

ಕ್ರೀಡೆಯಲ್ಲಿ ಹಾಗೂ ಬದುಕಿನಲ್ಲಿ ಕಠಿಣ ಪರಿಶ್ರಮದಿಂದ ಉತ್ತುಂಗಕ್ಕೇರಿದವರು, ಉಡಾಫೆ ಧೋರಣೆಯಿಂದ ಪಾತಾಳಕ್ಕೆ ಬಿದ್ದವರ ಉದಾಹರಣೆ ಸಾವಿರಾರು ಸಿಗುತ್ತವೆ. ಗೆದ್ದವರಿಗೂ ಬಿದ್ದವರಿಗೂ ನಡುವಿನ ಒಂದು ಸಾಮಾನ್ಯ ವ್ಯತ್ಯಾಸವೆಂದರೆ, ಅದು ಫೋಕಸ್. ಗಮನವಿಟ್ಟು ಓದಿದರೆ, ಗಮನವಿಟ್ಟು ಆಡಿದರೆ, ಗಮನವಿಟ್ಟು ದುಡಿದರೆ ಯಾವ ಸಾಧನೆಯೂ ಕಷ್ಟವಲ್ಲ.
ಅದನ್ನು ಬಿಟ್ಟು ನನಗೆ ಕಷ್ಟಗಳೇನೆಂದೇ ತಿಳಿದಿಲ್ಲ ಎಂದು ಯಾರಾದರೂ ಹೇಳಿದರೆ ಅದು ನಂಬುವ ಮಾತಲ್ಲ.
ಕಷ್ಟಗಳೆನ್ನುವುದು ಒಂದೇ ರೀತಿ ಇರುವುದಿಲ್ಲ, ಯಾವುದು ನಮಗೆ ಇಷ್ಟವಿಲ್ಲವೋ, ಅವೆಲ್ಲವೂ ಕಷ್ಟಗಳೇ. ಬಡತನ ಎನ್ನುವುದು ಕಷ್ಟ. ಹಣ ಸಂಪಾದಿಸುವುದು ಕಷ್ಟ. ಜವಾಬ್ದಾರಿ ನಿಭಾಯಿಸುವುದು ಕಷ್ಟ. ಬದುಕಿನಲ್ಲಿ ಎಲ್ಲರೂ ಸುಖವನ್ನು ಅರಸಿಕೊಂಡು ಓಡುತ್ತಿರುವಾಗ, ಯಾವುದು ನಮಗೆ ಅನುಕೂಲ ಇರುವುದಿಲ್ಲವೋ ಅದೆಲ್ಲವೂ ಕಷ್ಟವೇ.
ನಮಗೆ ಅರಿವಿಲ್ಲದ, ನಾವು ನಿರೀಕ್ಷಿಸಿರದ, ನಮಗೆ ಬೇಕಿಲ್ಲದ, ಏಕಾಏಕಿ ನಮ್ಮೆದುರು ಉದ್ಭವಿಸುವ ಕಠಿಣ ಸನ್ನಿವೇಶಗಳನ್ನು ಎದುರಿಸುವುದು ಕಷ್ಟದ ಕೆಲಸ. ಆದರೆ, ಒಂದಂತೂ ನಿಜ. ಒಂದು ಸಣ್ಣ ವಸ್ತುವಿನಿಂದ ದೊಡ್ಡ ಮಹತ್ವಾಕಾಂಕ್ಷೆಯವರೆಗೆ ಯಾವುದೂ ಅನಾಯಾಸವಾಗಿ ನಮ್ಮ ಕೈಗೆಟುಕುವುದಿಲ್ಲ. ಪ್ರತಿಯೊಂದಕ್ಕೂ ಅದಕ್ಕೆ ಅವಶ್ಯಕವಾದ ಪ್ರಯತ್ನ, ಪರಿಶ್ರಮ, ಕಷ್ಟ ಪಡಲೇಬೇಕು. ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಯಶಸ್ವಿ ಆಗಬೇಕಾದರೆ ಕಷ್ಟಪಡಲೇಬೇಕು, ನಿದ್ರೆಗೆಡಲೇ ಬೇಕು. ಓರ್ವ ಉದ್ಯಮಿ ಯಶಸ್ವಿ ಆಗಬೇಕಾದರೆ, ಓರ್ವ ಉದ್ಯೋಗಿ ತನ್ನ ವೃತ್ತಿಯಲ್ಲಿ ಉನ್ನತಿ ಸಾಧಿಸಬೇಕಾದರೆ, ಓರ್ವ ಕ್ರೀಡಾಪಟು ತನ್ನ ಆಯ್ಕೆಯ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಬೇಕಾದರೆ, ವರ್ಷಾನುಗಟ್ಟಲೆ ಶ್ರಮ ಪಡಬೇಕಾಗುತ್ತದೆ. ಹಸಿವು, ನಿದ್ರೆ, ಜೀವನದ ಹಲವು ಐಷಾರಾಮಗಳನ್ನು ತ್ಯಜಿಸಿ ಗುರಿ ಸಾಧನೆಗಾಗಿ ಹೋರಾಟ ಮಾಡಬೇಕಾಗುತ್ತದೆ. ಸಾಧನೆಯ ಹಾದಿಯಲ್ಲಿ ಮನಸ್ಸನ್ನು ವಿಚಲಿತಗೊಳಿಸುವಂಥ ಪ್ರಲೋಭನೆಗಳು ಸಾವಿರ. ಡಯೆಟ್ ಮಾಡುವವರಿಗೆ ಇವತ್ತೊಂದು ದಿನ ಸಿಹಿ ತಿಂದರೆ ಏನೂ ಆಗುವುದಿಲ್ಲ ಎಂಬಂಥ ಆಕರ್ಷಣೆಗಳು ಅವು. ಹಿಂದೆಲ್ಲ ಋಷಿಮುನಿಗಳು ಅಥವಾ ರಾಕ್ಷಸರೂ ಯಾವುದೋ ಗುರಿ ಸಾಧನೆಗಾಗಿ ತಪಸ್ಸು ಮಾಡುವಾಗ ಅವರನ್ನು ವಿಚಲಿತಗೊಳಿಸಲು ರಂಭೆ, ಊರ್ವಶಿ, ಮೇನಕೆ ಬರುತ್ತಿದ್ದರು. ಈಗ ಅಂಥ ಅಪ್ಸರೆಯರ ಅವಶ್ಯಕತೆ ಇಲ್ಲ. ಏಕೆಂದರೆ ನಮ್ಮೆಲ್ಲರ ಬಳಿಯೂ ಮೊಬೈಲ್ ಫೋನ್, ಟಿವಿ ಇದೆಯಲ್ಲ, ಅದೇ ಸಾಕು! ಇದೇ ಕಾರಣಕ್ಕೆ ತಿಳಿದವರು ಫೋಕಸ್ ಎಂಬ ಪದ ಯಾವಾಗಲೂ ಬಳಸುತ್ತಾರೆ. ಅಂದರೆ, ಆಟದಲ್ಲಾಗಲೀ, ಬದುಕಿನಲ್ಲಾಗಲೀ ಗುರಿ ಮುಟ್ಟಲು ಫೋಕಸ್ ಇರಲೇಬೇಕು. ಕಾರ್ಯಸಾಧನೆ ಆಗುವವರೆಗೂ ಎಲ್ಲಿಯೂ ವಿಚಲಿತಗೊಳ್ಳದೆ, ಮಾರ್ಗ ಬದಲಿಸದೆ, ನಿರಂತರವಾಗಿ ಪ್ರಯತ್ನ ಪಡುವುದೇ ಫೋಕಸ್. ಈ ರೀತಿ ಪ್ರಯತ್ನ ಪಡುವಾಗ ನಮ್ಮ ಜೀವನಶೈಲಿಯಲ್ಲಿ ಅನೇಕ ಮಾರ್ಪಾಡು ಮಾಡಿಕೊಳ್ಳಬೇಕಾಗುತ್ತದೆ, ದೈಹಿಕವಾಗಿ ಕಠಿಣವಾದ ಶ್ರಮಗಳನ್ನು ಪಡಬೇಕಾಗುತ್ತದೆ. ಮಾನಸಿಕವಾಗಿ ಕಷ್ಟಕರವಾದ ಹಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಇದನ್ನೇ ಸಾನಿಯಾ ಮಿರ್ಜಾ ಒಂದೆಡೆ ಹೇಳುತ್ತಾರೆ. ‘ಎಲ್ಲ ಮಕ್ಕಳೂ ಬೆಳಗ್ಗೆ ಸುಖನಿದ್ರೆ ಮಾಡುತ್ತಿರುವಾಗ ನಾನು 5 ಗಂಟೆಗೆ ಎದ್ದು ಮಳೆಗಾಲ, ಚಳಿಗಾಲ ಎನ್ನದೆ ಅಭ್ಯಾಸ ಮಾಡುತ್ತಿದ್ದೆ. ಸ್ನೇಹಿತರು, ಸಹಪಾಠಿಗಳು ಸುತ್ತಾಡುತ್ತ, ಪಾನಿಪುರಿ, ಐಸ್ಕ್ರೀಮ್ ತಿನ್ನುತ್ತ, ಸಿನಿಮಾ, ಮಾಲ್ ಎಂದು ಎಂಜಾಯ್ ಮಾಡುತ್ತಿದ್ದರೆ ನಾನು ಟೆನಿಸ್ ಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದೆ...’ ಇದು ಸಾನಿಯಾ ಮಾತ್ರವಲ್ಲ, ಸೈನಾ ನೆಹ್ವಾಲ್, ವಿರಾಟ್ ಕೊಹ್ಲಿ, ವಿಶ್ವನಾಥನ್ ಆನಂದ್... ಇವರೆಲ್ಲರೂ ಇದೇ ರೀತಿ ಗುರಿ ಮುಟ್ಟಿದವರು. ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗ ಏನೂ ಪ್ರಯತ್ನ ಮಾಡದೆ, ಕೇವಲ ಅದೃಷ್ಟದ ಬಲದಿಂದ ರಾಫೆಲ್ ನಡಾಲ್ ಅಥವಾ ವಿರಾಟ್ ಕೊಹ್ಲಿ ಆಗುವುದಿಲ್ಲ. ‘ವಿರಾಟ್ ಕೊಹ್ಲಿ ಬಾಲಿವುಡ್ ನಟಿಯನ್ನು ಮದುವೆ ಆಗಿದ್ದಾರೆ, ಅವರು ಕುಡಿಯುವ ನೀರು ಕೂಡ ವಿದೇಶದಿಂದ ಆಮದಾಗುತ್ತದೆ. ಅವರು ಕೋಟಿಗಟ್ಟಲೆ ಬೆಲೆಯ ಕಾರಿನಲ್ಲಿ ಓಡಾಡುತ್ತಾರೆ, ಅರಮನೆಯಂಥ ಬಂಗಲೆಯಲ್ಲಿ ವಾಸ ಮಾಡುತ್ತಾರೆ’ ಎಂಬ ಸಂಗತಿಗಳು ಜನರಿಗೆ ವಿಸ್ಮಯವೆಂಬಂತೆ ತೋರುತ್ತದೆ. ತುಂಬ ಮಕ್ಕಳು ‘ವಿರಾಟ್ ಕೊಹ್ಲಿಯಂತೆ ಆಡಬೇಕು ಎನ್ನುವುದಕ್ಕಿಂತ ವಿರಾಟ್ ಕೊಹ್ಲಿಯಂತೆ ಆಗಬೇಕು’ ಎಂದು ಆಸೆ ಪಡುತ್ತಾರೆ. ಆದರೆ, ಕೊಹ್ಲಿ ಈ ಹಂತ ತಲುಪುವುದಕ್ಕಾಗಿ ಎಷ್ಟು ಮಣ್ಣು ಹೊತ್ತಿದ್ದಾರೆ ಎನ್ನುವುದನ್ನು ಜನ ಮರೆಯುತ್ತಾರೆ. ಪ್ರತೀ ವರ್ಷ ಕೋಟ್ಯಂತರ ಮಕ್ಕಳು ಕ್ರಿಕೆಟ್, ಟೆನಿಸ್, ಬ್ಯಾಡ್ಮಿಂಟನ್, ಈಜು, ಚೆಸ್ ಮತ್ತಿತರ ಕ್ರೀಡೆಗಳ ತರಬೇತಿಗೆ ಸೇರಿಕೊಳ್ಳುತ್ತಾರೆ. ಹಣ ಖರ್ಚು ಮಾಡುತ್ತಾರೆ. ಅಭ್ಯಾಸ ಮಾಡುತ್ತಾರೆ. ಆದರೆ, ಆ ಕೋಟಿ ಮಕ್ಕಳಲ್ಲಿ ವಿರಾಟ್ ಕೊಹ್ಲಿ, ಲಿಯಾಂಡರ್ ಪೇಸ್, ಲಕ್ಷ್ಯ ಸೇನ್, ಪಿ.ವಿ. ಸಿಂಧು, ತಾನ್ಯಾ ಸಚ್ದೇವ್ ಆಗುವುದು ಒಬ್ಬಿಬ್ಬರು ಮಾತ್ರ. ಅಂದರೆ, ಕನಸಿನ ಹಾದಿಯಲ್ಲಿ ಎಡವಿದರೂ, ಬಿದ್ದರೂ, ಅಪನಂಬಿಕೆ, ಅವಮಾನಗಳಿಂದ ಜರ್ಜರಿತರಾದರೂ ಪ್ರಯತ್ನ ಬಿಡದೆ, ಹಟ ಬಿಡದೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ದೃಢಮನಸ್ಸಿನಿಂದ ಮುನ್ನುಗ್ಗುವುದೇ ನಿಜವಾದ ಫೋಕಸ್.
