

| ಸುಮಾವೀಣಾ
ಕೋಪ ಎಂದಿಗೂ ಹಾನಿಯನ್ನು ಉಂಟುಮಾಡುತ್ತದೆ. ಅದು ಅರಿವಿನ ಸೀಮೆಯನ್ನು ಮತ್ತು ವ್ಯಕ್ತಿತ್ವದ ಘನತೆಯನ್ನು ಕುಗ್ಗಿಸುತ್ತದೆ. ಈ ಕೋಪವೇ ಹಾಗೆ! ಸಮಯ, ಶಕ್ತಿ ಹಾಗೂ ಘನತೆಯನ್ನು ನೀರುಪಾಲಾಗಿಸುತ್ತದೆ. ಕೋಪದ ಸಖ್ಯ ಕೆಂಡದ ಸಖ್ಯ ಎರಡೂ ಒಂದೇ. ಹೀಗೆ ಒಂದೂರಿನಲ್ಲಿ ಒಬ್ಬ ಅತೀಕೋಪಿಷ್ಟ ಮಹಿಳೆ. ಆಕೆಗೆ ಕೋಪ ಕೆಟ್ಟದ್ದು, ಕೋಪಕ್ಕೆ ಬುದ್ಧಿ ಕೊಡಬಾರದೆಂದು ತಿಳಿದಿದೆ. ಆದರೆ ಯಾರಾದರೂ ಮಾತನಾಡಿದರೆ ಸಾಕು, ಬಲುಕೋಪಕ್ಕೊಳಗಾಗಿ ಅನಗತ್ಯ ಮಾತುಗಳನ್ನಾಡಿ ದಿನದ ಸ್ವಾಸ್ಥ್ಯವನ್ನೇ ಹಾಳುಮಾಡಿಕೊಂಡು ದುಃಖಿಸುತ್ತಿರುತ್ತಾಳೆ.
ಒಂದು ದಿನ ಗೌತಮ ಬುದ್ಧ ಆ ಹೆಂಗಸಿನ ಮನೆಯ ಮುಂದೆ ಭಿಕ್ಷಾಟನೆಗೆ ನಿಂತಾಗ ತನ್ನ ಸಮಸ್ಯೆ ಹೇಳಿಕೊಂಡಳು. ಅದಕ್ಕೆ ಗೌತಮ ಬುದ್ಧನು ಚಿಕ್ಕ ಬಾಟಲಿಯೊಂದನ್ನು ನೀಡಿ, ‘ಇದರಲ್ಲಿ ಔಷಧವಿದೆ. ನಿನಗೆ ಕೋಪ ಬಂದ ಕೂಡಲೆ ನಾಲ್ಕೈದು ಹನಿ ಔಷಧವನ್ನು ತೆಗೆದುಕೊ. ಹತ್ತುನಿಮಿಷ ಸುಮ್ಮನಿರು. ಎಲ್ಲವೂ ಸರಿಹೋಗುತ್ತದೆ. ನಿನ್ನ ಸಮಸ್ಯೆ ತೀರಿದ ಬಳಿಕವೇ ನಿನ್ನ ಮನೆಯಿಂದ ಭಿಕ್ಷೆ ಸ್ವೀಕರಿಸುವೆ’ ಎಂದು ಹೇಳಿ ಹೊರಟ.
ಅತೀಕೋಪವತಿ ಆ ಮಹಿಳೆ ಕೋಪ ಬಂದಾಗಲೆಲ್ಲ ಬುದ್ಧ ಕೊಟ್ಟ ಔಷಧದಲ್ಲಿ ನಾಲ್ಕೈದು ಹನಿಗಳನ್ನು ಸೇವಿಸಿ ಸುಮ್ಮನಿರುತ್ತಾಳೆ. ತತ್ಪಲವಾಗಿ ಕೋಪ ನಿಯಂತ್ರಣಕ್ಕೆ ಬರುತ್ತದೆ. ಮತ್ತೊಂದು ವಾರ ಕಳೆದು ಬುದ್ಧ ಬಂದಾಗ ಮಹಿಳೆ ನಮಸ್ಕರಿಸಿ, ‘ನೀವು ಕೊಟ್ಟ ಔಷಧದಿಂದ ನಾನು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದೇನೆ. ಬಹಳ ಉಪಕಾರವಾಯಿತು’ ಎಂದಾಗ ಬುದ್ಧ ನಗುತ್ತ, ‘ನಾನು ಕೊಟ್ಟಿದ್ದು ಔಷಧವಲ್ಲ ತಾಯಿ ನೀರು! ನೀನು ಕೋಪಬಂದಾಗ ಮೌನವನ್ನು ಆಚರಿಸಿರುವೆ ಅಷ್ಟೆ’ ಎನ್ನುತ್ತಾನೆ. ಕೋಪಕ್ಕೆ ಔಷಧ ಮೌನ ಎಂದು ಮುಗುಳ್ನಗುತ್ತ ಮುಂದೆ ಸಾಗುತ್ತಾನೆ.
ಏನೇ ಆದರೂ ಕೋಪದ ಒಂದಂಶ ಮನಸ್ಸಿನಲ್ಲಿ, ದೇಹದಲ್ಲಿ ಇದ್ದೇ ಇರುತ್ತದೆ. ಕಾಮ, ಕ್ರೋಧ, ಲೋಭಗಳು ಆತ್ಮನಾಶ ಮಾಡುವ ಮೂರು ನರಕದ್ವಾರಗಳು. ಇವುಗಳನ್ನು ಬಿಡಬೇಕು ಎನ್ನುತ್ತಾರೆ ಹಿರಿಯರು. ಚಿತ್ತವಿಕಾರದ ಇನ್ನೊಂದು ರೂಪವೇ ಈ ಕೋಪ. ಕೋಪದಿಂದ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಕೋಪ ಹೆಚ್ಚಾದಂತೆ ಮಾತು ಕೈಗೆ ಬರುತ್ತದೆ, ಸಂಬಂಧಗಳಲ್ಲಿ ಮನಃಸ್ತಾಪ ತರುತ್ತದೆ. ಕೋಪ ಕ್ಷಣಿಕ ಆದರೆ ಪರಿಣಾಮ ನಿರಂತರ ಹಾಗೂ ಅತ್ಯಂತ ಕೆಟ್ಟದ್ದಾಗಿರುತ್ತದೆ. ಮನುಷ್ಯನ ದೌರ್ಬಲ್ಯವೂ ಆಗಿರುವ ಕೋಪವೆಂಬುದು ಬರೀ ಅನರ್ಥ ಸಾಧನವಲ್ಲ ಅಪಾಯಕಾರಿ ಅನರ್ಥ ಸಾಧನ. ಆ ಸಿಟ್ಟು, ಆಸಿಡ್ ಒಂದೇ. ಕೋಪಕ್ಕೆ ಶಾಶ್ವತ ಮದ್ದು ಮೌನ.
(ಲೇಖಕರು ಉಪನ್ಯಾಸಕರು)
(ಪ್ರತಿಕ್ರಿಯಿಸಿ: manollasavv@gmail.com)