

ಒಡಿಶಾ ಪ್ರವಾಸಕ್ಕೆ ಹೋಗಿದ್ದ ನಮ್ಮ ಪಯಣ ಅಂದು ಸಾಗಿದ್ದು ಚಿಲಿಕಾ ಸರೋವರದೆಡೆಗೆ. ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರವೆಂಬ ಖ್ಯಾತಿಯ ಆ ಪ್ರದೇಶದಲ್ಲಿ ಕಂಡು ಬರುವ ಇರಾವಾಡಿ ಡಾಲ್ಪಿನ್ಗಳ ದರ್ಶನವಾಗಬೇಕೆಂದರೆ ಸರೋವರದ ಮಧ್ಯಭಾಗದವರೆಗಿನ ಪಯಣ ಸುಮಾರು ಎರಡು ತಾಸಿನದು. ಮೀನು ಶಿಕಾರಿಗೆಂದು ಬಲೆ ಬೀಸುತ್ತಿರುವ ಬೆಸ್ತರು ಹಾಗೂ ಆ ಮೀನುಗಳನ್ನು ತಿನ್ನಲು ಬೋಟುಗಳ ಸುತ್ತಮುತ್ತಲೇ ಹಾರಾಡುತ್ತಿದ್ದ ಕಡಲಹಕ್ಕಿಗಳ ಜುಗಲ್ಬಂದಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತ ಕುಳಿತಿದ್ದ ನನಗೆ ನೀರಿನಲ್ಲಿ ತೀರಕ್ಕೆ ಹತ್ತಿರವಾಗಿ ನಿರ್ವಿುಸಿಟ್ಟಿದ್ದ ಬೆತ್ತದ ದೊಡ್ಡ ಚೌಕಟ್ಟುಗಳು ಗಮನ ಸೆಳೆದವು. ಆ ಕುರಿತು ನಮ್ಮಅಂಬಿಗ ಕಮ್ ಗೈಡ್ನನ್ನು ಮಾತಿಗೆಳೆದಾಗ ಗೊತ್ತಾಗಿದ್ದು ಕಳೆದ ಕೆಲವು ವರ್ಷಗಳಿಂದ ಸತತವಾಗಿ ಚಂಡಮಾರುತಗಳ ದಾಳಿಗೆ ತುತ್ತಾಗಿ ತತ್ತರಿಸಿ ಹೋಗಿರುವ ಒಡಿಶಾದ ಕಡಲ ಮಕ್ಕಳಿಗೆ ಮತ್ಸ್ಯಕ್ಷಾಮದ ಭೀತಿ ಆವರಿಸಿರುವ ವಿಷಯ.
ಹಿಂದಿನ ದಿನವೇ ಪುರಿಯ ಕಡಲ ತೀರದಲ್ಲಿ ಓಡಾಡುವಾಗ ಬಿದಿರಿನಿಂದ ನಿರ್ವಿುಸಿದ್ದ ಅಟ್ಟಣಿಗೆಗಳಲ್ಲಿ ಥೇಟ್ ನಮ್ಮಲ್ಲಿನ ತರಕಾರಿ ಅಂಗಡಿಗಳಂತೆ ಹರಡಿಕೊಂಡಿದ್ದ ತರಹೇವಾರಿ ಮೀನುಗಳ ಅಂಗಡಿಗಳನ್ನು