ಕೇರಳ ಕುವರಿ ಸಂಜನಾ ಜಾರ್ಜ್ ಮನರಂಜನಾ ಕುಸ್ತಿ!

Lalitha 2nd lead
Published on

ವಿಶ್ವವೇ ಅಚ್ಚರಿಗೊಳ್ಳುವಂತಹ ವರ್ಲ್ಡ್ ರೆಸ್ಲಿಂಗ್ ಎಂಟರ್​ಟೇನ್​ವೆುಂಟ್ (ಡಬ್ಲ್ಯುಡಬ್ಲ್ಯುಇ) ಎಂಬ ಮಾಯಾಲೋಕಕ್ಕೆ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಕುವರಿಯೊಬ್ಬಳು ಪ್ರವೇಶ ಪಡೆದಿದ್ದಾಳೆ. ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾಗಿರುವ ಸಂಜನಾ ಜಾರ್ಜ್ ಕುರಿತ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.

| ರಮೇಶ್​ಕುಮಾರ ಎಡಮೋಳೆ

ಅಡುಗೆ ಮನೆಯಿಂದ ಹಿಡಿದು ದೇಶದ ಅಧಿಕಾರ ಚುಕ್ಕಾಣಿ ಹಿಡಿಯುವವರೆಗೂ ಭಾರತೀಯ ಮಹಿಳೆಯರು ತಾವ್ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಅದರಲ್ಲೂ ಪುರುಷ ಪ್ರಧಾನವಾಗಿರುವ ‘ಡಬ್ಲ್ಯುಡಬ್ಲ್ಯುಇ’ನಲ್ಲಿ ಮಹಿಳೆಯರ ಸಂಖ್ಯೆ ಬೆರಳಣಿಕೆಯಷ್ಟು. ಭಾರತೀಯರ ಕೊರತೆಯಂತೂ ಎದ್ದು ಕಾಣುತ್ತಿದೆ. ಆದರೆ, ಆ ಕೊರತೆಯನ್ನು ಕೇರಳದ ಯುವತಿ ಸಂಜನಾ ಜಾರ್ಜ್ ನೀಗಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಸ್ತುತ ಸಕ್ರಿಯರಾಗಿರುವ ಒಬ್ಬಳೇ ಭಾರತೀಯಳು ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.

ಬಾಲ್ಯದಲ್ಲಿಯೇ ಡಬ್ಲ್ಯುಡಬ್ಲ್ಯುಇ ಸ್ಟಾರ್ ಆಗಬೇಕು ಎನ್ನುವ ಕನಸು ಕಟ್ಟಿಕೊಂಡು ಕಠಿಣ ಪರಿಶ್ರಮದಿಂದ ತನ್ನ ಗುರಿ ತಲುಪಿದ ಸಂಜನಾರ ರೋಚಕ ಬದುಕಿನ ಪಯಣ ಇತರರಿಗೂ ಸ್ಪೂರ್ತಿದಾಯಕ. ಚಿಕ್ಕವಳಿದಾಗಲೇ ಸಂಜನಾ ತಂದೆ ಜತೆ ಕುಳಿತು ಡಬ್ಲ್ಯುಡಬ್ಲ್ಯುಇ ನೋಡುತ್ತಿದ್ದರು. ಈ ಕ್ಷೇತ್ರವನ್ನು ಪ್ರವೇಶಿಸುವ ಆಸೆಗೆ ಇದೇ ಮೊದಲ ಪ್ರೇರಣೆಯಾಯಿತು. ಚಿಕ್ಕ ವಯಸ್ಸಿನಲ್ಲೇ ಡಬ್ಲ್ಯುಡಬ್ಲ್ಯುಇ ಅಭಿಮಾನಿಯಾದರು. ತಾನೂ ಅದರಲ್ಲಿ ಭಾಗವಹಿಸಬೇಕೆಂಬ ಗುರಿ ಇಟ್ಟುಕೊಂಡರು. ಮಗಳ ಈ ಆಸೆಗೆ ಒತ್ತಾಸೆಯಾಗಿ ನಿಂತವರು ತಂದೆ ವಿ. ಚಾಕೊ ಜಾರ್ಜ್. ಕೊನೆಗೂ ಪರಿಶ್ರಮದಿಂದ 26ನೇ ವಯಸ್ಸಿನಲ್ಲಿ ಗುರಿ ತಲುಪಿರುವ ಸಂಜನಾ, ಡಬ್ಲ್ಯುಡಬ್ಲ್ಯುಇ ವೇದಿಕೆ ಹತ್ತಲು ಸಜ್ಜಾಗಿದ್ದಾರೆ.

ದಕ್ಷಿಣ ಭಾರತದ ಮೊದಲ ಸ್ಟಾರ್: ಹರಿಯಾಣದ ಜುಲಾನಾ ನಿವಾಸಿಯಾಗಿರುವ ಭಾರತೀಯ ವೃತ್ತಿಪರ ಕುಸ್ತಿಪಟು ಕವಿತಾದೇವಿ 2016ರಲ್ಲಿ ಡಬ್ಲ್ಯುಡಬ್ಲ್ಯುಇಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ. ಇದೀಗ ಸಂಜನಾ, ಡಬ್ಲ್ಯುಡಬ್ಲ್ಯುಇಯಲ್ಲಿ ಭಾರತದ ಎರಡನೇ ಹಾಗೂ ದಕ್ಷಿಣ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಆಯ್ಕೆ ಆಗಿದ್ದು ಹೇಗೆ?: ಡಬ್ಲ್ಯುಡಬ್ಲ್ಯುಇ ಕಂಪನಿ 2019ರಲ್ಲಿ ಮುಂಬೈನಲ್ಲಿ 4 ದಿನಗಳ ಟ್ರೖ್ರೆಔಟ್ (ಸಾಮರ್ಥ್ಯ ಪರೀಕ್ಷೆ) ಆಯೋಜಿಸಿತ್ತು. ಇದರಲ್ಲಿ ದೇಶದ ಸುಮಾರು 3000 ಮಂದಿ ಪಾಲ್ಗೊಂಡಿದ್ದರು. ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು ಮಾತ್ರ ನಾಲ್ವರು. ಅದರಲ್ಲಿ ಸಂಜನಾ ಸಹ ಒಬ್ಬರು. ಆದರೆ, ಕರೊನಾದಿಂದಾಗಿ ವೀಸಾ ಮೇಲೆ ನಿರ್ಬಂಧ ಹೇರಿದ್ದರಿಂದ ಆ ವೇಳೆ ಅಮೆರಿಕಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಇದೀಗ ನಿರ್ಬಂಧ ಸಡಿಲ ವಾಗಿರುವುದರಿಂದ ಕಳೆದ ವಾರ ಸಂಜನಾ ಅಮೆರಿಕಕ್ಕೆ ಹಾರಿದ್ದಾರೆ.

ದಿಗ್ಗಜ ಟ್ರಿಪಲ್ ಎಚ್ ಭೇಟಿ: ತರಬೇತಿಯಲ್ಲಿರುವಾಗಲೇ ಡಬ್ಲ್ಯುಡಬ್ಲ್ಯುಇ ದಿಗ್ಗಜರಲ್ಲಿ ಒಬ್ಬರಾದ ಟ್ರಿಪಲ್ ಎಚ್ ಅವರನ್ನು ಸಂಜನಾ ಭೇಟಿ ಮಾಡಿದ್ದಾರೆ. ‘ಅದೊಂದು ಸಣ್ಣ ಭೇಟಿ. ಹಾಯ್ ಎಂದು ಮಾತು ಆರಂಭಿಸಿದೆ. ನಿಮ್ಮನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದೆ. ಅದಕ್ಕೆ ಪ್ರತ್ಯುತ್ತರವಾಗಿ ಶುಭವಾಗಲಿ ಅಂತ ಹಾರೈಸಿದರು’ ಎಂದು ಸಂಜನಾ ಹೇಳಿಕೊಂಡಿದ್ದಾರೆ.

ಸಂಜನಾಗಿದೆ ಕರ್ನಾಟಕ ಲಿಂಕ್: 17ನೇ ವಯಸ್ಸಿನಲ್ಲಿ ಸ್ಥಳೀಯ ಜಿಮ್ೆ ಹೋಗುವಾಗಲೇ ಬಾಡಿ ಬಿಲ್ಡಿಂಗ್​ಗೆ ಸಂಜನಾ ಮನಸೋತಿದ್ದರು. ಬಳಿಕ ಎಂಎಂಎಗೆ ತರಬೇತಿ ಪಡೆಯಲು ಆರಂಭಿಸಿದರು. ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಸ್ಥಳಾಂತರಗೊಂಡ ಸಂಜನಾ ಇಲ್ಲಿದ್ದಷ್ಟು ದಿನ ಅಧ್ಯಯನದ ಜತೆ ಎಂಎಂಎ ತರಬೇತಿಯನ್ನೂ ಮುಂದುವರಿಸಿದ್ದರು.

