ತ್ರಿವಳಿ ಕೊಲೆಗಾರನ ಕಥೆಯಿದು

ವಿಜಯವಾಣಿ (7)
Published on

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

‘ನನ್ನ ಹೆಸರು ಉದಯನ್. ವಯಸ್ಸು 37. ತಂದೆ ಭೋಪಾಲ್​ನ ಬಿ.ಎಚ್.ಇ.ಎಲ್. ಕಾರ್ಖಾನೆಯಲ್ಲಿ ಫೋರ್​ವುನ್ ಅಗಿ ನಿವೃತ್ತಿ ಹೊಂದಿದ್ದರು. ತಾಯಿ ಮಧ್ಯಪ್ರದೇಶ ಸರ್ಕಾರದ ಉದ್ಯೋಗಿಯಾಗಿದ್ದರು. ತಂದೆ-ತಾಯಿಗೆ ನಾನೊಬ್ಬನೇ ಮಗ. ಮಧ್ಯಪ್ರದೇಶದಿಂದ ಛತ್ತೀಸ್​ಗಢ ಪ್ರತ್ಯೇಕ ರಾಜ್ಯವಾಗಿ ಬೇರ್ಪಟ್ಟಾಗ ತಾಯಿ ಅಲ್ಲಿಗೆ ವರ್ಗಾವಣೆಗೊಂಡರು. ಕುಟುಂಬ ರಾಯಪುರಕ್ಕೆ ಶಿಫ್ಟ್ ಆಯಿತು.

ನಮ್ಮದು ಶ್ರೀಮಂತ ಕುಟುಂಬ. ತಂದೆಗೆ ಭೋಪಾಲ್​ನಲ್ಲಿ ಒಂದು ಮನೆ, ರಾಯಪುರದಲ್ಲೊಂದು ಬಂಗಲೆ ಮತ್ತು ದೆಹಲಿಯಲ್ಲಿ ಒಂದು ಫ್ಲ್ಯಾಟ್ ಇತ್ತು. ನಾನು ರಾಯಪುರದಲ್ಲಿ ಪ್ರೌಢಶಾಲೆಗೆ ಸೇರಿ ಉತ್ತಮವಾಗಿ ಅಭ್ಯಾಸ ಮಾಡಿದೆ. 11ನೇ ತರಗತಿಗೆ ಬಂದಾಗ ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿ ಮೂಡಿ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಂಡೆ. 11 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಫೇಲಾಗಿ ಪೂರಕ ಪರೀಕ್ಷೆಗಳಲ್ಲಿ ಪಾಸಾದೆ. ತಂದೆ-ತಾಯಿಗೆ ನಾನು ಇಂಜಿನಿಯರ್ ಆಗಬೇಕು ಎಂದು ಆಸೆಯಿತ್ತು. ಆದರೆ ನನಗೆ ಅಲ್ಲಿ ಸೀಟು ಸಿಗಲಿಲ್ಲ. ಕಡೆಗೆ ಡಿಪ್ಲೋಮಾ ಕೋರ್ಸ್​ಗೆ ಸೇರಿದೆ. ಅಲ್ಲಿಯೂ ಓದಿನಲ್ಲಿ ಆಸಕ್ತಿ ಇರಲಿಲ್ಲ. ಸದಾಕಾಲ ಕಂಪ್ಯೂಟರ್ ಮುಂದೆ ಕುಳಿತು ಸಾಮಾಜಿಕ ತಾಣದಲ್ಲಿ ಅವರಿವರ ಜೊತೆ ಚಾಟ್ ಮಾಡುತ್ತ ಕಾಲ ಕಳೆಯುತ್ತಿದ್ದೆ. ಪ್ರತಿದಿನವೂ ಕ್ರೈಂ ಸಿನಿಮಾಗಳನ್ನು ನೋಡುತ್ತಿದ್ದೆ. ಅವುಗಳಲ್ಲಿ ಆರೋಪಿಗಳು ಗುರುತರ ಅಪರಾಧಗಳನ್ನು ಮಾಡಿಯೂ ತಪ್ಪಿಸಿಕೊಳ್ಳುವುದನ್ನು ಕಂಡು ಚಕಿತನಾಗುತ್ತಿದ್ದೆ.

