

| ಧನಂಜಯ ಜೀವಾಳ ಬಿ.ಕೆ.
ಕೊಟ್ಟಿಗೆಹಾರ ಸಮೀಪದ ಬಾಳೂರು ಮೀಸಲು ಅರಣ್ಯದ ನಡುವಿನ ಮಲಯಮಾರುತ ಪ್ರದೇಶದಲ್ಲಿ ಜೀವವೈವಿಧ್ಯ ತಾಣವೊಂದನ್ನು ಅಭಿವೃದ್ದಿಪಡಿಸಿ ಅಧ್ಯಯನಶೀಲ ವಿದ್ಯಾರ್ಥಿಗಳು ಮತ್ತು ಆಸಕ್ತರಿಗೆ ಜ್ಞಾನಾರ್ಜನೆಗೆ ಅನುವು ಮಾಡಿಕೊಡಬೇಕೆಂದು 1999ರಲ್ಲೇ ನಮ್ಮ ನೇಚರ್ ಕ್ಲಬ್ನಿಂದ ಯೋಜನೆಯೊಂದನ್ನು ತಯಾರಿಸಿ, ಅದರ ಅನುಷ್ಠಾನಕ್ಕೆ ಪ್ರಯತ್ನಿಸಲಾಗಿತ್ತು. ಆಗ ತೇಜಸ್ವಿಯವರಿಗೆ ಯೋಜನೆಯ ವಿವರ, ವಿದೇಶೀ ನೆರವಿನ ವಿಚಾರವನ್ನು ತಿಳಿಸಿದೆ. ಹನ್ನೆರಡು ಪುಟಗಳ ಯೋಜನಾ ವರದಿ ಮತ್ತು ಆ ನಂತರದ ಪತ್ರ ವ್ಯವಹಾರಗಳನ್ನು ಪರಿಶೀಲಿಸಿದ ತೇಜಸ್ವಿಯವರು ವೆರೀಗುಡ್! ಒಳ್ಳೆಯ ಕೆಲಸ ಮಾಡಿದ್ದೀಯಾ. ಇಷ್ಟೆಲ್ಲಾ ಆಗೋವರೆಗೂ ಬಾಯನ್ನೇ ಬಿಡ್ಲಿಲ್ಲವಲ್ಲ ಮಾರಾಯ! ಆದರೆ............. ಎಂದು ಮೌನವಾದರು.
ಸುರಂಗದೊಳಗೆ ಹೋದ ರೈಲು ಹೊರಗೆ ಯಾವಾಗ ಹೊರಬರುವುದೆಂಬ ಆತಂಕದಲ್ಲಿ ಕಾಯುತ್ತಾ ಕುಳಿತೆ. ಸುಮಾರು ಐದು ನಿಮಿಷ ಮೌನವೇ ರಾಜ್ಯವಾಳಿತು. ಸುಮಾರು ಜನ, ಸಂಘ-ಸಂಸ್ಥೆಗಳು ವಿದೇಶೀ ನೆರವನ್ನು ತರಿಸಿಕೊಂಡು ಯೋಜನೆ ಅಂತ ಏನೋ ಪ್ರಾರಂಭಿಸಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳ ಹಣಕಾಸಿನ ವ್ಯವಹಾರ ಸರಿಯಾಗಿಲ್ಲ ಕಣಯ್ಯ. ಈ ರೀತಿಯ ಕೆಲಸ ಮಾಡಬೇಕಾದರೆ ನೀನು ಆ ಜಾಗದ ಅಕ್ಕಪಕ್ಕದ ಒತ್ತುವರಿದಾರರ ಜತೆ ತಿಕ್ಕಾಡಲೇ ಬೇಕಾಗುತ್ತದೆ. ಇಲ್ಲಸಲ್ಲದ ತೊಂದರೆ ಕೊಡುತ್ತಾರೆ. ಎಷ್ಟೇ ಸರಿ ಇದ್ದರೂ ವಿನಾ ಕಾರಣ ಅರೋಪ ಮಾಡುತ್ತಾರೆ. ನೀನು ಪರಿಸರ ಅಧ್ಯಯನ ಮಾಡಿಸುತ್ತಿಯೋ ಇಲ್ಲಾ ಅಕ್ಕಪಕ್ಕದವರೊಡನೆ ಗುದ್ದಾಡುತ್ತ ಕೋರ್ಟು-ಕಚೇರಿ ಅಂತ ಅಲೀತಾ ಕಾಲ ಕಳೀತೀಯೋ? ಲಂಚ ಕೊಟ್ಕೊಂಡು, ಇನ್ಫ್ಲೂಯೆನ್ಸ್ ಮಾಡಿಸಿಕೊಂಡು ಅಲೀತಾ ಇರ್ತೀಯಾ? ಅಯೋಗ್ಯ! ಎಲ್ಲಿಂದಲೋ ದುಡ್ಡು ತರಿಸಿಕೊಂಡು ನೇಚರ್ ಕ್ಲಬ್ನವರು ಜೀಪ್ನಲ್ಲಿ ತಿರುಗುತ್ತಾ ಮಜಾ ಮಾಡ್ತಿದ್ದಾರೆ ಅಂತ ಸುದ್ದಿಯಾಗುತ್ತದೆ. ನಿನ್ನ ಉದ್ದೇಶ ಒಳ್ಳೆಯದ್ದೇ. ನಾನು ಹೇಳಿದ್ದನ್ನು ಯೋಚಿಸಿ ನೋಡು ಎಂದರು. ಅಲ್ಲಿಗೆ ನಮ್ಮ ವಿದೇಶೀ ನೆರವಿನ ಎಪಿಸೋಡ್ ಕೊನೆಯುಸಿರೆಳೆಯಿತು. ಅದೇ ಯೋಜನೆಯು ಈಗ ಪರಿಷ್ಕೃತಗೊಂಡು ತೇಜಸ್ವಿಯವರ ಕಾಲಾನಂತರ ಅವರದೇ ಹೆಸರಿನಲ್ಲಿ ಜೀವ ವೈವಿಧ್ಯ ಕೇಂದ್ರವಾಗಿ ಹೆಚ್ಚೂ ಕಡಿಮೆ ಅದೇ ಪರಿಸರದಲ್ಲಿ ರೂಪುಗೊಳ್ಳುತ್ತಿದೆ. ರಾಜ್ಯ ಸರ್ಕಾರದ ನೆರವಿನಲ್ಲಿ ತೇಜಸ್ವಿಯವರ ಬದುಕು, ಬರಹ, ಚಿಂತನೆಗಳನ್ನು ಸಾಕಾರಗೊಳಿಸುವ ಗುರುತರ ಜವಾಬ್ದಾರಿ ನಮ್ಮ ವಿಸ್ಮಯ ಪ್ರತಿಷ್ಠಾನದ ಮೇಲಿದೆ. ಈ ಪ್ರಯತ್ನವನ್ನು ತೇಜಸ್ವಿಯವರಿಗೆ ಸ್ಮಾರಕ ಎಂದು ಸೀಮಿತ ದೃಷ್ಟಿಯಿಂದ ಕಾಣುವ ಅಗತ್ಯವಿಲ್ಲ. ತೇಜಸ್ವಿಯವರ ಕಾರ್ಯಕ್ಷೇತ್ರದ ಮುಂದುವರಿದ ಹಾಗೂ ಅಷ್ಟೇ ಜವಾಬ್ದಾರಿಯುತ ಹೊಣೆಗಾರಿಕೆಯೆಂದು ಮನವರಿಕೆ ಮಾಡಿಕೊಂಡು ಕಾರ್ಯತತ್ಪರರಾಗುವ ಸಂಕ್ರಮಣದ ಕಾಲ ಇದಾಗಿದೆ.
ತೇಜಸ್ವಿಯವರ ಮನಸೂರೆಗೊಂಡಿದ್ದ ಪ್ರದೇಶ: ಬಿಡುವಾದಾಗಲೆಲ್ಲ ಸಹವರ್ತಿಗಳೊಡನೆ ಪಶ್ಚಿಮ ಘಟ್ಟದ ಚಾರ್ವಡಿಯ ಮೂಡಿಗೆರೆಯಿಂದ 19 ಕಿ. ಮೀ. ದೂರದ ಕಡೂರು- ಮಂಗಳೂರು ಹೆದ್ದಾರಿಗೆ ಹೊಂದಿಕೊಂಡಿರುವ ಬಾಳೂರು ಮೀಸಲು ಅರಣ್ಯಕ್ಕೆ ಭೇಟಿ ನೀಡಿ ಪ್ರಕೃತಿಯ ಸತ್ಯದರ್ಶನ ಪಡೆಯುತ್ತಿದ್ದ ತೇಜಸ್ವಿಯವರಿಗೆ ನಾವು ಆಯ್ಕೆ ಮಾಡಿಕೊಂಡಿರುವ ಸ್ಥಳ ಅಪ್ಯಾಯಮಾನವಾದುದ್ದಾಗಿತ್ತು.
ತೇಜಸ್ವಿಯವರ ಕೃತಿಗಳು ಹಾಗೂ ವಿಚಾರ ಮಂಥನಗಳಲಿ ್ಲಟ್ಟೂ ಬಿಡದೇ ಅವಿನಾಭಾವವಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರಕೃತಿ, ಗ್ರಾಮೀಣ ಬದುಕು, ಸಾಹಸ ಶೀಲತೆ, ವಿಸ್ಮಯಗೊಳಿಸುವ ಸರಳ ವಿಜ್ಞಾನ, ಐತಿಹಾಸಿಕ ಸತ್ಯಗಳು, ಜೀವಜಗತ್ತಿನ ಕೌತುಕಗಳು, ಮಲೆನಾಡಿನ ಕಾಡಿನ ನಿಗೂಢತೆ, ಪ್ರಾಚೀನ ನಾಗರಿಕತೆಗಳು, ಬೆಚ್ಚಿಬೇಳಿಸುವ ಅಂತರಿಕ್ಷದ ವಿದ್ಯಮಾನಗಳು, ಚಕಿತಗೊಳಿಸುವ ಜೀವ ವೈವಿಧ್ಯಗಳ ಅದ್ಭುತ ಅನಾವರಣ, ಜಗತ್ತಿನ ದಿಕ್ಕನ್ನೇ ಬದಲಿಸಿದ ಆವಿಷ್ಕಾರಗಳು, ದುರಂತಗಳು, ಮಹಾಯುದ್ಧಗಳು, ಹೀಗೆ ಕೈಯ್ಯಾಡಿಸದ ಕ್ಷೇತ್ರವೇ ಇಲ್ಲವೇನೋ ಎಂಬಂತೆ ತೇಜಸ್ವಿಯವರು ಬಿಡುವಿಲ್ಲದೇ ಸಾಹಿತ್ಯಿಕವಾಗಿ ದುಡಿದಿದ್ದಾರೆ. ರಂಗಭೂಮಿ ಚಟುವಟಿಕೆ, ಪರಿಸರ ಸಂಬಂಧಿ ಹೋರಾಟಗಳು, ಕನ್ನಡ ಭಾಷೆಯ ಗಣಕೀಕರಣದ ಸಾಧ್ಯತೆ, ಇ-ಗವರ್ನೆನ್ಸ್, ವಿಶೇಷವಾಗಿ ವಿದ್ಯಾರ್ಥಿ ಯುವಜನರ ಮತ್ತು ಮಕ್ಕಳ ಜ್ಞಾನವರ್ಧನೆಗೆ ತೇಜಸ್ವಿಯವರು ನೀಡಿದ ಮನ್ನಣೆಯನ್ನು ಮುಂದು ವರೆಸಿಕೊಂಡು ಹೋಗುವ ಕವಲುದಾರಿಯಲ್ಲಿ ನಾವಿಂದು ನಿಂತಿದ್ದೇವೆ.
ಮೂಡಿಗೆರೆಯ ಆಸುಪಾಸಿನಲ್ಲಿ ಒಂದು ಸರ್ವ ಸುಸಜ್ಜಿತ ಜೈವಿಕ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದ ಅವಶ್ಯಕತೆಯನ್ನು ಮನಗಂಡ ಮೂಡಿಗೆರೆಯ ನೇಚರ್ ಕ್ಲಬ್ (ತೇಜಸ್ವಿಯವರು ಹಿರಿಯ ಸದಸ್ಯರಾಗಿದ ್ದ ಪರಿಸರ ಸಂವೇದಿ ಸಂಸ್ಥೆ) ನ ಅಧ್ಯಯನ ತಂಡ ಸದರಿ ಯೋಜನೆಯ ರೂಪು-ರೇಷೆಯನ್ನು ತಯಾರಿಸಿದೆ. ಕನಿಷ್ಠ 300 ಎಕರೆ ಅರಣ್ಯ ಪ್ರದೇಶ ಹಾಗೂ ಅದಕ್ಕೆ ಹೊಂದಿಕೊಂಡಂತೆ ಸುಮಾರು 15 ಎಕರೆ ಕಂದಾಯ ಭೂಮಿ ಅಗತ್ಯವಿದೆ. ನೈಸರ್ಗಿಕ ಸಾಧ್ಯತೆಗಳು, ಮೂಲಭೂತ ಸೌಕರ್ಯಗಳು, ಸಂಚಾರ ಸೌಲಭ್ಯ ಹಾಗೂ ಯೋಜಿತ ಕಾರ್ಯಗಳ ನಿರೀಕ್ಷಿತ ಸಾಫಲ್ಯದ ನಿಟ್ಟಿನಿಂದ ಬಾಳೂರು ಮೀಸಲು ಅರಣ್ಯದ ಈ ಪ್ರದೇಶ ಹಾಗೂ ಹೊಂದಿಕೊಂಡಿರುವ ಕಂದಾಯ ಭೂಮಿಯನ್ನು ಈ ಜೈವಿಕ ಅಧ್ಯಯನ ಕೇಂದ್ರದ ಯೋಜನೆಗೆ ಸರ್ಕಾರವು ನೀಡಿ ಸಹಕರಿಸಿದಲ್ಲಿ ತೇಜಸ್ವಿಯವರ ಬದುಕಿನ ಉದ್ದೇಶಗಳಿಗೆ ಒಂದು ಶಾಶ್ವತ ಮೂರ್ತರೂಪವನ್ನು ನೀಡಲು ಸಾಧ್ಯವಿದೆ.
ನಾವಂದುಕೊಂಡಂತೆ ಎಲ್ಲವೂ ನೆರವೇರಿದರೆ ಕರ್ನಾಟಕದ ಮಟ್ಟಿಗೆ ಇದೊಂದು ಮಾದರಿ ಜೀವ ವೈವಿಧ್ಯ ತಾಣವಾಗಲಿದ್ದು, ಶಾಶ್ವತ ಜ್ಞಾನಪ್ರಸಾರ ಕೇಂದ್ರವಾಗಲಿದೆ. ಈ ಕಾರ್ಯದಲ್ಲಿ ಹಿರಿಯರಾದ ಗಂಗಯ್ಯ ಹೆಗ್ಗಡೆಯವರ ಮಾರ್ಗದರ್ಶನ ಹಾಗೂ ಯುವ ಮುಂದಾಳು ಬಿ.ಎಲ್. ಶಂಕರ್ ಅವರ ಸಾರಥ್ಯವಿರುವುದರಿಂದ ಜತೆಗೆ ಸರಕಾರದ ಸಹಯೋಗ ಮತ್ತು ಪ್ರಾಥಮಿಕ ಆರ್ಥಿಕ ನೆರವಿರುವುದರಿಂದ ಖಂಡಿತವಾಗಿಯೂ ಗುರಿ ತಲುಪುವ ಭರವಸೆ ಇದೆ. ತೇಜಸ್ವಿಯವರ ಬಹುಕಾಲದ ಒಡನಾಡಿಗಳು ಮತ್ತು ಅಭಿಮಾನಿಗಳಾದ ಸೇನಾನಿ, ಬೆಳವಾಡಿ, ಗಿರೀಶ್, ಗಿರಿಜಾಶಂಕರ್, ದೀಪಕ್, ಮಹೇಶ್, ಕೃಪಾಕರ, ವಾಸುದೇವ್, ಮೋಟಮ್ಮ, ಕಡಿದಾಳ್ ಶಾಮಣ್ಣ, ಶ್ರೀರಾಮ್ ಮುಂತಾದವರ ಸಹೃದಯೀ ಪ್ರಯತ್ನಗಳು ಪ್ರತಿಷ್ಠಾನದ ಆಶಯಗಳು ಕಾರ್ಯರೂಪಕ್ಕೆ ಬರಲು ನೆರವಾಗುತ್ತಲಿವೆ. ವಿಸ್ಮಯ ಪ್ರತಿಷ್ಠಾನದಲ್ಲಿ ಪ್ರದೀಪ್ ಕೆಂಜಿಗೆ, ವಿನಯ ಪ್ರಸಾದ್, ರಾಘವೇಂದ್ರ, ಸಾತಿ ಸುಂದರೇಶ್, ಗಣೇಶ್ ಮತ್ತು ನನ್ನಂತಹ ಉತ್ಸಾಹಿಗಳ ಕಾರ್ಯಪಡೆ ಇರುವುದರಿಂದ ತೇಜಸ್ವಿಯವರ ಆಶಯಗಳು ಜನಮಾನಸವನ್ನು ತಲುಪಲು ಹಾದಿ ಸುಗಮವಾಗಬಹುದೆಂಬ ನಿರೀಕ್ಷೆ ಇದೆ.