ಚಿತ್ರಕೇತುವಿನ ಆದರ್ಶ..

Samskruthi
Published on

| ವಾದಿರಾಜ ಪ್ರಸನ್ನ

ಶ್ರೀಮದ್ಭಾಗವತದಲ್ಲಿನ ಒಂದು ಘಟನೆ. ಶೂರಸೇನ ರಾಜ್ಯವನ್ನು ಚಿತ್ರಕೇತು ಆಳುತ್ತಿದ್ದ. ರಾಜ್ಯದಲ್ಲಿ ಸಂಪತ್ಸಮೃದ್ಧಿಯಿತ್ತು. ಚಕ್ರವರ್ತಿಗೆ ಅನೇಕ ಪತ್ನಿಯರಿದ್ದರೂ ಸಂತಾನಭಾಗ್ಯವಿರಲಿಲ್ಲ. ಒಮ್ಮೆ ಮಹರ್ಷಿ ಆಂಗೀರಸರು ಈ ರಾಜ್ಯಕ್ಕೆ ಬಂದರು. ಚಿತ್ರಕೇತು ಸಕಲಮರ್ಯಾದೆಗಳಿಂದ ಅವರನ್ನು ಸತ್ಕರಿಸಿದ. ‘‘ಸಂತಾನಪ್ರಾಪ್ತಿಗೆ ದಾರಿ ತೋರಿಸಿ’’ ಎಂದು ಬೇಡಿಕೊಂಡ. ಆಂಗೀರಸರು ಪುತ್ರಕಾಮೇಷ್ಟಿ ಯಾಗ ಮಾಡಿಸಿ ಹಿರಿಯ ರಾಣಿ ಕೃತದ್ಯುತಿಗೆ ಯಜ್ಞಶೇಷ ಕೊಟ್ಟರು. ಪುತ್ರನಿಂದ ನಿನಗೆ ಸಂತೋಷ-ದುಃಖ ಎರಡೂ ಆಗುವ ಸಂಭವವಿದೆ ಎಂದು ತಿಳಿಸಿದರು. ರಾಣಿ ಕೆಲ ಕಾಲದ ಬಳಿಕ ಗಂಡುಮಗುವಿಗೆ ಜನ್ಮ ನೀಡಿದಳು. ಚಿತ್ರಕೇತು ಸಂತೋಷದಿಂದ ಚಿನ್ನ ಬೆಳ್ಳಿ ದಾನ ಮಾಡಿದ.

ರಾಜನಿಗೆ ಆ ಮಗು ಮತ್ತು ಮಹಾರಾಣಿಯಲ್ಲೇ ಅನುರಾಗ ಇರುವುದನ್ನು ಕಂಡ ಇತರ ರಾಣಿಯರಿಗೆ ಮತ್ಸರ ಉಂಟಾಯಿತು. ವಿಷ ಬೆರೆಸಿದ ಹಾಲನ್ನು ರಾಜಕುಮಾರನಿಗೆ ಕುಡಿಸಿ ಆತನ ಕಥೆ ಮುಗಿಸಿದರು. ಚಿತ್ರಕೇತುವಿನ ದುಃಖ ಮುಗಿಲು ಮುಟ್ಟಿತು. ಆಗ ಅಲ್ಲಿಗೆ ಆಂಗೀರಸರು ನಾರದರೊಂದಿಗೆ ಬಂದರು. ಮಗುವನ್ನು ಬದುಕಿಸುವಂತೆ ಮಹಾರಾಜ ಬೇಡಿದ. ಅಂಗೀರಸರು ಪುತ್ರನಿಂದ ದುಃಖವೊದಗುವ ಸಂಭವವಿದೆಯೆಂದು ಹಿಂದೆಯೇ ತಿಳಿಸಿದುದನ್ನು ನೆನಪಿಸಿದರು. ರಾಜನು ನಾರದರ ಪಾದಗಳನ್ನು ಹಿಡಿದು ಮಗನನ್ನು ಉಳಿಸಿರೆಂದು ಬೇಡಿದ. ಚಿತ್ರಕೇತು ಪಟ್ಟು ಹಿಡಿದುದರಿಂದ ನಾರದರು ಮಗುವನ್ನು ಬದುಕಿಸಿದರು. ನಿದ್ರೆಯಿಂದ ಎದ್ದಂತೆ ಬಂದ ರಾಜಕುಮಾರ ‘ನನಗೇಕೆ ಮರುಜೀವ ಕೊಟ್ಟಿರಿ?’ ಎಂದು ಪ್ರಶ್ನಿಸಿದ. ಅದಕ್ಕೆ ನಾರದರು ‘ನಿನಗೆ ಆಯುಷ್ಯ ಮುಗಿದಿಲ್ಲ. ಅಪಮೃತ್ಯುವಾಗಿದೆ’ ಎಂದರು. ‘ನಾರದರೇ, ನಿಮಗೆ ತಿಳಿಯದ್ದೇನಿದೆ? ತಾಯಿ-ತಂದೆ-ಬಂಧುಗಳೆಲ್ಲಾ ಶರೀರಕ್ಕೆ ಅಂಟಿಕೊಂಡಿರುವವರೆಗೆ ಮಾತ್ರ. ಭಗವಂತನ ನಾಮಸ್ಮರಣೆಯೊಂದೇ ಶಾಶ್ವತ ಸುಖ ನೀಡುವುದು’ ಎಂದು ಹೇಳಿ ರಾಜಕುಮಾರ ದೇಹತ್ಯಾಗ ಮಾಡಿದ. ಇದನ್ನು ಕಂಡ ಮಹಾರಾಜ ಮನಃಪರಿವರ್ತನೆಗೊಂಡು ಮೋಕ್ಷಕ್ಕಾಗಿ ಹಂಬಲಿಸತೊಡಗಿದ; ನಾರದರಿಂದ ಮಹಾವಿಷ್ಣುವಿನ ಸ್ತುತಿರೂಪ ಮಂತ್ರೋಪದೇಶ ಪಡೆದ. 7 ದಿನ ಹಗಲು-ರಾತ್ರಿ ಕಠಿಣ ತಪಸ್ಸು ಮಾಡಿದ. ಅವನ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪಡೆದ.

ಈ ಘಟನೆ ನಮ್ಮ ಜೀವನಕ್ಕೊಂದು ಪಾಠ. ಪ್ರಯತ್ನ ಮಾಡುವಾಗ ಲೌಕಿಕಸುಖಕ್ಕೆ ಅಂಟಿಕೊಳ್ಳದೇ ವಿವೇಕದಿಂದ ವರ್ತಿಸಬೇಕು; ಆತ್ಮಸುಖದ ಕಡೆಗೂ ಲಕ್ಷ್ಯರಬೇಕೆಂಬುದರ ಕಡೆಗೆ ಈ ಘಟನೆಯು ನಮ್ಮ ಗಮನವನ್ನು ಸೆಳೆಯುತ್ತದೆ. ‘‘ಗುರುಭಕ್ತಿ-ಗುರುಸೇವೆಗಳು ನಮ್ಮ ಸಂಸ್ಕೃತಿಯೊಡನೆ ಹೆಣೆದುಕೊಂಡಿರುವ ಜ್ಞಾನಸಂಪ್ರದಾಯದ ಮುಖ್ಯರೂಪಗಳಾಗಿವೆ’’ ಎಂಬ ಶ್ರೀರಂಗಮಹಾಗುರುಗಳ ಅಭಿಪ್ರಾಯವು ಇಲ್ಲಿ ಸ್ಮರಣೀಯ. ನಾವು ಚಿತ್ರಕೇತುವಿನಂತೆ ವಿವೇಕದಿಂದ ಮುಮುಕ್ಷುಗಳಾಗಿ, ಗುರುಕೃಪೆಯೊಂದಿಗೆ ಸಾಧನೆಯನ್ನು ಮಾಡುವವರಾಗೋಣ.

ಯೋಗ, ಭೋಗ ಎರಡೂ ಅಗತ್ಯ...

ಲೌಕಿಕಸುಖಗಳಿಂದ ದೂರವಾಗಬೇಕೆಂಬುದು ಭಾರತೀಯ ಮಹರ್ಷಿಗಳ ಅಭಿಪ್ರಾಯವಲ್ಲ. ಯೋಗ-ಭೋಗಗಳೆರಡಕ್ಕೂ ಆಯತನವಾಗಿರುವ (ಮನೆಯಾಗಿರುವ)ಈ ಶರೀರದಲ್ಲಿ ಯೋಗಕ್ಕೆ ತೊಡಕಾಗದೆ, ಅದಕ್ಕೆ ಪೋಷಕವಾಗುವ ರೀತಿಯಲ್ಲಿ ಭೋಗವನ್ನು ಅನುಭವಿಸಲು ಎಲ್ಲರಿಗೂ ಹಕ್ಕುಂಟು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net