ಪ್ರಾಮಾಣಿಕತೆ, ಪಾರದರ್ಶಕತೆಗಳ ಸ್ವರೂಪ ಸರ್ ಎಂವಿ

Vishwerayya
Published on
ಇಂದು ಜಯಂತಿ

ಬಿಹಾರಿನಲ್ಲಿ ಗಂಗಾನದಿಗೆ ಸೇತುವೆ ಕಟ್ಟುವ ಸಂದರ್ಭ. 90 ವರ್ಷದ ಎಂವಿ ಅಲ್ಲಿಗೆ ಹೋದಾಗ, ಅವರಿಗೆ ರಾತ್ರಿ ತಂಗಲು ಆಗಿನ ಕಾಲದ ಐಷಾರಾಮಿ ಬಂಗಲೆಯನ್ನು ಏರ್ಪಾಡು ಮಾಡಲಾಗುತ್ತದೆ. ಎಂವಿ ಇದನ್ನು ಒಪ್ಪದೆ, ತಾನು ಪ್ರಯಾಣಿಸಿ ಬಂದ ರೈಲ್ವೆಬಂಡಿಯಲ್ಲೇ ಮಲಗಿದರು. ಅಂಥ ಸರಳ ವ್ಯಕ್ತಿತ್ವ ಅವರದ್ದು.

‘ನೆನಪಿಡು ನೀನು ರೈಲ್ವೆ ಕ್ರಾಸಿಂಗ್​ನ್ನು ಗುಡಿಸುವ ಉದ್ಯೋಗಿಯಾದರೆ, ಅದು ಜಗತ್ತಿನ ಉಳಿದೆಲ್ಲ ಕ್ರಾಸಿಂಗ್​ಗಳಿಗಿಂತ ಸ್ವಚ್ಛವಾಗಿರಬೇಕು- ಅದೇ ಕಾಯಕ- ಅದೇ ಸಾರ್ಥಕ ಯಶಸ್ಸು’. ಇದು ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರಿನ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್​ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದ ಮಾತು. ಅವರು ಎಂಥ ವಿಶಿಷ್ಟ, ಕಾರ್ಯತತ್ಪರ, ಸಮಾಜನಿರ್ವಣ ಶಿಲ್ಪಿ ಎನ್ನುವುದನ್ನು ಈ ಮಾತುಗಳೇ ದರ್ಶಿಸುತ್ತವೆ.

ಸರ್ ಎಂ..ವಿ ಹೆಸರೇ ಒಂದು ದಂತಕತೆ. ಬದುಕಿದ್ದಾಗಲೇ ದಂತಕತೆಯಾದವರಲ್ಲಿ ಅವರೊಬ್ಬರು. ಬಾಲ್ಯದ ಬಡತನ ಅವರ ಪ್ರತಿಭಾಶಕ್ತಿಯನ್ನು ಕುಗ್ಗಿಸಲಿಲ್ಲ. ಜೀವನದಲ್ಲಿ ಹಿಗ್ಗಿದವರೂ ಅಲ್ಲ, ಕುಗ್ಗಿದವರೂ ಅಲ್ಲ, ಮಹಾ ಕನಸುಗಾರನೂ ಅಲ್ಲ. ವಾಸ್ತವವಾದಿ, ಕಾಯಕಶಿಲ್ಪಿ. ಸದಾ ಮೂರು ಪೀಸಿನ ಕೋಟು, ಪೇಟಾ, ಶುದ್ಧವಾಗಿ ಇಸ್ತ್ರಿ ಮಾಡಿದ ಪ್ಯಾಂಟು, ಅದಕ್ಕೊಪ್ಪುವ ಟೈಗಳಿಂದ ಅಲಂಕೃತರಾಗುತ್ತಿದ್ದ ಇವರನ್ನು ಇಂಗ್ಲಿಷ್ ಶೈಲಿಯನ್ನು ಅನುಸರಿಸಿದವರು ಎನ್ನಲಾಗುವುದೇ ಇಲ್ಲ. ಅವರೊಬ್ಬ ಅಪ್ಪಟ ಕನ್ನಡಿಗ ದೇಶಭಕ್ತ.