ನೋಡಿ ಆಶ್ಚರ್ಯಗೊಂಡಿದ್ದೆ. ಪುರಿಯ ವಿಶೇಷವೆಂದರೆ ಅಂಗಡಿಗಳಲ್ಲಿ ಹರಡಿ ಇಟ್ಟಿರುವ ಮೀನುಗಳಲ್ಲಿ ತನಗೆ ಬೇಕಾಗಿರುವುದನ್ನು ಗ್ರಾಹಕ ಆಯ್ಕೆ ಮಾಡುತ್ತಾನೆ. ನಂತರ ಅದನ್ನೆತ್ತಿ ಅಂಗಡಿಯವ ಆತನ ಇಷ್ಟದ ಖಾದ್ಯ ತಯಾರಿಸಿ ಕೊಡುತ್ತಾನೆ. ಮಜವೆಂದರೆ ಸಮುದ್ರ ತೀರದಲ್ಲಿದ್ದರೂ ಪುರಿಯ ಜನರಿಗೆ ಸಿಹಿನೀರಿನ ಮೀನೇ ಹೆಚ್ಚು ಖಾಯಸ್ಸು. ಹಾಗಾಗಿ ಭಾರತದ ಅತಿ ಹೆಚ್ಚು ಮೀನು ಉತ್ಪಾದನಾ ರಾಜ್ಯಗಳಲ್ಲಿ ಒಂದಾಗಿರುವ ಒಡಿಶಾದಲ್ಲಿ ವರುಷವೂ ಬೆಂಬಿಡದೇ ಹೊಸ ಹೊಸ ಹೆಸರಿನೊಂದಿಗೆ ಬಂದು ಕಡಲತೀರದ ಜನಜೀವನವನ್ನು ಪಲ್ಟಿ ಹೊಡೆಸುವ ಚಂಡಮಾರುತಗಳ ಜೊತೆಗೆ ಈ ಮತ್ಸ್ಯಕ್ಷ್ಯಾಮವು ಕಡಲಮಕ್ಕಳಿಗೆ ಎದ್ದೇಳಲಾರದಂತಹ ಪೆಟ್ಟು ನೀಡಿದೆ. ಈ ಕಾರಣ ಅವರು ಮೀನುಗಾರಿಕೆಯಿಂದ ವಿಮುಖರಾಗುತ್ತಿರುವುದನ್ನು ಕಂಡು ಸ್ಥಳೀಯ ವಿಜ್ಞಾನಿಗಳಾದ ಪೊ›. ದೀನಬಂಧು ಸಾಹೂ ಚಿಲಿಕಾ ಸರೋವರದ ನೀರಿನಲ್ಲಿ ಸೀ ವೀಡ್ ಯಾನೆ ಸಮುದ್ರಕಳೆಯ ಕೃಷಿಯ ಪ್ರಯೋಗ ಮಾಡಿ ಸ್ಥಳೀಯ ಬೆಸ್ತರನ್ನು ತರಬೇತುಗೊಳಿಸಿ ಆರ್ಥಿಕವಾಗಿ ಯಶಸ್ಸು ಕಂಡು ಅವರ ಪಾಲಿಗೆ ಹೊಸ ಆಶಾಕಿರಣವಾಗಿದ್ದಾರೆ. ನಮ್ಮ ಬೋಟಿನಿಂದ ತೀರದಲ್ಲಿ ಕಂಡುಬರುತ್ತಿದ್ದ ಅಟ್ಟಣಿಗೆಗಳು ಅಸಲಿಗೆ ಪೊ›. ಸಾಹೂ ಮತ್ತವರ ತಂಡವು ಸಮುದ್ರಕಳೆಯ ಕೃಷಿಗಾಗಿ ನಿರ್ವಿುಸಿದ್ದ ಬೇಲಿಗಳಾಗಿದ್ದವು.
ಭೂಮಿಯ ವಾತಾವರಣದಲ್ಲಿ ಸಿಗುವ ಆಮ್ಲಜನಕದ ಅರ್ಧಕ್ಕಿಂತ ಹೆಚ್ಚು ಪಾಲು ಉತ್ಪತ್ತಿಯಾಗುವುದು ಸಮುದ್ರದಲ್ಲಿ. ಅಷ್ಟೇ ಏಕೆ, ವಾತಾವರಣದಲ್ಲಿನ ಆಮ್ಲಜನಕದ ಶೇಕಡಾ ಎಪ್ಪತ್ತರಷ್ಟರ ಮೂಲ ಜಲವೇ. ನೆಲದ ಮೇಲೆಯೇ ಇರಲಿ ಸಮುದ್ರದ ಒಳಗೇ ಆಗಲಿ ಆಮ್ಲಜನಕದ ಉತ್ಪತ್ತಿಯ ಮೂಲ ಕಾರಣ ದ್ಯುತಿಸಂಶ್ಲೇಷಣೆಯೇ ಹೌದಾದರೂ ಸಮುದ್ರದ ಒಳಗೆ ಇರುವ ಪಾಚಿಗಳು ನೆಲದ ಮೇಲಿರುವ ಹಸಿರಿಗಿಂತಲೂ ಹೆಚ್ಚು ಆಮ್ಲಜನಕವನ್ನು ತಯಾರಿಸುತ್ತವೆ. ಈ ಪಾಚಿಗಳ ಕುಟುಂಬವು ಅತ್ಯಂತ ವೈವಿಧ್ಯಮಯವಾಗಿದ್ದು ಡಯಾಟಮ್ಂತಹ ಅತ್ಯಂತ ಸೂಕ್ಷ್ಮ ಏಕಕೋಶ ಜೀವಿಯಿಂದ ಹಿಡಿದು ಐವತ್ತು ಮೀಟರ್ನಷ್ಟು ಉದ್ದ ಬೆಳೆಯುವ ಕಂದು ಪಾಚಿಗಳವರೆಗೆ ವಿವಿಧತೆಯನ್ನು ಹೊಂದಿವೆ. ಭೂಮಿಯ ಮೇಲೆ ಕಂಡುಬರುವ ಕಳೆಗಳಲ್ಲಿ ಹಲವು ಜಾತಿ ಮತ್ತು ತಳಿಗಳು ಇರುವಂತೆ ನೀರಿನೊಳಗೆ ಬೆಳೆಯುವ ಪಾಚಿ ಯಾನೆ ಕಳೆಗಳಲ್ಲಿಯೂ ಹಲವು ತಳಿ ಮತ್ತು ಜಾತಿಗಳಿವೆ. ಅಂತಹ ಪಾಚಿಗಳಲ್ಲಿ ಹೆಚ್ಚು ಕಂಡುಬರುವಂತಹದ್ದು ಮತ್ತು ಉಪಯುಕ್ತತೆಯಿಂದ ಅತಿ ಮುಖ್ಯವಾದದ್ದು ಸೀ ವೀಡ್ ಉರ್ಫ್ ಸಮುದ್ರಕಳೆ. ಸಾವಿರಕ್ಕೂ ಹೆಚ್ಚು ತಳಿಗಳನ್ನು ಹೊಂದಿರುವ ಸಮುದ್ರಕಳೆಗಳನ್ನು ಮುಖ್ಯವಾಗಿ ಕೆಂಪು, ಹಸಿರು ಮತ್ತು ಕಂದು ಹೀಗೆ ಮೂರು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಅಷ್ಟೊಂದು ವೈವಿಧ್ಯಮಯ ತಳಿಗಳನ್ನು ಹೊಂದಿರುವ ಇವುಗಳಲ್ಲಿ ಕಂದು ಪಾಚಿಗಳ ಗುಂಪಿಗೆ ಸೇರುವ ಕೆಲ್ಪ್ ಎಂಬ ಕಳೆ ಸಾಗರದ ಮತ್ಸ್ಯರಾಶಿಗೆ ಮುಖ್ಯಆಹಾರವಾದರೆ ಪ್ಲಾಂಕ್ಟಾನಿಕ್ ಎಂಬ ಸಮುದ್ರಕಳೆ ಇಂಗಾಲದ ಡೈ ಆಕ್ಸೈಡ್ಅನ್ನು ಹೀರಿಕೊಂಡು ಭೂಮಿಯ ಮೇಲಿನ ಶೇಕಡ ಐವತ್ತರಷ್ಟು ಆಮ್ಲಜನಕದ ಉತ್ಪಾದನೆಗೆ ಕಾರಣವಾಗಿದೆ.
ಸಮುದ್ರಕಳೆಗಳನ್ನು ಖಾದ್ಯದಲ್ಲಿ ಬಳಸುವ ಪರಂಪರೆ ಆರಂಭವಾಗಿದ್ದು ಚೀನಾದಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ. ನಂತರ ಇದು ಜಪಾನ್, ಕೋರಿಯಾ ದೇಶಗಳಿಗೂ ಹಬ್ಬಿತು. ಆಗ್ನೇಯ ಮತ್ತು ಪೂರ್ವ ಏಷ್ಯಾದ ದೇಶಗಳಲ್ಲಿ ಸಾಂಪ್ರದಾಯಿಕವಾಗಿ ಅಡುಗೆಯಲ್ಲಿ ಬಳಸಲಾಗುತ್ತಿದ್ದ ಈ ಪಾಚಿಗಳಿಗೆ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚು ಉಪಯುಕ್ತ ವಿಟಮಿನ್ ಮತ್ತು ಧಾತುಗಳನ್ನು ಹೊಂದಿರುವ ಕಾರಣಕ್ಕೆ ಇದೀಗ ಎಲ್ಲೆಡೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಸಮುದ್ರಕಳೆಗಳು ಹೆಚ್ಚು ಅಯೋಡಿನ್ ಹೊಂದಿದ್ದು ಥೈರಾಯಿಡ್ ಗ್ರಂಥಿಗಳಿಗೆ ಪೂರಕವಾಗಿರುವ ಜೊತೆಗೆ ವಿಟಮಿನ್ ಕೆ, ಬಿ, ಸತು, ಕಬ್ಬಿಣ ಹೀಗೆ ಹಲವು ಉಪಯುಕ್ತ ಧಾತುಗಳನ್ನು ಹೊಂದಿವೆ. ಇವುಗಳನ್ನು ಮೇವಾಗಿ ಆಡು, ಹಸು ಮತ್ತು ಕುದುರೆಗಳಂತಹ ಸಾಕು ಪ್ರಾಣಿಗಳಿಗೆ ನೀಡಲಾಗುತ್ತದೆ. ಇದರಿಂದ ಅವುಗಳು ಹೊರಸೂಸುವ ಮಿಥೇನ್ ಅನಿಲದ ಪ್ರಮಾಣವು ಕಡಿಮೆಯಾಗುವುದನ್ನು ಗಮನಿಸಲಾಗಿದೆ. ಸಮುದ್ರಕಳೆಯ ಬಹುಪರಾಕ್ ಇಷ್ಟಕ್ಕೇ ನಿಲ್ಲುವುದಿಲ್ಲ. ಗಾಯಕ್ಕೆ ಸುತ್ತಲಾಗುವ ಡ್ರೆಸಿಂಗ್, ಹಲ್ಲಿನ ಸೆಟ್ ತಯಾರಿಸಲು ಬಳಸುವ ಅಚ್ಚು, ಮುದ್ರಣದ ಶಾಯಿ, ಬಟ್ಟೆಗಳ ಮೇಲಿನ ತರಹೇವಾರಿ ಪ್ರಿಂಟಿಂಗ್, ಹಲ್ಲುಜ್ಜುವ ಪೇಸ್ಟು ಹೀಗೆ ಹತ್ತು ಹಲವು ವಸ್ತುಗಳ ತಯಾರಿಕೆಯಲ್ಲಿ ಈ ಕಳೆಗಳನ್ನು ಬಳಸಲಾಗುತ್ತದೆ. ಪ್ಲಾಸ್ಟಿಕ್ ಬದಲಿಗೆ ಪ್ಯಾಕಿಂಗ್ ವಸ್ತುಗಳನ್ನು ತಯಾರಿಸಲು ಮತ್ತು ಇಂಧನಗಳಲ್ಲಿ ಬಳಸುವ ಇಥೆನಾಲ್ ತಯಾರಿಕೆಗೆ ಇದೀಗ ಸಮುದ್ರಕಳೆಗಳನ್ನು ಉಪಯೋಗಿಸುವ ಪ್ರಯೋಗ ಯಶಸ್ಸು ಕಂಡಿದೆ.
