

| ಮಂಜುನಾಥ ಎಸ್. ನಾಯಕ
ಅದೊಂದು ದಿನ. ಸೂರ್ಯ ಮುಳುಗುವ ಸಮಯ. ಹಳ್ಳಿಯ ಬೆಟ್ಟದ ತಪ್ಪಲಿನಲ್ಲಿ ಕತ್ತಲು ಕವಿಯತೊಡಗಿದಾಗ ಅದೇನೋ ಒಂದು ಕಪು್ಪ ವಸ್ತು ಪಟಪಟನೆ ಹಾರಿ ಹೋಯಿತು. ಅದೆಲ್ಲಿ ಹೋಯಿತೆಂದು ನೋಡಿದರೆ ಗಿಡದ ಟೊಂಗೆಯೊಂದಕ್ಕೆ ಅದು ತಲೆಕೆಳಗೆ ನೇತಾಡತೊಡಗಿತು... ಏನದು?
ಹಳ್ಳಿಯ ಪರಿಸರದಲ್ಲಿ ಬೆಳೆದವರಿಗೆ ಅದೇನೆಂದು ಹೇಳಬೇಕಾಗಿಲ್ಲ. ಅದು ಈ ನಿಸರ್ಗವೆಂಬ ವಿಸ್ಮಯದ ಆಗರದಲ್ಲಿ ಮನುಕುಲದಷ್ಟೇ ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಜೀವಸಂಕುಲದ ಸದಸ್ಯ. ಹೆಸರು ಬಾವಲಿ. ಅದೊಂದು ಅಪರೂಪದ ಸಸ್ತನಿ. ಎಷ್ಟೆಂದರೆ ಈ ಸಸ್ತನಿಯ ಮಹತ್ವ ಕುರಿತು ಜಾಗೃತಿ ಮೂಡಿಸಲು ಪ್ರತಿವರ್ಷ ಏ. 17ರಂದು ಅಂತಾರಾಷ್ಟೀಯ ಬಾವಲಿ ಮೆಚ್ಚುಗೆ ದಿನ (International Bats Appreciation Day) ಎಂದು ಆಚರಿಸಲಾಗುತ್ತದೆ.
ಏನಿದರ ವಿಶೇಷ?: ಬಾವಲಿಗಳು ಸಾಕಷ್ಟು ಹಾವಳಿ ಮಾಡುತ್ತವೆಂಬ ದೂರೂ ಇದೆ. ಆದರೆ ಅವು ಅಷ್ಟೇ ಅಲ್ಲ. ಉಪಕಾರಿ ಕೂಡ. ವಿರಾಮದ ಸಮಯದಲ್ಲಿ ಮರದ ಮೇಲೆ, ಕಂಬಿಗಳ ಮೇಲೆ ಅಥವಾ ಗುಹೆಯೊಳಗೆ ನೇತಾಡುವ ಬಾವಲಿ ತುಂಬಾ ಶಕ್ತಿಶಾಲಿ ಸಸ್ತನಿ. ಇವುಗಳಿಗೆ ಸರಿಯಾಗಿ ಕಣ್ಣು ಕಾಣುವುದಿಲ್ಲ. ಶಬ್ದದ ಮೂಲಕವೇ ಜಗತ್ತನ್ನು ನೋಡುವ ಇವುಗಳ ಜೀವನ ಶೈಲಿ ಕೌತುಕಮಯ. ಇದರ ಇತಿಹಾಸ ಹುಡುಕುತ್ತ ಹೋದರೆ ನಾವು 31 ಮಿಲಿಯನ್ ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಅಷ್ಟು ಸುದೀರ್ಘ ಕಾಲದಿಂದ ಅವು ಈ ನಿಸರ್ಗದಲ್ಲಿ ಬಾಳುತ್ತಿವೆ. ಅಷ್ಟೇ ಅಲ್ಲ, ಬಾವಲಿ ತಜ್ಞರ ಪ್ರಕಾರ ವಿಶ್ವದಾದ್ಯಂತ 1340ಕ್ಕೂ ಅಧಿಕ ಜಾತಿಯ ಬಾವಲಿಗಳಿವೆ. ಕೈರಾಪ್ಟೆರಾ (ಅkಡಿಠಠಿಣಜಡಿಚಿ) ವರ್ಗಕ್ಕೆ ಸೇರುವ ಬಾವಲಿಗಳಲ್ಲಿ ಎರಡು ಗುಂಪು. ದೊಡ್ಡ ಬಾವಲಿ (ಮೆಗಾ ಬ್ಯಾಟ್ಸ್) ಮತ್ತು ಪುಟ್ಟ ಬಾವಲಿ (ಮೈಕೋ ಬ್ಯಾಟ್ಸ್).
