ಸಮಾನ ಸಂಸ್ಕಾರ ಹರಿಹರಪುರ ಶ್ರೀಗಳ ಆಂದೋಲನ

ವಿಜಯವಾಣಿ (4)
Published on

(ಲೇಖಕರು ‘ವಿಜಯವಾಣಿ’ ಸೀನಿಯರ್ ಡೆಪ್ಯೂಟಿ ಎಡಿಟರ್)

ಕಾಲ ಕೆಟ್ಟು ಹೋಯಿತು...ಮನುಷ್ಯ ತನ್ನೆಲ್ಲ ವಿಕೃತಿ, ವಿಕಾರಗಳ ಪಾಪದ ಭಾರವನ್ನು ಕಾಲದ ಮೇಲೆ ಹೊರಿಸುವುದು ಹೀಗೆ... ಪಾಪ-ಪುಣ್ಯಗಳೆಂಬ ಪ್ರಜ್ಞೆಗಳ ನಡುವಿನ ತೊಳಲಾಟವೇ ಜೀವನ ಅನ್ನಿಸುವುದಿದೆ. ಏಕೆಂದರೆ, ಜಗತ್ತೆನ್ನುವುದು ಏಕಮುಖ ರಸ್ತೆಯಲ್ಲ. ಅಸಂಖ್ಯಾತ ನಕ್ಷತ್ರಗಳನ್ನು ಆವರಿಸಿಕೊಂಡ ಒಂದೇ ಆಕಾಶದಂತೆ, ಒಂದೇ ಬಯಲಾಕಾಶದಲ್ಲಿ ಸಹಸ್ರಾರು ನಕ್ಷತ್ರಗಳು ಆಶ್ರಯ ಪಡೆದುಕೊಂಡಂತೆ ಈ ಜಗತ್ತು ಸಹ ಏಕದಿಂದ ಅನೇಕ, ಅನೇಕದಿಂದ ಏಕ ತತ್ವದ ಪ್ರತೀಕ. ಇಲ್ಲಿ ಎಲ್ಲವೂ ಇದೆ, ಆದರೂ, ಏನೂ ಇಲ್ಲ. ಬದುಕುವುದಕ್ಕೆ ಸಾವಿರ ಮಾರ್ಗಗಳಿವೆ. ಸಾಧಿಸುವುದಕ್ಕೆ ಸಾವಿರ ಅವಕಾಶಗಳಿವೆ. ಅಷ್ಟೆಲ್ಲ ಆದ ಮೇಲೆ ಕೊನೆಗೆ ನಾವು ತೆಗೆದುಕೊಂಡು ಹೋಗುವುದು ಏನೂ ಇಲ್ಲ. ಜೀವಮಾನ ಪೂರ್ತಿ ನಾವು ಅಲಂಕರಿಸಿಕೊಳ್ಳುವ, ಅಭಿಮಾನ ಪಟ್ಟುಕೊಳ್ಳುವ ದೇಹವೂ ನಮ್ಮ ಜತೆಗೆ ಬರುವುದಿಲ್ಲ.

ನಮಗೆ ದೊರೆತಿರುವ ಬದುಕೆನ್ನುವುದು ಒಂದೇ. ಹೋದ ಜೀವ ಮತ್ತೆ ಬರುವುದಿಲ್ಲ. ಈ ಜನ್ಮದಲ್ಲಿ ಆದದ್ದಾಯಿತು, ಮುಂದಿನ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳುವುದೂ ಸಾಧ್ಯವಿಲ್ಲ. ಏಕೆಂದರೆ, ಪುನರ್ಜನ್ಮವೆಂಬುದು ಇದ್ದರೂ, ಈ ಜನ್ಮದ ಸ್ಮರಣೆ ಅಲ್ಲಿ ಇರುವುದಿಲ್ಲ. ಇಂಥ ಒಂದೇ ಜನ್ಮದಲ್ಲಿ ಯಾವ ರೀತಿ ಬದುಕಬೇಕೆನ್ನುವುದಕ್ಕೆ ಕಾಲ ನಮಗೆ ಎರಡೆರಡು ಆಯ್ಕೆಗಳನ್ನು ನೀಡಿದೆ. ಸರಿ-ತಪ್ಪು, ಸತ್ಯ-ಸುಳ್ಳು, ಪಾಪ- ಪುಣ್ಯ, ಧರ್ಮ-ಅಧರ್ಮ... ಹೀಗೆ. ಜಗತ್ತಿನಲ್ಲಿ ಕೇವಲ ಸತ್ಯವೊಂದೇ ಇರಲು ಸಾಧ್ಯವಿಲ್ಲ. ಯಾವುದು ಸತ್ಯ ಎಂದು ಅರ್ಥವಾಗಬೇಕಾದರೆ, ಎದುರಿಗೆ ಸುಳ್ಳಿನ ರೂಪಕವೂ ಇರಲೇಬೇಕು. ಕತ್ತಲೆಯನ್ನು ನೋಡಿದವನಿಗಷ್ಟೇ ಬೆಳಕಿನ ಮಹತ್ವ ತಿಳಿದಿರುತ್ತದೆ. ದೇವತೆಗಳಿರುವಲ್ಲಿ, ರಾಕ್ಷಸರೂ ಇರಲೇಬೇಕು. ಕೆಟ್ಟ ವ್ಯಕ್ತಿಗಳ ಸಹವಾಸದಿಂದ ಕೆಡುಕು ಅನುಭವಿಸಿದವರಿಗೆ ಒಳ್ಳೆಯ ವ್ಯಕ್ತಿಗಳ ಸಹವಾಸದ ಬೆಲೆ ಬೇಗ ಅರ್ಥವಾಗುತ್ತದೆ.