2023ರಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ 800 ಕೋಟಿ ರೂಪಾಯಿ ಮೌಲ್ಯದ ಸಮುದ್ರಕಳೆಗಳ ವ್ಯಾಪಾರ ವಹಿವಾಟು ನಡೆದಿದೆ. ಮುಂಬರುವ ವರ್ಷಗಳಲ್ಲಿ ಇವುಗಳ ಬೇಡಿಕೆ ಪ್ರತಿ ವರ್ಷ ಶೇಕಡ 15ರಷ್ಟು ಏರುತ್ತಲೇ ಇರುವುದೆಂಬ ಅಂದಾಜು ಮಾರುಕಟ್ಟೆಯ ಪಂಡಿತರದ್ದು. ಜಾಗತೀಕರಣದ ಪ್ರಭಾವ ಊಟದ ತಟ್ಟೆಯಲ್ಲೂ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಆಹಾರದಲ್ಲಿ ಸಮುದ್ರಕಳೆಯನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸಮುದ್ರಕಳೆಗಳನ್ನು ಕೃಷಿಯಾಗಿ ಸ್ವೀಕರಿಸಿ ರಫ್ತು ಉದ್ಯಮದಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡವರ ಪಟ್ಟಿ ಜಾಗತಿಕವಾಗಿ ದೊಡ್ಡದಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚೀನಾವು ಖಾದ್ಯದಲ್ಲಿ ಬಳಸಲ್ಪಡುವ ಸಮುದ್ರಕಳೆಯ ಉತ್ಪಾದನೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದ್ದು ಇಂಡೊನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ಜಪಾನ್ ನಂತರದ ಸ್ಥಾನದಲ್ಲಿವೆ. ವಿಶ್ವಾದ್ಯಂತ ಸಮುದ್ರಕಳೆಗಳ ಕೃಷಿಯು ಆರ್ಥಿಕವಾಗಿ ಲಾಭದಾಕವಾಗುತ್ತಿರುವುದನ್ನು ಕಂಡು ಭಾರತ ಸರ್ಕಾರವು ಕೇಂದ್ರೀಯ ಕಡಲ ಮತ್ಸೋದ್ಯಮ ಸಂಶೋಧನಾ ಕೇಂದ್ರ (ಸಿಎಂಎಫ್ಆರ್ಐ) ಮೂಲಕ ನಮ್ಮಲ್ಲಿ ಸಮುದ್ರಕಳೆ ಕೃಷಿಯನ್ನು ಉತ್ತೇಜಿಸಲು ಕಾರ್ಯಕ್ರಮ ರೂಪಿಸಿತು. ಅದರ ಮೊದಲ ಹೆಜ್ಜೆಗಳನ್ನು ನಾವು ತಮಿಳುನಾಡಿನ ಮಂಡಪಂ ತೀರದಲ್ಲಿ ಕಾಣಬಹುದು.
ಆರಂಭಿಕ ಹಿನ್ನಡೆಗಳ ನಡುವೆಯೂ ಪಟ್ಟ ಪರಿಶ್ರಮಗಳ ಫಲವಾಗಿ ಇದೀಗ ರಾಮನಾಥಪುರಂ ಜಿಲ್ಲೆಯ ಈ ಪ್ರದೇಶವು ನೀರಿನಲ್ಲಿ ತೇಲುವ ಸಮುದ್ರಕಳೆಯ ತೋಟಗಳಿಂದ ನಳಿನಳಿಸುತ್ತಿದೆ. ಮತ್ಸ್ಯಕ್ಷ್ಯಾಮದ ಫಲವಾಗಿ ಮತ್ಸ್ಯೊದ್ಯಮದಿಂದ ವಿಮುಖರಾಗುತ್ತಿದ್ದ ಇಲ್ಲಿನ ಕಡಲ ಮಕ್ಕಳನ್ನು ಸಮುದ್ರಕಳೆಯು ಮರಳಿ ಕಡಲಿಗೆ ಕರೆತಂದಿದೆ. ಇದೀಗ ಅಲ್ಲಿ ನೂರಕ್ಕೂ ಹೆಚ್ಚು ಕುಟುಂಬಗಳು ಹತ್ತಕ್ಕೂ ಹೆಚ್ಚು ಸ್ತ್ರೀ ಶಕ್ತಿ ಕೇಂದ್ರಗಳು ಈ ಕೃಷಿಕಾಯಕದಲ್ಲಿ ತೊಡಗಿಸಿಕೊಂಡಿದ್ದು ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಇದರ ಪರಿಣಾಮ ತಮಿಳುನಾಡು ವಾಣಿಜ್ಯ ಸಮುದ್ರಕಳೆಯ ಉತ್ಪಾದನೆಯಲ್ಲಿ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಸರ್ಕಾರವು ಕಳೆದ ವರ್ಷದ ಬಜೆಟ್ಟಿನಲ್ಲಿ ಘೊಷಣೆ ಮಾಡಿದಂತೆ ಈ ಭಾಗದ ಆರು ಜಿಲ್ಲೆಗಳನ್ನು ಒಳಗೊಂಡ ಸಮುದ್ರಕಳೆಯ ಪಾರ್ಕ್ಗೆ ಅಡಿಗಲ್ಲು ಹಾಕಿದೆ. ಲಕ್ಷದ್ವೀಪವೂ ಸಹ ತಮಿಳುನಾಡು ಮಾಡೆಲ್ಲನ್ನು ಅನುಕರಿಸುತ್ತಿದ್ದು ಕಳೆದ ಕೆಲವು ವರ್ಷಗಳಲ್ಲಿ ಇಲ್ಲಿನ ಸಮುದ್ರಕಳೆಯ ಉತ್ಪಾದನೆಯು ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದ ಉತ್ತೇಜಿತರಾಗಿರುವ ಆಂಧ್ರ, ಒಡಿಶಾ, ಗೋವಾದ ಉದ್ಯಮಿಗಳು ನಿಧಾನವಾಗಿ ನೀರಿಗಿಳಿಯುತ್ತಿದ್ದಾರೆ. ಈ ಟ್ರೆಂಡು ಬರುವ ದಿನಗಳಲ್ಲಿ ಮತ್ತಷ್ಟು ವ್ಯಾಪಕವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಸದ್ಯಕ್ಕೆ ಭಾರತದ ಸಮುದ್ರಕಳೆಯ ವಾರ್ಷಿಕ ಉತ್ಪಾದನಾ ಮೌಲ್ಯ ಐದು ಸಾವಿರ ಕೋಟಿಯಷ್ಟಿದ್ದು ಸುಮಾರು ಎರಡು ಲಕ್ಷ ಕೃಷಿಕರು ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ನಮ್ಮಲ್ಲಿ ಕಾಣಸಿಗುವ 840 ಸಮುದ್ರಕಳೆಯ ತಳಿಗಳ ಪೈಕಿ ಎಲ್ಲವೂ ರಫ್ತಿಗೆ ಅರ್ಹವಲ್ಲದಿದ್ದರೂ ರಫ್ತಿನಲ್ಲಿ ನಾವು ಜಾಗತಿಕವಾಗಿ ನಲವತ್ತನೇ ಸ್ಥಾನದಲ್ಲಿದ್ದೇವೆ. ಹಾಗೆ ನೋಡಿದರೆ ಈ ಕೃಷಿ ಹೆಚ್ಚು ಹೂಡಿಕೆ ಬೇಡುವ ಉದ್ಯಮವಲ್ಲ. ಹೆಚ್ಚಿನ ಕಳೆಗಳನ್ನು ಹಾಗೆಯೇ ತೇಲಿ ಬಿಟ್ಟು ಅಥವಾ ಬೆತ್ತದ ಕಟಾಂಜನಕ್ಕೆ ಕಟ್ಟಿ ತೇಲಿಸಿ ಬೆಳೆಸಲಾಗುತ್ತದೆ. ಪರಿಣತರ ಮಾರ್ಗದರ್ಶನ, ಕೌಶಲ್ಯ ಮತ್ತು ಪರಿಶ್ರಮವಿದ್ದಲ್ಲಿ ಖಂಡಿತ ಇಲ್ಲಿ ಸಾಧನೆಗೆ ಅವಕಾಶವಿದೆ. ಜಾಗತಿಕವಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಏಳೂವರೆ ಸಾವಿರ ಕಿಲೋಮೀಟರ್ ವ್ಯಾಪ್ತಿಯ ಕಡಲ ತೀರಗಳಲ್ಲಿ ಸಮುದ್ರಕಳೆಯ ಕೃಷಿ ಮತ್ತಷ್ಟು ವಿಸ್ತರಿಸಬೇಕು ಎಂಬ ಕೂಗು ಇದೀಗ ಕೇಳಿಬರುತ್ತಿದೆ. ಆದರೆ ಈ ಕೃಷಿಗೆ ಸವಾಲುಗಳು ನೂರೆಂಟಿವೆ. ಇಲ್ಲಿ ಕಡಲ ಉಬ್ಬರ ಆದಷ್ಟು ಕಡಿಮೆ ಇರುವುದು ಅತಿ ಮುಖ್ಯ. ಹೀಗಾಗಿ ನಮ್ಮ ಕರ್ನಾಟಕದ ಕರಾವಳಿಯಲ್ಲಿ ಅರಬ್ಬೀಯ ಅಬ್ಬರ, ಹಿಗ್ಗುವಿಕೆ, ಕುಗ್ಗುವಿಕೆ ಸ್ವಲ್ಪ ಜಾಸ್ತಿಯೇ ಇರುವುದರಿಂದ ಇಲ್ಲಿ ಈ ಕೃಷಿಯ ಯಶಸ್ಸು ಸ್ವಲ್ಪ ಕಷ್ಟವೇ. ತಮಿಳುನಾಡಿನ ಮಂಡಪಂ ತೀರದಲ್ಲಿ ಕೃಷಿಗೆ ಆಯ್ಕೆ ಮಾಡಿದ್ದು ಕಪ್ಪಾಫಿಕಸ್ ಎಂಬ ಫಾರಿನ್ ತಳಿ. ಇದು ಸಮುದ್ರದಡಿಯ ಹವಳದ ದಿಬ್ಬಗಳಿಗೆ ಮಾರಕವೆಂಬ ಅಪವಾದ ಮೊದಲಿನಿಂದಲೂ ಇದೆ. ಹೀಗಾಗಿ ಈ ಯೋಜನೆ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಎಲ್ಲ ಸವಾಲುಗಳಿಗೆ ಸೂಕ್ತ ಜವಾಬುಗಳನ್ನು ಕಂಡುಹಿಡಿದಲ್ಲಿ ಮತ್ಸ್ಯಕ್ಷ್ಯಾಮದಿಂದ ಕಂಗಾಲಾಗಿರುವ ನಮ್ಮ ಕಡಲಮಕ್ಕಳ ಬಾಳಿನಲ್ಲಿ ಹೊಸಬೆಳಕು ಮೂಡಲಿದೆ.
ಚಿಲಿಕಾದಲ್ಲಿ ನಮ್ಮ ಬೋಟಿನ ಮುಂದೆ ಎರಡು ಸಾರಿ ಟಪಕ್ಕನೆ ಹಾರಿ ಝುಲಕ್ ತೋರಿಸಿ ಹೋದ ಇರಾವಾಡಿ ಡಾಲ್ಪಿನ್ಗಳು ನನ್ನ ಕ್ಯಾಮರಾ ಕಣ್ಣಿಗೆ ಮಾತ್ರ ಮಂಕೆರದವು. ಬಿಸಿಲಿನಿಂದ ಆಗಲೇ ನೆತ್ತಿ ಸುಡುತ್ತಿದ್ದ ಕಾರಣ ವಾಪಸು ಬಂದ ತಕ್ಷಣವೇ ತೀರದಲ್ಲಿದ್ದ ಐಸ್ ಕ್ರೀಂ ಅಂಗಡಿಗೆ ಲಗ್ಗೆ ಇಟ್ಟೆವು. ಪಕ್ಕದಲ್ಲಿ ಐಸ್ ಕ್ರೀಂ ತಿನ್ನುತ್ತಿದ್ದ ಹೆಂಡತಿಗೆ ಕೇಳಿದೆ - ‘‘ಮನೆಯಲ್ಲಿ ಐಸ್ ಕ್ರೀಂ ಮಾಡಿದರೆ ಹರಳು ಹರಳಾಗಿರುತ್ತದೆ ಇದೆಷ್ಟು ಗಾಢವಾಗಿದೆ ಅಲ್ವಾ?’ ‘‘ಏ... ಇದರಲ್ಲಿ ಗಾಢವಾಗಲು ಸಮುದ್ರ ಕಳೆಯ ಪೇಸ್ಟು ಸೇರ್ಸಿರ್ತಾರೆ ಅಷ್ಟೂ ಗೊತ್ತಿಲ್ವಾ?’ ಆ ಕಡೆಯಿಂದ ಉತ್ತರ ಬಂತು.