

ನಾವು ಸೃಷ್ಟಿಯ ಮೂಲವಾದ ಪರಮಾತ್ಮನೊಂದಿಗೆ ನಮ್ಮ ಅಂತರಂಗದಲ್ಲಿ ಸಂಬಂಧವನ್ನು ಬೆಳೆಸಿಕೊಂಡಾಗ, ನಮ್ಮ ಮನಸ್ಸಿನಲ್ಲಿ ಸಕಲ ಸೃಷ್ಟಿಯೆಡೆಗೆ ಪ್ರೇಮ, ತಾದಾತ್ಮ್ಯ ಹಾಗೂ ಸದ್ಭಾವನೆಗಳು ಮೂಡುತ್ತವೆ. ಆಗ ನಮ್ಮಿಂದ ಪರಿಸರ ಸಂರಕ್ಷಣೆಯು ಸ್ವಯಂ ಸಹಜವಾಗಿ ಆಗುತ್ತದೆ. ಈ ಪಥದಲ್ಲಿ ಸಮರ್ಥ ಹೆಜ್ಜೆಗಳನ್ನು ಇರಿಸಬೇಕಾಗಿರುವುದು ಇಂದಿನ ಅಗತ್ಯ.
ತಾಪಮಾನ ಏರಿಕೆ, ಹವಾಮಾನ ವೈಪರೀತ್ಯ, ವಿವಿಧ ಸಸ್ಯ-ಪ್ರಾಣಿ ವರ್ಗಗಳ ಅಳಿಯುವಿಕೆ, ಓಝೆೊನ್ ಪದರದಲ್ಲಿ ರಂಧ್ರ, ಅಮೇಜಾನ್ ಕಾಡುಗಳಲ್ಲಿ ಕಾಡ್ಗಿಚ್ಚು, ಆಸ್ಟ್ರೇಲಿಯಾದಲ್ಲಿನ ಪೊದೆ ಕಿಚ್ಚು, ಭಾರತದ ಕರಾವಳಿ ಪ್ರದೇಶಗಳಲ್ಲಿನ ನೆರೆ ಹಾಗೂ ಭೂಕುಸಿತಗಳು ಮತ್ತು ನದಿಗಳ ಬತ್ತುವಿಕೆ, ಇತ್ಯಾದಿ ನೈಸರ್ಗಿಕ ದುರಂತಗಳು ಇಂದಿನ ನಮ್ಮ ವಾರ್ತಾಪತ್ರಿಕೆಗಳಲ್ಲಿ ಮುಖ್ಯಾಂಶಗಳಾಗಿ ಆಗಾಗ ಎದ್ದು ಕಾಣುತ್ತಿವೆ. ಅದರ ಜತೆಗೆ ಸಾಂಕ್ರಾಮಿಕವಾದ ಉಸಿರಾಟ ಸಂಬಂಧಿ ರೋಗಗಳು, ಅಸಾಂಕ್ರಾಮಿಕವಾದ ಕ್ಯಾನ್ಸರ್ ಮತ್ತು ಮಾನಸಿಕ ಒತ್ತಡ ಸಂಬಂಧಿ ಸಮಸ್ಯೆಗಳ ವಾರ್ತೆಗಳೂ ಇಂದು ನಮ್ಮ ನಾಯಕರ ಹಾಗೂ ಸಾರ್ವಜನಿಕರ ಗಮನವನ್ನು ತೀವ್ರವಾಗಿ ಸೆಳೆಯುತ್ತಿವೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಜಾಗತಿಕ ಹಾಗೂ ರಾಷ್ಟ್ರಗಳ ಮಟ್ಟದಲ್ಲಿ ಅನೇಕ ಸಮಿತಿಗಳು ರಚಿಸಲ್ಪಟ್ಟಿವೆ, ಹಲವಾರು ಸಮಾವೇಶಗಳು ನಡೆದಿವೆ ಮತ್ತು ಎಷ್ಟೋ ಮಸೂದೆಗಳು ಅಂಗೀಕರಿಸಲ್ಪಟ್ಟಿವೆ. ಆದರೂ ಈ ದಿಶೆಯಲ್ಲಿ ಸಾಧಿಸಲ್ಪಟ್ಟ ಯಶಸ್ಸು ಅತ್ಯಲ್ಪವಾಗಿದೆ! ಇಂತಹ ಹತಾಶ ಸನ್ನಿವೇಶದಲ್ಲಿ, ಇಂತಹ ಹವಾಮಾನ ವೈಪರೀತ್ಯಗಳು ಮತ್ತು ಅದರಿಂದ ಜಗತ್ತಿನ ಜೀವರಾಶಿಗಳ ಮೇಲೆ ಉಂಟಾಗುವ ದುರಂತಮಯ ಪರಿಣಾಮಗಳಿಗೆ, ಸನಾತನ ಧರ್ಮದಲ್ಲಿ ಏನಾದರೂ ಪರಿಹಾರಗಳಿವೆಯೇ? ಈ ಕುರಿತಾಗಿ ಈ ಲೇಖನದಲ್ಲಿ ನಾವು ಪರಿಶೀಲಿಸೋಣ.