ಅಂದರೆ, ಈ ಜಗತ್ತಿನ ತಕ್ಕಡಿಯ ಸಮತೋಲನ ನಿಂತಿರುವುದೇ ಗುಣ-ಅವಗುಣಗಳ ತೂಕದ ಮೇಲೆ. ಸರಿ-ತಪ್ಪು, ಸಮ-ಬೆಸ, ಸಕಾರಾತ್ಮಕ-ನಕಾರಾತ್ಮಕ, ಮಿತ್ರತ್ವ-ಶತ್ರುತ್ವ, ತ್ಯಾಗ-ಸ್ವಾರ್ಥ... ಹೀಗೆ ವಿರುದ್ಧ ಗುಣಗಳಲ್ಲಿ ಯಾವುದೋ ಒಂದರ ತೂಕ ಹೆಚ್ಚಾದಾಗ ಸೃಷ್ಟಿಯ ಸಮತೋಲನ ತಪ್ಪುತ್ತದೆ. ಇನ್ನು ದುಷ್ಟರೇ ಇಲ್ಲ, ಜಗತ್ತಿನಲ್ಲಿ ಎಲ್ಲರೂ ಸತ್ಯವಂತರು ಎಂಬಂಥ ಎಲ್ಲರೂ ನೂರಕ್ಕೆ ನೂರು ಒಳ್ಳೆಯವರೇ ತುಂಬಿಕೊಂಡ ಪರಿಸ್ಥಿತಿ ಈ ಜಗತ್ತಿನಲ್ಲಿ ಯಾವತ್ತೂ ಇರಲಿಲ್ಲ. ಅಂಥ ರಾಮರಾಜ್ಯದಲ್ಲೂ ಕುಟಿಲ ಬುದ್ಧಿಯವರು ಕೂಡ ಇದ್ದರು. ದುರ್ಜನರ, ದುಷ್ಟ ಸ್ವಭಾವಗಳ ಮೇಲುಗೈ ಇದ್ದಾಗ ಅರಾಜಕತೆ, ಅನಾಗರಿಕತೆ ಇರುತ್ತದೆ. ಸಜ್ಜನರ ಕೈಬಲ ಹೆಚ್ಚಿದ್ದಾಗಲೂ ದುಷ್ಟರೇನೂ ಒಳ್ಳೆಯವರಾಗುವುದಿಲ್ಲ. ಬದಲಿಗೆ, ಎಷ್ಟು ದಿನ ಮೆರೆಯುತ್ತಾರೋ ನೋಡೋಣ ಎಂದು ನೆಮ್ಮದಿಗೆ ಭಂಗ ತರಲು ಸಂಚುಹೂಡುತ್ತಿರುತ್ತಾರೆ. ಇದು ಎಲ್ಲ ಕಾಲದಲ್ಲಿಯೂ ಇದ್ದಿದ್ದೇ.

ಜೀವನದಲ್ಲಿ ಪ್ರತಿಯೊಬ್ಬರೂ ಏನಾದರೊಂದು ಆಗಲೇಬೇಕು. ಯಾವ ವೃತ್ತಿ, ಯಾವ ಊರು, ಯಾವ ಪರಿಸ್ಥಿತಿಯಲ್ಲಿ ಅವರ ಜೀವನ ಎನ್ನುವುದು ಅವರವರು ಪಡೆದು ಬಂದ ಯೋಗ, ಯೋಗ್ಯತೆ, ಸಂಪತ್ತು, ಸಂಸ್ಕಾರ ಮತ್ತು ಶಿಕ್ಷಣವನ್ನು ಅವಲಂಬಿಸಿರುತ್ತದೆ. ವೃತ್ತಿಯಲ್ಲಿ ಏನು ಬೇಕಾದರೂ ಆಗು, ಯಾವ ಎತ್ತರಕ್ಕಾದರೂ ಏರು... ಆದರೆ, ಪ್ರವೃತ್ತಿಯಲ್ಲಿ ಮೊದಲು ಮಾನವನಾಗು ಎನ್ನುತ್ತದೆ ಜಗತ್ತು. ಕನ್ನಡಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ನಾವು ಇರುವಂತೆಯೇ ನಮ್ಮನ್ನು ತೋರಿಸುತ್ತದೆ. ಅದೇ ರೀತಿ, ನಮ್ಮ ಅಂತರಂಗ ಶುದ್ಧವಾಗಿದ್ದಾಗ ಬಹಿರಂಗದಲ್ಲೂ ನಮ್ಮ ಬದುಕು ಶುದ್ಧವಾಗಿರುತ್ತದೆ.

