ಕತ್ತಲ ದಾರಿಯಲ್ಲಿ ಕೈದೀವಿಗೆಯ ಬೆಳಕು

Samayika 27 Sept 20
Published on
‘ನಮ್ಮ ಕನಸುಗಳಿಗೆ, ಭವಿಷ್ಯಕ್ಕೆ ಬೆಂಕಿ ಹಚ್ಚಲು ನಿಮಗೆಷ್ಟು ಧೈರ್ಯ?’- ಇದು 2019 ಸೆಪ್ಟೆಂಬರ್ 23ರಂದು ವಿಶ್ವಸಂಸ್ಥೆ ಸಭಾಂಗಣದಲ್ಲಿ ಜಾಗತಿಕ ನಾಯಕರನ್ನು ಉದ್ದೇಶಿಸಿ ಹದಿನಾರರ ಹರೆಯದ ಗ್ರೇತಾ ಥನ್​ಬರ್ಗ್ ಕೇಳಿದ ಪ್ರಶ್ನೆ.

ಹೊಸ ಹೊಸ ಸಾಧ್ಯತೆಗಳನ್ನು ಶೋಧಿಸುವ ಭರದಲ್ಲಿ ನಮ್ಮ ಬಾಧ್ಯತೆಯನ್ನು ನಾವು ಪರಿಗಣಿಸಲೇ ಇಲ್ಲ. ಫಾಸಿಲ್ ಇಂಧನಗಳನ್ನು ಎತ್ತಿ ಉರಿಸುವ ಭರಾಟೆಯಲ್ಲಿ, ಕಚ್ಚಾತೈಲದಿಂದ ಪ್ಲಾಸ್ಟಿಕ್ ಎಂಬ ದ್ರವ್ಯವನ್ನು ಉತ್ಪಾದಿಸಿ ಬಳಸುವ ಧಾವಂತದಲ್ಲಿ ಅದರಿಂದುಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಎಚ್ಚರ ವಹಿಸಲಿಲ್ಲ. ಖನಿಜಗಳನ್ನು ಎತ್ತುವ ಭರದಲ್ಲಿ ನೆಲದೊಳಗಿನ ನಿಕ್ಷೇಪ ಖಾಲಿ ಆಗುತ್ತಿರುವುದನ್ನು ಗಮನಿಸಲಿಲ್ಲ. ಭೂಮಿಯೊಳಗೆ ರಂಧ್ರ ಕೊರೆದು ಅಂತರ್ಜಲವನ್ನು ಮೇಲೆತ್ತುವ ತವಕದಲ್ಲಿ ಅದೊಂದು ಸೀಮಿತ ಖಜಾನೆ ಎಂಬುದನ್ನು ಪರಿಗಣಿಸಲಿಲ್ಲ. ಜನಸಂಖ್ಯೆಗೆ ಆಹಾರವನ್ನು ಉತ್ಪಾದಿಸಲೆಂದು ಬೃಹತ್ ಯಂತ್ರಗಳ ನೆರವಿನಿಂದ ಕೃಷಿಭೂಮಿಯನ್ನು ವಿಸ್ತರಿಸುವಾಗ ಅರಣ್ಯಸಂರಕ್ಷಣೆಗೆ ಗಮನ ಕೊಡಲಿಲ್ಲ. ರಸಗೊಬ್ಬರಗಳನ್ನೂ ಕೆಮಿಕಲ್ ಪೀಡೆನಾಶಕಗಳನ್ನೂ ಹೊಲಕ್ಕೆ ಸುರಿಯುವಾಗ ಜೀವಜಾಲದ ನಾಶ ಮತ್ತು ಮಣ್ಣಿನ ಆರೋಗ್ಯ ಕುರಿತು ಚಿಂತಿಸಲಿಲ್ಲ. ಹಾಗೆ ಉತ್ಪಾದಿಸಿದ ಹೇರಳ ಆಹಾರದ್ರವ್ಯಗಳು ಹಸಿದವರಿಗೂ ಎಟಕುವಂತಾಗಬೇಕು ಎಂಬ ನೈತಿಕತೆಯನ್ನು ಪಾಲಿಸಲಿಲ್ಲ. ಉಳ್ಳವರ ಆಸೆ ದುರಾಸೆಗಳನ್ನು ಪೂರೈಸುವ ಭರದಲ್ಲಿ ಇಡೀ ಪೃಥ್ವಿಯೇ ಅಸ್ವಸ್ಥಗೊಳ್ಳುತ್ತಿರುವುದನ್ನು ಗಮನಿಸಲೂ ಪುರುಸೊತ್ತಿರಲಿಲ್ಲ- ಈ ಎಲ್ಲ ಅಡ್ಡ ಪರಿಣಾಮಗಳೂ ಹೀಗೆ ಒಟ್ಟಾಗಿ ವಕ್ಕರಿಸಿದಾಗ, ಹಿರಿಯ ಮುತ್ಸದ್ದಿಗಳು ಮಿಸುಕಲಾರದ ಸ್ಥಿತಿಯಲ್ಲಿ ಪಟ್ಟಭದ್ರರಾಗಿರುವಾಗ ಹೊಸ ತಲೆಮಾರು ತಮ್ಮ ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಹಿರಿಯರಿಗೆ ಪಾಠ ಹೇಳಲು ಸಜ್ಜಾಗುತ್ತಿದ್ದಾರೆ. ಭೂಮಿಯ ಮೇಲಿನ ಎಲ್ಲ ಎಳೆಯರ, ಹೊಸಪೀಳಿಗೆಯ ಪ್ರತಿನಿಧಿ ಎಂಬಂತೆ ಗ್ರೇತಾ ಥನ್​ಬರ್ಗ್ ಗಮನ ಸೆಳೆಯುತ್ತಿದ್ದಾಳೆ ಎಂದು ನಮ್ಮ ಪರಿಸರ ವಿಜ್ಞಾನಿ ನಾಗೇಶ ಹೆಗಡೆ ಅವಳನ್ನು ನಮಗೆ ಪರಿಚಯಿಸುತ್ತಾರೆ. ಇದನ್ನೂ ಓದಿ: ಅತಿಭೋಗವದು ರೋಗ, ಕೊಲ್ಲುವುದು ಬೇಗ…

