ಪ್ರಥಮ ಏಕಾದಶಿ: ಏನಿದರ ವಿಶೇಷ?

Ekadashi
Published on

ಇಂದು ಪ್ರಥಮ ಏಕಾದಶಿ. ಶ್ರೀ ವಿಷ್ಣುವು ಯೋಗನಿದ್ರೆಗೆ ತೆರಳುವ ದಿನ. ಇಂದಿನಿಂದ ನಾಲ್ಕು ತಿಂಗಳುಗಳ ಕಾಲ ಆ ಭಗವಂತನು ಯೋಗನಿದ್ರೆಯಲ್ಲಿರುತ್ತಾನೆ. ಈ ಅವಧಿಯನ್ನು ಚಾತುರ್ಮಾಸ್ಯ ಎನ್ನುತ್ತಾರೆ. ಅದರ ಆರಂಭಿಕ ದಿನವೇ ಪ್ರಥಮ ಏಕಾದಶಿ. ಈ ದಿನದ ಮಹತ್ವ, ಆಚರಣೆಯ ವಿಶೇಷ ಕುರಿತ ಮಾಹಿತಿ ಇಲ್ಲಿದೆ.

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.

ಹಿಂದು ಪಂಚಾಂಗದ ಪ್ರಕಾರ ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವುದು ಪ್ರಥಮ ಏಕಾದಶಿ. ಮಹಾವಿಷ್ಣುವು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಥಾನ ದ್ವಾದಶಿಯವರೆಗೆ ಅಂತಮುಖಿಯಾಗಿ ದಿವ್ಯನಿದ್ರೆಯಲ್ಲಿ ಮಗ್ನನಾಗಿರುವುದರಿಂದ ಇದು ವಿಶೇಷ ಏಕಾದಶಿ. ಈ ಸಮಯದಲ್ಲಿ ಯತಿಗಳು, ಸನ್ಯಾಸಿಗಳು, ಸಾಧುಗಳು ಅಂತಮುಖಿಯಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಅದರಿಂದ ಸಾತ್ವಿಕ ಶಕ್ತಿಯ ಸಂಚಾರ ಎಲ್ಲ ಕಡೆ ಹರಡಲು ಸಾಧ್ಯವಾಗುತ್ತದೆ. ಈ ಪ್ರಥಮ ಏಕಾದಶಿ ದಿನದಿಂದಲೇ ಕೆಲವು ಸಾಧುಸಂತರು ಚಾತುರ್ಮಾಸ್ಯ ವ್ರತವನ್ನು ಪ್ರಾರಂಭಿಸುತ್ತಾರೆ.

ಏಕಾದಶ ಎಂದರೆ ಹನ್ನೊಂದು ಎಂದರ್ಥ. ಐದು ಕಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಹಾಗೂ ಮನಸ್ಸು. ಆಸ್ತಿಕರೆಲ್ಲರೂ ಧರ್ಮ, ಕರ್ಮ, ಜ್ಞಾನ ಸಾಧನ ಕರಣಗಳಿಂದ ಭಗವತ್ ಚಿಂತನೆಯಲ್ಲಿ ತೊಡಗಿಕೊಳ್ಳುವ ಕ್ರಿಯೆಯೇ ಏಕಾದಶಿ. ಇದಕ್ಕೆ ಸಾಕ್ಷಾತ್ ಶ್ರೀಹರಿಯೇ ದೇವರು. ಇದೇ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುತ್ತಾರೆ. ಏಕಾದಶಿ ಎನ್ನುವ ದೇವಿಯು ವಿಷ್ಣುವಿನಿಂದ ಉದ್ಭವಳಾಗಿ ‘ಮುರ’ ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣುವು ‘ಏನಾದರೂ ವರ ಕೇಳು’ ಎಂದಾಗ ‘ಪ್ರಥಮ ಏಕಾದಶಿ ದಿನ ಯಾರು ನಿನ್ನನ್ನು ಪೂಜಿಸುತ್ತಾರೋ ಹಾಗೂ ಉಪವಾಸ ವ್ರತ ಮಾಡುತ್ತಾರೋ ಅವರ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು’ ಎಂದು ದೇವಿಯು ವರವನ್ನು ಕೇಳುತ್ತಾಳೆ. ಇದಕ್ಕೆ ವಿಷ್ಣು ತಥಾಸ್ತು ಎನ್ನುತ್ತಾನೆ.

‘ಉಪ’ ಎಂದರೆ ಹತ್ತಿರ, ‘ವಾಸ’ ಎಂದರೆ ಇರುವುದು. ಭಗವಂತನ ಸಮೀಪ ಇರುವುದು. ಇದೇ ‘ಉಪವಾಸ’ದ ಅರ್ಥ. ಈ ಸಮಯದಲ್ಲಿ ಕೆಟ್ಟ ಯೋಚನೆ, ಕೆಟ್ಟ ಕೆಲಸ ಮಾಡಬಾರದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟಿರಬೇಕು. ಆತ್ಮಶೋಧನೆ ಮಾಡಿಕೊಳ್ಳಬೇಕು. ಪ್ರಥಮ ಏಕಾದಶಿ ದಿನ ಧ್ಯಾನ, ಭಜನೆ, ಜಪ-ತಪ, ವಿಷ್ಣು ಸಹಸ್ರನಾಮ ಪಠಣ ಹಾಗೂ ಪೂಜೆಯನ್ನು ಯಾರು ಮಾಡುತ್ತಾರೋ ಅವರಿಗೆ ವಿಷ್ಣುವು ಎಲ್ಲ ಸೌಭಾಗ್ಯವನ್ನು ಕೊಟ್ಟು ಅಂತ್ಯದಲ್ಲಿ ಮೋಕ್ಷವನ್ನು ಕರುಣಿಸುವನು ಎನ್ನುತ್ತದೆ ವಿಷ್ಣು ಪುರಾಣ. ಆರೋಗ್ಯದ ದೃಷ್ಟಿಯಲ್ಲಿಯೂ ಉಪವಾಸ ಒಳ್ಳೆಯದು. ಇದರಿಂದ ಶಾಂತಿ, ತಾಳ್ಮೆ, ನೆಮ್ಮದಿ ಸಿಗುತ್ತದೆ. ರಕ್ತದೊತ್ತಡ, ರಕ್ತಹೀನತೆ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಏಕಾದಶಿಯನ್ನು ಒಂದೊಂದು ಸಮುದಾಯ ಒಂದೊಂದು ರೀತಿಯಲ್ಲಿ ಆಚರಿಸುತ್ತದೆ. ಕೆಲವರು ನಿರ್ಜಲ ಉಪವಾಸ ಮಾಡುತ್ತಾರೆ. ನೀರನ್ನು ಕೂಡ ಕುಡಿಯುವುದಿಲ್ಲ. ಮತ್ತೆ ಕೆಲವರು ಹಾಲು- ಹಣ್ಣು ಮುಂತಾದ ಲಘು ಪದಾರ್ಥಗಳನ್ನು ಸೇವಿಸುತ್ತಾರೆ. ಮತ್ತೆ ಕೆಲವರು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಹೊರತುಪಡಿಸಿ ಬೇರೆ ತಿನಿಸುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಾರೆ. ಯಾರು ಬೇಕಾದರೂ ಮಾಡಬಹುದಾದ ಶ್ರೇಷ್ಠ ವ್ರತ ಇದು. ಇದಕ್ಕೆ ಯಾವುದೇ ಜಾತಿಯ ಭೇದ ಇಲ್ಲ.

ಶ್ರೀ ವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಎಲ್ಲವನ್ನು ವ್ಯಾಪಿಸಿಕೊಂಡಿರುವವನು, ಎಲ್ಲದರಲ್ಲೂ ಅಂತರ್ಗತನಾಗಿರುವವನು ಎಂದು. ವಿಷ್ಣುವಿಗೆ ಅನ್ವಯವಾಗುವ ಜನಪ್ರಿಯವಾದ ಮತ್ತೊಂದು ಹೆಸರು ‘ನಾರಾಯಣ’. ಇದರಲ್ಲಿ ಒಂದೊಂದು ಅಕ್ಷರಕ್ಕೂ ವಿಶೇಷತೆ ಇದೆ. ನಾ ಎಂದರೆ ಕಾರಣರೂಪ ಜಲದ ಮೇಲೆ ನಿವಾಸವನ್ನು ಕಟ್ಟಿಸಿಕೊಂಡಿರುವವನು ಎಂದು. ರಾ ಎಂದರೆ ಎಲ್ಲ ಮಾನವ ಜೀವಿಗಳೂ ನೆಲೆಗೊಳ್ಳುವ ಸ್ಥಾನ. ಯ ಎಂದರೆ ಎಲ್ಲರ ಹೃದಯದಲ್ಲಿ ವಾಸಿಸುವವನು. ಣ ಎಂದರೆ ಮಾನವ ಕೋಟಿಯ ಅಂತಿಮ ಗಮ್ಯಸ್ಥಾನ ಎಂದು. ಏಕಾದಶಿ ದಿನ ನಿರಂತರವಾಗಿ ನಾರಾಯಣ ಜಪವನ್ನು ಜಪಿಸಿದರೆ ಅಂತ್ಯದಲ್ಲಿ ವೈಕುಂಠವನ್ನು ಸೇರಬಹುದು ಎಂದು ವಿಷ್ಣು ಪುರಾಣದಲ್ಲಿ ಉಲ್ಲೇಖವಾಗಿದೆ.

ವಿಷ್ಣುವಿಗೆ ನಾಲ್ಕು ಕೈಗಳಿವೆ. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇವೆ. ಶಂಖವು ಪಂಚಭೂತಗಳನ್ನು ಸೂಚಿಸುತ್ತದೆ. ಚಕ್ರವು ಸಮಸ್ತ ಚಿತ್ತಗಳನ್ನು ಸೂಚಿಸುತ್ತದೆ. ಗದೆಯು ಸಮಸ್ತ ಬುದ್ಧಿಗಳ ದ್ಯೋತಕ ಮತ್ತು ಪದ್ಮವು ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ. ಈ ವಿಷ್ಣುವು ಸ್ಥಿತಿಕಾರ. ಧರ್ಮವು ಇಳಿಮುಖವಾಗಿ ಅಧರ್ಮವು ತಾಂಡವವಾಡುತ್ತಿರುವಾಗ ಧರ್ಮವನ್ನು ಉದ್ಧರಿಸಲು ವಿಷ್ಣುವು ದಶಾವತಾರ ತಾಳಿದನು- ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.

ಬುಧ ಗ್ರಹಕ್ಕೆ ವಿಷ್ಣು ಅಧಿಪತಿ. ಯಾರಿಗೆ ಬುಧ ದೋಷ ಇದೆಯೋ, ಬುಧ ನೀಚ ಸ್ಥಾನದಲ್ಲಿದ್ದಾನೋ, ಪಾಪಗ್ರಹಗಳ ಜತೆಯಲ್ಲಿದ್ದಾನೋ ಹಾಗೂ ಪಾಪಗ್ರಹಗಳ ದೃಷ್ಟಿಗೆ ಒಳಗಾಗಿದ್ದಾನೋ ಅಂಥವರು ಏಕಾದಶಿ ದಿನ ವಿಷ್ಣು ಸಹಸ್ರನಾಮ, ವಿಷ್ಣು ಅಷ್ಟೋತ್ತರ ಪಠಿಸಿದರೆ ಬುಧಗ್ರಹದಿಂದ ಆಗುವ ದುಷ್ಪರಿಣಾಮ ಕಡಿಮೆ ಆಗುತ್ತದೆ. ಏಕಾದಶಿ ದಿನ ಮುಖ್ಯವಾಗಿ ಮೌನ ಆಚರಿಸಬೇಕು. ಇದರಿಂದ ಮನಸ್ಸು ಶುದ್ಧಿ ಆಗುತ್ತದೆ. ಕೆಲವು ಸಾಧುಸಂತರು, ಪೀಠಾಧಿಪತಿಗಳು ಏಕಾದಶಿ ದಿನ ಮೌನ ಆಚರಿಸಿ ಜಪವನ್ನು ಹೆಚ್ಚು ಮಾಡುತ್ತಾರೆ. ಈ ಏಕಾದಶಿ ವ್ರತವನ್ನು ದೇವಾನುದೇವತೆಗಳು, ಋಷಿಮುನಿಗಳು, ಆಚಾರ್ಯತ್ರರು ಹಾಗೂ ದಾಸಶ್ರೇಷ್ಠರುಗಳು ಶ್ರದ್ಧಾಭಕ್ತಿಯಿಂದ ಆಚರಿಸಿ ಮೋಕ್ಷವನ್ನು ಪಡೆದಿದ್ದಾರೆ. ಪ್ರಥಮ ಏಕಾದಶಿ ದಿನ ಎಲ್ಲ ವೈಷ್ಣವ ಮಠಗಳಲ್ಲಿ ತಪ್ತ ಮುದ್ರಾಧಾರಣ ನಡೆಯುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net