ನಮ್ಮ ಬದುಕಿನಲ್ಲಿ, ಈ ಸಮಾಜದಲ್ಲಿ, ಈ ಜಗತ್ತಿನಲ್ಲಿ ನಾವು ಏನೆಲ್ಲ ಆಗಿ ಬೆಳೆಯುತ್ತೇವೆನ್ನುವುದು ನಾವು ಪಡೆದುಕೊಂಡ ಸಂಸ್ಕಾರವನ್ನು ಅವಲಂಬಿಸಿರುತ್ತದೆ. ಉಪ್ಪು, ಮೆಣಸಿನಕಾಯಿ ಇಲ್ಲದೆ ಅಡುಗೆ ರುಚಿ ಆಗುವುದಿಲ್ಲ. ಹಾಗೆಂದು ಉಪ್ಪು ಮಾತ್ರ ತಿನ್ನುತ್ತೇನೆ, ಮೆಣಸಿನಕಾಯಿಯನ್ನೇ ತಿನ್ನುತ್ತೇನೆ ಎಂದರೆ ಸಾಧ್ಯವಿಲ್ಲ. ಅದೇ ರೀತಿ ಸಂಸಾರ ಮತ್ತು ಸಂಸ್ಕಾರ ಬೇರೆ ಬೇರೆಯಾಗಿರಲು ಸಾಧ್ಯವಿಲ್ಲ. ‘ಸಾರ’ಕ್ಕೆ ‘ಕಾರ’ ಅಡಿ ಒತ್ತಾಗಿ ಸೇರಿಕೊಂಡಾಗಲೇ ಜೀವನಕ್ಕೆ ಸಂಸ್ಕಾರ. ಸರಿ-ತಪ್ಪು, ಪಾಪ-ಪುಣ್ಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿದ ಮೇಲೆ ಯಾವುದರ ಪರ ವಹಿಸುತ್ತೇವೆ ಎನ್ನುವುದು ನಾವು ಪಡೆದುಕೊಂಡ ಸಂಸ್ಕಾರ. ಮಹಾಭಾರತ ಯುದ್ಧದಲ್ಲಿ ಪಾಂಡವರ ಕಡೆ ನಿಂತಿದ್ದು 7 ಅಕ್ಷೋಹಿಣಿ ಸೈನ್ಯ ಮಾತ್ರ. ಕೌರವರ ಜತೆ ಇದ್ದಿದ್ದು 11 ಅಕ್ಷೋಹಿಣಿ ಸೈನ್ಯ. ಅಂದರೆ, ಜಗತ್ತಿನಲ್ಲಿ ಅಧರ್ಮ, ಅನ್ಯಾಯದ ಪರ ನಿಲ್ಲುವವರ ಸಂಖ್ಯೆ ಯಾವಾಗಲೂ ಜಾಸ್ತಿ. ಅದು ಅವರ ಸಂಸ್ಕಾರ. ಆದರೆ, ಕೊನೆಯಲ್ಲಿ ಯಾವತ್ತಿಗೂ ಧರ್ಮಕ್ಕೇ ಜಯ.

ಧರ್ಮವೇ ಜಯವೆಂಬ ದಿವ್ಯಮಂತ್ರ | ಮರ್ಮವನರಿತು ಮಾಡಲುಬೇಕು ತಂತ್ರ || ಎಂದು ಪುರಂದರ ದಾಸರು ಹೇಳಿದ್ದು ಇದನ್ನೇ. ಕೇಳಿ ತಿಳಿಯುವಂಥದ್ದು, ನೋಡಿ ಕಲಿಯುವಂಥದ್ದು, ಆಚರಣೆ-ಅನುಸರಣೆಯಿಂದ ರೂಢಿಸಿಕೊಳ್ಳುವಂಥದ್ದು ಸಂಸ್ಕಾರ. ಯಾವುದು ಸಕಾರಾತ್ಮಕವೋ, ಯಾವುದು ಜೀವಪರವೋ? ಯಾವುದು ಜನಹಿತ, ಲೋಕಹಿತವನ್ನು ಕಾಯುವುದೋ ಅವೆಲ್ಲವೂ ಸಂಸ್ಕಾರವೇ. ಅಂದರೆ, ಯಾವ ರೀತಿ ಬದುಕಬೇಕು ಹಾಗೂ ಬದುಕಬಾರದು ಎಂಬ ವ್ಯತ್ಯಾಸ ತಿಳಿಸುವುದೇ ಸಂಸ್ಕಾರ. ಮನುಷ್ಯ ಜೀವನದ ದೊಡ್ಡ ಸಮಸ್ಯೆಯೆಂದರೆ, ನಮಗೆ ಕೆಟ್ಟ ಸಂಗತಿಗಳನ್ನು ಯಾರೂ ಕಲಿಸಿಕೊಡುವ ಅವಶ್ಯಕತೆಯೇ ಇರುವುದಿಲ್ಲ. ನಾವೇ ಹುಡುಕಿಕೊಂಡು ಕಲಿತು ಬಿಡುತ್ತೇವೆ. ಒಳ್ಳೆಯ ವಿಚಾರಗಳನ್ನು ಹೇಳಿಕೊಟ್ಟರೂ ತಲೆಗೆ ನಾಟುವುದಿಲ್ಲ.

