

| ರಘುನಾಥ್ ಡಿ.ಪಿ. ಬೆಂಗಳೂರು
ಅಂಗವೈಕಲ್ಯವನ್ನು ಮೆಟ್ಟಿನಿಂತು ಇಡೀ ದೇಶವೇ ಬೆರಗಾಗುವಂಥ ಸಾಧನೆ ಮಾಡಿ ಬೀಗಿದ್ದಾರೆ ಶೂಟರ್ ಅವನಿ ಲೇಖರ. 19 ವರ್ಷದ ಅವನಿ, ರಾಜಸ್ಥಾನದ ಈಶಾನ್ಯ ಭಾಗದವರು. ಕಾನೂನು ಪದವಿಯಲ್ಲಿ ಓದುತ್ತಿರುವ ಅವನಿ, ಪ್ಯಾರಾಲಿಂಪಿಕ್ಸ್ನಲ್ಲಿ ನೂತನ ದಾಖಲೆಯೊಂದಿಗೆ ಸ್ವರ್ಣ ಸಾಧನೆ ಮಾಡಿದರು. 2012ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಮ್ಮ11ನೇ ವಯಸ್ಸಿಗೆ ಕಾಲು ಕಳೆದುಕೊಂಡ ಅವನಿ ಲೇಖರ, ಛಲ ಬಿಡದೆ ಇತರರಂತೆ ಜೀವನ ಸಾಧಿಸಿ ಇದೀಗ ಪ್ಯಾರಾಲಿಂಪಿಕ್ಸ್ನಲ್ಲಿ ಅವಳಿ ಪದಕಗಳ ಒಡತಿಯಾಗಿದ್ದಾರೆ. ಅವನಿ ಲೇಖರ ತಮ್ಮ ತಂದೆಯವರ ಮಾರ್ಗದರ್ಶನದಲ್ಲಿ ಕ್ರೀಡೆಯನ್ನು ಆಯ್ದುಕೊಂಡರು, 2008ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದ ಶೂಟಿಂಗ್ನಲ್ಲಿ 10 ಮೀಟರ್ ಏರ್ ರೈಫಲ್ನಲ್ಲಿ ಸ್ವರ್ಣ ಜಯಿಸಿದ ಅಭಿನವ್ ಬಿಂದ್ರಾ ಅವರ ಆತ್ಮಚರಿತ್ರೆಯನ್ನು ಓದಿ ಸ್ಪೂರ್ತಿಯಾಗಿ ತೆಗೆದುಕೊಂಡ ಅವನಿ, ತಮ್ಮ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದು ಅಭ್ಯಾಸ ಆರಂಭಿಸಿದರು. ಬಿಂದ್ರ ಮಾದರಿಯಲ್ಲೇ 10 ಮೀಟರ್ ಏರ್ ರೈಫಲ್ನಲ್ಲಿ ಸ್ವರ್ಣ ಗೆದ್ದುಕೊಂಡರು. 10 ಮೀಟರ್ ಏರ್ಫೈನಲ್ ಸ್ಟಾ್ಯಡಿಂಗ್ ಎಸ್ಎಚ್-1 ವಿಭಾಗದಲ್ಲಿ ಸ್ವರ್ಣ ಗೆದ್ದರೆ, 50 ಮೀಟರ್ ರೈಫಲ್-3 ಪೊಸಿಷನ್ ಎಸ್ಎಚ್-1 ವಿಭಾಗದಲ್ಲಿ ಕಂಚಿನ ಪದಕ ಜಯಿಸಿದರು. ಸ್ಪರ್ಧಿಸಿದ ಚೊಚ್ಚಲ ಪ್ಯಾರಾಲಿಂಪಿಕ್ಸ್ನಲ್ಲಿ ಅವಳಿ ಪದಕ ಜಯಿಸುವ ಮೂಲಕ ಭಾರತೀಯ ಕ್ರೀಡಾಪ್ರೇಮಿಗಳ ಮನಗೆದ್ದರು. ಅಲ್ಲದೆ, ಒಂದೇ ಕೂಟದಲ್ಲಿ ಅವಳಿ ಪದಕ ಜಯಿಸಿದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡರು. ಅವನಿ ಅವರ ಈ ಸಾಧನೆಯನ್ನು ಗುರಿತಿಸಿದ ಭಾರತೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆ, ಟೋಕಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಸಮಾರೋಪದ ಸಮಾರಂಭದಲ್ಲಿ ಧ್ವಜಧಾರಿಯನ್ನಾಗಿ ಆಯ್ಕೆ ಮಾಡಿತ್ತು.
ಒಂದನೇ ವಯಸ್ಸಿಗೆ ಪೊಲೀಯೊಗೆ ತುತ್ತಾದ ಭವಿನಾ ಪಟೇಲ್, ಭವಿಷ್ಯದಲ್ಲಿ ಪ್ಯಾರಾಲಿಂಪಿಕ್ಸ್ನಂಥ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಯಾರು ಊಹಿಸಿರಲಿಲ್ಲ. ಪೊಲೀಯೊದಿಂದಾಗಿ ದೇಹದ ಕೆಳಭಾಗ ಸಂಪೂರ್ಣ ಅಂಗವೈಕಲ್ಯಕ್ಕೆ ತುತ್ತಾಯಿತು. ಓಡಾಡುವುದು ಕೂಡ ದುಸ್ತರ ಎನಿಸಿದ ಪರಿಸ್ಥಿತಿಯಲ್ಲಿ ಅಂಗವಿಕಲ ಶಾಲೆಗೆ ಸೇರ್ಪಡೆಗೊಂಡರು. ಗುಜರಾತ್ನ ಮೆಹಸಾನಾದಲ್ಲಿ ಮಧ್ಯಮ ಕುಟುಂಬದಲ್ಲಿ ಜನಿಸಿದ ಭವಿನಾ, ಹುಟ್ಟಿನಿಂದಲೇ ಉತ್ತಮ ಬುದ್ದಿವಂತಿಕೆ ಹೊಂದಿದ್ದರೂ ಅವರಿಗೆ ಅಂಗವೈಕಲ್ಯ ಕಾಡುತ್ತಿತ್ತು. ಭವಿನಾ ಪಟೇಲ್ ನಾಲ್ಕನೇ ವಯಸ್ಸಿದ್ದಾಗ ಅವರ ಕುಟುಂಬ ಅಹಮದಾಬಾದ್ಗೆ ಸ್ಥಳಾಂತರಗೊಂಡಿತು. ಶಾಲಾ ದಿನಗಳಲ್ಲಿ ಶಿಕ್ಷಕಿಯಾಗಬೇಕೆಂದು ಕನಸು ಕಂಡಿದ್ದ ಭವಿನಾ, ಹಲವು ಬಾರಿ ಸಂದರ್ಶನಗಳಲ್ಲಿ ತಿರಸ್ಕೃತಗೊಂಡಿದ್ದರು. ಆದರೆ, ಎದೆಗುಂದದ ಭವಿನಾ ಪಟೇಲ್, ಹೆಚ್ಚಿನ ವಿದ್ಯಾಭ್ಯಾಸದತ್ತ ಒಲವು ಹೊಂದಿದರು. ಐಟಿಐ ಸೇರ್ಪಡೆಗೊಂಡ ಬಳಿಕ ಅವರ ಕ್ರೀಡಾ ಜೀವನವೇ ಬದಲಾಯಿತು. ಅಂಗವಿಕಲ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳುವುದನ್ನು ನೋಡಿದ ಭವಿನಾ, ಕ್ರೀಡಾ ಜೀವನಕ್ಕೆ ಪ್ರವೇಶ ಪಡೆಯಲು ಅವರಿಂದಲೇ ಸ್ಪೂರ್ತಿ ಪಡೆದರು.
ಟೇಬಲ್ ಟೆನಿಸ್ನತ್ತ ಹೆಚ್ಚಿನ ಒಲವು ಹೊಂದಿದ್ದ ಭವಿನಾ, ಕಾಲೇಜು ಮಟ್ಟದಿಂದ ಹಂತ ಹಂತವಾಗಿ ಬೆಳೆದು ಬಂದರು. ಮೊದಲ ಬಾರಿಗೆ ಪಿಟಿಟಿ ಥಾಯ್ಲೆಂಡ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಂಡರು. ಈ ಟೂರ್ನಿಯಲ್ಲಿ ಬೆಳ್ಳಿ ಪದಕ ಜಯಿಸಿದ ಭವಿನಾ ಪಟೇಲ್, ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ವಿಶ್ವ ನಂ.2 ರ್ಯಾಂಕ್ ಪಟ್ಟಕ್ಕೇರಿದ ಭವಿನಾ, ಬಳಿಕ ಹಂತ ಹಂತವಾಗಿ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸುತ್ತಾ ಬಂದರು. ದೇಹದ ಕೆಳಭಾಗ ಅಂಗವೈಕಲ್ಯ ಹೊಂದಿರುವವರಿಗೆ ನೀಡಲಾಗುವ ಕ್ಲಾಸ್-4 ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭವಿನಾ ಪಟೇಲ್, 2012ರಲ್ಲಿ ಚೀನಾದ ಬೀಜಿಂಗ್ನಲ್ಲಿ ನಡೆದ ಏಷ್ಯನ್ ಪ್ಯಾರಾ ಟಿಟಿ ಚಾಂಪಿಯನ್ಷಿಪ್ನಲ್ಲಿ ಕಂಚು ಜಯಿಸಿದರು. ಅಲ್ಲಿಂದ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿದ ಭವಿನಾ 2020ರ ಟೋಕಿಯೊ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡು. ಪ್ಯಾರಾಲಿಂಪಿಕ್ಸ್ನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಟಿಟಿ ಆಟಗಾರ್ತಿ ಎಂಬ ದಾಖಲೆಯೊಂದಿಗೆ ಬೆಳ್ಳಿ ಗೆದ್ದುಕೊಂಡರು. ಇದುವರೆಗೂ 5 ಸ್ವರ್ಣ, 13 ಬೆಳ್ಳಿ ಹಾಗೂ 8 ಕಂಚಿನ ಪದಕ ಜಯಿಸಿದ್ದಾರೆ. ಭವಿನಾ ಪಟೇಲ್ ಅವರ ಪತಿ ನಿಕುಲ್ ಪಟೇಲ್ ಕೂಡ ಜೂನಿಯರ್ ಮಟ್ಟದಲ್ಲಿ ಗುಜರಾತ್ ಕ್ರಿಕೆಟ್ ತಂಡ ಪ್ರತಿನಿಧಿಸಿದವರಾಗಿದ್ದಾರೆ. ಗಂಡ ಕೂಡ ಕ್ರೀಡಾಪಟುವಾಗಿದ್ದರಿಂದ ಭವಿನಾಗೆ ಕ್ರೀಡೆಯಲ್ಲಿ ಬೆಳೆಯಲು ಮತ್ತಷ್ಟು ಪ್ರೋತ್ಸಾಹ ದಕ್ಕಿತು.