

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್.
ಆ ಎರಡು ಘಟನೆಗಳು ಸಂಭವಿಸಿರದಿದ್ದರೆ ಇವರು ಜೀವನದಲ್ಲಿ ಕೋವಿ ಹಿಡಿಯುವುದು ಸಾಧ್ಯವಾಗುತ್ತಿರಲಿಲ್ಲವೇನೋ! ಐದನೇ ತರಗತಿಯಲ್ಲಿದ್ದಾಗ ಭೋಜನ ವಿರಾಮದ ವೇಳೆ ಮನೆಗೆ ಓಡಿಬಂದರೆ, ಮಕ್ಕಳಿಗೆ ಊಟ ನೀಡಲು ಸಾಧ್ಯವಿಲ್ಲದೆ ತಾಯಿ ಕಣ್ಣೀರುಗರೆದ ಘಟನೆ. ಇನ್ನೊಮ್ಮೆ, ಏಳನೇ ತರಗತಿಯಲ್ಲಿದ್ದಾಗ ಟೈಫಾಯ್್ಡ ಆಗಿತ್ತು. ಎದುರಿಗಿಟ್ಟ ಅನ್ನದ ಗಂಜಿಯನ್ನು ಐದು ವರ್ಷದ ಪುಟ್ಟ ತಮ್ಮ ಆಸೆಯಿಂದ ದಿಟ್ಟಿಸುತ್ತಿದ್ದ. ‘ತಗೋ, ತಿನ್ನು’ ಎಂದರೆ ‘ಬೇಡ, ನಿನಗೆ ಜ್ವರ ಇರೋದ್ರಿಂದ ಅಮ್ಮ ಪಕ್ಕದ ಮನೆಯಿಂದ ಒಂದು ಲೋಟ ಅಕ್ಕಿ ಕೇಳಿ ತಂದು ಗಂಜಿ ಮಾಡಿದ್ದಾಳೆ, ಅದನ್ನು ನೀನೇ ಕುಡಿಯಬೇಕು’ ಎಂದ.
ಶಿವಮೊಗ್ಗ ಜಿಲ್ಲೆ ಮಂಡಗದ್ದೆಯ ಕೆ. ಮಹಮ್ಮದ್ ಬ್ಯಾರಿ ಅವರ ಜೀವನದಲ್ಲಿ ನಡೆದ ಘಟನೆಗಳಿವು. ಓದುವುದರಲ್ಲಿ ಮುಂದಿದ್ದರೂ, ಇಂತಹ ಆರ್ಥಿಕ ಸ್ಥಿತಿಯಿಂದಾಗಿ ಶಿಕ್ಷಣ ಮುಂದುವರೆಸಲು ಆಗಲಿಲ್ಲ. ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ತತ್ವಾರ ಇರುವಾಗ ಹಿರಿಮಗನಾಗಿ ಶಾಲೆಯಲ್ಲಿ ಓದುತ್ತಾ ಕುಳಿತುಕೊಳ್ಳುವುದು ಸರಿಯಲ್ಲ ಎಂದು ನಿಶ್ಚಯಿಸಿ, ವಿದ್ಯುತ್ ಇಲಾಖೆಗೆ ಫೀಲ್ಡ್ ವರ್ಕರ್ ಆಗಿ ಕೆಲಸಕ್ಕೆ ಸೇರಿದರು. ಒಂದೆರಡು ವರ್ಷದ ಬಳಿಕ ಗಡಿಭದ್ರತಾ ಪಡೆಗೆ ಸಿಪಾಯಿಯಾಗಿ ಸೇರ್ಪಡೆಯಾದರು. ಕಾಶ್ಮೀರ, ಪಶ್ಚಿಮ ಬಂಗಾಳ, ತ್ರಿಪುರಾ, ನಾಗಾಲ್ಯಾಂಡ್, ಮೇಘಾಲಯ ಸೇರಿದಂತೆ ದೇಶದ ಹಲವು ಗಡಿಭಾಗಗಳಲ್ಲಿ 38 ವರ್ಷ ನಡೆಯಿತು ಪಹರೆ ಕಾಯಕ.
ಧರ್ಮದ ಸೀಮೆ ದಾಟಿದ ಕಲೆ: 73ರ ಇಳಿವಯಸ್ಸಿನಲ್ಲೂ ಮಹಮ್ಮದ್ ಅವರು ವಿವಿಧ ಶಾಲೆಗಳಿಗೆ ಹೋಗಿ ಮಕ್ಕಳಿಗೆ ತಮ್ಮ ಕಲೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಮಹಾಭಾರತ ಉತ್ಸವದಲ್ಲಿ ಮಹಮ್ಮದ್ ಅವರ ಚಿತ್ರಪ್ರದರ್ಶನ ಮಳಿಗೆ ಹಾಕಲಾಗಿತ್ತು. ಸಾರ್ವಜನಿಕರು ಮತ್ತು ಕಲಾವಿದರು ಆ ಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ತಮ್ಮ ಅಧ್ಯಯನಾಸಕ್ತಿ, ಚುರುಕುತನ, ಧೈರ್ಯದ ಗುಣಗಳಿಂದಾಗಿ ಮಹಮದ್ ಬಹುಬೇಗ ಬಿಎಸ್ಎಫ್ನ ಉನ್ನತಾಧಿಕಾರಿಗಳಿಗೆ ಅಚ್ಚುಮೆಚ್ಚಿನ ವ್ಯಕ್ತಿಯಾದರು. ಆ ಕಾಲದಲ್ಲಿ ಬಾಂಗ್ಲಾದೇಶದೊಂದಿಗಿನ 165 ಕಿ.ಮೀ. ಉದ್ದದ ಗಡಿಯಲ್ಲಿ ಕಳ್ಳಸಾಗಣೆ ವ್ಯಾಪಕವಾಗಿತ್ತು. ತಾವು ಸಂಚರಿಸಿದ ಸ್ಥಳದ ಸಮಗ್ರ ವಿವರಗಳನ್ನು ಒಳಗೊಂಡ ಚಿತ್ರಸಹಿತ ಕೈಪಿಡಿ ತಯಾರಿಸುವುದು ಮಹಮ್ಮದ್ ಅವರಿಗೆ ಸಿದ್ಧಿಸಿತ್ತು. ಅಲ್ಲಿನ ಭೌಗೋಳಿಕ, ಐತಿಹಾಸಿಕ, ರಾಜಕೀಯ, ಸಾಮಾಜಿಕ ವಿವರಗಳನ್ನು ಸಹ ಅದರಲ್ಲಿ ಸೇರಿಸುತ್ತಿದ್ದರು. ಬಿಎಸ್ಎಫ್ ಅಧಿಕಾರಿಗಳಿಗೆ ಇದು ಕಾರ್ಯಾಚರಣೆಯ ನೀಲನಕ್ಷೆ ತಯಾರಿಸಲು ಅತ್ಯಂತ ಸಹಾಯಕವಾಗುತ್ತಿತ್ತು.
‘ನಾಗಾಲ್ಯಾಂಡ್ನ ನಾಗಾ ಬಂಡಾಯದ ಹಿನ್ನೆಲೆ’ ಎಂಬ ಮಹಮದ್ರ ಕೈಪಿಡಿ, ಬಿಎಸ್ಎಫ್ ಅಧಿಕಾರಿಗಳಿಗೆ ಈಗಲೂ ಆಕರಕೋಶವಾಗಿ ಬಳಕೆಯಲ್ಲಿದೆ. ಇವರ ಆಳ ಅಧ್ಯಯನ ಹಾಗೂ ದೂರದೃಷ್ಟಿಯುಳ್ಳ ಮಾಹಿತಿ ಕ್ರೋಢೀಕರಣವೇ ಇದಕ್ಕೆ ಕಾರಣ. ಚೀನಾ, ಟಿಬೆಟ್, ಪಾಕಿಸ್ತಾನ, ಬರ್ವ ಗಡಿಗಳಲ್ಲಿನ ಸೇವೆ ನಂತರ ದೆಹಲಿಗೆ ವರ್ಗವಾಯಿತು. ಅಲ್ಲಿಯವರೆಗೂ ಸುಪ್ತವಾಗಿದ್ದ ಕಲೆ ಅರಳಲು ನಾಂದಿಯಾಯಿತು. ಬಿಡುವಿನ ವೇಳೆಯಲ್ಲಿ ‘ಓಂ’ಕಾರ, ಶೂನ್ಯ, ತ್ರಿಕೋನದಿಂದ ಕಲೆ ಸೃಷ್ಟಿಸುವ ಕೆಲಸ ಆರಂಭಿಸಿದರು.
ಬಿಎಸ್ಎಫ್ನಲ್ಲಿನ ಸೇವೆ ಜೀವನದಲ್ಲಿ ಸಂತೃಪ್ತಿ ನೀಡಿದೆ. ದೇಶಕ್ಕಾಗಿ ಅಳಿಲು ಸೇವೆ ಸಲ್ಲಿಸಲು ನನಗೆ ಸಾಧ್ಯವಾಯಿತು. ಒಂದಷ್ಟು ವರ್ಷ ನನ್ನ ದೇಶದ ಜನತೆ ನೆಮ್ಮದಿಯಿಂದ ನಿದ್ರಿಸುವಲ್ಲಿ ನನ್ನ ಸಣ್ಣದೊಂದು ಕೊಡುಗೆಯೂ ಇತ್ತು ಎಂಬುದೇ ಹೆಮ್ಮೆಯ ವಿಷಯ. ಯಾರಿಗೆ ಸಂಸ್ಕೃತದ ‘ಓಂ’ ಬರೆಯಲು ಹಾಗೂ ಶೂನ್ಯ (0) ಬರೆಯಲು ಬರುವುದೋ ಅವರಿಗೆಲ್ಲ ನಾನು ನನ್ನ ಚಿತ್ರಕಲೆಯನ್ನು ಕಲಿಸಬಲ್ಲೆ. | ಮಹಮದ್ ಬ್ಯಾರಿ
(ಲೇಖಕರು ಆಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)