ಇಂದು ಜಗತ್ತನ್ನು ಕಾಡುತ್ತಿರುವ ಎಲ್ಲ ಸಮಸ್ಯೆಗಳಿಗೆ ಸನಾತನ ಧರ್ಮದ ಉಪನಿಷತ್ತುಗಳಲ್ಲಿ ಪರಿಹಾರಗಳಿವೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಂಡು ಅಳವಡಿಸಿಕೊಂಡಾಗ ಮಾತ್ರವೇ ಅವುಗಳಿಂದ ಪ್ರಯೋಜನವಾಗುತ್ತದೆ. ಸನಾತನ ಧರ್ಮದ ಪ್ರಕಾರ ಸೃಷ್ಟಿಯಲ್ಲಿ ಮೂರು ರೀತಿಯ ವ್ಯೋಮ (ಆಕಾಶ) ಗಳಿವೆ; ಹಾಗೂ ಪ್ರತಿಯೊಂದು ವ್ಯೋಮಕ್ಕೂ ತನ್ನದೇ ಆದ ವಾತಾವರಣವಿದೆ. ಮೊದಲನೆಯದು ಪಂಚ ಮಹಾಭೂತಗಳಾದ ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿಗಳಿಂದಾದ ಭೌತಿಕ ವ್ಯೋಮ; ಇದನ್ನು ‘ಭೂತಾಕಾಶ’ವೆಂದು ಕರೆಯುತ್ತಾರೆ. ಇದೇ ನಮ್ಮ ಸ್ಥೂಲ ಜಗತ್ತು. ಭೌತಿಕ ಕಾಯಗಳಿಂದ ಕೂಡಿದ ಈ ಭೂತಾಕಾಶವನ್ನು ನಾವು ನಮ್ಮ ಇಂದ್ರಿಯಗಳ ಮೂಲಕ ಅನುಭವಿಸಬಹುದಾಗಿದೆ.