ಮೈಸೂರಿನಲ್ಲಿ ಒಂದು ಸಮ್ಮೇಳನ. ಸ್ವಾತಂತ್ರ್ಯದ ಗಾಳಿ ದೇಶದಲ್ಲೆಲ್ಲ ಬೀಸುತ್ತಿತ್ತು. ಆ ಸಮ್ಮೇಳನದ ಉದ್ಘಾಟನೆಗೆ ಗವರ್ನರ್ ಮಹಾಶಯರು ಬರಬೇಕಾಗಿತ್ತು. ಈ ಸಮ್ಮೇಳನದಲ್ಲಿ ರಾಷ್ಟ್ರೀಯ ಸರ್ಕಾರ ಸ್ಥಾಪನೆ ಮಾಡುವ ವಿಷಯ ಪ್ರಸ್ತಾಪವಾಗುತ್ತದೆ ಎಂದು ತಿಳಿದ ಈ ಗವರ್ನರ್ ಮಹಾಶಯರು ಕೊನೆಯ ಕ್ಷಣದಲ್ಲಿ ಬರಲು ನಿರಾಕರಿಸಿದರು. ಮುಖ್ಯ ಭಾಷಣಕಾರರಾಗಿದ್ದ ಸರ್ ಎಂವಿ ತಾವೇ ಉದ್ಘಾಟಿಸಿ ರಾಷ್ಟ್ರೀಯ ಸರ್ಕಾರದ ಅವಶ್ಯಕತೆಯನ್ನು ಒತ್ತಿ ಹೇಳಿದರು. ವಿಶ್ವೇಶ್ವರಯ್ಯ ಎಂದರೆ ಅದೊಂದು ಶಿಸ್ತಿನ, ಪ್ರಾಮಾಣಿಕತೆಯ, ಬದ್ಧತೆಯ ಮೂರ್ತ ಸ್ವರೂಪ. ಬೆಳಗ್ಗೆ 5 ಗಂಟೆಗೆ ಏಳಲೇಬೇಕು. 5ರಿಂದ 7ರವರೆಗೆ ಓದು, 7.30ಕ್ಕೆ ಉಪಾಹಾರ, 9ರವರೆಗೆ ಖಾಸಗಿ ಕೆಲಸಗಳು. 9ರಿಂದ 12ರವರೆಗೆ ಕಚೇರಿ. 12ರಿಂದ 12.30ರವರೆಗೆ ಮುಖ್ಯ ವಿಚಾರಗಳ ಚರ್ಚೆ. 12.30ಕ್ಕೆ ಊಟ, ತುಸು ವಿಶ್ರಾಂತಿ. ಸಂಜೆ 4ರಿಂದ 7ರವರೆಗೆ ಕ್ಷೇತ್ರವೀಕ್ಷಣೆ. ಒಂದೇ ಒಂದು ದಿನ ಈ ವೇಳಾಪಟ್ಟಿ ಬದಲಾಗಲಿಲ್ಲ. ಅದೊಮ್ಮೆ ಆಗಿನ ಸರ್ಕಾರದ ಪ್ರಭಾವಿ ಮಂತ್ರಿಗಳೊಬ್ಬರು ಇವರನ್ನು ನೋಡಲು 3 ನಿಮಿಷ ತಡವಾಗಿ ಬಂದರಂತೆ. ‘ತಾವು ದಯಮಾಡಿ ನಾಳೆ ಬನ್ನಿ’ ಎಂದು ಸಾಗಹಾಕಿದವರು ಎಂವಿ. ಅಂತಹ ಕಠೋರ ಸಮಯಪ್ರಜ್ಞೆ.