ಪುಟ್ಟ ಮಕ್ಕಳಿಗೆ ಮೊಬೈಲ್ ಬಳಸುವುದು ಹೇಗೆ ಎಂದು ಹೇಳಿಕೊಡುವ ಅವಶ್ಯಕತೆ ಇರುವುದಿಲ್ಲ. ಕೈಗೆ ಮೊಬೈಲ್ ಸಿಕ್ಕಿದರೆ ಸಾಕು, ಮಕ್ಕಳೇ ಜನ್ಮಾಂತರದ ನೆನಪಿನಂತೆ ಮೊಬೈಲ್​ನೊಳಗೆ ಮುಳುಗಿಬಿಡುತ್ತವೆ. ಆದರೆ, ಮೊಬೈಲ್​ನಲ್ಲೂ ಜೀವನೋಪಾಯಕ್ಕೆ, ಜೀವನೋದ್ಧಾರಕ್ಕೆ ಸಹಾಯವಾಗುವ ಅನೇಕ ಸಂಗತಿಗಳಿವೆ. ಅವುಗಳನ್ನು ಹೇಳಿಕೊಟ್ಟರೂ ಪೂರ್ಣವಾಗಿ ಅರ್ಥವಾಗುವುದಿಲ್ಲ. ಅಂದರೆ, ನಮ್ಮ ಸಮಾಜದ ಬಹುತೇಕ ಸಮಸ್ಯೆಗಳಿಗೆ ಸಂಸ್ಕಾರದ ಕೊರತೆಯೇ ಕಾರಣ ಎನ್ನುವುದನ್ನು ತಿಳಿಯಬೇಕಿದೆ.

ಮನೆಯೇ ಮಂತ್ರಾಲಯ, ಮನಸೇ ದೇವಾಲಯ | ದೇವರೆಂದೂ ಪ್ರೇಮಸ್ವರೂಪ, ಪ್ರೀತಿ ಮಾತೇ ನಂದಾದೀಪ | ಅರಿತು ಬಾಳಲು ಜನ್ಮ ಸಾರ್ಥಕ (ಚಿ. ಉದಯಶಂಕರ್). ಪರಿಶುದ್ಧವಾಗಿದ್ದರೆ ಮನಸ್ಸೇ ದೇವಾಲಯ, ಮನೆಯೇ ಮಂತ್ರಾಲಯವಾಗುತ್ತದೆ. ಆದರೆ, ಮನಸ್ಸು ಶುದ್ಧವಾಗಿ, ಶುಭ್ರವಾಗಿ ಇಟ್ಟುಕೊಳ್ಳುವುದೇ ಸಮಸ್ಯೆ. ಕುಟುಂಬದಲ್ಲೇ ಸಾಮರಸ್ಯವಿಲ್ಲ, ಒಡಹುಟ್ಟಿದವರೊಡನೆ ಬಾಂಧವ್ಯವಿಲ್ಲ, ನೆರೆಹೊರೆಯವರೊಡನೆ ಒಡನಾಟವಿಲ್ಲ, ಜತೆಯಲ್ಲಿರುವವರ ಮೇಲೆ ವಿಶ್ವಾಸವಿಲ್ಲ, ಇನ್ನೊಬ್ಬರ ಏಳಿಗೆ ಮೆಚ್ಚಿಕೊಳ್ಳುವ ಹೃದಯವಂತಿಕೆಯಿಲ್ಲ, ಕಷ್ಟದಲ್ಲಿರುವವರಿಗೆ ಮಿಡಿಯುವ ಉದಾರತೆಯಿಲ್ಲ, ಯಾವುದೇ ಕೆಲಸ ಮಾಡಬೇಕಾದರೂ, ಇದರಿಂದ ನನಗೇನು ಲಾಭ ಎಂಬ ಆಲೋಚನೆ ಮಾಡುವ ಮನುಷ್ಯಬುದ್ಧಿಯ ಸಂಕುಚಿತತೆಗೆ ಕಾರಣವೇ ಪಡೆದು ಬೆಳೆದ ಸಂಸ್ಕಾರ. ಇದಕ್ಕೇನು ಪರಿಹಾರ? ನಮ್ಮ ನಮ್ಮ ಸ್ವಾರ್ಥವೆಂಬ ವಿಷವರ್ತಲದಿಂದ ಆಚೆಗೆ ಹೆಜ್ಜೆ ಇರಿಸುವುದಾದರೂ ಹೇಗೆ?