ಎರಡನೆಯದು, ‘ಚಿತ್ತಾಕಾಶ’. ಭೂತಾಕಾಶದಲ್ಲಿಯೇ ಅಂತರ್ಗತವಾಗಿರುವ ಚಿತ್ತಾಕಾಶವು ಸೂಕ್ಷ್ಮೇಂದ್ರಿಯಗಳಾದ ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂಕಾರಗಳ ಸಂಕೀರ್ಣ. ಮನಸ್ಸು ಯೋಚನೆ ಮತ್ತು ಭಾವನೆಗಳ ಆಗರ; ಚಿತ್ತವು ನೆನಪುಗಳ ಭಂಡಾರ; ಬುದ್ಧಿಯು ವಿವೇಚನಾ ಸಾಮರ್ಥ್ಯದ ಕೇಂದ್ರ ಮತ್ತು ಅಹಂಕಾರವು ತನ್ನನ್ನು ತಾನು ಸ್ಥೂಲ ಜಗತ್ತು ಅಥವಾ ಭೂತಾಕಾಶದೊಂದಿಗೆ ಗುರುತಿಸಿಕೊಳ್ಳುತ್ತದೆ. ಚಿತ್ತಾಕಾಶವು ಸೂಕ್ಷ್ಮ ಜಗತ್ತಾಗಿದ್ದು, ಇದನ್ನು ಸೂಕ್ಷ್ಮೇಂದ್ರಿಯಗಳಿಂದ ಮಾತ್ರವೇ ಗ್ರಹಿಸಬಹುದು. ಭೌತಿಕ ಪಂಚಮಹಾಭೂತಗಳು ಚಿತ್ತಾಕಾಶದಲ್ಲಿಯೂ ತಮ್ಮ ಅಸ್ತಿತ್ವವನ್ನು ಹೊಂದಿದ್ದು, ‘ತನ್ಮಾತ್ರ’ಗಳಾಗಿ ಜ್ಞಾನೇಂದ್ರಿಯಗಳ (ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ) ಗ್ರಹಣಶಕ್ತಿಗೆ ಕಾರಣವಾಗಿವೆ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೇ ಈ ತನ್ಮಾತ್ರಗಳು. ಆಕಾಶಕ್ಕೆ ಶಬ್ದ, ವಾಯುವಿಗೆ ಸ್ಪರ್ಶ, ಅಗ್ನಿಗೆ ದೃಷ್ಟಿ, ಜಲಕ್ಕೆ ರುಚಿ ಹಾಗೂ ಭೂಮಿಗೆ ಗಂಧಗಳು ತನ್ಮಾತ್ರಗಳು. ಹೀಗೆ, ಸೂಕ್ಷ್ಮವಾದ ಜ್ಞಾನೇಂದ್ರಿಯಗಳು ಸ್ಥೂಲವಾದ ಕಮೆಂದ್ರಿಯಗಳಿಗೆ ತಮ್ಮ ಕಾರ್ಯಗಳನ್ನೆಸಗಲು ಅನುವು ಮಾಡಿಕೊಡುತ್ತವೆ. ಈ ಕಾರಣದಿಂದಲೇ ನಾವು ಸ್ಥೂಲ ಜಗತ್ತಿನಲ್ಲಿ ನಾಲಿಗೆಯಿಂದ ಮಾತು, ಕೈಗಳಿಂದ ಕೆಲಸ, ಕಾಲುಗಳಿಂದ ಚಲನೆ, ವಿಸರ್ಜನಾಂಗಗಳಿಂದ ತ್ಯಾಜ್ಯ ವಿಸರ್ಜನೆ ಹಾಗೂ ಜನನಾಂಗಗಳಿಂದ ಸಂತಾನೋತ್ಪತ್ತಿಗಳನ್ನು ಮಾಡಲು ಸಾಧ್ಯವಾಗಿದೆ.
ಕೊನೆಯದಾಗಿ, ಮೇಲಿನ ಸ್ಥೂಲ ಮತ್ತು ಸೂಕ್ಷ್ಮ ವ್ಯೋಮಗಳಿಗೆ ಆಧಾರವಾಗಿರುವುದು ಸೂಕ್ಷ್ಮಾತಿಸೂಕ್ಷ್ಮವಾದ ‘ಚಿದಾಕಾಶ’. ಇದು, ತನ್ನದೇ ಆದ ಇತರ ಯಾವುದೇ ಗುಣಲಕ್ಷಣಗಳನ್ನು ಹೊಂದಿರದೆ, ಕೇವಲ ತನ್ನ ಹಾಗೂ ತನ್ನೊಳಗಿರುವ ಸ್ಥೂಲ ಮತ್ತು್ತ ಸೂಕ್ಷ್ಮ ಜಗತ್ತುಗಳ ‘ಅಸ್ತಿತ್ವ’ದ ಅರಿವು ಅಥವಾ ಪ್ರಜ್ಞೆಯನ್ನು ಮಾತ್ರ ಹೊಂದಿದೆ. ಉಳಿದೆರಡು ಜಗತ್ತುಗಳು ಇದರೊಳಗೇ ಅಡಕವಾಗಿರುವುದರಿಂದ ಚಿದಾಕಾಶವು ಸರ್ವವನ್ನೂ ಬಲ್ಲದು. ಆದರೆ ಅದು, ಅವುಗಳಲ್ಲಿ ನಡೆಯುವ ಯಾವುದೇ ವಿದ್ಯಮಾನಗಳ ಪ್ರಭಾವಕ್ಕೆ ಸಿಲುಕದಿರುವ ವಿಶೇಷ ಲಕ್ಷಣವನ್ನು ಪಡೆದಿದೆ. ಹೀಗೆ, ಚಿದಾಕಾಶದ ಸ್ವರೂಪವು ಪರಿಪೂರ್ಣ ಪ್ರಜ್ಞೆ ಅಥವಾ ಪ್ರಜ್ಞಾನ.
ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ತನ್ನನ್ನು ತಾನು ಈ ಪರಮ ಪ್ರಜ್ಞೆಯೆಂದೇ ಗುರುತಿಸಿಕೊಂಡು, ಭೌತಿಕ ಹಾಗೂ ಸೂಕ್ಷ್ಮ ಜಗತ್ತುಗಳು ತನ್ನ ಪ್ರಜ್ಞೆಯ ಪರಿವರ್ತಿತ ರೂಪಗಳೇ ಆಗಿವೆಯೆಂದು ಹೀಗೆ ವಿವರಿಸುತ್ತಾನೆ:
ಭೂಮಿರಾಪೋನಲೋ ವಾಯುಃ ಖಂ ಮನೋ ಬುದ್ಧಿರೇವ ಚ |
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ || (7.4)
‘ಭೂಮಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರವೆಂಬ ಎಂಟು ವಿಧಗಳಾಗಿ ನನ್ನ ಪ್ರಕೃತಿಯು ವಿಭಜಿಸಲ್ಪಟ್ಟಿದೆ. (ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶಗಳು- ಸ್ಥೂಲ ಜಗತ್ತು, ಮನಸ್ಸು, ಬುದ್ಧಿ ಮತ್ತು ಅಹಂಕಾರಗಳು- ಸೂಕ್ಷ್ಮ ಜಗತ್ತು.)’
ಮತ್ತಃ ಪರತರಂ ನಾನ್ಯತ್ಕಿಂಚಿದಸ್ತಿ ಧನಂಜಯ |
ಮಯಿ ಸರ್ವಮಿದಂ ಪ್ರೋತಂ ಸೂತ್ರೇ ಮಣಿಗಣಾ ಇವ || (7.7)
‘ಓ ಧನಂಜಯ! ನನಗಿಂತ ಮಿಗಿಲಾದುದು ಬೇರಾವುದೂ ಇಲ್ಲ. ಒಂದೇ ದಾರದಲ್ಲಿ ಹೇಗೆ ಎಲ್ಲ ಮಣಿಗಳೂ ಪೋಣಿಸಲ್ಪಟ್ಟಿರುವೆಯೋ, ಹಾಗೆಯೇ ಸಕಲ ಸೃಷ್ಟಿಗೂ ನಾನೇ ಆಧಾರವಾಗಿದ್ದೇನೆ’.
