

ಅರ್ತಿಗೊಂದು ಗಿಳಿಯ ಸಾಕಿದ ಮುತ್ತಿನಹಾರವ ಹಾಕಿದೆ
ಮುತ್ತುಗೊಂಡು ಗಿಳಿಯು ತಾನು ಎತ್ತ ಓಡಿಹೋಯಿತಯ್ಯೋ ||
ಗಿಳಿಯು ಪಂಜರದೊಳಿಲ್ಲಾ || (ಪುರಂದರದಾಸರು)
ಸ್ವರ್ಗಕ್ಕೆ ಯಾರು ಹೋಗಬಹುದು ಎಂಬ ವ್ಯಾಸತೀರ್ಥರ ಪ್ರಶ್ನೆಗೆ ‘ನಾನು’ ಹೋದರೆ ಹೋದೇನು ಎಂದು ಕನಕದಾಸರು ಅಂದೇ ಹೇಳಿದ್ದರು. ಆದರೆ, ಅಂದಿಗೂ, ಇಂದಿಗೂ, ಎಂದೆಂದಿಗೂ ‘ನಾನು-ನನ್ನದು’ ಎಂಬ ‘ಮಮಕಾರ’, ‘ಅಧಿಕಾರ’, ‘ಅಹಂಕಾರ’ ಯಾರನ್ನೂ ಬಿಟ್ಟುಹೋಗಿಲ್ಲ.
ಜಗತ್ತಿನಲ್ಲಿ ಹೆಚ್ಚಿನ ದುಃಖ, ನೋವುಗಳಿಗೆ, ಅತೃಪ್ತಿ, ಅಸಮಾಧಾನಗಳಿಗೆ ‘ನಾನು’ ಮೂಲಕಾರಣ. ‘ನಾನು ಮಾಡಿದ್ದು’, ‘ನಾನು ಹೇಳಿದ್ದು’, ‘ನನ್ನಿಂದಲೇ ಆಗಿದ್ದು’, ‘ನಾನೇ ಕಾರಣ..’ ಹೀಗೆ ಪ್ರಾಪಂಚಿಕ ಬದುಕಿನಲ್ಲಿ ವಿಧಿ-ಸಹಜವಾಗಿ ಆಗುವ ಅದೆಷ್ಟೋ ಕೆಲಸಗಳಿಗೂ ನಾವು ‘ನನ್ನಿಂದಲೇ ಆಗಿದ್ದು’ ಎಂಬ ಅಹಂಕಾರವನ್ನು ಏರಿಸಿಕೊಂಡು ಬಿಟ್ಟಿರುತ್ತೇವೆ.
‘ಯಶಸ್ಸಿಗೆ ನೂರು ಕರ್ತೃಗಳು, ಸೋಲು ಅನಾಥ’ ಎಂಬ ಮಾತಿದೆ. ಅದೇ ರೀತಿ, ಸಮಾಜದಲ್ಲಿ ಒಬ್ಬ ವ್ಯಕ್ತಿ ಸೋತು ಹೋದಾಗ, ತೊಂದರೆಗೆ ಸಿಲುಕಿದಾಗ ಯಾರೊಬ್ಬರೂ ಆತನ ಅವನತಿಗೆ ‘ನಾನೇ ಕಾರಣ’ ಎಂದು ಹೇಳುವುದಿಲ್ಲ. ನೆಲಕ್ಕೆ ಬಿದ್ದ ವ್ಯಕ್ತಿಗಾಗಿ ಯಾರೊಬ್ಬರೂ ಅನುಕಂಪ, ಪಶ್ಚಾತ್ತಾಪ ಪಡುವುದಿಲ್ಲ. ಆದರೆ, ಒಬ್ಬ ವ್ಯಕ್ತಿ ದೊಡ್ಡದೇನೋ ಸಾಧನೆ ಮಾಡಿದಾಗ, ರ್ಯಾಂಕ್ ಬಂದಾಗ, ರಿಯಾಲಿಟಿ ಶೋ ಗೆದ್ದಾಗ, ಎಲ್ಲರೂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವವರೇ. ‘ನನಗೆ ಮೊದಲೇ ಗೊತ್ತಿತ್ತು..’, ‘ನಾನು ಅವತ್ತೇ ಹೇಳಿದ್ದೆ..’, ‘ಅವನಿಗೆ ಸಲಹೆ ಕೊಟ್ಟಿದ್ದೇ ನಾನು..’, ‘ಶಿಫಾರಸು ಮಾಡಿ ಅವಕಾಶ ಕೊಡಿಸಿದ್ದೇ ನಾನು..’ ಇತ್ಯಾದಿ ಕಾರಣಗಳನ್ನು ನಿಜವೋ, ಸುಳ್ಳೋ ಸೃಷ್ಟಿ ಮಾಡಿಕೊಂಡು ಗೆದ್ದವನ ಯಶಸ್ಸಿನಲ್ಲಿ ತಮಗೂ ಒಂದಿಷ್ಟು ಶ್ರೇಯಸ್ಸು ಪಡೆದುಕೊಳ್ಳಲು ಮುಗಿಬೀಳುತ್ತಿರುತ್ತಾರೆ.
ಜೀವನವೆಂದ ಮೇಲೆ ಇಲ್ಲಿ ಯಾರೂ ಒಬ್ಬಂಟಿಯಾಗಿ ಏನನ್ನೂ ಮಾಡಲೂ ಸಾಧ್ಯವಿಲ್ಲ. ಬದುಕಿನ ಹಾದಿಯಲ್ಲಿ ಪ್ರತಿಯೊಬ್ಬರಿಗೂ ಅನೇಕರು, ಅನೇಕ ಬಗೆಯಲ್ಲಿ ನೆರವಾಗುತ್ತಾರೆ. ಒಬ್ಬರಿಗೆ ಇನ್ನೊಬ್ಬರು ತಿಳಿದೋ, ತಿಳಿಯದೆಯೋ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನೆರವಾಗುವುದು ಸಹಜ ಸಂಗತಿ. ಎಲ್ಲವನ್ನೂ ಡಂಗುರ ಸಾರಲೇಬೇಕೆಂದಿಲ್ಲ. ಜಗತ್ತಿನಲ್ಲಿ ಏನೆಲ್ಲ ಆಗಬೇಕೋ, ಆಗಿಯೇ ತೀರುತ್ತದೆ. ಅದೇ ರೀತಿ, ಆಗಬಾರದೆಂದಿದ್ದರೆ ಏನು ಮಾಡಿದರೂ ಆಗುವುದೇ ಇಲ್ಲ. ಯಾರದೋ ಯಶಸ್ಸಿನಲ್ಲಿ, ಯಾರದೋ ವೈಫಲ್ಯದಲ್ಲಿ ಇನ್ನೊಬ್ಬರು ಯಾರೋ ನಿಮಿತ್ತ ಮಾತ್ರವಾಗಿ ಬಂದುಹೋಗಿರುತ್ತಾರೆ.
