

ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಚನ್ನರಾಯಪಟ್ಟಣ
ಕೃಷಿ ಚಟುವಟಿಕೆಯಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆ ಹೆಚ್ಚಿದಂತೆಲ್ಲ ಜಾನುವಾರುಗಳು ಕಣ್ಮರೆಯಾದವು. ಇತ್ತ ಇಂಧನಗಳ ಬೆಲೆ ಹೆಚ್ಚಿದಂತೆಲ್ಲ ಯಂತ್ರೋಪಕರಣಗಳ ಬಾಡಿಗೆಯೂ ದುಬಾರಿಯಾಯಿತು. ಹೀಗಿರುವಾಗ ರೈತ ಕೃಷಿ ಮಾಡುವುದಾದರೂ ಹೇಗೆ? ಅನ್ನದಾತನ ಈ ಸಮಸ್ಯೆ ನೀಗಿಸುವ ಸಲುವಾಗಿ ಇಲ್ಲೊಬ್ಬ ವಿದ್ಯಾರ್ಥಿ ಸೋಲಾರ್ ಉಳುಮೆ ಯಂತ್ರ ಪರಿಚಯಿಸಿದ್ದಾನೆ. ಚನ್ನರಾಯಪಟ್ಟಣದ ನಿವಾಸಿ ಮಂಜುಳಾ ಮತ್ತು ಚಿತ್ರಕಲಾವಿದ ಎಚ್.ಎಸ್.ಮಂಜುನಾಥ್ ದಂಪತಿಯ ಪುತ್ರ ಎಂ.ರಿತೇಶ್ ಪಟ್ಟಣದ ಜ್ಞಾನಸಾಗರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಪ್ರತಿಭಾನ್ವಿತ ವಿದ್ಯಾರ್ಥಿ. ಪ್ರಸ್ತುತ ಮೈಸೂರಿನ ಪ್ರಮತಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ.
ರಿತೇಶ್ ಶಾಲೆಯಲ್ಲಿ ಓದುವ ಸಮಯದಲ್ಲಿ ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹಿರಿಬಿಳ್ತಿ ಗ್ರಾಮದ ತಾತನ ಮನೆಯಲ್ಲಿ ಸಮಯ ಕಳೆಯುತ್ತಿದ್ದ. ತಾತ ಕೃಷಿಯಲ್ಲಿ ಪಡುತ್ತಿದ್ದ ಕಷ್ಟ, ಶ್ರಮವನ್ನು ಹತ್ತಿರದಿಂದ ನೋಡುತ್ತಿದ್ದ. ಲಾಭ-ನಷ್ಟದ ಲೆಕ್ಕಾಚಾರ, ರೈತರಿಗೆ ಆಗುವ ನಷ್ಟದ ಬಗ್ಗೆ ಮಾತನಾಡಿದಾಗಲೆಲ್ಲ ಈ ಸಮಸ್ಯೆಗೆ ಏನಾದರೂ ಮಾಡಬೇಕೆಂದು ಆಲೋಚಿಸುತ್ತಿದ್ದ. ಕೊನೆಗೆ ಸೌರಶಕ್ತಿ ಬಳಸಿಕೊಂಡು ಉಳುಮೆ ಮಾಡಿದರೆ ಹೇಗೆ ಎಂಬ ಚಿಂತನೆ ಮಾಡಿದ ಪರಿಣಾಮ ‘ಸೋಲಾರ್ ಅರಾಟೂ ಫಾರ್ ಅಗ್ರಿಕಲ್ಚರ್ ಮಷಿನ್’ ರೂಪಿಸಲು ಸಾಧ್ಯವಾಗಿದೆ.
30 ಸಾವಿರ ರೂ. ಖರ್ಚು ಮಾಡಿ ಸೋಲಾರ್ ಪಟ್ಟಿ, ಬ್ಯಾಟರಿ, ಬೈಸಿಕಲ್ ವ್ಹೀಲ್, ವಿವಿಧ ಉಪಕರಣಗಳನ್ನು ಬಳಸಿಕೊಂಡು ಸೋಲಾರ್ ಉಳುಮೆ ಯಂತ್ರ ತಯಾರು ಮಾಡಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ತಯಾರಿಕೆ ಹಾಗೂ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು 10 ಸಾವಿರ ರೂ. ಪ್ರೋತ್ಸಾಹಧನ ಸಿಕ್ಕಿದೆ.
ದೆಹಲಿಯಲ್ಲಿ ನಡೆದ ವಿಜ್ಞಾನ, ತಂತ್ರಜ್ಞಾನ ಪ್ರದರ್ಶನವೊಂದರಲ್ಲಿ 600 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಂತಿಮವಾಗಿ 60 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಆ ಪಟ್ಟಿಯಲ್ಲಿ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ 8 ವಿದ್ಯಾರ್ಥಿಗಳ ಪೈಕಿ ಎಂ.ರಿತೀಶ್ ಮೊದಲಿಗರಾಗಿ ಬಹುಮಾನ ಪಡೆದ. ಈ ಯಂತ್ರದ ಮಾಡೆಲ್ಗೆ ಈಗಾಗಲೆ 2 ಕಂಪನಿಗಳಿಂದ ಬೇಡಿಕೆ ಬಂದಿದೆ ಎಂದು ರಿತೀಶ್ ತಂದೆ ಎಚ್.ಎಸ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.
ರಿತೇಶ್ 9ನೇ ತರಗತಿಯಲ್ಲಿ ಓದುತ್ತಿದ್ದ ವೇಳೆ ಕೃಷಿ ಮತ್ತು ಉಳುಮೆ ಬಗ್ಗೆ ತಿಳಿದುಕೊಂಡು ಯಂತ್ರದ ರೂಪುರೇಷೆ ಸಿದ್ಧಪಡಿಸಿಕೊಂಡ. 2 ವಾರ ಅದರಲ್ಲಿಯೇ ತೊಡಗಿಕೊಂಡ. ಕೊನೆಗೆ ಸೌರಶಕ್ತಿ ಬಳಸಿಕೊಂಡು ಉಳುಮೆ ಮಾಡಿದರೆ ಹೇಗೆ ಎಂಬ ಚಿಂತನೆ ಮಾಡಿದ್ದೇ ಈ ಆವಿಷ್ಕಾರ ಹೊರಬರಲು ಕಾರಣವಾಯಿತು.
ಸೋಲಾರ್ ಜತೆಗೆ ವಿದ್ಯುತ್ನಿಂದಲೂ ಚಾರ್ಜ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 2 ರಿಂದ 3 ಗಂಟೆ ಕೆಲಸದಲ್ಲಿ ತೊಡಗಿಕೊಳ್ಳಬಹುದಾಗಿದೆ. ಎಲ್ಲವೂ ಸಿದ್ಧಗೊಂಡ ಮೇಲೆ ಮನೆಯ ಅಂಗಳದಲ್ಲಿ ಜನರ ಸಮ್ಮುಖದಲ್ಲಿ ಹೊಸ ಯಂತ್ರದಿಂದ ಉಳುಮೆ ಮಾಡಿ ಪರೀಕ್ಷಿಸಲಾಗಿದೆ.
ವಿದ್ಯಾರ್ಥಿ ಎಂ.ರಿತೇಶ್ ಸಿದ್ಧಪಡಿಸಿದ ಸೋಲಾರ್ ಅರಾಟೂ ಫಾರ್ ಅಗ್ರಿಕಲ್ಚರ್ ಮಷಿನ್ಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿವೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ 2022ರ ಸೆಪ್ಟೆಂಬರ್ನಲ್ಲಿ 3 ದಿನ ನಡೆದ ರಾಷ್ಟ್ರ ಮಟ್ಟದ ಪ್ರದರ್ಶನದಲ್ಲಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ರಿತೇಶ್ಗೆ ‘ಇನ್ಸ್ಪೈರ್ ಅವಾರ್ಡ್ ಮಾನಕ್’ ಪ್ರಶಸ್ತಿ ಪ್ರದಾನ ಮಾಡಿದರು. ಇದಕ್ಕೂ ಮೊದಲು ಮಂಗಳೂರಿನ ಸೂರತ್ಕಲ್ನಲ್ಲಿ ಎನ್ಐಟಿಕೆ ವತಿಯಿಂದ ನಡೆದ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಇನ್ಸ್ಪೈರ್ ಅವಾರ್ಡ್ ಮಾನಕ್ ಪ್ರಶಸ್ತಿ ಲಭಿಸಿದೆ. ಮುಂದಿನ ವರ್ಷ ಜಪಾನಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವುದು ವಿಶೇಷವಾಗಿದೆ.
ನನ್ನ ತಾತನ ಜತೆಗೆ ಗ್ರಾಮೀಣ ಭಾಗದ ರೈತರ ಕೃಷಿ ಚಟುವಟಿಕೆ ಗಮನಿಸಿದಾಗ ಈ ಆಲೋಚನೆ ಬಂತು. ಖರ್ಚು-ವೆಚ್ಚ ಹಾಗೂ ಶ್ರಮವನ್ನು ಕಡಿಮೆಗೊಳಿಸುವ ಸಲುವಾಗಿ ಚಿಂತನೆ ನಡೆಸಿದೆ. ಅದರ ಫಲವಾಗಿ ಯಂತ್ರ ಸಿದ್ಧಪಡಿಸಿದೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ದೊರೆತಿರುವುದು ಉತ್ಸಾಹ ಹೆಚ್ಚಿಸಿದೆ. ಜಪಾನಿನಲ್ಲಿ ನಡೆಯುವ ಅಂತಾ ರಾಷ್ಟ್ರೀಯ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ.
| ಎಂ.ರಿತೇಶ್ ವಿದ್ಯಾರ್ಥಿ