2003 ಜನವರಿ 3ರಂದು ಸ್ವೀಡನ್ನಿನ ರಾಜಧಾನಿ ಸ್ಟಾಕ್​ಹೋಮ್ಲ್ಲಿ ಜನಿಸಿದ ಈ ಹುಡುಗಿಯ ಪೂರ್ಣ ಹೆಸರು ‘ಗ್ರಿಯೆತಾ ಟಿನ್​ಟಿನ್ ಎಲಿಯನೋರಾ ತುನ್​ಬರಿ ಎರ್ನ್​ವುನ್’. ಇಂಗ್ಲಿಷಿನಲ್ಲಿ ಎಛಿಠಿಚ ಖಜ್ಠ್ಞಛ್ಟಿಜ. ಗ್ರೇಟಾ ಥುನ್​ಬರ್ಗ್ ಎಂದು ಜಗತ್ತಿನ ಬಹಳಷ್ಟು ಜನರು ಓದಿಕೊಳ್ಳುತ್ತಾರೆ. ಅವಳೇ ತನ್ನ ಹೆಸರು ಗ್ರಿಯೆತಾ ತುನ್​ಬರಿ ಎಂದು ಸ್ಪಷ್ಟಪಡಿಸಿದ್ದಾಳೆ. ನಾಗೇಶ ಹೆಗಡೆ ಗ್ರಿಯತಾ ಅಥವಾ ಗ್ರೇಟಾಳನ್ನು ನಮ್ಮ ಗೀತಾ, ಶ್ವೇತಾ, ಸೀತಾ ಇವರಿಗೆ ಹತ್ತಿರವಾಗುವಂತೆ ‘ಗ್ರೇತಾ’ ಎಂದು ಕರೆದಿದ್ದಾರೆ. ಇವಳ ತಂದೆ ಸ್ವಾಂತಿ ತುನ್​ಬರಿ, ವೃತ್ತಿಯಲ್ಲಿ ನಟ. ತಾಯಿ ಮಲೇನಾ ಎರ್ನ್​ವುನ್, ಪ್ರಶಸ್ತಿವಿಜೇತ ಗಾಯಕಿ, ಒಪೇರಾ ಸಿಂಗರ್. ಗ್ರೇತಾ ತಂಗಿ ಬಿಯತಾ ಕೂಡ ಅಮ್ಮನಂತೆಯೇ ಗಾಯಕಿ.

ಗ್ರೇತಾ ಎಂಟನೇ ವಯಸ್ಸಿನಲ್ಲಿದ್ದಾಗಲೇ ಪರಿಸರ ಸಂರಕ್ಷಣೆ ಬಗ್ಗೆ, ಭೂಮಿ ತಾಪಮಾನ ಏರುತ್ತಿರುವ ಬಗ್ಗೆ ಅವಳಿಗೆ ಸ್ವಲ್ಪಮಟ್ಟಿಗೆ ಗ್ರಹಿಕೆಗೆ ಬರತೊಡಗಿತ್ತು. ಶಾಲೆಯಲ್ಲಿ, ಪಾಠಗಳಲ್ಲಿ, ಟಿವಿ ವರದಿಗಳಲ್ಲಿ ಭೂಮಿಗೆ ಬರಲಿರುವ ಸಂಕಟದ ಬಗೆಗಿನ ಸಂಗತಿಗಳನ್ನು ಗಮನಿಸುತ್ತಿದ್ದಳು. ಆದರೆ ಆ ಬಗ್ಗೆ ಅವಳೇನೂ ಮಾತನಾಡುತ್ತಿರಲಿಲ್ಲ. ಮೌನವಾಗಿಯೇ ಭೂಮಿಗೊದಗಿದ ಸಂಕಟವನ್ನು ಅವಳೂ ಅನುಭವಿಸುತ್ತಿದ್ದಳು. ಪರಿಣಾಮವಾಗಿ ಕ್ರಮೇಣ ಅವಳಿಗೆ ಖಿನ್ನತೆ ಆವರಿಸಿತು. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಳು. ತಂದೆ-ತಾಯಿ ಡಾಕ್ಟರ್ ಬಳಿ ತೋರಿಸಿದಾಗ, ಅವರು ಪರೀಕ್ಷಿಸಿ ‘ಆಸ್ಪರ್ಗರ್ಸ್ ಸಿಂಡ್ರೋಮ್ ಎಂಬ ಕಾಯಿಲೆ ಬಂದಿದೆ ಎಂದರು. ಅಂಥ ಮಕ್ಕಳು ಮನಬಿಚ್ಚಿ ಮಾತನಾಡುವುದಿಲ್ಲ, ನಗುವುದಿಲ್ಲ, ಹಾವಭಾವವಿಲ್ಲದೆ ರೋಬಾಟ್​ನಂತಿರುತ್ತಾರೆ. ನಂತರ ಅವಳಿಗೆ ಓಸಿಡಿ ಎಂಬ ಗೀಳು ಕಾಯಿಲೆಯೂ ಇದೆ ಎಂದು ತಿಳಿದುಬಂತು. ಈ ಕಾಯಿಲೆ ಲಕ್ಷಣ ಮಾಡಿದ್ದನ್ನೇ ಮಾಡುವುದು. ಗಂಟೆಗಟ್ಟಲೇ ಮೂಕಿಯಂತೆ ಒಂದೇ ಕಡೆ ಕೂರುವುದು. ಇನ್ನೊಬ್ಬ ವೈದ್ಯರಿಗೆ ತೋರಿಸಿದಾಗ ಅವರು ‘ಇಚ್ಛಾವರ್ತಿ ಮೂಕತನ’ ಎಂಬ ಹೆಸರಿನ ಮೂರನೆಯ ಕಾಯಿಲೆಯಿದೆ ಎಂದು ಹೇಳಿದರು.

ಈ ಕಾಯಿಲೆಗಳು ಅಂತಹ ಉಗ್ರ ಸ್ವರೂಪದವಲ್ಲ, ತನ್ನ ಲೋಕವೇ ಬೇರೆ ಎಂಬಂತೆ ಏನನ್ನೋ ಯೋಚಿಸುತ್ತ ಕೂರುವುದು, ಮೌನವಾಗಿರುವುದು ಇವುಗಳ ಲಕ್ಷಣ. ಆದರೆ ಇಂಥವರ ಮಿದುಳು ಇತರರಿಗಿಂತ ಚುರುಕಾಗಿರುತ್ತದೆ ಎಂದು ಮನೋವೈದ್ಯರು ಹೇಳಿದ್ದರಿಂದ ಗ್ರೇತಾ ತಂದೆ-ತಾಯಿ ಸಮಾಧಾನದ ನಿಟ್ಟುಸಿರು ಬಿಟ್ಟರು. ‘ಅವನಿ’ಗೆ ಒದಗಿದ ಸಂಕಟ ಅವಳಿಗೆ ಕಾಯಿಲೆ ತರಿಸಿತ್ತು. ಇದನ್ನೂ ಓದಿ: ‘ಅರಿತರೆ ಶರಣ, ಮರೆತರೆ ಮಾನವ’