ಡಿಪ್ಲೋಮಾದಲ್ಲಿ ಫೇಲಾದಾಗ ನನ್ನ ತಂದೆ-ತಾಯಿ ಬಯ್ಯುತ್ತಾರೆ ಎಂದು ಹೆದರಿ ನಕಲಿ ಅಂಕಪಟ್ಟಿ ತಯಾರಿಸಿ ಮೊದಲ ದರ್ಜೆಯಲ್ಲಿ ಪಾಸಾದೆನೆಂದು ಸುಳ್ಳು ಹೇಳಿದೆ. ಆಗ ತಂದೆ ನನಗೆ ನೌಕರಿ ಹುಡುಕಲು ಒತ್ತಾಯಿಸತೊಡಗಿದರು. ಏತನ್ಮಧ್ಯೆ ತಾಯಿಯೂ ಸೇವಾನಿವೃತ್ತಿ ಹೊಂದಿದ್ದರು. ಆರು ತಿಂಗಳಾದರೂ ನೌಕರಿ ಸಿಗದಿದ್ದಾಗ ನನ್ನನ್ನು ತಂದೆ-ತಾಯಿ ಇಬ್ಬರೂ ಪ್ರತಿದಿನವೂ ಮೂದಲಿಸತೊಡಗಿದರು. ಅವರ ಮೂದಲಿಕೆ ಹೆಚ್ಚಾದಾಗ ಅವರನ್ನು ಕೊಲ್ಲಲು ನಿರ್ಧರಿಸಿದೆ. ಸಿನಿಮಾಗಳಲ್ಲಿ ತೋರಿಸುವ ರೀತಿಯಲ್ಲಿ ಅವರನ್ನು ಕೊಂದು ಬಚಾವಾಗಬೇಕು ಎಂದು ತೀರ್ಮಾನಿಸಿದೆ.

ಒಂದು ರಾತ್ರಿ ಅವರಿಬ್ಬರೂ ತಮ್ಮ ರೂಮಿನಲ್ಲಿ ಮಲಗಿದ್ದಾಗ, ಅವರ ಮುಖಕ್ಕೆ ತಲೆದಿಂಬನ್ನು ಭದ್ರವಾಗಿ ಹಿಡಿದು ಇಬ್ಬರನ್ನೂ ಕೊಂದೆ. ಮಾರನೆಯ ದಿನ ನಮ್ಮ ಬಂಗಲೆಯ ಹಿತ್ತಲಿನಲ್ಲಿ ಎರಡು ಗುಂಡಿಗಳನ್ನು ತೋಡಿದೆ. ನಮ್ಮ ಬಂಗಲೆ ಊರ ಹೊರಗಿದ್ದುದ್ದರಿಂದ ಮತ್ತು ಮನೆಯಲ್ಲಿ ಕೆಲಸದವರು ಇಲ್ಲದ್ದರಿಂದ ನನ್ನ ಕೃತ್ಯ ಬೆಳಕಿಗೆ ಬರಲಿಲ್ಲ. ಎರಡೂ ಗುಂಡಿಗಳು ತಯಾರಾದ ಮೇಲೆ ರಾತ್ರಿಯ ವೇಳೆ ಎರಡೂ ಶವಗಳನ್ನು ಮೂಟೆಗಳಲ್ಲಿ ಹಾಕಿಕೊಂಡು ಗುಂಡಿಗಳಲ್ಲಿಟ್ಟು ಅವನ್ನು ಮುಚ್ಚಿದೆ. ಅದೇ ದಿನವೇ ಮನೆಗೆ ಬೀಗ ಹಾಕಿ ದೆಹಲಿಗೆ ಹೋಗಿ ಅಲ್ಲಿದ್ದ ನಮ್ಮ ಫ್ಲ್ಯಾಟಿನಲ್ಲಿ ವಾಸ ಮಾಡತೊಡಗಿದೆ. ದೆಹಲಿಯಲ್ಲಿ ನನಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಕಾಂಕ್ಷಾ ಎನ್ನುವ 28 ವರ್ಷದ ಬಂಗಾಳಿ ಯುವತಿ ಪರಿಚಯವಾದಳು. ಆಕೆ ಸ್ನಾತಕೋತ್ತರ ಪದವೀಧರೆಯಾಗಿದ್ದು ಅಮೆರಿಕದಲ್ಲಿ ಕೆಲಸ ಮಾಡಲು ಉತ್ಸುಕಳಾಗಿದ್ದಳು.

