ನಮ್ಮ ಕಡೆ ಬಹುತೇಕ ಎಲ್ಲ ಹೆಂಗಸರು ಗಂಡನಿಗೆ ಹೇಳುವ ‘ಸರ್ವೆಸಾಮಾನ್ಯ ಮಾತು’ ಇದು.. ಇದಕ್ಕೆ ಕಾರಣವೂ ಇದೆ. ಹುಟ್ಟಿದ ಮನೆ, ಹುಟ್ಟಿದೂರು, ಹೆತ್ತವರು ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು, ತವರಿನ ಬಳ್ಳಿ ಕತ್ತರಿಸಿಕೊಂಡು, ಮೂರು ಗಂಟು ಹಾಕಿದ ವ್ಯಕ್ತಿಯನ್ನು ನಂಬಿಕೊಂಡು, ಅಪರಿಚಿತ ಮನೆಯಲ್ಲಿ ಮಡದಿಯಾಗಿ, ಸೊಸೆಯಾಗಿ, ತಾಯಿಯಾಗಿ ಹೊಸಹೊಸ ಸಂಬಂಧಗಳನ್ನು ರೂಢಿಸಿಕೊಂಡು, ಬದುಕಿಗೆ ಹೊಸ ಅರ್ಥಗಳನ್ನು ಕಂಡುಕೊಂಡು, ಗಂಡನ ಮನೆತನದ ವಂಶವೃಕ್ಷವನ್ನು ಮುಂದುವರಿಸಿಕೊಂಡು ಹೆಣ್ಣು ಬದುಕನ್ನು ಸಾಗಿಸಿಬಿಡುತ್ತಾಳೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ..’ ಎಂಬ ಗಾದೆ ಮಾತು ಹುಟ್ಟಿಕೊಂಡಿದ್ದೂ ಹೀಗೆ. ಅದೇ ಕಾರಣಕ್ಕೇ ಹೆಣ್ಣಿನ ಬದುಕನ್ನು ನದಿಗೆ ಹೋಲಿಸುತ್ತಾರೆ. ನದಿಯೊಂದು ಉಗಮದಿಂದ ಸಂಗಮದವರೆಗೆ ಹರಿಯುವ ಪ್ರಕ್ರಿಯೆಯಲ್ಲಿ ಆಚೆ-ಈಚೆ ಎರಡೂ ದಂಡೆಗಳ ಜೀವನಾಡಿಯಾಗುವಂತೆ, ಹೆಣ್ಣು ತವರುಮನೆ, ಗಂಡನಮನೆ ಎರಡೂ ಕಡೆ ಬೆಳಗುತ್ತಾಳೆ. ಆದರೆ, ಗಂಡನೆನಿಸಿಕೊಂಡವನಿಗೆ ಇಂಥ ತಾಪತ್ರಯವಿಲ್ಲ. ಆತ, ಕೆರೆಯಂತೆ, ಬಾವಿಯಂತೆ ಇದ್ದಲ್ಲೇ ಇದ್ದುಬಿಡುತ್ತಾನೆ. ಸಮಾಜದ ಸರಿಗಮದಲ್ಲಿ ಗಂಡು ಸ್ಥಾಯಿ ಭಾವವಾದರೆ, ಹೆಣ್ಣು ಸಂಚಾರಿ ಭಾವ!