

ಬೆಂಗಳೂರು: ಕೆಜಿಎಫ್ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇಡೀ ತಂಡ ಪ್ಯಾನ್ ಇಂಡಿಯಾ ಮನ್ನಣೆ ಗಳಿಸಿತು. ಯಶ್ ರಾತ್ರೋರಾತ್ರಿ ಸೆನ್ಸೆಷನಲ್ ಸ್ಟಾರ್ ಆಗಿ ಬೆಳದರು. ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿಗೂ ಅವಕಾಶಗಳ ಮಹಾದ್ವಾರವನ್ನೇ ತೆರೆದು ಕೊಟ್ಟಿತು. ನಿರ್ದೇಶಕ ಪ್ರಶಾಂತ್ ನೀಲ್ ಖ್ಯಾತ ನಟರ ಸಿನಿಮಾಗಳಿಗೆ ನಿರ್ದೇಶನ ಮಾಡುವ ರೂಪುರೇಷೆ ಸಹ ತೆರೆಮರೆಯಲ್ಲಿ ಸಿದ್ಧವಾಗುತ್ತಿದೆ. ಇದೆಲ್ಲವನ್ನು ಬದಿಗಿಟ್ಟು ಕೇವಲ ನಾಯಕಿ ವಿಚಾರಕ್ಕೆ ಬರುವುದಾದರೆ, ಕೆಜಿಎಫ್ ಸಿನಿಮಾ ಸಲುವಾಗಿ ಶ್ರೀನಿಧಿ ಬರೋಬ್ಬರಿ ಏಳು ಅವಕಾಶಗಳನ್ನು ಕೈಚೆಲ್ಲಿದ್ದಾರಂತೆ!
ಕೆಜಿಎಫ್ ಚಾಪ್ಟರ್ 1 ತೆರೆಕಂಡ ಮೇಲೆ ಒಂದಾದ ಮೇಲೊಂದರಂತೆ ಸರಣಿ ಅವಕಾಶಗಳು ಶ್ರೀನಿಧಿ ಅವರ ಬಳಿ ಬಂದಿದ್ದವು. ಕನ್ನಡದ ಜತೆಗೆ ತೆಲುಗು, ತಮಿಳಿನ ಅವಕಾಶಗಳೂ ಆ ಪಟ್ಟಿಯಲ್ಲಿದ್ದವು.
ಹಾಗಾದರೆ, ಶ್ರೀನಿಧಿ ಅಷ್ಟೊಂದು ಸಿನಿಮಾ ಕೈಬಿಟ್ಟಿದ್ದಾದರೂ ಯಾಕೆ? ಕೆಲ ಮೂಲಗಳ ಪ್ರಕಾರ, ‘ಕೆಜಿಎಫ್ ಚಾಪ್ಟರ್ 2’ ಮುಗಿಯುವ ವರೆಗೂ ಬೇರಾವ ಸಿನಿಮಾ ಕಡೆ ಗಮನ ಹರಿಸಬಾರದೆಂಬ ಕಾರಣಕ್ಕೆ ಶ್ರೀನಿಧಿ ಈ ನಿರ್ಧಾರ ಕೈಗೊಂಡಿದ್ದರಂತೆ. ಇತ್ತ ಚಾಪ್ಟರ್ 2 ಚಿತ್ರೀಕರಣಕ್ಕೂ ಮುನ್ನ ಚಿಯಾನ್ ವಿಕ್ರಂ ಜತೆ ಕೋಬ್ರಾ ಸಿನಿಮಾ ಒಪ್ಪಿಕೊಂಡಿದ್ದರಿಂದ ಆ ಚಿತ್ರವೊಂದರಲ್ಲಿ ಮಾತ್ರ ನಟಿಸಿದ್ದಾರೆ. ಆ ಚಿತ್ರ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿದೆ.
ಈಗಾಗಲೇ ಅಕ್ಟೋಬರ್ 23ಕ್ಕೆ ಕೆಜಿಎಫ್ ಬಿಡುಗಡೆ ಎಂದು ಸ್ವತಃ ಚಿತ್ರತಂಡ ಘೋಷಿಸಿಕೊಂಡಿತ್ತು. ಆದರೆ, ಸಂಜಯ್ ದತ್ ಅನಾರೋಗ್ಯ ಹಿನ್ನೆಲೆಯಲ್ಲಿ ಅವರ ಭಾಗದ ಚಿತ್ರೀಕರಣ ನಡೆಯಬೇಕಿದೆ. ಹಾಗಾಗಿ ಸಹಜವಾಗಿ 2021ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ದಟ್ಟವಾಗಿದೆ.