ಮುಖವಾಡಗಳ ಜಗತ್ತಿನಲ್ಲಿ ಬದುಕಿನ ನಾನಾ ಮುಖ!

ವಿಶೇಷ ಅಂಕಣ
ವಿಶೇಷ ಅಂಕಣ
Published on

ಜಾರ್ಜ್ ‘ಮೊದಲೇ ಯಾರನ್ನಾದರೂ ಇಷ್ಟಪಟ್ಟಿದ್ದರೆ ಈಗಲೇ ಹೇಳಿಬಿಡು. ನನಗೇನೂ ಅಭ್ಯಂತರ ಇಲ್ಲ. ನನಗೆ ಸುಳ್ಳು ಹೇಳುವವರು, ಮೋಸ ಮಾಡುವವರನ್ನು ಕಂಡರೆ ಆಗಲ್ಲ’ ಎಂದು ಆತ ಹೇಳುತ್ತಾನೆ.

‘ಇಲ್ಲ, ಅಂಥದ್ದೇನೂ ಇಲ್ಲ. ನೀವು ನನಗೆ ಇಷ್ಟವಾಗಿದ್ದೀರಿ..’ ಅವಳ ಇಂಪಾದ ಮಾತು, ಲಜ್ಜೆಯ ಹಾವ, ಪರವಶಗೊಳಿಸುವ ನಗುವಿನ ಮೋಡಿಯಲ್ಲಿ ಆತ ಮೈಮರೆಯುತ್ತಾನೆ. ‘ಹಗಲೆಲ್ಲೊ ಹಾರಿದವು, ಇರುಳೆಲ್ಲೊ ಜಾರಿದವು, ಋತು ನಿದ್ರೆ ಮಾಡಿದವು ಬುಗುರಿಯೊಳು’ ಎಂಬಂತೆ ಅವರಿಬ್ಬರ ಸಂಸಾರದ ಸಖೀಗೀತೆಯಲ್ಲಿ ಎರಡು ಮಕ್ಕಳ ಜನನವೂ ಆಗುತ್ತದೆ. ಮಕ್ಕಳಿಬ್ಬರೇ ಸಾಕು, ಬದುಕಿಗಿನ್ನೇನು ಬೇಕು ಎಂಬ ಸಂತೃಪ್ತಿಯಿಂದ ಆತ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರ ಬಳಿ ಹೋಗುತ್ತಾನೆ. ‘ನಿನಗೆ ಮಕ್ಕಳಾಗುವ ಸಾಧ್ಯತೆಯೇ ಇಲ್ಲವಲ್ಲ? ನಿನಗೇಕೆ ಶಸ್ತ್ರಚಿಕಿತ್ಸೆ’ ಎಂದು ವೈದ್ಯ ಹೇಳುವಾಗ, ‘ಅರೆ! ನನಗೆ ಇಬ್ಬರು ಮಕ್ಕಳಿದ್ದಾರೆ..’ ಎಂಬ ಮಾತು ಬಾಯಿಂದ ಚಿಮ್ಮಿದರೂ, ಏಕಾಏಕಿ ಎದೆಗೆ ಕರೆಂಟ್ ಶಾಕ್ ಕೊಟ್ಟಂತೆ ಆಘಾತ..

ಆನಂದಸಾಗರವೆಂದು ಭಾವಿಸಿದ್ದ ಸಂಸಾರದೊಳಗೆ ಹೊಸ ಸ್ವರ ಸೇರಿಕೊಂಡಿದ್ದು ಯಾವಾಗ? ಹೇಗೆಂಬ ಶಂಕೆಯ ಬೆಂಕಿಗೆ ತಲೆಕೊಟ್ಟು ಯಾವತ್ತಿಗಿಂತ ಹೊತ್ತಿಗೆ ಮೊದಲು ಮನೆಗೆ ಬಂದು ಮುಂಬಾಗಿಲು ನೂಕುವ ಆತನಿಗೆ, ತಾನು ಜೋಡಿ ಮಕ್ಕಳ ತಂದೆಯಾಗಿದ್ದಕ್ಕೆ ಪ್ರತ್ಯಕ್ಷಸಾಕ್ಷ್ಯ ಮಂಚದ ಮೇಲೆ ಕಾಣುತ್ತದೆ. ನಿರುಪದ್ರವಿಯಾಗಿ ಬದುಕು ಕಟ್ಟಿಕೊಂಡವನಿಗೆ ಈ ದೃಶ್ಯ ಕಂಡು ನೂರು ಸುತ್ತಿಗೆಯಿಂದ ತಲೆಗೆ ಪೆಟ್ಟು ಕೊಟ್ಟ ಯಾತನೆ. ಹೊಲ-ಮನೆ ಕೆಲಸಕ್ಕೆ ಸಹಾಯವಾಗಲಿ ಎಂದು ತವರಿನಿಂದ ಕರೆಸಿಕೊಂಡಿದ್ದ ಪಾಪದ ಹುಡುಗನ ಜತೆ ಪತ್ನಿ ಪಾಪದ ಕೊಡ ತುಂಬಿಸಿದ್ದನ್ನು ಕಂಡು ಆತ ಹುಚ್ಚನಾಗುತ್ತಾನೆ. ರಾಕ್ಷಸನಾಗುತ್ತಾನೆ, ಕೊಲೆಪಾತಕನಾಗುತ್ತಾನೆ. 

ಒಂಟಿಯಾಗಿದ್ದ ತನಗೆ ದೂರದ ಸಂಬಂಧ ಹುಡುಕಿ ಬಲವಂತವಾಗಿ ಮದುವೆ ಮಾಡಿಸಿದ್ದ ಅಮ್ಮ, ಕೆಲವೇ ದಿನಗಳಲ್ಲಿ ಏಕಾಏಕಿ ಸಾವಿನ ಮನೆ ಬಾಗಿಲು ಬಡಿದಿದ್ದು ಸಹಜವಲ್ಲ, ತನ್ನಿಂದ ಸತ್ಯ ಮುಚ್ಚಿಡುವ ಸಲುವಾಗಿ ಮೋಹದ ಮಡದಿ ಮಾಡಿದ ಸಾಕ್ಷ್ಯನಾಶ ಎಂಬ ವಿಚಾರ ತಲೆಗೆ ರಾಚುತ್ತದೆ. ಅಲ್ಲಿಗೆ ಆತನ ಮನೆ- ಮನಸ್ಸು ಸ್ಮಶಾನವಾಗುತ್ತದೆ. ತಪು್ಪ ಮಾಡಿದ ಇಬ್ಬರ ಜತೆಗೆ, ತಪ್ಪೇ ಮಾಡದ ಎರಡು ಮಕ್ಕಳೂ ಆತನ ಕ್ರೌರ್ಯದ ಕೊಡಲಿಗೆ ಸಿಕ್ಕು ಮಣ್ಣಿನ ಮಡಿಲು ಸೇರುತ್ತವೆ.

