

ಹುಬ್ಬಳ್ಳಿಯ ಕೊಪ್ಪಿಕರ ಬೀದಿಯ ಅಂಚಿನಲ್ಲಿರುವ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಸುಮಾರು 700ಕ್ಕೂ ಹೆಚ್ಚು ಸದಭಿರುಚಿಯ ಸಾಹಿತ್ಯ ಕೃತಿಗಳನ್ನು ಕನ್ನಡದ ಓದುಗರ ಮಡಿಲಿಗಿಡುವ ಮೂಲಕ ಮನೆ ಮಾತಾಗಿದ್ದಾರೆ. 1986ರ ವಿಜಯದಶಮಿಯ ಶುಭದಿನದಿಂದ ಆರಂಭವಾದ ಅವರ ಸಾಹಿತ್ಯ ಸಾಂಗತ್ಯ ಹೂವು-ಮುಳ್ಳಿನ ಹಾದಿಯ ಪಯಣ. ಇದೆಲ್ಲ ಹೇಗಾಯಿತು ಎಂದು ಕೇಳಿದರೆ, ಅವರು ಹೇಳುವುದಿಷ್ಟು: ಸಾಹಿತ್ಯ ಪ್ರಕಾಶನದ ಹೆಸರಿನಿಂದ ಕನ್ನಡ ಪುಸ್ತಕಗಳ ಪ್ರಕಾಶನ ವೃತ್ತಿ ಕೈಗೊಂಡಾಗ ಕಿಸೆಯಲ್ಲಿ ಒಂದೇ ಒಂದು ರೂಪಾಯಿಯೂ ಇರಲಿಲ್ಲ! ಏನೋ ಒಂದು ಧೈರ್ಯ, ವಿಶ್ವಾಸ ಮತ್ತು ಅನಿವಾರ್ಯತೆಗಳಿಂದಾಗಿ ಇದರಲ್ಲಿ ತೊಡಗಿಕೊಂಡೆ. ಈಗ ನೆನಪಿಸಿಕೊಂಡರೆ, ಇದು ಹೇಗೆ ಸಾಧ್ಯವಾಯಿತು? ಎಂಬ ಆಶ್ಚರ್ಯ ಹುಟ್ಟುತ್ತದೆ.
ಯಂಡಮೂರಿ ವೀರೇಂದ್ರನಾಥ ಅವರ ‘ಕರಿಗಂಬಳಿಯಲ್ಲಿ ಮಿಡಿನಾಗ’ ಎಂಬ ಕಾದಂಬರಿಯಿಂದ ಶುರುವಾಯಿತು ಅವರ ಪ್ರಕಾಶನ ವೃತ್ತಿಯ ಪಯಣ. ಲೆಟರ್ಪ್ರೆಸ್ ಯುಗದ ಕೈಯಿಂದಲೇ ಮೊಳೆ ಜೋಡಿಸಿ 16, 32 ಪುಟಗಳ ಪೂ›ಫ್ ನೋಡಿ ಮುದ್ರಿಸುತ್ತಿದ್ದ ಕಾಲಘಟ್ಟದಿಂದ ಮುದ್ರಣ ತಾಂತ್ರಿಕತೆಯ ಈಗಿನ ಉತ್ತುಂಗ ಕಾಲದವರೆಗಿನ ಎಲ್ಲ ಏಳು-ಬೀಳುಗಳನ್ನು ಕಂಡಿರುವ ಈ ಪ್ರಕಾಶನ ಸಂಸ್ಥೆಯ ಅನುಭವಗಳೇ ವೈವಿಧ್ಯಮಯ, ವಿಶಿಷ್ಟ ಮತ್ತು ಅಪೂರ್ವ.
ಸೋದರಿ, ಸ್ನೇಹಿತರಿಂದ ಸಾಲ: ಸ್ನೇಹಿತರು, ಸೋದರಿಯರಿಂದ ಸಾಲ ಪಡೆದ ಅಲ್ಪ ಹಣದಿಂದ ಪ್ರಕಾಶನ ಶುರು ಮಾಡಿ, ಮೊದಲ ಪುಸ್ತಕ ಮಾರಿ ಬಂದ ಹಣವನ್ನೇ ಮುಂದಿನ ಪುಸ್ತಕದ ಬಂಡವಾಳವಾಗಿ ಮಾಡಿಕೊಳ್ಳುವ ಅನಿವಾರ್ಯ ಸುಬ್ರಹ್ಮಣ್ಯ ಅವರಿಗಿತ್ತು. ಯಂಡಮೂರಿ, ಕೆ.ಟಿ. ಗಟ್ಟಿ, ಸುದರ್ಶನ ದೇಸಾಯಿ ಅವರಂತಹ ಆ ಕಾಲದ ಜನಪ್ರಿಯ ಲೇಖಕರೇ ಸಾಹಿತ್ಯ ಪ್ರಕಾಶನಕ್ಕೊಂದು ಆರ್ಥಿಕ ದೃಢತೆಯ ಅಡಿಪಾಯ ಒದಗಿಸಿದ್ದನ್ನು, ಸರ್ಕಾರದ ಸ್ವಯಂ ಉದ್ಯೋಗ ಯೋಜನೆಯ 35,000 ರೂ. ಸಾಲದ ನೆರವನ್ನು ಸುಬ್ಬಣ್ಣ ನೆನಪಿಸಿಕೊಳ್ಳುತ್ತಾರೆ. ಜನಪ್ರಿಯ ಕೃತಿಗಳೊಂದಿಗೆ ವೈಚಾರಿಕ ಕೃತಿಗಳು ಅಂದರೆ ಶಂ.ಬಾ. ಜೋಶಿ, ವಿ.ಕೃ. ಗೋಕಾಕ್, ಸಿಂಪಿ ಲಿಂಗಣ್ಣ, ಪಾಟೀಲ ಪುಟ್ಟಪ್ಪ, ಎನ್ಕೆ, ಜೆ. ಕೃಷ್ಣಮೂರ್ತಿ ಅಂಥವರನ್ನು ಸೇರಿಸಿಕೊಂಡಾಗಲೇ ಸಾಹಿತ್ಯ ಪ್ರಕಾಶನಕ್ಕೆ ಒಂದು ಗಾಂಭೀರ್ಯವೂ ದಕ್ಕಿತೆಂದು ಸುಬ್ರಹ್ಮಣ್ಯ ಪರಿಭಾವಿಸುತ್ತಾರೆ.
ಅಪ್ಪ, ದೊಡ್ಡಪ್ಪನವರ ಬಳುವಳಿ: ದೊಡ್ಡಪ್ಪ ಸಾಹಿತ್ಯ ಭಂಡಾರದ ಗೋವಿಂದರಾಯರು, ತಂದೆ ಮ. ಅನಂತಮೂರ್ತಿ, ಕಾವ್ಯಾಲಯದ ಕೂಡಲಿ ಚಿದಂಬರಂ, ಡಿವಿಕೆ ಮೂರ್ತಿ, ಶಾರದಾ ಮಂದಿರದ ಶಂಕರನಾರಾಯಣರು, ಪುತ್ತೂರಿನ ಬೋಳಂತಕೋಡಿ ಈಶ್ವರ ಭಟ್ಟರು ಮುಂತಾದ ಹಿರಿಯ ಪ್ರಕಾಶಕರನ್ನು ನೆನೆವ ಸುಬ್ರಹ್ಮಣ್ಯ, ಆ ಹಾದಿಯೇ ಹೊಸ ಪ್ರಕಾಶಕರಿಗೆ ದೊಡ್ಡ ಮಾದರಿಯಾಗಬೇಕು ಎನ್ನುತ್ತಾರೆ.
ಗ್ರಂಥ ಸರಣಿ ಕೊಂಡರೆ ಕಪಾಟು ಉಚಿತ!: ಕೆ.ಎಸ್. ನಾರಾಯಣಾಚಾರ್ಯರ ಸುಮಾರು ನೂರು ಗ್ರಂಥಗಳನ್ನು ಪ್ರಕಟಿಸಿದ್ದಲ್ಲದೆ, ಓದುಗರು ಆ ಎಲ್ಲವನ್ನೂ ಕೊಂಡಾಗ ಅವುಗಳನ್ನು ಒಂದೆಡೆ ಜೋಡಿಸಿಟ್ಟುಕೊಳ್ಳಲು ಅನುಕೂಲವಾಗುವಂತೆ ಕಪಾಟನ್ನೂ ಕೊಡುತ್ತಾರೆ. ಕನ್ನಡದ ಲೇಖಕರ ಮಟ್ಟಿಗೆ ಇಂತಹ ಗೌರವ ಬೇರಾರಿಗೂ ಸಿಕ್ಕಿಲ್ಲವೇನೋ. ಇಂತಹ ಹಲವು ಹೊಸ ಯೋಜನೆಗಳು, ಆಲೋಚನೆಗಳು, ಪ್ರಯೋಗಗಳನ್ನು ಸಾಹಿತ್ಯ ಪ್ರಕಾಶನ ನಿರಂತರವಾಗಿ ಮಾಡುತ್ತಿರುತ್ತದೆಂದೇ ಅದರ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತವೆ.
ಓದುಗರ ಮೆಚ್ಚುಗೆಯೇ ಪ್ರಶಸ್ತಿ: ಮೌಲ್ಯಯುತ ಕೃತಿಗಳನ್ನು ಅಚ್ಚುಕಟ್ಟಾಗಿ ಹೊರ ತರುತ್ತಿದ್ದರೂ ಸುಬ್ರಹ್ಮಣ್ಯ ಅವರೆಂದೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ, ಅವುಗಳಿಗಾಗಿ ಅರ್ಜಿ ಸಲ್ಲಿಸಿದವರಲ್ಲ. ಸಾಹಿತ್ಯ ಪ್ರಕಾಶನವು ಬೆಳಕು ಕಾಣಿಸಿದ ಕೆಲವು ಕೃತಿಗಳ ಲೇಖಕರೇ ಅರ್ಜಿ ಸಲ್ಲಿಸಿ ಪ್ರಶಸ್ತಿ ಗಳಿಸಿದ್ದು ಬಿಟ್ಟರೆ, ಓದುಗರು ಪುಸ್ತಕವನ್ನು ಕೊಂಡು ಓದಿದರೆ, ಮೆಚ್ಚಿ ಕೊಂಡರೆ ಅದೇ ಲೇಖಕರಿಗೂ, ಪ್ರಕಾಶಕರಿಗೂ ಸಿಗುವ ಅತಿದೊಡ್ಡ ಪ್ರಶಸ್ತಿ ಎಂದು ನಂಬಿ, ತಮ್ಮ ಪಾಡಿಗೆ ತಾವು ಪ್ರಕಾಶನ ಚಟುವಟಿಕೆಯಲ್ಲಿ ಸುಬ್ರಹ್ಮಣ್ಯ ನಿರತರಾಗಿದ್ದಾರೆ.
ಪುಸ್ತಕಗಳ ದಾಖಲೆ ಮಾರಾಟ: ಕೆ.ಎಸ್. ನಾರಾಯಣಾಚಾರ್ಯರ ಕಾದಂಬರಿ ‘ಆಚಾರ್ಯ ಚಾಣಕ್ಯ’ 25 ಸಾವಿರ ಪ್ರತಿಗಳು, ‘ಅಗಸ್ತ್ಯ’ 18 ಸಾವಿರ, ಸುಬ್ರಹ್ಮಣ್ಯ ಅವರೇ ಅನುವಾದ ಮಾಡಿದ ಯಂಡಮೂರಿಯವರ ‘ಯಶಸ್ಸಿನ ರಹಸ್ಯಗಳು’ 30 ಸಾವಿರ, ‘ನಿಮ್ಮನ್ನು ನೀವು ಗೆಲ್ಲಬಲ್ಲಿರಿ’ 20 ಸಾವಿರ, ‘ಯಶಸ್ಸಿನತ್ತ ಪಯಣ’ 50 ಸಾವಿರ, ಪಾಟೀಲ ಪುಟ್ಟಪ್ಪ ಅವರ ‘ಬದುಕಲು ಬೇಕು, ಬದುಕುವ ಮಾತು’ 50 ಸಾವಿರ - ಹೀಗೆ ಪ್ರಕಟಿಸಿದ 30ಕ್ಕೂ ಹೆಚ್ಚು ಕೃತಿಗಳು 10 ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದು, ದಾಖಲೆ ಎನಿಸಿದೆ.
ಬರಹಗಾರರು, ಧಾರವಾಡ ಆಕಾಶವಾಣಿಯ ಚಿಂತನಕಾರರು, ಹುಬ್ಬಳ್ಳಿ ಕೆಎಲ್ಇ ಧ್ವನಿಯ ಸಾಂರ್ದಭಿಕ ಮಾತುಗಾರರು, ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಟ್ರಸ್ಟಿಗಳು, ಪರಿಸರ ಕಾರ್ಯಕರ್ತರು, ವಿಆರ್ಎಲ್ ಮೀಡಿಯಾದ ನಿರ್ದೇಶಕರೂ ಆಗಿರುವ ಸುಬ್ರಹ್ಮಣ್ಯ ಅವರು ಹುಬ್ಬಳ್ಳಿಯ ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿಗಳಾಗಿ ಸಾವಿರಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಒಳ್ಳೆಯ ಸಂಘಟಕರಾಗಿಯೂ ಹೆಸರಾಗಿದ್ದಾರೆ. ಈಗ ಅವರ ಪುತ್ರ ಋತ್ವಿಕ್ ಕೂಡ ಇಂಗ್ಲಿಷ್ ಭಾರತೇಯ ಕೃತಿಗಳ ಪ್ರಕಾಶನ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸ್ವತಂತ್ರ ಉದ್ಯಮವನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.