ಸರ್ವೆ ಭವಂತು ಸುಖಿನಃ | ಸರ್ವೆ ಸಂತು ನಿರಾಮಯಾಃ| ಸರ್ವೆ ಭದ್ರಾಣಿ ಪಶ್ಯಂತು | ಮಾ ಕಶ್ಚಿತ್ ದುಃಖ ಭಾಗ್ಭವೇತ್| ಎಲ್ಲರೂ ಸುಖವಾಗಿರಲಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಲಿ, ಎಲ್ಲರೂ ಶುಭವನ್ನು ನೋಡಲಿ, ಎಲ್ಲರೂ ಕಷ್ಟಗಳಿಂದ ವಿಮುಕ್ತರಾಗಲಿ ಎಂಬ ಸದಾಶಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ?

ಇದಕ್ಕೆ ಪ್ರತಿಯೊಬ್ಬರೂ ಸಮಾನ ಸಂಸ್ಕಾರವನ್ನು ಅಳವಡಿಸಿಕೊಳ್ಳುವುದೇ ಪರಿಹಾರ. ಈ ಭೂಮಿಯ ಮೇಲೆ ಜನಿಸಿರುವ ಪ್ರತಿಯೊಬ್ಬರ ಜೀವನಕ್ಕೂ ಒಂದಲ್ಲ ಒಂದು ಉದ್ದೇಶವಿದೆ. ಇಲ್ಲಿ ಯಾರೂ, ನಿರರ್ಥಕವಾಗಿ ಹುಟ್ಟಿ, ಸಾಯಲು ಬಂದಿಲ್ಲ. ಅಂದರೆ ನಿರರ್ಥಕದಿಂದ ಸಾರ್ಥಕತೆಯ ಕಡೆಗೆ ನಮ್ಮನ್ನು ಕೈಹಿಡಿದು ಮುನ್ನಡೆಸುವ ಶಕ್ತಿ ಸಮಾನ ಸಂಸ್ಕಾರಕ್ಕಿದೆ. ಶ್ರೀ ಕ್ಷೇತ್ರ ಶೃಂಗೇರಿಯ ಸಮೀಪದಲ್ಲೇ ಇರುವ, ತುಂಗಾ ತೀರದ, ಹರಿ-ಹರ ಸಮನ್ವಯದ ಪುಣ್ಯಭೂಮಿ ಹರಿಹರಪುರ ಸಂಸ್ಥಾನ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಮಾಜದಲ್ಲಿರುವ ಎಲ್ಲ ಅಸಮಾನತೆ, ಅಶಾಂತಿ, ಅನಾಚಾರಗಳನ್ನು ದೂರವಾಗಿಸಿ, ಸಹಬಾಳ್ವೆ, ಸಹೋದರತ್ವ ಭಾವನೆ ಜಾಗೃತಗೊಳಿಸುವುದಕ್ಕೆ ಸಮಾನ ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಪರಿಹಾರ ಎಂದು ತಿಳಿಹೇಳುತ್ತಾರೆ. ಮಾತ್ರವಲ್ಲ, ಜಾತಿ-ವರ್ಗ-ಅಂತಸ್ತಿನ ಭೇದವಿಲ್ಲದೆ ಪ್ರತಿಯೊಬ್ಬರೂ ಸಮಾನ ಸಂಸ್ಕಾರವನ್ನು ಅಳವಡಿಸಿಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳುವುದಕ್ಕೆ ಬಹುದೊಡ್ಡ ಸಾಮಾಜಿಕ ಅಭಿಯಾನವನ್ನೇ ಕೈಗೊಂಡಿದ್ದಾರೆ. ಶ್ರೀಗಳ ಅನುಗ್ರಹದಿಂದ, ಸಮಾಜಮುಖಿ ಕಾಳಜಿ ಯಿಂದ, ಸೇವಾತತ್ಪರತೆಯಿಂದ ಅಸಂಖ್ಯಾತ ಕುಟುಂಬಗಳಲ್ಲಿ ನೆಮ್ಮದಿಯ ಬೆಳಕು ಮೂಡಿದೆ. ನಿರಾಸೆ, ಹತಾಶೆಯ ಜಾಗದಲ್ಲಿ ಆಶಾವಾದ, ಸಾಧನೆಯ ಜಾಗೃತಿ ನೆಲೆಸಿದೆ.

ಏನಿದು ಸಮಾನ ಸಂಸ್ಕಾರ? ಅದನ್ನು ಅರಿಯುವುದು? ಆಚರಣೆಯಲ್ಲಿ ತರುವುದು ಹೇಗೆ? ಇದನ್ನು ಶ್ರೀಗಳು ವಿವರಿಸುವುದು ಹೀಗೆ- ‘ಜಗತ್ತಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟಿನಿಂದಲೇ ಐದು ಋಣಗಳು (ಪಂಚಋಣ) ಇರುತ್ತವೆ. ಅವುಗಳೇ ದೇವ ಋಣ, ಋಷಿ ಋಣ, ಪಿತೃ ಋಣ, ಮನುಷ್ಯ ಋಣ ಮತ್ತು ಭೂತ ಋಣ. ಇವುಗಳಿಂದ ಮುಕ್ತರಾಗಬೇಕಾದರೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂಧ್ಯಾಪ್ರಾರ್ಥನೆ, ಸ್ವಾಧ್ಯಾಯ, ಸದಾಚಾರ ಜೀವನ, ಸಮೈಕ್ಯತೆ, ಸಹಯೋಗ ಎಂಬ ಐದು ಪಂಚಪ್ರಾಣ ವಿಧಿಗಳನ್ನು ಶ್ರದ್ಧೆಯಿಂದ ಪಾಲಿಸುವುದು ಅಗತ್ಯ. ನಮ್ಮ ಜೀವನದ ಪರಿಪೂರ್ಣತೆಗಾಗಿ, ಇಹಪರದ ನಿಜವಾದ ಉನ್ನತಿಗಾಗಿ, ನಮ್ಮ ಹಿರಿಯರು ಯಾವುದೇ ಭೇದಭಾವವಿಲ್ಲದೆ ಸಮಸ್ತ ಸನಾತನ ಹಿಂದುಗಳಿಗೆ ಸಮಾನವಾಗಿ ಈ ಪಂಚಪ್ರಾಣ ವಿಧಿಗಳನ್ನು ರೂಪಿಸಿದ್ದಾರೆ. ಪರಸ್ಪರರ ನಂಬಿಕೆ, ಭಾವನೆಗಳನ್ನು ಗೌರವಿಸುತ್ತಲೇ ನಮ್ಮ ನಮ್ಮ ಆಚಾರ ವಿಚಾರಗಳನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಹೋಗುವುದಕ್ಕೆ ಇಲ್ಲಿ ಮುಕ್ತ ಅವಕಾಶವಿದೆ...’

ಸಂಧ್ಯಾಪ್ರಾರ್ಥನೆ

ದೇವರಿಗೆ ನಮಸ್ಕಾರ ಮಾಡು ಅಂದರೆ, ‘ಏ ಹೋಗಮ್ಮ...’ ಎನ್ನುವ ಮಕ್ಕಳೇ ಜಾಸ್ತಿ. ಆದರೆ, ಪ್ರತಿಯೊಬ್ಬರೂ, ಎಷ್ಟೇ ಕೆಲಸಕಾರ್ಯಗಳಿದ್ದರೂ, ತಮ್ಮ ಪದ್ಧತಿ, ಆಚರಣೆಗಳಿಗೆ ಅನುಸಾರವಾಗಿ ಬೆಳಗ್ಗೆ, ಸಂಜೆ ಸ್ವಲ್ಪ ಸಮಯವಾದರೂ ಒಂದೆರಡು ಶ್ಲೋಕ ಹೇಳಿ ದೇವರಿಗೆ ಪ್ರಾರ್ಥಿಸುವುದಕ್ಕೆ ಸಮಯ ಮೀಸಲಿಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಪ್ರಾರ್ಥನೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ರೂಢಿ ಮಾಡಿಸಬೇಕು. ಪ್ರಾರ್ಥನೆಯಿಂದ ಪ್ರತಿಯೊಬ್ಬರೂ ದೈವ ಋಣದಿಂದ ಮುಕ್ತರಾಗಬಹುದು.

ಸ್ವಾಧ್ಯಾಯ

ಫೇಸ್​ಬುಕ್, ಇನ್​ಸ್ಟಾ, ಯುಟ್ಯೂಬ್​ನಲ್ಲಿ ರೀಲ್ಸ್ ನೋಡಿಕೊಂಡು ಹೊತ್ತು ಕಳೆಯುವ ಜನ ದಿನಂಪ್ರತಿ ಸ್ವಲ್ಪ ಹೊತ್ತಾದರೂ ಬದುಕಿಗೆ ಬೆಳಕು ಕೊಡಬಲ್ಲಂತಹ ರಾಮಾಯಣ, ಮಹಾಭಾರತ, ಭಗವದ್ಗೀತೆ, ವಚನಗಳು, ದಾಸ ಸಾಹಿತ್ಯ ಇತ್ಯಾದಿ ಪಠಣ ಮಾಡುವುದರಿಂದ ಋಷಿ ಋಣದಿಂದ ಮುಕ್ತರಾಗಬಹುದು.

ಸದಾಚಾರ ಜೀವನ

ಮಕ್ಕಳ ಕೊಳಕು ತೊಳೆಯುವಾಗ ಯಾವುದೇ ತಂದೆ-ತಾಯಿ ಅಸಹ್ಯ ಪಟ್ಟುಕೊಳ್ಳುವುದಿಲ್ಲ. ಆದರೆ, ವಯಸ್ಸಾದ ತಂದೆ-ತಾಯಿ ಸೀನಿದರೆ, ಕೆಮ್ಮಿದರೆ ಮಕ್ಕಳಿಗೆ ಅಸಹ್ಯವಾಗುತ್ತದೆ. ಜೀವನ-ಉಜ್ಜೀವನಕ್ಕೆ ಕಾರಣರಾದ ತಂದೆ-ತಾಯಿ, ಗುರು, ಹಿರಿಯರನ್ನು ಗೌರವದಿಂದ, ಪ್ರೀತಿಯಿಂದ ನೋಡಿಕೊಂಡು ಮೌಲ್ಯಯುತವಾದ ಜೀವನ ನಡೆಸಿದರೆ ಪಿತೃಋಣ ತೀರಿಸಬಹುದು.