ಅದೇ ಹೊತ್ತಿನಲ್ಲಿ ಒಂದು ಘಟನೆ ನಡೆಯಿತು. 2015ರಲ್ಲಿ ಪ್ಯಾರಿಸ್ ನಗರದಲ್ಲಿ ಒಂದು ಜಾಗತಿಕ ಸಭೆ ನಡೆಯಿತು. ಭೂಮಿಗೆ ಬಂದ ಕಾಯಿಲೆಗೆ ಔಷಧ ಹುಡುಕಲೆಂದು ಜಗತ್ತಿನ ಎಲ್ಲ ರಾಷ್ಟ್ರಗಳ ನಾಯಕರು ಐದು ದಿನಗಳ ಕಾಲ ಶೃಂಗಸಭೆ ನಡೆಸಿ, ಭೂಮಿಯ ಸಂಕಷ್ಟಗಳ ನಿವಾರಣೆ ಕುರಿತು ರ್ಚಚಿಸಿದರು. ವಾಯುಮಂಡಲದಲ್ಲಾಗುತ್ತಿರುವ ಬದಲಾವಣೆಯನ್ನು ವಿಜ್ಞಾನಿಗಳು ವಿವರಿಸಿ ಜಾಗೃತಿ ಮೂಡಲು ಪ್ರಯತ್ನಿಸುತ್ತಿದ್ದರು. ಸಹಜವಾಗಿಯೇ ಗ್ರೇತಾ ಈ ಎಲ್ಲ ವರದಿಗಳನ್ನೂ ಆಸಕ್ತಿಯಿಂದ ಗಮನಿಸುತ್ತಿದ್ದಳು. ಪರಿಸರ ಜಾಗೃತಿ ಸಂಘಟನೆಗಳ ಬಗ್ಗೆ ಓದುತ್ತಿದ್ದಳು. ಎಲ್ಲರೂ ಸೇರಿ ಭೂಮಿಗೆ ಎಂಥದೋ ಚಿಕಿತ್ಸೆ ಮಾಡಲು ಹೊರಟಿದ್ದಾರೆ, ಭೂಮಿ ಸರಿಹೋಗುತ್ತದೆ ಎಂಬ ನಿರೀಕ್ಷೆಯಲ್ಲಿ ಅವಳ ಕಾಯಿಲೆಗಳೆಲ್ಲ ಕ್ರಮೇಣ ವಾಸಿಯಾಗುತ್ತ ಬಂದವು.

ಗ್ರೇತಾ ಈಗ ಗೆಲುವಾದಳು. ಭೂಮಿಯ ತಾಪಮಾನದ ಬಗ್ಗೆ ಮನೆಯಲ್ಲಿ, ಶಾಲೆಯಲ್ಲಿ ಮಾತನಾಡತೊಡಗಿದಳು. ಅವಳ ಮಾತುಗಳಲ್ಲಿ ಉದ್ಯಮಿಗಳ ಬಗ್ಗೆ, ರಾಜಕಾರಣಿಗಳ ಬಗ್ಗೆ ತೀವ್ರ ಟೀಕೆಯಿರುತ್ತಿತ್ತು. 2018 ಮೇ ತಿಂಗಳಿನಲ್ಲಿ ಸ್ವೀಡನ್ನಿನ ಸ್ವೆನ್​ಸ್ಕಾ ಡಾಗ್​ಬ್ಲೇಡ್ ಪತ್ರಿಕೆ ‘ವಾಯುಮಾನ ಬದಲಾವಣೆ’ ಎಂಬ ವಿಷಯ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿತು. ಗ್ರೇತಾ ತಾನೂ ಪ್ರಬಂಧ ಬರೆದು ಕಳಿಸಿದಳು. ‘ಭವಿಷ್ಯವನ್ನು ಊಹಿಸಿಕೊಂಡರೆ ನನಗೆ ಭಯವಾಗುತ್ತಿದೆ. ಮನುಷ್ಯನ ಇತಿಹಾಸದಲ್ಲೇ ಹಿಂದೆಂದೂ ಕಂಡಿರದಷ್ಟು ಭಯಾನಕ ಹವಾಮಾನ ಸಂಕಟಗಳು ಬರಲಿವೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಏನೂ ಆಗಲ್ಲ, ಸುರಕ್ಷಿತ ಇರ್ತೀಯಾ ಎಂದು ನನಗೆ ಭರವಸೆ ಕೊಡುವವರು ಯಾರೂ ಇಲ್ಲ. ನನ್ನ ವಯಸ್ಸಿನ ಮಕ್ಕಳು ನಾಳೆ ಸುರಕ್ಷಿತ ಇರುತ್ತೇವೆಂಬ ಬಗ್ಗೆ ಯಾವ ಭವಸೆಯೂ ನನಗೆ ಉಳಿದಿಲ್ಲ’ ಎಂಬರ್ಥದ ವಾಕ್ಯಗಳಿದ್ದ ಆ ಪ್ರಬಂಧಕ್ಕೆ ಬಹುಮಾನ ಬಂದಿತು. ಆ ಪ್ರಬಂಧ ಅನೇಕರ ಗಮನ ಸೆಳೆಯಿತು. ಪರಿಸರವಾದಿಗಳು ಗ್ರೇತಾಳನ್ನು ಸಂರ್ಪಸಿ ಅವಳನ್ನು ಹುರಿದುಂಬಿಸಿದರು.

2018ರ ಜೂನ್-ಜುಲೈ ತಿಂಗಳಲ್ಲಿ ಸ್ವೀಡನ್ ದೇಶದಲ್ಲಿ ಸೆಕೆ ದಾಖಲೆ ಮೀರಿ ಹೆಚ್ಚಾಗಿತ್ತು. ಕಳೆದ 212 ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ಸೆಕೆ ಎಂದೂ ದಾಖಲಾಗಿರಲಿಲ್ಲ. ಅರಣ್ಯಗಳು ತಾವಾಗಿ ಹೊತ್ತಿ ಉರಿಯತೊಡಗಿದವು. ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದ ಸಾರಂಗಗಳು ಸುಟ್ಟು ಕರಕಲಾದವು. ಅರಣ್ಯಗಳ ಅಂಚಿನಲ್ಲಿದ್ದ ಊರುಗಳಿಗೆ ಬೆಂಕಿ ವ್ಯಾಪಿಸದಂತೆ ಹೆಲಿಕಾಪ್ಟರ್ ಮೂಲಕ ನೀರನ್ನು ಸುರಿಯುವ ಕೆಲಸ ನಡೆದಿತ್ತು. ಅಕ್ಕಪಕ್ಕದ ನಾರ್ವೆ, ಫಿನ್ಲೆಂಡ್, ಗ್ರೀನ್​ಲ್ಯಾಂಡ್, ಸೈಬೀರಿಯಾ ಹಾಗೂ ದೂರದ ಅಲಾಸ್ಕ ಹಾಗೂ ಕೆನಡಾಗಳಲ್ಲೂ ಬೆಂಕಿಯ ದುರಂತದ ವರದಿಗಳು ಬರತೊಡಗಿದವು. ವಾತಾವರಣದ ತಾಪಮಾನ ಏರಿದ್ದರಿಂದಲೇ ಇವೆಲ್ಲ ಉತ್ಪಾತಗಳು ಸಂಭವಿಸುತ್ತಿವೆ ಎಂದು ತಜ್ಞರು ಹೇಳತೊಡಗಿದ್ದರು. ಈಗಲೂ ಸುಮ್ಮನೆ ಕುಳಿತಿರಲು ಸಾಧ್ಯವೇ? ಇದನ್ನೂ ಓದಿ: ಸಾಮಯಿಕ: ‘ಬೆದರುವೆನೆ? ಬೆಚ್ಚುವೆನೆ? ನಿನಗೆ ನಾನು’

ಅಂದು 2018ರ ಆಗಸ್ಟ್ 20. ಒಂಬತ್ತನೇ ಕ್ಲಾಸಿನ ಈ ಹುಡುಗಿ ಗ್ರೇತಾ ಶಾಲೆಗೆ ಹೋಗುವವಳ ಹಾಗೆ ಹೆಗಲಿಗೆ ಚೀಲವನ್ನು ಹಾಕಿಕೊಂಡು ಹೊರಟಳು. ಶಾಲೆಗೆ ಹೋಗುವ ಬದಲು ಸ್ವೀಡನ್ನಿನ ಸಂಸತ್ ಭವನದ ಬಳಿ ಹೋಗಿ, ತಾನೇ ಕೈಯಾರೆ ಬರೆದು ತಂದಿದ್ದ ‘ಸ್ಕೂಲ್ ಸ್ಟ್ರೈಕ್ ಫಾರ್ ಕ್ಲೆ್ತ್ರ ಕ್ಲೈಮೇಟ್’ (ಕ್ಲೈಮೇಟಿಗಾಗಿ ಶಾಲಾ ಮುಷ್ಕರ) ಎಂಬ ಫಲಕವನ್ನು ಗೋಡೆಗೆ ಆನಿಸಿ, ಅಲ್ಲೇ ಆ ಬೃಹತ್ ಕಲ್ಲಿನ ಕಟ್ಟಡಕ್ಕೆ ಒರಗಿ ಕೂತಳು.

ಮತ್ತೆ ಮರುದಿನ ಅವಳು ಯಥಾಪ್ರಕಾರ ಬಂದು ಅಲ್ಲಿ ಕೂತಳು. 6 ಸ್ವೀಡಿಷ್ ಪತ್ರಿಕೆಗಳು, 2 ರಾಷ್ಟ್ರೀಯ ಟಿವಿ ಚಾನೆಲ್​ಗಳಲ್ಲಿ ಇದು ಸುದ್ದಿಯಾಗಿ ಲಕ್ಷಾಂತರ ಜನರ ಗಮನ ಸೆಳೆಯುತ್ತದೆ. ಅವಳ ಶಿಕ್ಷಕ ಬೆಂಜಮಿನ್ ವಾಗ್ನರ್, ಸ್ವೀಡನ್ನಿನ ಹೆಸರಾಂತ ಕಲಾ ನಿರ್ದೇಶಕಿ ಸ್ಟೆಲ್ಲಾ ಡಿಯಲ್ಲಿ ಎಂಬಾಕೆಯೂ ಆ ಗುಂಪನ್ನು ಸೇರಿದರು. ಸ್ವೀಡನ್ ದೇಶದ ಬೇರೆ ಬೇರೆ ಊರುಗಳಲ್ಲಿ ಶಾಲಾ ಮಕ್ಕಳು ತಂತಮ್ಮ ಶಾಲಾ ಆವರಣದಲ್ಲೇ ಮುಷ್ಕರ ಕೂರಲು ಆರಂಭಿಸಿದರು. ಸಣ್ಣದಾಗಿ ಜಿನುಗುತ್ತಿದ್ದ ತೊರೆಯೊಂದಕ್ಕೆ ನೂರಾರು ಕಿರುಧಾರೆಗಳು ಸೇರಿ ದೊಡ್ಡ ಪ್ರವಾಹವಾಯಿತು.

ಗ್ರೇತಾ ಒಬ್ಬಂಟಿಯಾಗಿ ಧರಣಿ ಕುಳಿತಳು. ಅವಳ ಪ್ರತಿಭಟನೆಯನ್ನು ಬೆಂಬಲಿಸಿ 130 ರಾಷ್ಟ್ರಗಳಲ್ಲಿ ಎಳೆಯರು ಬೀದಿಗೆ ಬಂದರು. ಬಹುತೇಕ ಮೂಕಿಯಾಗಿದ್ದ ಅವಳು ಬ್ರಿಟನ್, ಫ್ರಾನ್ಸ್ ಸಂಸತ್ತಿನಲ್ಲಿ, ಪ್ರತಿಷ್ಠಿತ ದಾವೋಸ್ ಸಮ್ಮೇಳನದಲ್ಲಿ, ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದಳು. ನೊಬೆಲ್ ಪ್ರಶಸ್ತಿಗೆ ನಾಮಾಂಕಿತಗೊಂಡಳು. ಬದಲಿ ನೊಬೆಲ್ ಪ್ರಶಸ್ತಿಯಾದ ‘ರೈಟ್ ಲೈವ್ಲಿಹುಡ್’ ಪ್ರಶಸ್ತಿ ಪಡೆದಳು.