ಚೈತಾಲಿ

ಮನೋವೈದ್ಯಕೀಯ ವ್ಯಾಸಂಗ ಮುಗಿಸಿ ಆಪ್ತ ಸಲಹಾ ಕೇಂದ್ರ ತೆರೆದಿದ್ದ ಆಕೆಗೆ ಆತನೇ ಮೊದಲ ಪೇಷೆಂಟ್. ಪತ್ನಿಯ ಆತ್ಮಹತ್ಯೆ ಬಳಿಕ ಖಿನ್ನತೆಯ ಬಲೆಗೆ ಸಿಲುಕಿದ್ದ ಆತ ತನ್ನ ಮನಸ್ಸಿನ ದುಗುಡವನ್ನೆಲ್ಲ ಆಕೆಯ ಬಳಿ ಬಿಚ್ಚಿಡುತ್ತಲೇ, ಕೌನ್ಸೆಲಿಂಗ್ ಅವಧಿಯಲ್ಲಿ ಆಕೆಯಿಂದ ಸಿಗುವ ಸಾಂತ್ವನ- ಸಮಾಧಾನ ಜೀವನಪೂರ್ತಿ ಬೇಕೆಂದು ನಿವೇದಿಸಿಕೊಳ್ಳುತ್ತಾನೆ. ಹೆತ್ತವರ ವಿರೋಧವನ್ನೂ ಲೆಕ್ಕಿಸದೆ ಆಕೆ ಭಾವನೆ ಹಂಚಿಕೊಂಡವನ ಜತೆ ಜೀವನ ಹಂಚಿಕೊಳ್ಳುತ್ತಾಳೆ. ವೈದ್ಯರಾದವರು ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು.. ಇಷ್ಟವೆಂದು ಮನೆಗೆ ತಂದಿಟ್ಟುಕೊಂಡರೆ, ಮನೆಯೇ ಹುಚ್ಚಾಸ್ಪತ್ರೆಯಾಗುತ್ತದೆ. ಚಿಕಿತ್ಸೆ ನೀಡುವವರೇ ಚಿಕಿತ್ಸೆ ಪಡೆಯಬೇಕಾಗುತ್ತದೆ. 

ಸಭ್ಯತೆ, ಸಂಭಾವಿತ ಗುಣಗಳು ಪರಿಚಯದ ಹಂತದಲ್ಲಿ ವ್ಯಕ್ತಿಗಳು ಪ್ರದರ್ಶಿಸುವ ಮುಖವಾಡ. ಹೊರ ಜಗತ್ತಿನ ಸುತ್ತಾಟ ಮುಗಿಸಿ ಮನೆಗೆ ಮರಳಿದ ಬಳಿಕ ಮೇಕಪ್ ಕಳಚುವಂತೆ, ಪರಸ್ಪರರ ನಿಜಬಣ್ಣ ತಿಳಿದ ಮೇಲಷ್ಟೇ ಇಷ್ಟಪಟ್ಟವರ ಕಷ್ಟ ಶುರುವಾಗುತ್ತದೆ. ಆತನ ಎಲ್ಲ ಮನೋವಿಕೃತಿ, ಮುಂಗೋಪ, ರೋಷಾವೇಶ, ಅನುಮಾನ, ಮಾದಕ ವ್ಯಸನ, ಹಿಂಸಾಪ್ರವೃತ್ತಿಗಳಿಗೆ ಆಕೆಯೇ ಪ್ರಯೋಗಪಶುವಾಗುತ್ತಾಳೆ. ಮೊದಲ ಹೆಂಡತಿಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ದೃಢಪಟ್ಟ ಕ್ಷಣದಿಂದಲೇ ಆಕೆಗೆ ತನ್ನ ಸಾವೂ ಕಣ್ಮುಂದೆ ಸುಳಿಯುತ್ತದೆ. ಈತನಿಂದ ತಪ್ಪಿಸಿಕೊಂಡರಷ್ಟೇ ಉಳಿಗಾಲವೆಂದು ಭಾವಿಸಿ ಚಲಿಸುವ ರೈಲಿನಿಂದ ಜಿಗಿಯುತ್ತಾಳೆ.

ಡಾ. ಝಿಂಚೊ

ಯಾವಾಗಲೂ ನಾವು ಕೇಳಿದ್ದೇ ನಿಜವಲ್ಲ, ಕಂಡಿದ್ದೇ ಸತ್ಯವಲ್ಲ. ನಮ್ಮ ಗ್ರಹಿಕೆಗೆ ನಿಲುಕದ ಇನ್ನೇನೋ ಇದ್ದೇ ಇರುತ್ತದೆ. ಅವಳ ಕಥೆಯನ್ನು ತಿರುವು-ಮುರುವು ಮಾಡಿ ನೋಡುವಾಗ ಕಥೆ ಬದಲಾಗುತ್ತದೆ. ಅವಳ ಗಂಡನೇ ಮನೋವೈದ್ಯನಾಗಿರುತ್ತಾನೆ. ಈಕೆಯೇ ಸ್ಕೀಜೋಫ್ರೇನಿಯಾ (ಛಿದ್ರ ಮನಸ್ಕತೆ) ಮನೋವ್ಯಾಧಿಗೆ ಚಿಕಿತ್ಸೆ ಪಡೆಯಲು ಆತನ ಬಳಿ ಬಂದಿರುತ್ತಾಳೆ. ತನ್ನ ಮನಸ್ಸಿನ ದುಗುಡವನ್ನೆಲ್ಲ ಆತನ ಬಳಿ ಬಿಚ್ಚಿಡುತ್ತಲೇ, ಕೌನ್ಸೆಲಿಂಗ್ ಅವಧಿಯಲ್ಲಿ ಆತನಿಂದ ಸಿಗುವ ಸಾಂತ್ವನ- ಸಮಾಧಾನ ಜೀವನಪೂರ್ತಿ ಬೇಕೆಂದು ನಿವೇದಿಸಿಕೊಳ್ಳುತ್ತಾಳೆ. ಭಾವನೆ ಹಂಚಿಕೊಂಡವಳ ಜತೆ ಆತ ಜೀವನ ಹಂಚಿಕೊಳ್ಳುತ್ತಾನೆ. ಆದರೆ, ವಿವಾಹಾನಂತರವೂ ಅವಳು ಸುಧಾರಿಸುವುದಿಲ್ಲ. ಮಾದಕ ವ್ಯಸನ, ಹುಚ್ಚು ಕಡಿಮೆಯಾಗುವುದಿಲ್ಲ. 

ಹಿಂಸಾ ಪ್ರವೃತ್ತಿಯಿಂದ ಇಬ್ಬರ ಬದುಕು ನರಕವಾಗಿಸುತ್ತಾಳೆ. ತಾನು 2ನೇ ಪತ್ನಿ, ಮೊದಲ ಹೆಂಡತಿಯನ್ನು ಗಂಡ ಸಾಯಿಸಿದ್ದಾನೆ ಎಂದು ಭ್ರಮಿಸುತ್ತಾಳೆ. ಮಾನಸಿಕ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದರೆ, ಅಲ್ಲಿನ ವಾರ್ಡನ್ ಚೈತಾಲಿ ಎಂಬಾಕೆಯನ್ನು ಕೊಲೆ ಮಾಡುತ್ತಾಳೆ. ಶಿಖಾ ಎಂದರೆ ತಾನಲ್ಲ, ಆಕೆ ಗಂಡನ ಮೊದಲ ಪತ್ನಿ, ತಾನು ಚೈತಾಲಿ ಎಂದು ಭ್ರಮಿಸುತ್ತಾಳೆ. ಅದೇ ಛಿದ್ರ ಮನಸ್ಸಿನ ಅವಸ್ಥೆಯಲ್ಲಿ ಚಲಿಸುವ ರೈಲಿನಿಂದ ಜಿಗಿಯುತ್ತಾಳೆ.

ರಘು-ಚೈತಾಲಿ-ಝಿಂಚೊ

ಅದೊಂದು ನರಮನುಷ್ಯರು ವಾಸ ಮಾಡದ, ಮನೆಗಳಿಲ್ಲದ, ಮರಗಳಿಲ್ಲದ, ನೆರಳಿಲ್ಲದ ಬೆಂಗಾಡು. ಅಲ್ಲಿ ವಾರಕ್ಕೊಂದೊ, ಎರಡೋ ಬಾರಿ ನಡುಹಗಲಲ್ಲೋ, ತಡರಾತ್ರಿಯಲ್ಲೋ ರೈಲು ಹಾದುಹೋದರಷ್ಟೇ ಗುಡುಗುಡಿಸುವ, ಭಡಭಡಿಸುವ ಸದ್ದು. ಉಳಿದಂತೆ ಪೂರ್ತಿ ಹಗಲು, ಇಡೀ ರಾತ್ರಿ ನಿಶ್ಶಬ್ದವನ್ನೇ ಹಾಸಿಹೊದ್ದಿರುವ ಆ ಬಟಾಬಯಲಿನ ನಡುವೆ ರೈಲ್ವೇ ಹಳಿ, ಪಕ್ಕದ ಗುಡಿಸಲಿನಂಥ ಮನೆಯಲ್ಲಿ ವಾಸಿಸುವುದು ಅವನೊಬ್ಬನೇ. ಬೇಸರವಾದಾಗ ಕಿವಿಯಾಗಲು, ಕಷ್ಟ ಸುಖ ಹಂಚಿಕೊಳ್ಳಲು ಜತೆಗಿರುವುದು ಕತ್ತೆಯೊಂದೇ. ಅವನು ಯಾರು? ಎಲ್ಲಿಂದ ಬಂದ? ಅವನವರೆಲ್ಲ ಹೋದರೆಲ್ಲಿ? ಈ ಪ್ರಶ್ನೆ ಕೇಳುವುದಕ್ಕೂ ಯಾರೂ ದಿಕ್ಕಿಲ್ಲದ ಜಾಗ ಅದು. ಅಂಥ ಕೊಂಪೆಗೆ ಮರುಭೂಮಿಯಲ್ಲಿ ಮಳೆ ಸುರಿದಂತೆ ಅವಳು ಬರುತ್ತಾಳೆ. ಕಲ್ಲುಗಳ ಸಂದಿಯಲ್ಲಿ ಹೂಬಳ್ಳಿ ಚಿಗುರುವಂತೆ, ಸೊರಗಿ ಹೋಗಿದ್ದ ಅವನ ಬದುಕಲ್ಲಿ ಆಸೆಗಳನ್ನು ಅರಳಿಸುತ್ತಾಳೆ. 

ಇಬ್ಬರೂ ಪರಸ್ಪರ ನೋವು ಹಂಚಿಕೊಳ್ಳುತ್ತಾರೆ. ಕನಸು ಬಿಚ್ಚಿಕೊಳ್ಳುತ್ತಾರೆ. ಆದರೆ, ತಮ್ಮ ಅತೀತದ ಬದುಕನ್ನು ಮುಚ್ಚಿಡುತ್ತಾರೆ. ನಂಬಿಕೆಯೆಂದರೆ ಅಭಯ. ಅನುಮಾನವೆಂದರೆ ಭಯ. ಒಬ್ಬರನ್ನು ಪೂರ್ತಿಯಾಗಿ ನಂಬಿದಾಗ ನಮ್ಮ ಅಸ್ತಿತ್ವವನ್ನೇ ಅವರ ಕೈಲಿಟ್ಟುಬಿಡುತ್ತೇವೆ. ಅವರೇನೋ ಮುಚ್ಚಿಡುತ್ತಿರುವ ಭಾವನೆ ಮೂಡಿದಾಗ, ಆತಂಕದಿಂದ ನಡುಗುತ್ತೇವೆ. ಇಬ್ಬರ ನಡುವೆ ಇಂಥ ನಂಬಿಕೆ- ಅಂಜಿಕೆಗಳ ಹಾವು-ಏಣಿಯಾಟ ನಡೆಯುತ್ತದೆ. ಆಶ್ರಯ ಕೊಟ್ಟ ರಘು ವಾಸ್ತವದಲ್ಲಿ ರಘುನೇ ಅಲ್ಲ. ಆತ ನಾಲ್ಕು ಕೊಲೆ ಮಾಡಿ ಅಜ್ಞಾತವಾಗಿ ಬದುಕುತ್ತಿರುವ ಜಾರ್ಜ್ ಎಂದು ತಿಳಿದಾಗ ಅವಳು ಜೀವಭಯದಿಂದ ಕಂಪಿಸುತ್ತಾಳೆ. ಇನ್ನೊಂದೆಡೆ ‘ಕೊಲೆಗಾರನ ಪ್ರೀತಿ-ಮಾತಿಗೆ ಮರುಳಾಗಿ ಬದುಕು ಹಾಳು ಮಾಡಿಕೊಂಡೆ’ ಎಂಬ ಚೈತಾಲಿ ಕಥೆಯನ್ನು ನಂಬಬೇಕೋ? ‘ಆಕೆ ಚೈತಾಲಿಯೂ ಅಲ್ಲ, ವೈದ್ಯೆಯೂ ಅಲ್ಲ, ಮನೋರೋಗಿ’ ಎಂಬ ಗಂಡ ಝಿಂಚೋ ಹೇಳುವ ಕಥೆ ನಂಬಬೇಕೋ- ತಿಳಿಯದೆ ಜಾರ್ಜ್ ದಿಗ್ಭ್ರಮೆಗೊಳಗಾಗುತ್ತಾನೆ.

ಮುಖವಾಡದ ಹಿಂದಿರುವ ಮುಖ

ಯಾರ ಜೀವನವೂ ತೆರೆದ ಪುಸ್ತಕವಲ್ಲ; ಕನ್ನಡಿಯಲ್ಲಿ ಪ್ರತಿಫಲಿಸುವ ಬಿಂಬವಲ್ಲ. ಬದುಕು ಸೀದಾ-ಸಾದಾ, ಹಿಂದಿಲ್ಲದ, ಮುಂದಿಲ್ಲದ ಫಕೀರ ತಾನೆಂದು ಯಾರಾದರೂ, ಹೇಳಿಕೊಂಡರೆ ಅದು ನಂಬುವಂಥದ್ದಲ್ಲ. ಯಾಕೆಂದರೆ, ಪ್ರತಿಯೊಬ್ಬರ ಜೀವನಗರ್ಭದೊಳಗೂ ಅವರಿಗೆ ಮಾತ್ರವೇ ತಿಳಿದಿರುವ ರಹಸ್ಯಗಳಿದ್ದೇ ಇರುತ್ತವೆ. ಮುಚ್ಚಿಟ್ಟುಕೊಳ್ಳುವ ಮನಸ್ಸು, ಅಭ್ಯಾಸ ಇಲ್ಲದೇ ಹೋದರೂ, ಹೇಳಲಾಗದಂಥ ಸಂಗತಿಗಳು ಕೆಲವಿರುತ್ತವೆ. ಸತ್ಯವನ್ನು ಕೆಲವರು ಮೌನದಿಂದ ಮರೆಮಾಚಿದರೆ, ಕೆಲವರು ಮಾತಿನಿಂದ ಮುಚ್ಚಿಡುತ್ತಾರೆ. ಹೆಮ್ಮೆ ಪಡುವಂಥದ್ದೋ, ವ್ಯಥೆ ಪಡುವಂಥದ್ದೋ.. ಪ್ರತಿಯೊಬ್ಬರಿಗೂ ಏನಾದರೊಂದು ಹಿನ್ನೆಲೆ ಇದ್ದೇ ಇರುತ್ತದೆ. ಕೆಲವರಿಗೆ ಮುಖವಾಡ ಹಾಕಿಕೊಂಡೇ ಬದುಕುವುದು ಅಭ್ಯಾಸವಾಗಿರುತ್ತದೆ. ಕೆಲವರ ಪಾಲಿಗೆ ಮುಖವಾಡ ಅನಿವಾರ್ಯವಾಗಿರುತ್ತದೆ. ‘ಹೊನ್ನು ಮಾಯೆ ಎಂಬರು, ಹೆಣ್ಣು ಮಾಯೆ ಎಂಬರು, ಮಣ್ಣು ಮಾಯೆ ಎಂಬರು, ಮನದ ಮುಂದಣ ಆಸೆಯೇ ಮಾಯೆ, ಕಾಣಾ ಗುಹೇಶ್ವರ’ ಎಂಬುದನ್ನು ಬಲ್ಲವರಷ್ಟೇ ಬಲ್ಲರು. ಜಿಂಕೆಯಂತೆ ಚಿತ್ತ ಸೆಳೆದಿದ್ದು ಮಾಯಾಮಾರೀಚನಿರಬಹುದು, ಸುರಸುಂದರಿಯಂತೆ ಬಯಸಿ ಬಂದವಳು ಶೂರ್ಪನಖಿ ಆಗಿರಬಹುದು. 