ಸಮೈಕ್ಯತೆ

ಸಮಾನತೆ ಮತ್ತು ಏಕತೆಯ ಭಾವನೆಯನ್ನು ಸದಾ ಅಂತರಂಗದಲ್ಲಿ ಜಾಗೃತವಾಗಿರಿಸಿಕೊಂಡು ಸಮಾಜದಲ್ಲಿ ಸೇವಾ ಮನೋಭಾವದಿಂದ ಬದುಕುವುದು. ಇಂಥ ಪರೋಪಕಾರದ ಜೀವನ ನಮ್ಮನ್ನು ಮನುಷ್ಯ ಋಣದಿಂದ ಮುಕ್ತರನ್ನಾಗಿಸುತ್ತದೆ.

ಸಹಯೋಗ

ಪಂಚಭೂತಗಳಾದ ಭೂಮಿ, ಗಾಳಿ, ನೀರು, ಪರಿಸರ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವುದು. ಸಮಷ್ಟಿ ಹಿತಪ್ರಜ್ಞೆಯ ಸಹಯೋಗ ಜೀವನ ನಡೆಸುವುದರಿಂದ ಭೂತ ಋಣದಿಂದ ಮುಕ್ತರಾಗಬಹುದು. ಇದನ್ನೆಲ್ಲ ಆಚರಣೆಗೆ ತರುವುದು ಹೇಗೆಂದರೆ, ಅದನ್ನೂ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಸಾಧಿಸಿ ತೋರಿಸಿದ್ದಾರೆ. ಅವರ ದಿವ್ಯ ಸಂಕಲ್ಪದಿಂದ ಹರಿಹರಪುರದಲ್ಲಿ ಸ್ತಂಭ ಸ್ವರೂಪದಲ್ಲಿರುವ ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ಮಹಾಯಂತ್ರ ಹಾಗೂ ದಿವ್ಯ ಸ್ವರೂಪದಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ, ಶಾರದಾ ಪರಮೇಶ್ವರಿಯ ಭವ್ಯ ದೇಗುಲವೇ ಬೃಹದಾಕಾರದಲ್ಲಿ ನಿರ್ವಣಗೊಂಡಿದೆ.

ಈ ಬೃಹತ್ ದೇವಾಲಯ ಸಂಕೀರ್ಣದ ವಾಸ್ತುಶಿಲ್ಪ ಸೌಂದರ್ಯ, ಭಕ್ತಿ-ಭಾವ ಉದ್ದೀಪಿಸುವ ಈ ಸ್ಥಳದ ಪಾವಿತ್ರ್ಯ ಅನನ್ಯ. ಈ ಪವಿತ್ರ ಯಾತ್ರಾ ಕ್ಷೇತ್ರದ ಮಹಾಕುಂಭಾಭಿಷೇಕ ಸಂದರ್ಭದಲ್ಲಿ ಶ್ರೀಗಳ ಇಚ್ಛೆಯಂತೆ ಕ್ಷೇತ್ರಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರಿಗೆ ಜಾತಿ ಮತ ಭೇದವಿಲ್ಲದೆ ಪ್ರತಿಯೊಬ್ಬರ ಪಾದ ತೊಳೆದು ಗೌರವಪೂರ್ವಕವಾಗಿ ಸ್ವಾಗತಿಸಲಾಗಿತ್ತು. ಇನ್ನು ಇಲ್ಲಿಗೆ ಆಗಮಿಸುವ ಭಕ್ತರಿಗೆ ಜಾತ್ಯತೀತವಾಗಿ ಸಹಪಂಕ್ತಿ ಭೋಜನದ ವ್ಯವಸ್ಥೆಯೂ ಹರಿಹರಪುರದಲ್ಲಿದೆ. ಭಕ್ತರಲ್ಲಿ ಒಂದೇ ಕೋರಿಕೆಯೆಂದರೆ, ಪಂಚೆ, ಶಲ್ಯ ಧರಿಸಿ ವಸ್ತ್ರಸಂಹಿತೆ ಪಾಲಿಸಿದರೆ, ಜಾತಿಭೇದವಿಲ್ಲದೆ ಸಹಪಂಕ್ತಿ ಭೋಜನ ಮಾಡಬಹುದು. ಸಮಾನಸಂಸ್ಕಾರ ಪ್ರಚಾರದ ಮೂಲಕ ಸಮಾಜದಲ್ಲಿ ಭಾವೈಕ್ಯತೆಯ ದೀಪ ಬೆಳಗುತ್ತಿರುವ ಶ್ರೀಗಳು ಸ್ವತಃ ಕವಿಗಳು ಹೌದು.