ಮೊದಲು ಕೆಲಸಕ್ಕೆ ಸೇರಿದ್ದು ಮಹಾರಾಷ್ಟ್ರದ ನಾಸಿಕ್​ನಲ್ಲಿ. ಬಳಿಕ ಧುಲೆ, ಪೂನಾ, ಸಿಂಧ್, ಸೂರತ್, ಮುಂಬೈ, ಹೈದರಾಬಾದ್​ಗಳಲ್ಲಿ ಸೇವೆ. ಈ ಎಲ್ಲ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ರೂಪಿಸಿದವರು ಎಂವಿ. 1907ರಲ್ಲಿ ಅಡೆನ್ ನಗರಕ್ಕೆ ಹೋಗಿ, ಅಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯ ಯೋಜನೆ ತಯಾರಿಸುತ್ತಾರೆ. ವಿಶಾಖಪಟ್ಟಣ ಸದಾಕಾಲ ಸಮುದ್ರ ಕೊರೆತಕ್ಕೆ ತುತ್ತಾಗುತ್ತಿತ್ತು. ಅದನ್ನು ತಡೆಗಟ್ಟುವ ಯೋಜನೆಯ ನಿರ್ಮಾಣ ಇವರದ್ದೇ. ಇಂದಿಗೂ ಅದು ಸುಸ್ಥಿರ.

ತೊಂಬತ್ತನೇ ವರ್ಷದಲ್ಲಿ ಬಿಹಾರಿನ ಮೊಕಾಮದಲ್ಲಿ ಗಂಗಾನದಿಗೆ ಸೇತುವೆ ಕಟ್ಟುವ ಸ್ವರೂಪವನ್ನು ನಿರ್ವಿುಸಿದವರು ಈ ಮಹಾನುಭಾವರು.

ಮತ್ತೆ ಬಂದರು ಕರ್ನಾಟಕಕ್ಕೆ: ನಾಲ್ವಡಿ ಕೃಷ್ಣರಾಜ ಒಡೆಯರ್ ಆಮಂತ್ರಣದ ಮೇರೆಗೆ ರಾಜ್ಯದ ಮುಖ್ಯ ಇಂಜಿನಿಯರ್ ಹುದ್ದೆ ಸ್ವೀಕರಿಸಿದರು. ಪ್ರಜಾಮುಖಿ ಕೃಷ್ಣರಾಜ ಒಡೆಯರಿಗೂ ಇವರಿಗೂ ಪರಸ್ಪರ ಗೌರವ ಮತ್ತು ನಂಬಿಕೆ. ಆಗ ನಿರ್ವಣವಾದ ಕೈಗಾರಿಕೆಗಳು ದೇಶದ ಬೇರೆಲ್ಲೂ ಆಗಲಿಲ್ಲ. ಮೈಸೂರು ಸಾಬೂನು ಕಾರ್ಖಾನೆ, ಮೈಸೂರು ಐರನ್ ಆಂಡ್ ಸ್ಟೀಲ್ ಕಾರ್ಖಾನೆ ಭದ್ರಾವತಿ, ಬೆಂಗಳೂರಿನ ಕೃಷಿ ಕಾಲೇಜು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಚೇಂಬರ್ ಆಫ್ ಕಾಮರ್ಸ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಒಂದೇ ಎರಡೇ!

ಇಡೀ ದೇಶದಲ್ಲೇ ಮೈಸೂರು ರಾಜ್ಯ ಕೈಗಾರಿಕೋದ್ಯಮದಲ್ಲಿ ಪ್ರಥಮ. ಇದನ್ನು ನೋಡಿ ಆಗ ಆಳುತ್ತಿದ್ದ ಇಂಗ್ಲಿಷರು ನಾಚಿಕೆ ಪಟ್ಟುಕೊಂಡಿದ್ದರಂತೆ. ಹೊರನೋಟಕ್ಕೆ ಇಂಗ್ಲಿಷ್ ಜೆಂಟಲ್​ವೆುನ್​ನಂತೆ ಕಾಣುತ್ತಿದ್ದ ಅವರು ಬೆಂಗಳೂರು ಪ್ರೆಸ್ಸಿನ ಸ್ಥಾಪನೆಗೆ ಕಾರಣರಾದರು. ಆ ಮೂಲಕ ಅನೇಕ ಕನ್ನಡ ಪುಸ್ತಕಗಳ ಪ್ರಕಟಣೆ ಸಾಧ್ಯವಾಯ್ತು. ಬೆಂಗಳೂರು ಮತ್ತು ಬೌರಿಂಗ್ ಕ್ಲಬ್ಬುಗಳು ಇಂಗ್ಲಿಷರಿಗೆಂದೇ ಮೀಸಲಾಗಿದ್ದವು. ಶುದ್ಧ ಸಸ್ಯಾಹಾರಿಯೂ, ಮದ್ಯಪಾನವರ್ಜಿತರೂ ಆಗಿದ್ದ ಎಂವಿ ಅಠಾರಾ ಕಚೇರಿಯ (ಆಗಿನ ಸರ್ಕಾರದ ಕೇಂದ್ರ ಕಚೇರಿ) ಉದ್ಯೋಗಿಗಳಿಗೆಂದೇ ಕಬ್ಬನ್ ರ್ಪಾನಲ್ಲಿ ಸೆಂಚುರಿ ಕ್ಲಬ್ ಸ್ಥಾಪಿಸಿದರು. ಇದನ್ನೂ ಓದಿ:ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​! 

1912ರಿಂದ 1919ರವರೆಗೆ ಮೈಸೂರಿನ ದಿವಾನಗಿರಿ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಗೆ ಬಂದಾಗ ರಾಜೀನಾಮೆ ನೀಡಿ, ಹೊರಬಂದರು. ಮೇಲ್ಜಾತಿಯ ಮೇಲ್ತನದ ಭ್ರಮೆಯಿಂದಲ್ಲ; ಪ್ರತಿಭೆಗೆ ಕುಂದು ಬರಬಾರದು ಎನ್ನುವ ಉದ್ದೇಶದಿಂದ. ಆ ಕಾರಣಕ್ಕಾಗಿ ಸಮಾಜದ ಎಲ್ಲ ವರ್ಗಗಳಿಗೆ ಮುಕ್ತವಾಗುವಂತೆ ಸರ್ಕಾರಿ ಕಾಲೇಜುಗಳು, ಮೈಸೂರು ವಿಶ್ವವಿದ್ಯಾಲಯಕ್ಕೆ ಪ್ರೋತ್ಸಾಹ ನೀಡಿದರು. ಐದನೇ ಕಿಂಗ್ ಜಾರ್ಜ್ ಇವರೇ ವಿಶ್ವೇಶ್ವರಯ್ಯನವರಿಗೆ ‘ನೈಟ್-ಸರ್’ ಬಿರುದನ್ನು ಕೊಟ್ಟರು. ಪಂಡಿತ್ ನೆಹರೂ 1955ರಲ್ಲಿ ಇವರಿಗೆ ಭಾರತರತ್ನ ಪ್ರಶಸ್ತಿ ನೀಡಿದರು.. ಗಾಂಧಿಯವರೇ ಇವರ ಮನೆಗೆ ಬಂದು ಭೇಟಿಯಾಗಿದ್ದರು.

ದಿವಾನ ಪದವಿಗೆ ರಾಜೀನಾಮೆ ನೀಡಿದ ಮೇಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆ ಸಂಬಂಧ ಮಧುರವಾಗಿಯೇ ಇತ್ತು. ಎಂವಿಯವರ ಸಲಹೆಯೊಂದನ್ನು ಕೇಳಲು ಮಹಾರಾಜರು ಇವರ ಮನೆಗೆ ಅರಮನೆಯ ಕಾರು ಕಳುಹಿಸಿದರು. ಮಹಾರಾಜರನ್ನು ನೋಡಲು ಕಾರಿನಲ್ಲಿ ಹೋಗೋದು ಅಹಂಕಾರವಾಗುತ್ತದೆ ಎಂದ ಎಂವಿ ನಡೆದೇ ಹೋದರು. ಅಹಮಿಕೆ, ಸ್ವಪ್ರತಿಷ್ಠೆ, ಪ್ರಚಾರಪ್ರಿಯತೆಗಳ ಬಲೆಗೆ ಸಿಗದ ಎಂವಿ ಕನ್ನಡನಾಡಿನಲ್ಲಿ ಜನಿಸಿದ್ದು ಸುಯೋಗವೇ ಸರಿ. ಅವರ ಗ್ರಂಥಭಂಡಾರ ಬಹಳ ದೊಡ್ಡದು. ಆದರೆ ಅದರಲ್ಲಿದ್ದ ಎಲ್ಲ ಪುಸ್ತಕಗಳ, ಅವುಗಳ ಪೇಜುಗಳ ಪರಿಚಯವನ್ನೂ ನಿಖರವಾಗಿ ಹೇಳಬಲ್ಲ ಅವರ ನೆನಪಿನ ಶಕ್ತಿಯೇ ಒಂದು ಪವಾಡ. ಅವರ ಗ್ರಂಥಾಲಯದಲ್ಲಿ ಇಂಜಿನಿಯರಿಂಗ್​ಗೆ ಸಂಬಂಧಿಸಿದ ಅನೇಕ ಪುಸ್ತಕಗಳಿದ್ದರೂ, ಅವರಿಗೆ ಪ್ರಿಯವಾದ ಪುಸ್ತಕಗಳು ಮೂರು: ಕಬೀರನ ಗೀತೆಗಳು, ರಸ್ಕಿನ್ನನ ‘ಅನ್ ಟು ದ ಲಾಸ್ಟ್’ ಮತ್ತು Promotion of happiness. ಇದನ್ನೂ ಓದಿ: ವಿಶ್ವಗುರು: ಕರೊನಾ ಬಗ್ಗೆ ಇನ್ನೆಷ್ಟು ದಿನ ಹೆದರಿಕೆ?!

ಕಠೋರ ಶಿಸ್ತಿನ ಎಂವಿ ಎಂದಿಗೂ, ಯಾರಲ್ಲೂ ದನಿ ಎತ್ತರಿಸಿ ಗದರಿದ್ದಿಲ್ಲವಂತೆ. ಭದ್ರಾವತಿಯ ಕಬ್ಬಿಣದ ಕಾರ್ಖಾನೆಯ ಅಧ್ಯಕ್ಷರಾಗಿದ್ದರು. ನಷ್ಟದಲ್ಲಿ ನಡೆಯುತ್ತಿದ್ದ ಕಾರ್ಖಾನೆಯನ್ನು ಲಾಭಾಂಶಕ್ಕೆ ಮೇಲೆತ್ತಿದ್ದರು. ಆಗ ವೇತನ ಪಡೆಯುತ್ತಿರಲಿಲ್ಲ. ಲಾಭ ಬಂದ ಮೇಲೆ ಕಂಪನಿ ಅವರಿಗೆ ಬಾಕಿ ಸಂಬಳವನ್ನು ಕೊಡಲು ಬಂದಾಗ, ಅದನ್ನು ನಿರಾಕರಿಸಿ, ಈ ಹಣದಿಂದ ಒಂದು ತಾಂತ್ರಿಕ ಶಾಲೆ ತೆಗೆಯಿರಿ ಅಂದರಂತೆ. ತಾಂತ್ರಿಕ ಶಾಲೆ ತೆರೆದು, ಅದಕ್ಕೆ ‘ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್’ ಎಂದು ಹೆಸರಿಡಲು ನಿಶ್ಚಯಿಸಲಾಯಿತು. ಇದಕ್ಕೊಪ್ಪದ ಎಂವಿ ಆ ಶಾಲೆಗೆ ‘ಜಯಚಾಮರಾಜೇಂದ್ರ ಪಾಲಿಟೆಕ್ನಿಕ್’ ಹೆಸರಿಡಿಸಿದ್ದರು. ಈಗ ಎಲ್ಲಾದರೂ ಹುಡುಕಿದರೂ ಸಿಕ್ಕಾರೆಯೇ ಇಂತಹ ಮಹಾನುಭಾವರು?

ಬಿಹಾರಿನಲ್ಲಿ ಗಂಗಾನದಿಗೆ ಸೇತುವೆ ಕಟ್ಟುವ ಸಂದರ್ಭ. 90 ವರ್ಷದ ಎಂವಿ ಅಲ್ಲಿಗೆ ಹೋದಾಗ, ಅವರಿಗೆ ರಾತ್ರಿ ತಂಗಲು ಆಗಿನ ಕಾಲದ ಐಷಾರಾಮಿ ಬಂಗಲೆಯನ್ನು ಏರ್ಪಾಡು ಮಾಡಲಾಗುತ್ತದೆ. ಎಂವಿ ಇದನ್ನು ಒಪ್ಪದೆ, ತಾನು ಪ್ರಯಾಣಿಸಿ ಬಂದ ರೈಲ್ವೆಬಂಡಿಯಲ್ಲೇ ಮಲಗಿದರು.

ಆದರೆ ಈಗಿನ ಸ್ಥಿತಿ ಹೇಗಿದೆ? ಸರ್ ಎಂವಿ ಕಟ್ಟಿದ ಕರ್ನಾಟಕದ ಒಂದೊಂದು ಸಂಸ್ಥೆಗಳೂ ಮಾಯವಾಗುತ್ತಿವೆ. ಪ್ರತಿಷ್ಠಿತ ಮೈಸೂರು ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕಿನ ಜೇಬಿನೊಳಗೆ ತೂರಲ್ಪಟ್ಟಿದೆ. ಮೈಸೂರು ಸಾಬೂನು ಕಾರ್ಖಾನೆ ಮತ್ತು ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಖಾಸಗೀಕರಣಗೊಳ್ಳುವ ಅಪಾಯದಲ್ಲಿವೆ. ಮೈಸೂರು ಲ್ಯಾಂಪ್ಸ್ ಮುಚ್ಚಿಯೇ ಹೋಗಿ, ಭೂಬಾಕರ ಕಣ್ಣಿಗೆ ಬಿದ್ದಿದೆ. ಮೈಸೂರು ಟಿನ್ ಫ್ಯಾಕ್ಟರಿಯ ಹೆಸರೇ ಮರೆತು ಹೋಗಿದೆ. ಸಾರ್ವಜನಿಕ ಸಂಪತ್ತುಗಳು ಖಾಸಗೀಕರಣಗೊಳ್ಳುವ ವ್ಯವಹಾರ ಸಂಕೋಚವಿಲ್ಲದೆ ನಡೆಯುತ್ತಿದೆ.

1860 ಸೆಪ್ಟೆಂಬರ್ 15ರಂದು ಹುಟ್ಟಿ, 101 ವರ್ಷಗಳ ಕಾಲ ಸಕ್ರಿಯರಾಗೇ ಬದುಕಿ 1962 ಏಪ್ರಿಲ್ 14ರಂದು ನಿಧನರಾದ ಸರ್ ಎಂ ವಿಶ್ವೇಶ್ವರಯ್ಯ ಕನ್ನಂಬಾಡಿ ಅಣೆಕಟ್ಟು ಇರುವವರೆಗೆ ಮರೆಯಲಾಗದ ಹೆಸರು. ಯಾಕೆಂದರೆ ಈಗಲೂ ಬೆಂಗಾಡಾಗಿದ್ದ ಮಂಡ್ಯ ಜಿಲ್ಲೆಯನ್ನು ಹಸಿರು ಮಾಡಿದ ಇವರ ಪ್ರತಿಮೆಗೆ ಮಂಡ್ಯದ ರೈತರು ಕ್ಷೀರಾಭಿಷೇಕ ಮಾಡುತ್ತಾರೆ. ಅವರು ಹುಟ್ಟಿದ ದಿನವನ್ನು ಭಾರತ ಮಾತ್ರವಲ್ಲ ಶ್ರೀಲಂಕಾ ಮತ್ತು ತಾಂಜಾನಿಯಾಗಳು ಇಂಜಿನಿಯರುಗಳ ದಿನವೆಂದು ಆಚರಿಸುತ್ತಿದ್ದಾರೆ.

ಶಿಕ್ಷಣ, ಶಿಸ್ತು, ಪರಿಶ್ರಮ, ಪ್ರಾಮಾಣಿಕತೆ, ಪಾರದರ್ಶಕತೆಗಳ ಸ್ವರೂಪವೇ ಆಗಿದ್ದ ಸರ್ ಎಂವಿ ಪ್ರಸ್ತುತ ಕಾಲದಲ್ಲಿ ಒಂದು ಯಾಂತ್ರಿಕ ಆಚರಣೆಯ ವಸ್ತುವಾಗುತ್ತಿರುವುದು ನಮ್ಮ ದೇಶ ನಡೆದುಬಂದ, ಜಾರಿ ಬಂದ ಹಾದಿಗೂ ಸಂಕೇತವಾಗಿದೆ.

(ಲೇಖಕರು ಶಿಕ್ಷಣತಜ್ಞರು ಮತ್ತು ಸಾಹಿತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net