ಇರೋ ಟೈಮೆಲ್ಲಾ ಫ್ಯಾಮಿಲಿಗೇ...!; ಗೃಹಿಣಿಯರ ಲಾಕ್​ಡೌನ್

Lalitha lead
Published on

ಕರೊನಾದ ಈ ಸಮಯದಲ್ಲಿ ಶಾಲೆಯೂ ಇಲ್ಲ, ಪರೀಕ್ಷೆಗಳೂ ಇಲ್ಲ, ಮಕ್ಕಳನ್ನು ಹೊರಗೆ ಬಿಡುವಂತೆಯೂ ಇಲ್ಲ... ಟಿ.ವಿ., ಮೊಬೈಲ್, ತಿಂಡಿ-ತಿನಿಸು... ಇಷ್ಟೇ ಈಗ ಮಕ್ಕಳ ಪ್ರಪಂಚ. ಅದರಿಂದ ಮಕ್ಕಳನ್ನು ಹೊರಗೆ ತರುವುದು ಅಸಾಧ್ಯವೇ ಸರಿ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ತಕ್ಕಮಟ್ಟಿಗಾದರೂ ಮಕ್ಕಳನ್ನು ಬದಲಾಯಿಸಲು ಸಾಧ್ಯವೆ? ಇದರಲ್ಲಿ ಅಮ್ಮನ ಪಾತ್ರವೇನು? ಕರೊನಾದ ಸಮಯ ವನ್ನೇ ಸದ್ಬಳಕೆ ಮಾಡಿಕೊಳ್ಳುವುದು ಹೇಗೆ?

| ಸೌಮ್ಯ ಬೀನಾ

‘ಮೇಡಂ ಏನು ಮಾಡಲಿ, ಶಾಲೆಯಿಲ್ಲದೆ ಓದು ಬರಹದ ಅಭ್ಯಾಸವೇ ಬಿಟ್ಟು ಮಕ್ಕಳು ಅಶಿಸ್ತು ಮೈಗೂಡಿಸಿಕೊಂಡಿದ್ದಾರೆ. ಇವ್ರ ದಿನ ಪ್ರಾರಂಭವಾಗುವುದೇ ಟೀವಿಯಿಂದ! ಮಗ ವಿಡಿಯೋ ಗೇಮ್ಸ್ಕ್ಕೆ ಅಂಟಿಕೊಂಡಿದ್ದರೆ, ಮಗಳು ರೈಮ್ಸ್ ಇಲ್ಲದೆ ಊಟ ಕೂಡ ಮಾಡಲ್ಲ. ಪ್ರತಿ ಸಣ್ಣ ವಿಷಯಕ್ಕೂ ಹಠ-ಸಿಟ್ಟು. ಇದು ನನಗೂ ತಾಳ್ಮೆ ಕೆಡಿಸುತ್ತಿದೆ. ಇದರ ಜತೆ ವರ್ಕ್ ಫ್ರಂ ಹೋಂ ಎನ್ನುವ ತಲೆಬಿಸಿ. ಗಂಡನ ಮೀಟಿಂಗ್ ಸಮಯದಲ್ಲಿ ಮಕ್ಕಳು ಗಲಾಟೆ ಮಾಡಿದರೆ, ಅವರನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ ಎಂಬ ಬೈಗುಳ ತಿನ್ನೋದೂ ನಾನೇ. ಆಫೀಸು ತಲೆಬಿಸಿಯ ಜತೆಗೆ, ಮನೆಗೆಲಸವನ್ನು ಮಾಡಿಕೊಂಡು, ಟೈಮ್ ಪಾಸ್ ಆಗದೆ ಒಂದೇ ಸಮನೆ ತಿನ್ನುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ತಿಂಡಿ ಒದಗಿಸುತ್ತ, ಕರೊನಾ ಸಮಯದಲ್ಲಿ ಸೋಂಕುಗಳಿಂದ ದೂರವಿರಲು ವಹಿಸಬೇಕಾದ ಎಲ್ಲ ಜಾಗ್ರತೆ ಮಾಡಿಕೊಳ್ಳುವಷ್ಟರಲ್ಲಿ, ನಾನು ಹೈರಾಣಾಗಿ ಹೋಗಿದ್ದೇನೆ ಮೇಡಂ. ಹುಚ್ಚು ಹಿಡಿದಂತಾಗಿಬಿಟ್ಟಿದೆ...’

ಇದು ಕರೊನಾ ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಗೃಹಿಣಿಯರು ಕೌನ್ಸೆಲರ್​ಗಳ ಬಳಿ ಅಥವಾ ಪರಿಚಯಸ್ಥರ ಹತ್ತಿರ ತೋಡಿಕೊಳ್ಳುತ್ತಿರುವ ಅಳಲು. ಮನೆಗೆಲಸಕ್ಕೆ ಹೆಲ್ಪರ್ ಇಟ್ಟುಕೊಂಡು, ಮಕ್ಕಳನ್ನು ಆಟಕ್ಕೆ ಕಳುಹಿಸಿ, ಚಿಕ್ಕಮಕ್ಕಳಾದರೆ ಡೇ ಕೇರ್​ನಲ್ಲಿ ಬಿಟ್ಟು ಸಂಜೆ ಮನೆ ಸೇರಿ ಸಿಕ್ಕಷ್ಟು ಸಮಯ ಮಕ್ಕಳೊಂದಿಗೆ ಕಳೆಯುತ್ತಿದ್ದ ಉದ್ಯೋಗಸ್ಥ ಅಮ್ಮಂದಿರ ದೈನಂದಿನ ಬದುಕಿನ ಚಿತ್ರಣವೇ ಬದಲಾಗಿ ಹೋಗಿದೆ.

ಒಂದು ಕಡೆ ಶಾಲೆ ಇಲ್ಲದೆ ಮಕ್ಕಳ ಓದುಬರಹದ ಅಭ್ಯಾಸ ಕುಂಠಿತಗೊಳ್ಳುತ್ತಿರುವುದರ ಚಿಂತೆ; ಇನ್ನೊಂದೆಡೆ ಮನೆಯಲ್ಲಿ ಸಮಯ ಕಳೆಯಲು ಸರಿಯಾದ ಮಾರ್ಗ ಗೊತ್ತಿಲ್ಲದ ಮಕ್ಕಳ ಅಸಮಾಧಾನ; ಮತ್ತೊಂದೆಡೆ ಟಿವಿ, ಮೊಬೈಲ್, ಟ್ಯಾಬ್, ಕಂಪ್ಯೂಟರ್ ಗೇಮ್ಳ ಚಟ. ಹಲವೆಡೆ ಶಾಲಾ ಪಾಠಗಳಿಗೆ ಆನ್​ಲೈನ್ ಶಿಕ್ಷಣದ ವ್ಯವಸ್ಥೆಯಾದರೂ, ಮಕ್ಕಳಿಗೆ ಭೌತಿಕವಾಗಿ ಶಾಲೆ, ಶಿಕ್ಷಕರು, ಸಹಪಾಠಿಗಳು, ಒಕ್ಕೊರಲಿನ ಪಾಠ, ಆಟ, ಸಿಹಿ ಕಹಿ ಅನುಭವಗಳು ಇವೆಲ್ಲ ಯಾವುದೂ ಇಲ್ಲ. ಪಾಠಗಳನ್ನು ಅರ್ಥ ಮಾಡಿಕೊಳ್ಳಲೂ ಕಷ್ಟವಾಗುತ್ತಿದೆ. ಹಾಗಾಗಿ ಸಹಜವಾಗಿಯೇ ಅವರಿಗೆ ಓದಿನಲ್ಲಿ ಆಸಕ್ತಿ ಕಮ್ಮಿಯಾಗುತ್ತಿದೆ.

ನಿಜ. ಈ ಪಾಡು ಒಬ್ಬಿಬ್ಬರದಲ್ಲ. ಎಲ್ಲ ಮಹಿಳೆಯರು, ಅದರಲ್ಲೂ ಉದ್ಯೋಗಸ್ಥರ ಸ್ಥಿತಿ ಇದು. ಮಕ್ಕಳೆಂದರೆ ಅವರೂ ಮನೆಯ ಸದಸ್ಯರೇ. ವಯಸ್ಸು ಸಣ್ಣದು ಅಷ್ಟೇ. ಮನೆಯ ಇತರ ಸದಸ್ಯರೊಂದಿಗೆ ರ್ಚಚಿಸಿ, ಕೆಲಸಗಳನ್ನು ಹಂಚಿಕೊಂಡು ಎಲ್ಲರೂ ಮಾಡಲಾರಂಭಿಸಿದರೆ, ಮಕ್ಕಳೂ ನಮ್ಮೊಡನೆ ದಿನನಿತ್ಯದ ಕಾರ್ಯಗಳಲ್ಲಿ ತಾವಾಗಿಯೇ ತೊಡಗುತ್ತಾರೆ. ಹೆಚ್ಚಿನ ಬಿಡುವಿನ ಸಮಯವಿದ್ದಾಗ ನಾವು ಮಕ್ಕಳ ಬಳಿ ಕುಳಿತು ಒಂದಷ್ಟು ಅವರ ಆಸಕ್ತಿಯ ವಿಷಯಗಳಿಗೆ ಕೈಜೋಡಿಸುವುದು ಸರಿ; ಆದರೆ, ದಿನವಿಡೀ ಕೆಲಸ ಮಾಡಿಕೊಳ್ಳುವ ಪ್ರಸಂಗ ಇದ್ದಾಗ, ಮಕ್ಕಳನ್ನೇ ನಮ್ಮ ಮನೆಗೆಲಸಗಳಿಗೆ ಬಳಸುತ್ತ, ವಿಶ್ವಾಸದಿಂದ ಮಾತನಾಡಿಸುತ್ತ, ಅವರ ಕಥೆಗಳನ್ನು ಕೇಳುತ್ತ, ಒಂದೊಂದು ಸಣ್ಣ ಪುಟ್ಟ ಕೆಲಸಗಳನ್ನು ನಮ್ಮೊಡನೆ ಮಾಡಲು ನೀಡಿದರೆ, ಅವರೂ ನಮ್ಮೊಡನೆ ಇರಲು ಇಷ್ಟಪಡುತ್ತಾರೆ. ಅದೇ ವೇಳೆ ಕೆಲಸಗಳನ್ನೂ ಕಲಿಯುವಂತಾಗುತ್ತದೆ.

ಮಕ್ಕಳು ಅವರ ವಯಸ್ಸಿಗೆ ಅನುಗುಣವಾಗಿ ತಿಂಡಿಗೆ ತಟ್ಟೆ, ಲೋಟ ಇಡುವುದು, ತರಕಾರಿ ಹೆಚ್ಚುವುದು, ಕಾಳು ಬಿಡಿಸುವುದು, ಬಟ್ಟೆ ಮಡಚುವುದು, ಕಿಟಕಿ ಒರೆಸುವುದು, ಚಪ್ಪಲಿ ಜೋಡಿಸುವುದು ಹೀಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿದಾಗ ಎಲ್ಲರೆದುರು ಭರಪೂರ ಪ್ರಶಂಸೆ ಮಾಡಿದರೆ, ಮಕ್ಕಳಲ್ಲಿ ಸ್ವಂತಿಕೆಯ ಕುರಿತಾಗಿ ಹೆಮ್ಮೆ ಉಂಟಾಗುತ್ತದೆ. ಆಗ ಅವರಾಗಿಯೇ ಅಮ್ಮನಿಗೆ ನೆರವಾಗುವುದನ್ನು ರೂಢಿ ಮಾಡಿಕೊಳ್ಳುತ್ತಾರೆ. ಅಡುಗೆ ಮಾಡುತ್ತಲೇ ಮಕ್ಕಳೊಂದಿಗೆ ಅವರ ಪಾಠದ ಪದ್ಯಗಳ ಗುನುಗುವಿಕೆ, ಧಾನ್ಯಗಳಲ್ಲಿ ಗಣಿತದ ಲೆಕ್ಕಾಚಾರದ ಆಟ, ಪಾಠದ ಕುರಿತಾದ ರಸಪ್ರಶ್ನೆ, ಪದಬಂಡಿ ಆಟ, ಸ್ಪೆಲ್ಲಿಂಗ್ ಕಲಿಕೆ ಹೀಗೆ ಕೆಲಸದ ಜತೆಗೆ, ಆಟದ ರೂಪದಲ್ಲಿ ಮಕ್ಕಳಿಗೆ ಪುನರಾವರ್ತನೆ ಮಾಡಿಸಬಹುದು.

ಮಕ್ಕಳ ಸ್ಕ್ರೀನ್ ಟೈಂನಲ್ಲಿ (ಟಿವಿ, ಮೊಬೈಲ್ ಇತ್ಯಾದಿ) ಅವರ ಜತೆ ಸ್ವಲ್ಪ ಹೊತ್ತು ನಾವೂ ಕುಳಿತು ಕಾರ್ಯಕ್ರಮಗಳನ್ನು ನೋಡಿ ನಕ್ಕು ನಲಿದು, ಆ ಬಗ್ಗೆ ರ್ಚಚಿಸಿದರೆ, ಕೆಲವು ಕಾರ್ಯಕ್ರಮಗಳಿಂದಾಗಿ ಮಕ್ಕಳಿಗೆ ಸಿಗುತ್ತಿರುವ ತಪ್ಪು ಸರಿ ಕಲ್ಪನೆಗಳ ಅರಿವು ನಮಗೆ ಸಿಗುತ್ತದೆ. ಮಕ್ಕಳ ಗಮನ ಎಲ್ಲಿ ಅಡ್ಡಹಾದಿ ಹಿಡಿಯುತ್ತಿದೆ ಎಂಬುದು ಮುಂಚಿತವಾಗಿಯೇ ಮನಗಂಡರೆ ಸಾಕು ಪರಿಹಾರವೇನೂ ದೊಡ್ಡ ವಿಷಯವಲ್ಲ. ಗಾರ್ಡನಿಂಗ್, ಕರಕುಶಲತೆ ಇತ್ಯಾದಿ ಹವ್ಯಾಸ ಇಟ್ಟುಕೊಂಡ ಅಮ್ಮಂದಿರು, ತಮ್ಮ ಮಕ್ಕಳಿಗೆ ಆ ಹವ್ಯಾಸದ ಸಮಯವನ್ನು ಮುಂಚಿತವಾಗಿಯೇ ತಿಳಿಸಿ, ಅವರೊಡನೆ ಮಾಡಿ ಸಂಭ್ರಮಿಸಬಹುದು. ದೊಡ್ಡ ವಯಸ್ಸಿನ ಮಕ್ಕಳಾದರೆ, ಯೋಗಾಭ್ಯಾಸ, ಉಪಾಹಾರ, ಅಭ್ಯಾಸದ ಸಮಯ, ಬರವಣಿಗೆ, ಆಟದ ಸಮಯ, ಹವ್ಯಾಸಗಳ ಸಮಯ, ಟಿವಿ ಮತ್ತಿತರ ಮನರಂಜನೆಯ ಸಮಯ ಎಂಬಿತ್ಯಾದಿ ಶಾಲಾ ಮಾದರಿಯ ಟೈಂ ಟೇಬಲ್ ಮಾಡಿಕೊಟ್ಟು, ಅದಕ್ಕೆ ಪೂರಕವಾಗಿ ಮನೆಯ ಪ್ರತಿಯೊಬ್ಬರೂ ಶಿಸ್ತಿನಿಂದ ಮಕ್ಕಳ ಚಟುವಟಿಕೆಗಳಿಗೆ ಬೆಂಬಲಿಸಿ ದರೆ, ಮಕ್ಕಳು ನಿಯಮಗಳಿಗೆ ಒಂದೆರಡು ದಿನ ರಗಳೆ ಮಾಡಿದರೂ ಕ್ರಮೇಣ ಒಗ್ಗಿಕೊಳ್ಳುವುದರಿಂದ ಕಿರಿಕಿರಿ ಕಡಿಮೆಯಾಗುತ್ತದೆ.

