

ನಾಲಿಗೆ ಒಳ್ಳೆಯದಾದರೆ ನಾಡಿಗೆಲ್ಲ ಒಳ್ಳೆಯದು, ಆಡುವ ಮಾತು ಮನುಷ್ಯ ಸಂಬಂಧಗಳನ್ನು ಬೆಸೆಯಬೇಕಲ್ಲದೆ ಒಡೆಯಬಾರದು.
| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು.
***
ಮಾತೆಂಬುದು ಜ್ಯೋತಿರ್ಲಿಂಗ ಎಂದರು ಅಲ್ಲಮ ಪ್ರಭುದೇವರು. ಮಾತು ವ್ಯಕ್ತಿತ್ವದ ಕನ್ನಡಿ. ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಲು ಹೆಚ್ಚೇನು ಕಷ್ಟಪಡಬೇಕಿಲ್ಲ. ಆತನ ಜತೆ ನಾಲ್ಕು ಮಾತನಾಡಿದರೆ ಸಾಕು. ಮುಖವೆಂಬುದು ಮನುಷ್ಯನ ಮುಖವಾಡ. ಹೀಗಾಗಿ ಆತನ ನಿಜಸಂಸ್ಕಾರ, ವಿಚಾರಗಳು ತಿಳಿಯುವುದು ಮಾತಿನಿಂದ.
ತುಂಬ ಒಳ್ಳೆಯವನು, ಬುದ್ಧಿವಂತ, ಆದರೆ, ಬಾಯಿ ಸರಿ ಇಲ್ಲ ಎಂಬ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ನಿಜ, ಸಮಾಜದಲ್ಲಿ ಮಾತಿಗೇ ಮಹತ್ವ. ಏನಿದ್ದರೇನು? ಎಷ್ಟಿದ್ದರೇನು? ಬಾಯಲ್ಲಿ ಒಳ್ಳೆಯ ಮಾತುಗಳು ಬರದಿದ್ದ ಮೇಲೆ ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಎಲ್ಲಿಯ ಬೆಲೆ? ನುಡಿದರೆ ಮುತ್ತಿನ ಹಾರದಂತಿರಬೇಕು ಎಂದರು ಬಸವಣ್ಣ. ಅಂದರೆ, ಆಡುವ ಮಾತಿಗೊಂದು ಅರ್ಥ ಇರಬೇಕು, ತೂಕ ಇರಬೇಕು. ಲೋಕಸಮ್ಮತವಾಗಿರಬೇಕು. ನಮ್ಮ ಮಾತು ನಮ್ಮ ಸ್ವಂತದ್ದೇ ಆಗಿದ್ದರೂ, ಲೋಕವಿರುದ್ಧವಾಗಿದ್ದರೆ ಅದು ವ್ಯರ್ಥ.
ಮೃಗಗಳಿಗೂ ಮನುಷ್ಯರಿಗೂ ವ್ಯತ್ಯಾಸವೆಂದರೆ ಮಾತು. ಮಾತನಾಡುವ ಶಕ್ತಿ ಪ್ರಕೃತಿ ಕೊಟ್ಟ ವರ. ಹುಟ್ಟಿದ ಮಗು ಮಾತು ಕಲಿಯುವವರೆಗೆ ಅದರ ಭಾವ, ಭಾಷೆ ಅರ್ಥವಾಗುವುದು ಹೆತ್ತ ತಾಯಿಗೆ ಮಾತ್ರ. ಮಗುವಿನ ಅಳುವಿಗೆ ನಾನಾ ಅರ್ಥ. ಮಗು ಅಳುತ್ತಿರುವುದು ಹೊಟ್ಟೆ ಹಸಿವಿಗೋ, ಹೊಟ್ಟೆ ನೋವಿಗೋ ಎನ್ನುವುದನ್ನು ಅಮ್ಮ ಮಾತ್ರ ಅರ್ಥಮಾಡಿಕೊಳ್ಳಬಲ್ಲಳು. ಅದೇ ಮಗು ಬೆಳೆಯುತ್ತ ಮಾತು ಕಲಿಯುತ್ತ ಸಂವಹನ ಕಲಿತ ಮೇಲೆ ಅದರದ್ದೇ ಜಗತ್ತು. ಮಕ್ಕಳು ಅಂಬೆಗಾಲಿಡುತ್ತ, ಏಳುತ್ತ, ಬೀಳುತ್ತ, ನಡೆಯುತ್ತ ಕಲಿಯುವುದು ಮಾತನ್ನು. ಅಂದರೆ, ಮಕ್ಕಳಿಗೆ ಆರಂಭದಿಂದಲೇ ಒಳ್ಳೆಯ ಮಾತು ಆಡುವುದನ್ನು ಕಲಿಸಿದರೆ, ಅಷ್ಟರ ಮಟ್ಟಿಗೆ ಒಳ್ಳೆಯ ಸಂಸ್ಕಾರ ಕೊಟ್ಟಂತೆ.
ಮಾತು ಮನುಷ್ಯನಿಗೆ ವರ. ವಿವೇಚನೆ ಮರೆತು ಆಡಿದಾಗ ಶಾಪವೂ ಹೌದು. ದೇಶ, ಕಾಲ, ಸಂದರ್ಭ ಎಂಬ ಔಚಿತ್ಯವೊಂದಿದೆ. ಈ ಪ್ರಜ್ಞೆಯನ್ನು ಅವಜ್ಞೆ ಮಾಡಿದಾಗಲೇ ಅನರ್ಥ. ಅಂದರೆ, ಎಲ್ಲಿ? ಯಾವ ಸಂದರ್ಭದಲ್ಲಿ? ಯಾರ ಸಮ್ಮುಖದಲ್ಲಿ ಯಾವ ರೀತಿ ಮಾತನಾಡಬೇಕೆಂಬ ವಿವೇಕ ಇಲ್ಲದೇ ಆಡುವ ಮಾತುಗಳಿಂದ ಅಪಾರ್ಥ, ಅನರ್ಥ ಸಂಭವಿಸುತ್ತದೆ.
ಮನುಷ್ಯನಿಗೆ ಮಾತೆನ್ನುವುದು ಶಕ್ತಿ. ಓರ್ವ ಭಾಷಣಕಾರ ನಿಮಿಷಕ್ಕೆ ಸರಾಸರಿ 150 ಪದ ಮಾತನಾಡಬಲ್ಲ. ಪ್ರತೀ ಸಾವಿರ ಪದ ಮಾತನಾಡುವಾಗ ಒಂದೋ ಎರಡೋ ತಪು್ಪಗಳಾಗುವುದು ಸಹಜ ಎನ್ನುತ್ತದೆ ಒಂದು ಅಧ್ಯಯನ. ಸತತವಾಗಿ ಮಾತನಾಡುವಾಗ ಕನಿಷ್ಠ 7 ನಿಮಿಷಗಳಿಗೊಮ್ಮೆಯಾದರೂ ತೊದಲುತ್ತೇವೆ ಅಥವ ಬಾಯ್ತಪು್ಪವುದಂತೆ. ಹೀಗೆ ಅನೇಕ ಬಾರಿ ದೀರ್ಘವಾಗಿ ಮಾತನಾಡುವಾಗ ನಡುನಡುವೆ ಕೆಲವು ಅಪಶಬ್ದಗಳು ನುಸುಳುತ್ತಿರುತ್ತವೆ. ಇದು ಉದ್ದೇಶಪೂರ್ವಕ ಆಗಿರದೆ, ಆಕಸ್ಮಿಕ ತಪು್ಪ ಮಾತುಗಳಾಗಿರುತ್ತವೆ. ಅರಿಯದೆ ಮಾಡಿದರೆ ಪ್ರಮಾದ, ಅರಿತೂ ಮಾಡಿದರೆ ಅಪರಾಧ.
ಕೆಲವರ ಪಾಲಿಗೆ ಮಾತೆನ್ನುವುದು ಅಸ್ತ್ರ, ಮಾತೇ ಅವರ ಶಸ್ತ್ರ. ಅಂಥವರು ಅವಕಾಶ ದೊರೆತಾಗಲೆಲ್ಲ ಮಾತನ್ನು ಖಡ್ಗದಂತೆ ಝುಳಪಿಸುತ್ತಾರೆ. ಮೊನಚು ಮಾತುಗಳನ್ನಾಡುವುದೇ ತಮ್ಮ ಶಕ್ತಿ ಎಂದು ಭಾವಿಸಿರುತ್ತಾರೆ. ಮಾತಿನಲ್ಲೇ ಸೋಲಿಸಿಬಿಟ್ಟೆ ಎಂದು ಬೀಗುತ್ತಿರುತ್ತಾರೆ. ನಮ್ಮ ಮಾತು ನಮ್ಮ ಆಸ್ತಿ. ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಆದರೆ, ನಮ್ಮ ಮಾತಿನ ಸ್ವಾತಂತ್ರ್ಯದಿಂದ ಇನ್ನೊಬ್ಬರ ವ್ಯಕ್ತಿತ್ವದ ಹರಣ ಆಗಬಾರದಲ್ಲ. ಮಾತುಗಳು ಮನಸ್ಸನ್ನು ಅರಳಿಸಬೇಕೇ ಹೊರತು, ಕೆರಳಿಸಬಾರದು. ನಮ್ಮ ಮಾತು ನಮ್ಮ ಹಕ್ಕು. ಆದರೆ, ಬೇರೆಯವರನ್ನು ನೋಯಿಸುವ ಹಕ್ಕು ಯಾರಿಗೂ ಇರುವುದಿಲ್ಲ.
ಮಾತನಾಡುವುದೂ ಒಂದು ಕಲೆ. ಎಲ್ಲರಿಗೂ ಸೊಗಸಾಗಿ ಮಾತನಾಡಲು ಬರುವುದಿಲ್ಲ. ಆದರೆ, ಮಾತು ಕಲಾತ್ಮಕವಾಗಿಯೇ ಇರಬೇಕೇ ಹೊರತು ನಮ್ಮ ವ್ಯಕ್ತಿತ್ವಕ್ಕೆ ಅಂಟಿದ ಕಲೆ ಆಗಬಾರದು, ಬೇರೊಬ್ಬರ ಚಾರಿತ್ರ್ಯದ ಕೊಲೆ ಆಗಬಾರದು. ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡುವಾಗ ಅನೇಕರು ಚಪ್ಪಾಳೆಗಳಿಂದ ಉತ್ತೇಜಿತರಾಗಿ ಔಚಿತ್ಯ ಮರೆತುಬಿಡುತ್ತಾರೆ. ಆಡಬಾರದ್ದನ್ನೆಲ್ಲ ಆಡಿಬಿಡುತ್ತಾರೆ. ನಮ್ಮ ನಂಬಿಕೆ ನಮ್ಮದು. ನಮ್ಮ ವಾದವನ್ನೇ, ನಮ್ಮ ಸಿದ್ಧಾಂತವನ್ನೇ ಉಳಿದವರೂ ಅನುಸರಿಸಬೇಕೆಂದೇನೂ ಇಲ್ಲ. ಅವರವರ ಸಿದ್ಧಾಂತ ಅವರವರದು. ನಾವು ಸರಿಯಾಗಿದ್ದರೆ ನಮ್ಮ ಹೆಮ್ಮೆ. ಆದರೆ, ಬೇರೆಯವರು ಸರಿ ಇಲ್ಲ ಎಂದು ಖಂಡಿಸಲು ನಮಗೆ ಅಧಿಕಾರ ಕೊಟ್ಟವರಾರು? ಮಾತು ವ್ಯಕ್ತಿತ್ವದ ಕನ್ನಡಿ. ನೆಲಕ್ಕೆ ಬಿದ್ದು ಚೂರಾದ ಕನ್ನಡಿಯನ್ನು ಮತ್ತೆ ಮೊದಲಿನಂತೆ ಜೋಡಿಸಲು ಸಾಧ್ಯವೇ?