ಲೇಖನದ ಪ್ರಾರಂಭದಲ್ಲಿ ಪ್ರಸ್ತಾಪಿಸಲ್ಪಟ್ಟ ಪ್ರಕೃತಿ ವಿಕೋಪಗಳಿಗೂ ಮತ್ತು ಈ ಮೂರು ವ್ಯೋಮಗಳಾದ ಭೂತಾಕಾಶ, ಚಿತ್ತಾಕಾಶ ಹಾಗೂ ಚಿದಾಕಾಶಗಳಿಗೂ ಮಧ್ಯೆ ಇರುವ ಸಂಬಂಧವೇನು? ಪರಿಸರ ಸಂರಕ್ಷಣೆಯ ಇಂದಿನ ನಮ್ಮ ಬಹುತೇಕ ಪರಿಶ್ರಮಗಳು ಪಂಚ ಮಹಾಭೂತಗಳಿಂದಾದ ಸ್ಥೂಲ ಜಗತ್ತಿನ ಅಥವಾ ಭೂತಾಕಾಶದ ಸಂರಕ್ಷಣೆಗೆ ಮಾತ್ರ ಸಂಬಂಧಿಸಿವೆ. ಎಂದರೆ, ಸ್ಥೂಲ ಜಗತ್ತಿನಲ್ಲಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಜಲ ಮಾಲಿನ್ಯ ಮತ್ತು ಭೂಮಾಲಿನ್ಯಗಳಿಂದ ಉಂಟಾಗುವ ಹವಾಮಾನ ವೈಪರೀತ್ಯಗಳ ಮೇಲೆಯೇ ನಮ್ಮ ದೃಷ್ಟಿ ನೆಟ್ಟಿದೆ. ಆದರೆ, ಈಗಾಗಲೇ ನಾವು ತಿಳಿದಿರುವಂತೆ, ಸ್ಥೂಲ ಜಗತ್ತು ಅಥವಾ ಭೂತಾಕಾಶವು ಚಿತ್ತಾಕಾಶದ ಬಾಹ್ಯ ಪ್ರತಿಬಿಂಬ ಮಾತ್ರ. ಮೇಲಿನ ಎಲ್ಲ ಮಾಲಿನ್ಯಗಳಿಗೂ ಕಾರಣವಾಗಿರುವ ನಮ್ಮ ಕಾರ್ಯಗಳಿಗೆ ಮೂಲವಾಗಿರುವುದು, ನಮ್ಮ ಮನಸ್ಸಿನ ಮಾಲಿನ್ಯವೇ ಅಲ್ಲವೇ? ಆದ್ದರಿಂದ, ಭೂತಾಕಾಶ ಸಂಬಂಧಿತ ವೈಪರೀತ್ಯಗಳನ್ನು ಸರಿಪಡಿಸಬೇಕಾದರೆ, ಚಿತ್ತಾಕಾಶದಲ್ಲಿ ನಮ್ಮ ಯೋಚನೆ-ಭಾವನೆಗಳ ಸ್ತರದಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕು.
ಏಕೆಂದರೆ, ನಮ್ಮ ಬಾಹ್ಯ ವರ್ತನೆಯು ನಮ್ಮ ಅಂತರಂಗದ ಯೋಚನೆಗಳ ಪ್ರತಿಫಲನವೇ ಆಗಿದೆ. ಒಂದು ವೇಳೆ ನಮ್ಮ ಅಂತರಂಗದಲ್ಲಿ ಕೇವಲ ಸ್ವಾರ್ಥ-ಸ್ವಪ್ರಯೋಜನ ಭಾವನೆಗಳೇ ತುಂಬಿದ್ದು, ಪರಿಸರವನ್ನು ನಮಗೆ ಮಾತ್ರವಲ್ಲದೆ ಸರ್ವಜೀವಿಗಳಿಗೂ ಉಪಯೋಗವಾಗುವಂತೆ ಸಂರಕ್ಷಿಸಿ, ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಭಾವನೆಯೇ ಇಲ್ಲದಿದ್ದರೆ, ಅದಕ್ಕೆ ತಕ್ಕ ತಪ್ಪು ಕಾರ್ಯಗಳೇ ನಮ್ಮಿಂದ ಆಗುತ್ತವೆ. ಆದ್ದರಿಂದ ನಮ್ಮ ಹೊರಗಿನ ಪರಿಸರವನ್ನು