ಅರ್ಧ ಲೋಟ ತುಂಬಿದೆಯಲ್ವಾ?: ಲೋಟದಲ್ಲಿ ಅರ್ಧ ನೀರು ಖಾಲಿಯಾಗಿದೆ ಎಂದು ಕೊರಗುವುದಕ್ಕೂ, ಲೋಟದಲ್ಲಿ ಅರ್ಧದಷ್ಟು ನೀರಿದೆ ಎಂದು ಖುಷಿ ಪಡುವುದಕ್ಕೂ ವ್ಯತ್ಯಾಸವಿದೆ. ಮಾರಣಾಂತಿಕ ರೋಗಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬಲಿಯಾಗುತ್ತಿರುವ ಈ ಸಂಕಷ್ಟದ ಸಮಯದಲ್ಲಿ ನಮ್ಮ ಮಕ್ಕಳನ್ನು ಕಾಪಾಡಿಕೊಂಡು ಮನೆಮಂದಿಯೆಲ್ಲ ಒಟ್ಟಿಗೆ ಇದ್ದೇವಲ್ಲ. ಸಾಧ್ಯವಾದಷ್ಟು ಸುರಕ್ಷತೆಯಿಂದ ಇರುವಂತಹ ವ್ಯವಸ್ಥೆಗಳು ಸಿಕ್ಕಿವೆಯಲ್ಲ ಎಂದು ಪ್ರತಿನಿತ್ಯ ಮನನ ಮಾಡಿಕೊಳ್ಳುವುದೇ ಪಾಲಕರ ಅದರಲ್ಲಿಯೂ ಇಡೀ ಮನೆಯ ಪೋಷಕಿಯಾದ ಅಮ್ಮನ ಶಕ್ತಿ.

ಪಾಸಿಟಿವ್ ದೃಷ್ಟಿಕೋನ ಇರಲಿ: ‘ಮಿ ಟೈಮ್ (ಸ್ವಂತಕ್ಕಾಗಿ ಮೀಸಲಿಡುವ ವೇಳೆ) ಸಿಗದಿರುವ ಪರಿಸ್ಥಿತಿ ಇದೆ ನಿಜ. ಆದರೆ ಫ್ಯಾಮಿಲಿ ಟೈಮ್ ಎಂದು ಖುಷಿಪಡುವ ದಿನಗಳಿವು. ಪ್ರೀತಿಪಾತ್ರರೊಡನೆ ನಕ್ಕು, ಉಂಡು, ತಿಂದು ಜತೆಗಿರಲು ಅವಕಾಶ ಸಿಗುತ್ತಿದೆಯಲ್ಲ. ಮಕ್ಕಳು ಬಿಸಿಬಿಸಿ ಊಟ ಮಾಡುತ್ತಿದ್ದ್ದಾರಲ್ಲ! ಅವರು ಬೆಳೆಯುವುದನ್ನು, ಅವರ ಆಟ ನಡವಳಿಕೆಗಳನ್ನು ನಾವು ಗಮನಿಸಿಕೊಳ್ಳಬಹುದಲ್ಲ, ಅವರೊಡನೆ ಬೆರೆಯುವಷ್ಟು ಅವಕಾಶ ನಮಗೆ ಸಿಗುತ್ತಿದೆಯಲ್ಲ. ಊಟದಲ್ಲಿ ಅಡುಗೆ ರೆಸಿಪಿಗಳಲ್ಲಿ ಈಗ ವೈವಿಧ್ಯ ತರುವಂತಾಗುತ್ತಿದೆಯಲ್ಲ... ಅಬ್ಬಾ, ಎಷ್ಟೊಂದು ಪಾಸಿಟಿವ್ ಪಾಯಿಂಟ್ಸ್​ಗಳೂ ಇವೆ, ಅಲ್ಲವೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net