ಎಲ್ಲೋ ಹುಟ್ಟಿದ ವ್ಯಕ್ತಿ ಎಲ್ಲೆಲ್ಲೋ ಅಲೆಯುತ್ತಾನೆ. ಇನ್ನೆಲ್ಲೋ ನೆಲೆಸುತ್ತಾನೆ. ಭಾರತದಂಥ ಜನಸಂದಣಿಯ ದೇಶದಲ್ಲಿ ಪಕ್ಕದ ಮನೆಯಲ್ಲೇ ಪಾತಕಿ ಬಂದು ಸೇರಿಕೊಂಡಿದ್ದರೂ ಗೊತ್ತಾಗುವುದಿಲ್ಲ. ಮುಖ ನೋಡಿ ಯಾರ ವ್ಯಕ್ತಿತ್ವವನ್ನೂ ಅಂದಾಜಿಸಲು ಸಾಧ್ಯವಿಲ್ಲ. ಮಾತು ಕೇಳಿ ಯಾರ ಹಿನ್ನೆಲೆ ಅರಿಯಲು ಸಾಧ್ಯವಿಲ್ಲ. ಹೀಗೆಂದೇ ಅದೆಷ್ಟೋ ಕಳ್ಳರು, ವಂಚಕರು, ಹಂತಕರು ಎಲ್ಲೋ ಅಪರಾಧವೆಸಗಿ, ಮತ್ತಾವುದೋ ಜನನಿಭಿಡ ಮೂಲೆಯಲ್ಲಿ ಅಮಾಯಕರಂತೆ ಜೀವನ ದೂಡಿಬಿಡುತ್ತಾರೆ. ಆಧಾರ್ ಕಾರ್ಡ್, ಐಡಿ ಕಾರ್ಡ್​ಗಳನ್ನೇ ಡೂಪ್ಲಿಕೇಟ್ ಮಾಡುವ ಈ ಕಾಲದಲ್ಲಿ ಯಾರದೋ ಹೆಸರಿನಲ್ಲಿ, ಯಾರದೋ ಸೋಗಿನಲ್ಲಿ, ಯಾರದೋ ಆಸ್ತಿಯಲ್ಲಿ ಜನ ತಾವೇ ನಿಜವಾದ ವಾರಸುದಾರರಂತೆ ಬದುಕಿಬಿಡುತ್ತಾರೆ.

ಉಪಸಂಹಾರ

ಒಂದು ಒಳ್ಳೆಯ ಚಿತ್ರ ನೋಡಿದಾಗ ಒಂದೆರಡು ದಿನಗಳ ಮಟ್ಟಿಗಾದರೂ ಅದರ ಕಥೆ ಅಥವಾ ಪಾತ್ರಗಳು ಅಥವಾ ತಿರುವುಗಳು ಕಾಡುತ್ತವೆ. ಕಾಡಬೇಕು ಕೂಡ. ತುಂಬಾ ಇಷ್ಟವಾದ ಸಿಹಿ ತಿಂದ ಬಳಿಕ, ಸ್ವಲ್ಪ ಹೊತ್ತಾದರೂ, ಅದರ ಸ್ವಾದ ಬಾಯಲ್ಲಿರಲಿ ಎಂದು ಆಸೆ ಪಡುವಂತೆ, ಒಂದು ಒಳ್ಳೆಯ ಕಾದಂಬರಿ ಓದಿದಾಗ ಒಂದೆರಡು ದಿನ ಅದರ ಗುಂಗಿನಲ್ಲೇ ಬೇರೇನನ್ನೂ ಓದುವುದಕ್ಕೆ ಮನಸಾಗದಂತೆ, ಒಳ್ಳೆಯ ಚಿತ್ರವೊಂದನ್ನು ನೋಡಿದಾಗಲೂ ಮನಸ್ಸು ಆ ಚಿತ್ರದೊಳಗೆ, ಕಥೆಯೊಳಗೆ, ಪಾತ್ರದೊಳಗೆ ಕಳೆದುಹೋಗುವಂತಿರಬೇಕು. ಕಳೆದ ವರ್ಷ ತೆರೆ ಕಂಡ ಅರ್ಫಾಜ್ ಅಯೂಬ್ ನಿರ್ದೇಶನದ ‘ಲೆವೆಲ್ ಕ್ರಾಸ್’ ಅಂಥ ಒಂದು ಚಿತ್ರ. ಆಸಿಫ್ ಅಲಿ (ರಘು/ ಜಾರ್ಜ್), ಅಮಲಾ ಪೌಲ್ (ಚೈತಾಲಿ/ ಶಿಖಾ) ಮತ್ತು ಶರಾಫುದ್ದೀನ್ (ಡಾ| ಝಿಂಚೊ) ಎಂಬ ಮೂರೇ ಪಾತ್ರಗಳ ಸುತ್ತ ನಡೆಯುವ ಕಥೆ, ಆಫ್ರಿಕಾದ ಟುನೀಶಿಯಾ ಮರಳುಗಾಡಿನಲ್ಲಿ ಚಿತ್ರಿತವಾಗಿದೆ.

 ‘ಲೆವೆಲ್ ಕ್ರಾಸ್’ ಎಲ್ಲೂ ಅವಸರವಿಲ್ಲದೆ ಎಳೆಎಳೆಯಾಗಿ ಕಥೆ ಬಿಚ್ಚಿಡುತ್ತ ಸಾಗಿದರೂ ನೋಡುಗನ ಸಹನೆ ಪರೀಕ್ಷಿಸುವುದಿಲ್ಲ. ಕಥೆ ಹಾಗೂ ಪಾತ್ರವನ್ನು ನೋಡುಗ ಜಡ್ಜ್ ಮಾಡಲು ಆಗದಂತೆ ತಿರುವು ಪಡೆಯುತ್ತ ಸಾಗುವುದು ವಿಶೇಷ. ಅಮೆಜಾನ್ ಒಟಿಟಿಯಲ್ಲೂ ಲಭ್ಯವಿರುವ ಈ ಚಿತ್ರ, ಮನುಷ್ಯನ ಮುಖವಾಡದ ಬದುಕನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಕಟ್ಟಿಕೊಡುವ ಕಾರಣಕ್ಕೆ ಆಪ್ತವಾಗುತ್ತದೆ. ಒಂದು ನಾಣ್ಯಕ್ಕೇ ಎರಡು ಮುಖಗಳಿರುವಾಗ, ಜನ್ಮದಿಂದ ಮರಣದವರೆಗೆ ಸಾವಿರ ಸ್ಥಿತ್ಯಂತರಕ್ಕೆ ಸಾಕ್ಷಿಯಾಗುವ ಮನುಷ್ಯನ ಬದುಕಿನಲ್ಲಿ ಬಾಹ್ಯಗೋಚರವಾದ ಹಾಗೂ ಸುಪ್ತವಾಗಿರುವ ನಾನಾ ಮುಖ ಗಳನ್ನು ಸೃಜನಶೀಲ ಚೌಕಟ್ಟಿನಲ್ಲಿ ಅನಾವರಣಗೊಳಿಸುವ ಪ್ರಯತ್ನ ಇಷ್ಟವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net