More

    ಅತಿಭೋಗವದು ರೋಗ, ಕೊಲ್ಲುವುದು ಬೇಗ…

    ಒಮ್ಮೆ ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳ ಜೊತೆ ಮಾತನಾಡುತ್ತಿದ್ದಾಗ ಪ್ರಾಸಂಗಿಕವಾಗಿ ಭ್ರಷ್ಟಾಚಾರದ ಪ್ರಸ್ತಾಪ ಬಂದಿತು. ಆಗ ಅವರು ಒಂದು ಪ್ರಸಂಗವನ್ನು ಹೇಳಿದರು: ಬರಗಾಲ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಕೊಳವೆಬಾವಿ ತೋಡಿ, ಜನ ಜಾನುವಾರುಗಳಿಗೆ ಕುಡಿಯಲು ನೀರು ಒದಗಿಸುವ ಯೋಜನೆಯನ್ನು ಅತಿಭೋಗವದು ರೋಗ, ಕೊಲ್ಲುವುದು ಬೇಗ...ಸರ್ಕಾರ ಸಿದ್ಧಪಡಿಸಿ, ಯಥಾಪ್ರಕಾರ ಜನಪ್ರತಿನಿಧಿಗಳ ನೇತೃತ್ವದಲ್ಲಿ ಈ ಕಾರ್ಯಯೋಜನೆ ಅನುಷ್ಠಾನಗೊಳ್ಳಬೇಕೆಂದು ತೀರ್ವನಿಸಲಾಯಿತು. ಹಳ್ಳಿ-ಹಳ್ಳಿಗಳಲ್ಲಿಯೂ ಕೊಳವೆಬಾವಿ ತೋಡುವ ಕಾರ್ಯ ಆರಂಭವಾಯಿತು. ಹಳ್ಳಿಯೊಂದರಲ್ಲಿ ಕೊಳವೆಬಾವಿ ತೋಡಿದಾಗ ನೀರಿನ ಸೆಲೆ ಸಿಗಲಿಲ್ಲ. ಮತ್ತಷ್ಟು ಆಳ ತೋಡಿದರೂ ನೀರು ಸಿಗಲಿಲ್ಲ. ಆಗ ಮತ್ತೊಂದು ಕಡೆ ಪ್ರಯತ್ನಿಸಲಾಯಿತು. ಅಲ್ಲಿಯೂ ಅದೇ ಕತೆ! ಮರಳಿ ಯತ್ನವ ಮಾಡಿ ಮತ್ತೊಂದು ಕಡೆ ತೋಡಿದಾಗ ನೀರು ಸಿಕ್ಕಿತು. ನೀರು ಸಿಗದ ಮೊದಲೆರಡು ಬಾವಿಗಳನ್ನು ಹಾಗೇ ಬಿಡುವಂತಿಲ್ಲವಲ್ಲ! ಯಾರಾದರೂ ಬಿದ್ದು ಅನಾಹುತವಾಗಬಹುದು; ಹೀಗಾಗಿ ಮುಚ್ಚಲಾಯಿತು. ಇದು ಪ್ರಸಂಗ. ಆದರೆ ವಾಸ್ತವವಾಗಿ ನಡೆದದ್ದೇನು? ಮೊದಲೆರಡು ಬಾವಿಗಳನ್ನು ತೋಡಲೇ ಇಲ್ಲ. ತೋಡಿದಂತೆ ದಾಖಲೆಗಳಲ್ಲಿ ತೋರಿಸಿ, ವೆಚ್ಚವನ್ನು ಪಡೆಯಲಾಯಿತು. ಮಾತ್ರವಲ್ಲ, ತೋಡದ ಬಾವಿಯನ್ನು ಮುಚ್ಚಲೂ ವೆಚ್ಚದ ಲೆಕ್ಕ ತೋರಿಸಲಾಯಿತು. ಇದೆಲ್ಲ ದಾಖಲೆಗಳಲ್ಲಿ ಮಾತ್ರ. ತೋಡಿದ್ದು ಒಂದೇ ಬಾವಿ. ಅದರಲ್ಲಿ ನೀರು ಬಂದಿತು. ಇದು ಭ್ರಷ್ಟಾಚಾರದ ಒಂದು ಮುಖ. ಇಂತಹ ಅನೇಕ ಮುಖಗಳಿವೆ.

