ಮನೆಮನೆಗಳಲ್ಲಿ ಭಗವದ್ಗೀತೆ; ಗೀತಾ ಪರಿವಾರದ ಅಭಿಯಾನ..

Bhagavadgita
Published on
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ, ಏವಂ ಸತತ ಯುಕ್ತಾಯೇ ಭಕ್ತಾಸ್ತಾ್ವಂ ಪರ್ಯುಪಾಸತೇ... ಹೀಗೆ ಭಗವದ್ಗೀತೆಯ ಅಧ್ಯಾಯಗಳ ಶ್ಲೋಕಗಳ ಅನುಪಠಣವು ವಿಶ್ವಾದ್ಯಂತ ಭಾರತೀಯರ ಮನೆಮನೆಗಳಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ವಿವಿಧ ಸಮಯಗಳಲ್ಲಿ ಕೇಳಿ ಬರುವುದೇ ಒಂದು ಸೊಗಸು. ಇದರ ಹಿಂದೆ ಗೀತಾ ಪರಿವಾರದ ಪರಿಶ್ರಮ ಇದೆ.

| ಡಾ. ಅರುಣ ಕೆ.ಆರ್.

ವೇದವ್ಯಾಸ ಮುನಿಗಳಿಂದ ರಚಿತವಾದ ಮಹಾನ್ ಗ್ರಂಥ ಮಹಾಭಾರತ. ಇದರಲ್ಲಿ ಭೀಷ್ಮಪರ್ವವು ಪಾಂಡವ ಮತ್ತು ಕೌರವರ ಮೊದಲ ಹತ್ತು ದಿನಗಳ ಯುದ್ಧವನ್ನು ವರ್ಣಿಸುತ್ತದೆ. ಅದರ ಒಂದು ಭಾಗವೇ (25ರಿಂದ 42ನೇ ಅಧ್ಯಾಯದವರೆಗೆ - 18 ಅಧ್ಯಾಯಗಳು) ಭಗವದ್ಗೀತೆ. ಇದು ಪ್ರಮುಖವಾಗಿ ಕೃಷ್ಣ ಮತ್ತು ಅರ್ಜುನರ ಸಂವಾದ. ಯುದ್ಧವು ಏಕೆ ಮತ್ತು ಯಾವಾಗ ಅವಶ್ಯ ಎಂಬುದರ ಜತೆಗೆ ಧರ್ಮ (ಕರ್ತವ್ಯ), ಕರ್ಮ (ಕ್ರಿಯೆ) ಹಾಗೂ ಮೋಕ್ಷದ ಪಥಗಳನ್ನು ವಿವರಿಸುತ್ತದೆ. ಕೌರವರು ಮತ್ತು ಪಾಂಡವರ ಮಧ್ಯೆ ಯುದ್ಧ ಏರ್ಪಟ್ಟಾಗ, ಮೊದಲ ದಿನ ಅರ್ಜುನನು ನೈತಿಕ ಮತ್ತು ಭಾವನಾತ್ಮಕ ಸಂದಿಗ್ಧತೆ, ಹಿಂಸೆ ಮತ್ತು ಮರಣದ ಬಗ್ಗೆ ಹತಾಶೆಯಿಂದಲೂ, ತನ್ನ ಸಂಬಂಧಿಕರ ವಿರುದ್ಧ ಯುದ್ಧದಲ್ಲಿ ಭಾಗಿಯಾಗಬೇಕಾಗಿರುವ ಅನಿವಾರ್ಯತೆಯಲ್ಲಿಯೂ ಇದ್ದಾನೆ. ಯುದ್ಧವನ್ನು ತ್ಯಜಿಸಬೇಕೇ ಎಂದು ಯೋಚಿಸುತ್ತ ವಿಷಾದಭಾವದಿಂದ ಕೃಷ್ಣನನ್ನು ಯುದ್ಧದ ಉದ್ದೇಶ, ಹಿಂಸೆಯ ಪರಿಣಾಮಗಳು, ಜೀವನದ ಅರ್ಥವನ್ನು ಕುರಿತು ಕೇಳಿದಾಗ, ಕೃಷ್ಣನು ಅರ್ಜುನನ ಎಲ್ಲಾ ಸಂದೇಹಗಳಿಗೂ ಉತ್ತರಿಸುತ್ತಾನೆ. ಈ ಉತ್ತರಗಳು ಭಗವದ್ಗೀತೆಯನ್ನು ರೂಪಿಸುತ್ತವೆ. ಭಗವದ್ಗೀತೆ ರೂಪುಗೊಂಡ ದಿನವು ಮೋಕ್ಷಾದಾ ಏಕಾದಶಿ. ಅಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಪ್ರಪಂಚದ ಬೇರಾವ ಗ್ರಂಥವೂ ಈ ರೀತಿಯ ಭಕ್ತಿಪೂರ್ವಕ ಗೌರವವನ್ನು ಪಡೆದಿಲ್ಲ. ಭಗವದ್ಗೀತೆಯಲ್ಲಿ ಕೃಷ್ಣ ಮತ್ತು ಅರ್ಜುನರ ಸಂಭಾಷಣೆಗಳು ಯುದ್ಧವನ್ನೂ ಮೀರಿ ಆಧ್ಯಾತ್ಮಿಕ ವಿಷಯಗಳ ವಿಶಾಲ ವ್ಯಾಪ್ತಿಯನ್ನು ಒಳಗೊಂಡಿವೆ. ನೈತಿಕ ಸಂದಿಗ್ಧತೆಗಳು ಹಾಗೂ ತಾತ್ವಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತವೆ.