ಶುದ್ಧವಾಗಿಟ್ಟುಕೊಳ್ಳಬೇಕಾದರೆ, ಮೊದಲು ನಮ್ಮ ಅಂತರಂಗದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪರಿಶುದ್ಧ ಯೋಚನೆಗಳಿಂದ ಉಗಮವಾಗುವ ಉದಾತ್ತ-ನಿಸ್ವಾರ್ಥ ಭಾವಗಳು ಹಾಗೂ ಅವುಗಳಿಂದ ಪ್ರೇರಿತವಾದ ದಯೆ-ಸಹಾನುಭೂತಿಯುಕ್ತ ಕಾರ್ಯಗಳು ಮಾತ್ರವೇ ಬಾಹ್ಯ ಪ್ರಪಂಚದಲ್ಲಿ ಸರಿಯಾದ ಪರಿವರ್ತನೆಯನ್ನು ತರಬಲ್ಲವು. ಸರಿಯಾದ ಯೋಚನೆ-ಭಾವನೆ ಮತ್ತು ಸರಿಯಾದ ಮಾತು-ಕೃತಿಗಳೊಂದಿಗೆ ನಮ್ಮ ಅಂತರಂಗವನ್ನು ಪರಿಶುದ್ಧವಾಗಿಟ್ಟುಕೊಳ್ಳಲು ನಾವು ನಿಶ್ಚಯಿಸಿದಾಗ ಮಾತ್ರವೇ, ನಾವು ಬಾಹ್ಯ ಪರಿಸರವನ್ನು ಸಂರಕ್ಷಿಸಬಹುದು. ನಾವು ಈ ನಿಟ್ಟಿನಲ್ಲಿ ಎಂದಾದರೂ ಯೋಚಿಸಿ ವಿಮರ್ಶೆ ಮಾಡಿದ್ದೇವೆಯೇ?
ಅಂತಿಮವಾಗಿ, ಸ್ಥೂಲ ಮತ್ತು ಸೂಕ್ಷ್ಮ ಜಗತ್ತುಗಳಿಗೆ ಆಶ್ರಯವಾಗಿರುವ ಸರ್ವವ್ಯಾಪೀ ಪರಮ ಪ್ರಜ್ಞೆಯಾದ ಚಿದಾಕಾಶ ಅಥವಾ ಪರಬ್ರಹ್ಮನ ಸಂಪರ್ಕವನ್ನು ಪಡೆಯದೆ, ನಾವು ಚಿತ್ತಾಕಾಶದಲ್ಲಿಯಾಗಲೀ (ನಮ್ಮ ಮನಸ್ಸುಗಳಲ್ಲಿ), ತನ್ಮೂಲಕ ಭೂತಾಕಾಶದಲ್ಲಿಯಾಗಲೀ (ನಮ್ಮ ಬಾಹ್ಯ ಜಗತ್ತಿನಲ್ಲಿ) ಪರಿವರ್ತನೆಯನ್ನು ತರಲು ಸಾಧ್ಯವಿಲ್ಲ. ವಿಶ್ವದ ಅಂತರಂಗ-ಬಹಿರಂಗಗಳನ್ನು ವ್ಯಾಪಿಸಿರುವ ದೈವಪ್ರಜ್ಞೆಯೊಂದಿಗೆ ಏಕತ್ವವನ್ನು ಅನುಭವಿಸಿದಾಗ ಮಾತ್ರವೇ, ಆ ದೈವಪ್ರಜ್ಞೆಯ ಪ್ರತಿರೂಪವೇ ಆದ ಸೃಷ್ಟಿಯ ಪ್ರತಿ ಕಣಕಣ ಹಾಗೂ ಸಕಲ ಜೀವರಾಶಿಗಳ ಮೇಲೆ ನಮ್ಮಲ್ಲಿ ಸದ್ಭಾವನೆ- ಸಹಾನುಭೂತಿ-ಗೌರವಗಳು ಸಹಜವಾಗಿ ಮೂಡುತ್ತವೆ. ಆಗ ಮಾತ್ರ ನಾವು ಬಹಿರಂಗದಲ್ಲಿ ಸರಿಯಾದ ಕಾರ್ಯಗಳನ್ನು ಮಾಡಲು ಸಾಧ್ಯ. ಹೇಗೆ ನಮ್ಮನ್ನು ನಾವು ಸಂಪೂರ್ಣ ದೇಹದೊಂದಿಗೆ ಗುರುತಿಸಿಕೊಂಡಾಗ, ದೇಹದ ಭಾಗಗಳಾದ ಕೈ, ಕಾಲು, ಕಣ್ಣು, ಕಿವಿ, ಮೂಗು ಮುಂತಾದ ಅಂಗಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತೇವೆಯೋ, ಹಾಗೆಯೇ, ಸಕಲ ಸೃಷ್ಟಿಗೆ ಆಧಾರವಾಗಿರುವ ದೈವಪ್ರಜ್ಞೆಯೊಂದಿಗೆ ನಾವು ಏಕತ್ವವನ್ನು ಅನುಭವಿಸಿದಾಗ, ಸೃಷ್ಟಿಯ ಕಣಕಣದೊಂದಿಗೆ ಪ್ರೇಮ-ಸಹಾನುಭೂತಿಯಿಂದ ವರ್ತಿಸುತ್ತೇವೆ. ಆಗ ನಾವು ನಮ್ಮ ಪರಿಸರಕ್ಕೆ ಹಾನಿಯುಂಟುಮಾಡುವ ಯಾವ ಕಾರ್ಯಗಳನ್ನೂ ಮಾಡುವುದಿಲ್ಲ. ಈ ರೀತಿಯಲ್ಲಿ ಮಾತ್ರ, ನಮ್ಮ ಋಣಾತ್ಮಕ ಯೋಚನೆ ಹಾಗೂ ಕಾರ್ಯಗಳಿಂದ ಸಂಭವಿಸಿರುವ ಚಿತ್ತಾಕಾಶ-ಭೂತಾಕಾಶಗಳ ಮಾಲಿನ್ಯಗಳನ್ನು ನಾವು ಹೋಗಲಾಡಿಸಬಹುದು.
ಇದರ ಸಾರವೆಂದರೆ, ನಾವು ಸೃಷ್ಟಿಯ ಮೂಲವಾದ ಪರಮಾತ್ಮನೊಂದಿಗೆ ನಮ್ಮ ಅಂತರಂಗದಲ್ಲಿ ಸಂಬಂಧವನ್ನು ಬೆಳೆಸಿಕೊಂಡಾಗ, ನಮ್ಮ ಮನಸ್ಸಿನಲ್ಲಿ ಸಕಲ ಸೃಷ್ಟಿಯೆಡೆಗೆ ಪ್ರೇಮ, ತಾದಾತ್ಮ್ಯ ಹಾಗೂ ಸದ್ಭಾವನೆಗಳು ಮೂಡುತ್ತವೆ. ಆಗ ನಮ್ಮಿಂದ ಪರಿಸರ ಸಂರಕ್ಷಣೆಯು ಸ್ವಯಂ ಸಹಜವಾಗಿ ಆಗುತ್ತದೆ.
ಕಠೋಪನಿಷತ್ತಿನಲ್ಲಿ ಮೃತ್ಯುದೇವತೆಯಾದ ಯಮನು ಬಾಲಜಿಜ್ಞಾಸುವಾದ ನಚಿಕೇತನಿಗೆ, ಆತ್ಮ ಅಥವಾ ಸರ್ವವ್ಯಾಪೀ ಪ್ರಜ್ಞೆಯ ಕುರಿತು ಹೀಗೆ ಹೇಳುತ್ತಾನೆ:
ಹಂಸಃ ಶುಚಿಷದ್ವಸುರಾಂತರಿಕ್ಷಸ-
ದ್ಧೋತಾ ವೇದಿಷದತಿಥಿರ್ದುರೋಣಸತ್ |
ನೃಷದ್ವರಸದೃತಸದ್ವ್ಯೋಮಸದಬ್ಜಾ ಗೋಜಾ
ಋತಜಾ ಅದ್ರಿಜಾ ಋತಂ ಬೃಹತ್ || (2.2.2)
‘ಅಮರನಾದ ಆತ್ಮನೇ ಆಗಸದಲ್ಲಿರುವ ಪ್ರಕಾಶಮಾನ ಸೂರ್ಯನೂ, ಸುತ್ತಮುತ್ತ ಬೀಸುವ ಗಾಳಿಯೂ, ಮಂಟಪದಲ್ಲಿ ಬೆಳಗುವ ಜ್ಯೋತಿಯೂ, ಮನೆಯಲ್ಲಿ ವಾಸಿಸುತ್ತಿರುವ ಅತಿಥಿಯೂ ಆಗಿದ್ದಾನೆ. ಅವನೇ ಎಲ್ಲ ಮಾನವ-ದೇವತೆಗಳಲ್ಲಿಯೂ, ಆಕಾಶದಲ್ಲಿಯೂ ನೆಲೆಸಿದ್ದಾನೆ. ನೀರಿನಲ್ಲಿ ಜನಿಸುವ ಮೀನಿನಲ್ಲೂ, ಭೂಮಿಯಲ್ಲಿ ಹುಟ್ಟುವ ಸಸ್ಯಗಳಲ್ಲೂ, ಬೆಟ್ಟಗಳಿಂದ ಧುಮುಕುವ ನದಿಗಳಲ್ಲೂ ಇರುವ ಅವನು, ಎಂದೂ ಬದಲಾಗದ ಅನಂತ ಸತ್ಯವಾಗಿದ್ದಾನೆ’.