    ಬಹುಶಃ ಈ ಕತೆ ಎಲ್ಲರಿಗೂ ಪರಿಚಿತವೇ! ಈ ಸಂದರ್ಭಕ್ಕೆ ಹೊಂದುವುದರಿಂದ ಮತ್ತೆ ಹೇಳುತ್ತಿದ್ದೇನೆ: ಒಮ್ಮೆ ಅಕ್ಬರ್ ಬೀರಬಲ್​ನನ್ನು ಕೇಳಿದನಂತೆ-‘ನಾನು ಜನರಿಗಾಗಿ ಬೊಕ್ಕಸದ ಹಣವನ್ನು ಯಥೇಚ್ಛ ವೆಚ್ಚ ಮಾಡುತ್ತಿದ್ದೇನೆ. ಆದರೂ ಪ್ರಜೆಗಳ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿಲ್ಲವಲ್ಲ, ಯಾಕೆ?’ ಬೀರಬಲ್ ಆ ಕ್ಷಣ ಏನೂ ಉತ್ತರಿಸಲಿಲ್ಲ, ಮೌನವಹಿಸಿದ. ಮಾರನೆಯ ದಿನ ರಾಜಸಭೆಯಲ್ಲಿ ಬೀರಬಲ್ ತಾನು ತಂದಿದ್ದ ಮಂಜುಗಡ್ಡೆ

    ಯೊಂದನ್ನು ರಾಜ ಅಕ್ಬರನಿಗೆ ನೀಡಿ, ಸಾಮಾನ್ಯ ಪ್ರಜೆಯೊಬ್ಬನನ್ನು ಸಭಾಭವನದ ಬಾಗಿಲಲ್ಲಿ ನಿಲ್ಲಿಸಿ, ಅಕ್ಬರನಿಂದ ಆತನವರೆಗೆ ರಾಜ್ಯಾಡಳಿತದ ಅಧಿಕಾರಿ ವರ್ಗವನ್ನು ಸಾಲಾಗಿ ನಿಲ್ಲಲು ಸೂಚಿಸಿ, ಆ ಮಂಜುಗಡ್ಡೆಯನ್ನು ಪ್ರಜೆಗೆ ತಲುಪಿಸಲು ಮನವಿ ಮಾಡಿ ಕೊಂಡ. ಅಕ್ಬರ್ ನಸುನಗುತ್ತ ಮಂಜುಗಡ್ಡೆಯನ್ನು ಮಂತ್ರಿಗೆ ನೀಡಿದ. ಆತ ತನ್ನ ಅಧೀನ ಅಧಿಕಾರಿಗೆ, ಆತ ತನ್ನ ಅಧೀನ ವ್ಯಕ್ತಿಗೆ ಹೀಗೆ ಹಲವಾರು ಮಂದಿಯನ್ನು ಹಾದು ಕಡೆಗೂ ಮಂಜುಗಡ್ಡೆ ಪ್ರಜೆಯನ್ನು ತಲುಪಿತು. ಆದರೆ ಹಾಗೆ ತಲುಪುವಷ್ಟರಲ್ಲಿ ಮಂಜುಗಡ್ಡೆ ಕರಗಿ ಹಿಡಿಯಷ್ಟಾಗಿತ್ತು. ರಾಜ ಕಳಿಸಿದ್ದು ದೊಡ್ಡ ಗಡ್ಡೆ, ಆದರೆ ಪ್ರಜೆಯನ್ನು ತಲುಪಿದ್ದು ಅದರಲ್ಲಿ ಕಿಂಚಿತ್ತು ಮಾತ್ರ. ಆಗ ಬೀರಬಲ್ ಅಕ್ಬರನಿಗೆ, ‘ಜಹಾಪನಾ, ನೀವು ಪ್ರಜೆಗಳಿಗೆಂದು ವೆಚ್ಚ ಮಾಡುತ್ತಿರುವ ಬೊಕ್ಕಸದ ಹಣವೂ ಹೀಗೆ ಪ್ರಜೆಗಳಿಗೆ ತಲುಪುವ ಮೊದಲೇ ಸೋರಿಹೋಗುತ್ತಿದೆ, ಹೀಗಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದ.

    ಇದು ಅಂದಿನ ಕತೆ ಮಾತ್ರವಲ್ಲ, ಇಂದಿನ ಕತೆಯೂ ಹೌದು.

    ಸರ್ಕಾರದ ಯೋಜನೆಗಳು ಯಥಾವತ್ತಾಗಿ ಜಾರಿಗೆ ಬಂದರೆ ಜನರ ಬದುಕು ಹಸನಾಗುವುದರಲ್ಲಿ ಸಂದೇಹವೇ ಇಲ್ಲ. ಆದರೆ ಅದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾಕೆ ಹೀಗಾಯಿತು? ನಾವು ಎಡವಿದ್ದೆಲ್ಲಿ? ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು ಪಾಶ್ಚಿಮಾತ್ಯ ನಾಗರಿಕತೆಯೇ ಮಾನವ ಪ್ರಗತಿಯ ಅತ್ಯುನ್ನತ ರೂಪವೆಂದು ನಾವು ನಂಬಿದ್ದು, ಮಾತ್ರವಲ್ಲ ಈಗಲೂ ಅದಕ್ಕೇ ಜೋತುಬಿದ್ದಿರುವುದು. ಹಾಗಾದರೆ ಪಾಶ್ಚಿಮಾತ್ಯ ನಾಗರಿಕತೆಯ ಲಕ್ಷಣ ಯಾವುದು? ಬಲಿಷ್ಠ ಹಾಗೂ ಕೇಂದ್ರೀಕೃತ ರಾಷ್ಟ್ರೀಯ ಪ್ರಭುತ್ವ, ಪ್ರಕೃತಿಯ ಜೊತೆಗೆ ಶೋಷಣಾತ್ಮಕ ಸಂಬಂಧ ಮಾತ್ರ ಉಳ್ಳ ವಿಜ್ಞಾನ ಮತ್ತು ತಂತ್ರಜ್ಞಾನ, ನಿಯಂತ್ರಣಾತೀತ ಮಾರುಕಟ್ಟೆ ಆಧಾರಿತ ಅಭಿವೃದ್ಧಿಪಥ ಹಾಗೂ ಆತ್ಮನಿಷೇಧವೇ ಇರದ ಉಪಭೋಗವಾದ. ವಸಾಹತೀಕರಣದ ಸಂದರ್ಭದಲ್ಲಿ ನಮ್ಮ ಒಂದು ವರ್ಗಕ್ಕೆ ಈ ಹುಚ್ಚು ಹತ್ತಿತು. ಭೋಗಜೀವನಕ್ಕೆ ಜನತೆ ದಾಸರಾಗಿ, ಕೊಳ್ಳುಬಾಕಸಂಸ್ಕೃತಿ ನಮ್ಮನ್ನಾವರಿಸಿತು. ಮೂಲಭೂತ ಅಗತ್ಯಗಳಿಗಿಂತ ಆಡಂಬರದ ಬದುಕಿಗೆ ಬಲಿಯಾದ ಮನಸ್ಸಿನ ದಾಹವನ್ನು ತಣಿಸಲು ನ್ಯಾಯಯುತ ಸಂಪಾದನೆ ಸಾಲದಾಯಿತು. ಅನ್ಯಮಾರ್ಗಗಳ ಹುಡುಕಾಟ ಆರಂಭವಾಗಿ ಸುಲಭ ಸಂಪಾದನೆಯ ಮಾರ್ಗಗಳು ತೆರೆದುಕೊಳ್ಳತೊಡಗಿದವು.

