ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್ ಎಂಬ ಅಪರೂಪದ ನಕ್ಷತ್ರ

Sheetal a archer
Published on

ಜಗತ್ತಿನಲ್ಲಿ ಯಾರೂ ಜನ್ಮತಃ ಪರಿಪೂರ್ಣರಾಗಿ ಹುಟ್ಟಿರುವುದಿಲ್ಲ. ಕೆಲವರು ಕಡುಬಡತನದಲ್ಲಿ ಬೆಳೆದರೆ, ಕೆಲವರು ಅಂಗವಿಕಲರಾಗಿ ಹುಟ್ಟಿರುತ್ತಾರೆ. ಹುಟ್ಟಿದ ಮೇಲೆ, ಬೆಳೆಯುವಾಗ ನಾನಾ ಕಷ್ಟ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂಥ ಎಲ್ಲ ಕೋಟಲೆಗಳನ್ನು ಮೆಟ್ಟಿ ನಿಂತು ಛಲದಿಂದ, ಮನೋಬಲದಿಂದ ವಿಜೇತರಾಗುವ ಶೀತಲ್ ದೇವಿಯಂಥವರು ಜಗತ್ತಿಗೇ ಮಾದರಿಯಾಗುತ್ತಾರೆ.

ಕೆಲವು ತಿಂಗಳ ಹಿಂದೆ ಚೀನಾದ ಹಾಂಗ್​ಝೌನಲ್ಲಿ ನಡೆದ ವಿಕಲಾಂಗರ ಏಷ್ಯಾಡ್ ಕ್ರೀಡಾಕೂಟ ಅದ್ಭುತವೊಂದಕ್ಕೆ ಸಾಕ್ಷಿಯಾಯಿತು.

Savyasachi
ಮಹಿಳೆಯರ ಆರ್ಚರಿ ವ್ಯಕ್ತಿಗತ ಕಾಂಪೌಂಡ್ ಸ್ಪರ್ಧೆಯಲ್ಲಿ ಸ್ವರ್ಣ ಪದಕಕ್ಕಾಗಿ ಫೈನಲ್ ಪಂದ್ಯ ನಡೆಯುತ್ತಿತ್ತು. ಸಿಂಗಾಪುರದ ಅಲೀಂ ನೂರ್ ಸ್ಯಾಹಿದಾ ವಿರುದ್ಧ ಜಮ್ಮು ಕಾಶ್ಮೀರದ ಆ ಹುಡುಗಿ ಮೊದಲ ಮೂರು ಸುತ್ತಿನ ಹಣಾಹಣಿ ಬಳಿಕ 28-29, 56-58, 84-87ರಿಂದ ಹಿನ್ನಡೆಯಲ್ಲಿದ್ದಳು. ಬಾಕಿ ಇದ್ದ ಎರಡು ಸುತ್ತುಗಳಲ್ಲಿ ಭಾರತದ ಹುಡುಗಿ ಗೆಲ್ಲಬೇಕಾದರೆ ಏನಾದರೂ ಪವಾಡವೇ ನಡೆಯಬೇಕಿತ್ತು. ಇನ್ನು ಚಿನ್ನ ಕಷ್ಟ ಎಂದು ಅಲ್ಲಿದ್ದವರೆಲ್ಲ ನಿರುತ್ಸಾಹದಲ್ಲಿರುವಾಗಲೇ ಆ ಹುಡುಗಿ ಅಸಂಭವವನ್ನು ಸಂಭವಗೊಳಿಸಿದ್ದಳು. ಅರ್ಜುನ ಮತ್ಸ್ಯ ಯಂತ್ರ ಭೇದಿಸಿದಂತೆ ಕೊನೆಯ ಆರು ಯತ್ನಗಳಲ್ಲಿ ಸತತವಾಗಿ ಬುಲ್ಸ್ ಐಗೆ ನಿಖರ ಗುರಿ ಇಟ್ಟು 10, 10, 10, 10, 10, 10... ಅಂಕಗಳನ್ನು ಬಾಚಿಕೊಂಡಿದ್ದಳು. ಅಂತಿಮವಾಗಿ 144-142ರಿಂದ ಸಿಂಗಾಪುರದ ಸ್ಪರ್ಧಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದಳು.