ಕೆಲವು ಆಟಗಾರರು ರಾತ್ರಿ ಮಲಗುವಾಗಲೂ ಬ್ಯಾಟ್, ರಾಕೆಟ್ ಪಕ್ಕದಲ್ಲಿಟ್ಟುಕೊಂಡೇ ಮಲಗುತ್ತಾರೆ. ಅಂಥ ಅಟ್ಯಾಚ್ವೆುಂಟ್ ಬೆಳೆಸಿಕೊಳ್ಳುವುದೂ ಮುಖ್ಯ. ರಾಹುಲ್ ದ್ರಾವಿಡ್ ಬಗ್ಗೆ ಒಂದು ಸ್ವಾರಸ್ಯಕರ ಕಥೆಯಿದೆ. ಅವರು ಒಮ್ಮೆ ಕಾಲೇಜಿಗೆ ಬ್ಯಾಟಿಂಗ್ ಗ್ಲೌಸ್ (ಕೈಗವಸು) ಹಾಕಿಕೊಂಡು ಬಂದಿದ್ದರಂತೆ. ಗ್ಲೌಸ್ ಹಾಕಿಕೊಂಡೇ ಕಷ್ಟಪಟ್ಟು ನೋಟ್ಸ್ಗಳನ್ನು ಬರೆದುಕೊಳ್ಳುತಿದ್ದರಂತೆ. ಅವರ ಸಹಪಾಠಿಗಳಿಗೆಲ್ಲ ಕುತೂಹಲ. ಇದೇನಿದು ತಾನು ಕ್ರಿಕೆಟಿಗ ಎಂದು ತೋರಿಸಿಕೊಳ್ಳುವ ಶೋಕಿಯೇ? ಹೊಸ ಸ್ಟೈಲೇ? ಅಥವಾ ಹುಡುಗಿಯರನ್ನು ಇಂಪ್ರೆಸ್ ಮಾಡುವ ಪ್ರಯತ್ನವೇ? ಇಲ್ಲವಾದರೆ ಗ್ಲೌಸ್ ಹಾಕಿಕೊಂಡೇ ಬರೆಯುವ ಒದ್ದಾಟ ಯಾಕೆ ಎಂಬ ಪ್ರಶ್ನೆ. ಅದಕ್ಕೆ ದ್ರಾವಿಡ್ ಬಳಿ ಉತ್ತರವೂ ಇತ್ತು. ‘ನಾನು ಯಾವಾಗಲೂ ಬಳಸುವ ಗ್ಲೌಸ್ ಹಳೆಯದಾಗಿ, ಸಡಿಲವಾಗಿದೆ. ಬ್ಯಾಟಿಂಗ್ ಮಾಡುವಾಗ ಗ್ಲೌಸ್ ಸಡಿಲ ಇರುವ ಕಾರಣ ಕೈಯಲ್ಲಿ ಬಿಗಿಯಾಗಿ ಕೂರುತ್ತಿಲ್ಲ. ನಾನು ಬ್ಯಾಟಿಗೆ ಚೆಂಡು ತಾಗಿಸದೇ ಇದ್ದರೂ, ಬ್ಯಾಟ್ ಬೀಸುವ ಸಂದರ್ಭದಲ್ಲಿ ಗ್ಲೌಸ್ ಕೈಯಲ್ಲಿ ಆ ಕಡೆ ಈ ಕಡೆ ಜಾರಿ ಕಸಕ್ಕನೆ ಸದ್ದು ಬರುತ್ತಿತ್ತು. ಈ ಸದ್ದು ಕೇಳಿ ಚೆಂಡು ಎಡ್ಜ್ ಆಗಿದೆ ಎಂದು ವಿಕೆಟ್ ಕೀಪರ್ಗಳು ಅಪೀಲ್ ಮಾಡುತ್ತಿದ್ದರು. ಅಂಪೈರ್ ಔಟ್ ನೀಡುತ್ತಿದ್ದರು. ಹೀಗೆಯೇ ಎರಡು ಬಾರಿ ಔಟಾದೆ. ಅದೇ ಕಾರಣಕ್ಕೆ ಹೊಸ ಗ್ಲೌಸ್ ಖರೀದಿಸಿದ್ದು, ಅದು ಕೈಗೆ ಹೊಂದಿಕೊಳ್ಳುವವರೆಗೆ ನಿರಂತರವಾಗಿ ಹಾಕಿಕೊಂಡೇ ಇರುತ್ತೇನೆ. ಇನ್ನು ಮೂರು ದಿನದಲ್ಲಿ ರಣಜಿ ಸೆಮಿಫೈನಲ್ ಇರುವ ಕಾರಣ, ಅಷ್ಟರೊಳಗೆ ಹೊಸ ಗ್ಲೌಸ್ ಕೈಗೆ ಕಂಫರ್ಟ್ ಆಗಬೇಕು. ರಾತ್ರಿ ಮಲಗುವಾಗಲೂ ಗ್ಲೌಸ್ ಬಿಚ್ಚುವುದಿಲ್ಲ’ ಎಂದು ದ್ರಾವಿಡ್ ಸಮಜಾಯಿಷಿ ನೀಡಿದ್ದರಂತೆ. ಇದು ಕ್ರೀಡಾಪಟು ಒಬ್ಬನಿಗೆ ಇರಬೇಕಾದ ಫೋಕಸ್. ಓರ್ವ ಕ್ರೀಡಾಪಟು ಯಶಸ್ವಿ ಆಗುವುದಕ್ಕೆ ಯಾವೆಲ್ಲ ರೀತಿ ಪರಿಶ್ರಮ ಪಡಬೇಕು ಎನ್ನುವುದಕ್ಕೆ ದ್ರಾವಿಡ್ಗಿಂತ ಬೇರೆಯವರನ್ನು ಹುಡುಕುವ ಅಗತ್ಯವೂ ಇಲ್ಲ. ಜೂನಿಯರ್ ಕ್ರಿಕೆಟ್ ದಿನಗಳಿಂದ ನಿವೃತ್ತರಾಗುವವರೆಗೆ ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳುವುದಕ್ಕೆ ದ್ರಾವಿಡ್ ಪಟ್ಟ ಶ್ರಮ ಎಲ್ಲರಿಗೂ ಮಾದರಿ. ಯಾವುದು ತಮ್ಮ ದೌರ್ಬಲ್ಯ ಎಂದು ಜನ ಗುರುತಿಸುತ್ತಾರೋ, ಅದನ್ನು ಸರಿಪಡಿಸಿಕೊಂಡು ಎಲ್ಲರಿಗಿಂತ ಶ್ರೇಷ್ಠತೆ ಸಾಧಿಸುವ ಛಲ ಅವರಲ್ಲಿತ್ತು. ರಣಜಿಯಲ್ಲಿ ಅವರು ಶತಕಗಳ ಮೇಲೆ ಶತಕ ಬಾರಿಸುತ್ತಿದ್ದಾಗ ‘ವಿದೇಶಗಳಲ್ಲಿ ಕಷ್ಟ’ ಎಂದು ಟೀಕಿಸಿದರು. ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾಗಳಲ್ಲಿ ಅವರು ರನ್ ಮಳೆ ಸುರಿಸಿದಾಗ ‘ಟೆಸ್ಟ್ಗೆ ಬೆಸ್ಟು. ಏಕದಿನಗಳಿಗೆ ಆಗಲ್ಲ’ ಎಂದರು. ಕೆಲವೇ ವರ್ಷಗಳಲ್ಲಿ ಏಕದಿನ ಮಾದರಿಯ ದಿಗ್ಗಜರನ್ನೂ ಮೀರಿಸುವಂತೆ ಬೆಳೆದ ಮೇಲೂ, ‘ಕೇವಲ ಬ್ಯಾಟಿಂಗ್ ಒಂದೇ ಮಾಡಿದರೆ ತಂಡದಲ್ಲಿ ಸ್ಥಾನ ಕಷ್ಟ’ ಎಂದಾಗ ವಿಕೆಟ್ ಕೀಪರ್ ಬ್ಯಾಟರ್ ಆಗಿ ರೂಪುಗೊಂಡರು. ತಾಂತ್ರಿಕವಾಗಿ ದ್ರಾವಿಡ್ ಬ್ಯಾಟಿಂಗ್ನಲ್ಲಿ ಯಾವುದೇ ಹುಳುಕು ಹುಡುಕುವುದು ಸಾಧ್ಯವೇ ಇರಲಿಲ್ಲ. ಹಾಗಾಗಿ ಬೇರೆ ವೀಕ್ನೆಸ್ಗಳನ್ನು ಹುಡುಕಿದಾಗಲೂ ದ್ರಾವಿಡ್ ಅವೆಲ್ಲವನ್ನೂ ಮೀರಿ ಬೆಳೆದರು. ಟೆಸ್ಟ್ ಹಾಗೂ ಏಕದಿನ ಎರಡೂ ಮಾದರಿಯಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ವಿರಳ ಸಾಧಕರೆನಿಸಿದರು. ಟಿ20 ಕ್ರಿಕೆಟ್ ಮುನ್ನೆಲೆಗೆ ಬಂದಾಗ ಅದಕ್ಕೂ ಸೈ ಎನಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಎಷ್ಟೇ ಎತ್ತರಕ್ಕೇರಿದ ಮೇಲೂ ಸಜ್ಜನಿಕೆ, ಕಲಿಯುವ ಆಸಕ್ತಿ ಕಾಪಾಡಿಕೊಂಡರು. ಕ್ರಿಕೆಟ್ ಜೆಂಟಲ್ವುನ್ ಆಟವಾದರೆ, ಕ್ರಿಕೆಟ್ ಆಡಿದ ಅಪ್ಪಟ ಜೆಂಟಲ್ವ್ಯಾನ್ ರಾಹುಲ್ ದ್ರಾವಿಡ್. ಇದೆಲ್ಲ ಹೇಗೆ ಸಾಧ್ಯವಾಯಿತೆಂದರೆ, ಅವರು ಯಾವತ್ತೂ ಫೋಕಸ್ ಕಳೆದುಕೊಳ್ಳಲಿಲ್ಲ. ಯಶಸ್ಸು ಅವರಿಗೆ ಮೈಮರೆವು ತರಲಿಲ್ಲ. ಹಣ, ಪ್ರಸಿದ್ಧಿ, ದಾಖಲೆಗಳ ಮೇಲೆ ದಾಖಲೆಗಳ ವಿಶ್ವಖ್ಯಾತಿ ಯಾವುದೂ ಅವರ ವ್ಯಕ್ತಿತ್ವ ಬದಲಾಯಿಸಲಿಲ್ಲ.