    ‘ಅತಿಭೋಗವದು ರೋಗ, ಕೊಲ್ಲುವುದು ಬೇಗ/ಪುರಗಳಿಂದೈತಂದಿಹುದು ಹಳ್ಳಿಗೀಗ/ಸಾಮಾನ್ಯ ಜೀವನವು ಪರಮ ಸುಧೆಯಂತೆ/ಮಿತಿಮೀರಿದತಿಭೋಗ ಘೊರ ವಿಷದಂತೆ/ದೇಶಗಳು ಹಾಳಾದುದತಿಭೋಗದಿಂದ/ನೀತಿನಾಶವು ಕೀರ್ತಿನಾಶವದರಿಂದ’

    ಕಳೆದ ಶತಮಾನದ ಇಪ್ಪತ್ತರ ದಶಕದಲ್ಲೇ ಕುವೆಂಪು ಭೋಗಸಂಸ್ಕೃತಿ ಹೇಗೆ ಸಾಮಾನ್ಯಜನರ ಜೀವನವಿಧಾನದ ಮೇಲೆ ದುಷ್ಪರಿಣಾಮ ಬೀರುತ್ತದೆಂಬುದನ್ನು ಚಿಂತಿಸಿದ್ದರು. ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವ ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನೇ ಬದಲಿಸುತ್ತಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ನಗರೀಕರಣದ ಪರಿಣಾಮದ ಬಗೆಗೆ ಕುವೆಂಪು ಆಗಲೇ ಎಚ್ಚರಿಸಿದ್ದರು. ಈ ಭೋಗಾಕಾಂಕ್ಷೆಯೇ ಭ್ರಷ್ಟಾಚಾರದ ಮೂಲವೇ?

    ಸರ್ಕಾರದ ಯಾವುದೇ ಸಂಸ್ಥೆಯಿಂದ ಯಾವುದೇ ಕೆಲಸ ಆಗಬೇಕಾದರೂ ಸಹಜ ಗತಿಯಲ್ಲಿ ಆಗುವುದು ಕಷ್ಟ; ಅಕಸ್ಮಾತ್ ಆದರೂ ಅದು ತೆಗೆದುಕೊಳ್ಳುವ ಅವಧಿಯಲ್ಲಿ ಅದರ ಅಗತ್ಯವೇ ಇಲ್ಲವಾಗಿಬಿಟ್ಟಿರುತ್ತದೆ. ಯಾವ ಸರ್ಕಾರವಿದ್ದರೂ ಆಡಳಿತದ ಸ್ವರೂಪವನ್ನು ನಿಯಂತ್ರಿಸುವ ಅಧಿಕಾರ ವರ್ಗ ಅದೇ ಆಗಿರುವುದರಿಂದ ಅವರೆಲ್ಲ ನಿಶ್ಚಿತ ರೀತಿಯ ನಡಾವಳಿಗೆ ಹೊಂದಿಕೊಂಡುಬಿಟ್ಟಿದ್ದಾರೆ. ಭಿನ್ನ ರೀತಿಯ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲವೆಂಬ ವಾತಾವರಣವೂ ಸೃಷ್ಟಿಯಾಗಿದೆ. ಸುಲಭ ಸಂಪಾದನೆ ಆಧುನಿಕ ಬದುಕಿನ ಸ್ವರೂಪವನ್ನು ರೂಪಿಸಿದಂತೆ ತೋರುತ್ತದೆ. ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಮಧ್ಯಮವರ್ಗವೊಂದು ಸೃಷ್ಟಿಯಾದಂತೆ, ಭೋಗಸಂಸ್ಕೃತಿ ‘ಮಧ್ಯವರ್ತಿ’ಗಳ ವರ್ಗವೊಂದನ್ನು ಸೃಷ್ಟಿಸಿದೆ. ಸರ್ಕಾರದ ಯಾವ ಕೆಲಸ ಆಗಬೇಕಾದರೂ ಈ ಮಧ್ಯವರ್ತಿಗಳ ಮೂಲಕ ಹೋದರೆ ಸುಲಭವಾಗುತ್ತದೆ. ಈ ಮಧ್ಯವರ್ತಿಗಳನ್ನು ನಮ್ಮ ಹಳ್ಳಿಯ ಕಡೆ ದಳ್ಳಾಳಿಗಳು ಎನ್ನುತ್ತಾರೆ. ಈ ದಳ್ಳಾಳಿಗಳೇ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆಯೇ? ಈ ದಳ್ಳಾಳಿಗಳು ‘ಶ್ರಮಸಂಸ್ಕೃತಿ’ಯ ಶತ್ರುಗಳು. ನಾಗರಿಕ ವೇಷದ ದಗಾಕೋರರು.