ಇದೊಂದು ಅದ್ಭುತ, ಪವಾಡಸದೃಶ ಸಾಧನೆಯಾಗಿತ್ತು. ಏಕೆಂದರೆ, ಆ ಹುಡುಗಿ ಹೀಗೆ ಸತತವಾಗಿ ಬುಲ್ಸ್ ಐಗೆ ಗುರಿ ಇಟ್ಟು ಬಾಣ ಬಿಟ್ಟಿದ್ದು ತನ್ನ ಕಾಲುಗಳಿಂದ! ಹೌದು, ಎರಡೂ ಕೈಗಳಿಲ್ಲದ, ಕೇವಲ ಕಾಲುಗಳು ಹಾಗೂ ಕುತ್ತಿಗೆ ನೆರವಿನಿಂದ ಬಿಲ್ಗಾರಿಕೆಯಲ್ಲಿ ಪ್ರಾವಿಣ್ಯ ಸಾಧಿಸಿರುವ ಶೀತಲ್ ದೇವಿ ಅವರ ಅಪ್ರತಿಮ ಮನೋಬಲ ಮತ್ತು ಚಾತುರ್ಯದ ಕಥೆ ಇದು. ವಿಶ್ವದ ಕ್ರೀಡಾ ಇತಿಹಾಸದಲ್ಲಿ ಶೀತಲ್​ರಂಥ ಗಟ್ಟಿಗಿತ್ತಿಯರ ಕಥನ ವಿರಳಾತಿವಿರಳ. ಎಲ್ಲ ಸರಿ ಇದ್ದೂ, ಗೆಲ್ಲುವ ಮನೋಬಲವೊಂದಿಲ್ಲದೆ, ಸೋತ ಬಳಿಕ ಇಲ್ಲಸಲ್ಲದ ನೆಪಗಳನ್ನು ಹುಡುಕುವ ಜಾಗತಿಕ ಕ್ರೀಡಾಪಟುಗಳ ನಡುವೆ ಶೀತಲ್ ಅಪರೂಪದ ನಕ್ಷತ್ರ.

2023ರಲ್ಲಿ ಜೆಕ್ ಗಣರಾಜ್ಯದಲ್ಲಿ ನಡೆದ ವಿಕಲಾಂಗರ ಆರ್ಚರಿ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶ್ವ ಮಟ್ಟದಲ್ಲಿ ಪದಕ ಗೆದ್ದ ಜಗತ್ತಿನ ಮೊಟ್ಟಮೊದಲ ಕೈಗಳಿಲ್ಲದ ಮಹಿಳಾ ಬಿಲ್ಗಾರ್ತಿ ಎನಿಸಿದ್ದ ಶೀತಲ್, ಹಾಂಗ್​ರೆkೌನಲ್ಲೂ ಈ ವ್ಯಕ್ತಿಗತ ಕಾಂಪೌಂಡ್ ಸ್ಪರ್ಧೆಗೆ ಮುನ್ನ ರಾಕೇಶ್ ಕುಮಾರ್ ಜತೆ ಮಿಶ್ರ ಡಬಲ್ಸ್​ನಲ್ಲಿ ಚಿನ್ನ ಮತ್ತು ಸರಿತಾ ಜತೆ ಮಹಿಳೆಯರ ಡಬಲ್ಸ್​ನಲ್ಲಿ ಬೆಳ್ಳಿ ಗೆದ್ದಾಗಿತ್ತು. ಹಾಗಾಗಿ ವ್ಯಕ್ತಿಗತ ಫೈನಲ್​ನಲ್ಲಿ ಅಕಸ್ಮಾತ್ ಸೋತಿದ್ದರೂ, ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಆವರೆಗೆ ಪ್ರದರ್ಶಿಸಿದ್ದೆಲ್ಲ ಸ್ಯಾಂಪಲ್ ಮಾತ್ರ, ತನ್ನ ಶ್ರೇಷ್ಠ ಆಟ ಇನ್ನೂ ಬಾಕಿ ಇದೆ ಎನ್ನುವಂತೆ ಫೈನಲ್​ನಲ್ಲಿ ವಿಜೃಂಭಿಸಿದ್ದ ಶೀತಲ್ ಅವಿಸ್ಮರಣೀಯ ಸಾಧನೆ ಮಾಡಿದರು.