‘ನಾನು ನ್ಯೂಯಾರ್ಕ್​ನಲ್ಲಿ ಸಂಯುಕ್ತ ರಾಷ್ಟ್ರ ಸಂಘಟನೆಯಲ್ಲಿ ಸಲಹೆಗಾರನಾಗಿ ಕೆಲಸ ಮಾಡುತ್ತಿದ್ದೇನೆ, ಈಗಷ್ಟೇ ದೆಹಲಿಗೆ ಬಂದಿದ್ದೇನೆ, ನಿನಗೆ ನಾನು ಸಹಾಯ ಮಾಡಲು ಸಿದ್ಧ’ ಎಂದು ಅವಳಿಗೆ ಸಂದೇಶ ಕಳಿಸಿದೆ. ನನ್ನ ಮಾತನ್ನು ನಂಬಿದ ಅವಳು ನನ್ನನ್ನು ಭೇಟಿಯಾದಳು. ಅವಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರತಿದಿನವೂ ಅವಳನ್ನು ಭೇಟಿ ಮಾಡತೊಡಗಿದೆ. ಕೆಲವು ದಿನಗಳ ನಂತರ ನನಗೆ ಅವಳ ಮೇಲೆ ಪ್ರೀತಿ ಮೂಡಿತು. ‘ನಾನು ಭಾರತದಲ್ಲಿರುವವರೆಗೂ ನೀನು ನನ್ನ ಜತೆಯಲ್ಲಿಯೇ ಇರು’ ಎಂದು ಅವಳಿಗೆ ಕೇಳಿಕೊಂಡೆ. ಆಕೆ ಒಪ್ಪಿದಳು. ಒಂದು ವಾರದ ನಂತರ ಅವಳನ್ನು ಭೋಪಾಲ್​ನ ಮನೆಗೆ ಕರೆದುಕೊಂಡು ಬಂದೆ. ಅಲ್ಲಿಯೇ ನಾವಿಬ್ಬರೂ ಇರಲಾರಂಭಿಸಿದೆವು. ನಮ್ಮಿಬ್ಬರ ಮಧ್ಯೆ ದೈಹಿಕ ಸಂಬಂಧವೂ ಏರ್ಪಟ್ಟಿತು. ಭೋಪಾಲ್​ನಿಂದ ನಾವು ಬಂಕೂರಾ ಎನ್ನುವ ಊರಿನಲ್ಲಿದ್ದ ಆಕಾಂಕ್ಷಾಳ ಮನೆಗೆ ಹೋದೆವು.

ಅಲ್ಲಿ ಅವಳು ನನ್ನನ್ನು ತನ್ನ ತಂದೆ-ತಾಯಿ ಮತ್ತು ಸೋದರನಿಗೆ ಪರಿಚಯಿಸಿದಳು. ನಾನು ಅವಳ ಮನೆಯಲ್ಲಿಯೇ ಎರಡು ದಿನ ತಂಗಿದೆ. ನಾವಿಬ್ಬರೂ ಭೋಪಾಲ್​ಗೆ ಮರಳಿದ ನಂತರ ನನ್ನ ಬಗ್ಗೆ ಆಕಾಂಕ್ಷಾಗೆ ಅನುಮಾನ ಬಂದಿತು. ‘ನೀನು ಏಕೆ ಅಮೆರಿಕದ ನೌಕರಿಗೆ ಮರಳಿಲ್ಲ?’ ಎಂದು ಪ್ರಶ್ನಿಸತೊಡಗಿದಳು. ನಾನು ಹಾರಿಕೆಯ ಉತ್ತರಗಳನ್ನು ಕೊಡತೊಡಗಿದೆ. ಒಂದೂವರೆ ತಿಂಗಳ ನಂತರ ಒಂದು ದಿನ ನಾನು ಮನೆಯಲ್ಲಿ ಇಲ್ಲದಿದ್ದಾಗ ಆಕಾಂಕ್ಷಾ ನನ್ನ ಲ್ಯಾಪ್​ಟಾಪ್ ತೆಗೆದು ನೋಡಿ ನನಗೆ ಯಾವುದೇ ಕೆಲಸವಿಲ್ಲ ಎಂದರಿತಳು. ಇದಲ್ಲದೆ ನಾನು ಹಲವಾರು ಯುವತಿಯರೊಡನೆ ಸಂಪರ್ಕದಲ್ಲಿ ಇದ್ದುದ್ದನ್ನು ಅರಿತಳು. ಅಂದು ಅವಳು ನನ್ನೊಡನೆ ಜಗಳವಾಡಿ ರಂಪಾಟ ಮಾಡಿದಳು. ಹಾಗೂ ಹೀಗೂ ಅವಳನ್ನು ಸಮಾಧಾನಪಡಿಸಿದೆ.

ಒಂದು ವಾರದ ನಂತರ ಆಕೆ ನನ್ನ ಪೆಟ್ಟಿಗೆಯನ್ನು ತೆರೆದು ನನ್ನ ಕೆಲವು ಹಳೆಯ ಕಾಗದಪತ್ರಗಳು ಮತ್ತು ದಾಖಲೆಗಳನ್ನು ನೋಡಿದಳು. ನನ್ನ ತಂದೆ-ತಾಯಿಯ ಫೋಟೋ ತೋರಿಸಿ ‘ಇವರು ಯಾರು, ಎಲ್ಲಿದ್ದಾರೆ’ ಎಂದು ನೂರಾರು ಪ್ರಶ್ನೆಗಳನ್ನು ಕೇಳಿದಳು. ಅವರ ಬಗ್ಗೆಯೇ ನನ್ನನ್ನು ತೀಕ್ಷ್ಣ್ಯ ರೀತಿಯಲ್ಲಿ ಪ್ರಶ್ನಿಸಿದಳು. ಆಗ ನಾನು ಅವಳಿಗೆ ನನ್ನ ತಂದೆ-ತಾಯಿಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಿದೆ. ಗಾಬರಿಗೊಂಡ ಅವಳು ತಾನು ಇನ್ನು ಮುಂದೆ ಜತೆಯಲ್ಲಿ ಇರುವುದಿಲ್ಲವೆಂದು ಹೇಳಿ ತನ್ನ ಊರಿಗೆ ಹೊರಡಲು ರೈಲಿನ ಟಿಕೆಟ್ ಖರೀದಿಸಿದಳು. ಇನ್ನೆರಡು ದಿನಗಳ ನಂತರ ಹೊರಡುವ ರೈಲಿಗೆ ಅವಳಿಗೆ ಟಿಕೆಟ್ ಸಿಕ್ಕಿತು. ನನ್ನ ತಂದೆ-ತಾಯಿಯ ಕೊಲೆಯ ಬಗ್ಗೆ ಆಕಾಂಕ್ಷಾ ಪೊಲೀಸರಿಗೆ ತಿಳಿಸಬಹುದೆಂದು ಹೆದರಿದ ನಾನು ಅವಳನ್ನು ಕೊಲ್ಲಬೇಕೆಂದು ತೀರ್ಮಾನಿಸಿದೆ. ಅದೇ ರಾತ್ರಿ ಅವಳಿಗೆ ತಿಳಿಯದಂತೆ ಅವಳ ಆಹಾರದಲ್ಲಿ ನಿದ್ರೆಮಾತ್ರೆಯ ಪುಡಿಯನ್ನು ಬೆರೆಸಿ ಅವಳು ಗಾಢನಿದ್ರೆಯಲ್ಲಿದ್ದಾಗ ಅವಳ ಕುತ್ತಿಗೆ ಹಿಸುಕಿ ಕೊಲೆ ಮಾಡಿದೆ.

ಅವಳ ದೇಹವನ್ನು ನನ್ನ ತಂದೆ-ತಾಯಿಯ ದೇಹವನ್ನು ಹುಗಿದಂತೆ ಹುಗಿಯಲು ಬರುತ್ತಿರಲಿಲ್ಲ. ಏಕೆಂದರೆ ಭೋಪಾಲ್​ನ ನಮ್ಮ ಮನೆಯಲ್ಲಿ ಖಾಲಿ ಜಾಗವಿರಲಿಲ್ಲ. ಆಗ ನನಗೆ ಅಮೆರಿಕದ ಟಿವಿ ಧಾರಾವಾಹಿಯೊಂದರ ನೆನಪಾಯಿತು. ಅದರಲ್ಲಿ ಶವವು ಕೊಳೆತು ವಾಸನೆ ಬರಬಾರದೆಂದು ಕೊಲೆಗಾರನು ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ವಿಲೇವಾರಿ ಮಾಡಿದ್ದ ದೃಶ್ಯವಿತ್ತು. ಮಾರನೆಯ ಬೆಳಗ್ಗೆ ನಾನು ಮಾರುಕಟ್ಟೆಗೆ ಹೋಗಿ ದೊಡ್ಡ ಪ್ಲಾಸ್ಟಿಕ್ ಷೀಟ್ ತಂದೆ. ಅದರಲ್ಲಿ ಆಕಾಂಕ್ಷಾಳ ದೇಹವನ್ನು ಸುತ್ತಿದೆ. ನಂತರ ಮನೆಯಲ್ಲಿದ್ದ ಒಂದು ದೊಡ್ಡ ಸ್ಟೀಲ್ ಟ್ರಂಕನ್ನು ಖಾಲಿ ಮಾಡಿ ಅದರಲ್ಲಿ ಅವಳ ದೇಹವನ್ನು ಹಾಕಿದೆ. ಆ ಟ್ರಂಕನ್ನು ಮುಚ್ಚಿ ಅದನ್ನು ನಮ್ಮ ಮನೆಯ ಒಂದು ಕೋಣೆಯಲ್ಲಿಟ್ಟೆ. ಅದರ ಮೇಲೆ ಸಂಪೂರ್ಣವಾಗಿ ಕಾಂಕ್ರೀಟ್ ಸುರಿದು ಒಂದು ಕಲ್ಲಿನ ಚಪ್ಪಡಿಯನ್ನಿಟ್ಟೆ. ಅದು ಒಂದು ಟೇಬಲ್ ತರಹ ಕಾಣತೊಡಗಿತು. ನಾನು ಮನೆಗೆ ಬೀಗ ಹಾಕಿಕೊಂಡು ದೆಹಲಿಗೆ ಹೋದೆ.

ತನ್ನ ತಂದೆ-ತಾಯಿಯೊಡನೆ ಆಕಾಂಕ್ಷಾ ನಿರಂತರವಾಗಿ ಸಂಪರ್ಕದಲ್ಲಿದ್ದ ಕಾರಣ ಆ ಸಂಪರ್ಕವು ಕಡಿದರೆ ನನ್ನ ಕೃತ್ಯ ಬಯಲಾಗಬಹುದು ಎಂದು ಹೆದರಿದ ನಾನು ದೆಹಲಿಯಿಂದಲೇ ವಾರಕ್ಕೊಮ್ಮೆ ಅವಳ ತಾಯಿಗೆ ಅವಳೇ ಚಾಟ್ ಮಾಡಿದ ಹಾಗೆ ತಾನು ಸೌಖ್ಯವಾಗಿದ್ದೇನೆ ಎನ್ನುವ ಮೆಸೇಜ್ ಕಳಿಸುತ್ತ ಬರುತ್ತಿದ್ದೆ. ಇದಲ್ಲದೆ ಆಕಾಂಕ್ಷಾಳ ಫೇಸ್​ಬುಕ್ ಅಕೌಂಟಿನಲ್ಲಿಯೂ ಕೆಲವು ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದೆ. ಕೆಲ ಸಮಯ ಕಳೆದ ನಂತರ ಅವಳ ಮನೆಯವರು ಅವಳಿಗೆ ಫೋನ್ ಮಾಡತೊಡಗಿದರು. ನಾನು ಉತ್ತರಿಸಲೇ ಇಲ್ಲ. ಆಗ ಗಾಬರಿಗೊಂಡ ಅವಳ ತಂದೆ ಆಕಾಂಕ್ಷಾಳನ್ನು ನಾನು ಅಪಹರಿಸಿದ್ದೇನೆಂದು ಬಂಕೂರಾದ ಪೊಲೀಸರಿಗೆ ದೂರನ್ನು ಕೊಟ್ಟಿದ್ದಲ್ಲದೆ ಅವರಿಗೆ ನನ್ನ ಭೋಪಾಲ್ ವಿಳಾಸ ಕೊಟ್ಟರು. ಬಂಗಾಳದ ಪೊಲೀಸರು ನನ್ನನ್ನು ಹುಡುಕಿಕೊಂಡು ಬಂದಾಗ ನಾನು ದೆಹಲಿಯಲ್ಲಿದ್ದೆ. ಅವರು ಫೋನ್ ಲೊಕೇಷನ್ ಮೂಲಕ ನನ್ನನ್ನು ಪತ್ತೆ ಮಾಡಿದರು. ಆಕಾಂಕ್ಷಾ ಬಗ್ಗೆ ಪೊಲೀಸರು ನನ್ನನ್ನು ತೀವ್ರ ರೀತಿಯಲ್ಲಿ ಪ್ರಶ್ನಿಸಿದಾಗ ನಾನು ನಿಜ ಹೇಳಬೇಕಾಯಿತು. ಅವರು ಸ್ಥಳೀಯ ಪೊಲೀಸರ ನೆರವಿನಿಂದ ನನ್ನ ಮನೆಯಲ್ಲಿದ್ದ ಗೋರಿಯನ್ನು ಒಡೆದು ನೋಡಿದಾಗ ಅದರಲ್ಲಿ ಆಕಾಂಕ್ಷಾಳ ಶವ ಸಿಕ್ಕಿತು. ಆಗ ಬಂಕೂರಾದಲ್ಲಿ ನನ್ನ ವಿರುದ್ಧ ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣ ದಾಖಲಾಯಿತು.

ಬಂಕೂರಾದ ಪೊಲೀಸರಿಗೆ ನಾನು ರಾಯಪುರದಲ್ಲಿ ಒಂದು ವರ್ಷದ ಹಿಂದೆ ನನ್ನ ತಂದೆ-ತಾಯಿಯ ಕೊಲೆಯನ್ನು ಮಾಡಿದ್ದ ಬಗ್ಗೆ ನಾನೇ ಸ್ವಯಂಪ್ರೇರಿತನಾಗಿ ತಿಳಿಸಿದೆ. ಅವರು ಆ ಮಾಹಿತಿಯನ್ನು ರಾಯಪುರದ ಪೊಲೀಸರಿಗೆ ನೀಡಿದರು. ರಾಯಪುರ ಪೊಲೀಸರು ಭೋಪಾಲ್​ಗೆ ಬಂದು ನನ್ನನ್ನು ರಾಯಪುರದ ಬಂಗಲೆಗೆ ಕರೆದುಕೊಂಡು ಹೋದರು. ಅವರಿಗೆ ನಾನು ನನ್ನ ತಂದೆ-ತಾಯಿಯನ್ನು ಹೂತಿದ್ದ ಜಾಗವನ್ನು ತೋರಿಸಿದೆ. ಅದನ್ನು ಅಗೆದು ನನ್ನ ತಂದೆ-ತಾಯಿಯ ಅಸ್ಥಿಪಂಜರಗಳನ್ನು ವಶಪಡಿಸಿಕೊಂಡರು. ನನ್ನ ವಿರುದ್ಧ ಜೋಡಿ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡರು. ನಾನು ಆಕಾಂಕ್ಷಾಳನ್ನು ಕೊಂದಿದ್ದು ನಿಜ. ನನಗೆ ಈಗ ಪಶ್ಚಾತ್ತಾಪವಾಗಿದೆ. ನಾನು ನನ್ನ ಮೂರು ಮನೆಗಳನ್ನು ಮತ್ತು ನನ್ನ ತಾಯಿಯ ಒಡವೆಗಳನ್ನು ಮಾರಿ ಅದರಿಂದ ಬಂದ ಹಣದಿಂದ ಆಕಾಂಕ್ಷಾಳ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡುತ್ತೇನೆ. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವು ನೀಡುತ್ತೇನೆ. ನನಗೆ ದಯವಿಟ್ಟು ಮರಣದಂಡನೆಯ ಶಿಕ್ಷೆಯನ್ನು ಮಾತ್ರ ನೀಡಬೇಡಿ.

ಬಂಕೂರಾದ ನ್ಯಾಯಾಧೀಶರೊಬ್ಬರ ಮುಂದೆ ಉದಯನ್ ಈ ಹೇಳಿಕೆಯನ್ನು ನೀಡಿದ. ಆಕಾಂಕ್ಷಾಳ ಕೊಲೆ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಅವನಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು. ರಾಯಪುರದ ಜೋಡಿ ಕೊಲೆ ಪ್ರಕರಣದಲ್ಲಿ ಇನ್ನೂ ತೀರ್ಪು ಬಂದಿಲ್ಲ. ‘ಪಶ್ಚಾತ್ತಾಪವನ್ನು ಮರೆತರೆ ಜೀವನವನ್ನೇ ಕಳೆದುಕೊಂಡಂತೆ’ ಎಂದ ಅಮೆರಿಕದ ಕವಿ ಜೊನಾಥನ್ ಲಾರ್ಸನ್. ತಾನು ಮರಣದಂಡನೆಯನ್ನು ತಪ್ಪಿಸಿಕೊಳ್ಳಲೆಂದೇ ತೋರಿಕೆಯ ಪಶ್ಚಾತ್ತಾಪವನ್ನು ತೋರಿಸಿದ ಉದಯನ್, ಜೀವಿಸಲು ಅರ್ಹನಲ್ಲ ಎಂದೇ ಆಕಾಂಕ್ಷಾಳ ಮನೆಯವರ ಅಭಿಪ್ರಾಯ. ತನ್ನ ತಂದೆ-ತಾಯಿಯ ಕೊಲೆಗೆ ಉದಯನ್ ಮರಣದಂಡನೆಯನ್ನು ಪಡೆಯುವನೋ ಹೇಗೆ ಎಂದು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net