

| ಡಾ. ರಕ್ಷಾ ಯು. ರಾವ್
ಮುಟ್ಟಿನ ಸಮಯದಲ್ಲಿ ಮರುಬಳಕೆ ಮಾಡಬಹುದಾದ ಉತ್ಪನ್ನಗಳಲ್ಲಿ ಬಟ್ಟೆ ಪ್ಯಾಡ್, ಮುಟ್ಟಿನ ಕಪ್ (ಮೆನ್ಸ್ಟ್ರ್ಯೂಯಲ್ ಕಪ್), ಜೈವಿಕವಾಗಿ ಕರಗುವ ಪ್ಯಾಡುಗಳು ಚಾಲ್ತಿಯಲ್ಲಿವೆ. ಹಳ್ಳಿ ಅಥವಾ ಮಹಾನಗರಗಳಲ್ಲಿ ನೈರ್ಮಲ್ಯವನ್ನು ಸ್ತ್ರೀ ಇನ್ನೂ ಬಹಿರಂಗವಾಗಿ ರ್ಚಚಿಸುತ್ತಿಲ್ಲ. ಭಾರತದಲ್ಲಿ ಪ್ರತಿ ತಿಂಗಳು ಎರಡು ಮಿಲಿಯನ್ಗೂ ಅಧಿಕ ಟನ್ ಕರಗದ ಪ್ಯಾಡ್ಗಳು ಪರಿಸರ ಸೇರುತ್ತಿವೆ. ಕಸದ ಬಿಕ್ಕಟ್ಟು, ಆರ್ಥಿಕ ಸಂಕಷ್ಟ, ವಿಷಕಾರಿ ತ್ಯಾಜ್ಯ ಪರಿಸರ ಸೇರುವುದನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅವಶ್ಯಕವಾಗಿದೆ. ಇದನ್ನು ಪರಿಗಣಿಸಿ ಮರುಬಳಕೆ ಮಾಡಬಹುದಾದ ಮುಟ್ಟಿನ ಕಪ್ ಹಾಗೂ ಬಟ್ಟೆ ಪ್ಯಾಡ್ಗಳ ಕುರಿತು ಅರಿವು ಮೂಡಿಸಬೇಕಿದೆ.
ಬಟ್ಟೆ ಪ್ಯಾಡುಗಳು: ಮನೆಯಲ್ಲೇ ಇರುವ ಮಹಿಳೆಯರು ಇದನ್ನು ಬಳಸುವುದು ಸೂಕ್ತ. ಇವುಗಳನ್ನು ಹತ್ತಿ ಬಟ್ಟೆ, ಸೆಣಬನ್ನು ಬಳಸಿ ಮಾಡುತ್ತಾರೆ. ಒಮ್ಮೆ ಬಳಸಿದ ನಂತರ ಬಿಸಿ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಿಟ್ಟು ಪುನರ್ಬಳಕೆ ಮಾಡಬಹುದು. ಇವು ಋತುಸ್ರಾವದ ಸಮಯದಲ್ಲಿ ಅತಿಯಾದ ಸೋರಿಕೆ ತಡೆಯಲು ಸಹಕಾರಿಯಾಗಿವೆ. ಸಾಮಾನ್ಯ ಪ್ಯಾಡ್ಗಳಿಗಿಂತ ಕಡಿಮೆ ವೆಚ್ಚದಲ್ಲಿ ಸಿಗುವುದರಿಂದ ಜೇಬಿಗೂ ಹೊರೆಯಲ್ಲ. ಇದನ್ನು ಮರುಬಳಕೆ ಮಾಡಬಹುದಾಗಿರುವುದರಿಂದ ತ್ಯಾಜ್ಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಬಳಕೆಯಲ್ಲಿ ವ್ಯತ್ಯಾಸವೇನು?: ಪ್ರತಿ ತಿಂಗಳ ರಕ್ತಸ್ರಾವ ಸಾಮಾನ್ಯವಾಗಿ 30ರಿಂದ 80 ಎಂಎಲ್ ಇರುತ್ತದೆ. ಮೆನ್ಸ್ಟ್ರ್ಯೂಯಲ್ ಕಪ್ ಸೈಜಿನಲ್ಲೂ ವ್ಯತ್ಯಾಸವಿರುತ್ತದೆ. ಸಣ್ಣ ಕಪ್, ದೊಡ್ಡ ಕಪ್ ಮತ್ತು ಮಧ್ಯಮ ಗಾತ್ರದ ಕಪ್ ದೊರೆಯುತ್ತದೆ. ಮಕ್ಕಳಾಗದವರು (30 ವರ್ಷ ಒಳಗಿನವರು) ಸಣ್ಣ ಕಪ್ ಬಳಸಿದರೆ ಒಂದು ಮಗುವಿನ ತಾಯಿ ಮಧ್ಯಮ ಗಾತ್ರ ಕಪ್ ಮತ್ತು ಎರಡು ಮಕ್ಕಳಾಗಿ 40 ವರ್ಷ ಮೀರಿದವರು ದೊಡ್ಡ ಕಪ್ ಬಳಸಬಹುದು. ದಿನಕ್ಕೆ ಎರಡು ಬಾರಿ ಬದಲಾಯಿಸಿ ಕ್ಲೀನ್ ಮಾಡಿಕೊಳ್ಳಬಹುದು.
ಪರಿಸರ ಉಳಿಸಲು ಕನಿಷ್ಠ ಕೊಡುಗೆ: ಈ ಎರಡೂ ಉತ್ಪನ್ನಗಳು ಯಾವುದೇ ತ್ಯಾಜ್ಯ ಉತ್ಪಾದಿಸುವುದಿಲ್ಲ ಹಾಗೂ ಪರಿಸರಕ್ಕೆ ಮಾರಕವಲ್ಲ. ಬಟ್ಟೆ ಪ್ಯಾಡ್ ತೊಳೆದಿಟ್ಟುಕೊಳ್ಳಲು ಶ್ರಮವೊಂದು ಹೆಚ್ಚಾಗಬಹುದು. ಆದರೆ ಪರಿಸರ ಉಳಿವಿಗೆ ನಮ್ಮಿಂದ ಕನಿಷ್ಠ ಕೊಡುಗೆ ನೀಡಿದಂತಾಗುತ್ತದೆ. ಇವೆರಡರಲ್ಲಿ ಯಾವುದು ಸೂಕ್ತ ಎಂದು ನಿರ್ಧರಿಸಿ ಒಮ್ಮೆ ಖರೀದಿಸಿದರೆ ಪ್ರತಿ ತಿಂಗಳು ಹೊಸದನ್ನೇ ಕೊಳ್ಳಬೇಕು ಎಂಬ ತಲೆನೋವು ಇರುವುದಿಲ್ಲ. ಬಟ್ಟೆ ಪ್ಯಾಡ್ ಒಮ್ಮೆ ಖರೀದಿಸಿದರೆ ಸುಮಾರು 2ರಿಂದ 3 ವರ್ಷ ಉಪಯೋಗಿಸಬಹುದು. ಮೆನ್ಸ್ಟ್ರ್ಯೂಯಲ್ ಕಪ್ 8ರಿಂದ 10 ವರ್ಷ ಬಳಸಬಹುದು.
ಮೆನ್ಸ್ಟ್ರ್ಯೂಯಲ್ ಕಪ್: ಇದು ಸ್ತ್ರೀನೈರ್ಮಲ್ಯ ಉತ್ಪನ್ನವಾಗಿದ್ದು, ಸಿಲಿಕಾನ್ನಿಂದ ತಯಾರಿಸಲಾಗಿದೆ. ಇದು ಗಂಟೆಯ ಆಕಾರದಲ್ಲಿದ್ದು, ಮೃದುವಾಗಿರುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತವನ್ನು ಹಿಡಿದಿಡಲು ಇದನ್ನು ಯೋನಿಯೊಳಗೆ ಧರಿಸಲಾಗುತ್ತದೆ. ಪ್ರತಿ ಮಹಿಳೆಯ ರಕ್ತಸ್ರಾವದ ಪ್ರಮಾಣ ವ್ಯತ್ಯಾಸವಿರುವುದರಿಂದ ಸ್ರಾವದ ಪ್ರಮಾಣಕ್ಕೆ ಅನುಗುಣವಾಗಿ ಬಳಸಬೇಕು. ಒಮ್ಮೆ ತುಂಬಿದ ನಂತರ ಖಾಲಿ ಮಾಡಿ, ಬಿಸಿ ನೀರಿನಲ್ಲಿ ತೊಳೆದು ಮತ್ತೆ ಸೇರಿಸಬೇಕು. ಐದು ದಿನ ಬಳಸಿದ ನಂತರ 20 ನಿಮಿಷ ಬಿಸಿ ನೀರಿನಲ್ಲಿ ಕುದಿಸಿ ಒಣಗಿಸಿ ನಿಗದಿತ ಸ್ಥಳದಲ್ಲಿ ಇಡಬೇಕು. ಇದು ಪ್ಯಾಡ್ ಬಳಕೆಗಿಂತ ಹೆಚ್ಚು ಉತ್ತಮ. ಧರಿಸಿದ ಅನುಭವ ಕೊಡುವುದಿಲ್ಲ. ಇದನ್ನು ಧರಿಸಿ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು.