

ಒಬ್ಬ ಮೇಧಾವಿ ಇದ್ದ. ಅವನು ಚಿಕ್ಕಂದಿನಿಂದಲೂ ಓದಿನಲ್ಲಿ ಮುಂದಿದ್ದ ಹಾಗೂ ಗಣಿತದ ಲೆಕ್ಕಗಳನ್ನು ಲೀಲಾಜಾಲವಾಗಿ ಮಾಡಬಲ್ಲವನಾಗಿದ್ದ. ಹೀಗಾಗಿ ತನ್ನ ಮಗನೂ ತನ್ನಂತೆ ಇರಬೇಕೆಂದು ಬಯಸಿದ. ಮಗ ನಾಲ್ಕನೆಯ ವಯಸ್ಸಿನಲ್ಲಿರುವಾಗಲೇ ಆತನಿಗೆ ಲೆಕ್ಕದ ಬೋಧನೆ ಪ್ರಾರಂಭಿಸಿದ. ಅವನು ಕಲಿಯುವಾಗ ಥಟ್ಟನೆ ಗ್ರಹಿಸದಿದ್ದಾಗ ಬೈದು ಹೊಡೆಯುತ್ತಿದ್ದ. ಆದರೂ ಆತ ಕಲಿಯುವುದರಲ್ಲಿ ವಿಫಲನಾದ. ತಂದೆಯ ವ್ಯಗ್ರರೂಪಕ್ಕೆ ಹುಡುಗ ಭಯಪಡತೊಡಗಿ ಜಾಸ್ತಿ ತಪ್ಪು ಮಾಡತೊಡಗಿದ. ತಂದೆಯಿಂದ ದಡ್ಡ ಮಗ ಎಂಬ ಮೂದಲಿಕೆ ಪಡೆದುಕೊಂಡ. ಮುಂದೆ ಅವನು ಶಾಲೆಗೆ ಸೇರಿದಾಗ ಅಲ್ಲಿ ಕೂಡ ಲೆಕ್ಕದಲ್ಲಿ ಹಿಂದೆ ಉಳಿದ. ಈಗ ಶಿಕ್ಷಕರು ಮತ್ತು ಸಹಪಾಠಿಗಳು ಅವನಿಗೆ ದಡ್ಡ ಎಂದು ಕರೆಯತೊಡಗಿದರು. ಈ ಎಲ್ಲ ಘಟನೆಗಳಿಂದ ಹುಡುಗ ತನಗೆ ಲೆಕ್ಕ ಬರುವುದಿಲ್ಲ, ತಾನು ದಡ್ಡ ಎಂಬುದನ್ನು ಮನಃಪೂರ್ವಕವಾಗಿ ಒಪ್ಪಿಕೊಂಡು ಬಿಟ್ಟ.
ಹೀಗಿರುವಾಗ ಶಾಲೆಗೆ ಹೊಸ ಲೆಕ್ಕದ ಟೀಚರ್ ಬಂದರು. ವಿಶೇಷ ಕಾಳಜಿ ತೋರಿಸಿ ಪಾಠ ಮಾಡುತ್ತಿದ್ದ ಅವರು ಮಕ್ಕಳಿಗೆ ಇಷ್ಟವಾಗತೊಡಗಿದರು. ಅವರು ಈ ದಡ್ಡ ಹುಡುಗನ ಬಗ್ಗೆ ಅನುಕಂಪ ಪಟ್ಟು ಇವನನ್ನು ಬದಲಾಯಿಸಲೇಬೇಕೆಂದು ನಿರ್ಧರಿಸಿ ಆತನಿಗೆ ತರಗತಿಯ ಕಲಿಕೆಯ ನಂತರ ಒಂದು ಗಂಟೆ ವಿಶೇಷ ತರಬೇತಿ ನೀಡುವುದಾಗಿ ಹೇಳಿದರು. ಏಳನೆಯ ತರಗತಿಯಲ್ಲಿದ್ದ ಅವನಲ್ಲಿ ಗಣಿತ ಜ್ಞಾನ ನಾಲ್ಕನೆಯ ತರಗತಿಯದಾಗಿತ್ತು ಎಂಬುದನ್ನು ಗಮನಿಸಿದ್ದ ಅಧ್ಯಾಪಕರು ಮೊದಲಿಗೆ ಆತನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅಭಿರುಚಿ ಉಂಟಾಗಲೆಂದು ಬಹಳ ಸುಲಭದ, ತಪ್ಪುಮಾಡಲು ಸಾಧ್ಯವೇ ಇಲ್ಲದ ಹತ್ತು ಲೆಕ್ಕಗಳನ್ನು ಕೊಟ್ಟರು. ಅದರಲ್ಲಿ ಐದು ಲೆಕ್ಕಗಳನ್ನು ಆತ ಸರಿಯಾಗಿ ಮಾಡಿದ. ‘ವೆರಿಗುಡ್ ಸರಿಯಾಗಿ ಮಾಡಿದೆ. ನಿನಗೆ ಲೆಕ್ಕ ಬರುವುದಿಲ್ಲವೆಂದು ಯಾರು ಹೇಳಿದ್ದು?’ ಎಂದು ಶಿಕ್ಷಕರು ಹೊಗಳಿದರು. ಕಾಲಕ್ರಮೇಣ ಕಠಿಣ ಲೆಕ್ಕಗಳನ್ನು ಕೊಡಲಾರಂಭಿಸಿದರು. ಆತ ಆ ಲೆಕ್ಕವನ್ನು ಕೂಡ ಸರಿಯಾಗಿ ಮಾಡತೊಡಗಿದ.
