ಸಕಾಲಿಕ ಅಂಕಣ; ಅಂಧತ್ವದ ಕತ್ತಲಿಗೆ ವಿಜ್ಞಾನದ ಬೆಳಕು

8754
Published on
ಕೆಲ ದಶಕಗಳ ಹಿಂದಿನದಕ್ಕೆ ಹೋಲಿಸಿದರೆ ಈಗ ಅಂಧರ ಬದುಕಿನಲ್ಲಿ ಅಗಾಧ ಬದಲಾವಣೆಗಳಾಗಿವೆ. ವಿದ್ಯಾಭ್ಯಾಸಕ್ಕೆ ಅನುಕೂಲಗಳು ಒದಗಿವೆ. ಸರ್ಕಾರಗಳು ಪ್ರೋತ್ಸಾಹ ಕೊಡುತ್ತಿವೆ. ವೈಜ್ಞಾನಿಕ ಸಂಶೋಧನೆಗಳಿಂದಾಗಿ ಅನೇಕ ಉಪಕರಣಗಳು ತಯಾರಾಗಿ, ಸಾಧನೆಗೆ ಇಂಬು ನೀಡಿವೆ.

ಅದು 1980ನೆಯ ಇಸ್ವಿಯ ಜುಲೈ 10ನೇ ತಾರೀಖು. ಎಂಟು ವರ್ಷ ತುಂಬಿದ ಒಬ್ಬ ಕಣ್ಣಿಲ್ಲದ ಹುಡುಗನನ್ನು ಬೆಳಗಿನ ಜಾವ ಬೇಗನೆ ಎಬ್ಬಿಸಿ ಬಿಸಿನೀರು ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ಮೈಸೂರಿನ ಸರಕಾರಿ ಅಂಧ ಮಕ್ಕಳ ಪಾಠಶಾಲೆಗೆ ಕರೆದುಕೊಂಡು ಹೋದರು. ಆ ಹುಡುಗನ ಹಳ್ಳಿ ಮೈಸೂರಿನಿಂದ ಸುಮಾರು 150 ಕಿ.ಮೀ ದೂರವಿತ್ತು. ಅಷ್ಟು ದೂರ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದು ಅದೇ ಮೊದಲು. ಆ ಊರಿನ ಜನರಿಗೂ ಮೈಸೂರಿಗೆ ಬಾಲಕನನ್ನು ಕಳುಹಿಸುತ್ತಿರುವುದು ಬಹಳ ವಿಶೇಷವಾಗಿಯೇ ಕಾಣುತ್ತಿತ್ತು. ‘ಸಣ್ಣ ಹುಡುಗ ಅಪರಿಚಿತ ಜಾಗ. ಕಣ್ಣು ಬೇರೆ ಕಾಣುವುದಿಲ್ಲ, ಇಂತಹವನನ್ನು ಅಷ್ಟು ದೂರ ಕಳಿಸಿ ಏನು ಮಾಡುತ್ತಾರೊ. ಸುಮ್ಮನೆ ಇಲ್ಲೆ ಎಲ್ಲಾದರೂ ಒಂದಿಷ್ಟು ಸಂಗೀತ ಕಲಿಸಿ ಜೀವನ ಮಾಡೋಕೆ ದಾರಿ ತೋರಿಸೋಕಾಗಲ್ವಾ?’ ಎಂದು ಕೆಲವರು ಸಲಹೆ ನೀಡಿದರು. ಹಡೆದ ತಾಯಿ ತಂದೆಗಳಿಗೆ ದುಗುಡ. ಆದರೂ ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂಬ ತುಡಿತ. ಮೈಸೂರಿಗೆ ಹೋಗಿ ಬರುವ ಖರ್ಚನ್ನು ಕಷ್ಟದಿಂದಲೆ ಹೊಂದಿಸಬೇಕಾದ ಬಡತನದ ಸ್ಥಿತಿ.

ಈಗಾಗಲೇ ಉದ್ಯೋಗದ ಮಾರ್ಗವನ್ನು ಕಂಡುಕೊಂಡಿದ್ದ ಇಬ್ಬರು ಅಣ್ಣಂದಿರು ಆ ಬಾಲಕನನ್ನು ವಿದ್ಯಾವಂತನನ್ನಾಗಿ ಮಾಡಲೇಬೇಕೆಂದು ಛಲ ತೊಟ್ಟರು. ಏಳನೇ ತರಗತಿಯವರೆಗೆ ಓದಿ ಶಾಲೆ ಬಿಟ್ಟಿದ್ದ ಒಬ್ಬ ಅಣ್ಣ ತನ್ನ ಸ್ನೇಹಿತರಿಂದ ಒಂದಿಷ್ಟು ಹಣ ಪಡೆದು ಮೈಸೂರಿಗೆ ಕರೆದುಕೊಂಡು ಹೋದ. ಯಾರೋ ಕೇಳಿದರು- ‘ಇಂತಹ ಚೆಂದುಳ್ಳಿ ಹುಡುಗನಿಗೆ ಕಣ್ಣು ಹೆಂಗೋಯ್ತು?’ ಅದಕ್ಕೆ ಅಣ್ಣ ಉತ್ತರಿಸಿದ- ‘ಹುಟ್ಟಿದಾಗ ಕಣ್ಣು ಚೆನ್ನಾಗೆ ಇದ್ದವು. ಮಗುವಿಗೆ ಒಂಬತ್ತು ತಿಂಗಳು ಇದ್ದಾಗ ಬಂದ ಜಾಂಡೀಸ್ ಕಾಯಿಲೆ ಎರಡು ವರ್ಷದ ಮಗುವಾದರೂ ಹುಷಾರಾಗಲಿಲ್ಲ. ತಾಯಿ ತಂದೆ ಮಗುವನ್ನು ಬದುಕಿಸಿಕೊಳ್ಳುವ ಆಸೆ ಕೈಬಿಟ್ಟು ಜೀವ ಹೋದ ಮೇಲೆ ಹೂತು ಬಂದರಾಯ್ತು ಎಂದು ಬಟ್ಟೆಯಲ್ಲಿ ಸುತ್ತಿಟ್ಟರು. ಮೂರು ದಿನವಾದರೂ ಜೀವ ಹೋಗಲಿಲ್ಲ. ಆಗ ಬೇಸಾಯ ಹೂಡಲಿಕ್ಕೆಂದು ಇದ್ದ ಒಂದು ಜೊತೆ ಎತ್ತನ್ನು ಮಾರಿ ಮಗುವನ್ನು ಚಿಕ್ಕಮಗಳೂರಿನ ಆಸ್ಪತ್ರೆಗೆ ಸೇರಿಸಿದರು. ಕಾಯಿಲೆ ಏನೊ ಗುಣವಾಯಿತು. ಆದರೆ ಎರಡೂ ಕಣ್ಣುಗಳ ದೃಷ್ಟಿ ಸಂಪೂರ್ಣ ಹೊರಟು ಹೋಯಿತು’ ಎಂದು ಕಣ್ಣೀರು ಸುರಿಸಿದ. ‘ಚಿಂತಿಸಬೇಡ ಬಿಡು, ನಿನ್ನ ತಮ್ಮ ಒಬ್ಬನೇ ಕುರುಡನಲ್ಲ. ಇಲ್ಲಿ ನೂರಾರು ಜನ ಕಣ್ಣಿಲ್ಲದ ಮಕ್ಕಳಿದ್ದಾರೆ. ಒಬ್ಬೊಬ್ಬರದೂ ಒಂದೊಂದು ವ್ಯಥೆಯ ಕಥೆ’ಎಂದರು.

ತಮ್ಮನನ್ನು ಹಾಸ್ಟೆಲ್​ನಲ್ಲಿ ಬಿಟ್ಟು ಹೋಗುವಾಗ ಇಬ್ಬರೂ ಸಮಾಧಾನವಾಗುವವರೆಗೂ ಅತ್ತರು. ಕಡೆಗೆ ಅಣ್ಣನೇ ಮನಸ್ಸನ್ನು ಕಲ್ಲು ಮಾಡಿಕೊಂಡು ಹಿರಿಯ ವಿದ್ಯಾರ್ಥಿಗಳಿಗೆ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ವಿನಂತಿಸಿ ಹೊರಟುಹೋದ. ಹಾಸ್ಟೆಲಿನಲ್ಲಿ ಶುಚಿತ್ವದ ಅಭಾವದಿಂದ ಅನೇಕ ಮಕ್ಕಳಿಗೆ ಕಜ್ಜಿ, ತುರಿಕೆ, ಜ್ವರ ಮುಂತಾದ ಅಂಟುರೋಗಗಳು ಆಗಾಗ ಬರುತ್ತಿದ್ದವು. ಮೂರು ತಿಂಗಳಲ್ಲಿ ತಮ್ಮನಿಗೆ ಉಂಟಾದ ಅನಾರೋಗ್ಯ ಪರಿಸ್ಥಿತಿ ಕಂಡು ಅಣ್ಣನಿಗೆ ಮತ್ತೆ ಚಿಂತೆ ಶುರುವಾಯಿತು. ತಂದೆ ತಾಯಿ, ಅಜ್ಜ ಅಜ್ಜಿ ಎಲ್ಲರೂ ‘ಆ ಹುಡುಗನನ್ನು ಅಲ್ಲಿ ಬಿಡುವುದು ಬೇಡ ಕರೆದುಕೊಂಡು ಬಾ ಇಲ್ಲಿಯೇ ಏನಾದರೂ ವ್ಯವಸ್ಥೆ ಮಾಡೋಣ’ ಎಂದು ಹೇಳಲಾರಂಭಿಸಿದರು. ಅಣ್ಣ ತಮ್ಮನಿಗೆ ಚಿಕಿತ್ಸೆ ಕೊಡಿಸಿ ಶಾಲಾ ಸಿಬ್ಬಂದಿಗೆ ವಿನಂತಿಸಿಕೊಂಡು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದನು. ಹುಡುಗ ಆರು ತಿಂಗಳೊಳಗೆ ಆ ವಾತಾವರಣಕ್ಕೆ ಹೊಂದಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ. ಹತ್ತನೇ ತರಗತಿಯವರೆಗೆ ಅದೇ ಶಾಲೆಯಲ್ಲಿ ಓದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದ.

ಮುಂದೆ ದೃಷ್ಟಿಯುಳ್ಳ ವಿದ್ಯಾರ್ಥಿಗಳೊಂದಿಗೆ ಕಾಲೇಜಿನಲ್ಲಿ ಓದಿ ಕಲಾ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದು ಉತ್ತೀರ್ಣನಾದಾಗ ಪತ್ರಿಕೆಗಳಲ್ಲಿ ಆ ಹುಡುಗನ ಹೆಸರು ರಾರಾಜಿಸಿತು. ಆಗ ತೊಂಬತ್ತರ ದಶಕದ ಆರಂಭದ ಕಾಲ. ಅಂಧ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಾಠ ಕೇಳುವುದು, ಇನ್ನೊಬ್ಬರ ಸಹಾಯದಿಂದ ಓದಿಸಿಕೊಂಡು ನೆನಪಿಟ್ಟುಕೊಂಡು ಅರ್ಥಮಾಡಿಕೊಳ್ಳಬೇಕು. ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಬರೆಸಬೇಕು.

ಈಗ 21ನೆಯ ಶತಮಾನದ ಮೂರನೆಯ ದಶಕಕ್ಕೆ ಪ್ರವೇಶ ಮಾಡಿರುವ ಸಂದರ್ಭದಲ್ಲಿ ಅಂಧರ ಬದುಕು ಆನಂದದಾಯಕವಾಗಿದೆ. ವಿದ್ಯಾಭ್ಯಾಸದ ರೀತಿ ಕಲ್ಪನಾತೀತವಾಗಿ ಬದಲಾಗಿದೆ. ಸರ್ಕಾರಗಳು ಅಂಗವಿಕಲರಿಗೆ ಪ್ರತ್ಯೇಕ ಇಲಾಖೆ ಸ್ಥಾಪಿಸಿ ಅನುದಾನವನ್ನು ತೆಗೆದಿಡುತ್ತಿವೆ. ದೃಷ್ಟಿ ತೊಂದರೆಯುಳ್ಳ ಮಕ್ಕಳಿದ್ದಲ್ಲಿಯೇ ಶಿಕ್ಷಣದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿಯೂ ಅಂಧ ಶಿಕ್ಷಣ ಮತ್ತು ತರಬೇತಿಗಾಗಿ ಸ್ವಯಂಸೇವಾ ಸಂಸ್ಥೆಗಳು ಹುಟ್ಟಿಕೊಂಡಿವೆ. ಕಾಲೇಜು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಬ್ರೖೆಲ್​ನಲ್ಲಿ ಬರೆದುಕೊಡುವ ಸ್ವಯಂಸೇವಾ ಸಂಸ್ಥೆಗಳಿವೆ. ಎನ್ರಾಯ್ಡ್, ಮೊಬೈಲ್, ಐಓಸಿ, ಆಪಲ್ ಮುಂತಾದ ಫೋನ್​ಗಳನ್ನು ಸ್ಪೀಚಿಂಗ್ ಸಾಫ್ಟ್​ವೇರ್ ಬಳಸಿಕೊಂಡು ಕಣ್ಣಿದ್ದವರಷ್ಟೆ ಸಮರ್ಥವಾಗಿ, ಅವರಿಗಿಂತಲೂ ವೇಗವಾಗಿ ಬಳಸುವ ಸಾಮರ್ಥ್ಯ ಪಡೆದುಕೊಂಡಿದ್ದಾರೆ. ಜಾಸ್ ಸಾಫ್ಟ್​ವೇರ್ ಬಳಸಿಕೊಂಡು ಸಾಫ್ಟ್​ವೇರ್ ಎಂಜಿನಿಯರ್​ಗಳಾಗಿ, ಚಾರ್ಟಡ್ ಅಕೌಂಟೆಂಟ್​ಗಳಾಗಿ, ಪಿಎಚ್.ಡಿ. ಪದವಿ ಪಡೆದುಕೊಂಡು ಪೊ›ಫೆಸರ್​ಗಳಾಗಿ, ಪೋ›ಗ್ರಾಮರ್​ಗಳಾಗಿ, ಸ್ಟೆನೊಗ್ರಾಫರ್​ಗಳಾಗಿ, ಎಫ್​ಡಿಸಿ, ಎಸ್​ಡಿಸಿ ಹುದ್ದೆಗಳನ್ನು ಪಡೆದುಕೊಂಡು ಸಾವಿರಾರು ಜನ ಬದುಕು ಕಟ್ಟಿಕೊಂಡಿದ್ದಾರೆ.

ಕಣ್ಣಿಲ್ಲದವರು ಶಾಪಗ್ರಸ್ಥರು, ಪಾಪಾತ್ಮರು ಎಂಬ ಕಾಲ ಹೋಗಿ ಉದ್ಯಮಿಗಳು, ಆಡಳಿತಗಾರರು, ಪ್ರತಿಭಾವಂತ ಕಲಾವಿದರು ರೂಪುಗೊಂಡಿರುವ ಕಾಲ ಇದಾಗಿದೆ. ಲೂಯಿ ಬ್ರೖೆಲ್ ಅವರ 214 ನೇ ಜನ್ಮದಿನದ ಈ ಸಂದರ್ಭದಲ್ಲಿ ಇವೆಲ್ಲ ನೆನಪಾದವು. ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಎಲ್ಲವನ್ನೂ ಹೀಗಳೆಯುವ ಅಗತ್ಯವಿಲ್ಲ. ಅದರಲ್ಲಿ ಅಡಕವಾಗಿರುವ ವೈಜ್ಞಾನಿಕ ಮನೋಭಾವ, ಸಂಶೋಧನೆಯ ಗೀಳು, ಸಣ್ಣಪುಟ್ಟ ಸಂಗತಿಗಳನ್ನೂ ಮಹತ್ತರವಾಗಿ ಭಾವಿಸಿ ಅದಕ್ಕೆ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳುವ ರೀತಿ ಇಂತಹ ಕಾರಣಗಳಿಂದ ಅಂಧರ ಬದುಕಿಗೆ ಒಂದು ಅರ್ಥ ಬಂದಿದೆ, ಸಾಧಿಸುವ ಸಾಮರ್ಥ್ಯ ಜಾಗೃತವಾಗಿದೆ.

ಲೂಯಿ ಬ್ರೖೆಲ್ ಲಿಪಿ ಕಂಡುಹಿಡಿದ ನಂತರ ವಿಲಿಯಂ ಟೇಲರ್ ಎಂಬುವವರು ಗಣಿತದ ಸ್ಲೇಟನ್ನು ಸಂಶೋಧಿಸಿದರು. ಎಂಟು ದಿಕ್ಕುಗಳ ಕಲ್ಪನೆಯನ್ನು ಬಳಸಿಕೊಂಡು ಸಂಖ್ಯೆಗಳನ್ನು ಬರೆಯುವ, ಗಣಿತದ ಎಲ್ಲಾ ಚಿಹ್ನೆಯನ್ನು ಬಳಸುವ ಆಲ್ಜಿಬ್ರಾ ಗಣಿತವನ್ನೂ ಕಂಡುಹಿಡಿಯಲಾಗಿದೆ. ಕಣ್ಣಿಲ್ಲವೆಂಬ ಕಾರಣಕ್ಕೆ ಯಾವ ಮಕ್ಕಳನ್ನೂ ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡುವ ಅಗತ್ಯವಿಲ್ಲ. ಕಣ್ಣಿಲ್ಲದವರು ಸ್ವತಂತ್ರವಾಗಿ ಓಡಾಡಲು ವಾಕಿಂಗ್ ಸ್ಟಿಕ್ ಕಂಡು ಹಿಡಿದವರು ರಿಚರ್ಡ್ ಈ. ಹೂವರ್. ಇವರ ಸ್ಮರಣೆಯಲ್ಲಿ ಪ್ರತಿ ವರ್ಷ ಅಕ್ಟೋಬರ್ 15ನ್ನು ‘ವರ್ಲ್ಡ್ ಕೇನ್ ಡೇ’ ಎಂದು ಆಚರಿಸಲಾಗುತ್ತದೆ.

ಕ್ರೀಡಾವಿಭಾಗದಲ್ಲಿಯೂ ಕಣ್ಣಿಲ್ಲದವರ ಸಾಧನೆ ಅದ್ಭುತವಾಗಿಯೇ ನಡೆಯುತ್ತಿದೆ. ಕಂಪ್ಯೂಟರ್​ನೊಂದಿಗೆ ಚೆಸ್ ಆಡಿ ಜಯಗಳಿಸಿದ್ದಾರೆ. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚದುರಂಗ ಸ್ಪರ್ಧೆಗಳು ನಡೆಯುತ್ತಿವೆ. ಕಳೆದ ತಿಂಗಳು ಹರಿಯಾಣದಲ್ಲಿ ಪ್ರಾರಂಭವಾಗಿ ಬೆಂಗಳೂರಿನಲ್ಲಿ ಮುಕ್ತಾಯವಾದ ಅಂಧರ ಟಿ-20 ವಿಶ್ವಕಪ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಜಯಗಳಿಸಿ ಪ್ರಧಾನಮಂತ್ರಿಗಳಿಂದ ಅಭಿನಂದನೆ ಹೇಳಿಸಿಕೊಂಡರು.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೇಶದ ಪ್ರಗತಿಯ ಪ್ರವಾಹದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಅಂಧಬಂಧುಗಳಿಗೆ ಅಭಿನಂದನೆಗಳು. ನಮಗೆ ಪ್ರೀತಿಪೂರ್ವಕವಾಗಿ, ಜವಾಬ್ದಾರಿಯುತವಾಗಿ ಅವಕಾಶಗಳನ್ನು ನೀಡಿ ನಮ್ಮ ಕುಂದುಕೊರತೆಗಳನ್ನು ಅರ್ಥ ಮಾಡಿಕೊಂಡು ಪೋ›ತ್ಸಾಹಿಸುತ್ತಿರುವ ಸಮಾಜ, ಸರ್ಕಾರ, ಸ್ವಯಂಸೇವಾ ಸಂಸ್ಥೆಗಳಿಗೆ ಕೃತಜ್ಞತೆಗಳು.

(ಲೇಖಕರು ಧಾರವಾಡ ಮನಗುಂಡಿ ಶ್ರೀ ಗುರು ಬಸವ ಮಹಾಮನೆ ಮುಖ್ಯಸ್ಥರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net