ದಾರಿ ತೋರಿ ಮರೆಯಾದ ತಂದೆ: ಸಂಜನಾರ ಈ ವಿಶೇಷ ಸಾಧನೆಗೆ ಮುಖ್ಯ ಕಾರಣವೇ ತಂದೆ. ಆದರೆ, ಅದನ್ನು ನೋಡಲು ಅವರೇ ಇಲ್ಲ. ಇಡುಕ್ಕಿ ಜಲವಿದ್ಯುತ್ ಯೋಜನೆಯ ಅಧಿಕಾರಿಗಳ ತಂಡದಲ್ಲಿದ್ದ ಚಾಕೊ ಜಾರ್ಜ್​ಗೆ ಕುಸ್ತಿ ಬಗ್ಗೆ ಆಸಕ್ತಿ ಇತ್ತು. ಚಿಕ್ಕ ವಯಸ್ಸಿನಲ್ಲಿಯೇ ಸಂಜನಾಳನ್ನು ಕ್ರೀಡೆಯಲ್ಲಿ ತೊಡಗಿಸಿ, ಅವಳ ಪ್ರತಿಭೆಯನ್ನು ಪೋಷಿಸಿದರು. ಪ್ರತಿ ಹಂತದಲ್ಲೂ ಮಗಳಿಗೆ ಬೆನ್ನೆಲುಬಾಗಿ ನಿಂತರು. ‘ಇಂದು ಅವರಿದ್ದಿದ್ದರೆ ತುಂಬಾ ಹೆಮ್ಮೆ ಪಡುತ್ತಿದ್ದರು’ ಎನ್ನುತ್ತಾರೆ ಸಂಜನಾ.

ಡಬ್ಲ್ಯುಡಬ್ಲ್ಯುಇ ಎಂದರೇನು?: ಇದು ಅಮೆರಿಕದ ಬಹುದೊಡ್ಡ ಮನರಂಜನಾ ಕಂಪನಿ. ವಿನ್ಸ್ ಮ್ಯಾಕ್​ವೋಹನ್ ಇದರ ಕಾರ್ಯನಿರ್ವಾಹಕ ಅಧಿಕಾರಿ. ಈ ಕಂಪನಿ ಪ್ರಮುಖವಾಗಿ ವೃತ್ತಿನಿರತ ರೆಸ್ಲಿಂಗ್ ಕ್ರೀಡೆಯನ್ನು ನಡೆಸುತ್ತದೆ. ಇದೊಂದು ಸ್ಕ್ರಿಪ್ಟೆಡ್ ಕಾರ್ಯಕ್ರಮವಾಗಿದ್ದು, ಒಪ್ಪಂದದ ಆಧಾರದ ಮೇಲೆ ಇಂತಿಷ್ಟು ವರ್ಷಗಳವರೆಗೆ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕಂಪನಿ ಪ್ರತಿ ವರ್ಷ ಜಗತ್ತಿನ ಅನೇಕ ಕಡೆ ಸುಮಾರು 450 ಸ್ಪರ್ಧೆಗಳನ್ನು ಆಯೋಜಿಸುತ್ತದೆ.

ಯಾರು ಈ ಸಂಜನಾ ಜಾರ್ಜ್?: ಈಗಾಗಲೇ ಅಮೆರಿಕದ ಆರ್ಲಾಂಡೋದಲ್ಲಿ ಡಬ್ಲ್ಯುಡಬ್ಲ್ಯುಇ ತರಬೇತಿ ಪಡೆಯುತ್ತಿರುವ ಸಂಜನಾ ಕೇರಳದ ಕೊಟ್ಟಾಯಂ ಜಿಲ್ಲೆಯ ಅಯಮನಾಮ್ ಗ್ರಾಮದ ನಿವಾಸಿ. ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿರುವ ಸಂಜನಾ, 17ನೇ ವಯಸ್ಸಿನಲ್ಲಿ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್​ ಕ್ರೀಡಾಪಟುವಾಗಿ ವೃತ್ತಿ ಜೀವನ ಆರಂಭಿಸಿದರು. ಸಹೋದರಿಯರು ಮತ್ತು ಸ್ವರಕ್ಷಣೆಗೆ ಉಪಯೋಗ ಆಗಲಿದೆ ಎಂದು ಕಲಿತದ್ದೇ ಮುಂದೆ ಆತ್ಮವಿಶ್ವಾಸವಾಗಿ ಬದಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net