

| ನಳಿನಿ. ಟಿ. ಭೀಮಪ್ಪ ಧಾರವಾಡ
ಆಕೆ ಮೂರು ಮಕ್ಕಳ ತಾಯಿ. ಮೊದಲನೆಯದು ಹೆಣ್ಣು, ಎರಡನೆಯದು ಗಂಡು ಮಗುವಿದ್ದರೂ 3ನೇ ಮಗುವನ್ನು ಹಡೆದ ಕಾರಣ ಕೇಳಿ ಅಚ್ಚರಿಯಾಗಿತ್ತು. ಆಕೆಯ ಗಂಡನಿಗೆ ಮೂಢನಂಬಿಕೆ ಹೆಚ್ಚು, ಹಾಗಾಗಿ ಮಗನ ಜಾತಕ, ಭವಿಷ್ಯ ಕೇಳಲು ಹೋದಾಗ, ಮೊದಲನೇ ಮಗ ನಿಮ್ಮ ಕೊನೆಗಾಲಕ್ಕೆ ಆಸರೆಯಾಗುವುದಿಲ್ಲ, ಎರಡನೆಯ ಮಗ ಮಾತ್ರ ನೋಡಿಕೊಳ್ಳುವುದು ಎಂದಿದ್ದರಂತೆ. ಹಾಗಾಗಿ ಆಕೆಯನ್ನು ಮತ್ತೊಂದು ಮಗು ಹೆರಲು ತುಂಬಾ ಬಲವಂತ ಮಾಡಿದನಂತೆ, ಅಕಸ್ಮಾತ್ ಮತ್ತೊಂದು ಹೆಣ್ಣಾದರೂ ಪುನಾ ಗಂಡುಮಗು ಆಗುವವರೆಗೆ ಆಕೆ ಹಡೆಯಲೇಬೇಕು ಎಂಬ ಕರಾರು ಆತನದು. ಆಕೆ ಎದುರು ವಾದಿಸಿದ್ದಕ್ಕೆ, ಮತ್ತೊಂದು ಮದುವೆಯಾಗುತ್ತೇನೆ ಎಂದು ಹೆದರಿಸಿದ್ದ. ಹಳ್ಳಿಯ ಹೆಣ್ಣು ಮಗಳಾದ ಅವಳು ಒಪ್ಪದೆ ಬೇರೆ ವಿಧಿಯಿರಲಿಲ್ಲ. ಸದ್ಯ ಮೂರನೆಯದು ಗಂಡಾಗಿದ್ದಕ್ಕೆ ನಿರಾಳವಾಗಿದ್ದಳು. ಆದರೆ ವಿದ್ಯಾವಂತ, ಸುಶಿಕ್ಷಿತ, ಕಾಲೇಜಿನ ಉಪನ್ಯಾಸಕನಾದ ಆತನ ಈ ನಡವಳಿಕೆ ಮಾತ್ರ ತುಂಬಾ ವಿಚಿತ್ರ ಎನಿಸಿತ್ತು. ಇದು ತೀರ ಇತ್ತೀಚೆಗೆ ನಡೆದ ಘಟನೆ.
ಮತ್ತೊಂದು ಪ್ರಕರಣದಲ್ಲಿ ಶ್ರೀಮಂತ ಮನೆತನದ 2 ಗಂಡು, ಒಂದು ಹೆಣ್ಣುಮಗು ಇದ್ದ ತಾಯಿ ಮತ್ತೊಮ್ಮೆ ಗರ್ಭವತಿ. ಇದಕ್ಕೂ ಕಾರಣ ಭವಿಷ್ಯ ಹೇಳಿದವರು. ಮುಂದೆ ಹೆಣ್ಣು ಮಗುವಾದರೆ ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ ಎಂದು ಹೇಳಿದ್ದರಿಂದ, ಈ ನಿರ್ಧಾರ ತೆಗೆದುಕೊಂಡಿದ್ದರು. ಮತ್ತೊಬ್ಬರಂತೂ ಆಸ್ತಿ ತುಂಬಾ ಇದೆ, ಮಕ್ಕಳು ಜಾಸ್ತಿ ಬೇಕು ಎಂದು 4 ಮಕ್ಕಳನ್ನು ಹಡೆದು, ವ್ಯವಹಾರವೆಲ್ಲ ತೋಪಾಗಿ, ಈಗ ಮಕ್ಕಳನ್ನು ಸಾಕಲಾರದೆ ಒದ್ದಾಡುತ್ತಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆಕೆಗೆ ಎರಡೂ ಹೆಣ್ಣುಮಕ್ಕಳು ಶಸ್ತ್ರಚಿಕಿತ್ಸೆಯಾಗಿಯೇ ಹುಟ್ಟಿದ್ದು. ವೈದ್ಯರು, ಮತ್ತೊಮ್ಮೆ ಗರ್ಭ ಧರಿಸುವುದು ಕಷ್ಟ ಎಂದಿದ್ದಕ್ಕೆ ಗಂಡನನ್ನು ಒಪ್ಪಿಸಿ ಮಕ್ಕಳಾಗದಂತೆ ಆಪರೇಷನ್ ಮಾಡಿಸಿದಳು. ಆದರೆ ಹಳ್ಳಿಯಲ್ಲಿದ್ದ ಅವಳ ಅತ್ತೆ-ಮಾವ, ನಮ್ಮ ವಂಶ ಬೆಳೆಸಲು ಸಾಧ್ಯತೆ ಇಲ್ಲದಂತೆ ಮಾಡಿದಿರಿ ಎಂದು ಪಾಲಕರೊಂದಿಗೆ ದೊಡ್ಡ ಗಲಾಟೆಯನ್ನೇ ಮಾಡಿಬಿಟ್ಟರು. ಮರು ವರ್ಷವೇ ಮಗನಿಗೆ ಮತ್ತೊಂದು ಮದುವೆ ಮಾಡಿ, ಇನ್ನೊಬ್ಬ ಸೊಸೆ ಗಂಡು ಮಗುವನ್ನು ಹೆತ್ತುಕೊಟ್ಟಾಗಲೇ ಅವರು ಸಮಾ ಧಾನವಾಗಿದ್ದು. ಇಬ್ಬರು ಹೆಣ್ಣು ಮಕ್ಕಳಿರುವ ಮತ್ತೊಬ್ಬ ತಾಯಿ, ಹಳ್ಳಿಯಲ್ಲಿ ಆಡಿಕೊಳ್ಳುವ ಜನರ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ ಹಳ್ಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿದ್ದಳು. ಇವುಗಳು ಬರೀ ಉದಾಹರಣೆ ಎನಿಸಿದರೂ ತುಂಬಾ ವಿಚಿತ್ರವೆನಿಸುತ್ತದೆ. ಮಕ್ಕಳನ್ನು ಹಡೆಯುವುದರಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ತುಂಬಾ ಕಡಿಮೆ ಎನ್ನುವುದು ಈ ಪ್ರಕರಣಗಳಿಂದ ಗೊತ್ತಾಗುತ್ತದೆ. ಮಕ್ಕಳಿಲ್ಲದವರು ಇಲ್ಲ ಎಂದು ಗೋಳಾಡಿದರೆ, ಇದ್ದವರದು ಮತ್ತೊಂದು ದುರಾಸೆ. ಬಹಳಷ್ಟು ದಂಪತಿ ಯಾವ ಮಗುವಾದರೂ ಚಿಂತೆಯಿಲ್ಲ, ಇಬ್ಬರು ಮಕ್ಕಳಿದ್ದರೆ ಸಾಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹವೇ. ಆದರೆ ಕೆಲ ಪ್ರಕರಣಗಳಲ್ಲಿ ಗಂಡ ಹಾಗೂ ಅತ್ತೆ ಮನೆಯವರ ಒತ್ತಡಕ್ಕೆ ಮಣಿದು, ಒಲ್ಲದ ತಾಯ್ತನಕ್ಕೆ ಕೊರಳೊಡ್ಡಬೇಕಾಗುತ್ತದೆ.
ವಂಶೋದ್ಧಾರಕ್ಕೆ ಗಂಡು ಮಗು ಬೇಕು ಎನ್ನುವ ನಂಬಿಕೆಯುಳ್ಳವರೇ ನಮ್ಮಲ್ಲಿ ಹೆಚ್ಚು. ಹಾಗಾಗಿ ಗಂಡು ಹುಟ್ಟುವವರೆಗೆ ಸಾಲಾಗಿ ಮಕ್ಕಳನ್ನು ಹೆರಲೇಬೇಕಾದ ಪರಿಸ್ಥಿತಿ ಅನೇಕ ಹೆಣ್ಣುಮಕ್ಕಳದು. ಹೆಣ್ಣಾಗಲಿ, ಗಂಡಾಗಲಿ ಒಂದೇ ಸಾಕು ಎಂದು ಬಾಯಿಮಾತಿಗೆ ಹೇಳಬಹುದು. ಒಂದು ಗಂಡು ಮಗುವಿದ್ದವರು ಓಕೆ, ಆದರೆ ಒಂದು ಹೆಣ್ಣುಮಗುವಿದ್ದವರು ಹೆಚ್ಚಾಗಿ ಮತ್ತೊಮ್ಮೆ ಪ್ರಯತ್ನ ಮಾಡಿರುತ್ತಾರೆ. ಪ್ರಯತ್ನ ಫಲಕೊಡದಿದ್ದರೆ ಇದ್ದುದ್ದರಲ್ಲಿಯೇ ತೃಪ್ತಿ ಪಡಬಹುದೇ ಹೊರತು, ಗಂಡುಮಗುವಿನ ವಾಂಛೆಯಿಂದ ಹೊರಗುಳಿದವರು ಎನ್ನುವಂತಿಲ್ಲ. ಅಂತಹ ಮನಸ್ಥಿತಿಯುಳ್ಳವರು ತುಂಬಾ ಕಡಿಮೆ ಎಂದೇ ಹೇಳಬಹುದು.
ಬದಲಾವಣೆ ನಮ್ಮಿಂದಲೇ ಆಗಲಿ: ಯಾವ ಮಗುವಾದರೂ ಪರವಾಗಿಲ್ಲ, ಇಬ್ಬರು ಮಕ್ಕಳು ಸಾಕು. ಮಕ್ಕಳನ್ನು ಮಕ್ಕಳಾಗಿ ಮಾತ್ರ ಪ್ರೀತಿಸುತ್ತ, ಅವರ ಬಾಲ್ಯ, ಆಟ, ತುಂಟಾಟ ಬೆಳವಣಿಗೆಯನ್ನು ನೋಡಿ ಆನಂದಿಸುತ್ತ, ಅವರಿಂದ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವತ್ತ ಗಮನ ಹರಿಸಿದರೆ ಸಾಮಾಜಿಕವಾಗಿ ಸಹ ಮತ್ತಷ್ಟು ಬದಲಾವಣೆ ಕಾಣುವುದರಲ್ಲಿ ಸಂದೇಹವಿಲ್ಲ.