

‘ಅನ್ನದಂತೆ ಮನ’- ನಾವು ಸೇವಿಸುವ ಆಹಾರವು ನಮ್ಮ ಯೋಚನೆಗಳನ್ನು ರೂಪಿಸಿ, ತನ್ಮೂಲಕ ನಮ್ಮ ವ್ಯಕ್ತಿತ್ವವನ್ನು ನಿರ್ಣಯಿಸುತ್ತದೆ.
ಆಚಾರ್ಯ ಚಾಣಕ್ಯನು ಹೇಳಿರುವಂತೆ:
ದೀಪೋ ಭಕ್ಷ್ಯತೇ ಧ್ವಾಂತಂ ಕಜ್ಜಲಂ ಚ ಪ್ರಸೂಯತೇ |
ಯದನ್ನಂ ಭಕ್ಷಯೇತ್ ನಿತ್ಯಂ ಜಾಯತೇ ತಾದೃಶೀ ಪ್ರಜಾ ||
‘ದೀಪವು ಕತ್ತಲನ್ನು ಭಕ್ಷಿಸಿ ಕಪ್ಪಾದ ಮಸಿಯನ್ನು ಉತ್ಪಾದಿಸುತ್ತದೆ. ಅಂತೆಯೇ, ನಾವು ಪ್ರತಿನಿತ್ಯ ಸೇವಿಸುವ ಉತ್ತಮ ಆಹಾರವು ನಮ್ಮ ಉತ್ತಮ ವರ್ತನೆಚಾರಿತ್ರ್ಯಗಳಿಗೆ ಆಧಾರವಾಗುತ್ತದೆ’.
ಮಾನವನ ಸಹಿತವಾಗಿ ಎಲ್ಲ ಜೀವಿಗಳೂ ಒಂದಲ್ಲ ಒಂದು ರೀತಿಯಲ್ಲಿ ನಿಸರ್ಗದ ಬೃಹತ್ ಆಹಾರ ಸರಪಳಿಯ ಭಾಗವಾಗಿದ್ದು, ಆಹಾರವು ಸಕಲ ಜೀವಿಗಳ ಅಸ್ತಿತ್ವದ ಒಂದು ಪ್ರಧಾನ ಅಂಶವಾಗಿದೆ.
ತೈತ್ತಿರೀಯ ಉಪನಿಷತ್ತು ಸಾರಿರುವಂತೆ:
ಅನ್ನಂ ಬ್ರಹ್ಮೇತಿ ವ್ಯಜಾನಾತ್ |
ಅನ್ನಾದ್ಧೆ್ಯೕವ ಖಲ್ವಿಮಾನಿ ಭೂತಾನಿ ಜಾಯಂತೇ |
ಅನ್ನೇನ ಜಾತಾನಿ ಜೀವಂತಿ |
ಅನ್ನಂ ಪ್ರಯಂತ್ಯಭಿಸಂವಿಶಂತೀತಿ ||
(ಭ್ರುಗುವಲ್ಲಿ- ಎರಡನೆಯ ಅನುವಾಕ)
‘ಅನ್ನವೇ ಬ್ರಹ್ಮ. ಏಕೆಂದರೆ, ಅನ್ನದಿಂದಲೇ ಜೀವಿಗಳು ಜನಿಸುತ್ತವೆ; ಅನ್ನದಿಂದಲೇ ಜೀವಿಸುತ್ತವೆ ಹಾಗೂ ಅಂತ್ಯದಲ್ಲಿ ಅನ್ನದಲ್ಲಿಯೇ ಐಕ್ಯವಾಗುತ್ತವೆ’.
ಉಪನಿಷತ್ತು ಮುಂದುವರಿದು ಹೀಗೆ ಉಪದೇಶಿಸಿದೆ:
‘ಅನ್ನಂ ನ ನಿಂದ್ಯಾತ್ | ತದ್ ವ್ರತಮ್ |’
‘ಅನ್ನವನ್ನು ನಿಂದಿಸಕೂಡದು, ಅದು ವ್ರತ’.
‘ಅನ್ನಂ ನ ಪರಿಚಕ್ಷೀತ | ತದ್ ವ್ರತಮ್ |’
‘ಅನ್ನವನ್ನು ನಿರ್ಲಕ್ಷಿಸಬಾರದು, ಅದು ವ್ರತ’.