ನಿಜ, ಕ್ರಿಕೆಟ್ನಲ್ಲಿ ದ್ರಾವಿಡ್, ಸಚಿನ್ ತೆಂಡುಲ್ಕರ್ಗಿಂತ ಪ್ರತಿಭಾವಂತರಿದ್ದಾರೆ. ಆದರೆ, ಇವರಿಗೆ ಸಿಕ್ಕಿದ ಯಶಸ್ಸು ಉಳಿದವರಿಗೆ ಯಾಕೆ ಸಿಗಲಿಲ್ಲವೆಂದರೆ ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕು. ಹಾಗೆ ನೋಡಿದರೆ ಸಚಿನ್ಗಿಂತ ವಿನೋದ್ ಕಾಂಬ್ಳಿ ಪ್ರತಿಭಾವಂತ ಎಂಬ ಮಾತಿತ್ತು. ಆದರೆ, ಸಚಿನ್ ವಿಶ್ವಶ್ರೇಷ್ಠ ಸವ್ಯಸಾಚಿಯಾಗಿ ಬೆಳೆದರೆ, ಕಾಂಬ್ಳಿ ಅರ್ಧಹಾದಿಯವರೆಗೂ ಕ್ರಮಿಸಲಿಲ್ಲ. ಕ್ರೀಡೆಗೆ ಅಮಲೇರಿಸುವ ಗುಣವೂ ಇದೆ. ಬಡತನ, ಸೌಲಭ್ಯಗಳ ಕೊರತೆ, ಪ್ರತಿಕೂಲ ಸನ್ನಿವೇಶಗಳು, ಎಡಬಿಡದೆ ಕಾಡುವ ಅಡ್ಡಿ-ಆತಂಕಗಳ ನಡುವೆ ಪರಿಶ್ರಮ ಪಟ್ಟು ಮೇಲೆ ಬರುವ ಅನೇಕ ಕ್ರೀಡಾಪಟುಗಳು ಸಣ್ಣ-ಪುಟ್ಟ ಯಶಸ್ಸಿಗೂ ಹಾದಿ ತಪ್ಪಿಬಿಡುತ್ತಾರೆ. ಕೀರ್ತಿ ಮತ್ತು ಖ್ಯಾತಿಗಳನ್ನು ನಿಭಾಯಿಸುವುದು ಹೇಗೆಂದು ಅವರಿಗೆ ತಿಳಿದಿರುವುದಿಲ್ಲ. ಕ್ರೀಡೆಯಲ್ಲಿ ಪ್ರಸಿದ್ಧಿ, ಜನಪ್ರೀತಿಯೆನ್ನುವುದು ಇಂದು ಬಂದು ನಾಳೆ ಹೋಗುವ ನೆಂಟನಿದ್ದಂತೆ. ಆದರೆ, ನಮ್ಮ ಆಟಗಾರರು ದಿಢೀರ್ ಪ್ರಸಿದ್ಧಿ, ಜನಪ್ರಿಯತೆ ಲಭಿಸಿದಾಗ ಅದೇ ಶಾಶ್ವತ ಎಂದು ಭ್ರಮಿಸುತ್ತಾರೆ. ಜನ ಇಷ್ಟ ಪಟ್ಟಿದ್ದು ತಮ್ಮನ್ನಲ್ಲ, ತಮ್ಮಆಟವನ್ನಷ್ಟೇ ಎನ್ನುವ ಸತ್ಯ ಅವರಿಗೆ ಹೊಳೆಯುವುದಿಲ್ಲ. ಹಾಗಾಗಿ ಅವರು ತಮ್ಮ ಆಟಕ್ಕೆ ಇನ್ನಷ್ಟು ಸಾಣೆ ಹಿಡಿಯುವ ಬದಲು ಇಮೇಜ್ ಬಿಲ್ಡಪ್ಗೆ ಗಮನ ಕೊಡುತ್ತಾರೆ. ಹೇರ್ಸ್ಟೈಲ್ಗಳು ಬದಲಾಗುತ್ತವೆ. ಕೊರಳಲ್ಲಿ ಚಿನ್ನದ ಸರಪಳಿ ಕಂಗೊಳಿಸುತ್ತದೆ, ಮೈತುಂಬ ಹಚ್ಚೆಗಳು ರಾಚುತ್ತವೆ. ಉಡಾಫೆ ಮಾತುಗಳು ಹೆಚ್ಚುತ್ತವೆ. ಒಡನಾಟಗಳು ಹಾದಿ ತಪ್ಪಿಸುತ್ತವೆ. ನಿದ್ರೆ, ವ್ಯಾಯಾಮ, ಅಭ್ಯಾಸದ ವೇಳಾಪಟ್ಟಿ ಬದಲಾಗುತ್ತದೆ. ತಡರಾತ್ರಿ ಪಾರ್ಟಿಗಳು, ಸೆಲೆಬ್ರಿಟಿ ಸಖ್ಯಗಳು, ನಟಿಯರು- ಮಾಡೆಲ್ಗಳ ಫ್ರೆಂಡ್ಷಿಪ್ಗಳು ಬೆಳೆಯುತ್ತವೆ. ಇಂಥ ಪ್ರಾಪಂಚಿಕ ಆಕರ್ಷಣೆಗಳನ್ನು ಮೀರಿ ಬೆಳೆಯುವ ತೆಂಡುಲ್ಕರ್ ಸಾರ್ವಕಾಲಿಕ ಶ್ರೇಷ್ಠರೆನಿಸಿದರೆ, ಕಾಂಬ್ಳಿಯಂಥವರು ನೇಪಥ್ಯಕ್ಕೆ ಸರಿಯುತ್ತಾರೆ. ಕ್ರೀಡಾಪುಟಗಳನ್ನು ತಿರುವಿ ಹಾಕಿದರೆ, ಇಂಥ ಸಾವಿರ ಉದಾಹರಣೆಗಳು ದೊರೆಯುತ್ತವೆ. ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮ ಕೂಡ ಒಂದು ಕಾಲದಲ್ಲಿ ಪಾರ್ಟಿ, ಫ್ರೆಂಡ್ಸ್, ಬಾಲಿವುಡ್ ಮೋಹದಲ್ಲಿ ಮೈಮರೆತವರೇ. ಅದೇ ಅಮಲಿನಲ್ಲೇ ಅವರು 2011ರ ಏಕದಿನ ವಿಶ್ವಕಪ್ ಚಾಂಪಿಯನ್ ತಂಡದ ಭಾಗವಾಗುವ ಅವಕಾಶ ಕಳೆದುಕೊಂಡರು. ಆನಂತರ ಎಚ್ಚೆತ್ತುಕೊಂಡರು. ತಮ್ಮನ್ನು ತಾವು ತಿದ್ದಿಕೊಂಡರು, ‘ಕಾಂಬ್ಳಿ ಮಾದರಿ’ ತೊರೆದು ‘ತೆಂಡುಲ್ಕರ್ ಮಾದರಿ’ಗೆ ಹೊರಳಿದ ಮೇಲೆ ರೋಹಿತ್ ಶತಕ, ದ್ವಿಶತಕಗಳ ರಾಕೆಟ್ ಸಿಡಿಸಿದರು. ನಾಯಕರಾಗಿ ಟಿ20 ವಿಶ್ವಕಪ್ ಗೆದ್ದರು. ಮತ್ತೋರ್ವ ಮುಂಬೈಕರ್ ಪೃಥ್ವಿ ಷಾ ಕೆಲವು ವರ್ಷ ಕೆಳಗೆ ತೆಂಡುಲ್ಕರ್ ಉತ್ತರಾಧಿಕಾರಿ ಎಂಬಂತೆ ಬಿಂಬಿತರಾಗಿದ್ದರು. ಲಿಟಲ್ ಮಾಸ್ಟರ್ ಆಗುವ ಪ್ರತಿಭೆ ಅವರಲ್ಲಿತ್ತು. ಆದರೆ, ಸ್ವಭಾವದಿಂದ ಹಾದಿ ತಪ್ಪಿದರು. ಕಳೆದ ಆಸ್ಟ್ರೇಲಿಯಾ ಪ್ರವಾಸದ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಆಸೀಸ್ ಬ್ಯಾಟ್ಸ್ಮನ್ ಹೊಡೆದ ಚೆಂಡಿನಿಂದ ಕಾಲಿಗೆ ಭಯಂಕರ ಪೆಟ್ಟು ಬಿದ್ದ ಹಾಗೆ ನೋವು ತೋರಿಸುತ್ತ ವಿಶ್ರಾಂತಿ ಪಡೆಯಲು ಯತ್ನಿಸಿದ್ದರು. ಆಗ ಹಂಗಾಮಿ ನಾಯಕರಾಗಿದ್ದ ಅಜಿಂಕ್ಯ ರಹಾನೆ ‘ನಿನಗೆ ಯಾವ ಪೆಟ್ಟೂ ಬಿದ್ದಿಲ್ಲ. ಚೆಂಡು ಪ್ಯಾಡಿಗೆ ಬಡಿದಿದ್ದನ್ನು ನಾನೇ ಕಂಡಿದ್ದೇನೆ. ನೀನು