ನಮ್ಮ ಪೂರ್ವಜರ ಕಾಲದಿಂದಲೂ ಭಗವದ್ಗೀತೆಯನ್ನು ಸ್ವತಂತ್ರ ಶಾಸ್ತ್ರ ಗ್ರಂಥವೆಂದೇ ಪರಿಗಣಿಸಲಾಗಿದೆ. ಶಂಕರಾಚಾರ್ಯರು ಹೇಳುವಂತೆ ಇದು ಸಮಸ್ತ ವೇದಾರ್ಥಸಾರ ಸಂಗ್ರಹ. ಭಗವದ್ಗೀತೆಯು ಉಪನಿಷತ್ತುಗಳು ಹೇಳುವ ವಿಚಾರವನ್ನೇ ತಿಳಿಯಾಗಿ, ಎಲ್ಲರಿಗೂ ಮನದಟ್ಟಾಗುವಂತೆ ತಿಳಿಸುತ್ತದೆ. ವಿದ್ವಾಂಸರೊಬ್ಬರ ಅಭಿಪ್ರಾಯದಂತೆ ಉಪನಿಷತ್ತುಗಳು ಹಸುಗಳ ರೂಪವಾದರೆ, ಭಗವದ್ಗೀತೆಯು ಅದರಿಂದ ಕರೆದುಕೊಂಡ ಹಾಲಿನಂತೆ. ಮೊದಲೇ ಹೇಳಿದಂತೆ ಗೀತೆಯು ಮನುಷ್ಯನ ಶೋಕ/ದುಃಖವನ್ನು ನಿವಾರಣೆ ಮಾಡುತ್ತದೆ. ಇದೇ ಗೀತೆಯ ಮುಖ್ಯ ಉದ್ದೇಶ. ಗೀತೆಯ ಅರ್ಥವನ್ನು ಸರಿಯಾಗಿ ಮನವರಿಕೆ ಮಾಡಿಕೊಂಡಾಗ, ಅದನ್ನೇ ಮನಸ್ಸಿನಲ್ಲಿ ಮೆಲುಕು ಹಾಕಿದಾಗ, ನಮ್ಮ ನಮ್ಮ ಅನುಭವದಲ್ಲಿ ಅದನ್ನು ಒಳಹೊಕ್ಕು ನೋಡಿದಾಗ, ಅದರಲ್ಲಿರುವ ಸೂಚನೆಗಳನ್ನು ಬದುಕಿನಲ್ಲಿ ಪ್ರಯೋಗಿಸಲು ಪ್ರಯತ್ನಿಸಿದಾಗ ಗೀತೆಯ ಮಹತ್ವ ನಮ್ಮ ಅರಿವಿಗೆ ಬರುತ್ತದೆ.

