

ಕನ್ನಡದ ಚಿತ್ರಸಾಹಿತಿಗಳೂ ಯುಗಾದಿಯನ್ನು ಬೇರೆ ಬೇರೆ ಸ್ತರಗಳಲ್ಲಿ ಸುಂದರವಾಗಿ, ಸರಳವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಚಿತ್ರದ ಸನ್ನಿವೇಶಕ್ಕೂ ಹೊಂದಿಕೊಳ್ಳುವಂತೆ ಚಿತ್ರಿಸಿದ್ದಾರೆ. ಚಿತ್ರಮಂದಿರದಿಂದ ಹೊರಗೆ ಬಂದ ಮೇಲೂ ಜನಮನದಲ್ಲಿ ಉಳಿಯುವ ಹಾಗಿವೆ ಈ ಗೀತೆಗಳು. ಮನಸ್ಪರ್ಶಿಯಾದ ಈ ಗೀತಸಾಹಿತ್ಯ ಇಂದಿಗೂ ಅನುರಣಿಸುತ್ತ ಅವಿಸ್ಮರಣೀಯವಾಗಿ, ಬೆಂಬಿಡದ ಗುಂಗಾಗಿ ಕಾಡುತ್ತಲೇ ಇವೆ.
‘ಮನಸ್ಸಿದ್ದರೆ ಮಾರ್ಗ’ ಚಿತ್ರದ ಎಂ. ನರೇಂದ್ರ ಬಾಬು ಆವರ ರಚನೆಯ ‘ಈ ಜೀವನ ಬೇವು ಬೆಲ್ಲ, ಬಲ್ಲಾತಗೆ ನೋವೇ ಇಲ್ಲ, ಬಾ ಧೀರರಿಗೇ ಈ ಕಾಲ, ನಿನಗುಂಟು ಜಯ, ತೆರೆದಾ ಹೃದಯಾ ಬಳಿ ಎಲ್ಲಿ ಭಯಾ...’ ಎನ್ನುವ ಹಾಡು ಕೇಳುಗರ ಬದುಕಿನಲ್ಲಿ ಹೊಸ ನಂಬಿಕೆಯನ್ನು ಹುಟ್ಟುಹಾಕುತ್ತದೆ.
‘ಲಕ್ಷ್ಮೀಕಟಾಕ್ಷ’ ಚಲನಚಿತ್ರದ ‘ಬೇವುಬೆಲ್ಲ ಒಂದಾದ ಹಾಗೆ, ಇಂದು ನಮ್ಮ ಜೀವನವು’ ಎನ್ನುವ ಹಾಡು ಕಲ್ಯಾಣ್ಕುಮಾರ್ ಅವರ ಸೊಗಸಾದ ಅಭಿನಯದಲ್ಲಿ ಮೂಡಿಬಂದಿದೆ. ಆ ಒಂದಾಗಿದ್ದ ಕುಟುಂಬದ ಸಹಬಾಳ್ವೆಯ ಸಂಕೇತವಾಗಿ ಬೇವು-ಬೆಲ್ಲದ ರೂಪಕ ಅರ್ಥವತ್ತಾಗುತ್ತದೆ.
‘ದೂರದಬೆಟ್ಟ’ ಚಿತ್ರದ ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮಬಾಳ್ವೆಗೆ...’ ಗೀತೆಯಂತೂ ಮರೆಯಲು ಸಾಧ್ಯವಿಲ್ಲ. ಅದರಲ್ಲಿರುವ ‘ಹಸಿವಿನಲ್ಲೂ ಹಬ್ಬಾನೇ, ದಿನವೂ ನಿತ್ಯ ಉಗಾದಿನೇ, ನನ್ನ ನಿನ್ನಾ ಪಾಲಿಗೆ...’ ಎಂಬ ಸಾಲು ಎಷ್ಟೋ ನೊಂದ ಕಡುಕಷ್ಟ ಜೀವಿಗಳ ಮನದ ಮಾತಾಗಿದೆ. ಈ ಗೀತೆಯನ್ನು ತಾವೇ ಇಷ್ಟಪಟ್ಟು ವಿಜಯನಾರಸಿಂಹ ಅವರಿಂದ ಬರೆಸಿದ್ದು ಎಂದು ಇತ್ತೀಚೆಗೆ ತೀರಿಹೋದ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯ ಒಮ್ಮೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಯುಗಾದಿ ಹಬ್ಬ ಈ ಕಾರಣಕ್ಕಾಗಿಯೇ ಹೊಸಹಾದಿಯ ಹೊಸ ಆದಿಯ ಎಲ್ಲ ಸಲ್ಲಕ್ಷಣಗಳನ್ನು ಹೊಂದಿದೆ.