ಕೆಲವೊಮ್ಮೆ, ಉದ್ದೇಶವಿಲ್ಲದೇ ಹೋದರೂ, ಯಾವುದೋ ಒಂದು ಮಾತಿನಿಂದ, ಕೆಲಸದಿಂದ ಇನ್ನೊಬ್ಬರಿಗೆ ಒಳಿತಾಗಿರಬಹುದು ಅಥವಾ ತೊಂದರೆಯೂ ಆಗಿರುತ್ತದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಏಳಿಗೆಗೆ ಆತನ ಪ್ರಯತ್ನ, ಪರಿಶ್ರಮ, ಹಣೆಬರಹ ಮುಖ್ಯವೇ ಹೊರತು, ಬೇರೊಬ್ಬರು ‘ನನ್ನಿಂದಲೇ ಆತ ಬೆಳೆದಿದ್ದು’ ಎಂದು ಬೀಗುವುದರಲ್ಲಿ ಅರ್ಥವಿಲ್ಲ. ಅದೇ ರೀತಿ, ‘ನನ್ನ ನೆರವಿಲ್ಲದೆ ಆತ ಇಷ್ಟು ಬೆಳೆಯುತ್ತಿರಲಿಲ್ಲ, ಈಗ ಆತನಿಗೆ ನೆನಪೇ ಇಲ್ಲ’ ಎಂದು ನೊಂದುಕೊಳ್ಳುವುದೂ ಯುಕ್ತವಲ್ಲ. ಹಳ್ಳಿಯಲ್ಲಿ, ಕಡುಬಡ ಕುಟುಂಬದಲ್ಲಿ ಜನಿಸಿದ ಒಬ್ಬ ಹುಡುಗ ಐಎಎಸ್ ಅಧಿಕಾರಿಯಾದರೆ, ಮಂತ್ರಿಯಾದರೆ, ಪ್ರಧಾನಿಯೇ ಆದರೂ ಅದು ಆತನ ಯೋಗ, ಯೋಗ್ಯತೆಯೇ ಹೊರತು, ಅದು ಬೇರೊಬ್ಬರ ತ್ಯಾಗ, ಕೊಡುಗೆ ಆಗಿರುವುದಿಲ್ಲ. ಏಕೆಂದರೆ, ಆತನ ಹಣೆಯಲ್ಲಿ ‘ಅಂಥ ಯೋಗ’ ಬರೆದಿದ್ದರೆ, ‘ನಾವಲ್ಲದಿದ್ದರೆ, ಇನ್ನೊಬ್ಬರು ಯಾರೋ’ ಆತನ ಸಾಧನೆಯ ಹಾದಿಯಲ್ಲಿ ಮೆಟ್ಟಿಲಾಗುತ್ತಾರೆ. ಹಾಗಾಗಿ ‘ನಾನು’, ‘ನನ್ನಿಂದ’ ಎಂಬ ಪೊಳ್ಳು ಅಭಿಮಾನ ಪಡುವುದರಿಂದ ಸಂತೋಷಕ್ಕಿಂತ ನೋವೇ ಜಾಸ್ತಿ.
ಜೂಹಿ ಚಾವ್ಲಾ 1987ರಲ್ಲಿ ರವಿಚಂದ್ರನ್ ಅವರ ‘ಪ್ರೇಮಲೋಕ’ ಚಿತ್ರಕ್ಕೆ ಆಯ್ಕೆಯಾಗುವ ಮುನ್ನ ಅನಾಮಿಕರಂತಿದ್ದರು. ‘ಪ್ರೇಮಲೋಕ’ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಟ್ಟಿತು. ಬಳಿಕ 1988ರಲ್ಲಿ ಆಮೀರ್ ಖಾನ್ರ ‘ಕಯಾಮತ್ ಸೇ ಕಯಾಮತ್ ತಕ್’ ಚಿತ್ರದ ಮೂಲಕ ಅವರು ಬಾಲಿವುಡ್ನಲ್ಲಿ ಜನಪ್ರಿಯ ನಟಿಯಾದರು. ಅದೇ ರೀತಿ ಖುಷ್ಬೂ ಸುಂದರ್ ಬಾಲನಟಿಯಾಗಿ, ಬಳಿಕ ನಾಯಕಿಯಾಗಿ ಬಾಲಿವುಡ್ನಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್ ಮೊದಲಾದವರ ಚಿತ್ರಗಳಲ್ಲಿ ನಟಿಸಿದ್ದರೂ, ಅವರಿಗೆ ವೃತ್ತಿಜೀವನದ ಬಹುದೊಡ್ಡ ಬ್ರೇಕ್ ನೀಡಿದ್ದು ರವಿಚಂದ್ರನ್ ಅವರ ‘ರಣಧೀರ’ ಚಿತ್ರ.