ಬೇರಿನಲಿ ಕಡಲಿಂದ | ಬೇರೆಯಾಗಿರೊ ತೊರೆಯು | ಸಂಗಮದ ಜಾಗದಲಿ | ಅದರಂಗವಾಗುವುದು | ಶರಧಿ ಸೇರಿದ ಮೇಲೆ | ಕಡಲಿಂದ ನದಿಯನ್ನು | ಬೇರ್ಪಡಿಸಲೇನಿಹುದು | ಸಚ್ಚಿದಾನಂದ... ಎಂಬ ಸುಂದರ ತತ್ವರೂಪದಲ್ಲಿ ಜೀವಸಂಸ್ಕಾರವನ್ನು ವಿವರಿಸುತ್ತಾರೆ. ಶ್ರೀಗಳು ಬೋಧಿಸುವ ಐದು ಸಮಾನ ಸಂಸ್ಕಾರಗಳು ತುಂಬ ಕಠಿಣವೇನೂ ಅಲ್ಲ. ಸರಳವಾಗಿ ಅಳವಡಿಸಿಕೊಳ್ಳುವಂಥದ್ದೇ ಆಗಿದೆ. ಅದಕ್ಕೆ ನೆಪಗಳನ್ನು ಹುಡುಕದೆ, ಮನಸ್ಸು ಮಾಡಬೇಕಷ್ಟೇ.

ಹರಿಹರಪುರ ಕ್ಷೇತ್ರದ ಹಿನ್ನೆಲೆ

ಸ್ಕಾಂದ ಪುರಾಣದಲ್ಲಿ ಹರಿಹರಪುರವನ್ನು ಯಾಗಭೂಮಿ ಎಂದು ಕರೆಯಲಾಗಿದೆ. ದಕ್ಷ ಯಜ್ಞ ಎಂದೇ ಪ್ರಸಿದ್ಧವಾಗಿರುವ ಮಹಾಯಾಗವನ್ನು ದಕ್ಷಪ್ರಜಾಪತಿ ಮಾಡಿದ್ದು ಇದೇ ಸ್ಥಳದಲ್ಲಿ. ಆಗ ಪರಶಿವನು ದಕ್ಷ ಹರ ಸೋಮೇಶ್ವರನಾಗಿ ಯಜ್ಞಕುಂಡದಿಂದ ಅವತರಿಸಿ ಲೋಕವನ್ನು ಅನುಗ್ರಹಿಸಿದ್ದು ಈ ಸ್ಥಳದ ಮಹಾತ್ಮೆ. ಇದಕ್ಕೆ ಸಾಕ್ಷಿಯಾಗಿ ಇಲ್ಲಿರುವ ದಕ್ಷಹರ ಸೋಮೇಶ್ವರ ದೇವಾಲಯವನ್ನು ಕೆಳದಿ ರಾಜರು ಪುನರ್ ನಿರ್ಮಾಣ ಮಾಡಿದ್ದಾರೆ. ತುಂಗಾ ನದಿಯು ಉತ್ತರಾಭಿಮುಖವಾಗಿ ಹರಿಯುವ ಸಹ್ಯಾದ್ರಿ ತಪ್ಪಲಿನ ಈ ಸ್ಥಳ ಪವಿತ್ರವೆಂಬ ಕಾರಣಕ್ಕೆ ಇಲ್ಲಿ ಅಗಸ್ಱ ಮಹರ್ಷಿಗಳು ತಪಸ್ಸು ಮಾಡಿದಾಗ ಲಕ್ಷ್ಮೀನರಸಿಂಹ ದೇವರು ಪ್ರತ್ಯಕ್ಷನಾಗಿ ಅನುಗ್ರಹಿಸುತ್ತಾರೆ. ಹೀಗೆ ಪರಶಿವನು ಪ್ರಕಟಗೊಂಡ ಯಾಗಭೂಮಿ, ಅಗಸ್ಱರು ಭಗವಂತನ ದರ್ಶನ ಪಡೆದ ತಪೋಭೂಮಿಯನ್ನು, ಶ್ರೀ ಶಂಕರಾಚಾರ್ಯರು ಜ್ಞಾನಾಧಿದೇವತೆ ಶಾರದಾ ಪರಮೇಶ್ವರಿಯನ್ನು ಪ್ರತಿಷ್ಠಾಪಿಸುವ ಮೂಲಕ ಜ್ಞಾನಭೂಮಿಯನ್ನಾಗಿ ಮಾಡಿದರು. ಮುಂದೆ 1392ರಲ್ಲಿ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ 2ನೇ ಹರಿಹರ ರಾಯ ಲಕ್ಷ್ಮೀನರಸಿಂಹ (ಹರಿ) ಹಾಗೂ ದಕ್ಷಹರ ಸೋಮೇಶ್ವರನ (ಹರ) ಆರಾಧನೆ ನಿರಂತರವಾಗಿ ನಡೆಯುವ ಈ ಸ್ಥಳಕ್ಕೆ ಹರಿಹರಪುರ ಎಂದು ನಾಮಕರಣ ಮಾಡಿ ಈ ಧರ್ಮಪೀಠವನ್ನು ಪುನರುಜ್ಜೀವನಗೊಳಿಸಿರುವುದು ಇತಿಹಾಸ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net