ನಾಟಕ ಮಾಡಿದರೆ, ಇನ್ನೊಂದು ಅವಕಾಶ ಸಿಗುವುದಿಲ್ಲ’ ಎಂದು ಎಚ್ಚರಿಕೆ ಕೊಟ್ಟ ಮೇಲೆ ಫೀಲ್ಡಿಂಗ್ಗೆ ಮರಳಿದ್ದರು. ಇದೊಂದು ಉದಾಹರಣೆ ಮಾತ್ರ. ಡೆಲ್ಲಿ ಐಪಿಎಲ್ ತಂಡದ ಕೋಚ್ ಆಗಿದ್ದ ರಿಕಿ ಪಾಂಟಿಂಗ್ ಕೂಡ ಪೃಥ್ವಿ ವರ್ತನೆಯಿಂದ ರೋಸಿ ಹೋಗಿದ್ದರೆಂಬ ಮಾತಿದೆ. ಕಳಪೆ ಫಾಮ್ರ್ ನಲ್ಲಿದ್ದಾಗಲೂ ‘ಬಾರಯ್ಯ ಪ್ರಾಕ್ಟೀಸ್ ಮಾಡು’ ಎಂದರೆ ಬರುತ್ತಿರಲಿಲ್ಲ. ಒಮ್ಮೆ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋದಾಗ ಸೆಲ್ಪೀ ಕೇಳಿದ ಅಭಿಮಾನಿಗಳೊಂದಿಗೆ ಹೊಡೆದಾಡಿದ್ದರು. ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸ್ ಪಾಸ್ ಇಲ್ಲದೆ ಗೋವಾಗೆ ತೆರಳಲು ಯತ್ನಿಸಿ ಸಿಕ್ಕಿಕೊಂಡಿದ್ದರು. ಇದೀಗ ಅಶಿಸ್ತಿನ ಕಾರಣಕ್ಕಾಗಿ ಮುಂಬೈ ರಣಜಿ ತಂಡದಿಂದಲೂ ಅವರನ್ನು ಹೊರಹಾಕಲಾಗಿದೆ. ಅಂದರೆ, ಒಬ್ಬ ಕ್ರೀಡಾಪಟು ಯಾವ ರೀತಿ ದಾರಿತಪ್ಪಬಹುದು ಎಂಬುದಕ್ಕೆ ಪೃಥ್ವಿ ಉದಾಹರಣೆಯಾಗಿದ್ದಾರೆ. ಇವರ ನಂತರ ಭಾರತ ತಂಡಕ್ಕೆ ಕಾಲಿಟ್ಟ ಶುಭಮಾನ್ ಗಿಲ್, ಯಶಸ್ವಿ ಜೈಸ್ವಾಲ್ ಯಶಸ್ವಿ ಆಗುತ್ತಿರುವುದಕ್ಕೂ, ಪೃಥ್ವಿ ವೈಫಲ್ಯಕ್ಕೂ ಕಾರಣ ಒಂದೇ ಅದು ಅಶಿಸ್ತು, ಫೋಕಸ್ ಇಲ್ಲದಿರುವುದು.
ಕ್ರೀಡೆಯಲ್ಲಿ ಹಾಗೂ ಬದುಕಿನಲ್ಲಿ ಕಠಿಣ ಪರಿಶ್ರಮದಿಂದ ಉತ್ತುಂಗಕ್ಕೇರಿದವರು, ಉಡಾಫೆ ಧೋರಣೆಯಿಂದ ಪಾತಾಳಕ್ಕೆ ಬಿದ್ದವರ ಉದಾಹರಣೆ ಸಾವಿರಾರು ಸಿಗುತ್ತವೆ. ಗೆದ್ದವರಿಗೂ ಬಿದ್ದವರಿಗೂ ನಡುವಿನ ಒಂದು ಸಾಮಾನ್ಯ ವ್ಯತ್ಯಾಸವೆಂದರೆ, ಅದು ಫೋಕಸ್. ಗಮನವಿಟ್ಟು ಓದಿದರೆ, ಗಮನವಿಟ್ಟು ಆಡಿದರೆ, ಗಮನವಿಟ್ಟು ದುಡಿದರೆ ಯಾವ ಸಾಧನೆಯೂ ಕಷ್ಟವಲ್ಲ.
(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)