‘ನೀನು ಈ ಬಾರಿ ಒಂದೂ ತಪ್ಪು ಮಾಡಿಲ್ಲ. ಹೀಗೇ ಪ್ರಯತ್ನ ಮಾಡಿದರೆ ಪರೀಕ್ಷೆಯಲ್ಲಿ ಎಪ್ಪತ್ತು ಪರ್ಸೆಂಟ್ ಪಡೆಯುತ್ತೀಯಾ’ ಎಂದರು. ಹುಡುಗನಲ್ಲಿ ಆತ್ಮವಿಶ್ವಾಸ ಗರಿಗೆದರಿತು. ದಿನ ರಾತ್ರಿ ಎರಡು ಗಂಟೆ ಸತತವಾಗಿ ಲೆಕ್ಕ ಅಭ್ಯಾಸ ಮಾಡಿ ಮುಂದಿನ ಪರೀಕ್ಷೆಯಲ್ಲಿ ಎಪ್ಪತ್ತು ಪರ್ಸೆಂಟ್ ಪಡೆದೇ ಬಿಟ್ಟ. ಆ ವಿದ್ಯಾರ್ಥಿ ಮೂಲತಃ ದಡ್ಡನಾಗಿರಲಿಲ್ಲ. ಚಿಕ್ಕಂದಿನಲ್ಲಿ ಅಪ್ಪನಿಂದ, ಶಾಲೆಯಲ್ಲಿ ಗೆಳೆಯರು ಮತ್ತು ಶಿಕ್ಷಕರಿಂದ ದಡ್ಡನೆಂದು ಹೇಳಿಸಿಕೊಂಡು ತಾನು ದಡ್ಡನೆಂಬುದನ್ನು ಸ್ವೀಕರಿಸಿಬಿಟ್ಟಿದ್ದ. ಶಿಕ್ಷಕರು ಆತನ ಮನಸ್ಸಲ್ಲಿ ಬೇರುಬಿಟ್ಟ ಕೀಳರಿಮೆ ಕಿತ್ತೊಗೆದು ಆತ್ಮವಿಶ್ವಾಸ ಬಿತ್ತಿದರು. ‘ಆತ್ಮವಿಶ್ವಾಸದಂತಹ ಮಿತ್ರ ಬೇರೆ ಇಲ್ಲ. ಇದು ಉನ್ನತಿಯ ಮೊದಲು ಮೆಟ್ಟಲು. ಆದ್ದರಿಂದ ಆತ್ಮವಿಶ್ವಾಸ ಗಳಿಸಿಕೊಳ್ಳಬೇಕು’ ಎಂಬ ವಿವೇಕಾನಂದರ ವಾಣಿಯನ್ನರಿತು ಶಿಕ್ಷಕರು ಮತ್ತು ಹೆತ್ತವರು ಮಕ್ಕಳಿಗೆ ಈ ರೀತಿ ಸಣ್ಣ ಸಣ್ಣ ಗೆಲುವನ್ನು ತಂದುಕೊಟ್ಟು ಆತ್ಮವಿಶ್ವಾಸ ಚಿಗುರುವಂತೆ ಮಾಡಬೇಕು.
(ಲೇಖಕರು ಉಪನ್ಯಾಸಕರು)