ಅವಕಾಶದ ಬಾಗಿಲು ತೆರೆದು ತೋರಣ ಕಟ್ಟೋಣ...

Column F
Published on
ದೇಶದ ಸೊಗಡು, ಶಕ್ತಿ ಇರುವುದೇ ಗ್ರಾಮ ಭಾರತದಲ್ಲಿ. ಗ್ರಾಮದ ಪ್ರತಿ ಚಟುವಟಿಕೆಯೂ ಆಧುನಿಕ ತಂತ್ರಜ್ಞಾನದೊಂದಿಗೆ ಗರಿಗೆದರಬೇಕಿದೆ. ಊರು ತೊರೆದಿರುವ ಯುವಜನರನ್ನು ‘ನಮ್ಮ ಊರು - ನನ್ನ ಉದ್ಯೋಗ’ ಎಂಬ ಘೊಷಣೆಯೊಂದಿಗೆ ಮರಳಿ ಕರೆತರಬೇಕಿದೆ. ಕೃಷಿಯು ಈ ನೆಲದ ‘ಘನತೆ ತುಂಬಿದ ಉದ್ಯಮ’ಎಂದು ಸಾರಿ ಉತ್ತೇಜಿಸಬೇಕಿದೆ.

ಭವಿಷ್ಯದಲ್ಲಿ ದೇಶ ಕಟ್ಟುವ ಸದೃಢ ಯುವ ಸಮೂಹ ವ್ಯವಸ್ಥಿತವಾಗಿ ಸಜ್ಜುಗೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ದಿಸೆಯಲ್ಲಿಯೇ ಆತ್ಮವಿಶ್ವಾಸ ಇಮ್ಮಡಿಗೊಳಿಸುವ ವಾತಾವರಣ ನಿರ್ಮಾಣ ಮಾಡಬೇಕಿದೆ. ಈಚೆಗೆ ಪ್ರಕಟವಾದ ಯುಪಿಎಸ್​ಸಿ ಫಲಿತಾಂಶದಲ್ಲಿ ರಾಜ್ಯದಿಂದ ಗಮನಾರ್ಹ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿರುವುದು ರಾಜ್ಯದ ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ಭಾರತದ ಬೆಳವಣಿಗೆಗೆ ಕರ್ನಾಟಕದ ಕೊಡುಗೆಯನ್ನು ದೊಡ್ಡ ಮಟ್ಟದಲ್ಲಿ ನೀಡಬೇಕೆಂಬ ಸಂಕಲ್ಪವನ್ನು ನಾವು ತೊಡಬೇಕಿದೆ.

ಕರ್ನಾಟಕದಲ್ಲಿ ವಿದ್ಯಾರ್ಥಿಗಳು ಹಾಗೂ ಯುವ ಜನರು ವಿವಿಧ ಕ್ಷೇತ್ರಗಳಲ್ಲಿ ಮೇಲೆದ್ದು ಬರಲು ವಿಪುಲ ಅವಕಾಶಗಳಿವೆ. ಆದರೆ, ಅವಕಾಶಗಳ ಬಾಗಿಲು ತೆರೆದುಕೊಡುವ ಕೆಲಸ ಸರ್ಕಾರದಿಂದ ಮಾತ್ರ ನಿರೀಕ್ಷಿಸದೇ ಸ್ಥಳೀಯ ಸಂಸ್ಥೆಗಳು, ಸಾಮಾಜಿಕ ಸಂಘಟನೆಗಳು, ಸಹಕಾರಿ ಸಂಸ್ಥೆಗಳು, ಸರ್ಕಾರೇತರ ಸಂಘಗಳಿಂದ ಸಂಘಟಿತ ಪ್ರಯತ್ನಗಳು ಸಮರೋಪಾದಿಯಲ್ಲಿ ಸಾಗಬೇಕಿದೆ.

ಐಎಎಸ್, ಐಪಿಎಸ್, ಐಎಫ್​ಎಸ್, ಐಆರ್​ಎಸ್ ಮೊದಲಾದ ಹುದ್ದೆಗಳ ಕನಸು ಕಾಣುವ ನಮ್ಮ ನೆಲದ ಪ್ರತಿಭಾವಂತರಿಗೆ ಅದು ‘ಗಗನ ಕುಸುಮವೋ’ಎಂಬ ರೀತಿಯ ವಾತಾವರಣ ನಿರ್ವಿುಸಲಾಗಿದೆ. ಯುಪಿಎಸ್​ಸಿ ಪರೀಕ್ಷೆ ಎದುರಿಸಲು ದೆಹಲಿಗೆ ಹೋಗಿ ಕೋಚಿಂಗ್ ತರಗತಿಗಳಿಗೆ ಸೇರ್ಪಡೆಯಾಗಬೇಕೆಂಬ ಅನಿವಾರ್ಯ ಪರಿಸ್ಥಿತಿಯ ನಡುವೆಯೇ ರಾಜಧಾನಿ ಬೆಂಗಳೂರು ಹಾಗೂ ಇತರ ಕೆಲ ನಗರಗಳಲ್ಲಿ ಕೆಲವು ಕೋಚಿಂಗ್ ಸೆಂಟರ್​ಗಳು ತೆರೆದುಕೊಂಡಿವೆ. ಕೋಚಿಂಗ್ ಸೆಂಟರ್ ಸೇರದಿದ್ದರೆ ಯಪಿಎಸ್​ಸಿ ಪರೀಕ್ಷೆ ಎದುರಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಬಹುತೇಕವಾಗಿ ನಿರ್ವಣವಾಗಿಬಿಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಬಡತನದ ರೇಖೆಯಲ್ಲಿರುವ ನೈಜ ಪ್ರತಿಭಾವಂತ ಮಕ್ಕಳಿಗೆ ಐಎಎಸ್ ಕನಸು ಗಗನ ಕುಸುಮವೇ ಸರಿ ಎಂಬಂತಾಗಿದ್ದರೆ, ಕೆಳ ಮಧ್ಯಮ ವರ್ಗದವರ ಸ್ಥಿತಿ ‘ಅತ್ತ ದರಿ-ಇತ್ತ ಪುಲಿ’ಎಂಬಂತಾಗಿದೆ. ಲಕ್ಷಗಟ್ಟಲೇ ಕೋಚಿಂಗ್ ಶುಲ್ಕ ತೆರಬೇಕಾದ ಅಡಕತ್ತರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಪೇಚಾಟದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಯುಪಿಎಸ್​ಸಿ, ಕೆಪಿಎಸ್​ಸಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಿದ್ಧತೆಗಾಗಿ ಬದ್ಧತೆಯ ಪೋ›ತ್ಸಾಹದ ಕೊರತೆ ನಮ್ಮ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಪದವೀಧರರು ಎದುರಿಸುತ್ತಿರುವ ಪರಿಸ್ಥಿತಿ ಒಂದೆಡೆಯಾದರೆ, ಸಿಇಟಿ ರ‍್ಯಾಂಕಿಂಗ್ ಆಧಾರದ ಮೇಲೆ ಪ್ರವೇಶಾತಿ ಪಡೆಯಬೇಕಾದ ಮೆಡಿಕಲ್, ಇಂಜಿನಿಯರಿಂಗ್ ಸೀಟುಗಳನ್ನು ದಕ್ಕಿಸಿಕೊಳ್ಳುವಲ್ಲಿ ಪ್ರತಿಭೆ, ಸಾಮರ್ಥ್ಯವಿದ್ದರೂ ನಿರ್ದಿಷ್ಟ ಕಾಲೇಜು ಆಯ್ದುಕೊಳ್ಳಬೇಕಾದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕ ವರ್ಗ ಶುಲ್ಕ ಮತ್ತು ವಂತಿಕೆಯ ವ್ಯೂಹದಲ್ಲಿ ಸಿಲುಕಿ ನರಳುವಂಥ ಪರಿಸ್ಥಿತಿ ನಿರ್ವಣವಾಗಿದೆ. ಅಂಧತ್ವವನ್ನೇ ಸವಾಲಾಗಿ ಸ್ವೀಕರಿಸಿ ಪ್ರತಿಯೊಬ್ಬರೂ ಕಣ್ಣು ತೆರೆದು ನೋಡುವ ಸಾಧನೆಗೈದ ಮೈಸೂರು ಗ್ರಾಮಾಂತರ ಮೂಲದ ಕೆ.ಟಿ.ಮೇಘನಾ ಅವರನ್ನು ‘ಸಾಧನೆಯ ರಾಯಭಾರಿ’ಎಂದೇ ಕರೆಯಬೇಕಿದೆ. ಹಾಗೆಯೇ ಸಾಲದ ಬಾಧೆಯಿಂದ ಅಪ್ಪ ಆತ್ಮಹತ್ಯೆ ಮಾಡಿಕೊಂಡ ಆಘಾತದ ನಡುವೆಯೂ ಛಲವನ್ನು ಮುಡಿಗೇರಿಸಿಕೊಂಡು ತಾನೊಬ್ಬ ನತದೃಷ್ಟ ರೈತನ ಮಗಳಾಗಿ ಸಾಧಿಸಿಯೇ ತೀರಬೇಕೆಂಬ ಹಠದಿಂದ ಐಎಎಸ್ ಕನಸು ಹೊತ್ತು ಇಟ್ಟ ದಿಟ್ಟ ಹೆಜ್ಜೆಯ ಬೆನ್ನ ಹಿಂದೆಯೇ ಏರಿ ಬಂದ ಕರೊನಾ ಮಹಾಮಾರಿಯನ್ನೂ ಲೆಕ್ಕಿಸದೇ ಕೋವಿಡ್ ಜತೆಗೇ ಪರೀಕ್ಷೆಯನ್ನೂ ಜಯಿಸಿ ಮಾದರಿ ಸಾಧಕಿಯಾಗಿರುವ ಶಿರಾ ತಾಲ್ಲೂಕಿನ ತಟಕಲೂರು ಗ್ರಾಮದ ಎಂ.ಅರುಣಾ ಒಂದು ರೀತಿಯಲ್ಲಿ ಯುಪಿಎಸ್​ಸಿ ಚಕ್ರವ್ಯೂಹ ಭೇದಿಸಿದ ಯೋಧೆಯಂತೆ ಹೊರಹೊಮ್ಮಿದ್ದಾರೆ.

ಕಳೆದ ಬಾರಿ ಸಂದರ್ಶನ ಎದುರಿಸುವವರೆಗೂ ಹೆಜ್ಜೆಯಿಟ್ಟು ಸ್ವಲ್ಪದರಲ್ಲೇ ದಡ ಸೇರುವ ಅವಕಾಶ ತಪ್ಪಿಸಿಕೊಂಡಿದ್ದ ಹೊನ್ನಾವರದ ಅಪ್ಪಟ್ಟ ಗ್ರಾಮೀಣ ಪ್ರತಿಭೆ ದೀಪಕ್ ಶೇಟ್ ಈ ಬಾರಿ ಛಲಬಿಡದ ತ್ರಿವಿಕ್ರಮನಂತೆ ಮರಳಿ ಪ್ರಯತ್ನ ಮಾಡಿ 311ನೇ ಸ್ಥಾನ ಗಳಿಸಿ ಸಾಧನೆಯ ನಗೆ ಬೀರಿದ್ದಾರೆ. ಕೌಟುಂಬಿಕ ಹಿನ್ನೆಲೆಯಿಂದಲೂ ದೀಪಕ್ ಶೇಟ್ ಕಡುಬಡಕುಟುಂಬದವರಾಗಿದ್ದು ತಂದೆ ಅಕ್ಕಸಾಲಿಗ ಹಾಗೂ ತಾಯಿ ಅಂಗನವಾಡಿ ಕಾರ್ಯಕರ್ತೆ ಇವರ ಸುಪುತ್ರನಾಗಿ ಇಂಥ ಸಾಧನೆಯ ಮೆಟ್ಟಿಲು ತುಳಿದಿರುವುದು ಅಚ್ಚರಿಯ ಜತೆಗೇ ಹೆಮ್ಮೆ ತರುವ ಸಂಗತಿಯಾಗಿದೆ. ಆತ್ಮವಿಶ್ವಾಸ ಹಾಗೂ ಛಲ ಹೊಮ್ಮಿಬರುವುದು ಗ್ರಾಮೀಣ ಪ್ರದೇಶದಿಂದ ಬಂದ ಪ್ರತಿಭೆಗಳಿಗೆ ಮಾತ್ರ ಎಂಬ ಮಾತು ದಿಟವೆಂಬಂತೆ ಈ ಬಾರಿಯ ಫಲಿತಾಂಶದಲ್ಲಿ ಯಶ ಸಾಧಿಸಿರುವವರಲ್ಲಿ ಹೆಚ್ಚಿನವರು ಗ್ರಾಮೀಣ ಮೂಲದವರು ಎಂಬುದು ನಾವು ಗಮನಿಸಬೇಕಾದ ಅಂಶ. ಭಾರತ ಹಳ್ಳಿಗಳ ದೇಶ. ರಾಷ್ಟ್ರದ ಸದೃಢತೆ ಹಾಗೂ ಅಭಿವೃದ್ಧಿಯನ್ನು ಇಂದು ಗ್ರಾಮೀಣ ಪ್ರದೇಶವನ್ನು ಕೇಂದ್ರೀಕರಿಸಿಯೇ ನಿರೀಕ್ಷಿಸುತ್ತಿರುವುದು ಸಹಜವೇ. ಅದೇ ಬಗೆಯಲ್ಲಿ ಪಟ್ಟಣ ಪ್ರದೇಶದ ಶ್ರಮಿಕ ವರ್ಗಗಳು ಈ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಆದರೆ, ಗ್ರಾಮೀಣ ಹಾಗೂ ಶ್ರಮಿಕ ವರ್ಗದಿಂದ ಬರುವ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವಾತಾವರಣ ಹಾಗೂ ಸೌಕರ್ಯ ಕಲ್ಪಿಸುವಲ್ಲಿ ನಗರ-ಗ್ರಾಮೀಣ ಪ್ರದೇಶಗಳ ನಡುವಿನ ತಾರತಮ್ಯದ ಕಂದಕ ಮುಚ್ಚಬೇಕಿದೆ, ದೇಶ ಹಾಗೂ ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಇದು ಅತ್ಯಾವಶ್ಯಕವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬಿ ಭಾರತದ ಮೂಲಕ ಬಲಿಷ್ಠ ಭಾರತ ನಿರ್ವಣದ ಸಂಕಲ್ಪ ತೊಟ್ಟು ಮುನ್ನಡೆದಿದ್ದಾರೆ. ದೇಶ ಕಟ್ಟುವ ನೈಜ ಕಾಳಜಿಯ ಅವರ ತಪಸ್ವಿ ಸಂಕಲ್ಪದೊಂದಿಗೆ ಹೆಜ್ಜೆ ಹಾಕುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಸುಧಾರಣೆಯ ಹಾದಿಯಲ್ಲಿ ರಾಜಕೀಯದ ಗೆರೆ ಎಲ್ಲೂ ನುಸುಳದಂತೆ ಎಚ್ಚರ ವಹಿಸಬೇಕು. ಹಾಗೆಯೇ ವಿರೋಧಿಸುವ ಕಾರಣಕ್ಕಾಗಿ ‘ಮೊಸರಲ್ಲಿ ಕಲ್ಲು ಹುಡುಕುವ’ ಕೀಟಲೆಗಳೂ ನಿಲ್ಲಬೇಕು. ಕರೊನಾದಂತಹ ಮಹಾಮಾರಿಯನ್ನು ಜಗತ್ತಿನ ಅತಿದೊಡ್ಡ ಜನಸಂಖ್ಯೆಯ ಪ್ರಜಾಪ್ರಭುತ್ವದ ದೇಶವಾದ ಭಾರತ ವಿಶ್ವವೇ ನಿಬ್ಬೆರಗಾಗುವಂತೆ ನಿಯಂತ್ರಿಸಿದೆ. ಅಂತೆಯೇ ಕರೊನಾ ಕಾರಣಕ್ಕಾಗಿ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳು ಎಲ್ಲೂ ಹಿನ್ನಡೆಯಾಗದಂತೆ ಹೆಜ್ಜೆ ಇಡಲಾಗಿದೆ. ಕರ್ನಾಟಕದ ಮಟ್ಟಿಗೂ ನಾವು ಇದೇ ಮಾತನ್ನು ಹೇಳಬೇಕಿದೆ. ಆರ್ಥಿಕ ಸಂಕಷ್ಟದ ನಡುವೆಯೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪನವರು ರಾಜ್ಯ ಹಿಂದೆಂದೂ ಕಂಡರಿಯದ ನೆರೆಹಾವಳಿಯನ್ನು ಏಕಾಂಗಿಯಾಗಿ ಸಂಭಾಳಿಸಿದರು. ಇದರ ಬೆನ್ನಿಗೇ ಬಂದು ನಿಂತ ಕರೊನಾ ಹಾವಳಿಯಿಂದ ತತ್ತರಿಸುವ ಪರಿಸ್ಥಿತಿ ಎದುರಾದರೂ ರಾಜ್ಯದ ಯಾವುದೇ ವ್ಯವಸ್ಥೆ ಅಸ್ಥಿರಗೊಳ್ಳದಂತೆ ಎಚ್ಚರ ವಹಿಸಿ ಆಡಳಿತ ನಡೆಸಿದರು. ಇದನ್ನು ಪ್ರಸ್ತಾಪಿಸಲು ಕಾರಣವೇನೆಂದರೆ ರಾಜ್ಯ ಇಂದು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅನೇಕ ಸವಾಲು-ಸಂಕಷ್ಟಗಳ ನಡುವೆಯೂ ಅಭಿವೃದ್ಧಿ ಕಾರ್ಯಗಳಲ್ಲಿ ಎಲ್ಲೂ ರಾಜಿಯಾಗದೇ ಮುನ್ನಡೆದಿದೆ.

ಕರ್ನಾಟಕ ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಿಗೆ ಹೇಳಿಮಾಡಿಸಿದ ರಾಜ್ಯವಾಗಿದೆ. ಅದು ಐಟಿ-ಬಿಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಕೃಷಿ ಉತ್ಪನ್ನ, ಅರಣ್ಯ ಉತ್ಪನ್ನ, ಖನಿಜ ಉತ್ಪನ್ನ, ಪ್ರವಾಸೋದ್ಯಮ ಈ ಮೊದಲಾದ ಅನೇಕ ಕ್ಷೇತ್ರಗಳಲ್ಲಿ ಗಣನೀಯ ಅವಕಾಶಗಳ ಜತೆಗೇ ಈ ನಾಡಿನಲ್ಲಿ ಗ್ರಾಮೀಣ ಉತ್ಪನ್ನಗಳು ವಿಶ್ವದ ಗಮನ ಸೆಳೆಯುವಷ್ಟು ಶ್ರೇಷ್ಠವಾಗಿವೆ.

12ನೇ ಶತಮಾನದಲ್ಲಿ ಅಣ್ಣ ಬಸವಣ್ಣನವರು ಗ್ರಾಮೀಣ ಉತ್ಪನ್ನಗಳು ಹಾಗೂ ಕಸುಬು ಆಧಾರಿತ ಉತ್ಪನ್ನಗಳ ಶ್ರೇಷ್ಠತೆ ಹಾಗೂ ಕಾಯಕ ನಿಷ್ಠೆಯನ್ನು ಬೋಧಿಸಿ ಕಾಯಕವೇ ಕೈಲಾಸವೆಂದು ಜನಸಾಮಾನ್ಯರಿಗೆ ಅರಿವು ಮೂಡಿಸುವ ಮೂಲಕ ಕಾಯಕ ಬಂಧುಗಳನ್ನು ಶರಣ ಶ್ರೇಷ್ಠರೆಂದು ಸಾಕ್ಷೀಕರಿಸಿ ಬಸವಾದಿ ಶರಣರೆಲ್ಲರನ್ನು ಒಗ್ಗೂಡಿಸಿ ಅನುಭವ ಮಂಟಪದ ಮೂಲಕ ಸಮ ಸಮಾಜದ ನಿಜದರ್ಶನ ಮಾಡಿಸಿದರು. ಆ ಮೂಲಕ ಶ್ರಮಿಕ ವರ್ಗದ ಮಹತ್ವವನ್ನು ಹಾಗೂ ಮಾನವ ಧರ್ಮದ ಮಹತ್ವವನ್ನು ಜಗತ್ತಿಗೆ ಪಸರಿಸುವ ಮೂಲಕ ವಿಶ್ವಗುರುವಾದರು. ಆದರೆ, ಕಾಲಾನಂತರದಲ್ಲಿ ನಮ್ಮ ಗ್ರಾಮೀಣರ ಬದುಕು ಆಧುನಿಕ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ, ಚೀನಾ ಹಾಗೂ ಇತರ ದೇಶಗಳ ಉತ್ಪನ್ನ ಆಕ್ರಮಣದ ಆರ್ಭಟಕ್ಕೆ ಸಿಲುಕಿ ನಲುಗಿದೆ. ಉದ್ಯೋಗ ಅವಕಾಶಗಳನ್ನು ವಿದೇಶಿ ಉತ್ಪನ್ನಗಳು ಕಬಳಿಸಿವೆ. ಈ ಹಿನ್ನೆಲೆಯಲ್ಲಿ ಕುಟುಂಬಗಳ ಬೆಳಕಾಗಬೇಕಾದ, ಊರಿನ ಹಿರಿಮೆಯಾಗಬೇಕಿದ್ದ ಮಕ್ಕಳು ಎಷ್ಟೇ ಪ್ರತಿಭಾವಂತರಾದರೂ, ಕೌಶಲಮತಿಗಳಾದರೂ ಗುಣಮಟ್ಟದ ಶಿಕ್ಷಣ ಅಥವಾ ಉದ್ಯೋಗವನ್ನರಸಿ ಪಟ್ಟಣ ಪ್ರದೇಶಗಳಿಗೆ ಗುಳೇ ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಇವತ್ತಿಗೂ ಯಾವುದೇ ಹಳ್ಳಿ ನೋಡಿದರೂ ಬಹುತೇಕವಾಗಿ ವಯೋವೃದ್ಧರು, ಹೆಂಗಸರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ ಹೊರತೂ ಯುವಕರ ತಲೆ ಎಣಿಸಬೇಕಾದ ಪರಿಸ್ಥಿತಿ ಇದೆ. ನಮ್ಮ ಸೊಗಡು, ಶಕ್ತಿ ಇರುವುದೇ ನಮ್ಮ ಗ್ರಾಮ ಭಾರತದಲ್ಲಿ. ಗ್ರಾಮದ ಪ್ರತಿ ಚಟುವಟಿಕೆಯೂ ಈ ಹಿಂದಿನಂತೆ ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮತ್ತೆ ಗರಿಗೆದರಬೇಕಿದೆ. ಊರು ಬಿಟ್ಟು ಹೋಗಿರುವ ನಮ್ಮ ಯುವಜನರನ್ನು ‘ನಮ್ಮ ಊರು - ನನ್ನ ಉದ್ಯೋಗ’ ಎಂಬ ಘೊಷಣೆಯೊಂದಿಗೆ ಕರೆತರಬೇಕಿದೆ.