ಜಮ್ಮು-ಕಾಶ್ಮೀರದ ಕಿಷ್ತ್​ವಾರ್ ಜಿಲ್ಲೆಯ ಗುಡ್ಡಗಾಡು ಪ್ರದೇಶ ಲೊಯ್ಧರ್ ಎಂಬ ಕುಗ್ರಾಮದಲ್ಲಿ 2007 ಜನವರಿ 10ರಂದು ಜನಿಸಿದ ಶೀತಲ್ ಇನ್ನೂ ಹದಿನೇಳರ ತರುಣಿ. ಫೋಕೊಮೆಲಿಯ ಎಂಬ ಅಪರೂಪದ ಜನ್ಮದೋಷದಿಂದ ಜನಿಸಿರುವ ಶೀತಲ್​ಗೆ ಎರಡೂ ಕೈಗಳೂ ಬೆಳವಣಿಗೆಯೇ ಆಗದೆ ಕೈಗಳಿಲ್ಲದೆ ಬೆಳೆದವರು. ತಂದೆ ಮಾನ್ ಸಿಂಗ್ ರೈತ, ತಾಯಿ ಶಕ್ತಿ ದೇವಿ ಕುರಿಗಾಹಿ. ಅಭಿವೃದ್ಧಿಯಲ್ಲಿ ಹಿಂದುಳಿದ ಜಮ್ಮುವಿನ ಕುಗ್ರಾಮದಲ್ಲಿ ಬಡ ಕುಟುಂಬದಲ್ಲಿ ಅಂಗವೈಕಲ್ಯ ಹೊತ್ತು ಜನಿಸಿದ ಶೀತಲ್ ಪಾಲಿಗೆ ಜೀವನವೆನ್ನುವುದು ದುಃಖದ, ಹತಾಶೆಯ, ಅಸಹಾಯಕತೆಯ ಯಾತನೆ ಆಗಿಬಿಡುವ ಅಪಾಯವಿತ್ತು. ಆದರೆ, ವಿಧಿ ಎಲ್ಲವನ್ನೂ ಕಿತ್ತುಕೊಂಡರೂ, ಎಲ್ಲರಂತೆ ಬದುಕಬೇಕು, ಏನಾದರೂ ಸಾಧಿಸಲೇಬೇಕು ಎಂಬ ಜೀವನಸ್ಪೂರ್ತಿ ಆ ಯುವತಿಯಲ್ಲಿತ್ತು. ಅದೇರೀತಿ ಶೀತಲ್ ದೈಹಿಕ ವೈಕಲ್ಯ ಮೀರಿ ಬೆಳೆದರು. ಗುಡ್ಡಗಾಡು ಪರಿಸರದಲ್ಲಿ ಬೆಳೆದ ಆಕೆ ಕೇವಲ ಕಾಲುಗಳು ಹಾಗೂ ದೇಹದ ಆಸರೆ ಬಳಸಿಕೊಂಡು ಮರ ಏರುವುದನ್ನು ಕಲಿತರು. ಬೇರೆ ಮಕ್ಕಳೆಲ್ಲ ಆಟವಾಡುವಾಗ ಶೀತಲ್​ಗೆ ಮರ ಹತ್ತುವುದೇ ನೆಚ್ಚಿನ ಚಟುವಟಿಕೆಯಾಗಿತ್ತು. ಕೈಗಳಿಲ್ಲದೆ ಮರ ಹತ್ತುವ ಈಕೆಯ ಚಾತುರ್ಯ ಎಲ್ಲರಿಗೂ ಅಚ್ಚರಿಯಾಗಿತ್ತು.

2019ರಲ್ಲಿ ಕಿಷ್ತ್​ವಾರಾದಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶೀತಲ್​ರ ಛಲ ಮತ್ತು ಕೈಗಳಿಲ್ಲದೆ ಮರ ಏರುವ ಚಾತುರ್ಯ ಕಂಡ ಸೇನಾಧಿಕಾರಿಗಳು ಈಕೆಯನ್ನು ದತ್ತು ತೆಗೆದುಕೊಂಡು ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ಒದಗಿಸಲು ಮುಂದಾದರು. ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕದಲ್ಲಿ ಕೋಚ್​ಗಳಾದ ಅಭಿಲಾಷಾ ಚೌಧರಿ ಮತ್ತು ಕುಲ್ದೀಪ್ ವಾಧ್ವಾನ್, ಶೀತಲ್​ಳ ದೈಹಿಕ ಕ್ಷಮತೆಯನ್ನು ಗಮನಿಸಿ ಕ್ರೀಡೆಯಲ್ಲಿ ಆಕೆಯನ್ನು ತೊಡಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಕ್ರೀಡಾಪಟುವಾಗಲು ಕೃತಕ ಕೈಗಳಿಂದ ನೆರವಾಗಬಹುದು ಎಂಬ ಉದ್ದೇಶದಿಂದ ಸೇನಾಧಿಕಾರಿಗಳು ಹುತಾತ್ಮ ವೀರಯೋಧ ಅಕ್ಷಯ್ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಅವರನ್ನು ಸಂರ್ಪಸಿದರು. ಮೇಘನಾ ಅವರು ಖ್ಯಾತ ನಟ ಅನುಪಮ್ ಖೇರ್ ಅವರನ್ನು ಸಂರ್ಪಸಿದರು. ಈ ಸಂದರ್ಭದಲ್ಲಿ ಬಿಯಿಂಗ್ ಯು ಎಂಬ ಎನ್​ಜಿಒ ನಡೆಸುವ ಪ್ರೀತಿ ರೈ ಎಂಬುವರೂ ಸಂಪರ್ಕಕ್ಕೆ ಬಂದರು. ಅಂತೂ ಈ ಎಲ್ಲ ಉದಾತ್ತ ಹೃದಯಿಗಳ ನೆರವಿನಿಂದ 2021ರಲ್ಲಿ ಶೀತಲ್​ಗೆ ಕೃತಕ ಕೈಗಳನ್ನು ಜೋಡಿಸಲಾಯಿತು. ಇದೇ ಅವಧಿಯಲ್ಲಿ ಶೀತಲ್ ಅನೇಕ ಕ್ರೀಡಾಪಟುಗಳ ಸಂಪರ್ಕಕ್ಕೆ ಬಂದರು. ಅವರೆಲ್ಲರ ಸ್ಪೂರ್ತಿ ಮಾತುಗಳಿಂದ ತಾನೂ ಕ್ರೀಡಾಪಟುವಾಗಿಯೇ ಸಾಧಿಸಬೇಕೆಂಬ ಛಲ ಮೈಗೂಡಿಸಿಕೊಂಡರು. ಆದರೆ, ಫೋಕೊಮೆಲಿಯ ಎಂಬ ವಿಚಿತ್ರ ಜನ್ಮದೋಷದಿಂದ ಬಳಲುತ್ತಿದ್ದ ಶೀತಲ್ ಕ್ರೀಡಾ ಸಾಧನೆಗೆ ಕೃತಕ ಕೈಗಳಿಂದ ಉಪಯೋಗವಿಲ್ಲ ಎಂಬುದು ಸಾಬೀತಾಯಿತು. ಇಷ್ಟಾದರೂ, ಸೇನಾಧಿಕಾರಿಗಳು ಪ್ರಯತ್ನ ಕೈಚೆಲ್ಲಲಿಲ್ಲ. ಕೈಗಳ ನೆರವಿಲ್ಲದೆ ಆಕೆ ಯಾವ ಕ್ರೀಡೆ ಆಡಬಹುದೆಂಬ ಬಗ್ಗೆ ಶೋಧಿಸುತ್ತಿರುವಾಗ ಕೈಗಳಿಲ್ಲದ ಬಿಲ್ಗಾರ, ಅಮೆರಿಕದ ಮ್ಯಾಟ್ ಸ್ಟಟ್ಜ್​ಮ್ಯಾನ್ ಸಾಧನೆ ದಾರಿದೀಪವಾಯಿತು. 2012 ಮತ್ತು 2016ರ ಪ್ಯಾರಾಲಿಂಪಿಕ್ಸ್​ನಲ್ಲಿ (ಅಂಗವಿಕಲರ ಒಲಿಂಪಿಕ್ಸ್) ಪಾಲ್ಗೊಂಡು ಒಮ್ಮೆ ಬೆಳ್ಳಿ ಪದಕವನ್ನೂ ಗೆದ್ದಿರುವ ಸ್ಟಟ್ಜ್​ಮ್ಯಾನ್​ರ ಕೈಗಳಿಲ್ಲದಿದ್ದರೂ ಕಾಲುಗಳು ಹಾಗೂ ಕುತ್ತಿಗೆ ನೆರವಿನಿಂದ ಬಿಲ್ಗಾರಿಕೆಯಲ್ಲಿ ಪಾಲ್ಗೊಳ್ಳುವ ತಾಂತ್ರಿಕತೆ ಅನುಸರಿಸಿ ಶೀತಲ್​ರಿಗೂ ತರಬೇತಿ ನೀಡಲಾರಂಭಿಸಿದರು. ಕೋಚ್ ಕುಲ್ದೀಪ್ ವಾಧ್ವಾನ್ ಅವರ ಅಕಾಡೆಮಿಯಲ್ಲಿ 2022ರಲ್ಲಿ ತರಬೇತಿ ಆರಂಭಿಸಿದ ಶೀತಲ್ ಕೆಲವೇ ತಿಂಗಳಲ್ಲಿ ಕುಳಿತುಕೊಂಡ ಭಂಗಿಯಲ್ಲಿ ಎಡ ಕಾಲಿನಲ್ಲಿ ಬಿಲ್ಲು ಬಿಗಿಯಾಗಿ ಹಿಡಿದು ಬಲಗಾಲಿನ ಹೆಬ್ಬೆರಳಿನ ನೆರವಿನಿಂದ ಬಾಣವನ್ನು ಬಿಲ್ಲಿಗೆ ಹೂಡಿ, ಬಿಲ್ಲಿನ ಹುರಿಯನ್ನು ಕಾಲಿನಿಂದಲೇ ಜಗ್ಗಿ ಎಳೆದು ಕುತ್ತಿಗೆಯ ಸಂದಿಗೆ ಸಿಕ್ಕಿಸಿಕೊಂಡು ಗುರಿ ಇಟ್ಟು ಬಾಣ ಬಿಡುವುದರಲ್ಲಿ ನೈಪುಣ್ಯ ಸಾಧಿಸಿದರು. ಇದಕ್ಕಾಗಿ ಅವರು ಕೋಚ್​ಗಳ ನೆರವಿನಿಂದ ತಿಂಗಳುಗಟ್ಟಲೆ ಅಭ್ಯಾಸ ನಡೆಸಿದರು. ನೋವನ್ನು ಸಹಿಸಿದರು, ಅಸಹಾಯಕತೆ ಮೆಟ್ಟಿನಿಂತರು, ಭಾರದ ಬಿಲ್ಲನ್ನು ಕಾಲಿನಲ್ಲಿ ಬ್ಯಾಲೆನ್ಸ್ ಮಾಡಲು ಕಷ್ಟವಾದಾಗ, ಬೆರಳಿನಿಂದ ಬಾಣವನ್ನು ಬಿಲ್ಲಿನೊಳಗೆ ಹೂಡಲು ಪ್ರಯಾಸವಾದಾಗ, ಬಿಲ್ಲಿನ ಸೂಕ್ಷ್ಮ ಹುರಿ ಕುತ್ತಿಗೆಯ ಸೂಕ್ಷ್ಮ ಚರ್ಮವನ್ನು ಕೊರೆದಾಗ.. ಏನೆಲ್ಲ ಕಷ್ಟವಾದರೂ ಸಹಿಸಿಕೊಂಡರು, ಪ್ರಯತ್ನ ಮುಂದುವರಿಸಿದರು. ಏಕಲವ್ಯ ಹೆಬ್ಬೆರಳಿಲ್ಲದೆ ಬಿಲ್ಗಾರನಾದರೆ, ಶೀತಲ್ ಎರಡೂ ಕೈಗಳಿಲ್ಲದಿದ್ದರೂ ಬಿಲ್ಗಾರ್ತಿಯಾದರು. ಅಭ್ಯಾಸ ಆರಂಭಿಸಿದ ಕೆಲವೇ ತಿಂಗಳಲ್ಲಿ ದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು. ದೈಹಿಕ ಸಬಲ ಬಿಲ್ಗಾರರೊಂದಿಗೂ ಸ್ಪರ್ಧಿಸಿ ಸೈ ಎನಿಸಿಕೊಂಡರು. ಪದಕಗಳನ್ನು ಗೆದ್ದರು. 2023ರಲ್ಲಿ ಜೆಕ್ ಗಣರಾಜ್ಯದಲ್ಲಿ ನಡೆದ ಅಂಗವಿಕಲರ ವಿಶ್ವ ಶೂಟಿಂಗ್ ಚಾಂಪಿಯನ್​ಷಿಪ್ ಶೀತಲ್ ಪಾಲಿಗೆ ದೊಡ್ಡ ಮೈಲಿಗಲ್ಲಾಯಿತು. ಅಲ್ಲಿ ಬೆಳ್ಳಿ ಪದಕವನ್ನೇ ಗೆಲ್ಲುವ ಮೂಲಕ ಇಂಥ ಸಾಧನೆ ಮಾಡಿದ ವಿಶ್ವದ ಮೊಟ್ಟಮೊದಲ ಕೈಗಳಿಲ್ಲದ ಬಿಲ್ಗಾರ್ತಿ ಎಂಬ ಕೀರ್ತಿಭಾಜನರಾದರು.

