

ಹಣ ಉಳಿತಾಯ ಪ್ರತಿಯೊಬ್ಬರ ಅವಶ್ಯಕತೆ. ಉಳಿತಾಯವು ಹೂಡಿಕೆಯೂ ಆದಾಗ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ಬರಲು ಸಾಧ್ಯ. ಷೇರು ಮಾರುಕಟ್ಟೆಯು ಹೂಡಿಕೆಯ ಒಂದು ಪ್ರಮುಖ ಕ್ಷೇತ್ರ. ಜಾಗ್ರತೆಯಿಂದ ಷೇರುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ನಮ್ಮ ಸಾಮಾನ್ಯಜ್ಞಾನದ ಅನ್ವಯವೂ ಪ್ರಮುಖ ಪಾತ್ರ ವಹಿಸುತ್ತದೆ.
| ದೀಪಕ ತಲವಾಯಿ ಹುಬ್ಬಳ್ಳಿ
ಮನುಷ್ಯ ಗಳಿಸಿದ್ದನ್ನು ಉಳಿಸಬೇಕು. ಉಳಿಸಿದ್ದನ್ನು ಹೂಡಿಕೆ ಮಾಡಬೇಕು. ಏಕೆಂದರೆ ಹಣವೇ ಹಣವನ್ನು ಆಕರ್ಷಿಸುತ್ತದೆ. ಹಣವನ್ನು ಬ್ಯಾಂಕಿನಲ್ಲಿಯೇ ಇಡಬೇಕೆಂದೇನಿಲ್ಲ. ಬಂಗಾರದಲ್ಲಿ ಹೂಡಿಕೆ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ನಲ್ಲಿ ಇಡುವ ಹಣಕ್ಕೆ ನಿಯಮಿತ ಬಡ್ಡಿ ಸಿಗುತ್ತದೆ. ಜತೆಗೆ ಇಲ್ಲಿ ನಷ್ಟವಾಗುವ ಭಯವಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ನಷ್ಟ ಆಗುವ ಸಾಧ್ಯತೆಗಳೂ ಇರುತ್ತವೆ. ಹಾಗೆಯೇ, ಹೂಡಿಕೆ ಮಾಡಿದ ಹಣ ಒಂದೇ ವರ್ಷದಲ್ಲಿ ದುಪ್ಪಟ್ಟು ಆಗಬಹುದು, ಮೂರು ಪಟ್ಟು, ಅದಕ್ಕಿಂತ ಹೆಚ್ಚೂ ಆಗಬಹುದು. ಮಾರುಕಟ್ಟೆಯಲ್ಲಿ ದಿಢೀರ್ ಹಣ ಗಳಿಸಲು ಜನರು ಸಿಕ್ಕ ಸಿಕ್ಕ ಷೇರುಗಳಲ್ಲಿ ಹಣ ತೊಡಗಿಸುತ್ತಾರೆ. ಇದರಿಂದ ನಷ್ಟ ಅನುಭವಿಸುತ್ತಾರೆ. ಇದಕ್ಕಾಗಿಯೇ ಮಾರುಕಟ್ಟೆಗೆ ‘ಜೂಜಿನ ವ್ಯವಹಾರ’ ಎಂಬ ಕೆಟ್ಟ ಹೆಸರು ಬಂದಿದೆ. ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸುವುದು ಕಷ್ಟವೇನಲ್ಲ. ಆದರೆ, ಯಾವ ಷೇರುಗಳಲ್ಲಿ ಹೂಡಿಕೆ ಮಾಡಬೇಕು ಎಂಬುದೇ ಬಹುತೇಕ ಜನರಿಗೆ ಗೊತ್ತಾಗುವುದಿಲ್ಲ. ಹೂಡಿಕೆ ಕುರಿತು ಹಣ ಪಡೆದು ಸಲಹೆ ನೀಡುವ ಸಾವಿರಾರು ಕಂಪನಿಗಳಿವೆ. ಇದರಲ್ಲಿ ಬಹಳಷ್ಟು ಸೆಬಿಯಿಂದ (ಸೆಕ್ಯೂರಿಟಿಸ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಮಾನ್ಯತೆಗೆ ಒಳಪಟ್ಟಿರುವುದಿಲ್ಲ. ಉತ್ತಮ ಷೇರುಗಳ ಆಯ್ಕೆ ರಾಕೆಟ್ ಸೈನ್ಸ್ ಏನಲ್ಲ. ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗ್ಗೆ ಕನಿಷ್ಠ ಜ್ಞಾನ ಇದ್ದರೆ ಸಾಕು. ಒಂದು ಒಳ್ಳೆಯ ಪೋರ್ಟ್ಫೋಲಿಯೋ ಮಾಡಿಟ್ಟಕೊಂಡರೆ, ಭವಿಷ್ಯದಲ್ಲಿ ಉತ್ತಮ ಹಣ ಗಳಿಸಬಹುದು.
ಸುತ್ತಮುತ್ತಲಿನ ಆಗುಹೋಗು ಗಮನಿಸಿ
ಸಾಮಾನ್ಯವಾಗಿ ನಾವೆಲ್ಲ ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜುತ್ತೇವೆ, ಭಾರತದಲ್ಲಿ ಪೇಸ್ಟ್ ಅಂದರೆ ಕೋಲ್ಗೇಟ್. ಇದನ್ನು ತಯಾರಿಸುವ ಕಂಪನಿ ‘ಕೋಲ್ಗೇಟ್ ಪಾಮಲಿವ್’. ನಂತರ ಟೀ-ಕಾಫಿ ಕುಡಿಯುತ್ತೇವೆ. ಇದಕ್ಕೆ ‘ಟಾಟಾ ಕಾಫಿ’ ಅಥವಾ ‘ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್’ ಕಂಪನಿಯ ಷೇರುಗಳಿವೆ. ಟೀ ಜತೆ ಬಿಸ್ಕತ್ತು ತಿನ್ನುತ್ತೇವೆ. ಇದಕ್ಕಾಗಿಯೇ ಇದೆ ‘ಬ್ರಿಟಾನಿಯಾ’ ಕಂಪನಿ, ಸ್ನಾನಕ್ಕೆ ಸಾಬೂನು, ಶಾಂಪೂ ಬೇಕೇ ಬೇಕು- ‘ಹಿಂದುಸ್ತಾನ್ ಲಿವರ್ ಲಿಮಿಟೆಡ್’. ನಂತರ ಕೆಲಸಕ್ಕೆ ಹೋಗಲು ರೆಡಿಯಾಗಬೇಕು, ಉತ್ತಮ ಬಟ್ಟೆಗಾಗಿ ಇದೆ ‘ರೇಮಂಡ್ಸ್’. ಕೈಗೆ ‘ಟೈಟನ್’ ವಾಚ್ ಬೇಕು. ಇಷ್ಟೆಲ್ಲ ರೆಡಿಯಾದ ಮೇಲೆ ‘ಬಾಟಾ’ ಶೂ ಧರಿಸದಿದ್ದರೆ ಹೇಗೆ? ಆಫೀಸ್ಗೆ ಹೋಗಲು ‘ಟಾಟಾ ಮೋಟರ್ಸ್’ ಇಲ್ಲವೇ ‘ಮಾರುತಿ’ ಕಂಪನಿಯ ಕಾರುಗಳಿವೆ. ಪೆಟ್ರೋಲ್, ಡಿಸೇಲ್ ಕಾರಿದ್ದರೆ ‘ಒಎನ್ಜಿಸಿ’, ಸಿಎನ್ಜಿ ಕಾರಾದರೆ ‘ಐಜಿಎಲ್’ ಇದೆ. ಪೆಟ್ರೋಲ್ ಹಾಕಿಸಲು ‘ಎಚ್ಡಿಎಫ್ಸಿ’, ‘ಐಸಿಐಸಿಐ’, ‘ಎಸ್ಬಿಐ’ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಿವೆ. ಆಫೀಸಿಗೆ ಹೋದರೆ ಸೆಕೆ ತಡೆಯಲಾಗದೆ ಎಸಿ ಆನ್ ಮಾಡುತ್ತೇವೆ- ‘ವೋಲ್ಟಾಸ್’. ಯಾರಿಗೋ ಅರ್ಜಂಟ್ ಕಾಲ್ ಮಾಡಬೇಕು - ‘ಏರ್ಟೆಲ್’. ಹೊಸ ಮೊಬೈಲ್ ಫೋನ್ ಪಡೆಯುವುದಾದರೆ ಇನ್ಸ್ಟಾಲ್ವೆುಂಟ್ಗೆ - ‘ಬಜಾಜ್ ಫೈನಾನ್ಸ್’ ಇದೆ. ಮನೆ ಕಟ್ಟಲು ಬಹುತೇಕರು ಸಾಲ ಮಾಡಿಯೇ ಮಾಡುತ್ತಾರೆ. ಇದಕ್ಕಾಗಿಯೇ ಇರುವುದರಲ್ಲಿ ಒಂದು ‘ಎಚ್ಡಿಎಫ್ಸಿ’. ಸಂಜೆ ಮನೆಗೆ ಬಂದಾಗ ಮ್ಯಾಗಿ ತಿನ್ನಬೇಕು ಅನ್ನಿಸಿದರೆ -‘ನೆಸ್ಲೆ’. ಮನೆಗೆ ದಿನಬಳಕೆಯ ವಸ್ತು ಖರೀದಿಸಬೇಕೆಂದರೆ ‘ರಿಲಯನ್ಸ್’, ‘ಡಿಮಾರ್ಟ್’ ಮಳಿಗೆಗಳಿವೆ. ಇವು ಕೆಲವು ಉದಾಹರಣೆ ಮಾತ್ರ. ಷೇರು ಮಾರುಕಟ್ಟೆ ಕೇವಲ ಚಾಣಾಕ್ಷರಿಗೆ ಮಾತ್ರವಲ್ಲ. ನಿತ್ಯ ಜೀವನದಲ್ಲಿ ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿದರೆ ಸಾಕು. ಯಾವ ಸ್ಟಾಕ್ನಲ್ಲಿ ಹಣ ಹೂಡಬೇಕು ಎಂಬುದು ತಿಳಿಯುತ್ತದೆ. ನಿಯಮಿತವಾದ ಹೂಡಿಕೆಯನ್ನು ದೀರ್ಘಾವಧಿವರೆಗೆ ಮಾಡಿದರೆ ಮಾರುಕಟ್ಟೆಯ ಏರಿಳಿತಗಳು ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು.
ಬಫೆಟ್ ಸೂತ್ರ
‘ಡು ನಾಟ್ ಪುಟ್ ಆಲ್ ಎಗ್ಸ್ ಇನ್ ಒನ್ ಬಾಸ್ಕೆಟ್’ - ಇದು ಜಗತ್ತಿನ ಖ್ಯಾತ ಹೂಡಿಕೆದಾರ, ಅಮೆರಿಕದ ವಾರನ್ ಬಫೆಟ್ ಅವರ ಮಾತು. ಅವರು ಹೇಳುವಂತೆ ನಾವು ಎಲ್ಲ ಹಣವನ್ನು ಒಂದೇ ಷೇರಿನಲ್ಲಿ ಹಾಕಬಾರದು. ವಿವಿಧ ವಲಯಗಳ ಆಯ್ದ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ನೀವು ಮಾರುಕಟ್ಟೆಯಲ್ಲಿ ಒಂದು ಲಕ್ಷ ರೂ. ಹೂಡಿಕೆ ಮಾಡುವ ಇರಾದೆ ಹೊಂದಿದ್ದರೆ, ಎಲ್ಲವನ್ನೂ ಒಂದೇ ಷೇರಿನಲ್ಲಿ ಹಾಕಬಾರದು. ವಿವಿಧ ವಲಯಗಳ ಹತ್ತು ಷೇರುಗಳನ್ನು ಆಯ್ಕೆ ಮಾಡಿಕೊಂಡು ಪ್ರತಿಯೊಂದರಲ್ಲಿ ತಲಾ ಹತ್ತು ಸಾವಿರ ರೂ. ಹೂಡಿಕೆ ಮಾಡಬೇಕು. ಇದರಿಂದ ಯಾವುದೋ ಒಂದು ಷೇರಿನಲ್ಲಿ ನಷ್ಟವಾದರೂ ಉಳಿದವುಗಳಲ್ಲಿ ಲಾಭ ಪಡೆಯಬಹುದಾಗಿದೆ.
ಬೇಗ ಬೇಕೋ? ಬಹಳ ಬೇಕೋ?
ಸಾಕಷ್ಟು ಮಂದಿ ದಿಢೀರ್ ಶ್ರೀಮಂತರಾಗಲು ಷೇರು ಮಾರುಕಟ್ಟೆಗೆ ಬರುತ್ತಾರೆ. ಒಳ್ಳೆಯ ಕಂಪನಿ ನೋಡಿ ಹಣ ಹೂಡಿ ಸುಮ್ಮನಾಗಿಬಿಡಬೇಕು. ಆದರೆ, ಬಹುತೇಕರಿಗೆ ಬೇಗ ಹಣ ಬೇಕು. ಷೇರು ಮಾರುಕಟ್ಟೆ ಕೂಡ ಇತರ ಹೂಡಿಕೆಗಳಂತೆಯೇ. ನಾವು ಒಂದು ಸೈಟ್ ಕೊಂಡುಕೊಳ್ಳುತ್ತೇವೆ ಅಂದುಕೊಳ್ಳಿ. ಒಂದು ವಾರ ಬಿಟ್ಟು ಅದರ ಬೆಲೆ ಎಷ್ಟು ಹೆಚ್ಚಾಯಿತೆ ಎಂದು ಕೇಳಲಾದೀತೆ? ಆದರೆ, ಬಹುತೇಕ ಜನರಿಗೆ ಇಂದು ಕೊಂಡ ಷೇರು ನಾಳೆಯೇ ಲಾಭ ಕೊಡಬೇಕು ಎಂಬ ಆಸೆ ಇರುತ್ತದೆ. ಇದರಿಂದಾಗಿಯೇ ಅವರು ಹೆಚ್ಚಿನ ಲಾಭ ಗಳಿಸಲಾಗುವುದಿಲ್ಲ. ಇದಕ್ಕಾಗಿಯೇ ಲಾಭ ಬೇಗ ಬೇಕೋ? ಬಹಳ ಬೇಕೋ? ಎಂಬುದನ್ನು ಅರಿತು ಹೂಡಿಕೆ ಮಾಡಬೇಕು.