‘ಭೂಮಿಯ ಸಂಕಟಕ್ಕೆ ನಾವೆಲ್ಲರೂ ಕಾರಣರೆಂದು ಕೆಲವರು ಹೇಳುತ್ತಿದ್ದಾರೆ. ಅದು ಸುಳ್ಳು. ಎಲ್ಲರೂ ಕಾರಣರಲ್ಲ. ಲಾಭ ಗಳಿಕೆಯೊಂದೇ ಉದ್ದೇಶವಾಗಿರುವ ಕೆಲ ಕಂಪನಿಗಳು, ಕೆಲವು ಧನಾಡ್ಯರು ಇದಕ್ಕೆ ಕಾರಣರಾಗಿದ್ದಾರೆ. ಜನಪ್ರತಿನಿಧಿಗಳಾದ ರಾಜಕಾರಣಿಗಳು ಕೈ ಕಟ್ಟಿ ಕುಳಿತಿದ್ದರೆ ಮನುಷ್ಯ ಕುಲದ ಅತಿ ದೊಡ್ಡ ವೈಫಲ್ಯಕ್ಕೆ ಕಾರಣರಾದವರೆಂಬ ಶಾಶ್ವತ ಅಪಕೀರ್ತಿ ಅವರಿಗೆ ಸಲ್ಲುತ್ತದೆ’-ಇದು ಗ್ರೇತಾ ಥನ್​ಬರ್ಗ್​ಳ ಖಚಿತ ನುಡಿ.

ಪರಿಸರ ವಿಜ್ಞಾನಿ ನಾಗೇಶ ಹೆಗಡೆಯವರು ‘ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್​ಬರ್ಗ್’ ಎಂಬ ಪುಟ್ಟ ಪುಸ್ತಕದಲ್ಲಿ ಗ್ರೇತಾಳ ಈ ಹೋರಾಟ ಕಥನವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಕೆನಡಾದ ಸೆವೆರ್ನ್ ಸುಝುುಕಿ, ಭಾರತ ಮೂಲದ ಅಂಜಲಿ ಅಪ್ಪಾದುರೈ ಕೂಡ ಪರಿಸರ ರಕ್ಷಣೆ ಕುರಿತು ಮಾತನಾಡುತ್ತಿದ್ದಾರೆ. ನಮ್ಮ ನೆರೆಹೊರೆಯಲ್ಲೂ, ನಮ್ಮ ಮನೆಯಲ್ಲೂ ಇಂತಹ ಎಳೆಯರು ಇರಬಹುದು. ಸಂಕಟಸಮಯದಲ್ಲಿ ದೊಡ್ಡವರು ಹೇಗೆ ಜವಾಬ್ದಾರಿಯಿಂದ ವರ್ತಿಸಬೇಕೊ ಹಾಗೆ ವರ್ತಿಸಿ ಎಂದು ಜಾಗೃತಿ ಮೂಡಿಸಲು ಮಕ್ಕಳು ದನಿ ಎತ್ತಬೇಕು, ಬೀದಿಗೆ ಇಳಿಯಬೇಕು. ಜಡವಾಗಿರುವ ಸಮಾಜದಲ್ಲಿ ಎಳೆಯರ ಎಚ್ಚರದ ದನಿ ಸಂಚಲನ ಸೃಷ್ಟಿಸುವಂತಾದರೆ ಅವರ ಭವಿಷ್ಯ ಹಸನಾದೀತು. ಇದನ್ನೂ ಓದಿ: ಏಕಾಂತ ಗೆಲ್ಲಲು ಪುಸ್ತಕವೇ ಅತ್ಯುತ್ತಮ ಸಂಗಾತಿ

ನಾಗೇಶ ಹೆಗಡೆಯವರ ಈ ಪುಟ್ಟ ಪುಸ್ತಕ ದೇವನೂರರ ಮಾತಿನಲ್ಲೇ ಹೇಳುವುದಾದರೆ ಕತ್ತಲ ದಾರಿಯಲ್ಲಿ ನಡೆಯುತ್ತಿರುವ ನಮಗೆ ಕೈದೀವಿಗೆಯಂತೆ ಬೆಳಕು ಚೆಲ್ಲುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net