ಈ ವಿಶ್ವ ಚಾಂಪಿಯನ್​ಷಿಪ್ ಸಂದರ್ಭದಲ್ಲೇ ಶೀತಲ್​ಗೆ ತಮ್ಮ ರೋಲ್ ಮಾಡೆಲ್ ಮ್ಯಾಟ್ ಸ್ಟಟ್ಜ್​ಮ್ಯಾನ್ ಪರಿಚಿತರಾದರು. ಮ್ಯಾಟ್ ಬಿಲ್ಗಾರಿಕೆಯಿಂದ ಪ್ರೇರಿತರಾಗಿ, ಅವರ ವಿಡಿಯೋಗಳನ್ನು ನೋಡಿ ಅಭ್ಯಾಸ ಮಾಡುತ್ತಿದ್ದ ಶೀತಲ್​ಗೆ ಸ್ವತಃ ಮ್ಯಾಟ್ ಜೆಕ್ ಗಣರಾಜ್ಯದಲ್ಲಿ ತರಬೇತಿ ನೀಡಿದರು. ಆಕೆ ಬಳಸುತ್ತಿದ್ದ ಬಿಲ್ಲನ್ನು ಖುದ್ದು ತಾವೇ ಬಳಸಿ ಕೆಲವು ತಾಂತ್ರಿಕ ಮಾರ್ಪಾಡುಗಳನ್ನು ಸೂಚಿಸಿದರು. ಬಿಲ್ಲು ಹಿಡಿಯುವ, ಬಾಣ ಹೂಡುವ, ಗುರಿ ಇಡುವ ವಿಧಾನದಲ್ಲಿ ಕೆಲವು ಸೂಕ್ಷ್ಮ, ತಾಂತ್ರಿಕ ಸುಧಾರಣೆಗಳನ್ನು ಸೂಚಿಸಿದರು. ಮ್ಯಾಟ್​ರ ಸಲಹೆ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಅದೇ ಟೂರ್ನಿಯ 72 ಬಾಣಗಳ 50 ಮೀ. ಅರ್ಹತಾ ಸ್ಪರ್ಧೆಯಲ್ಲಿ ಶೀತಲ್ ತಮ್ಮ ಗುರು ಮ್ಯಾಟ್​ರಿಗಿಂತ 4 ಅಂಕ ಹೆಚ್ಚು ಸ್ಕೋರ್ ಮಾಡಿದರು! ಆ ಸ್ಪರ್ಧೆಯಲ್ಲಿ ಮ್ಯಾಟ್ 685 ಅಂಕ ಗಳಿಸಿದರೆ, ಶೀತಲ್ 689 ಅಂಕ ಗಳಿಸಿದ್ದರು. ಶೀತಲ್​ರ ಜೀವನೋತ್ಸಾಹ, ಕೌಶಲ ಹಾಗೂ ಛಲದಿಂದ ಮ್ಯಾಟ್ ಸಹ ಪ್ರೇರಿತರಾಗಿದ್ದರು. ಶೀತಲ್​ರಂತೆ ಜನ್ಮದೋಷದಿಂದ ಕೈಗಳಿಲ್ಲದೆ ಜನಿಸಿರುವ ಮ್ಯಾಟ್​ರನ್ನು ಹೆತ್ತವರು ಒಂದೂವರೆ ವರ್ಷದ ಮಗುವಿದ್ದಾಗಲೇ ಸಾಕಲು ಸಾಧ್ಯವಿಲ್ಲ ಎಂದು ದತ್ತು ನೀಡಿದರು. ಆದರೆ, ದತ್ತು ಪಡೆದು ಪಾಲನೆ ಮಾಡಿದ ಸಾಕು ತಂದೆ-ತಾಯಿ ಯಾವುದಕ್ಕೂ ಕೊರತೆ ಇಲ್ಲದಂತೆ ಮ್ಯಾಟ್​ರನ್ನು ಬೆಳೆಸಿದರು. ದಿಗ್ಗಜ ಮ್ಯಾಜಿಕ್ ಜಾನ್ಸನ್​ರಿಂದ ಪ್ರೇರಿತರಾಗಿ ಸಣ್ಣ ವಯಸ್ಸಿನಲ್ಲೇ ಕೈಗಳಿಲ್ಲದೆ ಬ್ಯಾಸ್ಕೆಟ್ ಬಾಲ್ ಆಡಿದ ಮ್ಯಾಟ್, ವೃತ್ತಿಪರವಾಗಿ ಆರ್ಚರಿ ಆಯ್ಕೆ ಮಾಡಿಕೊಂಡು, ಕೇವಲ ಕಾಲು, ಕುತ್ತಿಗೆ ನೆರವಿನಿಂದ ಹೇಗೆ ಬಿಲ್ಲು-ಬಾಣದ ಆಟ ಆಡಬಹುದೆಂದು ಸ್ವಯಂಕಲಿಕೆ ರೂಢಿಸಿಕೊಂಡವರು. 2015ರಲ್ಲಿ ಅವರು 310 ಗಜ ದೂರದಿಂದ ಬುಲ್ಸ್ ಐಗೆ ಗುರಿ ಇಟ್ಟು ನಿಖರವಾಗಿ ಬಾಣ ಬಿಟ್ಟಿರುವುದು ಇಂದಿಗೂ ಅಬಾಧಿತವಾಗಿರುವ ವಿಶ್ವದಾಖಲೆ. ಆರ್ಚರಿ ಅಭ್ಯಾಸದ ನಡುವೆ ಏಕಾಗ್ರತೆ ಸಲುವಾಗಿ ವಿಮಾನದಿಂದ ಪ್ಯಾರಾಚೂಟ್ ಡೈವಿಂಗ್ ಮಾಡುವ, ಪ್ರೀತಿಸಿದ ಯುವತಿಯನ್ನು ಮದುವೆಯಾಗಿ, ಮೂರು ಮಕ್ಕಳ ತಂದೆಯಾಗಿ, 42ನೇ ವಯಸ್ಸಿನಲ್ಲೂ ಈ ವರ್ಷ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಕನಸುಕಟ್ಟಿಕೊಂಡವರು. ಇಂಥ ಸಾಧಕನ ಪ್ರೇರಣೆ ಶೀತಲ್ ಕತ್ತಲಿನ ಪಯಣದಲ್ಲಿ ದಾರಿದೀಪವಾಗಿತ್ತು.

ಶೀತಲ್ ಏಷ್ಯಾಡ್​ನಲ್ಲಿ ಮೂರು ಪದಕ ಗೆದ್ದ ಬಳಿಕ ಇಡೀ ಜಗತ್ತಿನ ಗಮನ ಸೆಳೆದರು. ಭಾರತದಲ್ಲಂತೂ ಆಕೆಯ ಸಾಧನೆ ವಿಸ್ಮಯ, ಭಾವತೀವ್ರತೆ, ಪ್ರೇರಣಾತ್ಮಕ ಪ್ರತಿಕ್ರಿಯೆಗೆ ಕಾರಣವಾಯಿತು. ಎಲ್ಲ ಸುಖಸೌಲಭ್ಯಗಳಿದ್ದೂ ಮೋಜು-ಮಸ್ತಿಯಲ್ಲಿ ಜೀವನ ವ್ಯರ್ಥಗೊಳಿಸುವ ಆಧುನಿಕ ಯುವಪೀಳಿಗೆಯ ನಡುವೆ ಕೈಗಳೇ ಇಲ್ಲದಿದ್ದರೂ ಆಕಾಶಕ್ಕೆ ಬಾಣಗಳ ಸೇತುವೆ ಕಟ್ಟಿರುವ ಶೀತಲ್ ಸಾಧನೆಯನ್ನು ಕೇಂದ್ರ ಸರ್ಕಾರವೂ ಗುರುತಿಸಿ ಇತ್ತೀಚೆಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕೈಗಳಿಲ್ಲದ ಶೀತಲ್ ಪಕ್ಕದಲ್ಲಿ ರಾಷ್ಟ್ರಪತಿ ದ್ರೌಪದಿ ಮುಮು ಸ್ವತಃ ತಾವೇ ಅರ್ಜುನ ಪ್ರಶಸ್ತಿ ಫಲಕ ಹಿಡಿದು ಫೋಟೋಗಳಿಗೆ ಪೋಸ್ ನೀಡಿದಾಗ ಎಲ್ಲರಿಗೂ ಕಣ್ಣಲ್ಲಿ ನೀರು ಜಿನುಗಿತ್ತು. ಶೀತಲ್ ಏಷ್ಯಾಡ್​ನಿಂದ ಮರಳಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಶೀತಲ್​ರನ್ನು ಭೇಟಿ ಮಾಡಿ ಬೆನ್ನು ತಟ್ಟಿದ್ದರು.

ಜಗತ್ತಿನಲ್ಲಿ ಯಾರೂ ಜನ್ಮತಃ ಪರಿಪೂರ್ಣರಾಗಿ ಹುಟ್ಟಿರುವುದಿಲ್ಲ. ಪ್ರತಿಯೊಬ್ಬರೂ ಅವರವರ ವಿಧಿಯಂತೆ ಈ ಭೂಮಿಗೆ ಬಂದಿರುತ್ತಾರೆ. ಕೆಲವರು ಕಡುಬಡತನದಲ್ಲಿ ಬೆಳೆದರೆ, ಕೆಲವರು ಅಂಗವಿಕಲರಾಗಿ ಹುಟ್ಟಿರುತ್ತಾರೆ. ಹುಟ್ಟಿದ ಮೇಲೆ, ಬೆಳೆಯುವಾಗ ನಾನಾ ಕಷ್ಟ-ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇಂಥ ಎಲ್ಲ ಕೋಟಲೆಗಳನ್ನು ಮೆಟ್ಟಿ ನಿಂತು ಛಲದಿಂದ, ಮನೋಬಲದಿಂದ, ಜೀವನಪ್ರೀತಿ, ಸ್ಪೂರ್ತಿಯಿಂದ ವಿಜೇತರಾಗುವ ಶೀತಲ್ ದೇವಿಯಂಥವರು ಜಗತ್ತಿಗೇ ಮಾದರಿಯಾಗುತ್ತಾರೆ. ಎಲ್ಲವೂ ಇದ್ದರೂ, ಅದಿಲ್ಲ, ಇದಿಲ್ಲ ಎಂಬ ಕೊರಗು, ಚಡಪಡಿಕೆಗಳಲ್ಲೇ ದಿನ ಕಳೆಯುವ ನಾವು ಶೀತಲ್​ರಂಥ ಛಲದ ದೇವಿಯಿಂದ ಕಲಿಯುವುದು ಬ್ರಹ್ಮಾಂಡದಷ್ಟಿದೆ.

ಕೋಟ್ಯಂತರ ಸಾಮಾನ್ಯ ಜನರಿಗೆ ಜೀವಮಾನದಲ್ಲಿ ಸಾಧ್ಯವಾಗದ್ದನ್ನು ಕೇವಲ ಹದಿನೇಳನೇ ವಯಸ್ಸಿನಲ್ಲೇ ಸಾಧಿಸಿರುವ ಶೀತಲ್ ಎಂಬ ಛಲಗಾತಿಗೆ, ಸ್ಪೂರ್ತಿಚಿಲುಮೆಗೆ ಹ್ಯಾಟ್ಸ್​ಆಫ್, ಭಲೆ ಎನ್ನುವ ಯಾವ ಹೊಗಳಿಕೆಯೂ ಕಡಿಮೆಯೇ. ಶೀತಲ್ ದೇವಿಗೆ ಶೀತಲ್ ದೇವಿಯೇ ಸಾಟಿ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net