡಿತಿ ಶ್ರುತಿ ಪ್ರದೀಪ್ ತಿಳಿಸಿದರು. ಐಸ್ಕ್ರೀಮ್ೆ ತಂಗೆನೆ ಪದ ತುಂಬ cಠಿಛಿ ಆಗಿದೆ ಎಂದು ಬೆಂಗಳೂರಿನ ರೂಪಶ್ರೀ ಬರೆದರು. ಆದರೆ cಠಿಛಿಅನ್ನು ಕನ್ನಡದಲ್ಲಿ ಹೇಗೆ ಹೇಳುವುದು ಗೊತ್ತಿಲ್ಲವೆಂದು ಅವರೇ ಒಪ್ಪಿಕೊಂಡರು. ಇಂಗ್ಲಿಷ್ ಪದಗಳು ನಮ್ಮನ್ನು ಎಷ್ಟು ಆವರಿಸಿಕೊಂಡಿವೆ ಎನ್ನುವುದಕ್ಕೆ ಅದೇ ಸಾಕ್ಷಿ. ‘ಅ್ಚ್ಞಗೆ ಉಲಿವರಸೆ ಪದ ಬಹುಯೋಗ್ಯವಾಗಿದೆ, ಪಕ್ಷಿಗಳಲ್ಲೂ ಒಂದೇ ಪ್ರಭೇದದವು ಬೇರೆಬೇರೆ ಭೌಗೋಳಿಕ ಪ್ರದೇಶದವು ಬೇರೆಬೇರೆ ರೀತಿಯಲ್ಲಿ ಉಲಿಯುತ್ತವೆ..’ ಎಂದು ಪಕ್ಷಿತಜ್ಞ, ವಿರಾಜಪೇಟೆಯ ಡಾ.ಎಸ್.ವಿ.ನರಸಿಂಹನ್ ಅಭಿಪ್ರಾಯ. ಅವರಿನ್ನು ತಮ್ಮ ಬರಹಗಳಲ್ಲಿ ಉಲಿವರಸೆ ಪದವನ್ನೇ ಬಳಸಿಯಾರು! ನಿಜ, ಈ ಚಟುವಟಿಕೆ ಪದಗಳನ್ನು ಮೆಚ್ಚುವುದಕ್ಕಷ್ಟೇ ಸೀಮಿತವಾಗಬಾರದು, ಬಳಸತೊಡಗಬೇಕು. ಅ್ಚ್ಞ ಬದಲಿಗೆ ಸ್ವರಶೈಲಿ ಪದವನ್ನು ನಾನೇ ಒಂದು ಲೇಖನದಲ್ಲಿ ಬಳಸಿದೆ, ತುಂಬ ಖುಷಿಯೆನಿಸಿತು. ಬೆಂಗಳೂರಿನಲ್ಲಿ ಖ್ಟಚ್ಛ್ಛ್ಚ ್ಜಞ ಬಗೆಗಿನ ಸುದ್ದಿಯೊಂದರಲ್ಲಿ ವಿಜಯವಾಣಿ ಪತ್ರಿಕೆಯೂ ಸಂಚಾರಸಿಕ್ಕು ಪದವನ್ನು ಬಳಸಿತು. ‘ಪ್ರಪಂಚದಲ್ಲಿ ನೀನು ನಿರೀಕ್ಷಿಸುವ ಬದಲಾವಣೆಯು ನಿನ್ನಿಂದಲೇ ಆರಂಭವಾಗಲಿ’ ಎಂಬ ಸೂಕ್ತಿ ಹೇಳುವುದೂ ಅದನ್ನೇ ತಾನೆ?
ಅಂದಮಾತ್ರಕ್ಕೇ ನಾವೆಲ್ಲ ಸೇರಿ ಕಟ್ಟಿದ ಈ ಪದಗಳೇ ಅಂತಿಮ ವೆಂದಾಗಲೀ, ಇವುಗಳನ್ನೇ ತತ್ಕ್ಷಣದಿಂದ ಬಳಸಬೇಕು ಎಂಬ ಕಟ್ಟಪ್ಪಣೆಯಾಗಲೀ ಇಲ್ಲ. ಇವಿಷ್ಟೇ ಇಂಗ್ಲಿಷ್ ಪದಗಳಿಗೆ ಕನ್ನಡ ಪರ್ಯಾಯಗಳು ಬೇಕಿರುವುದೂ ಅಲ್ಲ. ಆದರೆ, ಅಭ್ಯಾಸವಾಗಿಬಿಟ್ಟಿದೆಯೆಂದೋ ಪ್ರತಿಷ್ಠೆಗೆಂದೋ ಇಂಗ್ಲಿಷ್ ಪದಗಳನ್ನೇ ಬಳಸುವುದಕ್ಕಿಂತ, ಸೂಕ್ತವಾದ ಕನ್ನಡ ಪದಗಳನ್ನು ಬಳಸುವಂತೆ, ಮರೆತೇಹೋಗಿರುವ ಕನ್ನಡ ಪದಗಳನ್ನು ಮತ್ತೆ ಮುನ್ನೆಲೆಗೆ ತರುವಂತೆ, ಅವಶ್ಯವಿದ್ದಲ್ಲಿ ಹೊಸ ಪದಗಳನ್ನು ರಚಿಸಿಕೊಳ್ಳುವಂತೆ ಆಲೋಚಿಸುವುದಕ್ಕೆ ಒತ್ತು-ಉತ್ತೇಜನ ಕೊಡುವುದಷ್ಟೇ ಇದರ ಆಶಯ. ಇಲ್ಲಿ ರ್ಚಚಿತವಾದ, ಆರಿಸಲ್ಪಟ್ಟ ಪದಗಳು ಕೆಲವರಿಗೆ ಇಷ್ಟವಾಗಿರಲಿಕ್ಕಿಲ್ಲ, ಸಮಂಜಸ ಎನಿಸಿರಲಿಕ್ಕಿಲ್ಲ. ಚಿಂತೆಯಿಲ್ಲ. ಇದೇ ಜಾಡಿನಲ್ಲಿ ಮುಂದುವರೆದು ಹೆಚ್ಚು ಸೂಕ್ತ ಪದಗಳನ್ನು ಕಂಡುಕೊಳ್ಳಬಹುದು. ಭಾಷಾತಜ್ಞರು, ವಿದ್ವಾಂಸರು ಕೈಜೋಡಿಸಿದರೆ ಇದನ್ನು ಮತ್ತಷ್ಟು ರಚನಾತ್ಮಕವಾಗಿಸಬಹುದು. ಇದೇನಿದ್ದರೂ ಒಂದು ಕಿರುಪ್ರಯತ್ನ. ಯಾವುದೇ ಸುದೀರ್ಘ ಪಯಣವಾದರೂ ಸರಿಯಾದ ದಿಸೆಯಲ್ಲಿಟ್ಟ ಮೊದಲ ಹೆಜ್ಜೆಯಿಂದ ಆರಂಭವಾಗುವಂತೆ ಇದೊಂದು ಸದುದ್ದೇಶದ ಪ್ರಯಾಣ. ಈ ಪಥದಲ್ಲಿ ಯಥಾಶಕ್ತಿ ಮುನ್ನಡೆಯೋಣ. ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.