ಇಂದು ನಾವೆಲ್ಲ ವ್ಯಕ್ತಿತ್ವ ವಿಕಸನ ತರಬೇತಿ ಎಂದು ಯಾವುದನ್ನು ಹೇಳುತ್ತೇವೆಯೋ, ಅದು ಭಗವದ್ಗೀತೆಯಿಂದಲೇ ದೊರೆಯುತ್ತದೆ. ಬದುಕನ್ನು ಸ್ವೀಕರಿಸುವ ಅಥವಾ ಎದುರಿಸುವ ಛಾತಿಯನ್ನು ಗೀತೆ ಒದಗಿಸಿಕೊಡುತ್ತದೆ. ಯಾವುದೇ ಸನ್ನಿವೇಶದಲ್ಲೂ ಸಮಚಿತ್ತದಿಂದ ಹೇಗಿರಬೇಕು ಎಂಬುದನ್ನು ಗೀತೆಯಲ್ಲಿ ಸರಳವಾಗಿ, ಖಚಿತವಾಗಿ ಕೃಷ್ಣ ತಿಳಿಸಿದ್ದಾನೆ. ಇದೇ ರೀತಿ ಭಗವದ್ಗೀತೆಯ 18 ಅಧ್ಯಾಯಗಳಲ್ಲೂ ನಮ್ಮ ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ ಉತ್ತರ ಸಿಗುತ್ತವೆ. ಇದನ್ನು ಡಿವಿಜಿಯವರು ತಮ್ಮ ‘ಜೀವನ ಧರ್ಮ ಯೋಗ’ದಲ್ಲಿ ವಿವರಿಸಿದ್ದಾರೆ. ಅಧ್ಯಾತ್ಮದಲ್ಲಿ ನಿಷ್ಠರಾದವರಿಂದ ಹಿಡಿದು ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ಲೋಕಮಾನ್ಯ ತಿಲಕರು, ಮಹಾತ್ಮಾ ಗಾಂಧಿ, ಅರವಿಂದರು, ಅನಿಬೆಸೆಂಟ್ ಮುಂತಾದವರು ಗೀತೆಯಿಂದಲೇ ಬೆಳಕು ಪಡೆದವರು. ಅವರಿಗೆಲ್ಲಾ ಗೀತೆಯೇ ಊರುಗೋಲಾಗಿತ್ತು.

ಇಂತಹ ಪ್ರಭಾವಶಾಲಿಯಾದ ಭಗವದ್ಗೀತೆಯನ್ನು ಇಂದು ಮನೆಮನೆಗೆ ತಲುಪಿಸುತ್ತಿರುವುದು ಗೀತಾ ಪರಿವಾರ. ಇದರ ಸಂಸ್ಥಾಪಕ ಅಧ್ಯಕ್ಷರು ಸ್ವಾಮಿ ಶ್ರೀ ಗೋವಿಂದಗಿರಿಜೀ ಮಹಾರಾಜ್. ಭಗವದ್ಭಕ್ತಿ, ಭಗವದ್ಗೀತೆ, ಭಾರತಮಾತಾ, ವಿಜ್ಞಾನದೃಷ್ಟಿ ಮತ್ತು ಸ್ವಾಮಿ ವಿವೇಕಾನಂದ ಈ ಪಂಚಸೂತ್ರಗಳನ್ನು ಸ್ವಾಮೀಜಿ ‘ಗೀತಾ ಪರಿವಾರ’ದಲ್ಲಿ ಅಳವಡಿಸಿದ್ದಾರೆ.

ಅತಿ ದೊಡ್ಡ ಆನ್​ಲೈನ್ ಭಗವದ್ಗೀತಾ ತರಗತಿ: ಕರೊನಾ ಆವರಿಸಿದ್ದ ಸಂದಿಗ್ಧ ಸಮಯದಲ್ಲಿ ಭಗವದ್ಗೀತೆಯನ್ನು ಮನೆಮನೆಗೆ ತಲುಪಿಸುವ ಸ್ವಾಮೀಜಿಯವರ ಉದ್ದೇಶದಂತೆ ಗೀತಾ ಪರಿವಾರದ ವತಿಯಿಂದ ಆನ್​ಲೈನ್ ತರಗತಿಗಳು ಪ್ರಾರಂಭವಾದವು. ಮೊದಲು ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಲ್ಲಿ ಪ್ರಾರಂಭವಾದ ತರಗತಿಗಳು ಕ್ರಮೇಣ ವಿಸ್ತಾರವನ್ನು ಹೆಚ್ಚಿಸಿಕೊಂಡು, ಈಗ ಸುಮಾರು 134 ದೇಶಗಳ 4,66,600ಕ್ಕೂ ಅಧಿಕ ಮಂದಿ ಗೀತೆ ಕಲಿಯುವ ಆಸಕ್ತಿಯಿಂದ, ತಮ್ಮ ಹೆಸರನ್ನು ನೋಂದಾಯಿಸಿಕೊಂಡು, ಕನ್ನಡವೂ ಸೇರಿದಂತೆ 12 ಭಾಷೆಗಳಲ್ಲಿ ಭಗವದ್ಗೀತೆಯನ್ನು ಕಲಿಯುತ್ತಿದ್ದಾರೆ. ಇದು ಪ್ರಪಂಚದ ಅತಿ ದೊಡ್ಡ ಆನ್​ಲೈನ್ ಗೀತಾತರಗತಿಯಾಗಿ ಮಹತ್ವದ ಸಾಧನೆ ಮಾಡಿದೆ.

ನೀವೂ ಭಾಗವಹಿಸಿ: ಈ ತಿಂಗಳ 9ರಂದು ಗೀತಾ ತರಗತಿಯ ಮೊದಲ ಹಂತದ 23ನೇ ಬ್ಯಾಚ್ ಪ್ರಾರಂಭವಾಗಲಿದೆ. ್ಟಜ.ಛಿಚ್ಟ್ಞಛಿಛಿಠಿಚ.ಟಞ ಲಿಂಕ್ ಬಳಸಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನ ಜ. 8. ಬನ್ನಿ, ಭಗವದ್ಗೀತೆಯನ್ನು ಕಲಿತು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿರಿ.

ಹೀಗೆ ನಡೆಯುತ್ತದೆ ತರಗತಿ: ಗೀತಾಪರಿವಾರದ ವತಿಯಿಂದ ವಾರದಲ್ಲಿ ಐದು ದಿನ (ಸೋಮವಾರದಿಂದ ಶುಕ್ರವಾರದವರೆಗೆ) ಜೂಮ್ ಆಪ್ ಮೂಲಕ 18 ಬೇರೆ ಬೇರೆ ಸಮಯಗಳಲ್ಲಿ (ಬೆಳಗ್ಗೆ 5 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ) 40 ನಿಮಿಷಗಳ ತರಗತಿಗಳು ನಡೆಯುತ್ತವೆ. ಇದರಲ್ಲಿ ಪ್ರವೇಶ, ಕಲಿಕೆ ಎಲ್ಲವೂ ಉಚಿತ. ಗೀತೆಯ 18 ಅಧ್ಯಾಯಗಳನ್ನು ನಾಲ್ಕು ಹಂತಗಳಲ್ಲಿ ಕಲಿಯಬಹುದು. ಸುಮಾರು ಒಂದೂಕಾಲು ವರ್ಷದಲ್ಲಿ ಸಂಪೂರ್ಣ ಭಗವದ್ಗೀತೆಯ ಶುದ್ಧ ಉಚ್ಚಾರಣೆಯನ್ನು ಸಾಧಿಸಬಹುದು. ಆಸಕ್ತರು ತಮಗೆ ಅನುಕೂಲವೆನಿಸುವ ಸಮಯ, ಭಾಷೆ ಆಯ್ದುಕೊಂಡು, ಹೆಸರು ನೋಂದಾಯಿಸಿಕೊಂಡರೆ ಅವರ ಹೆಸರನ್ನು ಆ ಸಮಯದ ವಾಟ್ಸ್​ಆಪ್ ಗುಂಪಿಗೆ ಸೇರಿಸಲಾಗುತ್ತದೆ. ಜೂಮ್ ಲಿಂಕ್ ಹಾಗೂ ತರಗತಿಯ ಎಲ್ಲಾ ವಿವರಗಳು ವಾಟ್ಸ್​ಆಪ್ ಗುಂಪಿನ ಮೂಲಕ ತಲುಪುತ್ತವೆ. ಅನುಭವವುಳ್ಳ ನುರಿತ ಶಿಕ್ಷಕರು ಸಂಸ್ಕೃ ವ್ಯಾಕರಣವನ್ನು ಅನುಸರಿಸಿ ಗೀತೆಯನ್ನು ಕಲಿಸುತ್ತಾರೆ. ಭಗವದ್ಗೀತೆಯ ಶುದ್ಧ ಉಚ್ಚಾರಣೆಗಾಗಿ ಅನುಸ್ವಾರ, ವಿಸರ್ಗ, ಆಘಾತ ಮತ್ತು ಸಂಸ್ಕೃದ ಸಾಮಾನ್ಯ ನಿಯಮಗಳ ವಿವರಣೆ ಮಾತ್ರವಲ್ಲದೆ, ಶ್ಲೋಕಗಳ ಅರ್ಥವನ್ನು ವಿವರಿಸಲು ವಾರಾಂತ್ಯದಲ್ಲಿ ವಿದ್ವಾಂಸರಿಂದ ವಿಶೇಷ ತರಗತಿಗಳು ಇರುತ್ತವೆ. ಆಯಾ ಅಧ್ಯಾಯದ ಪಿಡಿಎಫ್, ಪ್ರತಿದಿನ ಕಲಿಸಲಾಗುವ ಶ್ಲೋಕಗಳ ಆಡಿಯೋ ಮತ್ತು ಪಠ್ಯವನ್ನು ವಾಟ್ಸ್​ಆಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗುತ್ತದೆ. ತರಗತಿಯಲ್ಲಿ ಶಿಕ್ಷಕರು ಹೇಳಿಕೊಡುವ ಶ್ಲೋಕಗಳನ್ನು ಗುಂಪಿನಲ್ಲಿ ಹಾಗೂ ವೈಯಕ್ತಿಕವಾಗಿ ಪಠಣ ಮಾಡಿಸಲಾಗುತ್ತದೆ. ಹಾಗಾಗಿ ಗೀತೆಯನ್ನು ವ್ಯಾಕರಣಬದ್ಧವಾಗಿ, ಸ್ಪಷ್ಟ ಉಚ್ಚಾರಣೆಯೊಂದಿಗೆ ಕಲಿಯಬಹುದು. ಪ್ರತಿ ಅಧ್ಯಾಯದ ಸಾರಾಂಶ ಮತ್ತು ವ್ಯಾಕರಣಗಳ ಆಡಿಯೋ-ವಿಡಿಯೋಗಳನ್ನು ವಾಟ್ಸ್​ಆಪ್ ಗುಂಪಿನಲ್ಲಿ ಹಂಚಿಕೊಳ್ಳಲಾಗುತ್ತದೆ. ಶ್ಲೋಕಗಳನ್ನು ಬಾಯಿಪಾಠ ಮಾಡುವ ಕಡ್ಡಾಯ ನಿಯಮವಿಲ್ಲದಿದ್ದರೂ ಆಸಕ್ತರು ಗೀತಾ ಪರಿವಾರ ನಡೆಸುವ ವಿವಿಧ ಪರೀಕ್ಷೆಗಳಿಗಾಗಿ ಬಾಯಿಪಾಠ ಮಾಡಬಹುದಾಗಿದೆ.

(ಲೇಖಕರು ಸಂಶೋಧಕಿ ಹಾಗೂ ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net