ಮತ್ತೆ ಕನ್ನಡಕ್ಕೆ ಸನ್ನಿ ಲಿಯೋನ್...

Sunny
Published on

ಬೆಂಗಳೂರು: ಮಾಜಿ ನೀಲಿಚಿತ್ರ ತಾರೆ ಸನ್ನಿ ಲಿಯೋನ್ ಕನ್ನಡಿಗರಿಗೆ ಹೊಸಬರೇನಲ್ಲ. ಈಗಾಗಲೇ ಪ್ರೇಮ್ ನಟನೆಯ ‘ಡಿಕೆ’ ಮತ್ತು ‘ಲವ್ ಯೂ ಆಲಿಯಾ’ ಸಿನಿಮಾಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರವರು. ಇದೀಗ ಸುದೀರ್ಘ ಆರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​ವುಡ್​ನತ್ತ ಮುಖಮಾಡಿದ್ದಾರೆ. ಅದೂ ‘ಚಾಂಪಿಯನ್’ ಅನ್ನೋ ಚಿತ್ರದ ಮೂಲಕ!

ಹೌದು, ‘ಚಾಂಪಿಯನ್’ ಸಿನಿಮಾ ಕನ್ನಡ ಮತ್ತು ಮರಾಠಿಯಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರಕ್ಕೆ ಶಾಹುರಾಜ್ ಶಿಂಧೆ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರತಂಡ ಇದೀಗ ಸದ್ದಿಲ್ಲದೆ ಸನ್ನಿ ಲಿಯೋನ್ ಅವರನ್ನು ಕರೆತಂದಿದೆ. ಕ್ರೀಡೆ ಆಧರಿತ ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದರೆ, ಅವರಿಗೆ ಸಚಿನ್ ಧನ್​ಪಾಲ್ ನಾಯಕರಾಗಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷವೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಕರೊನಾದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ಸಿನಿಮಾವನ್ನು ಮತ್ತೊಂದು ಹಂತ ಮೇಲೆಕ್ಕೆತ್ತಲು ಸನ್ನಿ ಲಿಯೋನ್ ಅವರನ್ನು ಕರೆತಂದಿದ್ದಾರೆ ನಿರ್ದೇಶಕರು. ಚಿತ್ರದ ಮೊದಲಾರ್ಧದ ಕೊನೆಯಲ್ಲಿ ಈ ಹಾಡು ಬರಲಿದ್ದು, ಅದ್ದೂರಿಯಾದ ಸೆಟ್​ನಲ್ಲಿಯೇ ಹಾಡಿನ ಚಿತ್ರೀಕರಣ ಮಾಡಲಾಗಿದೆ.

ಈಗಾಗಲೇ ಹಾಡಿನ ಶೂಟಿಂಗ್ ಸಹ ಕೊನೇ ಹಂತದಲ್ಲಿದೆ. ಇನ್ನೇನು ಜುಲೈ ಆಗಸ್ಟ್ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದೇ ಹೇಳಲಾಗುತ್ತಿದೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ತಮಿಳಿನ ‘ವೀರಮಾದೇವಿ’ ಮತ್ತು ಮಲಯಾಳಂನ ‘ರಂಗೀಲಾ’ ಚಿತ್ರಗಳಲ್ಲಿ ಸನ್ನಿ ಲಿಯೋನ್ ಬಿಜಿಯಾಗಿದ್ದಾರೆ. ಅದೆಲ್ಲದರ ನಡುವೆಯೇ ಕನ್ನಡದ ‘ಚಾಂಪಿಯನ್’ಗೂ ಸೊಂಟ ಬಳುಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net