ಜೇನಿನ ಗೂಡು ನಾವೆಲ್ಲಾ...: ಇಂದು ಕುಟುಂಬ ದಿನ

Family
Published on

‘ಜೇನಿನ ಗೂಡು ನಾವೆಲ್ಲಾ... ಬೇರೆಯಾದರೆ ಜೇನಿಲ್ಲಾ...’ ಈ ಹಾಡು ಕಿವಿಗೆ ಬಿದ್ದಾಕ್ಷಣ ಕೂಡುಕುಟುಂಬ, ಮನೆಯ ಒಗ್ಗಟ್ಟು ನೆನಪಾಗುತ್ತೆ. ಜೇನಿನ ಗೂಡಿನಂತೆ ಪ್ರತಿ ಕುಟುಂಬ ಇದ್ದರೆ ಅಲ್ಲಿ ಮನಸ್ತಾಪ, ಸಮಸ್ಯೆ, ದ್ವೇಷ ಎಂಬುದು ಸುಳಿಯುವುದಿಲ್ಲ. ಪರಸ್ಪರ ಸಹಕಾರ, ಪ್ರೋತ್ಸಾಹ, ನೋವು- ನಲಿವಿನಲ್ಲಿ ಸಹಭಾಗಿತ್ವ ತುಂಬಿ ತುಳುಕುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಆ ಮೂಲಕ ಇಡೀ ವಿಶ್ವವನ್ನೇ ಪ್ರೀತಿಸಬೇಕೆಂಬ ಸದುದ್ದೇಶದಿಂದ ಪ್ರತಿ ವರ್ಷ ಮೇ 15ರಂದು ವಿಶ್ವ ಕುಟುಂಬ ದಿನ ಆಚರಿಸಲಾಗುತ್ತಿದೆ.

ಮಕ್ಕಳೇ, ನಿಮಗಿದೋ ಒಳ್ಳೆಯ ಅವಕಾಶ. ಹೇಗಿದ್ದರೂ ಕರೊನಾ ಲಾಕ್​ಡೌನ್ ನೆಪದಲ್ಲಿ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದೀರಿ. ನಿಮ್ಮ ಕುಟುಂಬದ ಬಗ್ಗೆ ಅರಿಯಿರಿ. ಕುಟುಂಬ ಅಂದ್ರೆ ತಂದೆ-ತಾಯಿ-ಮಕ್ಕಳು ಮಾತ್ರವಲ್ಲ, ಮುತ್ತಜ್ಜಿ-ಮುತ್ತಾತ, ಅಜ್ಜಿ-ತಾತ, ಅತ್ತೆ-ಮಾವ, ದೊಡ್ಡಪ್ಪ-ಚಿಕ್ಕಪ್ಪ, ಸಹೋದರ-ಸಹೋದರಿ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇವರೆಲ್ಲರೂ ಒಂದೇ ಸೂರಿನಡಿ ವಾಸ ಇರುವುದನ್ನು ನೋಡ ಹೊರಟರೆ ತೀರ ಅಪರೂಪ. ಹಿಂದಿನ ಕಾಲದಲ್ಲಿ ಇದ್ದ ಕೂಡು ಕುಟುಂಬ ಈಗಿಲ್ಲ. ಆದರೂ ಈಗಿರುವ ವ್ಯವಸ್ಥೆಯಲ್ಲೇ ಕುಟುಂಬವನ್ನ ಪ್ರೀತಿಸಿ, ಗೌರವಿಸಬೇಕಿದೆ. ಅಂದಹಾಗೆ ಈ ದಿನ ನೀವೇನು ಮಾಡಬಹುದು ಗೊತ್ತಾ?

ಮನೆಯಲ್ಲಿರಲಿ ಫ್ಯಾಮಿಲಿ ಫೋಟೋ: ಕುಟುಂಬ ಸದಸ್ಯರನ್ನೊಳಗೊಂಡ ಚಂದದ ಫೋಟೋ ಇದ್ದರೆ ಅದಕ್ಕೊಂದು ಫ್ರೇಮ್ ಹಾಕಿಸಿ ಮನೆಯ ಗೋಡೆಗೆ ನೇತು ಹಾಕಿ. ಆ ಫೋಟೋ ಸದಾ ಕಣ್ಣಿಗೆ ಬೀಳುವಂತಿರಲಿ. ಆಗ ನಮ್ಮವರು-ತಮ್ಮವರು ಎಂಬುದು ಮನಸ್ಸಲ್ಲಿ ಬೇರೂರುತ್ತದೆ. ಸದ್ಯ ನಿಮ್ಮ ಬಳಿ ಫೋಟೋ ಇಲ್ಲವೇ? ಚಿಂತಿಸದಿರಿ. ಲಾಕ್​ಡೌನ್ ಮುಗಿಯುತ್ತಿದ್ದಂತೆ ಎಲ್ಲರೂ ಒಮ್ಮೆ ಒಟ್ಟಿಗೆ ಸೇರಿ ತೆಗೆಸಿಕೊಂಡರಾಯಿತು. ಈ ಫೋಟೋ ಮುಂದಿನ ತಲೆ ಮಾರಿಗೂ ಸಂಗ್ರಹಯೋಗ್ಯ.

ಎಲ್ಲರಿಗೂ ಶುಭ ಕೋರಿ: ನಿಮ್ಮ ಕುಟುಂಬದ ಪ್ರತಿ ಸದಸ್ಯರಿಗೂ ‘ವಿಶ್ವ ಕುಟುಂಬ ದಿನ’ಕ್ಕೆ ಶುಭ ಕೋರಿ. ಈ ಕುಟುಂಬದಲ್ಲಿ ನಾವೂ ಒಬ್ಬರಾಗಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ, ನೀವೆಲ್ಲರೂ ನನಗೆ ಸಿಕ್ಕಿದ್ದು ಸೌಭಾಗ್ಯ... ಎಂದು ಮನಬಿಚ್ಚಿ ಮಾತನಾಡಿ. ಆಗ ಅವರಿಗೂ ನಿಮ್ಮ ಮೇಲಿನ ಗೌರವ ಸಹಜವಾಗಿ ಹೆಚ್ಚುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಪ್ರೀತಿಯ ಅಪ್ಪುಗೆ ಇರುವೆಡೆ ಸಂಬಂಧ ಗಟ್ಟಿಯಾಗುತ್ತದೆ.

ಕುಟುಂಬಕ್ಕೊಂದು ಪತ್ರ: ಮಕ್ಕಳೇ ನಿಮ್ಮ ಕುಟುಂಬ ಕುರಿತು ನಿಮಗೆ ತೋಚಿದ್ದನ್ನು ಅಕ್ಷರಕ್ಕೆ ಇಳಿಸಿ. ನಿಮ್ಮ ಕಲ್ಪನೆಯಲ್ಲಿ ಕುಟುಂಬ ಅಂದ್ರೇನು? ಯಾವುದಿಷ್ಟ, ಏನಿರಬೇಕಿತ್ತು... ಎಲ್ಲವನ್ನೂ ಬರೆದು ಪ್ರೀತಿಯ ಅಪ್ಪ-ಅಮ್ಮ-ಅಜ್ಜಿ-ತಾತ ಯಾರಿಗಾದರೂ ಕೊಡಿ. ಅವರು ನಿಮ್ಮಲ್ಲಿನ ತಿಳಿವಳಿಕೆಗೆ ಮತ್ತಷ್ಟು ಇಂಬು ನೀಡುತ್ತಾರೆ. ಹೇಗಿದ್ದರೂ ಲಾಕ್​ಡೌನ್ ನೆಪದಲ್ಲಿ ಮನೆಯಲ್ಲೇ ಕೂರುವ ಸ್ಥಿತಿ ಇದೆ. ಪಕ್ಕದಲ್ಲೇ ಅಪ್ಪ-ಅಮ್ಮ ಇದ್ದರೂ ಹಾಗೆ ಸುಮ್ಮನೆ ಪತ್ರ ಬರೆದು ಕೊಡಿ. ಖುಷಿಯಾಗ್ತಾರೆ. ಇನ್ನು ಊರಲ್ಲಿರುವ ಅಜ್ಜಿ-ತಾತ-ಮಾವನಿಗೂ ಕಾಗದ ಬರೆಯಿರಿ. ಪತ್ರದ ಫೋಟೊ ತೆಗೆದು ವಾಟ್ಸ್​ಆಪ್ ಕಳಿಸಿ. ನಿಮ್ಮ ಪುಟ್ಟ ಕೈಗಳಲ್ಲಿ ಮೂಡಿದ ಪತ್ರ ಅವರ ಪಾಲಿಗೆ ಖುಷಿಯ ಹೂರಣ.

ಆಚಾರ, ವಿಚಾರ ಗೊತ್ತಿರಲಿ: ಪ್ರತಿ ಕುಟಂಬಕ್ಕೂ ತನ್ನದೇ ಆದ ಆಚಾರ-ವಿಚಾರ ಇದ್ದೇ ಇರುತ್ತೆ. ನಿಮ್ಮ ಕುಟುಂಬದ ಬಗ್ಗೆಯೂ ಮನೆಯ ಹಿರಿಯರ ಬಳಿ ಕೇಳಿ ತಿಳಿದುಕೊಳ್ಳಿ. ಹಿರಿಯರು ವಂಶಪಾರಂಪರ್ಯವಾಗಿ ನಡೆಸಿಕೊಂಡು ಬಂದ ಸಂಪ್ರದಾಯ, ಮೂಲ ಕಸುಬು, ಜೀವನ ಕ್ರಮ... ಹೀಗೆ ಎಲ್ಲವೂ ಗೊತ್ತುಮಾಡಿಕೊಳ್ಳಿ. ಅವರು ಪಟ್ಟ ಕಷ್ಟ, ನಡೆಸಿದ ಹೋರಾಟ, ಎದುರಾದ ಸಮಸ್ಯೆಗಳ ಬಗ್ಗೆ ಅರಿವಿದ್ದರೆ ನಿಮ್ಮ ಬದುಕಿಗೆ ಮುಂದೊಂದು ದಿನ ದಾರಿ ದೀಪ ಆಗಬಹುದು.

ಕೈ ತುತ್ತು ಬಲ್ಲೋನೇ...: ಅಮ್ಮ ಇಲ್ಲವೇ ಅಜ್ಜಿ ಕೈ ತುತ್ತು ಕೊಡುತ್ತಿದ್ದರೆ ಹೊಟ್ಟೆ ಬಿರಿಯುವಷ್ಟು ತಿನ್ನಬೇಕು ಅನ್ನಿಸುತ್ತೆ. ಬಿಡುವಿದ್ದಾಗ ಮನೆಯ ಸದಸ್ಯರೆಲ್ಲರೂ ಕೈ ತುತ್ತಿನ ಊಟಕ್ಕೂ ಸಮಯ ಮೀಸಲಿಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net