ಈ ದೇಶದ ಕೃಷಿ ಹಾಗೂ ಕೃಷಿಯಾಧಾರಿತ ಉತ್ಪನ್ನ ಈ ನೆಲದ ‘ಘನತೆ ತುಂಬಿದ ಉದ್ಯಮ’ಎಂದು ಸಾರಿ, ಈ ನಿಟ್ಟಿನಲ್ಲಿ ಉತ್ತೇಜಿಸಬೇಕಿದೆ. ಈ ಹಿನ್ನೆಲೆಯಲ್ಲಿಯೇ ಪ್ರಧಾನಿ ಮೋದಿಯವರು ಸ್ವಾವಲಂಬಿ ಭಾರತ ನಿರ್ವಣದ ಸಂಕಲ್ಪದಡಿಯಲ್ಲಿ ಬಹುದೊಡ್ಡ ಕ್ರಾಂತಿಕಾರಕ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿ ಜನತೆಯಿಂದ ಬಹುದೊಡ್ಡ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದಾರೆ. ಕೌಶಲ ಭಾರತ, ಮೇಕ್ ಇನ್ ಇಂಡಿಯಾದಂತಹ ಯೋಜನೆಗಳು ನಮ್ಮ ಯುವ ಜನರನ್ನು ಸಂಬಳಕ್ಕಾಗಿ ಹಂಬಲಿಸುವ ಮನಸ್ಥಿತಿಯಿಂದ ಹೊರತಂದು ಸ್ವಾವಲಂಬಿಗಳನ್ನಾಗಿಸಿ, ಅವರು ‘ಉದ್ಯೋಗದಾತ ಉದ್ಯಮಶಿಲ್ಪಿ’ಗಳನ್ನಾಗಿಸುವ ಉದ್ದೇಶ ಹೊಂದಿದೆ. ಪ್ರತಿಭೆ ಇದ್ದರೂ ಹಣಕಾಸಿನ ಮುಗ್ಗಟ್ಟಿನ ಕಾರಣದಿಂದಾಗಿ ದೇಶದಲ್ಲಿ ವೈದ್ಯಕೀಯ ಹಾಗೂ ಇತರ ವೃತ್ತಿಪರ ಕೋರ್ಸ್​ಗಳಿಗೆ ಸೇರಲಾಗದವರು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬಹುದಾದ ಪರದೇಶಗಳ ವಿಶ್ವವಿದ್ಯಾನಿಲಯಗಳ ಕರೆಗೆ ಓಗೊಟ್ಟು ಅನಾಥಪ್ರಜ್ಞೆಯಲ್ಲಿ ವ್ಯಾಸಂಗ ಮಾಡಬೇಕಾದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ.

ಉದ್ಯೋಗ-ಶಿಕ್ಷಣ ನಾವು ಹುಟ್ಟಿ ಬೆಳೆದ ಪರಿಸರದಲ್ಲೇ ದೊರಕುವಂತಾಗಬೇಕು. ಶಿಕ್ಷಣದ ವಾಣಿಜ್ಯೀಕರಣಕ್ಕೆ ಅಂಕುಶ ಬೀಳಲೇಬೇಕು. ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ವೃತ್ತಿಪರ ಕೋರ್ಸ್​ಗಳಾದ ವೈದ್ಯಕೀಯ, ಇಂಜಿನಿಯರಿಂಗ್ ಶಿಕ್ಷಣ, ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್​ಸಿ, ಕೆಪಿಎಸ್​ಸಿ, ಬ್ಯಾಂಕಿಂಗ್, ರೈಲ್ವೆ, ಪೊಲೀಸ್ ಹಾಗೂ ಇತರ ಹುದ್ದೆಗಳ ಕೋರ್ಸ್​ಗಳಿಗೆ ಆರ್ಥಿಕ ಹೊರೆ ಇಲ್ಲದಂತೆ ಗುಣಮಟ್ಟದ ತರಬೇತಿ ಸುಲಭದಲ್ಲಿ ಸಿಗುವ ವ್ಯವಸ್ಥೆಯಾಗಬೇಕು. ಈ ನೆಲದ ಯಾವೊಬ್ಬ ಪ್ರತಿಭೆಗೂ ಅಕ್ಷರ ಹಾಗೂ ಅವಕಾಶ ವಂಚನೆಯಾಗದಂತೆ ನೋಡಿಕೊಳ್ಳುವುದು ಸಾಮಾಜಿಕ ಜವಾಬ್ದಾರಿ ಹೊತ್ತವರೆಲ್ಲರ ಕರ್ತವ್ಯ ಎಂಬುದನ್ನು ನಾವ್ಯಾರೂ ಮರೆಯದಿರೋಣ. ಅಂತೆಯೇ ಜವಾಬ್ದಾರಿ ಮೆರೆಯಲು ಕ್ರಿಯಾಶೀಲ ಯೋಜನೆಯತ್ತ ಹೆಜ್ಜೆ ಹಾಕೋಣ. ಅವಕಾಶದ ಬಾಗಿಲು ತೆರೆದು ತೋರಣ ಕಟ್ಟೋಣ...

(ಲೇಖಕರು ರಾಜ್ಯ ಬಿಜೆಪಿ ಉಪಾಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net