ಹೀಗೆ, ಅನ್ನದ ಮಹತ್ವವನ್ನು ಅರಿತು, ಅದನ್ನು ನಿರ್ಲಕ್ಷಿಸದೆ ಅಥವಾ ದುರ್ಬಳಕೆ ಮಾಡದೆ ಗೌರವಿಸುವುದು, ಸನಾತನ ಧರ್ಮದ ಆಧ್ಯಾತ್ಮಿಕತೆಯ ಪ್ರಮುಖ ಮೌಲ್ಯಗಳಲ್ಲಿ ಒಂದಾಗಿದೆ. ಅನ್ನವನ್ನು ಗೌರವಿಸುವವರಿಗೆ ಸಕಲವೂ ಪ್ರಾಪ್ತಿಯಾಗುವುದೆಂದು ತೈತ್ತರೀಯ ಉಪನಿಷತ್ತು ಭರವಸೆ ನೀಡುತ್ತದೆ:
ಅನ್ನವಾನನ್ನಾದೋ ಭವತಿ | ಮಹಾನ್ ಭವತಿ |
ಪಶುಭಿರ್ಬ್ರಹ್ಮವರ್ಚಸೇನ | ಮಹಾನ್ ಕೀರ್ತ್ಯಾ || (3.6)
‘ಯಾರು ಅನ್ನವನ್ನು ಗೌರವಿಸುತ್ತಾರೆಯೋ ಅವರಿಗೆ ಊಟ-ವಸತಿಗಳಿಗೆ ಯಾವ ಕೊರತೆಯೂ ಆಗುವುದಿಲ್ಲ ಮತ್ತು ಅವರಿಗೆ ಸಕಲವೂ ಲಭಿಸುತ್ತವೆ. ಅವರು ಪಶು-ಪುತ್ರ, ಸಂಪತ್ತು ಹಾಗೂ ಆಧ್ಯಾತ್ಮಿಕ ವರ್ಚಸ್ಸಿನಿಂದ ಕೂಡಿ, ಮಹಾನ್ ಕೀರ್ತಿವಂತರಾಗುತ್ತಾರೆ’. ನಾವು ಸೇವಿಸುವ ಆಹಾರವು, ಇಡೀ ಸೃಷ್ಟಿಯನ್ನು ವ್ಯಾಪಿಸಿರುವ ಪಂಚ ಮಹಾಭೂತಗಳಿಂದ ನಮಗೆ ಲಭ್ಯವಾತ್ತದೆ.
ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಂಭೂತಃ ಆಕಾಶಾದ್ವಾಯುಃ | ವಾಯೋರಗ್ನಿಃ | ಅಗ್ನೇರಾಪಃ | ಅದ್ಭ್ಯಃ ಪೃಥಿವೀ | ಪೃಥಿವ್ಯಾ ಓಷಧಯಃ | ಓಷಧೀಭ್ಯಃ ಅನ್ನಮ್ ಅನ್ನಾತ್ ಪುರುಷಃ || (2.1)
‘ಆತ್ಮನಿಂದ ಆಕಾಶವು ಉದ್ಭವವಾಯಿತು. ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ನೀರು, ನೀರಿನಿಂದ ಪೃಥ್ವಿ, ಪೃಥ್ವಿಯಿಂದ ಸಸ್ಯವರ್ಗ ಮತ್ತು ಅದರಿಂದ ಅನ್ನ ಹಾಗೂ ಅನ್ನದಿಂದ ಪುರುಷನು ಅಸ್ತಿತ್ವಕ್ಕೆ ಬಂದನು’.
ನಮ್ಮ ಸುತ್ತಮುತ್ತಲಿನ ನಿಸರ್ಗದ ವಿವಿಧ ಅಂಶಗಳಿಂದ ಉತ್ಪತ್ತಿಯಾಗುವ ಆಹಾರವು ನಮಗೆ ಭೌತಿಕ ವ್ಯಕ್ತಿತ್ವವನ್ನು ನೀಡುತ್ತದೆ. ಆದ್ದರಿಂದ ನಾವು ಜನಿಸಿ ಜೀವಿಸುತ್ತಿರುವ ಪರಿಸರದಲ್ಲಿ ಬೆಳೆಯುವ ಆಹಾರವೇ, ನಮ್ಮ ದೇಹ ಪ್ರಕೃತಿಗೆ ಒಗ್ಗುವ ಅತ್ಯುತ್ತಮ ಆರೋಗ್ಯಕರ ಆಹಾರವಾಗಿದೆ. ಜಗತ್ತಿನಾದ್ಯಂತ ಇಂದು ಮಾನವರನ್ನು ಪೀಡಿಸುತ್ತಿರುವ ದೈಹಿಕ ಅಥವಾ ಮಾನಸಿಕ ರೋಗಗಳಿಗೆ ಮೂಲ ಕಾರಣವೆಂದರೆ ನಮ್ಮ ತಪ್ಪಾದ ಆಹಾರಶೈಲಿಯೇ ಆಗಿದೆ, ಎಂದರೆ ಎಲ್ಲೋ ದೂರದಲ್ಲಿ ಕೃತಕವಾಗಿ ತಯಾರಿಸಲ್ಪಟ್ಟ ಅಥವಾ ಅತಿಯಾಗಿ ಸಂಸ್ಕರಿಸಿದ ಆಹಾರವನ್ನು ತಪ್ಪಾದ ಪ್ರಮಾಣದಲ್ಲಿ, ತಪ್ಪಾದ ಸಮಯದಲ್ಲಿ ಸೇವಿಸುವುದು.
ಭಗವದ್ಗೀತೆಯ ಹದಿನೇಳನೇ ಅಧ್ಯಾಯದಲ್ಲಿ ಭಗವಾನ್ ಶ್ರೀಕೃಷ್ಣನು, ಆಹಾರವನ್ನು ಅವುಗಳ ಗುಣಾಧಾರಿತವಾಗಿ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಆಹಾರಗಳೆಂದು ಮೂರು ವಿಧಗಳಾಗಿ ವಿಂಗಡಿಸಿ, ಅವುಗಳ ಸೇವನೆಯು ಹೇಗೆ ನಮ್ಮ ಗುಣಗಳ ಮೇಲೆ ಪರಿಣಾಮ ಬೀರುತ್ತವೆಯೆಂಬುದನ್ನು ವಿವರಿಸಿದ್ದಾನೆ.
ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ | (17.7)
‘ಜನರು ತಮ್ಮ ಪ್ರವೃತ್ತಿಗೆ ಅನುಗುಣವಾಗಿ ತಮ್ಮ ಆಹಾರವನ್ನು ಆರಿಸಿಕೊಳ್ಳುತ್ತಾರೆ’.
ಆಯುಸ್ಸತ್ತ್ವಬಲಾರೋಗ್ಯಸುಖಪ್ರೀತಿವಿವರ್ಧನಾಃ |
ರಸ್ಯಾಃ ಸ್ನಿಗ್ಧಾಃ ಸ್ಥಿರಾ ಹೃದ್ಯಾ ಆಹಾರಾಃ ಸಾತ್ತಿ್ವ ಕಪ್ರಿಯಾಃ || (17.8)
‘ಸತ್ವ ಗುಣದಿಂದ ಕೂಡಿರುವವನು, ಆಯಸ್ಸು, ಸಾತ್ವಿಕತೆ, ಬಲ, ಆರೋಗ್ಯ, ಸಂತೋಷ ಹಾಗೂ ತೃಪ್ತಿಗಳನ್ನು ವರ್ಧಿಸುವ ಆಹಾರವನ್ನು ಆರಿಸಿಕೊಳ್ಳುತ್ತಾನೆ. ಅಂತಹ ಆಹಾರವು ಸ್ವಾಭಾವಿಕವಾಗಿಯೇ ರಸಯುಕ್ತ, ಪರಿಶುದ್ಧ, ಪುಷ್ಟಿಕರ ಹಾಗೂ ರುಚಿಕರವಾಗಿಯೂ ಇರುತ್ತದೆ’.
ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣ ರೂಕ್ಷವಿದಾಹೀನಃ |
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ || (17.9)
‘ಅತಿಯಾಗಿ ಖಾರ, ಉಪ್ಪು, ಹುಳಿ, ಕಹಿ ಹಾಗೂ ದಾಹವನ್ನುಂಟು ಮಾಡುವ ಒಣಕಲು ಮತ್ತು ಬಿಸಿಯಾದ ಆಹಾರವು ರಾಜಸಿಕ ಗುಣದಿಂದ ಕೂಡಿರುವವನಿಗೆ ಪ್ರಿಯವೆನಿಸುತ್ತದೆ. ಅಂತಹ ಆಹಾರವು ದುಃಖ-ಶೋಕಗಳನ್ನುಂಟು ಮಾಡುತ್ತದೆ’.
ಯಾತಯಾಮಂ ಗತರಸಂ ಪೂತಿ ಪರ್ಯುಷಿತಂ ಚ ಯತ್ |
ಉಚ್ಛಿಷ್ಟಮಪಿ ಚಾಮೇಧ್ಯಂಭೋಜನಂ ತಾಮಸಪ್ರಿಯಮ್ || (17.10)
‘ತಣ್ಣಗಿರುವ, ರಸಹೀನ, ದುರ್ಗಂಧಪೂರ್ಣ, ಹಳಸಿದ ಮತ್ತು ಅಶುದ್ಧವಾದ ಆಹಾರವು ತಾಮಸಿಕನಿಗೆ ಪ್ರಿಯವಾಗಿರುತ್ತದೆ’. ದೈವೀಗುಣಗಳನ್ನು ಬೆಳೆಸಿಕೊಂಡು ದೈವತ್ವವನ್ನು ಹೊಂದುವುದೇ ಮಾನವ ಜನ್ಮದ ಉದ್ದೇಶವಾಗಿದೆ. ಅದನ್ನು ಸಾಧಿಸಲು ಸಾತ್ವಿಕ ಯೋಚನೆಗಳು ಹಾಗೂ ಸಾತ್ವಿಕ ಜೀವನ ಕ್ರಮ ಅತ್ಯಗತ್ಯ. ಸಾತ್ವಿಕ ಆಹಾರವನ್ನು ಸೇವಿಸದಿದ್ದರೆ ಸಾತ್ವಿಕ ಜೀವನಕ್ರಮವು ಅಸಾಧ್ಯ. ಸರಿಯಾದ ಆಹಾರ ಕ್ರಮವನ್ನು ಪಾಲಿಸುವುದು ಕೇವಲ ದೈಹಿಕ ಪ್ರಕ್ರಿಯೆಯಾಗಿರದೆ, ನಮ್ಮ ದೌರ್ಬಲ್ಯ-ಪಾಪಗಳನ್ನು ತೊಡೆದು ಹಾಕಲು ಸಹಾಯಕವಾಗುವ ಒಂದು ಆಧ್ಯಾತ್ಮಿಕ ಸಾಧನೆಯೂ ಆಗಿದೆ. ಇದನ್ನೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೀಗೆ ಹೇಳಿದ್ದಾನೆ:
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ |
ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್ || (3.13)
‘ಭಗವರ್ದಪಿತ ಕರ್ಮಗಳೇ ಯಜ್ಞವಾಗುತ್ತವೆ. ಆಧ್ಯಾತ್ಮಿಕ ಮನೋಭಾವನೆಯುಳ್ಳವರು ತಾವು ಸೇವಿಸುವ ಆಹಾರವನ್ನು ಮೊದಲು ಭಗವಂತನಿಗೆ ಸಮರ್ಪಿಸಿ ನಂತರ ತಾವು ಸ್ವೀಕರಿಸುತ್ತಾರೆ. ಇವರು ಎಲ್ಲ ಪಾಪಗಳಿಂದ ಮುಕ್ತರಾಗುತ್ತಾರೆ. ಅದರ ಬದಲಿಗೆ, ಕೇವಲ ಭೋಗದೃಷ್ಟಿಯಿಂದಲೇ ಆಹಾರವನ್ನು ಅನುಭವಿಸುವವರು ಪಾಪವನ್ನು ಉಂಡಂತೆಯೇ ಸರಿ’.
ಹೀಗೆ ನಾವು ಆಹಾರವನ್ನು ಸ್ವೀಕರಿಸುವುದು ಕೇವಲ ಒಂದು ಭೌತಿಕ ಪ್ರಕ್ರಿಯೆಯಾಗಿರದೆ, ನಮ್ಮನ್ನು ದೈವತ್ವದೆಡೆಗೆ ಕೊಂಡುಹೋಗುವ ಯಜ್ಞವೇ ಆಗಿದೆ. ಈ ರೀತಿಯಲ್ಲಿ ಆಹಾರವು ಯಜ್ಞದಲ್ಲಿನ ಹವಿಸ್ಸಾಗಿ ಪರಿವರ್ತನೆಗೊಳ್ಳುತ್ತದೆ.
ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |
ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮಕರ್ಮಸಮಾಧಿನಾ || (4.24)
‘ದೈವಪ್ರಜ್ಞೆಯಲ್ಲಿ ನಿರತರಾದವರಿಗೆ, ಹವಿಸ್ಸು ಬ್ರಹ್ಮ, ಅರ್ಪಣೆಯೂ ಬ್ರಹ್ಮ, ಅರ್ಪಿಸಲು ಉಪಯೋಗಿಸುವ ಸಾಧನವೂ ಬ್ರಹ್ಮ, ಅರ್ಪಣೆಯನ್ನು ಸ್ವೀಕರಿಸುವ ಅಗ್ನಿಯೂ ಬ್ರಹ್ಮನೇ ಆಗಿರುತ್ತಾನೆ. ಇಂತಹ ಯಜ್ಞದಿಂದ ನಮಗೆ ಬ್ರಹ್ಮ ಪ್ರಾಪ್ತಿಯಾಗುತ್ತದೆ’. ನಾವು ಸೇವಿಸುವ ಆಹಾರವು ನಮ್ಮ ಅಂತರಂಗದಲ್ಲಿರುವ ಭಗವಂತನಿಗೆ ನಾವು ಅರ್ಪಿಸುವ ನೈವೇದ್ಯವಾಗಿದೆ. ಇಂತಹ ನೈವೇದ್ಯವು ಪರಿಶುದ್ಧವಾಗಿಯೂ, ಪವಿತ್ರವಾಗಿಯೂ ಇರಬೇಕಲ್ಲವೇ? ಭಗವಾನ್ ಶ್ರೀಸತ್ಯಸಾಯಿ ಬಾಬಾರವರು ಆಹಾರ ತಯಾರಿಸುವಾಗ ನಾವು ಗಮನಿಸಬೇಕಾದ ಮೂರು ಶುದ್ಧಿಗಳ ಬಗ್ಗೆ ಹೇಳುತ್ತಿದ್ದರು- ಪಾಕಶುದ್ಧಿ, ಪಾತ್ರಶುದ್ಧಿ ಹಾಗೂ ಪದಾರ್ಥಶುದ್ಧಿ. ಪಾಕಶುದ್ಧಿಯೆಂದರೆ ಆಹಾರ ತಯಾರಿಸುವ ಪರಿಸರದ ಸ್ವಚ್ಛತೆ, ಅಡುಗೆ ಮಾಡುವವರ ದೈಹಿಕ ಮತ್ತು ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವುದಾಗಿದೆ. ಪಾತ್ರಶುದ್ಧಿಯೆಂದರೆ ಆಹಾರ ತಯಾರಿಸಲು ಉಪಯೋಗಿಸುವ ಪಾತ್ರೆ-ಪಗಡೆಗಳ ಪರಿಶುದ್ಧತೆಯಾಗಿದೆ. ಆಹಾರ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು, ಧರ್ಮ ಯುತವಾಗಿ ಹಾಗೂ ಅಹಿಂಸಾತ್ಮಕವಾಗಿ ಸಂಗ್ರಹಿಸುವುದೇ ಪದಾರ್ಥಶುದ್ಧಿಯಾಗಿದೆ. ನಮ್ಮ ಉದರದಲ್ಲಿ ಜಠರಾಗ್ನಿಯಾಗಿ ನೆಲೆಸಿರುವ ಭಗವಂತನಿಗೆ, ನಾವು ಸೇವಿಸುವ ಆಹಾರವನ್ನು ನೈವೇದ್ಯವಾಗಿ
ಅರ್ಪಿಸುವಾಗ, ಸ್ವಾಭಾವಿಕವಾಗಿ ನಾವು ಪರಿಶುದ್ಧವಾದುದನ್ನೇ ಅರ್ಪಿಸಬೇಕಾಗಿದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಘೊಷಿಸಿರುವಂತೆ:
ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಾಃ |
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ || (15.14)
‘ಎಲ್ಲ ಜೀವಿಗಳ ಉದರದಲ್ಲಿ ಜಠರಾಗ್ನಿಯಾಗಿ ನಾನೇ ನೆಲೆಸಿರುತ್ತೇನೆ. ಪ್ರಾಣ ಮತ್ತು ಅಪಾನ ವಾಯುಗಳೊಂದಿಗೆ ಬೆರೆತು, ಸೇವಿಸಿದ ನಾಲ್ಕು ವಿಧದ ಆಹಾರಗಳನ್ನು ಜೀರ್ಣಿಸುವವನೂ ನಾನೇ ಆಗಿರುವೆ! (ನಾಲ್ಕು ವಿಧದ ಆಹಾರಗಳು ಜಗಿದು ತಿನ್ನುವ ಆಹಾರ, ಕುಡಿಯುವ ಆಹಾರ, ನೆಕ್ಕಿ ತಿನ್ನುವ ಹಾಗೂ ನುಂಗುವ ಆಹಾರಗಳು)’.
ಆದರೆ ಇಂದಿನ ಸಮಾಜದಲ್ಲಿ ಟಿ.ವಿ. ಮತ್ತು ಮೊಬೈಲ್ ಫೋನುಗಳ ವೀಕ್ಷಣೆ ಮಾಡುತ್ತಲೇ ಆಹಾರವನ್ನು ಸೇವಿಸುವುದು ನಮಗೆ ಅಭ್ಯಾಸವಾಗಿಬಿಟ್ಟಿದೆ! ಅದರೊಂದಿಗೆ ಸುತ್ತಮುತ್ತಲಿನ ಶಬ್ದಮಾಲಿನ್ಯ, ಅಶೌಚತೆ ಹಾಗೂ ಪೌಷ್ಟಿಕತೆಯ ದೃಷ್ಟಿಯಿಲ್ಲದೆ, ಕೇವಲ ನಾಲಿಗೆಯ ಚಪಲಕ್ಕಾಗಿ ನಾವು ಮಾಡುವ ಆಹಾರ ಸೇವನೆಯು ನಾವು ಇಂದು ಎದುರಿಸುತ್ತಿರುವ ಬಹುರೋಗ-ರುಜಿನಗಳ ಮೂಲವಾಗಿದೆ.
ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, ಕ್ಯಾನ್ಸರ್, ಹೃದಯ ರಕ್ತನಾಳದ ಸಮಸ್ಯೆಗಳು ಮತ್ತು ಮಧುಮೇಹಗಳಂತಹ ಜೀವನಶೈಲಿ ಸಂಬಂಧಿತ ಅಸಾಂಕ್ರಾಮಿಕ ರೋಗಗಳು ಇಂದು ತ್ವರಿತ ಗತಿಯಲ್ಲಿ ಹೆಚ್ಚುತ್ತಿವೆ. ಇದಕ್ಕೆಲ್ಲ ಮುಖ್ಯ ಕಾರಣ, ನಮ್ಮ ಅನಾರೋಗ್ಯಕರ ಆಹಾರಕ್ರಮವೇ ಆಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಬೆಳೆದ ಆಹಾರ ಪದಾರ್ಥಗಳು ನೈಸರ್ಗಿಕ ವ್ಯವಸ್ಥೆಯನ್ನು ಹಾಳುಮಾಡುವುದು ಮಾತ್ರವಲ್ಲದೆ, ನಮ್ಮ ದೇಹಕ್ಕೂ ಹಾನಿಯನ್ನುಂಟು ಮಾಡುತ್ತವೆ. ಅನಿಯಮಿತ, ಅನಿಶ್ಚಿತ ಅಥವಾ ತಡರಾತ್ರಿಯ ಆಹಾರ ಸೇವನೆಯಿಂದ ನಮ್ಮ ದೇಹದ ರಾಸಾಯನಿಕ ಕ್ರಿಯೆಯಲ್ಲಿ ಏರುಪೇರುಂಟಾಗುತ್ತದೆ. ಟಿ.ವಿ. ಹಾಗೂ ಮೊಬೈಲ್ಗಳ ವೀಕ್ಷಣೆಯೊಂದಿಗೆ ಸೇವಿಸುವ ಆಹಾರವು ಅಜೀರ್ಣವನ್ನು ಉಂಟುಮಾಡುತ್ತದೆ. ಸಂಸ್ಕರಿಸಿದ ಹಾಗೂ ಪೂರ್ವಸಿದ್ಧ ಆಹಾರ ಸೇವನೆಯು ನಮ್ಮ ದೇಹಕ್ಕೆ ಅತಿಯಾಗಿ ಆಹಾರ ಸಂರಕ್ಷಕಗಳು ಸೇರುವಂತೆ ಮಾಡಿ ಹಾನಿಯುಂಟು ಮಾಡುತ್ತದೆ.
ನಮ್ಮ ಆಲಸ್ಯ ಹಾಗೂ ಸದಾ ಸುಲಭ ಸೌಕರ್ಯಗಳನ್ನೇ ಅರಸುವ ನಮ್ಮ ಮನೋಭಾವವು ನಮ್ಮ ದೇಶದ ಉತ್ತಮ ಆಹಾರ ಪದ್ಧತಿಗಳ ಸಂಸ್ಕೃತಿಯನ್ನು ನಾವು ಮರೆಯುವಂತೆ ಮಾಡಿವೆ. ಇದು ಹೀಗೆಯೇ ಮುಂದುವರಿದರೆ, ಭವಿಷ್ಯದಲ್ಲಿ ನಾವು ಎದುರಿಸಬೇಕಾದ ಅತಿದೊಡ್ಡ ಪಿಡುಗೆಂದರೆ, ನಮ್ಮ ತಪ್ಪಾದ ಆಹಾರಕ್ರಮಗಳಿಂದ ಉದ್ಭವಿಸುವ ಅಸಾಂಕ್ರಾಮಿಕ ರೋಗಗಳೇ ಆಗಿದೆ!
ನಮ್ಮ ಪೂರ್ವಜರು ಆಹಾರವನ್ನು, ತಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವನ್ನು ರಕ್ಷಿಸುವ ಒಂದು ಪವಿತ್ರ ಔಷಧದ ರೂಪದಲ್ಲಿ ಕಾಣುತ್ತಿದ್ದರು. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಆಹಾರವೂ ಒಂದು ಭೋಗವಸ್ತುವಾಗಿ ಪರಿಣಮಿಸಿದೆ. ಇಂದು ನಮ್ಮ ಭಾರತ ದೇಶವು ಜಗತ್ತಿನಲ್ಲಿ ತ್ವರಿತ ಪ್ರಗತಿಪರ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಕೇವಲ ಸರಿಯಾದ ಆಹಾರ ಕ್ರಮದಿಂದ ಗುಣಪಡಿಸಬಹುದಾದ ರೋಗಗಳ ಮೇಲೆ ದುಬಾರಿಯಾಗಿ ಖರ್ಚು ಮಾಡುವುದು ಮತ್ತು ಅಂತಹ ರೋಗಗಳಿಗೆ ಬಲಿಯಾಗಿ, ದೇಶದ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುವುದು ಯೋಗ್ಯವಲ್ಲ.
ಆದ್ದರಿಂದ, ನಾವು ಉತ್ತಮ ಆಹಾರ ಸಂಸ್ಕೃತಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಆಹಾರವನ್ನೇ ಭಗವಂತನೆಂದು ಕಂಡು ಹಾಗೂ ಆಹಾರ ಸೇವನೆಯನ್ನು ನೈವೇದ್ಯದಂತೆ ಭಗವಂತನಿಗೆ ಅರ್ಪಿಸಬೇಕು. ಆಗ ನಾವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಬೆಳೆಸಿಕೊಂಡು ಒಂದು ಆರೋಗ್ಯಪೂರ್ಣ ಬಲಿಷ್ಠ ರಾಷ್ಟ್ರವನ್ನು ನಿರ್ವಿುಸಲು ಸಾಧ್ಯ.