ಗಾತ್ರದಲ್ಲಿ ದೊಡ್ಡದಾಗಿರುವ ದೊಡ್ಡ ಬಾವಲಿಗಳು 31 ಮಿಲಿಯನ್ ವರ್ಷಗಳ ಹಿಂದೆ ಉಗಮವಾದವಂತೆ. ಈ ಪ್ರಭೇದದ ಬಾವಲಿಗಳ ದೃಷ್ಟಿ ಮಾನವನ ದೃಷ್ಟಿಯಷೆ್ಟೆ ಸಾಮರ್ಥ್ಯ ಹೊಂದಿವೆ. ಇವು ನಿಶಾಚರಿಗಳು. ಕತ್ತಲಿನಲ್ಲಿ ನೋಡಬಲ್ಲವು. ಬಾವಲಿಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿವೆ. ಪುಟ್ಟಬಾವಲಿಗಳು ಕೀಟ, ಕಪ್ಪೆ, ಸರೀಸೃಪ ಮತ್ತು ಮೀನುಗಳನ್ನು ಬೇಟೆೆಯಾಡುತ್ತವೆ. ಅಮೆರಿಕಾದ ವ್ಯಾಂಪೈರ್ ಬ್ಯಾಟ್ ಬಾವಲಿಗಳು ರಕ್ತ ಕುಡಿದು ಬದುಕುತ್ತವೆ ಎಂಬ ನಂಬಿಕೆಯಿದೆ. ಪುಟ್ಟಬಾವಲಿಗಳ ದೃಷ್ಟಿ ಮಂದ. ಇವು ಕಡಿಮೆ ಬೆಳಕಿನಲ್ಲಷ್ಟೇ ನೋಡಬಲ್ಲವು ಮತ್ತು ಧ್ವನಿ ಪ್ರತಿಫಲನದ ಮೂಲಕ ವಸ್ತುಗಳನ್ನು ಗ್ರಹಿಸುತ್ತವೆ.
ದೊಡ್ಡ ಕಣ್ಣು, ಪುಟ್ಟಕಿವಿ, ತೋಳದಂಥ ಮುಖ ಹೊಂದಿರುವ ಬಾವಲಿಗಳನ್ನು ಸಾಮಾನ್ಯವಾಗಿ ‘ಹಾರುವ ತೋಳ’ವೆಂದು ಕರೆಯುತ್ತಾರೆ. ಇವುಗಳ ಹಾರಾಟಕ್ಕೆ ಹೆಚ್ಚಿಗೆ ಶಕ್ತಿ ಬೇಕಾಗಿರುವ ಕಾರಣಕ್ಕೆ ಬಾವಲಿಗಳ ಹೃದಯ ಮತ್ತು ಶ್ವಾಸಕೋಶಗಳು ಕೂಡ ಶಕ್ತಿಶಾಲಿಯಾಗಿವೆ. ಹಾರಾಡುವಾಗ ಬಾವಲಿಯ ಹೃದಯ ನಿಮಿಷಕ್ಕೆ 1000 ಬಾರಿ ಮಿಡಿಯಬಲ್ಲದು. ಪುಟ್ಟಬಾವಲಿಗಳಲ್ಲಿನ ಧ್ವನಿಪ್ರತಿಫಲನದ ವ್ಯವಸ್ಥೆಯು ಶಕ್ತಿಶಾಲಿ ತರಂಗಗಳನ್ನು ಹೊರಹೊಮ್ಮಿಸಿ ಆಹಾರವನ್ನು ಬೇಟೆಯಾಡುತ್ತವೆ. ಮೇಕ್ಸಿಕನ್ ಪ್ರಿ-ಟೆಲ್ಡ್ ಜಾಯಿ ಎಂಬ ಜಾತಿಯ ಬಾವಲಿಗಳು ಗಂಟೆಗೆ 100 ಮೈಲಿಯಷ್ಟು ವೇಗದಲ್ಲಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಇವುಗಳಲ್ಲಿನ ರೆಕ್ಕೆಯಂಥ ರಚನೆ ಹಾರಾಡಲು ಸಹಕಾರಿಯಾಗಿದೆ. ಬಾವಲಿಗಳು 30ವರ್ಷಕ್ಕೂ ಅಧಿಕ ಜೀವಿತಾವಧಿ ಹೊಂದಿವೆ. ಆದರೀಗ ಅರಣ್ಯನಾಶ, ವಿದ್ಯುತ್ ತಂತಿ ಸ್ಪರ್ಶದಿಂದಾಗಿ ಇವುಗಳ ಸಂತತಿ ವಿನಾಶದತ್ತ ಸಾಗಿದೆ.
ಬೆಂಗಳೂರಿನ ಬಾವಲಿ ಸಂಶೋಧಕರಾದ ರಾಜೇಶ ಪುಟ್ಟಸ್ವಾಮಿ ಬಾವಲಿ ಸಂರಕ್ಷಣೆಗೆಂದೆ ಬ್ಯಾಟ್ಸ್ ಕನ್ಸರ್ವೆಶನ್ ಟ್ರಸ್ಟ್ ಆಪ್ ಇಂಡಿಯಾ ಸ್ಥಾಪಿಸಿ ಕರ್ನಾಟಕದಾದ್ಯಂತ ಬಾವಲಿ ಸಮೀಕ್ಷೆ ಮತ್ತು ಪರಿಸರ ಸಮತೋಲನದಲ್ಲಿ ಬಾವಲಿಗಳ ಮಹತ್ತರ ಪಾತ್ರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಕೃಷಿಗೆ ಸಹಕಾರಿ: ಸಸ್ಯಾಹಾರಿ ಬಾವಲಿಗಳು ಪರಾಗಸ್ಪರ್ಶ ಕ್ರಿಯೆಯಲ್ಲೂ ಸಹಕಾರಿಯಾಗಿವೆ. ಬೀಜ ಪ್ರಸರಣಮಾಡಿ ಅರಣ್ಯವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೀಟಹಾರಿ ಪುಟ್ಟಬಾವಲಿಗಳು ರೈತರ ಬೆಳೆಗೆ ಮಾರಕವಾದ ಕೀಟಗಳನ್ನು ಭಕ್ಷಿಸುವುದರ ಮೂಲಕ ಕೀಟನಿಯಂತ್ರಣದಲ್ಲಿ ರೈತಸ್ನೇಹಿಯಾಗಿವೆ. ಮಾತ್ರವಲ್ಲ, ಈ ಮೂಲಕ ಪರಿಸರದ ಸಮತೋಲನ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಬಾವಲಿಗಳ ಹಿಕ್ಕೆಯಲ್ಲಿ ಪೋಟ್ಯಾಶಿಯಂ ನೈಟ್ರೇಟ್ ಇರುವುದರಿಂದ ಇದನ್ನು ಉತ್ತಮ ಸಾವಯವ ಗೊಬ್ಬರವಾಗಿ ಬಳಸಬಹುದು.
(ಲೇಖಕರು ಜೀವವೈವಿಧ್ಯ ಸಂಶೋಧಕರು)