

ನನ್ನ ಕರೊನಾ ವರದಿ ಪಾಸಿಟಿವ್ ಬರುವುದಕ್ಕೂ ಮೊದಲು, ಹೊರಗಿನ ಸ್ಥಿತಿ ನೋಡಿದರೆ ಜೀವನದ ಬಗ್ಗೆಯೇ ಅನಿಶ್ಚಿತತೆ ಕಾಡುತ್ತಿತ್ತು. ಆರಂಭದಲ್ಲಿ ನನಗೂ ಕೊಂಚ ಭಯವಾಗಿತ್ತು. ಆದರೆ ಸೂಕ್ತ ಕೌನ್ಸೆಲಿಂಗ್ ಸಿಕ್ಕಿತು. ಮನೆಯಲ್ಲೇ ಇದ್ದು ಸ್ನೇಹಿತರ ಜತೆ ಮಾತನಾಡುತ್ತಿದ್ದೆ. ಹಾಗಂತ ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ನಾನು ಹೇಳುತ್ತಿಲ್ಲ. ಕೊನೇ ಕ್ಷಣದವರೆಗೂ ಆಸ್ಪತ್ರೆಗೆ ಹೋಗದೆ ನೋವು ಅನುಭವಿಸಿದವರನ್ನೂ ನಾನು ನೋಡಿದ್ದೇನೆ. ಪರಿಸ್ಥಿತಿ ಕೈ ಮೀರುತ್ತಿದೆ ಅನ್ನಿಸಿದರೆ ಸೋಂಕಿತರು ಆಸ್ಪತ್ರೆಗೆ ದಾಖಲಾಗುವುದೇ ಒಳ್ಳೆಯದು. ಸುರಕ್ಷಿತವಾಗಿರುವವರು ಫೋನ್ ಕರೆಯ ಮೂಲಕ, ಮೆಸೇಜ್ ಮಾಡುವ ಮೂಲಕ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸದ್ಯದ ಸ್ಥಿತಿ ನೋಡಿದರೆ, ವ್ಯವಸ್ಥೆಯನ್ನು ದೂಷಿಸುವುದರಿಂದ ಏನೂ ಪ್ರಯೋಜನವಿಲ್ಲ. ಆ ಬಗ್ಗೆ ಮಾತನಾಡುವುದನ್ನು ಬಿಟ್ಟು, ಸೋಂಕಿನಿಂದ ಹೊರಬರುವ ಬಗ್ಗೆ ಮಾತ್ರ ನಾವು ಗಮನಹರಿಸಬೇಕಿದೆ. ನಾವು ದೇವರಂತೂ ಅಲ್ಲ.. ಮನುಷ್ಯರಾಗಿ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮಾಡೋಣ. ಇಂಥ ಸಮಯದಲ್ಲಿ ಸ್ಟಾರ್ಡಮ್ ದುಡ್ಡು ಯಾವುದೂ ಕೆಲಸಕ್ಕೆ ಬರುವುದಿಲ್ಲ. ನಮ್ಮ ಟೈಮ್ ಚೆನ್ನಾಗಿರಬೇಕಷ್ಟೆ. ನಮ್ಮ ಅಕ್ಕಪಕ್ಕದವರು ಚೆನ್ನಾಗಿರಬೇಕು.
| ಸುದೀಪ್ ನಟ
ಮೊದಲಿಗೆ ಜ್ವರ ಬಂತು. ಅದಾದ ಬಳಿಕ ಮೈ ಕೈ ನೋವು ಶುರುವಾಯ್ತು. ನಾನು ಮತ್ತು ಕೃಷ್ಣ ಒಟ್ಟಿಗೆ ಕಾರ್ನಲ್ಲಿ ಊರಿಗೆ ಹೋಗಿದ್ದರಿಂದ ಇಬ್ಬರೂ ಕೋವಿಡ್ ಪರೀಕ್ಷೆ ಮಾಡಿಸಿದಾಗ ಇಬ್ಬರಿಗೂ ಕರೊನಾ ಇರುವುದು ದೃಢಪಟ್ಟಿತು. ಅದರಂತೆ ಮನೆಯಲ್ಲಿಯೇ ಇಬ್ಬರೂ ಐಸೋಲೇಟ್ ಆಗಿದ್ದೆವು. ಜ್ವರ ಹೆಚ್ಚಾಯಿತು. ಒಂದೆರಡು ದಿನಗಳಲ್ಲಿ ನಾಲಿಗೆ ರುಚಿ ಗ್ರಹಿಸದಂತಾಯ್ತು. ವಿಪರೀತ ಮೈಕೈ ನೋವು, ಸುಸ್ತೋ ಸುಸ್ತು. ಆದರೆ, ಕೃಷ್ಣ ಅವರಿಗೆ ಮಾತ್ರ ಮೈ ಕೈ ನೋವಷ್ಟೇ ಇತ್ತು. ಬೇರೆ ಲಕ್ಷಣಗಳು ಇರಲಿಲ್ಲ. ಮನೆಯಲ್ಲಿ ತಮ್ಮನೇ ಡಾಕ್ಟರ್ ಆಗಿರುವುದರಿಂದ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ. 14 ದಿನಗಳ ಬಳಿಕ ಕರೊನಾ ವರದಿ ನೆಗೆಟಿವ್ ಬಂತು. ಪೌಷ್ಟಿಕ ಆಹಾರ ಮತ್ತು ದೈಹಿಕ ಶ್ರಮದ ಅಭ್ಯಾಸ ಇದ್ದವರಿಗೆ ಇದು ಯಾವುದೇ ಸಮಸ್ಯೆ ಮಾಡದು. ನಿಮಗೂ ಕರೊನಾ ಬಂದರೆ ವೈದ್ಯರು ಹೇಳುವುದನ್ನು ತಪ್ಪದೇ ಪಾಲಿಸಿ. ಅನಿವಾರ್ಯವಾಗಿ ಹೊರಗಡೆ ಹೋದರೂ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಎಚ್ಚರಿಕೆಯಿಂದ ಇರಿ. ನಿತ್ಯ ವ್ಯಾಯಾಮ, ಯೋಗ, ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಇಂಥ ಸಮಯದಲ್ಲಿ ತುಂಬ ಅವಶ್ಯಕ. ಏಕೆಂದರೆ, ಕರೊನಾಕ್ಕೆ ಬಲಿಯಾದವರಲ್ಲಿ ವ್ಯಸನಿಗಳು, ಕಾಯಿಲೆಗಳು ಇದ್ದವರೇ ಹೆಚ್ಚಿದ್ದಾರೆ.
| ಮಿಲನಾ ನಾಗರಾಜ್ ನಟಿ
ಹಿರಿಯ ಅಧಿಕಾರಿಯಾಗಿ ಕರೊನಾ ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದರಿಂದ ಪ್ರತಿದಿನ ಹೆಚ್ಚೆಚ್ಚು ಜನರನ್ನು ಭೇಟಿ ಮಾಡುವುದು ನನಗೆ ಅನಿವಾರ್ಯವಾಗಿತ್ತು. ಈ ವೇಳೆ ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಕಾಪಾಡುತ್ತಿದ್ದೆ. ಆಗಾಗ ಕೈ ತೊಳೆದುಕೊಳ್ಳುತ್ತಿದ್ದೆ. ಇಷ್ಟೆಲ್ಲಾ ಜಾಗೃತವಾಗಿದ್ದರೂ ಕರೊನಾ ಬಂತು. ಪರೀಕ್ಷೆಗೊಳಪಟ್ಟು ತಕ್ಷಣದಿಂದಲೇ ಐಸೋಲೇಟ್ ಆದೆ. ನನ್ನಿಂದ ಕುಟುಂಬ ಸದಸ್ಯರು, ಸಹ ಸಿಬ್ಬಂದಿಗೆ ಹರಡದಂತೆ ಜಾಗ್ರತೆ ವಹಿಸಿದೆ. ವರದಿ ಪಾಸಿಟಿವ್ ಬಂತು. ಭಯಪಡಲಿಲ್ಲ. ರೋಗ ಲಕ್ಷಣಗಳು ಇದ್ದುದರಿಂದ ಆಸ್ಪತ್ರೆಗೆ ದಾಖಲಾದೆ. 9 ದಿನ ಔಷಧೋಪಚಾರ ಮತ್ತು ಚಿಕಿತ್ಸೆ ಪಡೆದು ಗುಣಮುಖನಾದೆ. ಯಾರೇ ಆಗಲಿ, ರೋಗಲಕ್ಷಣ ಕಂಡುಬಂದ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಔಷಧೋಪಚಾರ, ಚಿಕಿತ್ಸೆ ಪಡೆಯಬೇಕು. ಕರೊನಾ ದೃಢಪಟ್ಟ ಶೇ. 99ರಷ್ಟು ಜನರು ಗುಣವಾಗುತ್ತಾರೆ. ಆದ್ದರಿಂದ ಯಾರೂ ಭಯಪಡಬೇಕಿಲ್ಲ.
| ಎನ್. ಮಂಜುನಾಥ್ ಪ್ರಸಾದ್ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ
ಮೊದಲು ನನ್ನ ಪತಿಗೆ ಕೋವಿಡ್ ಸೋಂಕು ತಗುಲಿತ್ತು, ಅವರ ಆರೈಕೆ ಮಾಡುತ್ತಿದ್ದ ನನಗೆ ಎರಡು ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಂಡವು. ಪರೀಕ್ಷಿಸಿದಾಗ ಪಾಸಿಟಿವ್ ಬಂತು. ವೈದ್ಯೆಯಾಗಿದ್ದರೂ ಎಲ್ಲರಂತೆ ನನಗೂ ಆತಂಕ, ಭಯ ಕಾಡಿತು. ಆದರೆ ವೈದ್ಯಕೀಯ ಜ್ಞಾನ ಹಾಗೂ ಉತ್ತಮವಾದ ಮನೆ ಆರೈಕೆ ಸಹಾಯಕ್ಕೆ ಬಂದವು. ಮನೆಯಲ್ಲಿ ವಯಸ್ಸಾದ ಅತ್ತೆ ಇದ್ದಾರೆ. ಅವರಿಗೆ ಮಧುಮೇಹವಿದೆ. ಹಾಗಾಗಿ ಅವರ ಆರೋಗ್ಯದ ಬಗ್ಗೆ ಚಿಂತೆ ಕಾಡಿತು. ಅವರನ್ನೂ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದೆವು. ನಿಯಮಿತವಾಗಿ ಆಮ್ಲಜನಕ ತಪಾಸಣೆ ಮಾಡಿಕೊಳ್ಳುತ್ತಿದ್ದೆವು. ಔಷಧ ಸೇವಿಸುತ್ತಿದ್ದೆವು. ನಾನು ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಾಗಿತ್ತು. ಹಾಗಾಗಿ ಸೋಂಕು ಹೆಚ್ಚು ತೀವ್ರವಾಗಿರಲಿಲ್ಲ. ಯೋಗ, ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡಿದೆ. ವೈದ್ಯರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಮಾಡಿದ್ದರಿಂದ ಇಬ್ಬರೂ ಬೇಗ ಚೇತರಿಸಿಕೊಂಡೆವು. ಸ್ಟೆರಾಯ್ಡ್ ಸೇವಿಸದೆ, ಆಕ್ಸಿಜನ್ ಪಡೆಯದೆ ಗುಣವಾಗಿದ್ದು ವಿಶೇಷ. ಸೋಂಕಿತರು ಖಿನ್ನತೆಗೆ ಒಳಗಾಗದೆ ಮನಸ್ಸನ್ನು ಚೆನ್ನಾಗಿಟ್ಟುಕೊಂಡು, ನಿಯಮಿತವಾಗಿ ಔಷಧ, ಉತ್ತಮ ಆಹಾರ ಸೇವಿಸುತ್ತಿದ್ದರೆ ಕರೊನಾವನ್ನು ಸುಲಭವಾಗಿ ಜಯಿಸಬಹುದು.
| ಡಾ. ಸುಜಾತಾ ರಾಥೋಡ್ ನಿರ್ದೇಶಕಿ, ಮಿಂಟೊ ಕಣ್ಣಿನ ಆಸ್ಪತ್ರೆ
ನನಗೆ, ನನ್ನ ಪತಿ ಅಯ್ಯಪ್ಪ ಅವರಿಗೆ ಹಾಗೂ ನನ್ನ ಎರಡನೇ ಮಗಳಿಗೆ ಕೋವಿಡ್ ಸೋಂಕು ತಗುಲಿತ್ತು. ಇದನ್ನು ಎದುರಿಸಲು ಧೈರ್ಯವೊಂದೇ ಮೂಲಮಂತ್ರ ಎಂದು ನಾನು ಮೊದಲಿನಿಂದಲೂ ನಂಬಿದ್ದೆ. ಕೋವಿಡ್ ಮೊದಲು ಕಾಣಿಸಿಕೊಂಡಿದ್ದು ನನ್ನಲ್ಲಿ. ಮೊದಮೊದಲು ಮನೆಯಲ್ಲಿಯೇ ಚಿಕಿತ್ಸೆ ಪಡೆದೆ. ಆದರೆ, ಲೋ ಬಿಪಿ ಇದ್ದ ಕಾರಣ ಸುಧಾರಿಸಿಕೊಳ್ಳಲು ತೊಂದರೆಯಾಯಿತು. ಬಳಿಕ ರೈಲ್ವೆ ಆಸ್ಪತ್ರೆಗೆ ದಾಖಲಾದೆ. ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಿದರು. ಒಂದು ದಿನ ಆಕ್ಸಿಜನ್ ನೀಡಿದ್ದರು. ಆದರೆ, ನನಗೆ ಮನಸ್ಸಿನಲ್ಲಿ ಯಾವುದೇ ಆತಂಕವಿರಲಿಲ್ಲ. ನಾಲ್ಕೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಮನೆಗೆ ಬಂದೆ. ಊಟದ ವಿಚಾರದಲ್ಲಿ ಯಾವುದೇ ಕಟ್ಟುನಿಟ್ಟು ಇರಲಿಲ್ಲ. ನಾನು ಇನ್ನೇನು ಹುಷಾರಾದೆ ಎನ್ನುವ ವೇಳೆಗೆ ನನ್ನ ಪತಿ ಅಯ್ಯಪ್ಪಗೂ ಹಾಗೂ ನನ್ನ ಮಗಳಿಗೂ ಕೋವಿಡ್ ಪತ್ತೆಯಾಯಿತು. ಅಷ್ಟೊತ್ತಿಗಾಗಲೇ ನಾನು ಚಿಕಿತ್ಸಾ ವಿಧಾನವನ್ನು ಅರಿತಿದ್ದರಿಂದ ಅವರಿಬ್ಬರೂ ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾದರು. ನಾನು ಹುಷಾರಾಗಿದ್ದನ್ನು ಅವರು ನೋಡಿದ್ದರಿಂದ ಮತ್ತು ಅವರೂ ಮಾನಸಿಕವಾಗಿ ಸದೃಢವಾಗಿದ್ದರಿಂದ ಇಬ್ಬರೂ ಬೇಗ ಸುಧಾರಿಸಿಕೊಂಡರು. 15 ದಿನಗಳ ಅಂತರದಲ್ಲಿ ಮನೆಯ ಮೂವರೂ ಕೋವಿಡ್ ಎದುರಿಸಿ ಜಯಿಸಿದೆವು.
| ಪ್ರಮೀಳಾ ಅಯ್ಯಪ್ಪ ಅಂತಾರಾಷ್ಟ್ರೀಯ ಮಾಜಿ ಅಥ್ಲೀಟ್
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರುವ ಕಾರಣ ನಾನು ಹೊರಗೆ ಎಲ್ಲೇ ಹೋಗಿ ಬಂದರೂ ಶುಚಿತ್ವ ಕಾಯ್ದುಕೊಳ್ಳುತ್ತೇನೆ. ಹೀಗಿದ್ದರೂ ನನ್ನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ರುಚಿ ಗ್ರಹಿಸದ ಬಾಯಿ ಮತ್ತು ಸುಸ್ತು- ಇವು ನನ್ನಲ್ಲಿದ್ದ ಕೋವಿಡ್ ಲಕ್ಷಣಗಳು. ಮೊದಲು ಮನೆಯಲ್ಲಿಯೇ ಪ್ರತ್ಯೇಕವಾಗಿ ಒಂದು ರೂಮ್ಲ್ಲಿ ಬಂಧಿಯಾದೆ. ಭಯ ಬಿಟ್ಟು, ಎಂದಿನ ನನ್ನ ಕೆಲಸಗಳತ್ತ ಹೆಚ್ಚಿನ ಗಮನ ವಹಿಸಿದೆ. ಧನಾತ್ಮಕ ಅಂಶಗಳನ್ನು ಓದತೊಡಗಿದೆ. ಇದರ ಜತೆಗೆ ಕೋವಿಡ್ ಹೊಡೆದೋಡಿಸಲು ನಿತ್ಯ ಯೋಗ, ಬಿಸಿನೀರಿನ ಸ್ಟೀಮ್ ಕಷಾಯ, ಸತ್ವಯುತ ಆಹಾರದ ಬಳಕೆ ಮಾಡುತ್ತ ಬಂದೆ. ಮನೆಯವರಿಗೆ ಕೋವಿಡ್ ಸೋಂಕು ತಗುಲಬಾರದೆಂಬ ಕಾರಣಕ್ಕೆ ಹೆಚ್ಚು ಜಾಗೃತಿ ವಹಿಸಿದ್ದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ನನ್ನೊಳಗೆ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡಿದ್ದೆ. ಅದರ ಪರಿಣಾಮ ನಾನು ಹಠಕ್ಕೆ ಬಿದ್ದು ಕರೊನಾವನ್ನು ಸೋಲಿಸಿದೆ. ಇತ್ತೀಚೆಗಷ್ಟೇ ತಂದೆಯವರೂ ಕೋವಿಡ್ನಿಂದ ಚೇತರಿಸಿಕೊಂಡು ಮನೆ ಸೇರಿದ್ದಾರೆ. 27 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಮರಳಿ ಮನೆ ಸೇರುತ್ತಾರೋ ಇಲ್ಲವೋ ಎಂದು ವೈದ್ಯರಿಗೇ ಭರವಸೆ ಇರಲಿಲ್ಲ. ಕೊನೆಗೆ ಅಪ್ಪನ ಹಠ, ಆತ್ಮಸ್ಥೈರ್ಯ ಫಲಿಸಿತು. ಬದುಕಬೇಕೆನ್ನುವ ಛಲ ಅವರನ್ನು ಇದೀಗ ಬದುಕಿಸಿದೆ.
| ಕಾವ್ಯಾ ಶಾಸ್ತ್ರಿ ನಟಿ
ಆರೋಗ್ಯದಲ್ಲಿ ಚೂರು ಏರುಪೇರು ಆಗಿ, ರುಚಿ ಮತ್ತು ವಾಸನೆ ಇಲ್ಲದಂತೆ ಆಗುತ್ತಿದ್ದಂತೆ ದಿಗಿಲಾಯಿತು. ಹುಬ್ಬಳ್ಳಿಯಲ್ಲಿ ವೈದ್ಯೆಯಾಗಿರುವ ನನ್ನ ಅಕ್ಕನಿಗೆ ಕರೆ ಮಾಡಿದೆ. ತಕ್ಷಣ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿದರು. ಯಾರ ಜತೆಗೂ ಸೇರಬೇಡ ಎಂದಿದ್ದರು. ಹಾಗೆ ಮಾಡಿದ್ದರಿಂದಲೇ ಕರೊನಾ ಸೋಂಕು ನನ್ನನ್ನು ಮಾತ್ರ ಕಾಡಿತು. ಮನೆಯಲ್ಲಿನ ಉಳಿದವರು ಸೇಫ್ ಆಗಿದ್ದರು. ನನಗೆ ಜ್ವರ, ನೆಗಡಿ ಮುಂತಾಗಿ ಯಾವ ಲಕ್ಷಣಗಳೂ ಇರಲಿಲ್ಲ. ಹಾಗಾಗಿ ಮನೆಯಲ್ಲಿಯೇ ಐಸೋಲೇಟ್ ಆಗಿದ್ದೆ. ಇಮ್ಯೂನಿಟಿ ಹೆಚ್ಚಿಸುವ ಆಹಾರ ಸೇವನೆ ಮಾಡುತ್ತ ಬಂದೆ. ಎಂದಿನಂತೆ ಯೋಗ, ವ್ಯಾಯಾಮ ಮತ್ತು ಧ್ಯಾನದ ಕಡೆ ಹೆಚ್ಚು ಗಮನಹರಿಸಿದೆ. ಕರೊನಾ ಪಾಸಿಟಿವ್ ಇದ್ದರೂ ಇತರ ಪಾಸಿಟಿವ್ ಚಿಂತನೆಗಳತ್ತ ಮುಖ ಮಾಡಿದೆ. ಹಾಗಾಗಿ ಕರೊನಾ ನನಗೆ ಅಷ್ಟೊಂದು ಸಮಸ್ಯೆ ಉಂಟು ಮಾಡಲಿಲ್ಲ. ಈ ನಡುವೆ ಪಾಸಿಟಿವ್ ಬಂದ ಮೊದಲ ನಾಲ್ಕು ದಿನ ತುಂಬ ಮಹತ್ವದ್ದು. ಗಂಭೀರ ಲಕ್ಷಣಗಳು ಇಲ್ಲದಿದ್ದರೂ, ಎಲ್ಲ ಮಾರ್ಗಸೂಚಿಗಳನ್ನೂ ಪಾಲಿಸಿದೆ. ಕೊನೇ ಕ್ಷಣದವರೆಗೂ ಕಾಯುವುದು ತುಂಬ ಅಪಾಯಕಾರಿ. ಇಂಥ ಸಮಯದಲ್ಲಿ ಸ್ವತಃ ಧೈರ್ಯದಿಂದ ಇರಬೇಕು. ಧೈರ್ಯ ತುಂಬುವವರು ಜತೆಯಲ್ಲಿರಬೇಕು.
| ಅನು ಪ್ರಭಾಕರ್ ನಟಿ