

| ಬೇಲೂರು ರಾಮಮೂರ್ತಿ
ಅಂದಿನ ಪಾಠ ಮುಗಿಸಿದ ಗುರುಗಳು, ‘ನಿಮ್ಮ ಇಡೀ ಜೀವನದಲ್ಲಿ ನೀವು ಮಾತ್ರ ಮಾತಾಡಬೇಕೇ ಹೊರತು ಇನ್ಯಾರೂ ಮಾತಾಡಬಾರದು’ ಎಂದಾಗ ಶಿಷ್ಯರು ಅವರವರ ಮುಖಗಳನ್ನೊಮ್ಮೆ ನೋಡಿಕೊಂಡರು. ಮಾತಾಡುವುದು ಬಾಯಿ ತಾನೇ, ಅಲ್ಲದೆ ಒಬ್ಬರು ಮಾತಾಡಿದರೆ ಇನ್ನೊಬ್ಬರು ಕೇಳಬೇಕು. ಹಾಗಿರುವಾಗ ನಾವೊಬ್ಬರೇ ಮಾತಾಡಬೇಕು ಎಂದರೆ ಹೇಗೆ ಎನ್ನುವ ಅಂಶ ಅವರನ್ನು ಕಾಡುತ್ತಿತ್ತು. ಗುರುಗಳು ಎಲ್ಲ ಶಿಷ್ಯರತ್ತ ನೋಡಿ ಮುಗುಳ್ನಕ್ಕರು.
‘ನೀವು ವಿದ್ಯಾರ್ಥಿಗಳಾಗಿದ್ದೀರಿ ಮತ್ತು ವಿದ್ಯಾರ್ಥಿಗಳ ಹಾಗೇ ಮಾತಾಡ್ತೀರಿ. ಆದರೆ ಮುಂದೆ ವಿದ್ಯಾಭ್ಯಾಸ ಮುಗಿಸಿ ವೃತ್ತಿಗಳಿಗೆ ಹೋಗುತ್ತೀರಿ. ಎಲ್ಲರಿಗೂ ಒಂದೇ ರೀತಿಯ ವೃತ್ತಿ, ಒಂದೇ ರೀತಿಯ ವರಮಾನ, ಐಶ್ವರ್ಯ, ಏಳಿಗೆ ಸಿಗುತ್ತೆ ಅಂತ ಹೇಳುವ ಹಾಗಿಲ್ಲ. ಅದೆಲ್ಲ ಅವರವರ ಸಾಮರ್ಥ್ಯವನ್ನು ಅವಲಂಬಿಸಿರುತ್ತೆ. ಮುಂದೆ ಯಾವುದೇ ಸ್ಥಿತಿಯಲ್ಲಿ ಇರಲಿ ನಿಮ್ಮ ಮಾತು ಒಂದೇ ರೀತಿಯಲ್ಲಿ ಇರಬೇಕು. ಸಂಪತ್ತಿನ, ಅಂತಸ್ತಿನ ವಾಸನೆ ಕೂಡ ಮಾತಿನಲ್ಲಿ ಇರಬಾರದು. ಏಕೆಂದರೆ ನಿಮ್ಮ ಮಾತೇ ನಿಮ್ಮ ವ್ಯಕ್ತಿತ್ವ, ಮನೋಭಾವ ಇವುಗಳನ್ನು ಸಮಾಜಕ್ಕೆ ತೋರಿಸುತ್ತದೆ. ಸಮಾಜವನ್ನು, ಬಂಧುಬಳಗವನ್ನು, ಸ್ನೇಹಿತರನ್ನು ನೋಡುವ ದೃಷ್ಟಿ ನಿಮ್ಮ ಸಂಪತ್ತು, ಅಂತಸ್ತಿನ ಮೇರೆಗೆ ನಿರ್ಧಾರವಾಗಬಾರದು. ಸಂಪತ್ತು, ವರ್ಚಸ್ಸು ಇವತ್ತು ಇರಬಹುದು. ಆದರೆ ನಾಳೆ ಇರುತ್ತೆ ಅಂತ ಹೇಳೋಕಾಗಲ್ಲ. ಆದರೆ ನೀವಾಡಿದ ಮಾತು ಉಳಿದುಬಿಡುತ್ತದೆ. ಸಂಪತ್ತು ಗಳಿಸಿದರೆ ಉಳಿದುಬಿಡುವಂತೆ ಗಳಿಸಬೇಕು, ಆದರೆ ಮಾತು ಆಡಿದರೂ ಅದು ಉಳಿದುಬಿಡುವಂತೆ ಆಡಬೇಕು. ಕೆಟ್ಟ ಮಾತು ಆಡಿದರೂ ಅದು ಉಳಿಯುತ್ತದೆ, ಒಳ್ಳೆಯ ಮಾತಾಡಿದರೂ ಅದು ಉಳಿಯುತ್ತದೆ. ಹಾಗಿರುವಾಗ ಒಳ್ಳೆಯ ಮಾತನ್ನೇ ಆಡಿ ಯಾಕೆ ಉಳಿಸಬಾರದು. ಸಮಾಜದ ಮುಖ್ಯವಾಹಿನಿಯಲ್ಲಿ ಇರುವಾಗ, ಹಾದಿಬೀದಿಯಲ್ಲಿ ನಡೆಯುವಾಗ ಜನರಿಗೆ ನಿಮ್ಮ ಅಂತಸ್ತು, ಸಂಪತ್ತು ಕಾಣದೆ ವ್ಯಕ್ತಿತ್ವ, ಜ್ಞಾನ ಇವುಗಳೇ ಕಾಣಬೇಕು. ಅಂತಹ ವರ್ಚಸ್ಸು ನಿಮ್ಮಲ್ಲಿ ಮೂಡಬೇಕು’ ಎಂದರು.
ಇದು ಇಂದಿನ ದಿನಗಳ ವಾಸ್ತವ ಚಿತ್ರಣವೇ ಅಲ್ಲವೇ? ನಾವು ಸಾಮಾನ್ಯವಾಗಿ ಕಾಣುವಂತೆ ಜನರಾಡುವ ಮಾತಿನಲ್ಲಿ ಅವರ ಸಂಪತ್ತಿನ, ಅಂತಸ್ತಿನ ವಾಸನೆ ಇರುತ್ತದೆ. ಎಷ್ಟೋ ಜನರ ನಡವಳಿಕೆಯೇ ಬದಲಾಗಿರುತ್ತೆ. ಇಂದು ಇರುವ ಹಾಗೆ ನಾಳೆ ಇರೋದಿಲ್ಲ. ಆದರೆ ಶಾಶ್ವತವಾಗಿ ಉಳಿಯುವುದು ಘನತೆ, ಗೌರವ, ಜ್ಞಾನ, ವಿದ್ಯೆ. ನಮ್ಮ ಜೀವನದಲ್ಲಿ ನಾವು ಮಾತ್ರ ಮಾತಾಡಿ ನಮ್ಮ ಅಂತಸ್ತು, ಸಂಪತ್ತು ಇವುಗಳು ಮೌನವಾಗಿ ಇರುವಂತೆ ನೋಡಿಕೊಳ್ಳುವುದು ಲೇಸು. ಇದೇ ನಮ್ಮ ನಿಮ್ಮೆಲ್ಲರ ಜೀವನತತತ್ತ್ವ ಆಗಲಿ. ಸರಳ, ಆದರ್ಶಮಯವಾದ ಜೀವನಪಥ ಸಾರ್ಥಕತೆಯತ್ತ ಕೊಂಡೊಯ್ಯುತ್ತದೆ ಎಂಬ ಅರಿವು ಮೂಡಿ, ಆ ನಿಟ್ಟಿನಲ್ಲಿ ಬದುಕಿನ ಪಯಣ ಸಾಗಲಿ.
(ಲೇಖಕರು ಸಾಹಿತಿ)