ಜೂಹಿ ಚಾವ್ಲಾ ಆಗಲಿ, ಖುಷ್ಬೂ ಆಗಲಿ ತಮ್ಮ ವೃತ್ತಿಬದುಕಿನ ಹಾದಿಯಲ್ಲಿ ರವಿಚಂದ್ರನ್ ಕೊಟ್ಟ ಅವಕಾಶವನ್ನು ಸ್ಮರಿಸಿಕೊಂಡರೆ ಅದೊಂದು ಸೌಜನ್ಯ, ದೊಡ್ಡಗುಣ. ಒಂದು ವೇಳೆ ಅವರು ಮರೆತರೂ ಅದರಿಂದ ರವಿಚಂದ್ರನ್ಗೆ ನಷ್ಟವೇನೂ ಇಲ್ಲ. ಸದ್ಯ ಬಾಲಿವುಡ್ನಲ್ಲಿ ಅಗ್ರಪಂಕ್ತಿಯಲ್ಲಿರುವ ನಟಿಯೊಬ್ಬರು ವೃತ್ತಿಜೀವನದ ಆರಂಭದಲ್ಲಿ ಕನ್ನಡದಲ್ಲಿ ಉಪೇಂದ್ರ ಅವರ ಚಿತ್ರದಲ್ಲಿ ನಾಯಕಿಯಾಗಿದ್ದರು. ಆದರೆ, ಆಕೆ ಯಾವತ್ತೂ ಕನ್ನಡದ ಬಗ್ಗೆ, ಉಪೇಂದ್ರ ಅವರ ಬಗ್ಗೆ, ಆ ಚಿತ್ರದ ಬಗ್ಗೆ ಹೇಳಿಕೊಳ್ಳಲೇ ಇಲ್ಲ. ಇನ್ನೋರ್ವ ನಟಿ ಕನ್ನಡ ಚಿತ್ರದಿಂದ ದೊಡ್ಡ ಯಶಸ್ಸು ಕಂಡರೂ, ‘ತಮ್ಮ ಮೂಲ ಹೈದರಾಬಾದ್’ ಎಂದು ಹೇಳಿಕೊಂಡರು.
ಅದು ಅವರವರ ಇಷ್ಟ. ಸಮುದ್ರದಲ್ಲಿ ದಡಕ್ಕಪ್ಪಳಿಸಿ, ಮರಳಿ, ತೆರಳಿಹೋಗುವ ಅಲೆಗಳಿಗೆ ಯಾರಾದರೂ ಅಪ್ಪಣೆ ಕೊಡಲು ಸಾಧ್ಯವೇ? ಚಿತ್ರರಂಗವಿರಲಿ, ಯಾವುದೇ ವೃತ್ತಿರಂಗವಿರಲಿ ನೂರಾರು ಹೊಸಬರು ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಅವರಲ್ಲಿ ನೂರಕ್ಕೊಬ್ಬರು, ಸಾವಿರಕ್ಕೊಬ್ಬರು ಮಾತ್ರ ಯಶಸ್ವಿಯಾಗುತ್ತಾರೆ. ಎತ್ತರಕ್ಕೆ ಬೆಳೆಯುತ್ತಾರೆ. ಅದು ಅವರವರ ಯೋಗ. ಇಂದು ಇಲ್ಲಿದ್ದವರು, ನಾಳೆ ಬೇರೆಲ್ಲೋ ಹೋಗಿ, ಮತ್ತೆಲ್ಲೋ ಬೆಳೆದು, ಏನೇನೋ ಆಗುವುದು ಅವರ ಹಣೆಬರಹ. ಉಪಕಾರ ಸ್ಮರಿಸಿದರೆ ಖುಷಿ ಪಡಬಹುದು, ಮರೆತರೆ ನಿರ್ಲಿಪ್ತರಾಗಿ ಇದ್ದುಬಿಡುವುದೇ ಉಚಿತ.
ಇನ್ನು ವಿವಾಹವೆನ್ನುವುದು ಪ್ರತಿಯೊಬ್ಬರ ಜೀವನದ ಅವಿಸ್ಮರಣೀಯ ಕ್ಷಣ. ವಿವಾಹ ಆಗುವುದು ಕೂಡ ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎನ್ನುವಂತೆ ಯಾವುದೋ ಜನ್ಮದ ಋಣವಿಲ್ಲದೆ ಯಾವ ಸಂಬಂಧಗಳೂ ಬೆಸೆಯುವುದಿಲ್ಲ. ‘ಯಾವ ಹೂವು ಯಾರ ಮುಡಿಗೋ, ಯಾರ ಒಲವು ಯಾರ ಕಡೆಗೋ’ ಬಲ್ಲವರೇ ಬಲ್ಲರು. ಅರಳಿದ ಹೂವು ಮಾಲೆಯಾಗಿ ದೇವರ ಶಿರವೇರುವುದೋ, ಮಹಿಳೆಯ ಮುಡಿ ಏರುವುದೋ, ಮುಕ್ತಿಯಾತ್ರೆಯಲ್ಲಿ ಬಳಕೆಯಾಗುವುದೋ ಜನ್ಮಕೊಟ್ಟ ಗಿಡಕ್ಕೂ ಗೊತ್ತಿರುವುದಿಲ್ಲ. ಅದೇ ರೀತಿ ಜೀವನದ ಆಯ್ಕೆಗಳೂ ಅಷ್ಟೇ. ಇಂದು ಇಷ್ಟವಾಗಿದ್ದು ನಾಳೆ ಕಷ್ಟವೆನಿಸಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಅವರವರ ಜೀವನದ ನಿರ್ಧಾರ ತೆಗೆದುಕೊಳ್ಳುವ ಅವಕಾಶ, ಹಕ್ಕು ಇದ್ದೇ ಇದೆ. ಆಗಿದ್ದೆಲ್ಲ ಒಳ್ಳೆಯದಕ್ಕೆ ಎಂದು ಮರೆತು ಮುಂದೆ ಹೋಗುವುದು ಯುಕ್ತವೇ ಹೊರತು, ಅದೇ ಕೊರಗಿನಲ್ಲಿದ್ದರೆ ಸಮಾಜ ನಗುತ್ತದೆ ಅಷ್ಟೇ.
ಮೊದಲ ನೋಟದಲ್ಲೇ ಪ್ರೀತಿ ಎಂಬುದಿದೆ. ಆದರೆ, ಮದುವೆ ಆ ರೀತಿ ಅಲ್ಲ. ಒಮ್ಮೆ ನೋಡಿದ ಕೂಡಲೇ ಏಕಾಏಕಿ ತಾಳಿ ಕಟ್ಟಿಸಿಬಿಡಲು ಸಾಧ್ಯವಿಲ್ಲ. ನೂರು ಬಾರಿ ಯೋಚಿಸಿ, ಪರಾಮಶಿಸಿ ನಿರ್ಧರಿಸಬೇಕಾಗುತ್ತದೆ. ನಿಶ್ಚಯವಾದ ಕೂಡಲೇ ವಿವಾಹ ಆಗಿಬಿಡುವುದಿಲ್ಲ. ಲಗ್ನಮಂಟಪದಲ್ಲಿ ತಾಳಿ ಕಟ್ಟುವ ಕೊನೆಯ ಕ್ಷಣದವರೆಗೂ ಯಾವುದೋ ಕಾರಣಕ್ಕೆ ರದ್ದು ಮಾಡಲು ಅವಕಾಶ ಇದ್ದೇ ಇರುತ್ತದೆ. ಒಲ್ಲದ ಮದುವೆ, ಸಲ್ಲದ ಬಾಳುವೆಗಿಂತ ಕಡಿದುಕೊಳ್ಳುವುದೇ ಮೇಲು ಎಂಬ ಮಾತಿದೆ. ಎಷ್ಟೋ ಮದುವೆಗಳು ನಿಶ್ಚಯವಾದ ಮೇಲೆ ಯಾವುದೋ ಕಾರಣಕ್ಕೆ ತಪ್ಪಿಹೋಗುತ್ತವೆ. ಆಗ ಇನ್ನೊಂದು ಸಂಬಂಧ ಹುಡುಕಿ ಮದುವೆ ಮಾಡುವುದು ಸಹಜ. ಅದನ್ನು ಬಿಟ್ಟು ತಪ್ಪಿಹೋದ ಸಂಬಂಧದ ಬಗ್ಗೆ ವರನಾಗಲೀ, ವಧುವಾಗಲೀ ಕಣ್ಣೀರು ಹಾಕುತ್ತ ಕೂರುವುದಿಲ್ಲ.
ನೋಡಿದ ಸಂಬಂಧಗಳೆಲ್ಲ ಒಪ್ಪಿಗೆಯಾಗುವುದಿಲ್ಲ. ಅದರರ್ಥ, ಅವರಲ್ಲೇನೋ ದೋಷವಿದೆ ಎಂದಲ್ಲ. ಇವರಿಗೆ ಹೊಂದಿಕೆಯಾಗಿರುವುದಿಲ್ಲ ಅಷ್ಟೇ. ಅನೇಕ ಬಾರಿ ಒಪ್ಪಿಗೆ ಆದ ಮೇಲೂ ಮದುವೆ ಆಗಲೇಬೇಕೆಂದಿಲ್ಲ. ನಿಶ್ಚಿತಾರ್ಥ ಆದ ಮೇಲೂ ಯಾವುದೋ ಗಂಭೀರ ಕಾರಣಕ್ಕೆ ರದ್ದು ಮಾಡುವ ಸಂದರ್ಭ ಬರುತ್ತದೆ. ಅದೆಲ್ಲವೂ ಜೀವನದ ಒಂದು ಭಾಗ ಎಂದುಕೊಂಡು ಮುಂದೆ ಸಾಗಬೇಕೇ ಹೊರತು, ಕಡಿದು ಹೋದ ಸಂಬಂಧಕ್ಕೆ ವ್ಯಥೆ ಪಡುವುದು, ಒಬ್ಬರು, ಇನ್ನೊಬ್ಬರನ್ನು ದೂರುವುದರಿಂದ ಯಾರಿಗೂ ಪ್ರಯೋಜನವಿಲ್ಲ.
ಆದದ್ದೆಲ್ಲ ಒಳಿತೇ ಆಯಿತು ಎಂದು ಪುರಂದರ ದಾಸರ ದಾಸವಚನ ಕೂಡ ಇಂಥ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ಯಾರ ಸಂತೋಷ ಎಲ್ಲಿರುವುದೋ ಅಲ್ಲಿ ಅವರು ಖುಷಿಯಿಂದಿರಲಿ. ಅವರ ಜೀವನ, ಅವರ ಆಯ್ಕೆ. ಜೀವನಕ್ಕೆ ಸವಿ ನೆನಪುಗಳು ಬೇಕೇ ಹೊರತು, ಕಹಿ ನೆನಪುಗಳಲ್ಲ. ಭೂತಕಾಲ ಯಾರ ವರ್ತಮಾನದಲ್ಲೂ ಭೂತವಾಗಿ ಕಾಡಬಾರದು. ಹಾಗಾಗಿ, ಅಂದಿನ ವಿಚಾರ ಅಂದಿಗೆ. ಇಂದಿನ ವರ್ತಮಾನ ಇಂದಿಗೆ. ನಾಳೆ ಹೊಸದೇನೋ ಕಾದಿರುತ್ತದೆ. ಹಳೆಯ ಕಹಿ ಬೇಡ, ಇಂದು ನೋವೂ ಬೇಡ. ಭವಿಷ್ಯದಲ್ಲಿ ಒಳಿತೆನ್ನುವುದು ಎಲ್ಲರ ಪಾಲಿಗೂ ಇದ್ದೇ ಇದೆ. ಹಾಗಾಗಿ ‘ನಾನು’ ಎನ್ನುವುದು ನಮ್ಮ ಬದುಕಿಗೆ, ನಮ್ಮ ಭವಿಷ್ಯಕ್ಕೆ ಮುಖ್ಯವಾಗಬೇಕೇ ಹೊರತು, ಅನ್ಯರ ಜೀವನದಲ್ಲಿ ‘ನಾನೇನೋ ಮಾಡಿದ್ದೆ’, ‘ನನ್ನಿಂದಲೇ ಆಗಿದೆ’ ಎಂಬ ಹಳಹಳಿಕೆ ಬೇಡ. ಅದಕ್ಕೆ ಮೂರುಕಾಸಿನ ಬೆಲೆ ಇಲ್ಲ.