ಮಾತಿಗೆ ಅಗಾಧ ಶಕ್ತಿ. ಯೋಗ್ಯವಾದ ಮಾತು ಚಿಕ್ಕವರನ್ನೂ ದೊಡ್ಡ ಸ್ಥಾನಕ್ಕೇರಿಸುತ್ತದೆ. ಅನುಚಿತ ಮಾತು ದೊಡ್ಡವರನ್ನೂ ಸಣ್ಣವರಾಗಿಸಿಬಿಡುತ್ತದೆ. ಅನೇಕ ಮಹನೀಯರು ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿರುತ್ತಾರೆ. ಎತ್ತರಕ್ಕೇರಿರುತ್ತಾರೆ. ಅಪಾರ ಅಭಿಮಾನಿಗಳನ್ನೂ ಹೊಂದಿರುತ್ತಾರೆ... ಜನ ಅವರನ್ನು ಆಧರಿಸುತ್ತಿರುತ್ತಾರೆ, ಆರಾಧಿಸುತ್ತಿರುತ್ತಾರೆ, ಅನುಸರಿಸುತ್ತಿರುತ್ತಾರೆ. ಅಂಥ ಜನಾನುರಾಗಿ ವ್ಯಕ್ತಿಗಳು ಸಾರ್ವಜನಿಕವಾಗಿ ಹೆಚ್ಚಿನ ಜವಾಬ್ದಾರಿ ಮೆರೆಯಬೇಕಾಗುತ್ತದೆ. ಸ್ವಲ್ಪ ಮೈಮರೆತರೂ ಆಭಾಸಗಳಾಗುತ್ತವೆ. ಆವೇಶದಲ್ಲಿ, ಉನ್ಮಾದದಲ್ಲಿ ಹೇಳುವ ಒಂದು ಮಾತು ಅನೇಕರಿಗೆ ವೇದನೆ ತರುವಂತಿದ್ದರೆ, ಸಣ್ಣ ಮಾತು ದೊಡ್ಡವರನ್ನು ಕೆಳಕ್ಕೆಳೆದುಬಿಡುತ್ತದೆ.
ನಿಂದಕರಿರಬೇಕು ಎಂದು ದಾಸರೇ ಹೇಳಿದ್ದಾರೆ. ಎಲ್ಲರನ್ನೂ ಎಲ್ಲರೂ ಒಪ್ಪಬೇಕೆಂದೇನೂ ಇಲ್ಲ. ಗೌತಮ ಬುದ್ಧನಿಗೂ ವಿರೋಧಿಗಳಿದ್ದರು. ನಮಗೆ ಯಾರದೋ ಕೊರಿಯರ್ ಬರುತ್ತದೆ, ನಾವದನ್ನು ಸ್ವೀಕರಿಸದೇ ಇದ್ದರೆ, ಕಳುಹಿಸಿದವರ ವಿಳಾಸಕ್ಕೆ ವಾಪಸ್ ಹೋಗುತ್ತದೆ. ಅಕ್ಕಪಕ್ಕದಲ್ಲಿದ್ದವರು ಹಣ್ಣೋ, ಏನೋ ತಿನ್ನುತ್ತಿರುತ್ತಾರೆ. ನಮ್ಮನ್ನು ಕಂಡಾಗ ನೀವೂ ತಿನ್ನಿ ಎಂದು ಕೊಡಲು ಮುಂದಾಗುತ್ತಾರೆ. ನಾವು ಬೇಡ ಎಂದು ನಿರಾಕರಿಸಿದರೆ, ಅವರು ಕೊಡಲು ಉದ್ದೇಶಿಸಿದ್ದ ಹಣ್ಣು ಅವರ ಬಳಿಯೇ ಉಳಿಯುತ್ತದೆ. ಕೆಟ್ಟ ಮಾತುಗಳು ಕೂಡ ಅಷ್ಟೇ. ಆಡಿದವರ ಮಾತುಗಳನ್ನು ನಿರ್ದಿಷ್ಟ ವ್ಯಕ್ತಿ ಸ್ವೀಕರಿಸದೇ ಇದ್ದರೆ, ಆಡಿದವರ ಬಳಿಯೇ ಉಳಿಯುತ್ತದೆ.
ರಾಜಕೀಯ ಭಾಷಣಗಳು ವಿಚಾರಗಳ ಪ್ರಚಾರವಾಗದೆ ಎದುರಾಳಿಗಳ ತೇಜೋವಧೆಗೆ ಬಳಕೆಯಾಗುತ್ತಿರುವುದು ಸರ್ವೆಸಾಮಾನ್ಯವಾಗಿ ಬಿಟ್ಟಿದೆ. ಮುಖಂಡರು ಏನು ಹೇಳಿದರೂ ಬೆಂಬಲಿಗರು ಕೇಕೆ ಹಾಕುತ್ತಾರೆ, ಚಪ್ಪಾಳೆ ತಟ್ಟುತ್ತಾರೆ. ಹಾಗೆಂದು ಎದುರಾಳಿಗಳ ಬಗ್ಗೆ, ಜನರ ಬಗ್ಗೆ, ಸಮುದಾಯದ ಬಗ್ಗೆ, ಸಮಾಜದ ಬಗ್ಗೆ ಏನು ಬೇಕಾದರೂ ಹೇಳಿ ಜೈಸಬಹುದೆಂಬುದು ಅನುಚಿತ. ಕೆಟ್ಟ ಮಾತುಗಳು ಆ ಕ್ಷಣದಲ್ಲಿ ವಿವಾದವೆಬ್ಬಿಸುತ್ತವೆ, ವಾತಾವರಣ ರಾಡಿಗೊಳಿಸುತ್ತವೆ. ಒಳ್ಳೆಯ ಮಾತುಗಳು ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತವೆ.
ಜನಪ್ರಿಯತೆ ಎನ್ನುವುದು ಅನೇಕ ಬಾರಿ ಆಡಬಾರದ ಮಾತುಗಳನ್ನು ಆಡಿಸಿಬಿಡುತ್ತದೆ. ಹಣ, ಪ್ರಚಾರ ಮತ್ತು ಪ್ರಸಿದ್ಧಿಯ ಪ್ರಭಾವಳಿಯ ಭ್ರಮೆಯಲ್ಲಿ ಅನೇಕರು ತರಹೇವಾರಿ ಮಾತುಗಳನ್ನಾಡಿ ಕೊನೆಗೆ ಜೀರ್ಣಿಸಿಕೊಳ್ಳಲಾಗದೆ ಒದ್ದಾಡುತ್ತಾರೆ. ಹಾಸ್ಯದ ಹೆಸರಲ್ಲಿ ಅಪಹಾಸ್ಯ ಮಾಡುವವರು, ತಾವು ಮಾತ್ರ ಸರಿ, ಬೇರೆ ಎಲ್ಲರ ವಿಚಾರವೂ ತಪು್ಪ ಎಂಬ ಭ್ರಮೆಯಲ್ಲಿರುವವರು... ಹೀಗೆ ಅನೇಕರು ಮಾತನಾಡಿ ಮಹತ್ವ ಕಳೆದುಕೊಳ್ಳುತ್ತಿರುತ್ತಾರೆ. ಕಲೆಗೆ, ಕಲಾವಿದರಿಗೆ ಜಾತಿ ಇರುವುದಿಲ್ಲ. ಕಲಾವಿದನ ಜಾತಿ ಯಾವುದೆಂದು ಅರಿತುಕೊಂಡು ಯಾರೂ ಅಭಿಮಾನಿಸುವುದಿಲ್ಲ. ಶುದ್ಧ ಕಲೆಯನ್ನು, ಕಲೆಗಾರನನ್ನು ಆರಾಧಿಸುವುದು, ಅಭಿಮಾನಿಸುವುದು ನಮ್ಮ ಸಂಸ್ಕೃತಿ. ಅಭಿಮಾನ ಎನ್ನುವುದು ಯಾವಾಗಲೂ ಜಾತ್ಯತೀತ. ಹಾಗಾಗಿ ಮಾತುಗಳಲ್ಲೂ ಪ್ರೀತಿ ಇರಬೇಕೇ ಹೊರತು ಜಾತಿ ಬರಬಾರದು.
ಮಾತು-ಕೃತಿಯ ನಡುವೆ ವ್ಯತ್ಯಾಸವಿರಬಾರದು. ನುಡಿದಂತೆ ನಡೆದವನು ರಾಮ. ನಮ್ಮದು ರಾಮ ಸಂಸ್ಕೃತಿಯ ಭಾರತ. ಕೃಷ್ಣಾವತಾರದಲ್ಲಿ ಲೀಲೆಗಳು ಜಾಸ್ತಿ. ಕೃಷ್ಣ ಮಾಡಿದ್ದೆಲ್ಲವನ್ನೂ ಮನುಷ್ಯರು ಮಾಡುವುದು ಕಷ್ಟ. ಆದರೆ, ರಾಮ ಹಾಗಲ್ಲ. ಜನಸಾಮಾನ್ಯರಿಂದಲೂ ಅನುಸರಣೆ ಯೋಗ್ಯ, ಅನುಕರಣೆ ಸಾಧ್ಯ ಎಂಬಂಥದ್ದನ್ನೇ ರಾಮ ಹೇಳಿದ. ಸ್ವತಃ ಅದೇ ರೀತಿ ಬದುಕಿದ. ಪವಾಡಗಳು ಎಲ್ಲರಿಂದ ಸಾಧ್ಯವಿಲ್ಲ. ಹಾಗಾಗಿ ಪವಾಡಸದೃಶವಾಗಿ ಏನೋ ಮಾಡಿಬಿಡುತ್ತೇವೆ ಎಂಬ ಹುಂಬತನಕ್ಕಿಂತ ಸಾಧ್ಯವಾಗುವುದನ್ನೇ ಮಾಡುವ, ಮಾಡುವುದನ್ನೇ ಮಾತಾಡುವ ಅಭ್ಯಾಸ ಬೆಳೆಸಿಕೊಳ್ಳುವುದು ನಮಗೂ ಕ್ಷೇಮ, ಸಮಾಜಕ್ಕೂ ಕ್ಷೇಮ.
ತಪ್ಪು ಮಾಡೋದು ಸಹಜ ಕಣೋ... ತಿದ್ದಿ ನಡೆಯೋನು ಮನುಜ ಕಣೋ... ತಪ್ಪು ಮಾಡುವುದು ಮನುಷ್ಯ ಸಹಜ ಗುಣ. ತಪ್ಪನ್ನು ತಿದ್ದಿಕೊಂಡು ನಡೆಯುವ ಮನುಜ ಧರ್ಮವನ್ನು ನಾವು ಕಲಿಯಬೇಕು. ಎಲ್ಲ ತಪ್ಪುಗಳು ಆಕಸ್ಮಿಕವಲ್ಲ. ಕೆಲವು ಬಾರಿ ಯಾವುದೋ ಪ್ರಚೋದನೆಯಿಂದ, ಬಾಹ್ಯ ಕಾರಣದಿಂದ ಗೊತ್ತಿದ್ದೂ ತಪ್ಪು ಮಾಡಿರುತ್ತೇವೆ. ಕೆಲವೊಂದು ಮಾತುಗಳು ಅನುದ್ದೇಶಿತವಾಗಿ ಆಡಿದ್ದರೆ ಪ್ರಾಮಾಣಿಕವಾಗಿ ತಿದ್ದುಕೊಳ್ಳುವುದೇ ಯೋಗ್ಯ. ತಪ್ಪು ಎಂದು ಮನಸ್ಸಿಗೆ ಮನವರಿಕೆ ಆದ ಮೇಲೂ, ಅದನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆ ಏಕೆ? ನಮ್ಮ ಮಾತು ತಪ್ಪೆಂದು ಮನವರಿಕೆ ಆಗಿದ್ದರೆ, ಮನಃಪೂರ್ವಕವಾಗಿ ಒಪ್ಪಿಕೊಳ್ಳೋಣ, ಅಲ್ಲಿ ಭಾಷಾ ಚಮತ್ಕಾರದ ಮಾತುಗಳೇಕೆ? ಸಾಮಾನ್ಯರು ಆಡುವ ಮಾತುಗಳು ಅವರಿಗಷ್ಟೇ ಸೀಮಿತ.
ಗಣ್ಯರು ಆಡುವ ಮಾತು ಅನೇಕರನ್ನು ಪ್ರಭಾವಿಸುತ್ತದೆ. ಕೆಲವೊಮ್ಮೆ ಅಪ್ರಿಯವಾಗಿದ್ದರೂ ಸತ್ಯ ನುಡಿಯಲು ಹಿಂಜರಿಯಬಾರದು. ಕೆಲವೊಮ್ಮೆ ಸತ್ಯವಾದರೂ, ಅಪ್ರಿಯವಾದುದನ್ನು ನುಡಿಯಬಾರದು. ಒಟ್ಟಿನಲ್ಲಿ ಎಲ್ಲವೂ ಔಚಿತ್ಯವನ್ನು ಅವಲಂಬಿಸಿದ್ದು. ಮಾತುಗಳು ಪ್ರೀತಿ ಹಂಚುವುದಾದರೆ ಸರಿ.
ಜನರ ನಡುವೆ ದ್ವೇಷದ ಕಿಡಿ ಹಚ್ಚುವಂಥ ಮಾತುಗಳನ್ನು ಆಡಿ ಸಾಧಿಸುವುದಾದರೂ ಏನು? ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯೇ ಇದೆ. ಮಾತು ಸಿಹಿಯಾಗಿದ್ದರೆ, ಮನಸ್ಸೂ ಸಿಹಿ, ಸುತ್ತಮುತ್ತಲ ವಾತಾವರಣವೂ ಸಿಹಿ.
ನಾದಾತವ್ಯಂ ನ ದಾತವ್ಯಂ ಕರ್ತವ್ಯಂ ನ ಚ ಕಿಂಚನ
ಸಾಂತ್ವಮೇಕಂ ಪ್ರಯೋಕ್ತವ್ಯಂ ಸರ್ವಂ ತಸ್ಯ ವಶೇ ಜಗತ್
ಯಾರಿಗೂ ಏನನ್ನೂ ಕೊಡಬೇಕಿಲ್ಲ, ಯಾರಿಂದಲೂ ಏನನ್ನೂ ಪಡೆಯಬೇಕಿಲ್ಲ. ಏನನ್ನೂ ಮಾಡಬೇಕಾಗಿಯೂ ಇಲ್ಲ. ಒಳ್ಳೆಯ ಮಾತುಗಳನ್ನಾಡಿದರೆ ಸಾಕು. ಜಗತ್ತೇ ಅಂಥವರ ವಶವಾಗುತ್ತದೆ.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)