

ನಮ್ಮ ತಾಯಿಯ ತಂಗಿ ಕೆಲಸದಲ್ಲಿ ಇದ್ದರು. ಅವರು ತೀರಿಕೊಂಡು ಎರಡು ವರ್ಷಗಳಾಗಿವೆ. ಅವರಿಗೆ ಮಕ್ಕಳಿರಲಿಲ್ಲ. ಅವರ ಹೆಸರಿನಲ್ಲಿ, ಅವರೇ ಸಂಪಾದಿಸಿದ ಬಹಳ ಆಸ್ತಿ ಇತ್ತು. ಬ್ಯಾಂಕಿನಲ್ಲಿ ಹಣವೂ ಇತ್ತು. ಎಲ್ಲವನ್ನೂ ನಮ್ಮ ಚಿಕ್ಕಪ್ಪ ತಾನೇ ತೆಗೆದುಕೊಂಡಿದ್ದಾರೆ. ನಮ್ಮ ಚಿಕ್ಕಪ್ಪ ತುಂಬಾ ಕುಡುಕರು. ನಮ್ಮ ಚಿಕ್ಕಮ್ಮನಿಗೆ ತುಂಬಾ ಕಾಟ ಕೊಡುತ್ತಿದ್ದರು. ಈಗ ನಮ್ಮ ಚಿಕ್ಕಮ್ಮನ ಕಡೆ ಅವರ ಅಕ್ಕ, ಅಂದರೆ ನಮ್ಮ ತಾಯಿ ಮಾತ್ರ ಇದ್ದಾರೆ. ಅವರಿಗೆ ನಮ್ಮ ಚಿಕ್ಕಮ್ಮನ ಆಸ್ತಿಯಲ್ಲಿ ಪಾಲು ಬರುತ್ತದೆಯೇ? ಕೇಸು ಹಾಕಿದರೆ ಎಷ್ಟು ದಿನಗಳಲ್ಲಿ ಪಾಲು ಸಿಗುತ್ತದೆ?ಉತ್ತರ: ನಿಮ್ಮ ಚಿಕ್ಕಮ್ಮ ತೀರಿಕೊಂಡ ಮೇಲೆ ಅವರ ಮೊದಲ ದರ್ಜೆ ವಾರಸುದಾರರಾದ ಅವರ ಪತಿಗೇ ಎಲ್ಲ ಆಸ್ತಿಗಳೂ ಹೋಗುತ್ತವೆ. ನಿಮ್ಮ ಚಿಕ್ಕಪ್ಪ ತೀರಿಕೊಂಡಿದ್ದರೆ, ಆಗ ಬೇರೆ ವಾರಸುದಾರರ ಹಕ್ಕನ್ನು ಪರಿಗಣಿಸುವ ಪ್ರಶ್ನೆಯನ್ನು ನ್ಯಾಯಾಲಯ ಗಮನಿಸುತ್ತದೆ. ನಿಮ್ಮ ಚಿಕ್ಕಪ್ಪ ಬದುಕಿರುವಾಗ ನಿಮ್ಮ ತಾಯಿಗೆ (ನಿಮ್ಮ ಚಿಕ್ಕಮ್ಮನ ಅಕ್ಕನಿಗೆ) ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ನಿಮ್ಮ ಚಿಕ್ಕಮ್ಮ ತಾವು ಬದುಕಿದ್ದಾಗ ನಿಮ್ಮ ಚಿಕ್ಕಪ್ಪನಿಂದ ವಿಚ್ಛೇದನ ಪಡೆದಿದ್ದರೆ , ಆಗಲಾದರೂ ನಿಮ್ಮ ಚಿಕ್ಕಪ್ಪನಿಗೆ ಆಸ್ತಿ ಹೋಗುವುದನ್ನು ತಪ್ಪಿಸಬಹುದಿತ್ತು. ಈಗ ಏನೂ ಮಾಡಲಾಗುವುದಿಲ್ಲ.
