ಕೊಲೆಯಾದವಳೇ ಕೊಲೆಗಾತಿಯಾದಾಗ

Murder Aa Kshana 7 June 20
Published on
ಅದೊಂದು ಐದು ಸಾವಿರ ಜನರಿದ್ದ ಕುಗ್ರಾಮ. ಆ ಗ್ರಾಮದ ಹನುಮಂತ ಮತ್ತು ಲಕ್ಷ್ಮಿ ದಂಪತಿಯ ಒಬ್ಬನೇ ಪುತ್ರನಾಗಿದ್ದ ಹರ್ಷ ಸಮೀಪದ ಊರಿನಲ್ಲಿದ್ದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದ. ಅವನಿಗೆ ಇಪ್ಪತ್ತೇಳು ವರ್ಷವಾದಾಗ ಅದೇ ತಾಲ್ಲೂಕಿನ ವ್ಯಾಪಾರಿಯೊಬ್ಬರ ಮಗಳು ಮೀನಾಳ ಜತೆಗೆ ಲಗ್ನವಾಯಿತು. ಒಂಬತ್ತನೇ ತರಗತಿಯವರೆಗೆ ಕಲಿತಿದ್ದ ಮೀನಾ ಸುಂದರಿಯಾಗಿದ್ದಳು.

ಮದುವೆಯಾದ ಎರಡು ವರ್ಷಗಳ ನಂತರ ಮೀನಾ ಗಂಡುಮಗುವಿನ ತಾಯಿಯಾದಳು. ಮಗ ರವಿಯೊಡನೆ ಆಕೆ ಗಂಡನ ಮನೆಗೆ ವಾಪಸಾದ ನಂತರ ‘ನಾವಿರುವ ಮನೆ ಸಣ್ಣದಿದೆ, ಬೆಳೆಯುವ ಮಗನ ಕಾರಣದಿಂದ ನಾವು ಬೇರೆ ಮನೆಗೆ ಹೋಗೋಣ’ ಎಂದು ಹೇಳಿದಳು. ತಂದೆತಾಯಿಯರಿಂದ ಬೇರೆಯಾಗಲು ಒಪ್ಪದ ಹರ್ಷ ತನ್ನ ಮನೆಯ ಹಿಂದುಗಡೆ ಖಾಲಿಯಿದ್ದ ಜಾಗದಲ್ಲಿ ಬಿದಿರು ಮತ್ತು ಮಣ್ಣಿನಿಂದ ಒಂದು ಕೋಣೆ ಕಟ್ಟಿಸಿದ. ಹರ್ಷ ಹಾಗೂ ಮೀನಾ ಮಗನ ಜತೆಗೆ ರಾತ್ರಿ ಅಲ್ಲಿಯೇ ಮಲಗುತ್ತಿದ್ದರು.

ಮಗನಿಗೆ ಐದು ವರ್ಷ ತುಂಬಿದ ನಂತರ ಹರ್ಷ ಆತನನ್ನು ತಾನೇ ಕಲಿಸುತ್ತಿದ್ದ ಶಾಲೆಗೆ ಸೇರಿಸಿ ಅವನನ್ನು ತನ್ನ ಜತೆಯೇ ಕರೆದೊಯ್ಯುತ್ತಿದ್ದ. ಮೀನಾಳಿಗೆ ಒಂಟಿತನ ಕಾಡತೊಡಗಿತು. ಆಕೆಗೆ ಗ್ರಾಮದಲ್ಲಿ ಯಾವುದೇ ಸ್ನೇಹಿತರಿರಲಿಲ್ಲ. ಸಮಯ ಕಳೆಯಲು ಮೊಬೈಲ್ ಫೋನನ್ನು ಬಿಟ್ಟರೆ ಬೇರೆ ಯಾವ ದಾರಿಯೂ ಇರದಿದ್ದರಿಂದ ಆಕೆ ತನ್ನ ತವರು ಮನೆಯವರ ಜತೆಗೆ ಗಂಟೆಗಟ್ಟಲೇ ಹರಟುತ್ತಿದ್ದಳು.

2011ರ ಜೂನ್ 26ರ ಮಧ್ಯಾಹ್ನ ಮಗ-ಸೊಸೆ ಇರುತ್ತಿದ್ದ ಕೊಠಡಿಗೆ ಬೆಂಕಿ ಬಿದ್ದಿದ್ದನ್ನು ನೋಡಿ ಗಾಬರಿಯಾದ ಲಕ್ಷ್ಮಿ, ‘ಮೀನಾ ಕೋಣೆಯೊಳಗೆ ಸಿಕ್ಕಿಹಾಕಿಕೊಂಡಿದ್ದಾಳೆ, ಅವಳನ್ನು ಉಳಿಸಿ’ ಎಂದು ಚೀರತೊಡಗಿದಳು. ಗ್ರಾಮಸ್ಥರು ಓಡಿಬಂದು ಬೆಂಕಿಯನ್ನು ನಂದಿಸತೊಡಗಿದರು. ಅಗ್ನಿಶಮನ ದಳದವರಿಗೆ ಫೋನ್ ಮಾಡಿದರು. ಆದರೆ ಬಿದಿರಿನ ಕೋಣೆಯಾಗಿದ್ದ ಕಾರಣ ಬೆಂಕಿಯನ್ನು ನಂದಿಸುವುದು ಕಷ್ಟವಾಯಿತು. ಕಡೆಗೂ ಬೆಂಕಿ ನಂದಿದಾಗ ಆ ಕೊಠಡಿಯ ಮಧ್ಯೆ ಕರಕಲಾಗಿ ಬಿದ್ದಿದ್ದ ಶವವನ್ನು ನೋಡಿ ಮೀನಾಳನ್ನು ಉಳಿಸಲಾಗಲಿಲ್ಲವೆಂದು ಮರುಕಗೊಂಡರು. ಪೊಲೀಸರು ಸ್ಥಳಕ್ಕೆ ಬಂದಾಗ ಶವದ ಪಕ್ಕದಲ್ಲಿ ಮೀನಾಳ ಬಳೆಗಳ ಚೂರುಗಳು ಮತ್ತು ಅರ್ಧದಷ್ಟು ಸುಟ್ಟಿದ್ದ ರವಿಯ ಫೋಟೋ ಬಿದ್ದಿದ್ದವು. ಒಂದು ಸೀಮೆಎಣ್ಣೆಯ ಕ್ಯಾನ್ ಬಿದ್ದಿತ್ತು. ಮೀನಾ ಆತ್ಮಹತ್ಯೆ ಮಾಡಿಕೊಳ್ಳಲು ಮೈಗೆ ಹಚ್ಚಿಕೊಂಡ ಬೆಂಕಿ ಕೋಣೆಯನ್ನು ಸುಟ್ಟಿದೆ ಎನ್ನುವುದು ವಿದಿತವಾದರೂ ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಳೆಂಬುದೇ ನಿಗೂಢವಾಗಿತ್ತು. ಶವವು ಹೆಚ್ಚಾಗಿ ಸುಟ್ಟಿದ್ದ ಕಾರಣ ಆತ್ಮಹತ್ಯೆಯೇ ಇಲ್ಲವೇ ಕೊಲೆಯೇ ಎನ್ನುವುದನ್ನು ತಿಳಿಯಲಾಗಲಿಲ್ಲ.

ಏತನ್ಮಧ್ಯೆ, ತನ್ನ ಮಗಳು ಗಂಡನ ಮನೆಯವರ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೀನಾಳ ತಂದೆ ದೂರು ನೀಡಿದ ಕಾರಣ ಪೊಲೀಸರು ಆತ್ಮಹತ್ಯೆಯ ಪ್ರಚೋದನೆಯ ಪ್ರಕರಣ ದಾಖಲಿಸಿ ಹರ್ಷ, ಮತ್ತವನ ತಂದೆ ತಾಯಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು. ಹರ್ಷನನ್ನು ಸೇವೆಯಿಂದ ಅಮಾನತು ಮಾಡಲಾಯಿತು. ರವಿಯನ್ನು ಮೀನಾಳ ಮಾತಾಪಿತರು ತಮ್ಮ ಮನೆಯಲ್ಲಿ ಸಾಕತೊಡಗಿ ಶಾಲೆಗೆ ಸೇರಿಸಿದರು.

ಒಂದು ತಿಂಗಳ ನಂತರ, ಹರ್ಷನ ಮನೆಯ ಸಮೀಪವಿದ್ದ ಗುಡಿಸಿಲೊಂದರಲ್ಲಿ ಒಬ್ಬಂಟಿಯಾಗಿ ವಾಸವಿದ್ದ 90 ವರ್ಷದ ವಿಧವೆ ಬಸಮ್ಮಳಿಗೆ ಬಂದ ಪತ್ರವನ್ನು ವಿತರಿಸಲು ಪೋಸ್ಟ್​ಮ್ಯಾನ್ ಹೋದ. ಅವಳಿಲ್ಲದಿದ್ದನ್ನು ಕಂಡು ಆಶ್ಚರ್ಯಗೊಂಡ ಆತ ಊರ ಪಟೇಲನಿಗೆ ಸುದ್ದಿಮುಟ್ಟಿಸಿದ. ಮುದುಕಿ ಶೌಚಕ್ಕೆಂದು ಬಯಲಿಗೆ ಹೋದಾಗ ಸತ್ತಿರಬೇಕು ಎಂದು ಭಾವಿಸಿ ಸಮೀಪದ ಹೊಲಗಳಲ್ಲಿ ಹುಡುಕಲಾಯಿತು. ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಮಹಿಳೆ ಕಾಣೆಯಾದ ಪ್ರಕರಣ ದಾಖಲಾಯಿತು. ಆದರೆ ಒಬ್ಬಂಟಿ ಬಸಮ್ಮನಿಗೆ ಯಾವ ಬಂಧುಮಿತ್ರರೂ ಇರದೇ ಯಾರೂ ಆಕೆಯ ಬಗ್ಗೆ ವಿಚಾರಿಸದ ಕಾರಣ ತನಿಖೆ ಮುಂದುವರಿಯಲಿಲ್ಲ. ಕೆಲ ವಾರಗಳ ನಂತರ ಹರ್ಷ ಮತ್ತು ಅವನ ಮಾತಾಪಿತರು ಜಾಮೀನಿನ ಮೇಲೆ ಹೊರಗೆ ಬಂದರು. ತನ್ನ ಅಮಾನತ್ತನ್ನು ಹಿಂಪಡೆಯಬೇಕೆಂದು ಮನವಿ ಕೊಡಲು ಹರ್ಷ ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಹೋಗತೊಡಗಿದ. ಒಂದು ದಿನ ಆತ ತಾಲ್ಲೂಕು ಕಚೇರಿಯ ಕ್ಯಾಂಟೀನ್​ನಲ್ಲಿ ಚಹಾ ಕುಡಿಯುತ್ತಿರುವಾಗ ಆ ಕ್ಯಾಂಟೀನ್​ನ ಮಾಲೀಕ ‘ಇಂದು ನಾನು ನಿನ್ನ ಹೆಂಡತಿ ಮೀನಾ ಡಾಬಾ ಒಂದರಲ್ಲಿ ಯಾರದೋ ಜತೆಗೆ ಊಟ ಮಾಡುತ್ತಿದ್ದುದನ್ನು ನೋಡಿದೆ’ ಎಂದ. ‘ನನ್ನ ಪತ್ನಿ ಸತ್ತು ಆರು ತಿಂಗಳಾಗಿದೆ, ನೀನು ಅವಳಂತಿದ್ದ ಬೇರೆ ಯಾರನ್ನೋ ನೋಡಿ ಭ್ರಾಂತಿಗೊಂಡಿರುವೆ’ ಎಂದು ಹರ್ಷ ಉತ್ತರಿಸಿ ಸುಮ್ಮನಾದ. ಮಾರನೆಯ ದಿನ ಮಗನನ್ನು ನೋಡಲು ಹರ್ಷ ರವಿಯ ಶಾಲೆಗೆ ಹೋದ. ಶಾಲೆಯ ಗೇಟಿನ ಬಳಿ ಮೀನಾಳಂತೆಯೇ ಕಾಣುತ್ತಿದ್ದ ಮಹಿಳೆಯನ್ನು ನೋಡಿದ. ಕುತೂಹಲದಿಂದ ಅವಳತ್ತ ಹೆಜ್ಜೆ ಹಾಕಿದಾಗ ಆಕೆ ಸೆರಗಿನಿಂದ ಮುಖ ಮುಚ್ಚಿಕೊಂಡು ಬಿರಬಿರನೆ ಹೋಗತೊಡಗಿದಳು. ಅವಳನ್ನು ಹಿಂಬಾಲಿಸಿದ ಹರ್ಷ ಆಕೆ ರಸ್ತೆ ದಾಟಲು ನಿಂತಾಗ ನಿಲ್ಲಿಸಿ ಅವಳೇ ಮೀನಾಳೆಂದು ಗುರುತಿಸಿ ದಂಗುಬಡಿದ. ‘ನೀನು ಸತ್ತಿಲ್ಲವೇ’ಎಂದು ಕೇಳಿದಾಗ, ‘ನೀನು ಯಾರೋ ಗೊತ್ತಿಲ್ಲ. ನನ್ನ ಬಗ್ಗೆ ತಪ್ಪು ಕಲ್ಪನೆ ಮಾಡಿರುವೆ, ನಾನು ರೂಪಾ’ ಎಂದು ಗಟ್ಟಿದನಿಯಲ್ಲಿ ವಾದಿಸತೊಡಗಿದಳು. ನೆರೆದ ಜನರು ಇಬ್ಬರನ್ನೂ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ವಿಚಾರಣೆ ಮಾಡಿದಾಗ ಆಕೆ ತಾನೇ ಮೀನಾ ಎಂದು ಒಪ್ಪಿಕೊಂಡು ಹೀಗೆ ಹೇಳಿದಳು:

‘ಹರ್ಷನ ಜತೆಗೆ ಸಂಸಾರ ನನಗೆ ಬೇಸರ ತರಿಸಿತ್ತು. ಆತ ನನ್ನ ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತಿರಲಿಲ್ಲ. ನನ್ನ ಜೀವನ ಯಾಂತ್ರಿಕವಾಗಿತ್ತು. ಒಂದು ದಿನ ಅಣ್ಣನಿಗೆ ಫೋನ್ ಮಾಡಿದಾಗ ಆ ಕರೆಯು ತಪ್ಪಾಗಿ ಪ್ರೀತಂ ಎನ್ನುವವನ ಫೋನಿಗೆ ಹೋಯಿತು. ನಾನು ಕ್ಷಮಿಸಿ ರಾಂಗ್​ನಂಬರ್ ಎಂದು ಫೋನ್ ಕಟ್ ಮಾಡಲು ಹೊರಟಾಗ ಆತ ‘ನಿಮ್ಮ ಧ್ವನಿ ಮಧುರವಾಗಿದೆ. ಮಾತು ಮುಂದುವರಿಸಿ’ ಎಂದ. ಆತ ತಾನೊಬ್ಬ ಟ್ರಕ್ ಮಾಲೀಕನಾಗಿದ್ದು ಅಂಗಡಿಯನ್ನೂ ನಡೆಸುತ್ತಿರುವುದಾಗಿ ಹೇಳಿದ. ಆತ ಮದುವೆಯಾಗಿ ವಿಚ್ಛೇದನ ಪಡೆದಿದ್ದು ನನ್ನ ತವರೂರಿಗೆ ಹತ್ತಿರವಿರುವ ನಗರದಲ್ಲಿ ಇರುತ್ತಿದ್ದು ಸಾಕಷ್ಟು ಶ್ರೀಮಂತನಾಗಿರುವುದಾಗಿ ತಿಳಿಸಿದ. ಹರ್ಷ ಶಾಲೆಗೆ ಹೋಗಿದ್ದಾಗ ನಾವಿಬ್ಬರೂ ಪ್ರತಿದಿನವೂ ಗಂಟೆಗಟ್ಟಲೆ ಮಾತನಾಡತೊಡಗಿದವು. ನಾನು ಪತಿಯಿಂದ ದೂರವಾಗಿ ಬಂದರೆ ತಾನು ಮದುವೆಯಾಗುವುದಾಗಿಯೂ, ಸುಖವಾಗಿ ನೋಡಿಕೊಳ್ಳುವುದಾಗಿಯೂ ಆತ ಹೇಳಿದ. ನಾನು ಅದುವರೆವಿಗೂ ಪ್ರೀತಂನ ಮುಖವನ್ನೇ ನೋಡಿರದಿದ್ದರೂ ಮದುವೆಯಾಗಲು ಒಪ್ಪಿದೆ. ಹರ್ಷ ಹಾಗೂ ರವಿಯನ್ನು ಬಿಟ್ಟು ಮನೆಯಿಂದ ಓಡಿಹೋಗಿ ಪ್ರೀತಂನನ್ನು ಮದುವೆಯಾದರೆ ನನ್ನ ನಡತೆಯ ಬಗ್ಗೆ ಜನರು ಕೆಟ್ಟದಾಗಿ ಮಾತನಾಡುತ್ತಾರೆ ಮತ್ತು ಕುಟುಂಬದ ಮಾನ ಹೋಗುತ್ತದೆ ಎಂದು ರ್ತಸಿದೆ. ಮುಂದೇನು ಮಾಡುವುದೆಂದು ಯೋಚಿಸುತ್ತಿರುವಾಗ ನನ್ನನ್ನು ಭೇಟಿಯಾಗಲು ಬಸಮ್ಮ ಬಂದಳು. ಹೇಗಿದ್ದರೂ ಅವಳಿಗೆ ವಯಸ್ಸಾಗಿದ್ದು ಯಾರೂ ವಾರಸುದಾರರಿರಲಿಲ್ಲ, ಅವಳನ್ನು ಕೊಂದು ನಾನೇ ಸತ್ತೆನೆಂಬ ಭಾವನೆಯನ್ನು ಜನರಲ್ಲಿ ಬರಿಸಿದರೆ ಮುಂದಿನ ದಾರಿ ಸುಗಮವಾಗುತ್ತದೆ ಎಂದನಿಸಿತು.

ಬಸಮ್ಮನನ್ನು ಮನೆಯೊಳಗೆ ಕರೆದು ಕೆಲವು ತಿನಿಸುಗಳನ್ನು ನೀಡಿ ಕತ್ತು ಹಿಸುಕಿ ಕೊಲೆಮಾಡಿದೆ. ನಂತರ ನಾನು ಉಟ್ಟಿದ್ದ ಸೀರೆಯನ್ನು ಅವಳಿಗೆ ಉಡಿಸಿ ಅವಳ ಸೀರೆಯನ್ನು ನಾನು ಉಟ್ಟೆ. ನನ್ನ ಬಳೆಗಳು, ಕಾಲುಂಗುರ ಇತ್ಯಾದಿಯನ್ನು ಅವಳಿಗೆ ತೊಡಿಸಿದೆ. ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದೆ. ಆನಂತರ ಮನೆಯಿಂದ ಹೊರಗೆ ಬಂದು ಹೊಲವೊಂದರಲ್ಲಿ ಅಡಗಿ ಕತ್ತಲಾದ ನಂತರ ಗ್ರಾಮದ ಹೊರಗಿನ ರಸ್ತೆಗೆ ಬಂದೆ. ಪ್ರೀತಂ ಅಲ್ಲಿಗೆ ಬಂದು ನನ್ನನ್ನು ಕರೆದುಕೊಂಡು ಅವನ ಮನೆಗೆ ಹೋದ. ಪ್ರೀತಂನ ಜೊತೆ ಬೇರೆ ಊರಿನಲ್ಲಿ ಜೀವನ ನಡೆಸತೊಡಗಿದೆ. ಅವನು ಟ್ರಕ್ ಮಾಲೀಕನಾಗಿರದೇ ಚಾಲಕನಾಗಿದ್ದ ಕಾರಣ ಭ್ರಮನಿರಸನವಾಯಿತು. ಆದರೂ ಸಮಾಜದ ದೃಷ್ಟಿಯಲ್ಲಿ ನಾನು ಸತ್ತುಹೋಗಿದ್ದ ಕಾರಣ ಏನೂ ಮಾಡುವಂತಿರಲಿಲ್ಲ. ಕೆಲ ಕಾಲಾನಂತರ ಮಗನನ್ನು ನೋಡಬೇಕೆಂಬ ಆಸೆ ಬಹಳವಾಗಿ ಕಾಡತೊಡಗಿತು. ರವಿ ಓದುತ್ತಿದ್ದ ಶಾಲೆ ಪತ್ತೆ ಮಾಡಿ ವಾರಕ್ಕೊಮ್ಮೆ ಬಂದು ದೂರದಿಂದಲೇ ಅವನನ್ನು ನೋಡುತ್ತಿದ್ದೆ. ಇಂದು ಬಂದಾಗ ಸಿಕ್ಕಿಬಿದ್ದೆ.’

ಮೀನಾ ಜೀವಂತವಿದ್ದ ಕಾರಣ ಹರ್ಷ ಮತ್ತು ಅವನ ತಂದೆ ತಾಯಿಯರನ್ನು ಆತ್ಮಹತ್ಯೆಯ ಪ್ರಚೋದನೆಯ ಪ್ರಕರಣದಿಂದ ಬಿಡುಗಡೆ ಮಾಡಲಾಯಿತು. ಪೊಲೀಸರು ಮೀನಾ ಮತ್ತು ಪ್ರೀತಂ ಮೇಲೆ ಬಸಮ್ಮಳ ಕೊಲೆ ಮತ್ತು ಸಾಕ್ಷ್ಯನಾಶ ಪ್ರಕರಣ ದಾಖಲಿಸಿದರು. 2015ರಲ್ಲಿ ಮೀನಾಳಿಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಪ್ರೀತಂನನ್ನು ಆರೋಪಮುಕ್ತನನ್ನಾಗಿ ಮಾಡಿತು. ಮೀನಾ ಜೈಲಿನಿಂದಲೇ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದಳು. ‘ಪೊಲೀಸರ ಮುಂದೆ ಮಾಡಿರುವ ತಪ್ಪೊಪ್ಪಿಗೆ ಹೇಳಿಕೆಯ ಆಧಾರದ ಮೇರೆಯೇ ಮೀನಾಳನ್ನು ಶಿಕ್ಷೆಗೊಳಪಡಿಸಲಾಗಿದೆ. ಬಸಮ್ಮಳನ್ನು ಆಕೆಯೇ ಕೊಲೆ ಮಾಡಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ, ಮಿಗಿಲಾಗಿ ಸತ್ತವಳು ಬಸಮ್ಮಳೆಂದೂ ಸಾಬೀತಾಗಿಲ್ಲ’ ಎಂದ ಹೈಕೋರ್ಟ್ 2019ರಲ್ಲಿ ಮೀನಾಳನ್ನು ಬಿಡುಗಡೆ ಮಾಡಿತು.

‘ಹೊಸರೀತಿಯ ಪರಿಕಲ್ಪನೆಗಳು ಅಪಾಯಕಾರಿ. ಆದರೆ ಅವು ದೊಡ್ಡ ಪ್ರತಿಫಲವನ್ನೂ ಕೊಡಬಲ್ಲವು. ಒಂದು ವೇಳೆ ಸೋತರೆ ಶಿಕ್ಷೆ ಗಟ್ಟಿ’ ಎಂಬ ಫ್ರೆಂಚ್ ವಿನ್ಯಾಸಕಾರ ಡೇವಿಡ್ ಕೇಜ್​ನ ಮಾತುಗಳನ್ನು ಅಕ್ಷರಶಃ ಪಾಲಿಸಿದ ಮೀನಾ ವಿನೂತನ ರೀತಿಯ ಅಪರಾಧವನ್ನು ಮಾಡಿದ (ಕು)ಖ್ಯಾತಿಯನ್ನು ಗಳಿಸಿದ್ದಾಳೆ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net