    ಇಬ್ಬರು ಸಹಪಾಠಿಗಳು. ಒಬ್ಬ ಅಸಾಮಾನ್ಯ ಬುದ್ಧಿವಂತ; ಮತ್ತೊಬ್ಬ ಸಾಮಾನ್ಯ ಮಟ್ಟದ ವಿದ್ಯಾರ್ಥಿ. ಮೊದಲನೆಯವನು ಸದಾ ರ್ಯಾಂಕ್, ಎಲ್ಲರಿಂದಲೂ ಆತನಿಗೆ ಪ್ರಶಂಸೆ. ಎರಡನೆಯವನು ಪಾಸಾಗುವುದೆ ಪ್ರಯಾಸ. ವಿದ್ಯಾಭ್ಯಾಸ ಮುಗಿದ ಮೇಲೆ ಮೊದಲನೆಯ ರ್ಯಾಂಕ್ ವಿದ್ಯಾರ್ಥಿ ಅಧ್ಯಾಪಕನಾದ, ಎರಡನೆಯವನು ಎಲ್ಲಿಯೂ ಉದ್ಯೋಗ ಸಿಗದೆ ರಾಜಕೀಯ ಪ್ರವೇಶಿಸಿದ. ಕಾಲು ಶತಮಾನ ಕಳೆಯಿತು. ಎರಡನೆಯವನು ಈಗ ಸಾವಿರಾರು ಕೋಟಿ ಸಂಪತ್ತಿನ ಒಡೆಯ; ಐಷಾರಾಮಿ ಜೀವನ; ಅಧಿಕಾರದ ಗತ್ತು. ಮೊದಲನೆಯ ರ್ಯಾಂಕ್ ವಿದ್ಯಾರ್ಥಿಯದು ಸ್ವಂತ ಮನೆಯೊಂದನ್ನು ಮಾಡಿಕೊಳ್ಳಲು ಪಾಡು ಪಡುವ ಬದುಕು. ಇವರಿಬ್ಬರೂ ಪರಸ್ಪರ ಭೇಟಿಯಾದಾಗ ರ್ಯಾಂಕ್ ವಿದ್ಯಾರ್ಥಿ ಕೇಳಿದ, ‘ಇಷ್ಟೊಂದು ಸಂಪತ್ತು ಹೇಗೆ ಸಂಪಾದಿಸಿದೆ? ನನಗೂ ಹೇಳಿಕೊಡು, ನಾನು ಈಗ ನಿನ್ನಿಂದ ಕಲಿಯಬೇಕಾಗಿದೆ’. ಎರಡನೆಯವನು, ‘ಗೊತ್ತಿರುವ ಉತ್ತರಕ್ಕೆ ಪ್ರಶ್ನೆ ಯಾಕೆ ಕೇಳುತ್ತೀಯಾ’ ಎಂದು ಮುಗುಳ್ನಗುತ್ತ ಸುಮ್ಮನಾದ. ಈ ಅವಧಿಯಲ್ಲಿ ಇಷ್ಟೊಂದು ಸಂಪತ್ತಿನ ಗಳಿಕೆ ನ್ಯಾಯಯುತ ಮಾರ್ಗದಲ್ಲಿ ಸಾಧ್ಯವೇ? ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾದರೂ ಉತ್ತರ ನಮಗೆ ಗೊತ್ತಿಲ್ಲದೇನಿಲ್ಲ. ನಾವು ಈಗ ಮೊದಲನೆಯವನ ವಿದ್ಯೆಗೆ ಬದಲಾಗಿ ಎರಡನೆಯವನ ಹಣಸಂಪಾದನೆಯ ಮಾರ್ಗವನ್ನು ನಮ್ಮ ಪರಮಗುರಿಯಾಗಿಸಿಕೊಂಡಂತೆ ಕಾಣುತ್ತಿದೆ. ಇಷ್ಟೊಂದು ಸಂಪತ್ತು ನಮಗೆ ಅಗತ್ಯವೇ? ಯಾಕೆ ಈ ಹೋರಾಟ? ಇಂತಹ ಪ್ರಶ್ನೆಗಳನ್ನು ನಾವು ಯಾರೂ ಕೇಳಿಕೊಂಡಂತಿಲ್ಲ. ಹಾಗೆ ನೋಡಿದರೆ ಸಂಪತ್ತಿನ ಗಳಿಕೆಗಿಂತ, ಈ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ, ಮಾತ್ರವಲ್ಲ ಅಂಥ ಅಕ್ರಮ ಸಂಪತ್ತಿನ ಒಡೆಯರ ನೆಮ್ಮದಿಯನ್ನೂ ಹಾಳು ಮಾಡಿದೆ.