ನನ್ನ ಗಂಡ ನನ್ನಿಂದ ದೂರವಾಗಿ ಎರಡು ವರ್ಷಗಳಾಗಿವೆ. ಈವರೆಗೂ ಮಗನ ಖರ್ಚಿಗೆ ಬಿಡಿಗಾಸೂ ಕೊಟ್ಟಿಲ್ಲ. ನಮ್ಮ ಮದುವೆಯಾಗಿ ಹದಿನೈದು ವರ್ಷಗಳಾಗಿವೆ. ನನ್ನ ಮಗನಿಗೆ ಈಗ ಎಂಟು ವರ್ಷ ವಯಸ್ಸು. ಮಗನನ್ನು ನೋಡಲು ಬರುತ್ತೇನೆ ಎನ್ನುತ್ತಾನೆ. ಅವನು ಬಂದರೆ ಮಗನ ಮನಸ್ಸು ಕೆಡಿಸಿಬಿಡುತ್ತಾನೆ ಎಂದು ಹೆದರಿಕೆ. ನಾನು ಒಳ್ಳೆಯ ಕೆಲಸದಲ್ಲಿ ಇದ್ದೇನೆ. ನನಗೆ ನನ್ನ ಗಂಡನಿಂದ ಹಣದ ಅಪೇಕ್ಷೆ ಇಲ್ಲ. ಆದರೆ “ನನ್ನ ಗಂಡ ಯಾವತ್ತೂ ಮಗನನ್ನು ನೋಡಬಾರದು, ಮಗನ ಹತ್ತಿರ ಬರಬಾರದು ಅಷ್ಟೇ”, ಇದಕ್ಕೆ ನ್ಯಾಯಾಲಯದಲ್ಲಿ ಕೇಸು ಹಾಕಬಹುದೇ? ನನ್ನ ಗಂಡ ನಾನು ಮಗನನ್ನು ನೋಡಲು ಬಿಡದಿದ್ದರೆ ತಾನೇ ಕೇಸು ಹಾಕುವುದಾಗಿ ಹೆದರಿಸುತ್ತಿದ್ದಾನೆ. ಮಗನನ್ನು ತಾನೇ ಕರೆದುಕೊಂಡು ಹೋಗಿಬಿಡುತ್ತೇನೆ ಎಂದು ಧಮಕಿ ಹಾಕುತ್ತಿದ್ದಾನೆ. ಹೀಗಾಗಿ ನಾನೇ ಮೊದಲು ಕೇಸು ಹಾಕಬೇಕೇ ತಿಳಿಸಿ.ಉತ್ತರ: ನಿಮ್ಮ ಪತಿಗೆ ತನ್ನ ಮಗನನ್ನು ಭೇಟಿ ಮಾಡುವ, ಮಗನ ಜೊತೆ ಸಮಯ ಕಳೆಯುವ ಹಕ್ಕು ಇರುತ್ತದೆ. “ನನ್ನ ಗಂಡ ಯಾವತ್ತೂ ಮಗನನ್ನು ನೋಡಬಾರದು, ಮಗನ ಹತ್ತಿರ ಬರಬಾರದು“ ಎನ್ನುವ ಆದೇಶ ಕೊಡಿ ಎಂದು ನೀವು ನ್ಯಾಯಾಲಯದಲ್ಲಿ ಕೇಸು ಹಾಕಲು ಆಗುವುದಿಲ್ಲ. ಮಗುವಿಗೆ ತಂದೆ ತಾಯಿ ಇಬ್ಬರೂ ಮುಖ್ಯ ಎನ್ನುವುದನ್ನು ನೀವು ಮರೆಯಬಾರದು. ನಿಮ್ಮ ಮಗನನ್ನು ಏಕಾಏಕಿ ನಿಮ್ಮಿಂದ ಕಿತ್ತುಕೊಂಡು ಹೋಗುವ ಅಧಿಕಾರ ನಿಮ್ಮ ಪತಿಗೆ ಇರುವುದಿಲ್ಲ. ನಿಮಗೆ ಈ ವಿಷಯದಲ್ಲಿ ಹೆದರಿಕೆ ಇದ್ದರೆ, ನ್ಯಾಯಾಲಯದಿಂದ ನಿಮ್ಮ ಪತಿ ನಿಮ್ಮ ಮಗನನ್ನು ನಿಮ್ಮಿಂದ ತೆಗೆದುಕೊಂಡು ಹೋಗದಂತೆ ಇಂಜಂಕ್ಷನ್ ಆದೇಶವನ್ನು ಪಡೆಯಬಹುದು. ನಿಮ್ಮ ಪತಿ ಕೇಸು ಹಾಕಿದರೆ ನೀವು ಹೆದರಬೇಕಿಲ್ಲ. ನಿಮ್ಮ ತಕರಾರನ್ನು ನೀವು ಸಲ್ಲಿಸಬಹುದು. ಸಾಮಾನ್ಯವಾಗಿ ತಾಯಿಯ ಹತ್ತಿರ ಇರುವ ಮಗುವನ್ನು ತಾಯಿಯಿಂದ ಬೇರ್ಪಡಿಸಿ, ತಂದೆಗೆ ಕಸ್ಟಡಿ ಕೊಡುವ ಅವಕಾಶಗಳು ಬಹಳ ಕಡಿಮೆ ಇರುತ್ತದೆ. ಆದರೆ, ನಿಶ್ಚಯವಾಗಿ, ತಂದೆ ಮಗುವನ್ನು ಭೇಟಿ ಮಾಡುವ, ಮಗುವಿನೊಂದಿಗೆ ಸಮಯ ಕಳೆಯುವ ಅವಕಾಶವನ್ನು ನ್ಯಾಯಾಲಯ ಮಾಡಿಕೊಡುತ್ತದೆ ಎನ್ನುವುದನ್ನು ನೀವು ಮರೆಯಬೇಡಿ.
ನೀವು ಕೇಸು ಹಾಕಿದರೂ, ನಿಮ್ಮ ಪತಿಯೇ ಮೊದಲು ಕೇಸು ಹಾಕಿದರೂ, ಆ ಪ್ರಕರಣವನ್ನು ನ್ಯಾಯಾಲಯ ಸಾಮಾನ್ಯವಾಗಿ ಮಧ್ಯಸ್ಥಿಕೆಗೆ ಕಳಿಸುತ್ತದೆ. ಅಲ್ಲಿ ನುರಿತ ಮಧ್ಯಸ್ಥಿಕೆಗಾರರ ಸಹಾಯದಿಂದ ನೀವಿಬ್ಬರೂ ಎಲ್ಲ ವಿಷಯಗಳನ್ನು ಚರ್ಚಿಸಿ, ಮಗುವಿನ ವಿಷಯದಲ್ಲಿ ಇಬ್ಬರೂ ಒಪ್ಪುವಂತಹ ಒಂದು ತೀರ್ಮಾನಕ್ಕೆ ಬರಬಹುದು.
(ಲೇಖಕರು ಕರ್ನಾಟಕ ಉಚ್ಛ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಮಧ್ಯಸ್ಥಿಕೆಗಾರರು)