ಯಮನು ಮುಂದುವರಿದು,
ಅಗ್ನಿರ್ಯಥೈಕೋ ಭುವನಂ ಪ್ರವಿಷ್ಟೋ
ರೂಪಂ ರೂಪಂ ಪ್ರತಿರೂಪೋ ಬಭೂವ |
ಏಕಸ್ತಥಾ ಸರ್ವಭೂತಾಂತರಾತ್ಮಾ
ರೂಪಂ ರೂಪಂ ಪ್ರತಿರೂಪೋ ಬಹಿಶ್ಚ || (2.2.9)
‘ಹೇಗೆ ಒಂದೇ ಅಗ್ನಿಯು ಪ್ರಪಂಚವನ್ನು ಪ್ರವೇಶಿಸಿ ಬೇರೆ ಬೇರೆ ವಸ್ತುಗಳನ್ನು ದಹಿಸುವಾಗ ಬೇರೆ ಬೇರೆ ರೂಪಗಳನ್ನು ಪಡೆದುಕೊಳ್ಳುವುದೋ, ಅಂತೆಯೇ ಒಂದೇ ಆತ್ಮವು ಬೇರೆ ಬೇರೆ ರೂಪಗಳಲ್ಲಿ ನೆಲೆಗೊಂಡಾಗ, ವಿವಿಧ ರೂಪಗಳನ್ನು ಪಡೆದುಕೊಳ್ಳುತ್ತದೆ’.
ಹೀಗೆ ಸನಾತನ ಧರ್ಮವು, ಸರ್ವವ್ಯಾಪೀ ಚಿದಾಕಾಶ ಅಥವಾ ಪರಮಾತ್ಮನೊಂದಿಗೆ ನಾವು ಏಕತ್ವವನ್ನು ಸಾಧಿಸುವ ಸಂದೇಶವನ್ನು ಸಾರುವ ಮೂಲಕ, ಸೃಷ್ಟಿಯ ಪ್ರತಿಯೊಂದು ಕಣದೊಂದಿಗೆ ಅಹಿಂಸಾತ್ಮಕವಾಗಿ ನಡೆದುಕೊಳ್ಳುವ ಪರಿಯನ್ನು ಪ್ರೇರೇಪಿಸುತ್ತದೆ. ನಮ್ಮಲ್ಲಿ ಇಂತಹ ಸತ್ಯದರ್ಶನದ ಅನುಭವವಾದಾಗ ಮಾತ್ರ, ನಾವು ಜೀವಿಸುತ್ತಿರುವ ಜಗತ್ತನ್ನು ನಾವು, ಎಲ್ಲ ದುರಂತ-ವೈಪರೀತ್ಯಗಳಿಂದ ಸಂರಕ್ಷಿಸಲು ಸಾಧ್ಯ. ಸನಾತನ ಧರ್ಮವು ಸಾರುವ ಬೋಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ಅನುಷ್ಠಾನಕ್ಕೆ ತಂದಾಗ, ನಾವು ಎಲ್ಲ ರೀತಿಯ ಅಂತರಂಗ-ಬಹಿರಂಗ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು!