ಜಾರ್ಖಂಡ್​ನ ದಂತಕಥೆ ಭಗವಾನ್ ಬಿರ್ಸಾ ಮುಂಡಾ

Birsa Munda
Published on

ಬ್ರಿಟಿಷರ ವಸಾಹತುಶಾಹಿ ಶೋಷಣೆ ವಿರುದ್ಧ ಜನರ ಪ್ರತಿರೋಧದ ನಾಯಕನಾಗಿ ಹೊರಹೊಮ್ಮಿದ್ದ ಭಗವಾನ್ ಬಿರ್ಸಾ ಮುಂಡಾ, ಜನರ ಹಕ್ಕುಗಳ ಹೋರಾಟಕ್ಕೆ ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ವಹಿಸಿದವರು. ಅವರ ಸಾಹಸಗಾಥೆಗಳು ಈಗಲೂ ಜಾರ್ಖಂಡ್​ನಲ್ಲಿ ದಂತಕಥೆಗಳಾಗಿವೆ. ಅವರ ಆಕಾಂಕ್ಷೆಗಳು- ಸ್ವಾತಂತ್ರ್ಯ, ನ್ಯಾಯ, ಅಸ್ಮಿತೆ ಮತ್ತು ಘನತೆ- ನಮ್ಮ ದೇಶದ ಯುವಕರಿಗೆ ಸದಾ ಕಾಲ ಪ್ರೇರಣೆ.

ಸಕಾಲಿಕ
ನಮ್ಮ ತಾಯ್ನಾಡಿನಲ್ಲಿ ಇತಿಹಾಸದ ಪ್ರತಿಯೊಂದು ಕಾಲಘಟ್ಟದಲ್ಲೂ ವೀರಪುತ್ರರು ಮತ್ತು ವೀರಪುತ್ರಿಯರು ಜನ್ಮ ತಾಳಿದ್ದಾರೆ. ಅವರು ತಮ್ಮ ಪ್ರತಿಭೆಯಿಂದ ಭಾರತದ ಚೈತನ್ಯವನ್ನು ಉಜ್ವಲಗೊಳಿಸಿದ್ದಾರೆ. ಕೆಲವರು ಸರ್ಪ¤ ಮಂಡಲದ ತಾರೆಗಳಂತೆ ಕಂಗೊಳಿಸಿದ್ದಾರೆ. ಅದೇ ಮಾರ್ಗದಲ್ಲಿ ಅವರು ನಮಗೆ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ. ಅಂತಹ ಪ್ರಕಾಶಮಾನವಾದ ನಕ್ಷತ್ರಗಳಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರೂ ಒಬ್ಬರು.

ರಾಷ್ಟ್ರದ ಪಥಕ್ಕೆ ಬೆಳಕಾದ ಈ ಅಪ್ರತಿಮ ವ್ಯಕ್ತಿಯ 150ನೇ ಜನ್ಮದಿನವನ್ನು ವರ್ಷವಿಡೀ ಆಚರಿಸಲಾಗುತ್ತಿದೆ. ಬಾಲ್ಯದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಬಿರ್ಸಾ ಮುಂಡಾ ಅವರ ದಂತಕಥೆಗಳನ್ನು ಕೇಳುತ್ತಿದ್ದಾಗ ನಮ್ಮ ಪರಂಪರೆ ಬಗ್ಗೆ ತುಂಬಾ ಹೆಮ್ಮೆಪಡುತ್ತಿದ್ದೆವು. ಕೇವಲ 25 ವರ್ಷಗಳ ಅಲ್ಪ ಜೀವಿತಾವಧಿಯಲ್ಲಿ, ಇಂದಿನ ಜಾರ್ಖಂಡ್​ನ ಉಲಿಹಾತುವಿನ ಬಾಲಕ ವಸಾಹತುಶಾಹಿ ಶೋಷಣೆ ವಿರುದ್ಧ ಜನರ ಪ್ರತಿರೋಧದ ನಾಯಕನಾಗಿ ಹೊರಹೊಮ್ಮಿದ್ದ. ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಳೀಯ ಜಮೀನುದಾರರು ಬುಡಕಟ್ಟು ಸಮುದಾಯಗಳನ್ನು ಶೋಷಿಸುತ್ತಿದ್ದಾಗ, ಅವರ ಭೂಮಿಯನ್ನು ಕಸಿದುಕೊಂಡು ದೌರ್ಜನ್ಯ ಎಸಗುತ್ತಿದ್ದಾಗ, ಬಿರ್ಸಾ ಈ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯದ ವಿರುದ್ಧ ಸಿಡಿದೆದ್ದು, ಜನರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಾಯಕತ್ವ ವಹಿಸಿದರು. ‘ಧರ್ತಿ ಆಬಾ’ (ಭೂಮಿಯ ಪಿತಾಮಹ) ಎಂದು ಕರೆಯಲಾಗುವ ಬಿರ್ಸಾ 1890ರ ದಶಕದ ಉತ್ತರಾರ್ಧದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ‘ಉಲ್ಗುಲಾನ್’ ಅಥವಾ ‘ಮುಂಡಾ ದಂಗೆ’ಯನ್ನು ಸಂಘಟಿಸಿದರು.

ಉಲ್ಗುಲಾನ್ ಎಂಬುದು ದಂಗೆಗಿಂತ ಮಿಗಿಲಾದುದಾಗಿತ್ತು. ಅದು ನ್ಯಾಯ ಮತ್ತು ಸಾಂಸ್ಕೃತಿಕ ಅಸ್ಮಿತೆ ಎರಡರ ಹೋರಾಟವಾಗಿತ್ತು. ಬಿರ್ಸಾ ಮುಂಡಾ ಅವರ ಚುರುಕಾದ ಅರಿವಿನಿಂದ ಒಂದೆಡೆ ಬುಡಕಟ್ಟು ಜನರು ಯಾವುದೇ ಹಸ್ತಕ್ಷೇಪವಿಲ್ಲದೆ ಭೂಮಿಯನ್ನು ಹೊಂದುವ ಮತ್ತು ಕೃಷಿ ಮಾಡುವ ಹಕ್ಕನ್ನು ಕೊಡಿಸಿತು, ಮತ್ತೊಂದೆಡೆ ಬುಡಕಟ್ಟು ಪದ್ಧತಿಗಳು ಮತ್ತು ಸಾಮಾಜಿಕ ಮೌಲ್ಯಗಳ ಮಹತ್ವವನ್ನು ಸಾರಿತು. ಮಹಾತ್ಮ ಗಾಂಧಿಯವರಂತೆಯೇ, ಬಿರ್ಸಾ ಅವರ ಹೋರಾಟವೂ ನ್ಯಾಯ ಮತ್ತು ಸತ್ಯದ ಅನ್ವೇಷಣೆಯಿಂದ ಮಾರ್ಗದರ್ಶಿತವಾಗಿತ್ತು.

ರೋಗಿಗಳ ಶುಶ್ರೂಷೆ ಮಾಡುವುದು ಅವರಿಗೆ ಒಂದು ಹವ್ಯಾಸವಾಗಿತ್ತು. ರೋಗ ಗುಣಪಡಿಸುವುದರಲ್ಲಿ ಅವರು ಸಿದ್ಧಹಸ್ತರಾಗಿದ್ದರು. ಅಂಥ ನಿರಂತರ ಘಟನೆಗಳು ದೇವರು ಅವರಿಗೆ ಗುಣಪಡಿಸುವ ಸ್ಪರ್ಶ(ಕೈಗುಣ)ವನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ಜನರು ನಂಬುವಂತೆ ಮಾಡಿದವು. ಅನಾರೋಗ್ಯದಿಂದ ಬಳಲುತ್ತಿರುವವರನ್ನು ತಮ್ಮ ಬಳಿಗೆ ಕರೆತರುವಂತೆ ಅವರು ಜನರಿಗೆ ಹೇಳುತ್ತಿದ್ದರು, ಬರಲು ಸಾಧ್ಯವಾಗದಿದ್ದರೆ ತಾವೇ ರೋಗಿಗಳ ಬಳಿಗೆ ಹೋಗುತ್ತೇನೆ ಎಂದು ಹೇಳುತ್ತಿದ್ದರು. ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ, ರೋಗಿಗಳನ್ನು ಕರೆದು ತಮ್ಮ ಕೌಶಲ ಮತ್ತು ಕೈಗುಣದಿಂದ ಅಸಂಖ್ಯಾತ ಜನರನ್ನು ಗುಣಪಡಿಸಿದರು.

ಬಿರ್ಸಾ ಮುಂಡಾ ಮತ್ತು ಇತರರನ್ನು ಇತಿಹಾಸದಲ್ಲಿ ‘ಎಲೆಮರೆಯ ಕಾಯಿಯಂತಹ ನಾಯಕರ’ ಸಾಲಿನಲ್ಲಿ ಹೆಸರಿಸಿದ ಕಾಲವಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ, ಅವರ ಶೌರ್ಯ ಮತ್ತು ಬಲಿದಾನವನ್ನು ವಾಸ್ತವದ ನೆಲೆಯಲ್ಲಿ ಪ್ರಶಂಸಿಸಲಾಗುತ್ತಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ, ನಾವು ಭಾರತದ ಸಂಸ್ಕೃತಿ ಮತ್ತು ಸಾಧನೆಗಳ ಭವ್ಯ ಇತಿಹಾಸವನ್ನು ಸಂಭ್ರಮಿಸಿದ್ದೇವೆ. ಇದು ಜನರಿಗೆ, ವಿಶೇಷವಾಗಿ ಯುವಕರಿಗೆ, ಈ ಹಿಂದೆ ಹೆಚ್ಚು ಪ್ರಸಿದ್ಧಿ ಪಡೆಯದ ಮಹಾನ್ ದೇಶಭಕ್ತರ ಶೌರ್ಯಶಾಲಿ ಕೊಡುಗೆಗಳ ಬಗ್ಗೆ ಇನ್ನಷ್ಟು ಅರಿಯಲು ನೆರವಾಯಿತು.

ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗಳನ್ನು ಸ್ಮರಿಸಲು ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15ನ್ನು ‘ಜನಜಾತೀಯ ಗೌರವ್ ದಿವಸ್’ ಎಂದು ಆಚರಿಸಲು ಸರ್ಕಾರ 2021ರಲ್ಲಿ ನಿರ್ಧರಿಸಿದಾಗ ಇತಿಹಾಸದಲ್ಲಿ ಈ ಹೊಸ ಸೇರ್ಪಡೆಗೆ ಉತ್ತೇಜನ ದೊರಕಿತು. ಬಿರ್ಸಾ ಮುಂಡಾ ಅವರ ಪರಂಪರೆಯ ಸ್ಮರಣೆ, ದೀರ್ಘಕಾಲದಿಂದ ಪ್ರಾತಿನಿಧ್ಯ ಪಡೆಯದ ಬುಡಕಟ್ಟು ಇತಿಹಾಸವನ್ನು ಭಾರತದ ಇತಿಹಾಸದ ಕೇಂದ್ರಬಿಂದುವಾಗಿಸಿತು.

ಈ ಇತಿಹಾಸ ಇಂದು ಹೆಚ್ಚು ಪ್ರಸ್ತುತವಾಗಿದ್ದು, ಅದು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ಮತ್ತು ಪರಿಸರ ವಿಜ್ಞಾನವನ್ನು ಸಂರಕ್ಷಿಸಲು ಆಧುನಿಕ ಜಗತ್ತಿಗೆ ನಿರ್ಣಾಯಕ ಪಾಠಗಳನ್ನು ಕಲಿಸುತ್ತದೆ. ನಾನು ಚಿಕ್ಕವಳಾಗಿದ್ದಾಗ, ನನ್ನ ತಂದೆ ಉರುವಲಿಗಾಗಿ ಒಣಗಿದ ಮರಗಳನ್ನು ಕಡಿದರೂ ಕ್ಷಮೆ ಕೇಳುತ್ತಿದ್ದುದನ್ನು ನಾನು ನೋಡುತ್ತಿದ್ದೆ. ಇದು ನನಗೆ ಚೆನ್ನಾಗಿ ನೆನಪಿದೆ. ವಿಶಿಷ್ಟವಾಗಿ, ಬುಡಕಟ್ಟು ಸಮುದಾಯಗಳು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಸಾಮೂಹಿಕ ಒಳಿತಿಗೆ ಹೆಚ್ಚು ಆದ್ಯತೆ ನೀಡಿ ಸಂತೃಪ್ತರಾಗಿರುತ್ತವೆ. ಬುಡಕಟ್ಟು ಸಮಾಜಗಳ ಈ ವಿಶಿಷ್ಟ ಲಕ್ಷಣವನ್ನು ಮಾನವಕುಲದ ಉತ್ತಮ ಭವಿಷ್ಯಕ್ಕಾಗಿ ಪೋಷಿಸುವ ಅಗತ್ಯವಿದೆ.

Birsa Munda

ಭಾರತದ ಸಾಮಾಜಿಕ- ಸಾಂಸ್ಕೃತಿಕ ಸಂರಚನೆಯಲ್ಲಿ ಬುಡಕಟ್ಟು ಸಮುದಾಯಗಳ ಪ್ರಾಮುಖ್ಯತೆಗೆ ಸೂಕ್ತ ಮಾನ್ಯತೆ ನೀಡಲು ಕಳೆದ ದಶಕದಲ್ಲಿ ಪ್ರಾರಂಭಿಸಲಾದ ಸರ್ಕಾರದ ಈ ವಿಶಾಲ ಪ್ರಯತ್ನದ ಹಿಂದಿನ ನಿಖರ ಕಾರಣವೂ ಇದೇ ಆಗಿದೆ. ಘೊಷಣೆಗಳನ್ನು ಮೀರಿ ಕಲ್ಯಾಣ ಕಾರ್ಯಕ್ರಮವನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಸರಣಿ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಘೊಷಿಸಲಾಗಿದೆ. ಬುಡಕಟ್ಟು ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಹೆಚ್ಚು ಸಮಗ್ರ ವಿಧಾನಕ್ಕಾಗಿ, ಸುಮಾರು 63,000 ಬುಡಕಟ್ಟು ಹಳ್ಳಿಗಳಲ್ಲಿ ಸಾಮಾಜಿಕ ಮೂಲಸೌಕರ್ಯದಲ್ಲಿನ ಅಂತರಗಳನ್ನು ತುಂಬಲು ಕಳೆದ ತಿಂಗಳು ‘ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ’ವನ್ನು ಪ್ರಾರಂಭಿಸಲಾಯಿತು. ಇದಲ್ಲದೆ, ‘ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾಅಭಿಯಾನ’ವು (ಪಿಎಂ- ಜನಮಾನ್) ಕಲ್ಯಾಣ ಉಪಕ್ರಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಕೇಂದ್ರೀಕರಿಸಿದೆ.