    ಜಾಗತೀಕರಣದ ಈ ದಿನಗಳಲ್ಲಿ ಯಾವುದು ಅವಕಾಶ, ಯಾವುದು ನಮ್ಮನ್ನು ಅಧೀನವಾಗಿಸಿಕೊಳ್ಳುವ ಆಕ್ರಮಣ ಎಂಬ ವಿವೇಕವಿಲ್ಲದೆ ಅಂಧರಾಗಿ ಅನುಕರಿಸುವ ರೋಗಕ್ಕೆ ನಾವೆಲ್ಲ ಬಲಿಯಾಗುತ್ತಿದ್ದೇವೆ. ಲಾಭದಾಯಕವಾದುದೆಲ್ಲವೂ ಶ್ರೇಷ್ಠ ಎಂಬಂತೆ ಭಾಸವಾಗುತ್ತಿದೆ. ಹಣ ಸಂಪಾದನೆಗಾಗಿ ಏನು ಮಾಡಲೂ ಸಿದ್ಧ ಎಂಬ ಮನಸ್ಥಿತಿ ರೂಢಿಸಿಕೊಳ್ಳುತ್ತಿದ್ದೇವೆ. ಆದರೆ ಹೀಗೆ ಹಣದ ಬೆನ್ನುಹತ್ತಿ ಹೋದವರ ಪಾಡೇನಾಯಿತು ಎಂಬ ನಿದರ್ಶನಗಳು ಕಣ್ಮುಂದೆಯೇ ಇದ್ದರೂ ಅದನ್ನು ಗಮನಿಸುವ ವ್ಯವಧಾನ ನಮಗಿದ್ದಂತಿಲ್ಲ. ಅನುಕರಣೆ ನಮ್ಮ ಬದುಕಿನ ಎಲ್ಲ ರಂಗಗಳನ್ನೂ ಆವರಿಸಿದೆ. ಇದರ ಪರಿಣಾಮವಾಗಿ ಕೃಷಿ, ಶಿಕ್ಷಣ, ಸಂಸ್ಕೃತಿ ಎಲ್ಲವೂ ಮಾರುಕಟ್ಟೆಯ ಸರಕುಗಳಾಗಿವೆ. ಹೀಗಾಗಿ ನಮಗೆ ಯಾವುದು ಬೇಕು ಎಂಬುದಕ್ಕಿಂತ ಮಾರುಕಟ್ಟೆಯಲ್ಲಿ ಯಾವುದು ಚಲಾವಣೆಯಲ್ಲಿದೆ ಅದನ್ನು ನಾವು ನಮ್ಮ ಮನೆಯಲ್ಲಿ, ಮನದಲ್ಲಿ ತುಂಬಿಸಿಕೊಳ್ಳುತ್ತಿದ್ದೇವೆ.

    ನಮ್ಮ ಶಿಕ್ಷಣಕ್ರಮದಲ್ಲೂ ಮಾರುಕಟ್ಟೆಯ ಭರಾಟೆಯೇ ಜೋರಾಗಿ, ಬದುಕಿಗೆ ಅಗತ್ಯವಾದ, ಬದುಕನ್ನು ಚಂದಗೊಳಿಸಲು ನೆರವಾಗುವ ಸಾಹಿತ್ಯ, ಸಮಾಜವಿಜ್ಞಾನ, ಜೀವವಿಜ್ಞಾನ, ಇತಿಹಾಸ, ತತ್ವಶಾಸ್ತ್ರ, ಮನೋವಿಜ್ಞಾನ ಮೊದಲಾದ ವಿಷಯಗಳನ್ನು ಕಲಿಯಲು ವಿದ್ಯಾರ್ಥಿಗಳೇ ಇಲ್ಲವಾಗುತ್ತಿರುವ ಪರಿಸ್ಥಿತಿ ನಿರ್ವಣವಾಗಿದೆ. ತಂತ್ರಜ್ಞಾನವೇ ಮುಖ್ಯವಾಗಿ ವಿಜ್ಞಾನದ ಕಲಿಕೆಯೂ ಹಿಂದೆ ಬಿದ್ದಿದೆ. ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ ಬಲು ತೆಳುವಾಗಿ ಕಣ್ಕಟ್ಟೇ ಕಾಣ್ಕೆ ಎಂಬಂತಾಗಿದೆ.

    ತಂತ್ರಜ್ಞಾನ ಬೆಳೆದಂತೆ ಮನುಷ್ಯನ ಆಸೆ ಆಕಾಂಕ್ಷೆಗಳೂ ಬೆಳೆಯುತ್ತಿವೆ. ವಾಣಿಜ್ಯ ಜಗತ್ತು ತನ್ನ ಲಾಭಕ್ಕಾಗಿ ತಾನೇ ರೂಪಿಸಿದ ವಸ್ತುವನ್ನು ಕೆಲಕಾಲದ ನಂತರ ಅದು ಅನುಪಯುಕ್ತ ಎಂಬಂತೆ ಬಿಂಬಿಸಿ, ಹೊಸದಕ್ಕೆ ಮನುಷ್ಯ ಹಂಬಲಿಸುವಂತಹ ವಾತಾವರಣ ಸೃಷ್ಟಿಸುತ್ತಿದೆ. ಹೀಗಾಗಿ ಮನುಷ್ಯನ ಆಸೆಗಳು ಹೊಸ ಹೊಸ ಬಯಕೆಗಳತ್ತ ಪಯಣಿಸುತ್ತಲೇ ಅತೃಪ್ತವಾಗುತ್ತಿವೆ. ಆಧುನಿಕ ಬದುಕಿನ ಸ್ವರೂಪದಲ್ಲಿಯೇ ನೆಮ್ಮದಿಗೆ ತಾವಿಲ್ಲ. ಮಾತ್ರವಲ್ಲ, ಪರಿಸರ ಮಾಲಿನ್ಯ, ಕೋಮುಗಲಭೆ, ರಾಜಕೀಯ ಪ್ರೇರಿತ ಹಿಂಸಾಚಾರ, ಕೊನೆಯಿರದ ಕೊಳ್ಳುಬಾಕತನದ ದುರಾಸೆ, ಸಂಗ್ರಹಸ್ವಭಾವ ಇವೆಲ್ಲ ಆಧುನಿಕ ಬದುಕಿನ ವಿಕಾರಗಳು. ಒಂದೇ ಎರಕದಲ್ಲಿ ಸಮಾಜ ಕಟ್ಟಲು ಯತ್ನಿಸುವ ನಾಗರಿಕತೆ ಬಹುಮುಖೀ ಸಂಸ್ಕೃತಿಯನ್ನು ಸವಿಸುವುದಿಲ್ಲ. ಇಂಥಲ್ಲಿ ಸಂಸ್ಕೃತಿಯೂ ಒಂದು ಸರಕು. ಬಂಡವಾಳಶಾಹಿ ಮಂದಿಗೆ ಬೇಕಾಗಿರುವುದು ಮಾರುಕಟ್ಟೆಯೇ ಹೊರತು ಮಾನವೀಯತೆಯ ಜಗತ್ತಲ್ಲ. ‘ಆಧುನಿಕತೆಯ ಈ ಬಡಿವಾರಗಳಿಂದ ದೂರವಾಗಿ, ಅತಿ ಬುದ್ಧಿವಂತಿಕೆಯಿಂದ ಪಾರಾಗಿ, ಆಧುನಿಕ ಬದುಕಿಗೆ ಅನಿವಾರ್ಯವಾಗಿರುವ ಮುಖವಾಡ ಕಳಚಿ, ಮತ್ತೆ ಆ ಶುದ್ಧ ಸರಳ ಮುಗ್ಧ ಲೋಕಕ್ಕೆ ಮರಳಬೇಕೆಂಬುದು ನನ್ನ ಬಯಕೆ’ ಎನ್ನುತ್ತಾನೆ ಬೋದಿಲೇರ್. ‘ಹೊರಗಿನ ಅಬ್ಬರದಲ್ಲಿ ಒಳಗಿನ ದನಿ ಕೇಳಿಸದಂತಾಗಿದೆ, ಆ ದನಿ ಕೇಳಿಸುವ ಹಾಗೆ ಮಾಡು’ ಎಂಬ ಪ್ರಾರ್ಥನೆ ಬ್ಲೇಕನದು. ‘ತುಟಿ ಹೊಲಿದುಕೊಂಡಾಗ ಹೃದಯದ ನಾಲಗೆ ಹಾಡುತ್ತದೆ’ ಎನ್ನುತ್ತಾನೆ ರೂಮಿ.

    ತಮಿಳು ಕಾವ್ಯ ‘ಶಿಲಪ್ಪದಿಕಾರಂ’ನಲ್ಲಿ ಒಂದು ಕತೆಯಿದೆ. ಹಸುವೊಂದು ತನಗೆ ಅನ್ಯಾಯವಾಗಿದೆಯೆಂದು ಅರಮನೆಗೆ ಹೋಗಿ ನ್ಯಾಯದ ಗಂಟೆ ಬಾರಿಸಿತು. ಆಗ ಇಡೀ ಆಸ್ಥಾನವೇ ಸೋಜಿಗಗೊಂಡಿತು. ರಾಜ ಹಸುವಿನ ಅಹವಾಲು ಕೇಳಿದ. ಹಸು ಹೇಳಿತು: ‘ಎಲೈ ಪ್ರಭುವೇ! ದೇವ ಕರುಣಿಸಿದ ರಾಜವೈಭೋಗದಿಂದ ರಾಜಕುಮಾರ ರಾಜಧಾನಿಯ ಅಗಲವಾದ ಸುಂದರವಾದ ದಾರಿಯಲ್ಲಿ ಸಂಚರಿಸುತ್ತಿದ್ದ ವಿನೋದದಿಂದ, ಬೃಹತ್ ರಥವದು, ನನ್ನೊಡೆಯ, ಅದರ ರಾಕ್ಷಸ ಗಾಲಿಗಳಿಗೆ ಸಿಕ್ಕು ನನ್ನ ಪುಟ್ಟ ಕೂಸು ಪ್ರಾಣ ಬಿಟ್ಟಿತು’. ಆಗ ರಾಜ ಕಂಬನಿದುಂಬಿ ಹಸುವಿನ ಅಹವಾಲನ್ನು ಮನ್ನಿಸಿ ತನ್ನ ಮಗನಿಗೆ ಶಿಕ್ಷೆ ವಿಧಿಸಿದ. ಭೋಗಜೀವನದ ವಿನೋದಗಳು ಅಮಾಯಕರ ಜೀವ ಬಲಿ ಪಡೆಯುವುದು ನಿರಂತರ ನಡೆದೇ ಇದೆ.

    ಸು ರಂ ಎಕ್ಕುಂಡಿಯವರ ಕವಿತೆಯ ಸಾಲುಗಳು ನೆನಪಾಗುತ್ತಿವೆ: ‘ತುಂಬಿದ ಸಭೆಯಲಿ ಸಂಭ್ರಮದಿಂದ ಕೇಳತೀವಿ ನಿಮಗ/ಕೇಳತೀವಿ ನಿಮಗ ನೀವು ಹೇಳಬೇಕು ನಮಗ/ಸಾವಿರ ಒಡಲನು ತಣಿಸುವ ಸವಿಯನು ಕೊಟ್ಟರ್ಯಾರು ನಿಮಗ?/ಕುದಿಯುವ ಮಡಕೆಯ ಕರುಣೆಯ ಅಂಬಲಿ ಕೊಟ್ಟಿತಣ್ಣ ನಮಗ’.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts