ಪಪ್ಪಾ ಹೇಳಿದ ಮಾತು: ಮಕ್ಕಳ ಕಥೆ

Putani Story
Published on

ನನಗೆ ಗಣಿತ ವಿಷಯ ಅಂದರೆ ಬಹಳ ಕಷ್ಟವಾಗುತಿತ್ತು. ಇದರಿಂದ ಪಪ್ಪಾ ನನ್ನ ಮೇಲೆ ಸಿಟ್ಟಾಗುತ್ತಿದ್ದರು. ಒಂದು ದಿನ ನನ್ನ ತಮ್ಮ ಅನುಪನನ್ನು ಎತ್ತಿಕೊಂಡು ಮನೆಯ ಮಹಡಿಯ ಮೇಲೆ ಹೋದೆ. ಇದನ್ನ ನೋಡಿ ಪಪ್ಪಾಗೆ ಆಶ್ಚರ್ಯ ವಾಯಿತು, ಎಕೆಂದರೆ ತಮ್ಮ ನನಗಿಂತ (ದಪ್ಪ) ಭಾರವಾಗಿ ದ್ದಾನೆ ಹೇಗೆ ಎತ್ತಿಕೊಂಡು ಬಂದೆ ಎಂದು ಕೇಳಿದರು. ಕೆಳಗೆ ಯಾರೂ ಇರಲಿಲ್ಲ, ನೀವೆಲ್ಲ ಮೇಲೆ ಇದ್ದಿರಿ. ಅವನು ನನ್ನ ಪ್ರೀತಿಯ ತಮ್ಮ ಹಾಗಾಗಿ ಅವನು ನನಗೆ ಭಾರ ಅನಿಸಲಿಲ್ಲ ಎಂದು ಮರು ಉತ್ತರ ಕೊಟ್ಟೆ.

ತಕ್ಷಣ ಪಪ್ಪಾ ಅವನಷ್ಟೇ ಭಾರ ಇರುವ ಒಂದು ಕಾಳು ತುಂಬಿದ ಚೀಲವನ್ನು ತಂದು ಅದನ್ನ ಎತ್ತಲು ಹೇಳಿದರು. ನಾ ಎಷ್ಟೇ ಪ್ರಯತ್ನ ಮಾಡಿದರು ಎತ್ತಲಾಗಲಿಲ್ಲ. ಸುಮ್ಮನಾದೆ. ಅದಕ್ಕೆ ಪಪ್ಪಾ ಮುಗುಳು ನಗೆ ಬೀರಿ, ತಮ್ಮನ ಮೇಲೆ ಇಟ್ಟಿರುವ ಆ ಪ್ರೀತಿಯಿಂದಲೇ ಅವನು ನಿನಗೆ ಭಾರ ಆಗಲಿಲ್ಲ. ಈ ಕಾಳಿನ ಚೀಲದ ಮೇಲೆ ಎತ್ತಲು ಪ್ರೀತಿ ಮತ್ತು ನಿಷ್ಠೆ ಇರಲಿಲ್ಲ. ಅದೇ ರೀತಿ ನಿನಗೆ ಕಠಿಣವಾದ ಗಣಿತ ವಿಷಯವನ್ನು ಒಂದು ಸಲ ಹೆಚ್ಚು ಪ್ರೀತಿಯಿಂದ ಕಲಿತು ನೋಡು, ನಿನ್ನ ತಮ್ಮನ ಹಾಗೆ ಅದು ಕಠಿಣವಾಗದೆ ಸರಳವಾಗಿ ಬರುತ್ತದೆ ಎಂದು ತಿಳಿಸಿದರು. ಆ ಕ್ಷಣದಿಂದಲೇ ಕಠಿಣವಾದುದನ್ನೇ ಹೆಚ್ಚು ಇಷ್ಟಪಡುತಿದ್ದೇನೆ.

| ಕು.ಅಂಕಿತಾ ಚಂದ್ರಶೇಖರ ದಾದನಟ್ಟಿ, 4 ನೇ ತರಗತಿ, ಹಿರಿಯ ಪ್ರಾಥಮಿಕ ಶಾಲೆ ಢವಳೇಶ್ವರ ಮುಧೋಳ ತಾಲೂಕು, ಬಾಗಲಕೋಟೆ ಜಿಲ್ಲೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net