ಪರಿಶಿಷ್ಟ ಪಂಗಡದ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುವುದು ಬಿರ್ಸಾ ಮುಂಡಾ ಮತ್ತು ಬುಡಕಟ್ಟು ಪ್ರದೇಶಗಳ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರವು ನೀಡಬಹುದಾದ ನಿಜವಾದ ಗೌರವ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರಪತಿ ಭವನ ಕೂಡ ಪರಿಶಿಷ್ಟ ಪಂಗಡದ ಸಮುದಾಯಗಳನ್ನು ತಲುಪಲು ಹೊಸ ಉಪಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರಪತಿ ಭವನದ ವಸ್ತುಸಂಗ್ರಹಾಲಯದಲ್ಲಿ ಬುಡಕಟ್ಟು ಸಮುದಾಯಗಳ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ರಾಷ್ಟ್ರ ನಿರ್ವಣದಲ್ಲಿ ಅವರ ಪಾತ್ರದ ಒಂದು ನೋಟವನ್ನು ಬಿಂಬಿಸುವ ‘ಜನಜಾತೀಯ ದರ್ಪಣ್’ ಎಂಬ ಗ್ಯಾಲರಿಯನ್ನು ಉದ್ಘಾಟಿಸುವ ಅದೃಷ್ಟ ನನ್ನದಾಗಿತ್ತು. ಆಗಸ್ಟ್ನಲ್ಲಿ ನಡೆದ ರಾಜ್ಯಪಾಲರ ಸಮ್ಮೇಳನದಲ್ಲಿ, ಬುಡಕಟ್ಟು ಕಲ್ಯಾಣಕ್ಕಾಗಿ ಉತ್ತಮ ಸಂಪನ್ಮೂಲ ಬಳಕೆಯ ಅಗತ್ಯವನ್ನು ಒತ್ತಿಹೇಳುವ ಅವಕಾಶ ನನಗೆ ಲಭಿಸಿತ್ತು.

ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಆಹ್ವಾನಿಸಲಾಗಿದ್ದ 75 ಪ್ರತಿನಿಧಿಗಳ, ಅದರಲ್ಲೂ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಪ್ರತಿನಿಧಿಗಳೊಂದಿಗೆ ನಾನು ವ್ಯಾಪಕ ಸಂವಾದ ನಡೆಸಿದಾಗ ಅದು ನನಗೆ ಮುಗ್ಧ ಅನುಭವ ನೀಡಿತು. ಅವರು ತಮ್ಮ ಸಂತಸ ಮತ್ತು ದುಃಖವನ್ನು ನನ್ನೊಂದಿಗೆ ಹಂಚಿಕೊಂಡರು. ನಾನು ಹೆಮ್ಮೆಪಡುವಂತಹ ಒಂದು ಸಾಧನೆ ಇದ್ದರೆ, ಅದು ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ನಾನು ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವುದು ನಮ್ಮೆಲ್ಲರಿಗೂ ಅಭೂತಪೂರ್ವ ಮನ್ನಣೆ ಎಂಬಂತೆ ನೋಡುವುದೇ ಆಗಿದೆ.

ಬಿರ್ಸಾ ಮುಂಡಾ ಅವರ 150ನೇ ಜನ್ಮದಿನ ಆಚರಿಸುವಾಗ, ನಾವೆಲ್ಲರೂ ಈ ಭಾವನೆಯನ್ನು ಸಂಭ್ರಮಿಸುತ್ತಿದ್ದೇವೆ ಎಂಬ ಖಾತ್ರಿ ನನಗಿದೆ. ಬಿರ್ಸಾ ಮುಂಡಾ ಅವರ ಆದರ್ಶಗಳು ಬುಡಕಟ್ಟು ಸಮುದಾಯಗಳ ಯುವಕರಿಗೆ ಮಾತ್ರವಲ್ಲದೆ ದೇಶದ ಪ್ರತಿಯೊಂದು ಭಾಗದಲ್ಲಿರುವ ಎಲ್ಲ ಸಮುದಾಯಗಳ ಯುವಕರಿಗೆ ಹೆಮ್ಮೆ ಮತ್ತು ಸ್ಪೂರ್ತಿಯ ಮೂಲವಾಗಿದೆ. ಅವರ ಆಕಾಂಕ್ಷೆಗಳು - ಸ್ವಾತಂತ್ರ್ಯ, ನ್ಯಾಯ, ಅಸ್ಮಿತೆ ಮತ್ತು ಘನತೆ ಇದು ಪ್ರತಿಯೊಬ್ಬ ಯುವಕರ ಆಕಾಂಕ್ಷೆಗಳಾಗಿವೆ.

(ಲೇಖಕರು - ಭಾರತದ ರಾಷ್ಟ್ರಪತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net